ಧರ್ಮಸ್ಥಳದಲ್ಲಿ ವಿಜಯೇಂದ್ರಗೆ ಏನು ಕೆಲಸ: ಶಾಸಕ ಯತ್ನಾಳ್ ಪ್ರಶ್ನೆ
"ಮಂಜುನಾಥ ಸ್ವಾಮಿ ಬಳಿ ಇನ್ನು ಮುಂದೆ ನಾವು ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕಿತ್ತು"
ಬೆಂಗಳೂರು: ‘ಧರ್ಮಸ್ಥಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಏನು ಕೆಲಸ. ಮಂಜುನಾಥ ಸ್ವಾಮಿ ಬಳಿ ಇನ್ನು ಮುಂದೆ ನಾವು ಭ್ರಷ್ಟಾಚಾರ, ವಂಶಾಡಳಿತವನ್ನು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕಿತ್ತು ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಮ್ಮ ತಂದೆ (ಬಿಎಸ್‍ವೈ) ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದಾರೆ, ನನಗೂ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಹೀಗಾಗಿ ನನಗೆ ಆ ಸ್ಥಾನ ಬೇಡ ಮಂಜುನಾಥೇಶ್ವರ ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿಯೆ ಇರುತ್ತೇನೆ ಎಂದು ಬೇಡಿಕೊಳ್ಳಬೇಕಿತ್ತು ಎಂದು ವ್ಯಂಗ್ಯವಾಡಿದರು.
‘ವಚನಾನಂದ ಸ್ವಾಮಿ ತನ್ನ ಜಾತಿಗೆ ಏನೂ ಮಾಡಲಾಗದ ವ್ಯಕ್ತಿ. ಇನ್ನು ಧರ್ಮಸ್ಥಳದ ಬಗ್ಗೆ ಏನು ಮಾತಾಡುವುದು?. ಸುಮ್ಮನೆ ಇದೆಲ್ಲ ನಾಟಕ. ಸ್ವತಃ ಪಂಚಮಸಾಲಿ ಸಮುದಾಯವೇ ದಿವಾಳಿಯಾಗಿ ಹೋಗಿದೆ. ಇದೀಗ ಸನಾತನ ಧರ್ಮ ಎಂದು ಹೊಸ ನಾಟಕ ಆರಂಭಿಸಿದ್ದಾರೆ. ಇದರ ಹಿಂದೆ ವಿಜಯೇಂದ್ರ ಆಂಡ್ ಕಂಪೆನಿ ಇದೆ’ ಎಂದು ಯತ್ನಾಳ್ ದೂರಿದರು.
ಸೌಜನ್ಯ ಪ್ರಕರಣದಲ್ಲಿ ಹೈಕೋರ್ಟ್ ವರೆಗೆ ಆಗಿರುವ ಆದೇಶಗಳು ಎಲ್ಲವೂ ಆದ ಮೇಲೆ ಎನ್‍ಐಎಗಾದರೂ ಕೊಡಲಿ ನಮದೇನು ಅಭ್ಯಂತರವಿಲ್ಲ. ವಿಜಯೇಂದ್ರ ಸುಪ್ರೀಂ ಕೋರ್ಟ್ ಖರ್ಚು ನೋಡಿಕೊಳ್ಳುವ ಅವಶ್ಯಕತೆ ಇಲ್ಲ. ಸೌಜನ್ಯ ಪ್ರಕರಣದಲ್ಲಿ ಯಾರೇ ಆದರೂ ಶಿಕ್ಷೆ ಆಗಲೇಬೇಕು ಎಂದು ಯತ್ನಾಳ್ ಹೇಳಿದರು.