‘ಪೊಲೀಸರಿಂದ ನ್ಯಾಯ ಸಿಕ್ಕಿಲ್ಲ, ನನಗೆ ನ್ಯಾಯ ಬೇಕು’: ಶಾಸಕ ಮುನಿರತ್ನ ವಿರುದ್ಧ ಬಿಜೆಪಿಗೆ ಮಹಿಳೆ ದೂರು
ಶಾಸಕ ಮುನಿರತ್ನ
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ವಿಶೇಷ ತನಿಖಾ ತಂಡವು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ ಬೆನ್ನಲ್ಲೇ ಆರೋಪ ಮಾಡಿದ ಮಹಿಳೆಯು ಶಾಸಕ ಮುನಿರತ್ನ ವಿರುದ್ಧ ಬಿಜೆಪಿಗೆ ದೂರು ನೀಡಿರುವುದಾಗಿ ವರದಿಯಾಗಿದೆ.
ಶುಕ್ರವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದ ಮಹಿಳೆಯು, ಶಾಸಕ ಮುನಿರತ್ನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
‘ತನ್ನ ಮೇಲೆ ಮುನಿರತ್ನ ಮತ್ತು ಬೆಂಬಲಿಗರಿಂದ ಲೈಂಗಿಕ ದೌರ್ಜನ್ಯವಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಬಿ ರಿಪೋರ್ಟ್ ಕೊಟ್ಟಿದ್ದಾರೆ. ತಾನು ದೂರು ಕೊಟ್ಟಂತೆ ಪೊಲೀಸರು ತನಿಖೆ ಮಾಡಿಲ್ಲ. ಶಾಸಕ ಮುನಿರತ್ನ ಬೆಂಬಲಿಗರು ತನ್ನ ಮನೆಗೆ ಬಂದು ದಾಂಧಲೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ ಎಂದು ಗೊತ್ತಾಗಿದೆ.
‘ನಾನು ಬಿಜೆಪಿಯಲ್ಲಿ ಮಹಿಳಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಪೊಲೀಸರಿಂದ ನ್ಯಾಯ ಸಿಕ್ಕಿಲ್ಲ, ಅದಕ್ಕಾಗಿ ರಾಜ್ಯಾಧ್ಯಕ್ಷರಿಗೆ ದೂರು ಕೊಡಲು ಬಂದಿದ್ದೇನೆ. ಈ ಸಂಬಂಧ ಈಗಾಗಲೇ ಬಿ.ಎಲ್.ಸಂತೋಷ್ ಅವರಿಗೂ ವಾಟ್ಸಾಪ್‍ನಲ್ಲಿ ದೂರು ಕಳುಹಿಸಿದ್ದೇನೆ. ಈಗ ತನಗೆ ನ್ಯಾಯ ಬೇಕುʼ ಎಂದು ಮಹಿಳೆ ಅಳಲನ್ನು ತೋಡಿಕೊಂಡಿರುವುದಾಗಿ ತಿಳಿದು ಬಂದಿದೆ.