ಬೆಂಗಳೂರು : ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಆದರೆ, ಇಂತಹ ಸಂಭ್ರಮದ ಸಂದರ್ಭದಲ್ಲಿ ರಾಜ್ಯದ ಜನತೆ ಸಂತೋಷದಿಂದ ಹಬ್ಬ ಆಚರಿಸುವ ವಾತಾವರಣವನ್ನು ಕಾಂಗ್ರೆಸ್ ಸರಕಾರ ನಿರ್ಮಿಸಿಲ್ಲ. ಬಡವರು, ರೈತರು, ವೃದ್ಧರು, ಯುವಕರು ಸೇರಿದಂತೆ ಜನಸಾಮಾನ್ಯರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಹಬ್ಬದ ಸಂದರ್ಭದಲ್ಲಿ ಜನರ ಮೇಲೆ ಬೆಲೆ ಏರಿಕೆಯ ಗದಾಪ್ರಹಾರ ಮಾಡಿರುವ ರಾಜ್ಯ ಸರಕಾರದ ವಿರುದ್ಧ ತೀವ್ರ ನೋವಿನಿಂದ ಮಾತನಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಕಾಂಗ್ರೆಸ್ ಸರಕಾರದ ಸಾಧನೆ ಎಂದರೆ ನಿರಂತರ ಬೆಲೆ ಏರಿಕೆಯೊಂದೇ. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ, ಮದ್ಯದ ದರ ಏರಿಕೆ, ನೀರಿನ ದರ ಹೆಚ್ಚಳ, ವನ್ಯಜೀವಿ ಸಫಾರಿ ಟಿಕೆಟ್ ದರ ಹೆಚ್ಚಳ, ಸರಕಾರಿ ಆಸ್ಪತ್ರೆಗಳ ಎಕ್ಸ್‌ರೇ ಮತ್ತು ಹೊರರೋಗಿಗಳ ಸಮಾಲೋಚನಾ ಶುಲ್ಕ ಹೆಚ್ಚಳ ಹೀಗೆ ಜನಸಾಮಾನ್ಯರ ಮೇಲೆ ಒಂದರ ಹಿಂದೆ ಒಂದರಂತೆ ಹೊರೆ ಹಾಕಲಾಗಿದೆ. ಇದೀಗ ಹಾಲು, ಮೊಸರು, ತುಪ್ಪ ಹಾಗೂ ಬಸ್ ಪ್ರಯಾಣ ದರ ಹೆಚ್ಚಳದ ಮೂಲಕ ಜನರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಲಾಗಿದೆ ಎಂದು ಟೀಕಿಸಿದರು.

ಹಾಲಿನ ದರವನ್ನು ಲೀಟರ್‌ಗೆ 8 ರೂ. ಹೆಚ್ಚಿಸುವುದಾಗಿ ಘೋಷಿಸಿದ ಸರಕಾರ, ವಾಸ್ತವದಲ್ಲಿ ವಿವಿಧ ಉತ್ಪನ್ನಗಳ ದರವನ್ನು 12ರಿಂದ 13 ರೂ.ವರೆಗೆ ಹೆಚ್ಚಿಸಿದೆ. ಒಂದು ಕೆ.ಜಿ. ತುಪ್ಪದ ದರದಲ್ಲಿ 180 ರೂ. ಹೆಚ್ಚಳವಾಗಿದೆ. ಮೊಸರಿನ ದರದಲ್ಲೂ 14 ರೂ. ಏರಿಕೆ ಮಾಡಲಾಗಿದೆ. ತುಪ್ಪವೇನೂ ಐಷಾರಾಮಿ ವಸ್ತುವಲ್ಲ. ಸಾಮಾನ್ಯ ಕುಟುಂಬಗಳೂ ಬಳಸುವ ಅಗತ್ಯ ಆಹಾರ ಪದಾರ್ಥವಾಗಿದೆ.

ಗ್ರಾಮೀಣ ಭಾಗದಲ್ಲಿ ಊಟಕ್ಕೆ ಅಡುಗೆ ಇಲ್ಲದಿದ್ದರೂ ಒಂದು ಲೋಟ ಹಾಲು ಕುಡಿದು ಮಲಗಬಹುದು ಎಂಬ ಮಾತಿದೆ. ಆದರೆ ಇಂದು ಬಡ ಕುಟುಂಬಗಳು ಒಂದು ಲೋಟ ಹಾಲು ಖರೀದಿಸುವ ಮುನ್ನವೂ ಯೋಚಿಸುವ ಪರಿಸ್ಥಿತಿಯನ್ನು ಕಾಂಗ್ರೆಸ್ ಸರಕಾರ ಸೃಷ್ಟಿಸಿದೆ. ಹಾಲಿನ ದರ ಹೆಚ್ಚಳದಿಂದ ರೈತರಿಗೆ ಲಾಭವಾಗುವುದಾದರೆ ಅದನ್ನು ನಾವು ಸ್ವಾಗತಿಸುತ್ತೇವೆ. ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ ನೀಡುವ 7 ರೂ. ಪ್ರೋತ್ಸಾಹಧನದ ಹೊರೆಯನ್ನು ಸರಕಾರವೇ ಭರಿಸಬೇಕು. ರೈತರಿಗೆ ಅನುಕೂಲ ಮಾಡಿಕೊಡುವುದು ಸರಕಾರದ ಕರ್ತವ್ಯ. ಅದಕ್ಕಾಗಿ ಗ್ರಾಹಕರ ಮೇಲೆ ಸಂಪೂರ್ಣ ಹೊರೆ ಹಾಕುವುದು ಎಷ್ಟು ಸರಿ? ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ಹೈನುಗಾರರಿಗೆ ನೀಡುತ್ತಿದ್ದ ಪ್ರೋತ್ಸಾಹಧನದ ಹೊರೆಯನ್ನು ಸರಕಾರವೇ ಭರಿಸುತ್ತಿತ್ತು. ಅದೇ ಮಾದರಿಯನ್ನು ಈಗಿನ ಸರಕಾರವೂ ಅನುಸರಿಸಬೇಕು ಎಂದು ಆಗ್ರಹಿಸಿದರು.

ಸಾರಿಗೆ ವ್ಯವಸ್ಥೆಯ ದುಸ್ಥಿತಿಗೆ ಶಕ್ತಿ ಯೋಜನೆಯೇ ಕಾರಣ

ಕೆಎಸ್‌ಆರ್‌ಟಿಸಿ ಸೇರಿದಂತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.40ರಿಂದ 50ರಷ್ಟು ಹೆಚ್ಚಿಸುವುದಾಗಿ ಸರಕಾರ ಹೇಳುತ್ತಿದೆ. ಆದರೆ ಹಲವು ಕಡೆಗಳಲ್ಲಿ ಪ್ರಯಾಣಿಕರ ಮೇಲೆ ಶೇ.70ರಿಂದ 80ರವರೆಗೆ ಹೆಚ್ಚುವರಿ ಹೊರೆ ಬೀಳುತ್ತಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿರುವ ಸರಕಾರ, ಸಾರಿಗೆ ನಿಗಮಗಳಿಗೆ ಪಾವತಿಸಬೇಕಾದ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ.

ಇದರಿಂದ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಬಸ್ ಡಿಪೋಗಳಲ್ಲಿ ಡೀಸೆಲ್ ಖರೀದಿಸಲೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.50ರಷ್ಟು ಬಸ್‌ಗಳು ಸಮರ್ಪಕವಾಗಿ ಸಂಚರಿಸದಿರುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ದುಸ್ಥಿತಿಗೆ ಕಾಂಗ್ರೆಸ್ ಸರಕಾರದ ಆರ್ಥಿಕ ನಿರ್ವಹಣೆಯ ವೈಫಲ್ಯವೇ ಕಾರಣ ಎಂದು ದೂರಿದರು.

ರಾಜ್ಯದ ಕನಿಷ್ಠ 2,000 ಸರಕಾರಿ ಶಾಲೆಗಳನ್ನು ಖಾಸಗಿ ಕಂಪನಿಗಳು ದತ್ತು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ. ಕಂಪನಿಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (CSR) ಶಿಕ್ಷಣ ಕ್ಷೇತ್ರಕ್ಕೆ ನೆರವು ನೀಡುವುದರಲ್ಲಿ ತಪ್ಪಿಲ್ಲ. ಆದರೆ ಸರಕಾರಿ ಶಾಲೆಗಳ ಅಭಿವೃದ್ಧಿಯ ಜವಾಬ್ದಾರಿಯನ್ನೇ ಖಾಸಗಿ ಕಂಪನಿಗಳ ಮೇಲೆ ಹಾಕುವುದು ಸರಕಾರದ ವೈಫಲ್ಯವನ್ನು ತೋರಿಸುತ್ತದೆ. ಸಚಿವರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೂ ಖಾಸಗಿ ಕಂಪನಿಗಳ ಸಿಎಸ್‌ಆರ್ ನಿಧಿಯನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲು ಸರಕಾರದ ಬಳಿ ಹಣವಿಲ್ಲ ಎಂಬುದನ್ನು ಮುಖ್ಯಮಂತ್ರಿಗಳ ಹೇಳಿಕೆಗಳು ಬಹಿರಂಗಪಡಿಸುತ್ತಿವೆ. ಕರ್ನಾಟಕ ರಾಜ್ಯ ಇಂತಹ ಆರ್ಥಿಕ ದುಸ್ಥಿತಿಯನ್ನು ಹಿಂದೆಂದೂ ಕಂಡಿರಲಿಲ್ಲ. ರಾಜ್ಯದಲ್ಲಿ ಒಂದು ರೀತಿಯ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಜಯೇಂದ್ರ ಟೀಕಿಸಿದರು.

ನವೆಂಬರ್ 11ರಂದು ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್ ಸರಕಾರದ ಅವೈಜ್ಞಾನಿಕ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ನಾಡಿನ ಜನರ ಪರವಾಗಿ ಹೋರಾಟ ನಡೆಸಲಿದೆ. ನವೆಂಬರ್ 11ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ರಾಜ್ಯದ ಬಿಜೆಪಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮಾಜಿ ಚುನಾಯಿತ ಪ್ರತಿನಿಧಿಗಳು, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಯಕರು ಹಾಗೂ ಪಕ್ಷದ ರಾಜ್ಯ ಪದಾಧಿಕಾರಿಗಳು ಸೇರಿದಂತೆ ಎಲ್ಲ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಸರಕಾರಕ್ಕೆ ಜನರ ನೋವನ್ನು ತಲುಪಿಸಿ, ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯುವಂತೆ ಎಚ್ಚರಿಕೆ ನೀಡಲಾಗುವುದು.

ಇದಾದ ಬಳಿಕ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿರುವ ಪಾದಯಾತ್ರೆಗಳಲ್ಲೂ ಬೆಲೆ ಏರಿಕೆ ವಿರುದ್ಧದ ಹೋರಾಟವನ್ನು ಮುಂದುವರಿಸಲಾಗುವುದು. ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಪ್ರತಿಭಟನೆ ನಡೆಸಲಾಗುವುದು. ಜನಸಾಮಾನ್ಯರು, ಬಡವರು ಮತ್ತು ರೈತರ ಪರವಾಗಿ ಬಿಜೆಪಿ ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಸಿದರು.

ಎಥೆನಾಲ್ ಮಿಶ್ರಣ ವಿವಾದ: ಮರುಪರೀಕ್ಷೆಗೆ ಸಿದ್ಧ

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕೇಂದ್ರದ ವಿರುದ್ಧ ಮಾಡುತ್ತಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ತೈಲ ಕಂಪನಿಗಳಾದ ಐಒಸಿ, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಈಗಾಗಲೇ ತಮ್ಮ ಸ್ಪಷ್ಟನೆ ನೀಡಿವೆ. ಗುಣಮಟ್ಟ ಪರೀಕ್ಷೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಅನುಸರಿಸಿದ ಮಾನದಂಡಗಳ ಬಗ್ಗೆ ಕಂಪನಿಗಳು ಪ್ರಶ್ನೆ ಎತ್ತಿವೆ. ದೇಶದ ಸುಮಾರು 700ರಿಂದ 800 ಕಡೆಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು, ರಾಜ್ಯ ಸರಕಾರ ಆರೋಪಿಸಿರುವ ರೀತಿಯ ಸಮಸ್ಯೆ ಕಂಡುಬಂದಿಲ್ಲ ಎಂದು ಕಂಪನಿಗಳು ತಿಳಿಸಿವೆ. ಮರುಪರೀಕ್ಷೆ ನಡೆಸಲು ತಾವು ಸಿದ್ಧವಿರುವುದಾಗಿ ಕಂಪನಿಗಳು ಹೇಳಿವೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೂ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಸರಕಾರವೂ ಪರೀಕ್ಷೆಗೆ ಸಹಕರಿಸಲಿ. ಯಾವ ಮಾನದಂಡದ ಆಧಾರದ ಮೇಲೆ ಪರೀಕ್ಷೆ ನಡೆಸಲಾಗಿದೆ ಎಂಬುದನ್ನು ಬಹಿರಂಗಪಡಿಸಲಿ. ಜಂಟಿ ಪರೀಕ್ಷೆ ನಡೆಸಿ ಸತ್ಯಾಸತ್ಯತೆಯನ್ನು ಜನರ ಮುಂದೆ ಇಡೋಣ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor