ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ವಿವಾದಾತ್ಮಕ ಹೇಳಿಕೆ: ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ‘ಚಾಕು, ಚೂರಿ ಪಾರ್ಸಲ್’!
ಪೊಲೀಸ್ ಆಯುಕ್ತರಿಗೆ ಬಿಜೆಪಿ ದೂರು
ಪೊಲೀಸ್ ಆಯುಕ್ತರಿಗೆ ಬಿಜೆಪಿ ದೂರು
ಬೆಂಗಳೂರು : ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ಚಾಕು, ಚೂರಿಗಳ ಪಾರ್ಸೆಲ್ ಬರುತ್ತಿರುವುದು ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಗರದಲ್ಲಿನ ನಾರಾಯಣಸ್ವಾಮಿ ಅವರ ಸರಕಾರಿ ನಿವಾಸಕ್ಕೆ ಆನ್ಲೈನ್ ಮೂಲಕ ಚಾಕು, ಚೂರಿಗಳನ್ನು ಅನಾಮಿಕ ವ್ಯಕ್ತಿಗಳು ಆರ್ಡರ್ ಮಾಡುತ್ತಿದ್ದು, ಪಾರ್ಸೆಲ್ಗಳ ಮೇಲೆ ಪಾರ್ಸೆಲ್ ಬರುತ್ತಿವೆ. ಅವರ ನಿವಾಸದ ಹೊರಭಾಗದಲ್ಲಿ ಪಾರ್ಸಲ್ ಡೆಲೆವರಿ ಮಾಡಲು ಕೋರಿಯರ್ ಬಾಯ್ಸ್ ಸರತಿ ಸಾಲಿನಲ್ಲಿ ನಿಂತಿರುವ ವಿಡಿಯೋ ವೈರಲ್ ಆಗಿದೆ.
ಈ ಘಟನೆಯ ಹಿನ್ನೆಲೆಯ್ಲಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ನಿಯೋಗ ಛಲವಾದಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದೆ. ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ ಮತ್ತು ಆರ್ಥಿಕ ದುಸ್ಥಿತಿಯನ್ನು ಪ್ರಶ್ನಿಸುತ್ತಿರುವ ವಿಪಕ್ಷದ ನಾಯಕರನ್ನು ಬೆದರಿಸುವ ಹಾಗೂ ಅವಹೇಳನ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ವಿಜಯೇಂದ್ರ ದೂರಿದರು.
ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಮನೆಗೆ ನೂರಾರು ಚಾಕು, ಚೂರಿಗಳನ್ನು ಕಳುಹಿಸಿರುವ ಘಟನೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಂಸ್ಕೃ ತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಈ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಬೆದರಿಕೆ ಮತ್ತು ಗೂಂಡಾ ವರ್ತನೆಗೆ ಅವಕಾಶ ನೀಡಲಾಗುತ್ತಿದೆ ಎಂದು ಅವರು ಟೀಕಿಸಿದರು.
ಈ ಹಿಂದೆ ಕೊತ್ವಾಲ್ ರಾಮಚಂದ್ರನ ಹೆಸರನ್ನು ಕೇಳಿದ್ದೇವೆ. ಅವರೊಂದಿಗೆ ಗೂಂಡಾಗಿರಿ ನಡೆಸುತ್ತಿದ್ದ ಕೆಲವರು ಇಂದಿಗೂ ಕಾಂಗ್ರೆಸ್ ವ್ಯವಸ್ಥೆಯಲ್ಲಿ ಗುರುತಿಸಿಕೊಂಡಿದ್ದಾರೆ ಎಂಬ ಅನುಮಾನ ಮೂಡುವ ರೀತಿಯಲ್ಲಿ ಘಟನೆಗಳು ನಡೆಯುತ್ತಿವೆ. ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎಂಬಂತೆ ಇಂತಹ ವರ್ತನೆಗಳು ಮುಂದುವರಿದಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗಡಿ ಪಾರು ಮಾಡಲು ಒತ್ತಾಯ: ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಯವರಿಗೆ ವಿವಿಧ ಮೊಬೈಲ್ಫೋನ್ ನಂಬರ್ ಗಳ ಮೂಲಕ ಚಾಕು, ಚೂರಿ ಸಹಿತ ಮಾರಕ ವಸ್ತುಗಳನ್ನು ಆರ್ಡರ್ ಮಾಡಿದ್ದ ಗೂಂಡಾಗಳ ವಿರುದ್ಧ ಗಡಿಪಾರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗ, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಮನವಿ ಮಾಡಿದೆ.