×
Ad

ಎಫ್ಐಆರ್ ರದ್ದು ಕೋರಿ ಯೂಟ್ಯೂಬರ್ ಎಂ.ಡಿ. ಸಮೀರ್ ಸಲ್ಲಿಸಿರುವ ಅರ್ಜಿ; ಧಾರವಾಡ ಪೀಠಕ್ಕೆ ಪ್ರಕರಣ ವರ್ಗಾಯಿಸಿದ ಹೈಕೋರ್ಟ್

Update: 2025-11-11 17:31 IST

ಬೆಂಗಳೂರು: ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ ಚಾನಲ್‌ನಲ್ಲಿ ವಿಡಿಯೋ ಪ್ರಸಾರ ಮಾಡಿದ್ದ ಯೂಟ್ಯೂಬರ್ ಎಂ.ಡಿ. ಸಮೀರ್ ವಿರುದ್ಧ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ಬೆಂಗಳೂರು ಹೈಕೋರ್ಟ್ ಪ್ರಧಾನ ಪೀಠದಿಂದ ಧಾರವಾಡ ಪೀಠಕ್ಕೆ ವರ್ಗಾಯಿಸಲಾಗಿದೆ.

ಬಳ್ಳಾರಿಯ ಕೌಲ್ ಬಜಾರ್ ಪೋಲಿಸ್ ಠಾಣೆಯಲ್ಲಿ 2025ರ ಮಾರ್ಚ್ ತಿಂಗಳಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಯೂಟ್ಯೂಬರ್ ಎಂ.ಡಿ. ಸಮೀರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಝ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು ಹಾಜರಾಗಿ, ಬಳ್ಳಾರಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಅರ್ಜಿಯನ್ನು ಧಾರವಾಡ ಪೀಠಕ್ಕೆ ವರ್ಗಾಯಿಸುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ, ಎಫ್‌ಐಆರ್‌ಗೆ ತಡೆ ನೀಡಿ ಮಧ್ಯಂತರ ರಕ್ಷಣೆ ಒದಗಿಸಿರುವ ಆದೇಶವನ್ನು ಧಾರವಾಡ ಪೀಠದಲ್ಲಿನ ಮುಂದಿನ ವಿಚಾರಣೆವರೆಗೆ ವಿಸ್ತರಿಸಬೇಕು ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಸರ್ಕಾರದ ವಕೀಲರು, ಬೇರೆ ಪೀಠಕ್ಕೆ ಅರ್ಜಿ ವರ್ಗಾವಣೆ ಮಾಡಲಾಗದು. ಅರ್ಜಿದಾರರು ಧಾರವಾಡ ಪೀಠದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಮಧ್ಯಂತರ ಪರಿಹಾರ ಮುಂದುವರಿಸಬಾರದು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ. ಸರ್ಕಾರ ಮಧ್ಯಂತರ ಆದೇಶ ತೆರವಿಗೆ ಅರ್ಜಿ ಸಲ್ಲಿಸಿದೆ. ವ್ಯಾಪ್ತಿಯ ವಿಚಾರ ಇರುವುದರಿಂದ ಈ ಅರ್ಜಿಯನ್ನು ಧಾರವಾಡ ಪೀಠಕ್ಕೆ ವರ್ಗಾಯಿಸಲಾಗುತ್ತಿದೆ. ಹಲವು ಪ್ರಕರಣಗಳನ್ನು ಈ ರೀತಿ ವರ್ಗಾಯಿಸಲಾಗುತ್ತದೆ. ಆದ್ದರಿಂದ, ಅರ್ಜಿದಾರರು ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ತಿಳಿಸಿ, ಸಮೀರ್‌ ಅರ್ಜಿಯನ್ನು ಧಾರವಾಡ ಪೀಠಕ್ಕೆ ವರ್ಗಾಯಿಸಿ, ವಿಚಾರಣೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News