ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋದ ಬಗ್ಗೆಆಡಳಿತ ಪಕ್ಷದ ಶಾಸಕರಿಂದಲೇ ಬಹಿರಂಗ: ವಿಜಯೇಂದ್ರ ಟೀಕೆ
ವಿಜಯೇಂದ್ರ
ಬೆಂಗಳೂರು : ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಹೈಕಮಾಂಡ್‌ನ ಎಟಿಎಂ ಆಗಿ ಸರಕಾರವನ್ನು ಪರಿವರ್ತನೆಗೊಳಿಸಿದೆ. ಹಿಂದೆ ಬಿಜೆಪಿಯ ಸರಕಾರದ ವಿರುದ್ಧ ಶೇ.40ರ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದರು. ಇವತ್ತು ಜನಸಾಮಾನ್ಯರು, ಉದ್ಯಮಿಗಳು ಸೇರಿ ಯಾರನ್ನೇ ಕೇಳಿದರೂ ಶೇ.100 ಭ್ರಷ್ಟಾಚಾರ ನಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ವಸತಿ ಹಂಚಿಕೆಗೆ ಹಣ ಕೊಡಬೇಕೆಂಬ ಕಾಂಗ್ರೆಸ್ಸಿನ ಬಿ.ಆರ್.ಪಾಟೀಲ್ ಅವರ ಆರೋಪ ಕುರಿತ ಧ್ವನಿಸುರುಳಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ರೀತಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋದ ಬಗ್ಗೆ ಸ್ವತಃ ಆಡಳಿತ ಪಕ್ಷದ ಶಾಸಕರೇ ಬಹಿರಂಗಪಡಿಸಿದ್ದಾರೆ. ಯಾವುದೇ ಇಲಾಖೆಗೆ ಹೋದರೂ ಲಂಚ ಇಲ್ಲದೆ ಕೆಲಸಗಳು ಆಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿಗಳು ಸೇರಿ ಎಲ್ಲರೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಬಿ.ಆರ್.ಪಾಟೀಲ್‌ರ ಆಡಿಯೋ ಇವುಗಳಿಗೆ ಚಿಕ್ಕ ನಿದರ್ಶನ. ಈ ವಿಷಯದಲ್ಲಿ ಜನರು ಸರಕಾರದ ಬಗ್ಗೆ ಬೇಸತ್ತಿದ್ದಾರೆ ಎಂದು ಹೇಳಿದರು.
ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ದ್ವಿಗುಣ ಹೋರಾಟಕ್ಕೆ ಅಮಿತ್ ಶಾ ಸಲಹೆ:
ಇಂದು ಮುಂಜಾನೆ ನಾನು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್.ಅಶೋಕ್, ಅರವಿಂದ್ ಬೆಲ್ಲದ್ ಅವರ ಜೊತೆಗೂಡಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇವೆ. ರಾಜ್ಯ ರಾಜಕಾರಣ, ಪ್ರಸ್ತುತ ಬೆಳವಣಿಗೆಗಳ ಕುರಿತು ಚರ್ಚಿಸಿದ್ದೇವೆ ಎಂದರು.
ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ನಮ್ಮ ಹೋರಾಟವನ್ನು ದ್ವಿಗುಣಗೊಳಿಸಬೇಕೆಂಬ ವಿಷಯದಲ್ಲಿ ಕೇಂದ್ರ ಗೃಹ ಸಚಿವ ಮತ್ತು ಪಕ್ಷದ ರಾಷ್ಟ್ರೀಯ ಮುಖಂಡ ಅಮಿತ್ ಶಾ ಅವರು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.