×
Ad

ಶೀಘ್ರವೇ ಕರ್ನಾಟಕ ಒಳಗೊಂಡಂತೆ ಹಲವು ರಾಜ್ಯಾಧ್ಯಕ್ಷರ ಘೋಷಣೆ : ವಿಜಯೇಂದ್ರ

Update: 2025-06-26 15:00 IST

ಬಿ.ವೈ.ವಿಜಯೇಂದ್ರ

ಬೆಂಗಳೂರು : ಕರ್ನಾಟಕ ರಾಜ್ಯವೂ ಒಳಗೊಂಡಂತೆ ಹಲವು ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರುಗಳನ್ನು ಪಕ್ಷದ ವರಿಷ್ಠರು ಶೀಘ್ರದಲ್ಲೆ ಘೋಷಣೆ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಎಲ್ಲರ ಅಭಿಪ್ರಾಯ ಪಡೆದಿದ್ದಾರೆ. ನಾನು ಒಂದೂವರೆ ವರ್ಷದಲ್ಲಿ ಅತ್ಯಂತ ಯಶಸ್ವಿಯಾಗಿ ಸಂಘಟನಾ ಕಾರ್ಯ ಮಾಡಿದ್ದೇನೆಂಬ ವಿಶ್ವಾಸ ನನ್ನಲ್ಲಿದೆ. ನಮ್ಮ ಮುಖಂಡರಲ್ಲೂ ಇದೆ. ಹಾಗಾಗಿ ನನಗೂ ಒಳ್ಳೆಯದಾಗಲಿದೆ ಎಂದು ಪ್ರತಿಕ್ರಿಯೆ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಇನ್ನೂ ನೇಮಕಾತಿ ಆಗುತ್ತಿಲ್ಲ, ಗೊಂದಲಗಳಿದ್ದು ಮುಂದೂಡುತ್ತಿದ್ದಾರೆಂಬುದು ಸತ್ಯವಲ್ಲ. ಈಗ ದೇಶದ 14 ರಾಜ್ಯಗಳ ಅಧ್ಯಕ್ಷರ ಆಯ್ಕೆ ಮುಗಿದಿದೆ. ಶೀಘ್ರದಲ್ಲೇ ಇನ್ನು ಆರೇಳು ರಾಜ್ಯಗಳ ಅಧ್ಯಕ್ಷರ ಘೋಷಣೆ ಆಗಲಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ ಎಂದರು.

ಆ ಬಳಿಕ ಬಿಜೆಪಿ ರಾಷ್ಟ್ರೀಯಾಧ್ಯಕ್ಷರ ಘೋಷಣೆ ಆಗಲಿದೆ. ಕರ್ನಾಟಕ ಒಂದೇ ಅಲ್ಲ, ಉತ್ತರ ಪ್ರದೇಶ ರಾಜ್ಯದ ಅಧ್ಯಕ್ಷರ ನೇಮಕಾತಿಯೂ ಆಗಿಲ್ಲ. ತೆಲಂಗಾಣ-ಕರ್ನಾಟಕ ರಾಜ್ಯಗಳ ಅಧ್ಯಕ್ಷರ ನೇಮಕಾತಿಯೂ ನಡೆದಿಲ್ಲ ಎಂದ ಅವರು, ಪಕ್ಷದ ಚಟುವಟಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಿಎಂ ಡಿ.ವಿ.ಸದಾನಂದಗೌಡರನ್ನು ನಾಳೆ ಭೇಟಿ ಮಾಡಿ ಅವರ ಜೊತೆ ಚರ್ಚೆ ಮಾಡುತ್ತೇನೆ ಎಂದರು.

ಹೆದರುವ ಪ್ರಶ್ನೆ ಇಲ್ಲ: ಕಾಂಗ್ರೆಸ್ಸಿನವರು ಮೂರ್ಖರಿದ್ದಾರೆ. ಇಂದಿರಾ ಗಾಂಧಿಯವರು ಈ ದೇಶದ ಪ್ರಧಾನಿ ಆಗಿದ್ದ ವೇಳೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿತ್ತು. ಎಲ್ಲ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸ ಆಗಿತ್ತು. ತುರ್ತು ಪರಿಸ್ಥಿತಿಯಂತಹ ಕರಾಳ ದಿನಗಳು ಮತ್ತೆ ಮರುಕಳಿಸಬಾರದು ಎಂಬ ಆಶಯ ಇದರ ಹಿಂದಿದೆ ಎಂದರು.

ಬಹಳ ದಿನ ನಡೆಯದು: ಕಾಂಗ್ರೆಸ್‍ನವರ ಯೋಗ್ಯತೆಗೆ ಅಭಿವೃದ್ಧಿ ಕೆಲಸ ಮಾಡಲು ಆಗುತ್ತಿಲ್ಲ. ಮಳೆ ಹೆಚ್ಚಾಗಿ ರೈತರು ಪರದಾಡುತ್ತಿದ್ದಾರೆ. ಗೊಬ್ಬರ, ಬಿತ್ತನೆ ಬೀಜಗಳು ಸಿಗುತ್ತಿಲ್ಲ. ಇದನ್ನು ಗಮನಿಸುವುದನ್ನು ಬಿಟ್ಟು, ಇವರು ಹುಡುಗಾಟಿಕೆ-ಭ್ರಷ್ಟಾಚಾರ ಮಾಡಿಕೊಂಡು, ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ. ಇವರ ದರ್ಬಾರ್ ಬಹಳ ದಿನ ನಡೆಯಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News