ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ ಉಗ್ರರು ಎಲ್ಲಿದ್ದಾರೆ?: ಪ್ರಿಯಾಂಕ್ ಖರ್ಗೆ ಪ್ರಶ್ನೆ
ಪ್ರಿಯಾಂಕ್ ಖರ್ಗೆ
ಕಲಬುರಗಿ : "ಈ ಕದನ ವಿರಾಮವನ್ನು ಮೋದಿ ಘೋಷಿಸಿದ್ದಾರೆಯೋ? ಅಮೆರಿಕದ ಒತ್ತಡವೋ? ಅಥವಾ ಪಾಕಿಸ್ತಾನ ಘೋಷಿಸಿದೆಯೋ?” ಎಂಬುದರ ಬಗ್ಗೆ ಪ್ರಧಾನಿ ಮೋದಿ ಜನರಿಗೆ ಸ್ಪಷ್ಟನೆ ನೀಡಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ ಉಗ್ರರು ಎಲ್ಲಿದ್ದಾರೆ? ದಾಳಿ ನಡೆಸಿದ ಉಗ್ರರು ದೇಶದೊಳಗೆ ಓಡಿದ್ದರಾ? ಅಥವಾ ಹೊರಗಡೆ ಹೋಗಿದ್ದಾರಾ? ಅವರ ಬಗ್ಗೆ ಮೋದಿ ಏಕೆ ವಿವರ ಕೊಡುತ್ತಿಲ್ಲ?ಎಂದು ವಾಗ್ದಾಳಿ ನಡೆಸಿದ್ದಾರೆ.
ಮೋದಿ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಯುದ್ಧ ಮಾಡುತ್ತಿದ್ದಾರೆ, ಭಾವನಾತ್ಮಕ ಭಾಷಣಗಳನ್ನು ಹೊರತುಪಡಿಸಿ ಯಾವುದೇ ಗಂಭೀರ ಚರ್ಚೆ ನಡೆಸಿಲ್ಲ, 56 ಇಂಚ್ ಎದೆಯುಳ್ಳ ಪ್ರಧಾನಿ ಕೇವಲ ಕೆಂಪು ಕೋಟೆಯ ಮೇಲೆ ಮಾತನಾಡಲು ಮಾತ್ರ ಸೀಮಿತವಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಸರ್ವಪಕ್ಷ ಸಭೆ ಇಲ್ಲ, ಸಂಸತ್ ಅಧಿವೇಶನವೂ ಇಲ್ಲ :
ಪ್ರಧಾನಿ ಮೋದಿ ಅವರು ಸರ್ವಪಕ್ಷ ಸಭೆ ಅಥವಾ ಸಂಸತ್ ಅಧಿವೇಶನವನ್ನು ಕರೆದು ಚರ್ಚೆ ನಡೆಸಬೇಕಾದ ಅಗತ್ಯವಿದೆ. ನಾವು ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ನೀಡಿದ್ದರೂ, ಮೋದಿ ಅವರು ಯಾವುದೇ ಪಕ್ಷಗಳ ಜೊತೆ ಚರ್ಚೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿದೇಶಿ ವ್ಯಾಪಾರ ನಿಲ್ಲಿಸುವ ಬೆದರಿಕೆ ನೀಡಿದ ಹಿನ್ನೆಲೆಯಲ್ಲಿ ಮೋದಿ ಈ ನಿರ್ಧಾರ ತೆಗೆದುಕೊಂಡಿರುವುದೇ? ಎಂಬ ಗಂಭೀರ ಪ್ರಶ್ನೆ ಎದುರಾಗಿದೆ. ಇತ್ತ ಪಾಕಿಸ್ತಾನ ತಮ್ಮ ಸಂಸತ್ತಿನಲ್ಲಿ ಗೆಲುವಿನ ಘೋಷಣೆ ಮಾಡುತ್ತಿದೆ, ಪಾಕಿಸ್ತಾನ ಪ್ರಧಾನಿ ತಮ್ಮ ಸಂಸತ್ತಿನಲ್ಲಿ ‘ನಾವು ಯುದ್ಧ ಗೆದ್ದೆವು’ ಎಂದು ಘೋಷಿಸುತ್ತಿದ್ದಾರೆ. ಆದರೆ, ನಮ್ಮ ಪ್ರಧಾನಿ ಮಾತ್ರ ಕೆಂಪುಕೋಟೆಯ ಭಾಷಣದಲ್ಲಿ ಸೀಮಿತವಾಗಿದ್ದು, ಈವರೆಗೆ ಯಾವುದಕ್ಕೂ ಸ್ಪಷ್ಟನೆ ನೀಡಿಲ್ಲ ಎಂದರು.