ಆಸೆ ಇಟ್ಟುಕೊಂಡವರೇ ಸಿಎಂ ಬದಲಾವಣೆ ಊಹಾಪೋಹ ಹಬ್ಬಿಸುತ್ತಾರೆ : ಯತೀಂದ್ರ ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ
ಬೆಂಗಳೂರು : ಮುಖ್ಯಮಂತ್ರಿ ಆಸೆ ಇಟ್ಟುಕೊಂಡವರು ಸಿಎಂ ಬದಲಾವಣೆಯ ಊಹಾಪೋಹ ಹಬ್ಬಿಸುತ್ತಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಬಂದಾಗಿನಿಂದಲೂ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗಿನಿಂದಲೂ ಇದನ್ನು ಹೇಳುತ್ತಲೇ ಇದ್ದಾರೆ. ಕೆಲವು ಗುಂಪಿನವರಿಗೆ ಮುಖ್ಯಮಂತ್ರಿ ಆಗಬೇಕು ಅಂತಿರುತ್ತದೆ. ಅದಕ್ಕೆ ಈ ರೀತಿ ಊಹಾಪೋಹಗಳನ್ನು ಹರಡುತ್ತಿದ್ದಾರೆ ಎಂದರು.
ಸರಕಾರ ಬಂದಾಗಿನಿಂದಲೂ ಕೂಡ ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಬೆಂಬಲ ಇದೆ ಎಂದ ಅವರು, ಶಾಸಕರು ಕೂಡ ಬೆಂಬಲ ಕೊಟ್ಟಿದ್ದಾರೆ. ಆ ಗುಂಪು ಯಾವುದು ಎಂದು ನನಗೆ ಗೊತ್ತಿಲ್ಲ. ಸಚಿವ ರಾಜಣ್ಣ ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು ಎಂದು ಹೇಳಿದರು.
ಅಲ್ಲದೆ, ಸರಕಾರ ಸುಸೂತ್ರವಾಗಿ ನಡೆಯುತ್ತಿದೆ. ಹೈಕಮಾಂಡ್ ಕೂಡ ಬದಲಾವಣೆ ಮಾಡುತ್ತೆ ಎಂದು ಹೇಳಿಲ್ಲ. ಆ ರೀತಿಯಾದ ಸೂಚನೆಯನ್ನು ಹೈಕಮಾಂಡ್ ಕೂಡ ಕೊಟ್ಟಿಲ್ಲ. ಹೀಗಾಗಿ ಸಿದ್ದರಾಮಯ್ಯನವರು ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.