×
Ad

ಕಲಬುರಗಿಯಲ್ಲಿ ಅಸ್ಪೃಶ್ಯತೆ ಆಚರಣೆ | ದಲಿತ ವಿದ್ಯಾರ್ಥಿಗಳ ಕ್ಷೌರ ಮಾಡಲು ನಿರಾಕರಣೆ ಆರೋಪ; ಕ್ಷೌರಿಕನ ವಿರುದ್ಧ ಪ್ರಕರಣ ದಾಖಲು

Update: 2025-06-28 23:51 IST

ಕಲಬುರಗಿ : ಜಿಲ್ಲೆಯ ಆಳಂದ ತಾಲೂಕಿನ ಕಿಣ್ಣಿ ಸುಲ್ತಾನ್ ಗ್ರಾಮದಲ್ಲಿ ದಲಿತ ಸಮುದಾಯದ ಶಾಲಾ ಮಕ್ಕಳಿಗೆ ಕ್ಷೌರ ಮಾಡಲು ನಿರಾಕರಿಸಿದ ಅಮಾನವೀಯ ಘಟನೆ ಶುಕ್ರವಾರ ನಡೆದಿರುವುದಾಗಿ ವರದಿಯಾಗಿದೆ.

ಜೂ.27ರಂದು ಕಿಣ್ಣಿ ಸುಲ್ತಾನ್ ಗ್ರಾಮದ ಶಾಲಾ ಮಕ್ಕಳು ಕ್ಷೌರ ಮಾಡಿಸಲು ಗ್ರಾಮದ ಕ್ಷೌರ ಅಂಗಡಿಗೆ ಹೋಗಿದ್ದಾರೆ. ಈ ವೇಳೆ ಕ್ಷೌರಿಕ ‘ದಲಿತ ಮಕ್ಕಳಿಗೆ ಕ್ಷೌರ ಮಾಡುವುದಿಲ್ಲ. ನೀವು ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ’ ಎಂದು ನಿರಾಕರಿಸಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಕ್ಷೌರಿಕನೊಂದಿಗೆ ದಲಿತ ಮುಖಂಡರೊಬ್ಬರು ಮಾತನಾಡಿ, ಶಿಕ್ಷಕರು ಕ್ಷೌರ ಮಾಡಿಕೊಂಡು ಬರಬೇಕು ಎಂದು ಹೇಳಿದ್ದಾರೆ, ಹಾಗಾಗಿ ಮಕ್ಕಳು ಇಲ್ಲಿಗೆ ಬಂದಿದ್ದಾರೆ. ಮಕ್ಕಳಿಗೆ ಯಾಕೆ ಕ್ಷೌರ ಮಾಡಿಲ್ಲ’ ಎಂದು ಪ್ರಶ್ನಿಸಿದಾಗ, ‘ನಮ್ಮ ಹಿರಿಯರು ಹೊಲೆಯ ಮಾದಿಗರಿಗೆ ಕ್ಷೌರ ಮಾಡಿಲ್ಲ, ನಾವು ಕೂಡ ನಿಮಗೆ ಕ್ಷೌರ ಮಾಡುವುದಿಲ್ಲ’ ಎಂದು ಕ್ಷೌರಿಕ ಹೇಳಿದ್ದಾನೆ ಎಂದು ದೂರಿದರು.

‘ಕ್ಷೌರ ಮಾಡಿಸಲು ಆಳಂದ ಪಟ್ಟಣಕ್ಕೆ ಹೋಗುತ್ತೇವೆ’ :

ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕ್ಷೌರ ಮಾಡಲು ಹಿಂದೇಟು ಹಾಕಿದ್ದಾರೆ. ಹಾಗಾಗಿ ಸಮುದಾಯದ ಜನರು 10 ಕಿಮೀ ದೂರದ ಆಳಂದ ಪಟ್ಟಣ, ಸಮೀಪದ ತಡಕಲ್ ಗ್ರಾಮಗಳಿಗೆ ತೆರಳಿ ಕ್ಷೌರ ಮಾಡಿಕೊಂಡು ಬರುತ್ತಿದ್ದೇವೆ. ಗ್ರಾಮದಲ್ಲಿ ಮೇಲ್ಜಾತಿಯವರ ಪ್ರಭಾವದಿಂದ ನಮಗೆ ಕ್ಷೌರ ಮಾಡಲು ನಿರಾಕರಣೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ತಾಲೂಕು ಮತ್ತು ಜಿಲ್ಲೆಯ ಅಧಿಕಾರಿಗಳು ನಮ್ಮ ಗ್ರಾಮದ ಅಸ್ಪೃಶ್ಯತೆ ನಿವಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥ ಮಲ್ಲಿಕಾರ್ಜುನ್ ಶೃಂಗೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಿಣ್ಣಿ ಸುಲ್ತಾನ್ ಗ್ರಾಮದಲ್ಲಿ 125 ದಲಿತ ಸಮುದಾಯದ ಮನೆಗಳಿದ್ದು, ಅನೇಕ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ, ಈವರೆಗೆ ಜಾತಿ ನೋಡಿಕೊಂಡು ನಮ್ಮ ಮಕ್ಕಳಿಗೆ ಗ್ರಾಮದಲ್ಲಿರುವ 3 ಸಲೂನ್‌ನವರೂ ಕಟಿಂಗ್ ಮಾಡಲು ನಿರಾಕರಿಸುತ್ತಿದ್ದಾರೆ ಎಂದು ಗ್ರಾಮಸ್ಥೆ ಚಂದ್ರಕಲಾ ಬೇಸರ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಸೂಚನೆಯಿಂದ ಕ್ಷೌರ ಮಾಡಿದ ಕ್ಷೌರಿಕ:

ಘಟನಾ ಸ್ಥಳಕ್ಕೆ ಶುಕ್ರವಾರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ದಲಿತ ಸಮುದಾಯದವರಿಗೆ ಕಟಿಂಗ್ ಮಾಡಲು ತಿಳಿಸಿದ್ದರು. ಅವರ ಸೂಚನೆಯನ್ನೂ ಧಿಕ್ಕರಿಸಿದ ಕ್ಷೌರಿಕ ಕ್ಷೌರ ಮಾಡಲು ನಿರಾಕರಿಸಿದ್ದ. ಈ ರೀತಿ ವರ್ತಿಸಿದರೆ ಪ್ರಕರಣ ದಾಖಲಿಸಬೇಕಾಗುತ್ತೆ ಎಂದು ಪೊಲೀಸರು ಹೇಳಿದ ಮೇಲೆ ಕ್ಷೌರಿಕ ಕ್ಷೌರ ಮಾಡಲು ಒಪ್ಪಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ದಲಿತ ಸಮುದಾಯದ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಳಂದ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ ಹೋಳ್ಕರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಆಳಂದ ಶಾಸಕ ಬಿ.ಆರ್.ಪಾಟೀಲ್ ಈ ಬಗ್ಗೆ ಪ್ರತಿಕ್ರಿಯಿಸಬೇಕಿತ್ತು. ಸಮಾಜವಾದಿ ಎಂದು ಹೇಳಿಕೊಳ್ಳುವ ಶಾಸಕರು, ದಲಿತರ, ಅಲ್ಪಸಂಖ್ಯಾತರ ಮತ ಪಡೆದಿರುವ ಅವರು, ಅಸ್ಪೃಶ್ಯತೆ ಆಚರಣೆ ಬಗ್ಗೆ ತುಟಿ ಬಿಚ್ಚಿಲ್ಲ. ನಮ್ಮ ವಠಾರದಲ್ಲೇ ಪ್ರತ್ಯೇಕ ಕ್ಷೌರ ಅಂಗಡಿ ಸ್ಥಾಪಿಸಬೇಕಾದ ಅನಿವಾರ್ಯ ಬಂದೊದಗಿದೆ.

-ಹಣಮಂತ ಜಿ. ಯಳಸಂಗಿ, ದಲಿತ ಸೇನೆ ರಾಜ್ಯಾಧ್ಯಕ್ಷ

ಅಸ್ಪೃಶ್ಯತೆ ಆಚರಣೆ ಗಮನಕ್ಕೆ ಬಂದ ಕೂಡಲೇ ಆ ಗ್ರಾಮಕ್ಕೆ ತೆರಳಿ ಸಮಸ್ಯೆ ಬಗೆಹರಿಸಿದ್ದೇವೆ. ಈ ಕುರಿತು ಗ್ರಾಮಸ್ಥರೊಬ್ಬರು ನೀಡಿದ ದೂರಿನ ಮೇರೆಗೆ ಜಾತಿ ನಿಂದನೆ ಪ್ರಕರಣವನ್ನು ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

-ಶರಣಬಸಪ್ಪ ಕೊಡ್ಲಾ, ಪಿ.ಐ, ಆಳಂದ ಪೊಲೀಸ್ ಠಾಣೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News