ಬಿಜೆಪಿ ಸತ್ಯಶೋಧನಾ ಸಮಿತಿ ವರದಿಯಲ್ಲಿ ಸತ್ಯ ಇದ್ದರೆ ಗಮನಿಸುತ್ತೇವೆ: ಡಾ.ಜಿ. ಪರಮೇಶ್ವರ್
ಬೆಂಗಳೂರು: ನಾಗಮಂಗಲದ ಗುಂಪು ಘರ್ಷಣೆ ಪ್ರಕರಣ ಸಂಬಂಧ ಬಿಜೆಪಿಯ ಸತ್ಯಶೋಧನಾ ಸಮಿತಿ ವರದಿಯಲ್ಲಿ ಸತ್ಯ ಇದ್ದರೆ ಗಮನಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶನಿವಾರ ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಬಿಜೆಪಿ ಸತ್ಯಶೋಧನಾ ಸಮಿತಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಸತ್ಯಶೋಧನೆ ಮಾಡಿ ತಿಳಿಸಲಿ. ನಮಗೂ ಗೊತ್ತಾಗುತ್ತದೆ. ಸತ್ಯಶೋಧನೆಯಲ್ಲಿ ಸತ್ಯ ಇದ್ದರೆ ಗಮನಿಸುತ್ತೇವೆ. ನಮ್ಮ ಪೊಲೀಸರಿಗೂ ಸುಲಭವಾಗುತ್ತದೆ ಎಂದರು.
ನಾಗಮಂಗಲದ ಗದ್ದಲ ಸದ್ಯಕ್ಕೆ ಶಾಂತಿಯುತವಾಗಿದೆ. ಶಾಂತಿ ಸಭೆ ನಡೆಸಲು ಸೂಚನೆ ಕೊಟ್ಟಿದ್ದೇನೆ. ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ. ಹೆಚ್ಚಿನ ಪೊಲೀಸ್ ಭದ್ರತೆ ಹಾಕಲಾಗಿದೆ ಎಂದು ಜಿ.ಪರಮೇಶ್ವರ್ ಹೇಳಿದರು.
ಎಫ್‍ಐಆರ್ ಮೇಲೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ ಕುರಿತು ಪ್ರತಿಕ್ರಿಯಿಸಿ ಡಾ.ಜಿ.ಪರಮೇಶ್ವರ್, ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ನಾವು ಬೇಕಾದ ರೀತಿ ಮಾಡಲು ಆಗಲ್ಲ. ಕಾನೂನು ಪ್ರಕಾರ ಏನಾಗಬೇಕೋ, ಆಗುತ್ತೆ. ಅದರಲ್ಲಿ ಅನುಮಾನಪಡುವುದೇನಿದೆ ಎಂದು ಪ್ರಶ್ನಿಸಿದರು.
ಯಾದಗಿರಿಯಲ್ಲಿ ಅತ್ಯಾಚಾರ ದೂರು ನೀಡಿದ್ದಕ್ಕೆ ಬಹಿಷ್ಕಾರ ವಿಚಾರವಾಗಿ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಈ ಬಗ್ಗೆ ಈಗಾಗಲೇ ವರದಿ ಕೇಳಿದ್ದೇವೆ. ಅತ್ಯಾಚಾರ ಎಂದು ದೂರು ಕೊಟ್ಟಿದ್ದಾರೆ. ದೂರು ಕೊಟ್ಟರು ಅಂತ ಊರಿನವರು ಬಹಿಷ್ಕಾರ ಹಾಕಿದ್ದಾರೆ. ಐನೂರು ಜನ ಇರುವ ಗ್ರಾಮ ಅದು. ದಲಿತ ಸಮುದಾಯ ಹೆಚ್ಚು ಇದೆ. ಮಕ್ಕಳಿಗೆ ಪುಸ್ತಕ ತೆಗೆದುಕೊಳ್ಳಲು ಬಿಟ್ಟಿಲ್ಲ. ಊರಿನಲ್ಲಿ ನೀರು ತೆಗೆದುಕೊಳ್ಳಲು ಬಿಟ್ಟಿಲ್ಲ. ಅಧಿಕಾರಿಗಳಿಗೂ ಸೂಚನೆ ಕೊಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ ಎಂದರು.