ಉಡುಪಿ ಘಟನೆ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪ: ಯುವಕನ ವಿರುದ್ಧ ಎಫ್ ಐಆರ್
Update: 2023-08-08 20:07 IST
ಚರಣ್
ಚಿಕ್ಕಮಗಳೂರು, ಆ.8: ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಉಡುಪಿ ಪ್ಯಾರಾ ಮೆಡಿಕಲ್ ಕಾಲೇಜು ಘಟನೆ ಸಂಬಂಧ ಅವಹೇಳನಕಾರಿ ಪೋಸ್ಟ್ ಹಾಕಿರುವ ಆರೋಪದ ಮೇರೆಗೆ ಜಿಲ್ಲೆಯ ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿಕ್ಕಮಗಳೂರು ನಗರದ ಗಾಂಧಿನಗರದ ನಿವಾಸಿ ಚರಣ್ ಎಂಬಾತ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿರುವುದಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವಮಾನಿಸಿದ್ದಾನೆ. ಅಲ್ಲದೇ ಉಡುಪಿಯ ಪ್ಯಾರ ಮೆಡಿಕಲ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಘಟನೆ ಬಗ್ಗೆಯೂ ಯುವತಿಯವರ ಬಗ್ಗೆ ಅವಹೇಳನಕಾರಿ ಬರಹ ಇರುವ ಪೋಸ್ಟ್ ಹಾಕಿ ಎರಡು ಸಮುದಾಯಗಳ ನಡುವೆ ಧ್ವೇಷ ಬಿತ್ತುವ ಕೃತ್ಯ ಎಸಗಿದ್ದಾನೆಂದು ಆರೋಪಿಸಿ ಚಿಕ್ಕಮಗಳೂರು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುಬಾನ್ ಎಂಬವರು ಕಳಸ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.
ಈ ದೂರಿನ ಮೇರೆಗೆ ಪೊಲೀಸರು ಚರಣ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.