ನಟ ವಿಷ್ಣುವರ್ಧನ್, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ
ವಿಷ್ಣುವರ್ಧನ್/ಬಿ.ಸರೋಜಾದೇವಿ
ಬೆಂಗಳೂರು, ಸೆ.11: ಕನ್ನಡ ಚಿತ್ರರಂಗದ ಹಿರಿಯ ನಟ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹಾಗೂ ಬಹುಭಾಷಾ ನಟಿ ಡಾ.ಬಿ.ಸರೋಜಾ ದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಟ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹಾಗೂ ಇತ್ತೀಚಿಗೆ ಆಗಲಿದ ಡಾ.ಬಿ.ಸರೋಜಾ ದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲು ಸಂಪುಟ ತೀರ್ಮಾನ ಕೈಗೊಂಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ‘ರಾಜ್ಯಕ್ಕೆ ಹಾಗೂ ಕನ್ನಡ ಚಿತ್ರರಂಗಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಪರಿಗಣಿಸಿ ನಟರಾದ ಡಾ.ವಿಷ್ಣುವರ್ಧನ್ ಹಾಗೂ ಡಾ.ಬಿ.ಸರೋಜಾ ದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂದು ಪ್ರಕಟಿಸಿದರು.
‘ಕರ್ನಾಟಕ ರತ್ನ’ ಪ್ರಶಸ್ತಿ ಪುರಸ್ಕೃತರು:
ರಾಷ್ಟ್ರಕವಿ ಕುವೆಂಪು (ಸಾಹಿತ್ಯ)-1992
ಡಾ.ರಾಜ್‍ಕುಮಾರ್ (ಚಲನಚಿತ್ರ)-1992
ಎಸ್. ನಿಜಲಿಂಗಪ್ಪ (ರಾಜಕೀಯ) 1999
ಪ್ರೊ.ಸಿ.ಎನ್.ಆರ್.ರಾವ್ (ವಿಜ್ಞಾನ)-2000
ಪಂ.ಭೀಮಸೇನ್ ಜೋಶಿ (ಸಂಗೀತ)-2004
ಶ್ರೀ ಶಿವಕುಮಾರ್ ಸ್ವಾಮೀಜಿ (ಸಮಾಜಸೇವೆ)-2006
ಡಾ.ದೇ.ಜವರೇಗೌಡ (ಸಾಹಿತ್ಯ)-2008
ಡಾ.ವೀರೇಂದ್ರ ಹೆಗ್ಗಡೆ (ಗ್ರಾಮೀಣ ಅಭಿವೃದ್ಧಿ)-2009
ಪುನೀತ್ ರಾಜ್‍ಕುಮಾರ್ (ಚಲನಚಿತ್ರ)-2021