ಖನಿಜ ಹಕ್ಕುಗಳ ಮೇಲಿನ ರಾಜ್ಯಗಳ ತೆರಿಗೆ ಅಧಿಕಾರ ಸೀಮಿತಗೊಳಿಸಬೇಡಿ: ಕೇಂದ್ರಕ್ಕೆ ಡಾ. ಜಿ. ಪರಮೇಶ್ವರ್ ಪತ್ರ
ಬೆಂಗಳೂರು, ಆ.18: ಕೇಂದ್ರ ಸರ್ಕಾರದ ‘Mines and Minerals (Development and Regulation) Amendment Bill, 2026’ ಅನ್ನು ಮರುಪರಿಶೀಲಿಸಿ ಹಿಂಪಡೆಯಬೇಕು ಹಾಗೂ ಈ ಕುರಿತು ರಾಜ್ಯ ಸರ್ಕಾರಗಳೊಂದಿಗೆ ಸಮಗ್ರ ಸಮಾಲೋಚನೆ ನಡೆಸಬೇಕು ಎಂದು ಆಗ್ರಹಿಸಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಜಿ. ಕಿಶನ್ ರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.
ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿಗಳ ಮೇಲಿನ ತೆರಿಗೆ ವಿಧಿಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಸೀಮಿತಗೊಳಿಸುವ ಪ್ರಸ್ತಾವಿತ ನಿಯಮಗಳಿಗೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಭಾರತದ ಸಂವಿಧಾನವು ಕೇಂದ್ರ ಮತ್ತು ರಾಜ್ಯಗಳ ನಡುವೆ ಶಾಸನಾತ್ಮಕ ಹಾಗೂ ಹಣಕಾಸಿನ ಅಧಿಕಾರಗಳನ್ನು ಹಂಚಿಕೆ ಮಾಡಿದೆ. ಸಂವಿಧಾನದ ಏಳನೇ ಅನುಸೂಚಿಯ List IIರ Entries 49 ಮತ್ತು 50ರ ಅಡಿಯಲ್ಲಿ ಭೂಮಿ ಹಾಗೂ ಖನಿಜ ಹಕ್ಕುಗಳ ಮೇಲಿನ ತೆರಿಗೆಗೆ ಸಂಬಂಧಿಸಿದ ಅಧಿಕಾರವನ್ನು ರಾಜ್ಯಗಳಿಗೆ ನೀಡಲಾಗಿದೆ. 2024ರ ಜುಲೈ 25ರಂದು ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ನೀಡಿದ ತೀರ್ಪು ಕೂಡ ರಾಜ್ಯಗಳ ಈ ಅಧಿಕಾರವನ್ನು ಪುನರುಚ್ಚರಿಸಿದೆ ಎಂದು ಪರಮೇಶ್ವರ್ ಉಲ್ಲೇಖಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಖನಿಜ ಅಭಿವೃದ್ಧಿಯನ್ನು ನಿಯಂತ್ರಿಸುವ ಸಂವಿಧಾನಾತ್ಮಕ ಅಧಿಕಾರವಿದ್ದರೂ, ಅದನ್ನು ಬಳಸಿಕೊಂಡು ರಾಜ್ಯಗಳ ಹಣಕಾಸಿನ ಸ್ವಾಯತ್ತತೆಯನ್ನು ದುರ್ಬಲಗೊಳಿಸಬಾರದು. ನಿಯಂತ್ರಣದ ಹೆಸರಿನಲ್ಲಿ ಅಧಿಕಾರ ಕೇಂದ್ರೀಕರಣಕ್ಕೆ ಅವಕಾಶ ನೀಡಬಾರದು. ರಾಷ್ಟ್ರೀಯ ಏಕರೂಪತೆಯ ಹೆಸರಿನಲ್ಲಿ ರಾಜ್ಯಗಳ ಹಣಕಾಸಿನ ಅಧಿಕಾರವನ್ನು ಕುಗ್ಗಿಸುವುದು ಸಹಕಾರಿ ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮಹತ್ವದ ಸಂವಿಧಾನಾತ್ಮಕ ಹಾಗೂ ಹಣಕಾಸಿನ ಪರಿಣಾಮಗಳನ್ನು ಹೊಂದಿರುವ ಇಂತಹ ಕಾನೂನು ರೂಪಿಸುವ ಮುನ್ನ, ವಿಶೇಷವಾಗಿ ಖನಿಜ ಉತ್ಪಾದಕ ರಾಜ್ಯಗಳೊಂದಿಗೆ ಸಮಗ್ರ ಹಾಗೂ ರಚನಾತ್ಮಕ ಸಮಾಲೋಚನೆ ನಡೆಸಬೇಕಿತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಕರ್ನಾಟಕ ವಿಧಾನಸಭೆ ‘Karnataka (Mineral Rights and Mineral Bearing Land) Tax Bill, 2024’ ಅನ್ನು ಅಂಗೀಕರಿಸಿದೆ. ಹೀಗಾಗಿ ಪ್ರಸ್ತಾವಿತ ಕೇಂದ್ರ ತಿದ್ದುಪಡಿಯು ರಾಜ್ಯವು ತನ್ನ ಸಂವಿಧಾನಾತ್ಮಕ ಅಧಿಕಾರದ ಆಧಾರದ ಮೇಲೆ ಕೈಗೊಂಡಿರುವ ಕ್ರಮದ ಮೇಲೂ ನೇರ ಪರಿಣಾಮ ಬೀರುತ್ತದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಜಿಎಸ್‌ಟಿ ಜಾರಿಯಾದ ಬಳಿಕ ರಾಜ್ಯಗಳ ಸ್ವತಂತ್ರ ತೆರಿಗೆ ಆದಾಯದ ಅವಕಾಶಗಳು ಕಡಿಮೆಯಾಗಿದ್ದರೂ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಕೃಷಿ, ಕಲ್ಯಾಣ ಯೋಜನೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಯಂತಹ ಜವಾಬ್ದಾರಿಗಳು ರಾಜ್ಯಗಳ ಮೇಲೆಯೇ ಮುಂದುವರಿದಿವೆ. ಗಣಿಗಾರಿಕೆಯಿಂದ ಉಂಟಾಗುವ ಪರಿಸರ ಹಾನಿ, ರಸ್ತೆ ಹಾಗೂ ಮೂಲಸೌಕರ್ಯಗಳ ಮೇಲಿನ ಒತ್ತಡ ಮತ್ತು ಸ್ಥಳೀಯ ಸಮುದಾಯಗಳ ಮೇಲಿನ ಪರಿಣಾಮಗಳನ್ನು ಸಹ ರಾಜ್ಯ ಸರ್ಕಾರಗಳೇ ಎದುರಿಸುತ್ತವೆ. ಹೀಗಾಗಿ ಖನಿಜ ಸಂಪನ್ಮೂಲಗಳ ಮೇಲೆ ರಾಜ್ಯಗಳಿಗೆ ಅರ್ಥಪೂರ್ಣ ಹಣಕಾಸಿನ ಅಧಿಕಾರ ಉಳಿಯಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, 2026ರ ತಿದ್ದುಪಡಿ ಮಸೂದೆಯನ್ನು ಪ್ರಸ್ತುತ ರೂಪದಲ್ಲಿ ಮರುಪರಿಶೀಲಿಸಿ ಹಿಂಪಡೆಯಬೇಕು. ಎಲ್ಲಾ ರಾಜ್ಯಗಳೊಂದಿಗೆ, ವಿಶೇಷವಾಗಿ ಖನಿಜ ಉತ್ಪಾದಕ ರಾಜ್ಯಗಳೊಂದಿಗೆ ಸಮಗ್ರ ಸಮಾಲೋಚನೆ ನಡೆಸಬೇಕು. ಖನಿಜ ತೆರಿಗೆಯ ಸಂವಿಧಾನಾತ್ಮಕ, ಆರ್ಥಿಕ, ಪರಿಸರ ಹಾಗೂ ಹೂಡಿಕೆ ಪರಿಣಾಮಗಳನ್ನು ಪರಿಶೀಲಿಸಲು ಕೇಂದ್ರ–ರಾಜ್ಯ ಸಮಾಲೋಚನಾ ವ್ಯವಸ್ಥೆ ರೂಪಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೆ, ಕರ್ನಾಟಕದ 2024ರ ಖನಿಜ ತೆರಿಗೆ ಮಸೂದೆ ಸೇರಿದಂತೆ ವಿವಿಧ ರಾಜ್ಯಗಳು ಕೈಗೊಂಡಿರುವ ಕಾನೂನು ಕ್ರಮಗಳನ್ನು ಪರಿಗಣಿಸಿ, ಹೂಡಿಕೆ ಹಾಗೂ ಖನಿಜ ಅಭಿವೃದ್ಧಿಗೆ ಉತ್ತೇಜನ ನೀಡುವುದರ ಜೊತೆಗೆ ರಾಜ್ಯಗಳ ಸಂವಿಧಾನಾತ್ಮಕ ಹಣಕಾಸಿನ ಸ್ವಾಯತ್ತತೆಯನ್ನು ರಕ್ಷಿಸುವ ರಾಷ್ಟ್ರೀಯ ಚೌಕಟ್ಟನ್ನು ಒಮ್ಮತದ ಮೂಲಕ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
‘ಬಲಿಷ್ಠ ರಾಜ್ಯಗಳೇ ಬಲಿಷ್ಠ ಒಕ್ಕೂಟಕ್ಕೆ ಆಧಾರ’ವಾಗಿದ್ದು, ಸಹಕಾರಿ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಗೌರವಿಸಿ ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಸಮಾಲೋಚನೆಯ ಮೂಲಕ ಈ ವಿಷಯಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಡಾ. ಜಿ. ಪರಮೇಶ್ವರ್ ಪತ್ರದಲ್ಲಿ ತಿಳಿಸಿದ್ದಾರೆ.