×
Ad

ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಉದ್ಘಾಟನೆ

Update: 2025-01-17 21:49 IST

Photo:X/@DKShivakumar

ಬೆಂಗಳೂರು: ಬೆಂಗಳೂರಿನಲ್ಲಿ ಈಗಾಗಲೆ 12 ದೇಶಗಳ ದೂತಾವಾಸ(ಕಾನ್ಸುಲೇಟ್) ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಇನ್ನಷ್ಟು ದೇಶಗಳು ಇಲ್ಲಿ ತಮ್ಮ ದೂತವಾಸ ಕಚೇರಿಗಳನ್ನು ತೆರೆಯಬೇಕೆಂಬುದು ನಮ್ಮ ಬಯಕೆಯಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿಳಿಸಿದರು.

ಶುಕ್ರವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಅಮೆರಿಕ ದೂತಾವಾಸದ ತಾತ್ಕಾಲಿಕ ಕಚೇರಿಯನ್ನು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರೊಂದಿಗೆ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಅಮೆರಿಕ ಮತ್ತು ಭಾರತದ ಬಾಂಧವ್ಯ ವೃದ್ಧಿಗೆ ನಿರಂತರ ಪ್ರಯತ್ನ ನಡೆಯುತ್ತಿದೆ. ಅದರ ಭಾಗವಾಗಿಯೇ ಬೆಂಗಳೂರಿನಲ್ಲಿ ಅಮೆರಿಕದ ದೂತಾವಾಸ ಕಚೇರಿ ಆರಂಭಿಸಲಾಗಿದೆ. ಬೆಂಗಳೂರಿಗೆ ಇರುವ ಸಾಮರ್ಥ್ಯ ಸದ್ಬಳಕೆಯಾಗಬೇಕು. ಬೆಂಗಳೂರಿನಲ್ಲಿ ಒಂದೇ ವರ್ಷದಲ್ಲಿ 8.8 ಲಕ್ಷ ಪಾಸ್‍ಪೋರ್ಟ್ ವಿತರಣೆ ಮಾಡಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ಪಾರ್ಸ್ ಪೋರ್ಟ್‍ಗಳು ವಿತರಣೆಯಾಗಿರಬಹುದು ಎಂದು ಜೈಶಂಕರ್ ತಿಳಿಸಿದರು.

ಚೆನ್ನೈ, ಹೈದರಾಬಾದ್, ಮುಂಬೈ ಹಾಗೂ ಕೋಲ್ಕತ್ತಾಗಳಲ್ಲಿ ಮಾತ್ರ ಅಮೆರಿಕದ ದೂತಾವಾಸ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಈಗ ಬೆಂಗಳೂರಿನಲ್ಲಿ ಆರಂಭವಾಗಿದೆ. ಬೆಂಗಳೂರಿಂದ ಸ್ಯಾನ್ ಫ್ರಾನ್ಸ್‍ಸಿಸ್ಕೋಗೆ ವಾರದಲ್ಲಿ ಮೂರು ದಿನ ವಿಮಾನ ಸಂಚರಿಸುತ್ತಿದೆ. ಇದು ಅಮೆರಿಕ ಹಾಗೂ ಬೆಂಗಳೂರಿನ ಸಂಬಂಧ ವೃದ್ಧಿಗೂ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮಾತನಾಡಿ, ನಗರದಲ್ಲಿ ದೂತಾವಾಸದ ಶಾಶ್ವತ ಕಚೇರಿ ಸ್ಥಾಪಿಸುವವರೆಗೆ ಇಲ್ಲಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆ.ಡಬ್ಲ್ಯು ಮಾರಿಯೆಟ್ ಹೊಟೇಲ್‍ನಲ್ಲಿರುವ ಯುಎಸ್ ಕಮರ್ಷಿಯಲ್ ಸರ್ವೀಸ್(ಯುಎಸ್‍ಸಿಎಸ್) ಕಚೇರಿಯಲ್ಲಿ ಈ ತಾತ್ಕಾಲಿಕ ದೂತಾವಾಸ ಕಚೇರಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಸದ್ಯ ವೀಸಾ ಸೌಲಭ್ಯವನ್ನು ನೀಡುವುದಿಲ್ಲ. ಶೀಘ್ರವೇ ವೀಸಾ ಸೌಲಭ್ಯವನ್ನು ಕಲ್ಪಿಸಿಕೊಡಲು ನಾವು ಬದ್ಧವಾಗಿದ್ದೇವೆ. ಪ್ರವಾಸೋದ್ಯಮ, ಶಿಕ್ಷಣ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ವೀಸಾಗಳಲ್ಲಿ ಯಾವುದಕ್ಕೆ ಹೆಚ್ಚು ಬೇಡಿಕೆ ಬರಲಿದೆ ಎಂಬುದನ್ನು ನಾವು ನೋಡಬೇಕಿದೆ. ಅದರಂತೆ, ದೂತಾವಾಸ ಕಚೇರಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದೆ ಎಂದು ಅವರು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಅಮೆರಿಕದ ರಾಯಭಾರಿ ಕಚೇರಿ ಆರಂಭವಾಗಬೇಕು ಎಂದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗಲೇ ಪ್ರಯತ್ನ ನಡೆಸಿದ್ದರು. ಆಗ ಪ್ರಧಾನಿಯಾಗಿದ್ದ ವಾಜಪೇಯಿಯನ್ನು ಭೇಟಿ ಮಾಡಿ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಈಗ ಆರಂಭ ಆಗುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಡಾ.ಸಿ.ಎನ್.ಮಂಜುನಾಥ್, ಉದ್ಯಮಿಗಳಾದ ಕಿರಣ್ ಮಜುಂದಾರ್ ಷಾ, ಕ್ರಿಸ್ ಗೋಪಾಲಕೃಷ್ಣನ್, ಅಮೆರಿಕ ದೂತಾವಾಸದ ಅಧಿಕಾರಿಗಳು ಭಾಗಿಯಾಗಿದ್ದರು.

‘ನಾವು ಕೃತಕ ಬುದ್ಧಿಮತ್ತೆ(ಎಐ), ವಿದ್ಯುತ್ ಚಾಲಿತ ವಾಹನ(ಇವಿ)ಗಳು, ಡ್ರೋನ್‍ಗಳು, ಜೈವಿಕ ತಂತ್ರಜ್ಞಾನ ಮತ್ತು ಮುಂದುವರಿದ ಬಾಹ್ಯಾಕಾಶ ಪರಿಶೋಧನೆಯ ಯುಗವನ್ನು ಪ್ರವೇಶಿಸುತ್ತಿದ್ದಂತೆ, ನಮ್ಮ ಪಾಲುದಾರಿಕೆಯನ್ನು ನಾವೀನ್ಯತೆಯಿಂದ ಹೆಚ್ಚು ವ್ಯಾಖ್ಯಾನಿಸಲಾಗುತ್ತದೆ. ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ಬೆಂಗಳೂರು ಮತ್ತು ನಾವೀನ್ಯತೆಯ ಕೇಂದ್ರವಾಗಿ ಕರ್ನಾಟಕವು ಈ ಪ್ರಯಾಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ’

-ಎಸ್.ಜೈಶಂಕರ್, ಕೇಂದ್ರ ವಿದೇಶಾಂಗ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News