ಪ್ರಯಾಣಕ್ಕೆ ಯೋಗ್ಯವಲ್ಲದ ಇಂಜಿನ್‌ ಬಳಕೆ: ಮಾರ್ಗಮಧ್ಯೆ ಕೆಟ್ಟು ನಿಂತ ಹಾಸನ–ಸೋಲಾಪುರ ಎಕ್ಸ್‌ಪ್ರೆಸ್‌ ರೈಲು

Update: 2026-08-18 11:10 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ‘ನಾಟ್‌ ಫಿಟ್‌ ಫಾರ್‌ ಪ್ಯಾಸೆಂಜರ್‌/ಗೂಡ್ಸ್‌’ ಎಂದು ನಮೂದಿಸಲಾಗಿದ್ದ ಎಂಜಿನ್‌ ಅನ್ನೇ ಹಾಸನ–ಸೋಲಾಪುರ ಡೈಲಿ ಎಕ್ಸ್‌ಪ್ರೆಸ್‌ ರೈಲಿಗೆ ಅಳವಡಿಸಿದ ಪರಿಣಾಮ, ಮಾರ್ಗಮಧ್ಯೆ ರೈಲು ಕೆಟ್ಟು ನಿಂತು ಪ್ರಯಾಣಿಕರು ಸುಮಾರು ನಾಲ್ಕು ತಾಸು ಪರದಾಡಿದ ಘಟನೆ ರವಿವಾರ ನಡೆದಿರುವ ಬಗ್ಗೆ ವರದಿಯಾಗಿದೆ.

ಹಾಸನದಿಂದ ರವಿವಾರ ಸಂಜೆ 4.15ಕ್ಕೆ ಹೊರಟ ರೈಲು ಸಂಜೆ 5.23ಕ್ಕೆ ಯಡಿಯೂರು ನಿಲ್ದಾಣ ತಲುಪಬೇಕಿತ್ತು. ಆದರೆ, ಯಡಿಯೂರಿನಿಂದ ಸುಮಾರು ಮೂರು ಕಿ.ಮೀ. ಹಿಂದೆಯೇ ಎಂಜಿನ್‌ ಕೆಟ್ಟು ರೈಲು ಮಾರ್ಗಮಧ್ಯೆ ನಿಂತಿತು. ಲೋಕೊಪೈಲಟ್‌ ಹಾಗೂ ರೈಲ್ವೆ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸಿದ ಬಳಿಕ ರೈಲು ಯಡಿಯೂರು ನಿಲ್ದಾಣದವರೆಗೆ ತಲುಪಿತು.

ರಾತ್ರಿ 8ಕ್ಕೆ ಯಶವಂತಪುರ ತಲುಪಬೇಕಿದ್ದ ರೈಲು, ರಾತ್ರಿ 9 ಗಂಟೆ ದಾಟಿದರೂ ಯಡಿಯೂರಿನಲ್ಲೇ ನಿಂತಿತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಬಳಿಕ ಬೇರೆ ಎಂಜಿನ್‌ ಬರಲಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ರೈಲಿನಿಂದ ಕೆಳಗಿಳಿದು ನಿಲ್ದಾಣದಲ್ಲಿ ಕಾಯುವಂತಾಯಿತು.

ರೈಲಿಗೆ ಬಳಸಿದ್ದ ಎಂಜಿನ್‌ ‘ನಾಟ್‌ ಫಿಟ್‌ ಫಾರ್‌ ಪ್ಯಾಸೆಂಜರ್‌/ಗೂಡ್ಸ್‌’ ಎಂಬ ಸೂಚನೆ ಹೊಂದಿರುವುದು ಪ್ರಯಾಣಿಕರ ಗಮನಕ್ಕೆ ಬಂದ ಬಳಿಕ ಆಕ್ರೋಶ ವ್ಯಕ್ತವಾಯಿತು. ಕೆಲವರು ರೈಲ್ವೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಪ್ರತಿಭಟನೆಗೆ ಮುಂದಾದರು. ಪರಿಸ್ಥಿತಿ ಉದ್ವಿಗ್ನಗೊಳ್ಳುವ ಸಾಧ್ಯತೆ ಎದುರಾಗಿತ್ತು ಎನ್ನಲಾಗಿದೆ.

ಕೊನೆಗೆ ರಾತ್ರಿ 9.05ರ ಸುಮಾರಿಗೆ ಬದಲಿ ಎಂಜಿನ್‌ ಬಂದಿದ್ದು, ಅದನ್ನು ಅಳವಡಿಸಿ ರೈಲು ಮುಂದಕ್ಕೆ ಚಲಿಸಲು ಮತ್ತೆ ಸುಮಾರು ಅರ್ಧಗಂಟೆ ಸಮಯ ಬೇಕಾಯಿತು.

ಸೋಲಾಪುರಕ್ಕೆ ತೆರಳುವ ರೈಲಾದರೂ ನೆಲಮಂಗಲ ಹಾಗೂ ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಸೋಮವಾರ ಕೆಲಸಕ್ಕೆ ತೆರಳಬೇಕಿದ್ದ ಹಲವರು ರವಿವಾರವೇ ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಹೀಗಾಗಿ ರೈಲು ವಿಳಂಬದಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು ಎಂದು ತಿಳಿದು ಬಂದಿದೆ.

‘ಫಿಟ್‌ ಇಲ್ಲದ ಎಂಜಿನ್‌ ಅನ್ನು ರೈಲಿಗೆ ಯಾಕೆ ಬಳಸಲಾಗಿದೆ?’ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡು ಬಳಿಕ ದೂರು ನೀಡುವಂತೆ ಸಿಬ್ಬಂದಿಯೇ ಸಲಹೆ ನೀಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News