ನಟ ದರ್ಶನ್‌

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್‌ ಅವರ ಸಂಪೂರ್ಣ ವೈದ್ಯಕೀಯ ಪರೀಕ್ಷೆ ನಡೆಸಿ ನವೆಂಬರ್ 12ರಂದು ಕೋರ್ಟ್‌ಗೆ ವರದಿ ಸಲ್ಲಿಸುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ವೈದ್ಯಾಧಿಕಾರಿಗೆ ಸೆಷನ್ಸ್ ಕೋರ್ಟ್ ನಿರ್ದೇಶಿಸಿದೆ.

ಬೆನ್ನುಹುರಿ ಸಂಬಂಧಿತ ಸಮಸ್ಯೆಗೆ ಫಿಸಿಯೋಥೆರಪಿ ಸೇರಿದಂತೆ ಸೂಕ್ತ ಚಿಕಿತ್ಸೆ ಒದಗಿಸಲು ಜೈಲು ಪ್ರಾಧಿಕಾರಕ್ಕೆ ನಿರ್ದೇಶಿಸುವಂತೆ ಕೋರಿ ದರ್ಶನ್‌ ಸಲ್ಲಿಸಿದ್ದ ಅರ್ಜಿ ಕುರಿತ ಆದೇಶವನ್ನು 58ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶೆ ಸುಜಾತ ಎಂ. ಸಾಂಬ್ರಾಣಿ ಅವರು ಶನಿವಾರ ಪ್ರಕಟಿಸಿದ್ದಾರೆ.

ನ್ಯಾಯಾಲಯದ ಆದೇಶವೇನು?

ದರ್ಶನ್ ಅವರನ್ನು ಕೂಲಂಕಷ ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ವೈದ್ಯಾಧಿಕಾರಿಗಳಿಗೆ ನಿರ್ದೇಶಿಸಿರುವ ನ್ಯಾಯಾಲಯ, ಈ ಸಂದರ್ಭದಲ್ಲಿ ಅವರ ಪ್ರಸ್ತುತ ಆರೋಗ್ಯ ಸಮಸ್ಯೆಗಳು, ಹಿಂದಿನ ವೈದ್ಯಕೀಯ ದಾಖಲೆಗಳು, ಚಿಕಿತ್ಸೆಯ ಇತಿಹಾಸ ಮತ್ತು ಅವರು ಉಲ್ಲೇಖಿಸಿರುವ ಬೆನ್ನುಹುರಿಗೆ ಸಂಬಂಧಿಸಿದ ಕಾಯಿಲೆಯ ಸ್ವರೂಪವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿದೆ.

ಮುಖ್ಯ ವೈದ್ಯಾಧಿಕಾರಿಯು ದರ್ಶನ್ ಅವರ ಪ್ರಸ್ತುತ ವೈದ್ಯಕೀಯ ಸ್ಥಿತಿಯ ಆಧಾರದಲ್ಲಿ ಅವರಿಗೆ ಅಗತ್ಯ ಔಷಧಿಗಳು, ಫಿಸಿಯೋಥೆರಪಿ, ಇತರ ಸಾಂಪ್ರದಾಯಿಕ ಚಿಕಿತ್ಸೆ ಸೇರಿದಂತೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗುವುದನ್ನು ಖಾತ್ರಿಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಕಾರಾಗೃಹದೊಳಗೆ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳು ದರ್ಶನ್‌ಗೆ ಅಗತ್ಯವಾದ ಚಿಕಿತ್ಸೆ ಒದಗಿಸಲು ಸಾಲದು ಎಂದು ಕಂಡುಬಂದರೆ, ಜೈಲು ನಿಯಮಗಳು ಮತ್ತು ಕಾರ್ಯವಿಧಾನಗಳಿಗೆ ಅನುಸಾರವಾಗಿ ಅವರನ್ನು ಸೂಕ್ತ ಸರ್ಕಾರಿ ಆಸ್ಪತ್ರೆ ಅಥವಾ ಇತರ ಸಮರ್ಥ ವಿಶೇಷ ವೈದ್ಯಕೀಯ ಸಂಸ್ಥೆಗೆ ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಉಲ್ಲೇಖಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.

ದರ್ಶನ್‌ಗೆ ನಿರಂತರ ಫಿಸಿಯೋಥೆರಪಿ, ಹೆಚ್ಚಿನ ರೋಗ ನಿರ್ಣಯ ತನಿಖೆ ಅಥವಾ ಯಾವುದೇ ವಿಶೇಷ ವೈದ್ಯಕೀಯ ಹಸ್ತಕ್ಷೇಪದ ಅಗತ್ಯವಿದೆಯೇ ಎಂಬುದನ್ನು ನಿರ್ದಿಷ್ಟವಾಗಿ ನಿರ್ಣಯಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ವರದಿ ಸ್ವೀಕರಿಸಿದ ನಂತರ ಅಗತ್ಯವಿದ್ದರೆ, ಬಾಹ್ಯ ವೈದ್ಯಕೀಯ ಮಂಡಳಿಯಿಂದ ಸ್ವತಂತ್ರ ಅಭಿಪ್ರಾಯ ಪಡೆಯುವ ಅಗತ್ಯತೆಯನ್ನು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor