ಕನ್ನಡಿಗರಿಗೆ ಭರವಸೆ ನೀಡಿ ಈ ರೀತಿ ಪದೇ ಪದೇ ಏಕೆ ವಂಚಿಸುತ್ತಿದ್ದೀರಿ?; ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು, ಅ. 30: ‘ಬೆಂಗಳೂರು ನಗರದ ಜನರಿಗೆ ಸುಗಮ ಸಂಚಾರ ಸೌಲಭ್ಯ ಕಲ್ಪಿಸುವ ಸಬ್ ಅರ್ಬನ್ ರೈಲು ಯೋಜನೆಯು ಕೇಂದ್ರ ಸರ್ಕಾರದ ಅನುದಾನವಿಲ್ಲದೆ ಇನ್ನೂ ಕನ್ನಡಿಗರ ಕನಸಾಗಿಯೇ ಉಳಿದಿದೆ. ಪ್ರಧಾನಿ ಮೋದಿ ಅವರೇ, ಯಾಕೆ ಕನ್ನಡಿಗರಿಗೆ ಭರವಸೆ ನೀಡಿ ಈ ರೀತಿ ಪದೇ ಪದೇ ವಂಚಿಸುತ್ತಿದ್ದೀರಿ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ್(ಟ್ವಿಟ್ಟರ್)ನಲ್ಲಿ ಸರಣಿ ಪೋಸ್ಟ್ ಹಾಕಿರುವ ಸಿದ್ದರಾಮಯ್ಯ, ‘ಹುಬ್ಬಳ್ಳಿ- ಧಾರವಾಡದಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಆರೋಗ್ಯ ಸಚಿವರು ಸಮ್ಮತಿಸಿದ್ದಾರೆಂದು 2022ರಲ್ಲಿ ರಾಜ್ಯದ ಬಿಜೆಪಿ ಸರಕಾರ ಕನ್ನಡಿಗರ ಕಿವಿಗೆ ಹೂವಿಟ್ಟಿತ್ತು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಭಾರತಿ ಪ್ರವೀಣ್ ಅವರು 2023ರ ಆಗಸ್ಟ್ ನಲ್ಲಿ ರಾಜ್ಯಸಭೆಗೆ ನೀಡಿರುವ ಉತ್ತರದಲ್ಲಿ ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿಲ್ಲ ಎಂದಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಪ್ರಧಾನಿ ಮೋದಿ ಅವರೇ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ಎರಡೆರಡು ಬಾರಿ ನಿಮ್ಮ ಸರಕಾರದ ಸಚಿವರಿಗೆ ಪತ್ರ ಬರೆದಿದ್ದೆ, ಈ ವರೆಗೆ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಬೆಂಗಳೂರಿಗೆ ಮಂಜೂರಾದ ಏಮ್ಸ್ ಸಂಸ್ಥೆ ಕೇಂದ್ರ ಸರಕಾರದ ಅನುದಾನ ಕಾಣದೆ ಘೋಷಣೆಗಷ್ಟೇ ಸೀಮಿತವಾಗಿದೆ. ಕರ್ನಾಟಕಕ್ಕೆ ಮಾತ್ರ ಯಾಕೆ ಈ ಅನ್ಯಾಯ?’ ಎಂದು ಕೇಳಿದ್ದಾರೆ.