×
Ad

ಧರ್ಮಸ್ಥಳ| ಮೂಳೆ ದೊರೆತಿರುವುದು ಗೊತ್ತಾದ ಬಳಿಕ ಬಿಜೆಪಿಯವರು ಮಾತನಾಡಲು ಶುರು ಮಾಡಿದರು: ಸಿಎಂ ಸಿದ್ದರಾಮಯ್ಯ ಟೀಕೆ

"ವಿರೇಂದ್ರ ಹೆಗ್ಗಡೆಯವರೇ ಎಸ್‍ಐಟಿ ತನಿಖೆ ಸ್ವಾಗತಿಸಿದ್ದಾರೆ"

Update: 2025-08-22 21:22 IST

ಬೆಂಗಳೂರು: ಧರ್ಮಸ್ಥಳದ ಪ್ರಕರಣ ಸಂಬಂಧ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‍ಐಟಿ) ರಚನೆ ಮಾಡಿರುವುದನ್ನು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಸ್ವಾಗತಿಸಿದ್ದಾರೆ. ಆದರೆ, ಎಸ್‍ಐಟಿ ರಚನೆಯಾದ 10-12 ದಿನಗಳ ಬಾಯಿಮುಚ್ಚಿಕೊಂಡಿದ್ದ ಬಿಜೆಪಿಯವರು, ಇದೀಗ ಮಾತನಾಡಲು ಆರಂಭಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಮುಸುಕುದಾರಿ ತೋರಿಸಿದ ಜಾಗದಲ್ಲಿ ಎಸ್‍ಐಟಿ ಈಗಾಗಲೆ 15 ಕಡೆಗಳಲ್ಲಿ ಅಗೆದಿದ್ದು, ಒಂದು ಕಡೆ ಮೃತದೇಹದ ಅಸ್ಥಿಪಂಜರ, ಇನ್ನೊಂದು ಕಡೆ ಮೂಳೆ ದೊರೆತಿರುವುದು ಗೊತ್ತಾದ ನಂತರ ಬಿಜೆಪಿಯವರು ಮಾತನಾಡಲು ಶುರು ಮಾಡಿದರು ಎಂದು ಟೀಕಿಸಿದರು.

ಜನರ ಉನ್ಮಾದಕ್ಕೆ ಬೆಂಕಿ ಹಾಕುವುದು, ತುಪ್ಪ ಸುರಿಯುವುದು ತಪ್ಪಲ್ಲವೇ?. ಅದೇ ರೀತಿಯಲ್ಲಿ ಆರ್‍ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಹಾಗೂ ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಲಾಭಕ್ಕಾಗಿ ಯತ್ನ ನಡೆಸಿತು ಎಂದು ದೂರಿದ ಸಿದ್ದರಾಮಯ್ಯ, ಕೋವಿಡ್ ಸೋಂಕಿನ ಉಚ್ಛಾಯ ಸ್ಥಿತಿಯಲ್ಲಿದ್ದರೂ ಗುಜರಾತ್‍ನಲ್ಲಿ ನಡೆದ ಕ್ರಿಕೆಟ್ ವಿಜಯೋತ್ಸವದಲ್ಲಿ ಕೇಂದ್ರ ಸಚಿವ ಅಮಿತ್ ಶಾ ತಮ್ಮ ಪತ್ನಿ ಹಾಗೂ ಆಗಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಭಾಗಿಯಾಗಿದ್ದರು ಎಂದು ಉಲ್ಲೇಖಿಸಿದರು.

ಕೋವಿಡ್‍ನಿಂದ ಸಾವಿರಾರು ಜನರು ಸತ್ತರು. ಬಿಜೆಪಿ ಅಧಿಕಾರದಲ್ಲಿದ್ದರೂ ತನಿಖೆ ಮಾಡಲಿಲ್ಲ, ರಾಜೀನಾಮೆ ಕೊಡಲಿಲ್ಲ. ಕನಿಷ್ಟ ಪಕ್ಷ ತಪ್ಪಾಯಿತೆಂದು ಹೇಳಲಿಲ್ಲ. ನಾನು ಕ್ರಿಕೆಟ್ ಪಟುವಲ್ಲ. ಕ್ರಿಕೆಟ್ ಫಾಲೋವರ್ ಹೊರತು ಅಭಿಮಾನಿಯೇನೂ ಅಲ್ಲ. ನಾನು ಕಬಡ್ಡಿ ಆಟಗಾರ. ಯಾವತ್ತು ಕ್ರಿಕೆಟ್ ಆಡಿಲ್ಲ ಎಂದು ವಿವರಣೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News