ಬೆಂಗಳೂರು : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಂಜೆ ಮದ್ಯದ ಅಂಗಡಿ ಮುಂದೆ ಮದ್ಯ ಸೇವಿಸಿದ ಜನರಂತೆ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಶನಿವಾರ ನಗರದ ಜೆ.ಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಗೃಹ ಮಂತ್ರಿ ಸಂಜೆ ಹೆಂಡ ಕುಡಿದವರ ರೀತಿ ಮಾತಾಡುತ್ತಿದ್ದಾರೆ. 17 ಎಇಇ ಸ್ಥಾನಗಳಿಗೆ ನೇಮಕಾತಿ, ಪಶು ವೈದ್ಯಾಧಿಕಾರಿಗಳ ಪರೀಕ್ಷೆ ನನ್ನ ಆಡಳಿತದ ಕಾಲದಲ್ಲಿ ನಡೆದಿಲ್ಲ. ಜಾರಿ ನಿರ್ದೇಶನಾಲಯ ದಾಳಿ ಮಾಡಿದ್ದಕ್ಕೆ ಈ ಹಗರಣ ಹೊರಬಿತ್ತು. ಆರೋಪಿಯಾಗಿರುವ ಅಧಿಕಾರಿ ಜ್ಞಾನೇಂದ್ರನನ್ನು ಕರೆದುಕೊಂಡು ಬಂದು ರೆಸಾರ್ಟ್‍ನಲ್ಲಿ ನಾನು ಕೂರಿಸಿಕೊಂಡಿದ್ದೆನಾ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ರಾಜ್ಯ ಸರಕಾರ ನೇಮಕಾತಿ ಪರೀಕ್ಷೆಗಳನ್ನು ಕೆಪಿಎಸ್ಸಿ ಬದಲು ಕೆಇಎ ಸಂಸ್ಥೆಯಿಂದ ನಡೆಸಲು ಹೊರಟಿದೆ. ಆದರೆ, ಈಗಾಗಲೇ ಹಲವು ಹಗರಣಗಳ ಆರೋಪಗಳಿವೆ. ಕೆಪಿಎಸ್ಸಿ ಸಂಸ್ಥೆಯಲ್ಲಿ ಹಣದ ವ್ಯವಹಾರ ನಡೆದಿರುವುದು ಸಾಬೀತಾಗಿದೆ. ಶಾಸಕ ಆರ್.ವಿ.ದೇಶಪಾಂಡೆ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದರು. ಅವರು ವರದಿ ಕೊಟ್ಟಿದ್ದಾರೋ ಇಲ್ಲವೋ ಇನ್ನೂ ಸ್ಪಷ್ಟತೆ ಇಲ್ಲ. ಹೀಗಿದ್ದಾಗಲೂ, ಪರೀಕ್ಷೆ ನಡೆಸಲು ಸರಕಾರ ಮುಂದಾಗಿದೆ. ಅದನ್ನು ಮುಂದೂಡಬೇಕು ಎನ್ನುವುದು ನನ್ನ ಸಲಹೆ ಎಂದು ಹೇಳಿದರು.

ರೈತರಿಗೆ ಬೆಳೆ ವಿಮೆ ಯೋಜನೆಯಲ್ಲಿ ಪರಿಹಾರ ಸಿಗದೆ ಇರುವ ವಿಚಾರವಾಗಿ ಮಾತನಾಡಿ, ಸರಕಾರ ಬೆಳೆ ವಿಮೆ ಕೊಡಿಸುವುದರಲ್ಲಿ ವಿಫಲವಾಗಿದೆ. ಈ ಸರಕಾರದಲ್ಲಿ ಬರೀ ಘೋಷಣೆ ಮಾಡಲಾಗುತ್ತದೆ. ಮೊನ್ನೆ ಬಸ್ ದರ ಏರಿಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ, ಡಿ.ಕೆ. ಶಿವಕುಮಾರ್ ಪತ್ರಿಕಾಗೋಷ್ಠಿ ಕರೆದು ರೈತರಿಗೆ 2,500 ರೂ., ಕೊಡುತ್ತೇವೆ ಘೋಷಿಸಿದ್ದಾರೆ. ಈ ಮೂಲಕ ಬಸ್ ದರ ಏರಿಕೆಯ ವಿಷಯವನ್ನು ತಿರುಚುವ ಕೆಲಸ ಮಾಡಿದ್ದಾರೆ. ಸಂಪತ್ಭರಿತವಾದ ರಾಜ್ಯದ ಆರ್ಥಿಕ ಸ್ಥಿತಿಯನ್ನು ಹಳ್ಳ ಹಿಡಿಸಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor