×
Ad

ʼಸಮೀಕ್ಷೆʼಯನ್ನು ಕೂಡಲೇ ನಿಲ್ಲಿಸಿ : ಕೇಂದ್ರ ಸಚಿವ ವಿ.ಸೋಮಣ್ಣ

"ಸಿಎಂ ಸಿದ್ದರಾಮಯ್ಯ ಕೆಲಸಕ್ಕೆ ಬಾರದ ಕೆಲಸ ಮಾಡುತ್ತಿದ್ದಾರೆ"

Update: 2025-10-05 18:42 IST

ಬೆಂಗಳೂರು, ಅ. 5: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ದಯವಿಟ್ಟು ಇಲ್ಲಿಗೆ ನಿಲ್ಲಿಸಿ. ಹುಚ್ಚರ ಸಂತೆಯಲ್ಲಿ ಯಾರೂ ಬಂದು ನಿಲ್ಲಬೇಡಿ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಟೀಕಿಸಿದ್ದಾರೆ.

ರವಿವಾರ ವಿಜಯನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸಕ್ಕೆ ಬಾರದ ಕೆಲಸ ಮಾಡುತ್ತಿದ್ದಾರೆ. ಸುಮಾರು 1 ಗಂಟೆ 4 ನಿಮಿಷ ಸಮೀಕ್ಷಾದಾರರು ನನ್ನ ಮಾಹಿತಿ ಪಡೆದಿದ್ದಾರೆ. ಇದೊಂದು ಅವೈಜ್ಞಾನಿಕ ಸಮೀಕ್ಷೆಯಾಗಿದೆ. ತಾಂತ್ರಿಕ ಸಮಸ್ಯೆಗಳು ಇವೆ ಎಂದು ಆರೋಪಿಸಿದರು.

ಈ ಸಮೀಕ್ಷೆಯೂ ಇನ್ನೊಂದು ಕಾಂತರಾಜ್ ಸಮಿತಿ ಆಗುತ್ತದೆ ಅಷ್ಟೇ. ಅನಾವಶ್ಯಕವಾಗಿ ಗೊಂದಲ ಸೃಷ್ಟಿಸಲು ಸರಕಾರ ಹೊರಟಿದೆ. ಇದರಲ್ಲಿ ಸರಕಾರ ಸಾಧನೆ ಮಾಡಲು ಯಾವುದೂ ಸಿಗಲ್ಲ. ಅವೈಜ್ಞಾನಿಕ ಗಣತಿಯಿಂದ ಯಾವುದೆ ಮಾಹಿತಿ ಸಿಗುವುದಿಲ್ಲ. ಸುಮಾರು ಅಧಿಕಾರಿಗಳು ಕೇಳಿದ ಮಾಹಿತಿ ಅನಾವಶ್ಯಕವಾಗಿತ್ತು. ಇದರಿಂದ ಜನರು ಗೊಂದಲಕ್ಕೆ ಒಳಗಾಗುತ್ತಾರೆ ಎಂದು ಟೀಕಿಸಿದರು.

ಸಮೀಕ್ಷೆ ಮಾಡಲು ಆರು ತಿಂಗಳು ಕಾಲಾವಕಾಶಬೇಕು.. ಈ ಸರಕಾರಕ್ಕೆ ಜಾತಿ ಬಿಟ್ಟರೆ ಬೇರೆ ಅವಶ್ಯಕತೆ ಇಲ್ಲ. ಯಾವ ಸಮಾಜಕ್ಕೆ ಅನ್ಯಾಯ ಮಾಡಬೇಕೆಂಬುದು ನಿಮ್ಮ ತಲೆಯಲ್ಲಿ ಇದೆ. ಸಿದ್ದರಾಮಯ್ಯರ ಬಗ್ಗೆ ಕಾಂಗ್ರೆಸ್‍ನವರೇ ಮಾತನಾಡುತ್ತಾರೆ. ಇದು ನಿಮಗೆ ಶೋಭೆ ತರುವುದಿಲ್ಲ. ಈ ರೀತಿಯಲ್ಲಿ ಮಾಡಲು ಹೋದರೆ ಒಂದು ವರ್ಷ ಆಗುತ್ತದೆ. ದಯವಿಟ್ಟು ಈ ಸಮೀಕ್ಷೆಯನ್ನು ಈಗಲೇ ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಡಿ.ಕೆ.ಶಿವಕುಮಾರ್ ಇದರ ಒಂದು ಭಾಗ. ಯಾರ ಮೇಲೆ ಎಷ್ಟು ಟೋಪಿ ಹಾಕುತ್ತಾರೆ. ದೇವರಾಜ ಅರಸು ಅವರ ಫೊಟೋ ಹಾಕಿ ಸಮೀಕ್ಷೆ ಮಾಡುತ್ತೀರಾ?. ಮೇಲ್ಜಾತಿ ಅಥವಾ ಬೇರೆ ಯಾವುದೋ ಜಾತಿ ತುಳಿಯುವ ಕೆಲಸ ಮಾಡಬೇಡಿ. ಸಮೀಕ್ಷೆಯ ಹೆಸರಿನಲ್ಲಿ ಅವೈಜ್ಞಾನಿಕ ಹಾಗೂ ಅಸಹ್ಯದ ಕೆಲಸ ಎಂದು ಸೋಮಣ್ಣ ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News