ರಿಝ್ವಾನ್‌ ಅರ್ಶದ್‌/ ಸಾಂದರ್ಭಿಕ ಚಿತ್ರ (Image by rawpixel.com on Magnific)

ಬೆಂಗಳೂರು : ಕರ್ನಾಟಕದಲ್ಲಿ ಮಾರಾಟವಾಗುತ್ತಿರುವ E20 ಪೆಟ್ರೋಲ್‌ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಸಾರ್ವಜನಿಕ ವಲಯದ ತೈಲ ಕಂಪೆನಿಗಳಿಗೆ ಸಚಿವ ರಿಝ್ವಾನ್ ಅರ್ಷದ್ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಇಂಡಿಯನ್ ಆಯಿಲ್ (IOCL), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಂಪನಿಗಳ ಸ್ಪಷ್ಟನೆಯನ್ನು 'ಕಟ್-ಕಾಪಿ-ಪೇಸ್ಟ್' ಪ್ರತಿಕ್ರಿಯೆ ಎಂದು ವ್ಯಂಗ್ಯವಾಡಿರುವ ಅವರು, ಸೋಮವಾರ ಇಡೀ ದೇಶದ ಮುಂದೆ ವಿವರವಾದ ಉತ್ತರ ನೀಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮೂರು ತೈಲ ಕಂಪನಿಗಳ ಅಧಿಕೃತ ಖಾತೆಗಳನ್ನು ಉಲ್ಲೇಖಿಸಿ ಪೋಸ್ಟ್ ಮಾಡಿರುವ ಸಚಿವರು, "ನಿಮ್ಮ ಕಟ್-ಕಾಪಿ-ಪೇಸ್ಟ್ ಪ್ರತಿಕ್ರಿಯೆಯನ್ನು ನಾವು ಗಮನಿಸಿದ್ದೇವೆ. ನಿಮ್ಮ ದೀಪಾವಳಿ ವಾರಾಂತ್ಯದ ಸಂಭ್ರಮವನ್ನು ಹಾಳುಮಾಡಲು ನಾನು ಬಯಸುವುದಿಲ್ಲ. ಸೋಮವಾರ ಇಡೀ ದೇಶದ ಮುಂದೆ ವಿವರವಾದ ಉತ್ತರ ನೀಡಲಿದ್ದೇನೆ. ಅಲ್ಲಿಯವರೆಗೆ ಹಬ್ಬದ ಸಂಭ್ರಮವನ್ನು ಆನಂದಿಸಿ. ದೀಪಾವಳಿ ಶುಭಾಶಯಗಳು!" ಎಂದು ಹೇಳಿದ್ದಾರೆ.

ತಮ್ಮ ಪೋಸ್ಟ್‌ನ ಕೊನೆಯಲ್ಲಿ ವಿಡಂಬನಾತ್ಮಕವಾಗಿ ವಿಶೇಷ ಸೂಚನೆಯನ್ನೂ ನೀಡಿರುವ ರಿಝ್ವಾನ್ ಅರ್ಷದ್, "ನಿಮ್ಮ ಮಾಹಿತಿಗಾಗಿ ಹೇಳುವುದಾದರೆ, ನಾವು ಸರ್ಕಾರ, ಅಧಿಕೃತ ಮೂಲ. ಯಾವುದೇ ಅನಾಮಧೇಯ ಸಂಸ್ಥೆಯಲ್ಲ" ಎಂದು ತೈಲ ಕಂಪನಿಗಳಿಗೆ ತಿರುಗೇಟು ನೀಡಿದ್ದಾರೆ.

ತೈಲ ಕಂಪನಿಗಳು ತಮ್ಮ ಸ್ಪಷ್ಟನೆಯಲ್ಲಿ ಅಧಿಕೃತ ಮೂಲಗಳಿಂದ ಪರಿಶೀಲಿಸಲಾದ ಮಾಹಿತಿಯನ್ನಷ್ಟೇ ನಂಬುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದವು. ಈ ಹೇಳಿಕೆಗೆ ಪ್ರತಿಯಾಗಿ ಸಚಿವರು ಸರ್ಕಾರವೇ ಅಧಿಕೃತ ಮೂಲ ಎಂಬುದನ್ನು ನೆನಪಿಸಿರುವುದು ಗಮನಾರ್ಹವಾಗಿದೆ.

ತೈಲ ಕಂಪನಿಗಳ ಸ್ಪಷ್ಟನೆಯಲ್ಲಿ ಏನಿದೆ?

ಕರ್ನಾಟಕದ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಶೇ.26ರಿಂದ 31ರವರೆಗೆ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ IOCL, BPCL ಮತ್ತು HPCL ಕಂಪನಿಗಳು, ನಿಗದಿತ ಪರೀಕ್ಷಾ ವಿಧಾನಗಳ ಮೂಲಕ ನಡೆಸಿದ ಪರೀಕ್ಷೆಗಳಲ್ಲಿ ಇಂತಹ ಅಂಶಗಳು ದೃಢಪಟ್ಟಿಲ್ಲ ಎಂದು ಹೇಳಿವೆ.

ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 893 ಪೆಟ್ರೋಲ್ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಕರ್ನಾಟಕದ 56 ಮಾದರಿಗಳೂ ಇದರಲ್ಲಿ ಸೇರಿವೆ. ಪರೀಕ್ಷಿಸಲಾದ ಎಲ್ಲ ಮಾದರಿಗಳಲ್ಲಿ ಎಥೆನಾಲ್ ಪ್ರಮಾಣವು ನಿಗದಿತ ಶೇ.19ರಿಂದ 21ರ ಮಿತಿಯೊಳಗೇ ಇತ್ತು ಎಂದು ಕಂಪನಿಗಳು ಹೇಳಿವೆ.

ಅಲ್ಲದೆ, ಈ ವಿವಾದಕ್ಕೆ ಸಂಬಂಧಿಸಿದಂತೆ ವಾಸ್ತವಾಂಶಗಳನ್ನು ವೈಜ್ಞಾನಿಕವಾಗಿ ದೃಢಪಡಿಸಲು ಕರ್ನಾಟಕ ಸರ್ಕಾರದೊಂದಿಗೆ ಜಂಟಿ ಹಾಗೂ ಪಾರದರ್ಶಕ ಪರೀಕ್ಷೆ ನಡೆಸಲು ಮುಂದಾಗಿರುವುದಾಗಿಯೂ ಕಂಪನಿಗಳು ತಿಳಿಸಿವೆ.

ಇಂಧನದ ಗುಣಮಟ್ಟ, ನಿಯಮಗಳ ಪಾಲನೆ ಹಾಗೂ ಗ್ರಾಹಕರ ವಿಶ್ವಾಸಕ್ಕೆ ತಾವು ಬದ್ಧರಾಗಿರುವುದಾಗಿ ಹೇಳಿರುವ ಕಂಪನಿಗಳು, ಪರಿಶೀಲಿಸದ ಆರೋಪಗಳನ್ನು ನಂಬದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿವೆ.

ಕಂಪನಿಗಳ ಸ್ಪಷ್ಟನೆಗಳಲ್ಲಿ ಒಂದೇ ರೀತಿಯ ಅಂಕಿ-ಅಂಶಗಳು ಹಾಗೂ ಬಹುತೇಕ ಸಮಾನವಾದ ಹೇಳಿಕೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಚಿವ ರಿಝ್ವಾನ್ ಅರ್ಷದ್ ಅವುಗಳನ್ನು 'ಕಾಪಿ-ಪೇಸ್ಟ್' ಪ್ರತಿಕ್ರಿಯೆ ಎಂದು ಟೀಕಿಸಿದ್ದಾರೆ.

ಶೇ.31.2ರಷ್ಟು ಎಥೆನಾಲ್ ಮಿಶ್ರಣದ ಆರೋಪ

ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ಸಚಿವ ರಿಝ್ವಾನ್ ಅರ್ಷದ್, ಕರ್ನಾಟಕದ ವಿವಿಧ ಭಾಗಗಳಿಂದ ಸಂಗ್ರಹಿಸಲಾದ 63 ಪೆಟ್ರೋಲ್ ಮಾದರಿಗಳನ್ನು NABL ಮತ್ತು ISO ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ ಎಂದು ತಿಳಿಸಿದ್ದರು.

ಪರೀಕ್ಷೆಯಲ್ಲಿ ಇಂಡಿಯನ್ ಆಯಿಲ್‌ನ ಒಂದು ಮಾದರಿಯಲ್ಲಿ ಶೇ.31.2 ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂನ ಒಂದು ಮಾದರಿಯಲ್ಲಿ ಶೇ.30.5ರಷ್ಟು ಎಥೆನಾಲ್ ಮಿಶ್ರಣ ಪತ್ತೆಯಾಗಿದೆ ಎಂದು ಅವರು ಆರೋಪಿಸಿದ್ದರು.

E20 ಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡುತ್ತಿರುವುದರಿಂದ ವಾಹನಗಳ ಇಂಜಿನ್, ಇಂಧನ ಪೈಪ್‌ಗಳು ಹಾಗೂ ಇತರ ಬಿಡಿಭಾಗಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದ್ದರು.

ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಕುಸಿಯುತ್ತಿದ್ದು, ಇದರಿಂದ ದೇಶದ ಗ್ರಾಹಕರಿಗೆ ವಾರ್ಷಿಕ ಸುಮಾರು 62 ಸಾವಿರ ಕೋಟಿ ರೂಪಾಯಿಯಿಂದ ಒಂದು ಲಕ್ಷ ಕೋಟಿ ರೂಪಾಯಿವರೆಗೆ ಆರ್ಥಿಕ ನಷ್ಟವಾಗುತ್ತಿದೆ ಎಂದೂ ಅವರು ಆರೋಪಿಸಿದ್ದರು.

ಆದರೆ, ಈ ಆರೋಪಗಳನ್ನು ತೈಲ ಕಂಪನಿಗಳು ನಿರಾಕರಿಸಿದ್ದು, ತಮ್ಮ ಪರೀಕ್ಷಾ ಫಲಿತಾಂಶಗಳು ನಿಗದಿತ ಮಾನದಂಡಗಳಿಗೆ ಅನುಗುಣವಾಗಿವೆ ಎಂದು ಸಮರ್ಥಿಸಿಕೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor