×
Ad

ಮುಂದಿನ ಆರ್ಥಿಕ ವರ್ಷದಿಂದ ಉಚಿತ ಸೈಕಲ್ ವಿತರಿಸುವ ಯೋಜನೆ ಆರಂಭಿಸಲಾಗುವುದು: ಸಚಿವ ಮಧು ಬಂಗಾರಪ್ಪ

Update: 2023-12-07 20:32 IST

ಬೆಳಗಾವಿ, (ಸುವರ್ಣ ವಿಧಾನಸೌಧ): ‘ಮುಂಬರಲಿರುವ ಆರ್ಥಿಕ ವರ್ಷದಿಂದ ರಾಜ್ಯದಲ್ಲಿನ ಎಂಟನೆ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸುವ ಯೋಜನೆ ಆರಂಭಿಸಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.

ಗುರುವಾರ ಪ್ರಶ್ನೋತ್ತರದ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಪ್ರದೀಪ್ ಈಶ್ವರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಸರಕಾರ ಸೈಕಲ್ ವಿತರಣೆಯನ್ನು ಸ್ಥಗಿತಗೊಳಿಸಿತ್ತು. ನಮ್ಮ ಸರಕಾರ ಅಧಿಕಾರಕ್ಕೆ ಬಂದಿದ್ದು, ಮತ್ತೆ ಬೈಸಿಕಲ್ ವಿತರಣೆಯನ್ನು ಆರಂಭಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ಇತ್ತೀಚೆಗೆ ನಾನು ರಾಜ್ಯದ ಶಾಲೆಗಳಿಗೆ ಭೇಟಿ ನೀಡಿದ ಹಲವು ಶಾಲೆಗಳಲ್ಲಿ ಈ ರೀತಿಯ ಬೇಡಿಕೆಗಳು ಕೇಳಿಬಂದಿವೆ. ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಯಿಂದ ಅನುಕೂಲವಾಗಲಿದೆ. ಅದರಲ್ಲೂ ಗ್ರಾಮೀಣ ಭಾಗ ಮತ್ತು ಕಡಿಮೆ ಅಂತರದ ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ಮುಂದಿನ ಬಜೆಟ್‍ನಲ್ಲಿ ಚರ್ಚೆ ಮಾಡಿ ಯೋಜನೆಯನ್ನು ಮರು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

‘ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಕಾರ ಬಸ್ ಸೌಲಭ್ಯ ಒದಗಿಸಲಾಗುತ್ತಿದೆ. ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕೇಂದ್ರ ಪ್ರಾಯೋಜಿತ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಲ್ಲಿ ತಮ್ಮ ವ್ಯಾಪ್ತಿಯನ್ನೂ ಮೀರಿದ ಶಾಲೆಗಳಿಗೆ ಪ್ರಯಾಣಿಸಲು ಪ್ರತಿ ತಿಂಗಳಿಗೆ 600 ರೂ.ಸಾರಿಗೆ ಭತ್ಯೆ ನೀಡಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಆರಂಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ‘ಈ ಹಿಂದೆ ಯಡಿಯೂರಪ್ಪ ಈ ಯೋಜನೆಯನ್ನು ಆರಂಭಿಸಿದ್ದರು. ಆದರೆ, ಇದೀಗ ಸ್ಥಗಿತಗೊಂಡಿದೆ. ರಾಜ್ಯ ಸರಕಾರದ ‘ಶಕ್ತಿ ಯೋಜನೆ’ಯಿಂದ ತಾಯಂದಿರು ಬಸ್ಸಿನಲ್ಲಿ ಹೋಗುತ್ತಿದ್ದಾರೆ, ಮಕ್ಕಳು ನಡೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಕೆಲವು ಕಡೆ ಜೆಸಿಬಿಯಲ್ಲಿ ಮಕ್ಕಳು ಪ್ರಯಾಣಿಸುತ್ತಿರುವ ಪ್ರಕರಣಗಳೂ ಕಂಡುಬಂದಿವೆ ಎಂದರು.

ಎರಡು ಜೊತೆ ಕೊಡಿ: ಒಂದರಿಂದ ಹತ್ತನೆ ತರಗತಿ ವ್ಯಾಸಂಗ ಮಾಡುತ್ತಿರುವ ಸರಕಾರಿ ಶಾಲೆಯ ಮಕ್ಕಳಿಗೆ ವಿದ್ಯಾವಿಕಾಸ ಯೋಜನೆಯಡಿ ಶೈಕ್ಷಣಿಕ ವರ್ಷದಲ್ಲಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಇದನ್ನು ದುಪ್ಪಟ್ಟು ಪ್ರಮಾಣಕ್ಕೆ ಹೆಚ್ಚಿಸಬೇಕು ಎಂದು ಸದಸ್ಯ ಪ್ರದೀಪ್ ಈಶ್ವರ್ ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News