ಅಧಿಕಾರಿಗಳ ವರ್ಗಾವಣೆ ಸರಕಾರದ ವಿವೇಚನೆಗೆ ಬಿಟ್ಟದ್ದು: ಹೈಕೋರ್ಟ್
ಬೆಂಗಳೂರು: ಅಧಿಕಾರಿಗಳನ್ನು ಯಾವ ಸ್ಥಳಕ್ಕೆ ವರ್ಗಾಯಿಸಬೇಕು, ಯಾವ ಹುದ್ದೆಯಲ್ಲಿ ಉಳಿಸಿಕೊಳ್ಳಬೇಕು ಎನ್ನುವುದು ಸರಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ. ವಂಚನೆ ಪ್ರಕರಣ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಎ.ಡಿ.ನಾಗರಾಜು ಅವರ ವರ್ಗಾವಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು.
ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಸಾರ್ವಜನಿಕ ಹಿತಾಸಕ್ತಿ ರಕ್ಷಕರಾಗಿರುವ ಸರಕಾರಕ್ಕೆ ಯಾವ ಅಧಿಕಾರಿಗೆ ಯಾವ ಸ್ಥಳ ನಿಯೋಜನೆ ಮಾಡಬೇಕು ಎಂಬುದು ತಿಳಿದಿದೆ. ಅಧಿಕಾರಿಗಳು ಬರುತ್ತಾರೆ ಮತ್ತು ಹೋಗುತ್ತಾರೆ. ಆದರೆ, ಸರಕಾರದ ಯಾವುದೇ ಪ್ರಕ್ರಿಯೆಯು ಅಡೆತಡೆಯಿಲ್ಲದೆ ಮುಂದುವರಿಯಲಿದೆ. ಅಲ್ಲದೇ ಅಧಿಕಾರಿಗಳ ವರ್ಗಾವಣೆಗೆ ಮಾರ್ಗಸೂಚಿಗಳಿದ್ದು, ಅದರಂತೆ ನಡೆಯಬೇಕಾಗುತ್ತದೆ.
ಸರಕಾರದ ಅಧಿಕಾರಿಗಳಿಗೆ ವರ್ಗಾವಣೆಗೆ ನಿರ್ದಿಷ್ಟ ಅವಧಿ ಇರಲಿದ್ದು, ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವರ್ಗಾವಣೆ ನಡೆದರೆ, ಕಾನೂನಿನ ಪ್ರಕಾರ ಪರಿಹಾರ ಕಂಡುಕೊಳ್ಳುವುದು ತೊಂದರೆಗೊಳಗಾದ ಅಧಿಕಾರಿಗೆ ಬಿಟ್ಟ ವಿಚಾರ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ಮೂರನೇ ವ್ಯಕ್ತಿಯಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿತು.
ಅಲ್ಲದೇ, ತನಿಖಾಧಿಕಾರಿ ವರ್ಗಾವಣೆಯಿಂದ ತನಿಖೆಯ ಮೇಲೆ ಪ್ರಭಾವ ಬೀರಲಿದೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಸಲ್ಲಿಸಿಲ್ಲ. ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳನ್ನು ನಿಯಮಿತವಾಗಿ ವರ್ಗಾವಣೆ ಮಾಡುವುದರಿಂದ ಉಂಟಾಗುವ ಪರಿಣಾಮಗಳನ್ನು ಸರಕಾರ ಗಮನದಲ್ಲಿಟ್ಟುಕೊಳ್ಳುತ್ತದೆ. ಕೆಲ ಹುದ್ದೆಗಳಲ್ಲಿ ಅಧಿಕಾರಿಗಳ ಸೇವೆ ಗಮನಾರ್ಹವಿದ್ದರೂ ಕೆಲವೊಮ್ಮೆ ಕೆಲವು ಅಧಿಕಾರಿಗಳನ್ನು ಉಳಿಸಿಕೊಳ್ಳುವುದರಿಂದ ತನಿಖಾ ಪ್ರಕ್ರಿಯೆಗೆ ಅಡ್ಡಿಯಾಗಬಹುದು. ಅಧಿಕಾರಿಗಳನ್ನು ಅಮಾನತುಗೊಳಿಸುವುದು ಅಸ್ತಿತ್ವದಲ್ಲಿರುವ ನಡವಳಿಕೆ ಮತ್ತು ಶಿಸ್ತು ನಿಯಮಗಳಿಂದ ನಿಯಂತ್ರಿಸಲ್ಪಡುವ ವಿಷಯವಾಗಿದೆ. ಇದು ಉದ್ಯೋಗದಾತರ ವ್ಯಾಪ್ತಿಗೆ ಬಿಟ್ಟದ್ದು. ಇದರಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸಲು ಅವಕಾಶವಿಲ್ಲ ಎಂದು ಪೀಠ ಹೇಳಿದೆ.