×
Ad

‘ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ’ | ಜನಪ್ರತಿನಿಧಿಗಳ ಸಭೆ ಕರೆಯುವಂತೆ ಸಿಎಂಗೆ ವಿ.ಸೋಮಣ್ಣ ಪತ್ರ

Update: 2025-06-03 19:45 IST

ವಿ.ಸೋಮಣ್ಣ

ಬೆಂಗಳೂರು : ವಿವಾದಿತ ಹೇಮಾವತಿ ಎಕ್ಸ್‌ ಪ್ರೆಸ್ ಕೆನಾಲ್ ಫೀಡರ್ ಯೋಜನೆಯ ನಿಜವಾದ ತಾಂತ್ರಿಕ ಅಂಶಗಳ ಮೇಲೆ ಚರ್ಚಿಸಲು ಹಾಗೂ ರೈತರ, ಮಠಾಧೀಶರ ಹಾಗೂ ಜನಸಾಮಾನ್ಯರ ಮೇಲಿನ ದೌರ್ಜನ್ಯ ನಿವಾರಣೆಗೊಳಿಸಲು ಈ ಯೋಜನಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಜನಪ್ರತಿನಿಧಿಗಳ ಸಭೆಯನ್ನು ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರ ಉಪಸ್ಥಿತಿಯಲ್ಲಿ ತಕ್ಷಣ ಏರ್ಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೇಂದ್ರ ಸಚಿವ ವಿ.ಸೋಮಣ್ಣ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?: ರಾಜ್ಯ ಸರಕಾರದ ವಿವಾದಿತ ಹೇಮಾವತಿ ಎಕ್ಸ್‌ ಪ್ರೆಸ್ ಲಿಂಗ್ ಕೆನಾಲ್ ಫೀಡರ್ ಯೋಜನೆಯಿಂದ ತುಮಕೂರು ಭಾಗದ ರೈತರಿಗಾಗುವ ಅನ್ಯಾಯದ ಬಗ್ಗೆ ಈ ಯೋಜನೆಯ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವ ಬಗ್ಗೆ ತಮ್ಮಲ್ಲಿ ನಾನು ಸಾಕಷ್ಟು ಬಾರಿ ವಿನಂತಿ ಮಾಡಿದರೂ ತಾವು ಈ ಬಗ್ಗೆ ಗಮನ ಹರಿಸದಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ ಎಂದು ಸೋಮಣ್ಣ ತಿಳಿಸಿದ್ದಾರೆ.

ತುಮಕೂರಿನಲ್ಲಿ ಪ್ರಸ್ತುತ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ನ್ಯಾಯಯುತವಾಗಿ ತಮ್ಮ ಪಾಲಿನ ನೀರನ್ನು ಉಳಿಸಿಕೊಳ್ಳಲು ಸರಕಾರದ ಮುಂದೆ ಬೇಡಿಕೆ ಇಟ್ಟಂತಹ ರೈತರನ್ನು, ಅಮಾಯಕರನ್ನು, ಮಠಾಧೀಶರನ್ನು, ಜನಸಾಮಾನ್ಯರನ್ನು ಹತ್ತಿಕ್ಕುವ ಕಾರ್ಯವನ್ನು ರಾಜ್ಯ ಸರಕಾರ ನಡೆಸುತ್ತಿರುವುದು ಸಹ ವಿಷಾದನೀಯ ಸಂಗತಿಯಾಗಿದೆ. ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಈ ಬೆಳವಣಿಗೆಯ ಬಗ್ಗೆ ದೂರವಾಣಿ ಮುಖಾಂತರ ಚರ್ಚಿಸಿದ್ದು, ಅತ್ಯಂತ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಭಾಗದ ಜನರ ಹಿತದೃಷ್ಟಿಯಿಂದ ಹಾಗೂ ರೈತರ ಜೀವನಾಡಿ ನೀರಿಲ್ಲದೇ ಬದುಕು ಇಲ್ಲ ಎಂಬುದರ ಸಾಧಕ ಬಾಧಕಗಳ ಬಗ್ಗೆ, ರೈತರ, ಮಠಾಧೀಶರ ಹಾಗೂ ಜನಸಾಮಾನ್ಯರ ಮೇಲಿನ ದೌರ್ಜನ್ಯ ನಿವಾರಣೆಗೊಳಿಸಲು ಮತ್ತು ವಿವಾದಿತ ಯೋಜನೆಯ ನಿಜವಾದ ಅಂಶಗಳಗಳ ಚರ್ಚಿಸಲು ಈ ಯೋಜನಾ ವ್ಯಾಪ್ತಿಯಲ್ಲಿ ಬರುವ ಸಂಬಂಧಪಟ್ಟ ಎಲ್ಲ ಜನಪ್ರತಿನಿಧಿಗಳ ಸಭೆಯನ್ನು ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರ ಉಪಸ್ಥಿತಿಯಲ್ಲಿ ತಕ್ಷಣ ಏರ್ಪಡಿಸುವಂತೆ(ಜೂ.9 ಹಾಗೂ 10 ಹೊರತುಪಡಿಸಿ) ಅವರು ಕೋರಿದ್ದಾರೆ.

ಈ ಸಭೆಗೆ ತಾಂತ್ರಿಕ ತಜ್ಞರನ್ನು ಮತ್ತು ಈ ಹಿಂದೆ ಯೋಜನೆಯ ಕಾರ್ಯಸಾಧ್ಯತೆ ಇಲ್ಲವೆಂದು, ಈಗ ಯೋಜನೆಯ ಕಾರ್ಯಸಾಧ್ಯತೆಯ ಬಗ್ಗೆ ಒಪ್ಪಿಗೆ ನೀಡಿರುವ ಅಧಿಕಾರಿಗಳನ್ನು ಹಾಜರಿರುವಂತೆ ಸೂಚಿಸಬೇಕು. ಈ ಹಿನ್ನೆಲೆಯಲ್ಲಿ ತುಮಕೂರು ಹಾಗೂ ಕುಣಿಗಲ್ ಭಾಗದ ಜನರ ನೆಮ್ಮದಿಯನ್ನು ಪುನಃ ಪ್ರತಿಷ್ಠಾಪಿಸಲು ಮತ್ತು ಈ ಸಂಬಂಧ ದಾಖಲಾದ ಪೊಲೀಸ್ ಕೇಸ್ ಹಿಂಪಡೆಯುವ ಬಗ್ಗೆ ತಕ್ಷಣ ರಾಜ್ಯ ಸರಕಾರ ಕ್ರಮ ಜರುಗಿಸಬೇಕಾಗಿರುವುದರಿಂದ ಈ ಸಭೆಯನ್ನು ಅತ್ಯಂತ ಶೀಘ್ರ ಆಯೋಜಿಸಬೇಕು ಎಂದು ಸೋಮಣ್ಣ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News