ಯುಜಿಸಿ ನಿಯಮಗಳಿಗೆ ತಡೆ: ಸುಪ್ರೀಂ ಕೋರ್ಟ್‌ನ ಮೇಲ್ಜಾತಿ ಪೂರ್ವಾಗ್ರಹವೇ?
ಮೋದಿ ಸರಕಾರದ ಯುಜಿಸಿ (ವಿಶ್ವವಿದ್ಯಾಲಯ ಅನುದಾನ ಅಯೋಗ )ಯು ಸುಪ್ರೀಂನ ಆದೇಶದ ಮೇರೆಗೆ ಇದೇ ಜನವರಿ 13ರಂದು ಜಾರಿಗೆ ತಂದಿದ್ದ ಉನ್ನತ ಶಿಕ್ಷಣದಲ್ಲಿ ಎಲ್ಲ ಬಗೆಯ ತಾರತಮ್ಯಗಳನ್ನು ತಡೆಗಟ್ಟುವ ಪರಿಷ್ಕೃತ ನಿಯಮಗಳಿಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠವೇ ಜನವರಿ 29ರಂದು ತಡೆಯಾಜ್ಞೆ ನೀಡಿದೆ.
‘ತಾನು ಈಗ ಮಧ್ಯಪ್ರವೇಶಿಸದಿದ್ದರೆ ದೇಶದಲ್ಲಿ ಅಶಾಂತಿ ಉಂಟಾಗುತ್ತದೆಂದೂ’, ಪರಿಷ್ಕೃತವಾದ ನಿಯಮಗಳು ‘ಅಸ್ಪಷ್ಟ’ವಾಗಿದೆಯೆಂದೂ, ‘ದುರ್ಬಳಕೆ’ಗೆ ಅವಕಾಶ ಕೊಡುವ ಸಾಧ್ಯತೆ ಇರುವುದರಿಂದ ತಡೆಯಾಜ್ಞೆ ನೀಡಲಾಗುತ್ತಿದೆಯೆಂದೂ ಮುಖ್ಯ ನ್ಯಾಯಧೀಶರು ಕಾರಣವನ್ನು ನೀಡಿದ್ದಾರೆ.
ಸುಪ್ರೀಂನ ಒಳ-ಹೊರಗು!
ಸುಪ್ರೀಂ ಈ ನಿರ್ಧಾರಕ್ಕೆ ಬರುವ ‘ಒತ್ತಡ’ ನಿರ್ಮಿಸಿದ್ದು ಹೊಸ ನಿಯಮಗಳ ವಿರುದ್ಧ ಉತ್ತರ ಭಾರತದ ಕೆಲ ನಗರಗಳಲ್ಲಿ ಕೇವಲ ಎರಡು ದಿನಗಳ ಮಟ್ಟಿಗೆ ಮೇಲ್ಜಾತಿ ವಿದ್ಯಾರ್ಥಿಗಳು ಬೀದಿಗಿಳಿದದ್ದು, ಉತ್ತರ ಭಾರತದ ಹಲವು ರಾಜ್ಯಗಳ ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ಕೊಟ್ಟಿದ್ದು ಮತ್ತು ಆರೆಸ್ಸೆಸ್‌ನ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೂಡ ಈ ನಿಯಮಗಳ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದು.
ಹಾಗೆ ನೋಡಿದರೆ ಸುಪ್ರೀಂ ಕೋರ್ಟ್ ರೈತ, ಕಾರ್ಮಿಕರ, ದಲಿತ, ಆದಿವಾಸಿ, ಅಲ್ಪಸಂಖ್ಯಾತರ ಆಗ್ರಹಗಳನ್ನು ಬೀದಿ ಹೋರಾಟಗಳನ್ನು ನಿಭಾಯಿಸುವಾಗ ನ್ಯಾಯಾಲಯಗಳು ತಮ್ಮ ಮುಂದಿರುವ ಸಾಕ್ಷಿ-ಪುರಾವೆ, ಕಾನೂನು ಮತ್ತು ಸಂವಿಧಾನಗಳ ಆಧಾರದ ಮೇಲೆ ತೀರ್ಮಾನ ಕೊಡುತ್ತವೆಯೇ ವಿನಾ ಹೊರಗಿನ ಬೆಳವಣಿಗೆಗಳು ತಮ್ಮ ನಿರ್ಧಾರಗಳ ಮೇಲೆ ಪ್ರಭಾವ ಬೀರುವುದಿಲ್ಲವೆಂದು ಪ್ರತಿಪಾದಿಸುತ್ತಿತ್ತು.
ಹಾಗಿದ್ದಲ್ಲಿ ಯುಜಿಸಿಯ ತಾರತಮ್ಯ ವಿರೋಧಿ ನಿಯಮಗಳಿಗೆ ತಡೆಯೊಡ್ಡಬೇಕೆಂಬ ಸಂವಿಧಾನ ವಿರೋಧಿ ಆಗ್ರಹಗಳನ್ನು ಮುಂದಿಟ್ಟುಕೊಂಡು ಮೇಲ್ಜಾತಿ ಶಕ್ತಿಗಳು ಎರಡು ದಿನ ಬೀದಿಗಿಳಿದ ತಕ್ಷಣ ‘ತಾನು ಮಧ್ಯಪ್ರವೇಶ ಮಾಡದಿದ್ದರೆ ದೇಶದಲ್ಲಿ ಅಶಾಂತಿ ಉಂಟಾಗುತ್ತದೆ’ ಎಂದು ಹೊರಗಿನ ಆಗ್ರಹಗಳಿಗೆ ಮಣಿದದ್ದು ಏಕೆ?
ರೈತ-ದಲಿತ-ಕಾರ್ಮಿಕರ ಹೋರಾಟ ‘ಹೊರಗಿನದ್ದು’, ಮೇಲ್ಜಾತಿಗಳ ಭಂಡಾಟ ‘ಒಳಗಿನದ್ದೇ’?
ಅದಕ್ಕಿಂತಲೂ ಗಂಭೀರವಾದ ಸಂಗತಿಯೆಂದರೆ ಎಸ್‌ಐಆರ್‌ನಂತಹ ಸರಕಾರದ ಫ್ಯಾಶಿಸ್ಟ್ ನೀತಿಗಳು ದೇಶಾದ್ಯಂತ ತಳಸಮುದಾಯದ ಜನರಲ್ಲಿ ಭೀತಿ, ಆತಂಕ, ಅಶಾಂತಿ ಹುಟ್ಟುಹಾಕಿದ್ದರೂ, ಹಲವಾರು ತಿಂಗಳುಗಳಿಂದಲೂ ಅದರ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದರೂ, ನೂರಾರು ಜನರು ಆತ್ಮಹತ್ಯೆಗಳು ಮಾಡಿಕೊಳ್ಳುತ್ತಿದ್ದರೂ, ಚುನಾವಣಾ ಆಯೋಗ ನಿರಂತರವಾಗಿ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರೂ ಸುಪ್ರೀಂ ಕೋರ್ಟ್‌ನ ಇದೇ ಪೀಠ ಎಸ್‌ಐಆರ್ ಪ್ರಕ್ರಿಯೆಗೆ ತಾತ್ಕಾಲಿಕ ತಡೆಯನ್ನು ಕೂಡ ನೀಡಲು ನಿರಾಕರಿಸುತ್ತಲೇ ಇದೆ.
ಸಹಜವಾಗಿಯೇ ಸುಪ್ರೀಂನ ಈ ನಡವಳಿಕೆಗಳು ಈ ದೇಶದಲ್ಲಿ ಮೇಲ್ಜಾತಿ, ಮೇಲ್ವರ್ಗಗಳಿಗೊಂದು ನ್ಯಾಯಸಂಹಿತೆ ಮತ್ತು ತಳಸಮುದಾಯಗಳಿಗೊಂದು ನ್ಯಾಯ ಸಂಹಿತೆ ಇದೆಯೇ ಎಂಬ ಪ್ರಶ್ನೆಯನ್ನು ಹುಟ್ಟಿಸುತ್ತದೆ.
ಇಷ್ಟಾಗಿ ಯುಜಿಸಿಯ ಪರಿಷ್ಕೃತ ತಾರತಮ್ಯ ವಿರೋಧಿ ನಿಯಮಗಳಲ್ಲಿ ಅಷ್ಟು ತುರ್ತಾಗಿ ತಡೆಯಾಜ್ಞೆ ನೀಡುವಂತಹ ಅಪಾಯವೇನಿತ್ತು? ಸುಪ್ರೀಂ ಹೇಳುವಂತೆ ಈ ಹೊಸ ನಿಯಮಗಳು ಅಸ್ಪಷ್ಟವಾಗಿವೆಯೇ? ಅಥವಾ ದುರ್ಬಳಕೆಗೆ ಅವಕಾಶ ಮಾಡಿಕೊಡುವಂತಿದೆಯೇ?
ಈ ವಿಷಯವನ್ನು ಅರ್ಥ ಮಾಡಿಕೊಳ್ಳಲು ಈ ನಿಯಮಗಳನ್ನು ಮೋದಿಯ ಯುಜಿಸಿ ಅರೆ ಮನಸ್ಸಿನಿಂದಲಾದರೂ ಜಾರಿ ಮಾಡಲೇಬೇಕಾಗಿ ಬಂದ ಘಟನಾವಳಿಗಳನ್ನು ಒಮ್ಮೆ ಅವಲೋಕಿಸಬೇಕು..
ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಹೀನಾಯ ತಾರತಮ್ಯಗಳು
ಭಾರತದ ವಿಶ್ವವಿದ್ಯಾನಿಲಯಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳು ಸಮಾಜದಲ್ಲಿರುವ ಜಾತಿ, ಲಿಂಗ, ಧರ್ಮ, ಪ್ರದೇಶ, ಭಾಷೆ ಆಧಾರಿತ ತಾರತಮ್ಯಗಳನ್ನು ಗುರುತಿಸುವ ಮತ್ತು ಅಂತಹ ತಾರತಮ್ಯಗಳನ್ನು ನಿವಾರಿಸುವ ಮೂಲಕ ಸಮಾನ ಸಮಾಜವನ್ನು ನಿರ್ಮಿಸುವ ಆಶಯಗಳುಳ್ಳ ನಾಗರಿಕರನ್ನು ಸೃಷ್ಟಿಸುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಉನ್ನತ ಶಿಕ್ಷಣ ಸಂಸ್ಥೆಗಳು ತಾರತಮ್ಯಗಳನ್ನು ಪುನರುತ್ಪಾದಿಸುವ, ಶಕ್ತಗೊಳಿಸುವ ಕಾರ್ಖಾನೆಗಳಾದವು.
ಸ್ವತಂತ್ರ ಭಾರತದ ಉನ್ನತ ಶಿಕ್ಷಣವು ಈ ದೇಶದ ಜಾತಿ, ಧರ್ಮ ಮತ್ತು ಲಿಂಗಾಧಾರಿತ ತಾರತಮ್ಯಗಳಿಗೆ ಗುರಿಯಾದ ತಳಸಮುದಾಯಗಳ ಬಿಡುಗಡೆಯ ಮಾರ್ಗಗಳಾಗಬಹುದೆಂದು ಅಂಬೇಡ್ಕರ್ ಭಾವಿಸಿದ್ದರು. ಆದರೆ ಅದರ ಬಾಗಿಲುಗಳೇ ಈ ಸಮುದಾಯಗಳಿಗೆ ತೆರೆದುಕೊಳ್ಳದಂತೆ ಜಾತಿವಾದಿ ಶಕ್ತಿಗಳು ನೋಡಿಕೊಂಡವು. ಅವೆಲ್ಲವನ್ನು ದಾಟಿ ಉನ್ನತ ಶಿಕ್ಷಣದೊಳಗೆ ಪ್ರವೇಶಿಸಿದ ತಳಸಮುದಾಯದ ಪ್ರತಿಭೆಗಳನ್ನು ಮೇಲ್ಜಾತಿ ಹಿಡಿತದಲ್ಲೇ ಇರುವ ಉನ್ನತ ಸಂಸ್ಥೆಗಳು ಸಾಂಸ್ಥಿಕವಾಗಿ, ಆಡಳಿತಾತ್ಮಕವಾಗಿ ಮತ್ತು ಸಾಂಸ್ಕೃತಿಕವಾಗಿ ತಾರತಮ್ಯ, ಅವಮಾನ, ಹೀಯಾಳಿಕೆ, ಅವಕಾಶ ನಿರಾಕರಣೆಗಳಿಗೆ ಗುರಿ ಮಾಡುತ್ತಾ ಆ ಪ್ರತಿಭೆಗಳು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಅಥವಾ ಉನ್ನತ ಶಿಕ್ಷಣ ತೊರೆದುಹೋಗುವುದಕ್ಕೆ ಕಾರಣವಾದವು.
ಇವೆಲ್ಲದರ ವಿರುದ್ಧ ಎಚ್ಚೆತ್ತ ತಳಸಮುದಾಯದ ಜನರ ಪ್ರಜ್ಞಾವಂತರ ಚಳವಳಿಗಳು ಈ ಸಮಸ್ಯೆಯನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳಬೇಕೆಂದು 2004-14ರ ನಡುವೆ ಅಧಿಕಾರದಲ್ಲಿದ್ದ ಯುಪಿಎ ಸರಕಾರದ ಮೇಲೆ ಒತ್ತಡ ತಂದರು. ಈ ಎಲ್ಲಾ ಕಾರಣಗಳಿಂದ 2012ರ ಡಿಸೆಂಬರ್‌ನಲ್ಲಿ ಯುಜಿಸಿಯು UGC (Promotion of Equity in Higher Educational Institutions) Regulations, 2012 ನಿಯಮಗಳನ್ನು ಜಾರಿಗೆ ತಂದಿತು. ಇದರ ಆಶಯಗಳು ಉತ್ತಮವಾಗಿದ್ದರೂ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಯಮಗಳು ಅದರಲ್ಲಿ ಇರಲಿಲ್ಲ. ಹೀಗಾಗಿ 2019ರ ಆರ್‌ಟಿಐ ಮಾಹಿತಿ ತಿಳಿಸುವಂತೆ ಆಗ ದೇಶದಲ್ಲಿದ್ದ 1,000ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳಿಗೆ ಮತ್ತು 40,000ಕ್ಕೂ ಹೆಚ್ಚು ಕಾಲೇಜುಗಳಿಗೆ ಇಂಥ ಒಂದು ನಿಯಮವಿದೆಯೆಂಬುದೇ ತಿಳಿದಿರಲಿಲ್ಲ.
ಈ ಕಾರಣಗಳಿಂದಾಗಿಯೇ 2016ರಲ್ಲಿ ಹೈದರಾಬಾದ್ ವಿಶ್ವವಿದ್ಯಾನಿಲಯದ ಅತ್ಯಂತ ಪ್ರತಿಭಾನ್ವಿತ ದಲಿತ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ಸಾಂಸ್ಥಿಕ ತಾರತಮ್ಯ ಹಾಗೂ ಜಾತಿ ಅಸಹನೆಗಳಿಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡರು. 2019ರಲ್ಲಿ ಇದೇ ಬಗೆಯ ಅಸಹನೆ ಮತ್ತು ತಾರತಮ್ಯಗಳಿಗೆ ಮತ್ತು ಅವಹೇಳನಗಳಿಗೆ ಬಲಿಯಾಗಿ ಡಾ. ಪಾಯಲ್ ತದ್ವಿಯವರು ಮುಂಬೈನ ಟೋಪಿವಾಲ ಮೆಡಿಕಲ್ ಕಾಲೇಜಿನ BYL ನಾಯರ್ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು.
ತಾಯಂದಿರ ಅಹವಾಲು-ಅರೆಮನಸ್ಸಿನ ಕ್ರಮಗಳು
ಹೀಗಾಗಿ ರೋಹಿತ್ ಅವರ ತಾಯಿ ರಾಧಿಕಾ ವೇಮುಲ ಮತ್ತು ಪಾಯಲ್ ಅವರ ತಾಯಿ ಅಬಿದಾ ತದ್ವಿಯವರು ತಮ್ಮ ಮಕ್ಕಳ ಸ್ಥಿತಿ ಮತ್ತೊಬ್ಬರಿಗೆ ಬರಬಾರದೆಂಬ ಉದ್ದೇಶದಿಂದ ಶೋಷಿತ ಹಿನ್ನೆಲೆಯ ಮಕ್ಕಳ ಮೇಲೆ ನಡೆಯುವ ಸಾಂಸ್ಥಿಕ ತಾರತಮ್ಯ ಮತ್ತು ಸಾಮಾಜಿಕ ಅವಹೇಳನಗಳನ್ನು ತಡೆಗಟ್ಟಲು ವಿಫಲವಾಗಿರುವ 2012ರ ನಿಯಮಗಳನ್ನು ಗಟ್ಟಿಗೊಳಿಸಿ ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಯುಜಿಸಿಗೆ ಆದೇಶ ನೀಡಬೇಕೆಂದು 2019ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅಹವಾಲು ಸಲ್ಲಿಸಿದರು. ಅದನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್ ಯುಜಿಸಿಗೆ ನೋಟಿಸ್ ನೀಡಿತು. ಯುಜಿಸಿ ಇದರ ಬಗ್ಗೆ ಅಧ್ಯಯನ ಮಾಡಿ ಸಲಹೆಗಳನ್ನು ನೀಡಲು ಪ್ರೊ. ಶೈಲೇಶ್ ಜಾಲ ಅವರ ಸಮಿತಿಯನ್ನು ರೂಪಿಸಿತು.
ಈ ಮಧ್ಯೆ ಮೋದಿ ಸರಕಾರವು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಕೊಟ್ಟಿರುವ ಅಂಕಿಅಂಶಗಳ ಪ್ರಕಾರ 2018-23ರ ನಡುವೆ ಭಾರತದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದ ಎಸ್‌ಸಿ, ಎಸ್‌ಟಿ, ಒಬಿಸಿ ಹಿನ್ನೆಲೆಗೆ ಸೇರಿದ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, 13,500 ವಿದ್ಯಾರ್ಥಿಗಳು ಓದು ತೊರೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಇಬ್ಬರು ತಾಯಂದಿರು ಹೇರಿದ ನಿರಂತರ ಒತ್ತಡದಿಂದಾಗಿ 2025ರ ಫೆಬ್ರವರಿಯಲ್ಲಿ ಯುಜಿಸಿ ತನ್ನ ಪರಿಷ್ಕೃತ ಕರಡು ನಿಯಮಗಳನ್ನು ಕೋರ್ಟಿನ ಮುಂದಿರಿಸಿತು. ಆದರೆ ಅದು ಪರಿಣಾಮಕಾರಿಯಾಗಿಲ್ಲವೆಂದು ಈ ತಾಯಂದಿರು ಮತ್ತು ಅವರ ವಕೀಲರು ಹತ್ತು ಅಂಶಗಳ ಸಲಹೆಯನ್ನು ಸುಪ್ರೀಂ ಮುಂದಿರಿಸಿದರು. ಅದನ್ನು ಸಾಧ್ಯವಾದಲ್ಲಿ ಪರಿಗಣಿಸಬೇಕೆಂದು ಸುಪ್ರೀಂ ಯುಜಿಸಿಗೆ ಸಲಹೆ ನೀಡಿದರು. ಅಂತಿಮವಾಗಿ ಯುಜಿಸಿ 2025ರ ಅಕ್ಟೋಬರ್ ನಲ್ಲಿ ಹೊಸ ನಿಯಮಗಳನ್ನು ಅಂತಿಮಗೊಳಿಸಿತು. ಹಾಗೂ ಸುಪ್ರೀಂನ ಒತ್ತಡಕ್ಕೆ ಮಣಿದು 2026ರ ಜನವರಿ 13ರಂದು ಗೆಝೆಟ್ ನೋಟಿಫಿಕೇಶನ್ ಮೂಲಕ ಅದನ್ನು ಜಾರಿಗೊಳಿಸಿತು.
ಮೇಲ್ಜಾತಿಗಳನ್ನು ಕೆಳ ಜಾತಿಗಳು ತಾರತಮ್ಯ ಮಾಡಲು ಸಾಧ್ಯವೇ?
ಹಾಗೇ ನೋಡಿದರೆ 2026ರ ಪರಿಷ್ಕೃತ ನಿಯಮಗಳು 2012ರ ನಿಯಮಗಳಿಗೆ ಹೋಲಿಸಿದರೆ ಕೆಲವು ಅಂಶಗಳಲ್ಲಿ ಶಕ್ತಗೊಂಡಿವೆ ಮತ್ತು ಕೆಲವು ಅಂಶಗಳಲ್ಲಿ ಸಡಿಲಗೊಂಡಿವೆ. ಆದರೆ ಮೇಲ್ಜಾತಿ ಶಕ್ತಿಗಳು ಮತ್ತು ಬಿಜೆಪಿಯು 2026ರಲ್ಲಿ ಯಾವುದು 2012ಕ್ಕಿಂತ ಉತ್ತಮವಾಗಿದೆಯೋ ಅದನ್ನು ಇಲ್ಲದಂತೆ ಮಾಡಲು ಹೋರಾಡುತ್ತಿವೆ ಮತ್ತು ಸುಪ್ರೀಂ ಕೂಡ ಅದನ್ನು ಒಪ್ಪಿಕೊಂಡು ಅನ್ಯಾಯ ಮಾಡಿದೆ.
2026ರ ನಿಯಮಗಳ ಸೆಕ್ಷನ್ 3(1)(ಸಿ) ಜಾತಿ ತಾರತಮ್ಯವನ್ನು ವಿಶೇಷವಾಗಿ ಹೆಸರಿಸಿ ಅದರಲ್ಲಿ ಕೇವಲ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಜಾತಿಗಳ ಮೇಲೆ ಆಗುವ ಜಾತಿ ದೌರ್ಜನ್ಯವನ್ನು ಮಾತ್ರ ಗುರುತಿಸಿದೆ. ಅದರಲ್ಲಿ ಜನರಲ್ ಕೆಟಗರಿ ಅರ್ಥಾತ್ ಮೇಲ್ಜಾತಿಗಳನ್ನು ಸೇರಿಸಿಲ್ಲ ಮತ್ತು ತಮ್ಮ ಮೇಲೆ ಅಗುವ ತಾರತಮ್ಯಗಳನ್ನು ಪರಿಗಣಿಸಿಲ್ಲ ಎಂಬುದು ಬಿಜೆಪಿ ಮತ್ತು ಮೇಲ್ಜಾತಿ ಶಕ್ತಿಗಳ ಪ್ರಧಾನ ಆಕ್ಷೇಪ.
ಆದರೆ ಈ ಆಕ್ಷೇಪ ಸುಳ್ಳು. 3(1) (ಇ) ಸ್ಪಷ್ಟ ಪಡಿಸುವಂತೆ ಧರ್ಮ, ಜಾತಿ, ಜನಾಂಗ, ಲಿಂಗ, ಹುಟ್ಟಿದ ಪ್ರದೇಶ, ದೈಹಿಕ ವೈಕಲ್ಯಗಳನ್ನು ಆಧರಿಸಿ ಮಾಡುವ ಎಲ್ಲ ಬಗೆಯ ತಾರತಮ್ಯಗಳನ್ನು ತಾರತಮ್ಯದ ವಿವರಣೆ ಒಳಗೊಳ್ಳುತ್ತದೆ. ಕೇವಲ ಜಾತಿ ತಾರತಮ್ಯ ಮಾತ್ರವಲ್ಲ.
ಆದರೆ ಮೇಲ್ಜಾತಿ ಶಕ್ತಿಗಳು ಮತ್ತು ಬಿಜೆಪಿ ಜಾತಿ ತಾರತಮ್ಯದ ವಿವರಣೆಯಲ್ಲೂ ಜನರಲ್ ಕೆಟಗರಿಯವರನ್ನು ತಾರತಮ್ಯಕ್ಕೆ ಗುರಿಯಾಗಬಹುದಾದವರ ಪಟ್ಟಿಯಲ್ಲಿ ಸೇರಿಸಬೇಕೆಂದು ಆಗ್ರಹಿಸುತ್ತಿರುವುದು ವಾಸ್ತವದಲ್ಲಿ ಶೋಷಕರೇ ಬಲಿಪಶುಗಳೆಂದು ಸೋಗು ಹಾಕುವ ಬ್ರಾಹ್ಮಣೀಯ ಕುತಂತ್ರವಾಗಿದೆ.
ದುರ್ಬಳಕೆಯ ಕೂಗು- ಬಳಕೆಯನ್ನೇ ತಡೆಗಟ್ಟುವ ಹುನ್ನಾರ
ಅದರ ಜೊತೆಗೆ ಮೇಲ್ಜಾತಿ ಶಕ್ತಿಗಳು, ಬಿಜೆಪಿ ಮತ್ತು ಸುಪ್ರೀಂ ಕೂಡ 2026ರ ನಿಯಮಗಳ ದುರ್ಬಳಕೆಯ ಸಾಧ್ಯತೆಯನ್ನು ಉತ್ಪ್ರೇಕ್ಷಿಸಿ ಮುಂದಿಡುತ್ತಿದ್ದಾರೆ. ಸುಪ್ರೀಂ ಅಂತೂ ಅದನ್ನು ಒಂದು ಕಾರಣವಾಗಿಟ್ಟುಕೊಂಡು ತಡೆ ಕೊಟ್ಟಿದೆ.
ಆದರೆ ವಾಸ್ತವವೇನು?
2026ರ ಪರಿಷ್ಕೃತ ನಿಯಮ ಸೆಕ್ಷನ್ 5 (6)ರ ಪ್ರಕಾರ ತಾರತಮ್ಯದ ಬಗ್ಗೆ ದೂರುಗಳನ್ನು ಪರಿಶೀಲಿಸಲು ಒಂದು Equity Committeeಯನ್ನು ರಚಿಸಬೇಕು. 2012ರ ಕಾಯ್ದೆಯಲ್ಲಿ ಅದರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಸ್ಥಾಯಿಯ ಒಬ್ಬ ವ್ಯಕ್ತಿ ಮಾತ್ರ ಇರುತ್ತಿದ್ದರು.
ಆದರೆ 2026ರ ನಿಯಮಗಳ ಅದು 10 ಜನರ ಸಮಿತಿಯಾಗಿರುತ್ತದೆ. ಸಂಸ್ಥೆಯ ಮುಖ್ಯಸ್ಥ ಅದರ ಅಧ್ಯಕ್ಷ, ಸಂಸ್ಥೆಯ ಮೂವರು ಹಿರಿಯ ಪ್ರೊಫೆಸರುಗಳು, ಉಪಾಧ್ಯಾಯರಲ್ಲದ ಸಂಸ್ಥೆಯ ಒಬ್ಬ ಸಿಬ್ಬಂದಿ, ಸೂಕ್ತ ಅನುಭವ ಇರುವ ನಾಗರಿಕ ಸಮಾಜದ ಇಬ್ಬರು ಸದಸ್ಯರು, ಅಕಾಡಮಿಕ್ ವಿಷಯಗಳಲ್ಲಿ, ಪಠ್ಯೇತರ ಚಟುವಟಿಕೆಗಳಲ್ಲಿ ಅಥವಾ ಕ್ರೀಡೆಯಲ್ಲಿ ಸಾಧನೆಯನ್ನು ಆಧರಿಸಿ ಇಬ್ಬರು ವಿದ್ಯಾರ್ಥಿಗಳು ಆಹ್ವಾನಿತ ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ.
ಸೆಕ್ಷನ್ 5 (7) ಈ ಸಮಿತಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಮಹಿಳೆ ಮತ್ತು ದೈಹಿಕ ವೈಕಲ್ಯದ ಹಿನ್ನೆಲೆಯವರು ಕೂಡ ಸದಸ್ಯರಾಗಿರಬೇಕು ಎಂದು ಸೂಚಿಸಲಾಗಿದೆಯೇ ವಿನಾ ಎಷ್ಟು ಪ್ರಮಾಣ ಎಂಬುದು ನಿಗದಿಯಾಗಿಲ್ಲ. ಮೇಲಾಗಿ ಭಾರತದ ಇಂದಿನ ಸಾಮಾಜಿಕ ವಾಸ್ತವಗಳ ಪ್ರಕಾರ ಸಂಸ್ಥೆಯ ಮುಖ್ಯಸ್ಥರು, ಮೂವರು ಹಿರಿಯ ಪ್ರೊಫೆಸರುಗಳು ಮತ್ತು ಷರತ್ತುಗಳ ನೆಪದಲ್ಲಿ ಪ್ರತಿನಿಧಿಗಳಾಗಬಲ್ಲ ವಿದ್ಯಾರ್ಥಿಗಳು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಹಿನ್ನೆಲೆಯವರಾಗಿರುವುದು ಕಡಿಮೆ. ಹೀಗಾಗಿ ಇದು ಮೂಲಭೂತವಾಗಿ ಮೇಲ್ಜಾತಿ ಪ್ರತಿನಿಧಿಗಳೇ ಹೆಚ್ಚಿರುವ ಸಮಿತಿಯಾಗಿರುತ್ತದೆ.
ವಾಸ್ತವದಲ್ಲಿ ಅಹವಾಲುದಾರ ತಾಯಂದಿರು ಸಮಿತಿಯಲ್ಲಿ ಕಡ್ಡಾಯವಾಗಿ ಶೇ. 50ಕ್ಕಿಂತ ಹೆಚ್ಚು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಮಹಿಳೆಯರಿರಬೇಕೆಂದು ಸಲಹೆ ನೀಡಿದ್ದರು ಮತ್ತು ಸಂಸ್ಥೆಯ ಮುಖ್ಯಸ್ಥರು ಯಾವ ಕಾರಣಕ್ಕೂ ಸಮಿತಿಯ ಅಧ್ಯಕ್ಷರಾಗಬಾರದೆಂದು ವಾದಿಸಿದ್ದರು. ಏಕೆಂದರೆ ಸಂಸ್ಥೆಯ ಮುಖ್ಯಸ್ಥರ ಆಸಕ್ತಿ ಸಂಸ್ಥೆಯ ಘನತೆ, ಗೌರವಕ್ಕೆ ಚ್ಯುತಿ ತರಬಾರದೆಂಬುದೇ ಆಗಿರುತ್ತಾದ್ದರಿಂದ ಅವರು ತಾರತಮ್ಯಗಳ ಯಾವುದೇ ಆರೋಪವನ್ನು ತಳ್ಳಿ ಹಾಕುವ ಸಂಭವವೇ ಹೆಚ್ಚು. ವೇಮುಲ, ತದ್ವಿ ಪ್ರಕರಣಗಳೇ ಅದಕ್ಕೆ ಸಾಕ್ಷಿ. ಹೀಗಾಗಿ ಹಾಲಿ ನಿಯಮವು ಸಂಭಾವ್ಯ ಮೇಲ್ಜಾತಿ ಆರೋಪಿಗಳ ಹಿತಾಸಕ್ತಿಯನ್ನು ಕಾಯುವಂತಿದೆಯೇ ವಿನಾ ಜಾತಿ ತಾರತಮ್ಯದ ಬಲಿಪಶುಗಳದ್ದಲ್ಲ.
ಇನ್ನು ದೂರು ನೀಡಿದ ತಕ್ಷಣ ಶಿಕ್ಷೆ ವಿಧಿಸುವಂತೆ ನಿಯಮಗಳೇನೂ ಇದರಲ್ಲಿಲ್ಲ. ಕ್ರಿಮಿನಲ್ ಸ್ವರೂಪದ ಆರೋಪಗಳಿದ್ದರೆ ಪ್ರಾಣ ಹಾನಿ, ಹತ್ಯಾ ಪ್ರಯತ್ನ, ದರೋಡೆ, ಇನ್ನಿತ್ಯಾದಿಗಳ ಬಗ್ಗೆ ಪೊಲೀಸ್ ಠಾಣೆಗೆ ಸಹಜವಾಗಿ ದೂರು ಬರಬೇಕು. ಅದು ಸಹಜ ನ್ಯಾಯಾಂಗ ಪ್ರಕ್ರಿಯೆಯನ್ನು ಅನುಸರಿಸುತ್ತದೆ.
ಸುದೀರ್ಘ ಮತ್ತು ಸಹಜ ನ್ಯಾಯಾಧಾರಿತ ವಿಚಾರಣಾ ಪ್ರಕ್ರಿಯೆ
2026ರ ನಿಯಮಗಳ ಸೆಕ್ಷನ್ 8ರ ಪ್ರಕಾರ ಇನ್ನಿತರ ತಾರತಮ್ಯಗಳ ಬಗ್ಗೆ ದೂರು ಬಂದ 24 ಗಂಟೆಯೊಳಗೆ ಸಮಿತಿ ಅದನ್ನು ಪರಿಗಣಿಸಬೇಕು. ಆ ನಂತರದ 15 ದಿನಗಳೊಳಗೆ ಅದರ ಬಗ್ಗೆ ತನಿಖೆ ನಡೆಸಿ ತನ್ನ ತೀರ್ಮಾನವನ್ನು ಸಮಿತಿಯ ಅಧ್ಯಕ್ಷರಿಗೆ ತಿಳಿಸಬೇಕು. ಈ ಹಂತದಲ್ಲಿ ಸಮಿತಿಯು ತನ್ನ ತನಿಖೆಯನ್ನು ಆಧರಿಸಿ ಆರೋಪವು ನಿಜ ಅಥವಾ ಸುಳ್ಳು ಎಂದು ಏನು ಬೇಕಾದರೂ ಶಿಫಾರಸು ಮಾಡಬಹುದು. ಸಮಿತಿ ವರದಿ ಕೈಗೆ ಸಿಕ್ಕ 7 ದಿನಗಳೊಳಗೆ ಸಮಿತಿಯ ಅಧ್ಯಕ್ಷರು ಅರ್ಥಾತ್ ಸಂಸ್ಥೆಯ ಮುಖ್ಯಸ್ಥರು ಅದರ ಬಗ್ಗೆ ಕ್ರಮ ತೆಗೆದುಕೊಳ್ಳಬಹುದು. ಆ ಕ್ರಮಗಳು ಎಚ್ಚರಿಕೆ, ಮುಚ್ಚಳಿಕೆ ಮತ್ತು ತೀವ್ರ ಸ್ವರೂಪದ ತಾರತಮ್ಯವಾಗಿದ್ದರೆ ಸಂಸ್ಥೆಯಿಂದ ಹೊರಗಟ್ಟುವುದಾಗಿರುತ್ತದೆ. ಅಧ್ಯಾಪಕ ಸಿಬ್ಬಂದಿಯ ತಾರತಮ್ಯ ಸಾಬೀತಾದರೆ ಹೆಚ್ಚೆಂದರೆ ಅಮಾನತಿನ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಇದಲ್ಲದೆ ಸೆಕ್ಷನ್ 9ರ ಪ್ರಕಾರ ಈ ಯಾವುದೇ ತೀರ್ಮಾನದ ವಿರುದ್ಧ ಆರೋಪಿಯು ಸಂಸ್ಥೆಯು ನೇಮಿಸುವ ಸ್ವತಂತ್ರ ಲೋಕಪಾಲರ ಬಳಿ ಮೇಲ್ಮನವಿ ಸಲ್ಲಿಸಬಹುದು. ಅವರು 30 ದಿನಗಳೊಳಗೆ ಹೆಚ್ಚಿನ ವಿಚಾರಣೆ ನಡೆಸಿ ಸಮಿತಿ ಕೈಗೊಂಡ ತೀರ್ಮಾನದ ಬಗ್ಗೆ ಅಂತಿಮ ತೀರ್ಪು ನೀಡಬಹುದು.
ಹೀಗೆ ಒಟ್ಟಾರೆಯಾಗಿ ನೋಡಿದಾಗ ಸಹಜ ನ್ಯಾಯ ಸಂಹಿತೆಯ ಪ್ರಕ್ರಿಯೆಗಳನ್ನು ಸಾಂಸ್ಥಿಕವಾಗಿ ಅಳವಡಿಸಿಕೊಳ್ಳಲಾಗಿದೆ. ಆದರೂ ದುರ್ಬಳಕೆಗೆ ಅವಕಾಶವಿದೆ ಎಂದು ಸುಪ್ರೀಂ ತಡೆಯೊಡ್ಡಿರುವುದು ನ್ಯಾಯಾಂಗದ ಬಗ್ಗೆ ಭರವಸೆಯನ್ನೇ ಕಡಿಮೆ ಮಾಡುತ್ತಿದೆ. ಅದರಲ್ಲೂ ನಮ್ಮ ಸಂಸ್ಥೆಗಳ ಸಾಮಾಜಿಕ ವಾಸ್ತವತೆಯನ್ನು ಗಮನಿಸಿದಾಗ ಮೇಲ್ಜಾತಿಗಳ ಆಸಕ್ತಿಯನ್ನು ಇದು ಸಂಪೂರ್ಣವಾಗಿ ರಕ್ಷಿಸುತ್ತದೆ.
ಆದರೂ ಮೇಲ್ಜಾತಿಗಳ ಕೂಗಾಟಕ್ಕೆ ಇರುವ ಅಸಲಿ ಕಾರಣ 2012 ನಿಯಮಗಳಂತೆ 2026ರ ನಿಯಮಗಳು ಕೇವಲ ಮಾತುಗಳಾಗಿ ಉಳಿಯುವುದಿಲ್ಲ. ಹೊಸ ನಿಯಮದ ಪ್ರಕಾರ ಯುಜಿಸಿಗೆ ಒಳಪಡುವ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಇವನ್ನು ಜಾರಿಗೆ ತರಲೇ ಬೇಕು. ಇಲ್ಲವಾದರೆ ಸೆಕ್ಷನ್ 11ರ ಪ್ರಕಾರ ಈ ನಿಯಮಗಳನ್ನು ಪಾಲಿಸದ ಸಂಸ್ಥೆಗಳನ್ನು ಯುಜಿಸಿ ತನ್ನ ಯೋಜನೆಗಳಿಂದ ಹೊರಗಿಡಬಹುದು, ಪದವಿ ನೀಡುವ ಅಧಿಕಾರವನ್ನು ಹಿಂದೆಗೆದುಕೊಳ್ಳಬಹುದು, ತನ್ನ ಅಧಿಕೃತ ಪಟ್ಟಿಯಿಂದ ಆ ಸಂಸ್ಥೆಯ ಹೆಸರನ್ನು ತೆಗೆಯಬಹುದು. 2026ರ ನಿಯಮದ ಅತ್ಯಂತ ಉತ್ತಮ ಭಾಗವಿದು. ಹೀಗಾಗಿ ಈಗ ಅನಿವಾರ್ಯವಾಗಿ ಜಾತಿ ತಾರತಮ್ಯ ಮಾಡುವ ಶಕ್ತಿಗಳಿಗೆ ಬಿಸಿಮುಟ್ಟುವ ಸಾಧ್ಯತೆ ಇದೆ. ಮೇಲ್ಜಾತಿ ಶಕ್ತಿಗಳು ವಿರೋಧಿಸುತ್ತಿರುವುದು ತಮ್ಮ ಜಾತಿ ಮೇಲಾಟಕ್ಕೆ ಅಡ್ಡಿಯಾಗುವ ಈ ನಿಯಮ ಗಳನ್ನು. ಅರ್ಥಾತ್ ಯಾವ ಅಂಕುಶಕ್ಕೂ ಸಿಗದೆ, ಯಾವ ಉತ್ತರದಾಯಿತ್ವವೂ ಇಲ್ಲದೆ ತಮ್ಮ ಜಾತಿಯನ್ನು ಮೆರೆಸುವ ಅವಕಾಶಕ್ಕಾಗಿ ಬೀದಿಗಿಳಿದಿದ್ದಾರೆ.
ಆದರೆ 2026ರ ನಿಯಮಗಳು 2012ರ ನಿಯಮಗಳಲ್ಲಿದ್ದ ಅತ್ಯಂತ ಸಕಾರಾತ್ಮಕ ಅಂಶವನ್ನು ಕೈಬಿಟ್ಟಿದೆ.
2012ರ ನಿಯಮದಲ್ಲಿದ್ದ ವಾಸ್ತವಿಕ ತಾರತಮ್ಯದ ವಿವರಗಳು
2012ರ ನಿಯಮಗಳ ಸೆಕ್ಷನ್ 3(2)ರಲ್ಲಿನ ಎ-ಎಫ್ ಉಪ ಸೆಕ್ಷನ್‌ಗಳು ಕ್ಯಾಂಪಸ್‌ನಲ್ಲಿ ಆಡಳಿತ ವರ್ಗದಿಂದ, ವಿದ್ಯಾರ್ಥಿ ಸಮುದಾಯಗಳಿಂದ ನಡೆಬಹುದಾದ 25 ವಿವಿಧ ಬಗೆಯ ತಾರತಮ್ಯಗಳನ್ನು ವಿವರವಾಗಿ ಪಟ್ಟಿ ಮಾಡಿ ಅದನ್ನು ಬಹಿಷ್ಕರಿಸಿತ್ತು.
ಮೀಸಲಾತಿ ಅನುಸರಿಸದಿರುವುದು, ಅಂತಹ ಅಭ್ಯರ್ಥಿಗಳ ಅರ್ಜಿಯನ್ನು ನಿರಾಕರಿಸುವುದು, ಹೆಚ್ಚಿನ ಶುಲ್ಕ ವಿಧಿಸುವುದು, ನೀಡದಿದ್ದರೆ ಪ್ರವೇಶದ ಸಮಯದಲ್ಲಿ ನೀಡಲಾದ ಪ್ರಮಾಣ ಪತ್ರಗಳನ್ನು ಹಿಂದಿರುಗಿಸದೆ ಕಿರುಕುಳ ನೀಡುವುದು, ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳೂ ಪಡೆಯಲು ಅರ್ಹರಾದ ಸೌಲಭ್ಯಗಳನ್ನು ವಿತರಿಸುವುದರಲ್ಲಿ ತಾರತಮ್ಯ ಮಾಡುವುದು, ತರಗತಿಗಳಲ್ಲಿ ಜಾತಿ, ಧರ್ಮ ಹೆಸರಿಟ್ಟು ಸಂಬೋಧಿಸುವುದು, ವೈಫಲ್ಯಗಳಿಗೆ ಸಾಮಾಜಿಕ ಹಿನ್ನೆಲೆಯನ್ನು ಸೂಚಿಸಿ ಅಣಕವಾಡುವುದು, ಲೈಬ್ರರಿ ಮತ್ತು ಲ್ಯಾಬ್‌ಗಳಲ್ಲಿ ಸೌಲಭ್ಯ ಒದಗಿಸುವುದರಲ್ಲಿ ತಾರತಮ್ಯ ಮಾಡುವುದು, ನಿರ್ದಿಷ್ಟ ಸಾಮಾಜಿಕ ಹಿನ್ನೆಲೆಗೆ ಸೇರಿದವರೆಂಬ ಕಾರಣಕ್ಕೆ ಮೌಲ್ಯಮಾಪನ ಮತ್ತು ಮರುಮೌಲ್ಯಮಾಪನಗಳಲ್ಲಿ ತಾರತಮ್ಯ ಮಾಡುವುದು, ಫಲಿತಾಂಶ ಘೋಷಣೆಯನ್ನು ಈ ಕಾರಣಗಳಿಗಾಗಿ ವಿಳಂಬ ಮಾಡುವುದು..
ಇವೇ ಇನ್ನಿತರ ತಾರತಮ್ಯಗಳನ್ನು ನಿರ್ದಿಷ್ಟವಾಗಿ ಪಟ್ಟಿ ಮಾಡಿ ಅವೆಲ್ಲ ತಾರತಮ್ಯಗಳನ್ನು ಬಹಿಷ್ಕರಿಸಿತ್ತು. 2026ರ ನಿಯಮಗಳಲ್ಲಿ ಈ ಪಟ್ಟಿಯಿಲ್ಲ.
ಸುಪ್ರೀಂ ಕೋರ್ಟು ರಕ್ಷಿಸಬೇಕಿರುವುದು ಸಂವಿಧಾನವನ್ನು, ಮನುವಾದವನ್ನಲ್ಲ.
ಹೀಗಾಗಿ ಸುಪ್ರೀಂ ಕೋರ್ಟು ನಿಜಕ್ಕೂ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದ್ದರೆ ಮೇಲ್ಜಾತಿಗಳ ಜಾತಿ ಪೂರ್ವಾಗ್ರಹದ ಆಗ್ರಹಗಳಿಗೆ ಮಣಿಯಬಾರದಿತ್ತು. 2026ರ ನಿಯಮಗಳಿಗೆ ತಡೆಯೊಡ್ಡದೆ ಅದರಲ್ಲಿ ಮೇಲೆ ಹೇಳಿದ 2012ರ ಸಕಾರಾತ್ಮಕ ಅಂಶಗಳನ್ನು ಸೇರಿಸಿ ಬಲಪಡಿಸಿ ಎಂದು ಸೂಚಿಸಿ ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಅವನ್ನು ಕೂಡಲೇ ಜಾರಿ ಮಾಡಬೇಕೆಂದು ಆದೇಶ ಹೊರಡಿಸಬಹುದಿತ್ತು.
ಅದರ ಬದಲಿಗೆ ಸುಪ್ರೀಂ ಕೋರ್ಟ್ ಜಾತಿ ತಾರತಮ್ಯವನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಂಡರೆ ದೇಶದಲ್ಲಿ ಅಶಾಂತಿ ಉಂಟಾಗುತ್ತದೆ ಎಂದು ತಡೆಯಾಜ್ಞೆ ನೀಡಿದೆ.
ಮನೆ ಕೆಲಸದವರಿಗೆ ಕನಿಷ್ಠ ಕೂಲಿ ಕೊಟ್ಟರೆ ಪ್ರತಿಮನೆಯೂ ರಣಾಂಗಣವಾಗುತ್ತದೆನ್ನುವ, ದೇಶದ ಕೈಗಾರಿಕಾ ಬಿಕ್ಕಟ್ಟಿಗೆ ಕಾರ್ಮಿಕರೇ ಕಾರಣವೆನ್ನುವ, ಅಕ್ರಮ ವಲಸಿಗರಿಗೆ ಆಹಾರವನ್ನೂ ಕೊಡಬಾರದೆನ್ನುವ ಸುಪ್ರೀಂ ಕೋರ್ಟಿನ ಹಾಲಿ ಮುಖ್ಯ ನ್ಯಾಯಾಧೀಶ ನ್ಯಾ. ಸೂರ್ಯಕಾಂತ್ ಅವರ ದ್ವಿಸದಸ್ಯ ಪೀಠವೇ ಈ ತಡೆಯಾಜ್ಞೆಯನ್ನೂ ಕೊಟ್ಟಿದೆ. ಇದು ಸಂವಿಧಾನವನ್ನು ಎತ್ತಿ ಹಿಡಿಯುವ ಆದೇಶವಲ್ಲ. ಮನುವಾದಿ ಮೇಲ್ಜಾತಿ ಪೂರ್ವಾಗ್ರಹಗಳಿಗೆ ಇಂಬು ಕೊಟ್ಟಿರುವ ಆದೇಶ.