×
Ad

ಬೆಂಗಳೂರಿನಲ್ಲಿ ಜೀವ ವೈವಿಧ್ಯತೆ ಉದ್ಯಾನವನ ನಿರ್ಮಾಣಕ್ಕೆ ಮೋದಿ ಸರಕಾರದ ವಿರೋಧ ಏಕೆ?: ಸುರ್ಜೆವಾಲಾ ಪ್ರಶ್ನೆ

Update: 2025-07-16 19:23 IST

 ರಣದೀಪ್ ಸಿಂಗ್ ಸುರ್ಜೆವಾಲಾ

ಬೆಂಗಳೂರು: ಬೆಂಗಳೂರಿನ ಹೃದಯ ಭಾಗದಲ್ಲಿ ಜೀವ ವೈವಿಧ್ಯತೆ ಉದ್ಯಾನವನ ನಿರ್ಮಾಣಕ್ಕೆ ಮೋದಿ ಸರಕಾರ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರೋಧ ಮಾಡುತ್ತಿರುವುದು ಹಾಗೂ ಅಡ್ಡಿಯಾಗುತ್ತಿರುವುದು ಏಕೆ? ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.

ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಹವಾನಿಯಂತ್ರಿತ ನಗರ, ಉದ್ಯಾನನಗರ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರು ‘ಕಾಂಕ್ರೀಟ್ ಶಾಖದ ಸುಳಿಗೆ’ ಸಿಲುಕುತ್ತಿದೆ. ಇದರ ನಡುವೆಯೇ ನಾನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ನಡೆಸಿದ ಸಭೆಯಲ್ಲಿ ನರೇಂದ್ರ ಮೋದಿ ಸರಕಾರ ಹಾಗೂ ಬಿಜೆಪಿ-ಜೆಡಿಎಸ್ ಬೆಂಗಳೂರಿನ ಪರಿಸರ ಹಾಗೂ ಜೀವ ಪರಿಸರವನ್ನು ಹೇಗೆ ನಾಶಪಡಿಸುತ್ತಿದೆ ಎಂಬ ಬಗ್ಗೆ ಆಘಾತಕಾರಿ ವಿಷಯಗಳು ಹೊರಬಂದಿವೆ ಎಂದು ತಿಳಿಸಿದ್ದಾರೆ.

1960ರ ದಶಕದಲ್ಲಿ ಕರ್ನಾಟಕ ಸರಕಾರವು ಬೆಂಗಳೂರಿನ ಹೃದಯಭಾಗದಲ್ಲಿರುವ ಗೋರಗುಂಟೆ ಪಾಳ್ಯದ ಬಳಿ ಕಾರ್ಖಾನೆಗಾಗಿ ಎಚ್.ಎಂ.ಟಿ ಸಂಸ್ಥೆಗೆ 443 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಕಾರ್ಖಾನೆ ಕಳೆದ 15 ವರ್ಷಗಳಿಂದಲೂ ಸ್ಥಗಿತಗೊಂಡಿದೆ ಎಂದು ಸುರ್ಜೆವಾಲಾ ಹೇಳಿದ್ದಾರೆ.

ಈ ಜಮೀನಿನಲ್ಲಿ ಅವರು 160 ಎಕರೆಯನ್ನು ಈಗಾಗಲೇ ಮಾರಾಟ ಮಾಡಿದ್ದಾರೆ. ಉಳಿದ 280 ಎಕರೆ ಜಾಗದಲ್ಲಿ ರಾಜ್ಯ ಸರಕಾರ ಹಾಗೂ ಅರಣ್ಯ ಇಲಾಖೆಯು ಕಬ್ಬನ್ ಪಾರ್ಕ್ ನಂತೆ ‘ಜೀವ ವೈವಿಧ್ಯತೆ ಉದ್ಯಾನವನ' ನಿರ್ಮಿಸಲು ಉದ್ದೇಶಿಸಿದೆ. ಇದು ಬೆಂಗಳೂರು ನಾಗರಿಕರ ಉಸಿರಾಟದ ಆರೋಗ್ಯ ಕಾಪಾಡುವ ಎರಡನೇ ಶ್ವಾಸಕೋಶ ದಂತೆ ನೆರವಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಆದರೆ ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿಯ ಮೋದಿ ಸರಕಾರ ಮತ್ತು ಎಚ್.ಡಿ ಕುಮಾರಸ್ವಾಮಿ ಅವರು 280 ಎಕರೆ ಭೂಮಿಯನ್ನು ‘ರಿಯಲ್ ಎಸ್ಟೇಟ್ ಅಭಿವೃದ್ಧಿಗಾಗಿ’ ಮಾರಾಟ ಮಾಡಲು ಮುಂದಾಗಿವೆ. ಈ ಜಮೀನಿಗಾಗಿ ಕರ್ನಾಟಕ ಸರಕಾರ ಮತ್ತು ಕೇಂದ್ರದ ಮೋದಿ ಸರಕಾರ ಸುಪ್ರೀಂ ಕೋರ್ಟ್‍ನಲ್ಲಿ ಹೋರಾಟ ಮಾಡುತ್ತಿದ್ದು, ಪ್ರಕರಣ ಜು.27ಕ್ಕೆ ವಿಚಾರಣೆಗೆ ಬರಲಿದೆ ಎಂದು ಸುರ್ಜೆವಾಲಾ ಹೇಳಿದ್ದಾರೆ.

ರಾಜ್ಯದ ಕಾಂಗ್ರೆಸ್ ಸರಕಾರವು ಭೂಮಿಯಲ್ಲಿ ಕಬ್ಬನ್ ಪಾರ್ಕ್‍ನಂತಹ ಜೈವಿಕ ವೈವಿಧ್ಯತೆಯ ಉದ್ಯಾನವನ ನಿರ್ಮಿಸಲು ಬಯಸಿದರೆ, ಬಿಜೆಪಿ-ಜನತಾದಳ ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಧಾರೆ ಎರೆಯಲು ಸಿದ್ಧವಾಗಿವೆ. ಈ ಬಗ್ಗೆ ನಮ್ಮ ಸರಳ ಪ್ರಶ್ನೆಗಳೇನೆಂದರೆ? ಬೆಂಗಳೂರಿನ ಹೃದಯ ಭಾಗದಲ್ಲಿ ಜೀವ ವೈವಿಧ್ಯತೆ ಉದ್ಯಾನವನ ನಿರ್ಮಾಣಕ್ಕೆ ಮೋದಿ ಸರಕಾರ ಮತ್ತು ಕುಮಾರಸ್ವಾಮಿ ವಿರೋಧ ಮಾಡುತ್ತಿರುವುದು ಹಾಗೂ ಅಡ್ಡಿಯಾಗುತ್ತಿರುವುದು ಏಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ-ಜನತಾದಳ ಪಕ್ಷಗಳಿಗೆ ಬೆಂಗಳೂರಿನ ಜನರಿಗೆ ಹಸಿರು ಹೊದಿಕೆ ಮತ್ತು ಪರಿಶುದ್ಧ ಗಾಳಿ ನೀಡುವುದಕ್ಕಿಂತ ರಿಯಲ್ ಎಸ್ಟೇಟ್ ಮೂಲಕ ಹಣ ಗಳಿಸುವುದೇ ಮುಖ್ಯವಾಯಿತೇ?, 1960ರ ದಶಕದಲ್ಲಿ ಕಾರ್ಖಾನೆಗೆ ಭೂಮಿಯನ್ನು ನೀಡಲಾಗಿತ್ತು. ಹಲವು ವರ್ಷಗಳ ಹಿಂದೆಯೇ ಎಚ್.ಎಂ.ಟಿ ಕೈಗಾರಿಕೆ ಸ್ಥಗಿತಗೊಂಡಿದೆ. ಹೀಗಿರುವಾಗ ಈ ಭೂಮಿಯನ್ನು ಜೀವ ವೈವಿಧ್ಯತೆ ಉದ್ಯಾನವನಕ್ಕಾಗಿ ಕರ್ನಾಟಕದ ಜನರಿಗೆ ಏಕೆ ಹಿಂತಿರುಗಿಸಬಾರದು? ಎಂದು ಅವರು ಕೇಳಿದ್ದಾರೆ.

ಇದು ಮೋದಿ ಸರಕಾರದ ಬೂಟಾಟಿಕೆಯನ್ನು ಬಹಿರಂಗಪಡಿಸುವುದಿಲ್ಲದೇ ಬಿಜೆಪಿ-ಜನತಾದಳದ ದುಷ್ಟ ಸಂಬಂಧವನ್ನು ಜಗಜ್ಜಾಹಿರು ಮಾಡುತ್ತಿಲ್ಲವೇ? ಎಂದು ಸುರ್ಜೆವಾಲಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News