×
Ad

ಬಜೆಟ್ ಕಾಲದಲ್ಲಿ... ಬೊಮ್ಮಾಯಿಯವರ ಭಂಡ ಬಡಾಯಿಗಳು ಮತ್ತು ಬೈರೇಗೌಡರ ನಾಜೂಕು ಸುಳ್ಳುಗಳು

Update: 2026-02-25 11:25 IST

ಕರ್ನಾಟಕದ ಹಾಗೂ ಇತರ ರಾಜ್ಯಗಳಿಗೂ ಮೋದಿ ಕಾಲದಲ್ಲಿ ಅಪರಿಮಿತ ಅನ್ಯಾಯ ಹಾಗೂ ವಂಚನೆ ನಡೆಯುತ್ತಿರುವುದು ನಿಜವಾದರೂ, ಕಾಂಗ್ರೆಸ್‌ಗೂ ಇತರ ವಿರೋಧ ಪಕ್ಷಗಳಿಗೂ ಕರ್ನಾಟಕದ ಜನರು ಕ್ಲೀನ್ ಚಿಟ್ ಕೊಡಲಾಗದು. ಹೀಗಾಗಿ ಮೋದಿ ಸರಕಾರ ನಡೆಸುತ್ತಿರುವ ಕರ್ನಾಟಕ ದರೋಡೆ ನಿಲ್ಲಬೇಕೆಂದರೆ ಕರ್ನಾಟಕದ ಜನತೆ ಮೋದಿ ಸರಕಾರದ ತಾರತಮ್ಯಗಳ ವಿರುದ್ಧ ಹೋರಾಡುತ್ತಲೇ ಕಾಂಗ್ರೆಸ್‌ನ ನೀತಿಗಳನ್ನೂ ಖಂಡಿಸಬೇಕು.

ಪ್ರತಿವರ್ಷ ಬಜೆಟ್ ಸೀಸನ್ ಶುರುವಾಗುತ್ತಿದ್ದಂತೆ, ಭಾರತದ ವಿತ್ತೀಯ ಫೆೆಡರಲಿಸಂ ಬಗ್ಗೆಯೂ ಬಿಸಿಬಿಸಿ ಚರ್ಚೆಗಳು ಶುರುವಾಗುತ್ತದೆ. ಭಾರತವು ಆದರ್ಶ ಫೆಡರಲ್ ಒಕ್ಕೂಟವಾಗುವ ಸಾಧ್ಯತೆಯು ಸಂವಿಧಾನದಲ್ಲೇ ಕೊಡಮಾಡಿಲ್ಲ. ಆದರೆ ಅದೇ ಸಮಯದಲ್ಲಿ ಸಂವಿಧಾನವು ಕೇಂದ್ರದ ಮೇಲೆ ಬಿಕ್ಕಟ್ಟು ಮತ್ತು ಯುದ್ಧ ಕಾಲವನ್ನು ಹೊರತುಪಡಿಸಿ ಶಾಂತಿಕಾಲದಲ್ಲಿ ಸರ್ವಾಧಿಕಾರಿಯಾಗದಂತಹ ನಿಯಂತ್ರಣ ಹೇರಿದೆ.

ಆದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಗಳ ಮೇಲೆ ನಿರಂತರ ಯುದ್ಧವನ್ನು ಸಾರಿದೆಯಲ್ಲದೆ, ರಾಜ್ಯಗಳ ವಿತ್ತೀಯ ಪರಿಸ್ಥಿತಿಯನ್ನು ಸದಾ ಬಿಕ್ಕಟ್ಟಿನಲ್ಲಿರಿಸಿದೆ. ಇದು ಭಾರತದ ಒಕ್ಕೂಟ ಸ್ವರೂಪದ ಮೇಲೂ, ಎಲ್ಲಕ್ಕಿಂತ ಹೆಚ್ಚಾಗಿ ಜನರ ನಿತ್ಯ ಬದುಕಿನ ಮೇಲೂ ಗಾಢ ಪರಿಣಾಮವನ್ನು ಬೀರುತ್ತಿದೆ. ಏಕೆಂದರೆ ಆಹಾರ, ಉದ್ಯೋಗ, ಆರೋಗ್ಯ, ವಸತಿ, ಕಾನೂನು ಮತ್ತು ಸುವ್ಯವಸ್ಥೆಯಂತಹ ಜನರ ಬದುಕಿಗೆ ನೇರವಾಗಿ ಸಂಬಂಧಪಟ್ಟ ಶೇ. 67ಕ್ಕೂ ಹೆಚ್ಚು ಕಲ್ಯಾಣ ಕಾರ್ಯಕ್ರಮಗಳ ಹೊಣೆಗಾರಿಕೆ ರಾಜ್ಯಗಳದ್ದು. ಆದರೆ ದೇಶದ ಒಟ್ಟಾರೆ ವಿತ್ತೀಯ ಸಂಪನ್ಮೂಲಗಳಲ್ಲಿ ರಾಜ್ಯಗಳ ಪಾಲು ಕೇವಲ. ಶೇ. 33.

ಕಾಂಗ್ರೆಸ್ ಎಂಬ ಕಾರಣವೂ, ಬಿಜೆಪಿ ಎಂಬ ಪರಿಣಾಮವೂ!

ಮೋದಿ ಸರಕಾರ ಬಂದಮೇಲೆ ರಾಜ್ಯಗಳ ಪಾಲು ತೀವ್ರವಾಗಿ ಕಡಿತವಾಗುತ್ತಿರುವುದು ನಿಜವಾದರೂ ಅದನ್ನು ಸಾಧ್ಯಗೊಳಿಸಿದ್ದು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ತಂದ ಕಾರ್ಪೊರೇಟ್ ಆರ್ಥಿಕ ನೀತಿಗಳೇ. 1991ರಲ್ಲಿ ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯಗಳ ವಿರುದ್ಧವಾಗಿ ಮತ್ತು ಬಿಜೆಪಿ ಹಾಗೂ ಇತರೆಲ್ಲಾ ಪಕ್ಷಗಳ ಬೆಂಬಲದೊಂದಿಗೆ ಜಾರಿಗೆ ತಂದ ಕಾರ್ಪೊರೇಟ್ ನಿರ್ದೇಶಿತ ನವ ಉದಾರವಾದಿ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದ ನೀತಿಗಳೆಲ್ಲವೂ ರಾಜ್ಯಗಳ ಅಧಿಕಾರವನ್ನು ಹಾಗೂ ಜನಪರತೆಯನ್ನು ಮೊಟಕುಗೊಳಿಸುವ ಕಾರ್ಪೊರೇಟ್ ಆರ್ಥಿಕ ಕೇಂದ್ರೀಕರಣ ನೀತಿಗಳೇ ಆಗಿದ್ದವು. ಜಿಎಸ್‌ಟಿ, ರಾಜ್ಯಗಳ ಪಾಲಿನ ಮತ್ತು ಕಲ್ಯಾಣ ಕಾರ್ಯಕ್ರಮಗಳ ಕಡಿತ, ದೇಶವ್ಯಾಪಿ ಏಕರೂಪ ಆರ್ಥಿಕ ಕ್ರಾಯಕ್ರಮಗಳೆಲ್ಲವೂ ಈ ನೀತಿಗಳ ಪರಿಣಾಮಗಳೇ.

ಹೀಗಾಗಿ ಮೋದಿ ಆರ್ಥಿಕ ನೀತಿಗಳ ಪರಿಣಾಮವನ್ನು ಮಾತ್ರ ವಿರೋಧಿಸುತ್ತಾ ಅದಕ್ಕೆ ಕಾರಣವಾದ ಮೂಲಭೂತ ಪಕ್ಷಾತೀತ ಕಾರ್ಪೊರೇಟ್ ಪರತೆಯನ್ನು ಬದಲಿಸದಿದ್ದರೆ ಅಂತಹ ಚರ್ಚೆಗಳಿಂದ ಯಾವ ಪ್ರಯೋಜನವೂ ಇರುವುದಿಲ್ಲ.

ಆದರೂ ಕಾಲಕಾಲಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಂತಹ ಉದ್ದೇಶಪೂರ್ವಕ ಮೇಲ್ ತೋರಿಕೆಯ ಚರ್ಚೆಯನ್ನು ಮಾಡುತ್ತಾ ಜನರನ್ನು ಗೊಂದಲಗೊಳಿಸುತ್ತಿವೆ.

ಅಂತಹ ಒಂದು ಚರ್ಚೆ ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ನಡೆಯಿತು. ಮೋದಿ ಸರಕಾರದ ತೆರಿಗೆ ನೀತಿಯಿಂದ ರಾಜ್ಯಕ್ಕೆ ಆಗುತ್ತಿರುವ ಲಾಭ/ಅನ್ಯಾಯದ ಬಗ್ಗೆ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಹಾಲಿ ಕಾಂಗ್ರೆಸ್ ಸರಕಾರದ ಕ್ಯಾಬಿನೆಟ್ ಮಂತ್ರಿ ಕೃಷ್ಣ ಬೈರೆೇಗೌಡರು ತಮ್ಮ ತಮ್ಮ ಪಕ್ಷದ ನೀತಿಗನುಸಾರವಾದ ವಾದಗಳನ್ನು ಮಂಡಿಸಿದ್ದರು.

ಬೊಮ್ಮಾಯಿಯವರ ವಾದಗಳಲ್ಲಿ ಬಿಜೆಪಿ ಬ್ರಾಂಡ್‌ನ ಅತ್ಯಂತ ಬೇಜವಾಬ್ದಾರಿಯುತ ಸುಳ್ಳು ಬಡಾಯಿಗಳು, ಕರ್ನಾಟಕ ದ್ರೋಹಿ ವಾದಗಳು ಮತ್ತು ಅವರ ಕಾಲದಲ್ಲೂ ಆಗಿರಲಿಲ್ಲವೇ (Whataboutry) ಎಂಬ ಭಂಡ ಸಮರ್ಥನೆಗಳು ಮಾತ್ರ ಇದ್ದವು.

ಕೃಷ್ಣಬೈರೇಗೌಡರ ವಾದದಲ್ಲಿ ಅರ್ಧ ಸತ್ಯಗಳಿದ್ದರೆ ಉಳಿದರ್ಧ ಉತ್ಪ್ರೇಕ್ಷೆಗಳು ಮತ್ತು ತಮ್ಮ ಪಕ್ಷದ ತಪ್ಪುಗಳನ್ನು ಮರೆಮಾಚುವಂತಹ ನಾಜೂಕು ವಾದಗಳಿದ್ದವು.

ಆದರೆ ಕರ್ನಾಟಕಪರತೆಯೆಂದರೆ ಬಿಜೆಪಿ ಪರತೆಯೋ, ಕಾಂಗ್ರೆಸ್ ಪರತೆಯೋ ಆಗುವ ಅಗತ್ಯವಿಲ್ಲ. ಬಿಜೆಪಿಯ ಕರ್ನಾಟಕ ದ್ರೋಹವನ್ನು ಖಂಡಿಸುವ ಮತ್ತು ಕಾಂಗ್ರೆಸ್‌ನ ಅರ್ಧಸತ್ಯಗಳನ್ನು, ಸರಕಾರಿ ಉತ್ಪ್ರೇಕ್ಷೆಗಳನ್ನು ದಾಟಿ ಅರ್ಥಮಾಡಿಕೊಳ್ಳುವ ಧೋರಣೆಗಳು ಮಾತ್ರ ನಿಜವಾದ ಕರ್ನಾಟಕ ಪರತೆಯಾಗುತ್ತದೆ.

ಅವುಗಳನ್ನು ಪರಿಶೀಲಿಸುವ ಮೊದಲು ಒಂದಂತೂ ಅಪ್ಪಟ ವಾಸ್ತವ. ಈ ಜಿಎಸ್‌ಟಿ ಮತ್ತು ಸೆಸ್ ನೀತಿಯಿಂದ ಮತ್ತು ಮೋದಿ ಸರಕಾರದ ಕಾರ್ಪೊರೇಟ್ ಪರ ಮತ್ತು ಕರ್ನಾಟಕ ವಿರೋಧಿ ನೀತಿಗಳಿಂದ ಕರ್ನಾಟಕಕ್ಕೇ ಅನ್ಯಾಯವಾಗುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ ಒಂದು ಕಡೆ ಬೊಮ್ಮಾಯಿಯವರು ಭಂಡ ಬಿಜೆಪಿಗೆ ತಕ್ಕಂತೆ ಆ ವಾಸ್ತವವನ್ನು ಒಪ್ಪಿಕೊಳ್ಳಲೇ ತಯಾರಿಲ್ಲ. ಮತ್ತೊಂದು ಕಡೆ ಕೃಷ್ಣಬೈರೆೇಗೌಡರು ಕಾಂಗ್ರೆಸ್ ಪಕ್ಷದ ಕಾರ್ಪೊರೇಟ್ ಪರ ನೀತಿಗಳ ಭಾಗವಾಗಿಯೇ ಜಿಎಸ್‌ಟಿ ಜಾರಿಗೆ ಸೆಸ್ ನೀತಿಗೆ ತಾವೇ ಅಡಿಪಾಯ ಹಾಕಿದ ಸತ್ಯವನ್ನು ಮರೆಮಾಚುತ್ತಾರೆ. ಮತ್ತು ಕೇಂದ್ರದ ತಾರತಮ್ಯ ನೀತಿಗಳನ್ನು ತಮ್ಮ ಸರಕಾರದ ಎಲ್ಲಾ ದೌರ್ಬಲ್ಯಗಳನ್ನು ಮತ್ತು ವೈಫಲ್ಯಗಳನ್ನು ಮುಚ್ಚಿಕೊಳ್ಳಲು ನಾಜೂಕಾಗಿ ಬಳಸಿಕೊಳ್ಳುತ್ತಾರೆ.

ಬೊಮ್ಮಾಯಿಯವರ ಭಂಡ ಬಡಾಯಿ

1. ಜಿಎಸ್‌ಟಿ ಎಂಬುದೇ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆಯಾದ ಪ್ರತ್ಯಕ್ಷ ತೆರಿಗೆಯನ್ನು ಹೆಚ್ಚಿಸುವ ನವಉದಾರವಾದಿ ತೆರಿಗೆ ಪದ್ಧತಿ. ಅದನ್ನು ಜಾರಿ ಮಾಡಲು ಕಾಂಗ್ರೆಸ್ ವಿಫಲ ಪ್ರಯತ್ನ ಮಾಡಿದರೂ ಅದನ್ನು ತೀವ್ರವಾಗಿ ಮತ್ತು ಉಗ್ರವಾಗಿ ಜಾರಿಗೆ ತಂದದ್ದೇ ಮೋದಿ ನೇತೃತ್ವದ ಬಿಜೆಪಿ ಸರಕಾರ. ಹೀಗಾಗಿ ಇಂದಿನ ಕರ್ನಾಟಕದ ಬವಣೆಗೆ ನೇರ ಕಾರಣ ಬಿಜೆಪಿ. ಬೊಮ್ಮಯಿಯವರ ಲೇಖನದಲ್ಲಿ ಈ ವಾಸ್ತವದ ಲವಲೇಶವೂ ಇಲ್ಲ.

2. ಮೋದಿ ಸರಕಾರದ ಅವಧಿಯಲ್ಲಿ ಕರ್ನಾಟಕದ ತೆರಿಗೆ ಪಾಲು ಶೇ. 4.71ರಿಂದ 3.65ಕ್ಕೆ ಇಳಿದಿದ್ದೇಕೆ? ಅದನ್ನು ಸರಿ ಮಾಡುವಲ್ಲಿ ಕೇಂದ್ರದ ಮೇಲೆ ಒತ್ತಡ ತರದೆ ಕರ್ನಾಟಕದ ಬಿಜೆಪಿ ಸಂಸದರು ಮೋದಿ ಮುಂದೆ ಏಕೆ ಬಾಯಿ ಮುಚ್ಚಿ ಕೂತು ಕರ್ನಾಟಕ ದ್ರೋಹಿ ನಿಲುವನ್ನು ತಾಳಿದರು? ಎಂಬುದಕ್ಕೆ ಬೊಮ್ಮಾಯಿ ವಾದದಲ್ಲಿ ಉತ್ತರವಿಲ್ಲ.

3.ರಾಜ್ಯಗಳ ಸರಾಸರಿ ತೆರಿಗೆ ಆದಾಯದ ವಾರ್ಷಿಕ ಶೇ. 14ರಷ್ಟು ಹೆಚ್ಚುತ್ತದೆ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಜಿಎಸ್‌ಟಿ ವ್ಯವಸ್ಥೆಯಿಂದ ವಾರ್ಷಿಕ ಶೇ. 14ಕ್ಕಿಂತ ತೆರಿಗೆ ಆದಾಯ ಹೆಚ್ಚಳವಾಗದಿದ್ದಲ್ಲಿ, ಉಂಟಾಗುವ ಕೊರತೆಯನ್ನು ಮುಂದಿನ ಐದು ವರ್ಷಗಳ ಕಾಲ ಅಂದರೆ 2022ರ ತನಕ ಭರಿಸುವುದಾಗಿ ಜಿಎಸ್‌ಟಿ ಕಾಯ್ದೆಯ ಭರವಸೆ ಇತ್ತು.

ಆದರೆ 2020ರಲ್ಲಿ ಕೋವಿಡ್ ದಾಳಿಯಾದ ಮೇಲೆ ಎಲ್ಲಾ ರಾಜ್ಯಗಳ ಆರ್ಥಿಕ ಪ್ರಗತಿ ನಕಾರಾತ್ಮಕವಾಗಿದೆ ಮತ್ತು ಕೋವಿಡ್ ಪೂರ್ವ ಪರಿಸ್ಥಿತಿ ತಲುಪಲು ಇನ್ನೂ ಕೆಲ ವರ್ಷಗಳು ಬೇಕು.

ಹಾಗಿರುವಾಗ 2022ರ ಗಡುವನ್ನು ಇನ್ನೂ ಕೆಲ ವರ್ಷಗಳ ಕಾಲ ಮೋದಿ ಸರಕಾರ ಏಕೆ ವಿಸ್ತರಿಸುತ್ತಿಲ್ಲ? ತಾನು ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ಬೇಡಿಕೆ ಇಟ್ಟಿದ್ದಲ್ಲವೇ ಎಂಬ ಪ್ರಶ್ನೆಗೆ ಬೊಮ್ಮಾಯಿ ಬಡಾಯಿಯಲ್ಲಿ ಉತ್ತರವಿಲ್ಲ.

4. ಸೆಸ್ ವ್ಯವಸ್ಥೆ ಕಾಂಗ್ರೆಸ್ ಕಾಲದಲ್ಲಿ ಜಾರಿಯಾದರೂ ಅದಕ್ಕೆ ಸಂವಿಧಾನ ತಿದ್ದುಪಡಿ ಮಾಡಿ ಕೋಟೆ ಕಟ್ಟಿದ್ದು ವಾಜಪೇಯಿ ಸರಕಾರ ಎಂಬುದನ್ನು ಬೊಮ್ಮಾಯಿ ಮರೆಮಾಚುತ್ತಿದ್ದಾರೆ.

ಅಷ್ಟು ಮಾತ್ರವಲ್ಲ, ಕಳೆದ ಐದು ವರ್ಷಗಳಲ್ಲಿ ಕೇಂದ್ರ ತೆರಿಗೆಯಲ್ಲಿ ರಾಜ್ಯದ ಜೊತೆಗೆ ಹಂಚಿಕೊಳ್ಳದ ಸೆಸ್ ಮತ್ತು ಸರ್‌ಚಾರ್ಜ್‌ಗಳ ಪಾಲು ಶೇ. 8ರಿಂದ ಶೇ. 28ಕ್ಕೆ ಮುಟ್ಟಿರುವುದು ರಾಜ್ಯಕ್ಕೆ ಬಗೆಯುತ್ತಿರುವ ದ್ರೋಹವಲ್ಲವೇ ಎಂಬುದಕ್ಕೆ ಬೊಮ್ಮಾಯಿ ಬಾಯಿಗೆ ಬೀಗ ಹಾಕಲಾಗಿದೆ.

5. ಕೇಂದ್ರದಿಂದ ರಾಜ್ಯಕ್ಕೆ ಕೇಂದ್ರ ಯೋಜನೆಗಳಿಗೆ ಅನುದಾನದ ರೂಪದಲ್ಲಿ ವರ್ಗಾವಣೆಯಾಗುವ ಮೊತ್ತದಲ್ಲಿ ಕರ್ನಾಟಕ್ಕೆ ವಿಶೇಷ ಅನ್ಯಾಯವಾಗುತ್ತಿರುವ ಬಗ್ಗೆ ಬೊಮ್ಮಾಯಿ ಮೌನ ಮತ್ತು ಅದರಲ್ಲಿ ರಾಜ್ಯಗಳ ಮಾಡಬೇಕಾದ ವೆಚ್ಚದ ಪಾಲು ಹೆಚ್ಚುತ್ತಾ ಅದರ ಮೇಲಿನ ನಿಯಂತ್ರಣದಲ್ಲಿ ಮಾತ್ರ ಕೇಂದ್ರದ ಪಾತ್ರ ಹೆಚ್ಚುತ್ತಿರುವ ಫೆಡರಲ್ ವಿರೋಧಿ, ಕರ್ನಾಟಕ ದ್ರೋಹಿ ಮೋದಿ ನೀತಿಗಳ ಬಗ್ಗೆಯೂ ಬೊಮ್ಮಾಯಿಯವರದ್ದು Master Voice... ಅಥವಾ ಕುತಂತ್ರಿ ಮೌನ ಅನುಸರಿಸಿದೆ.

6.ಗ್ಯಾರಂಟಿಗಳ ಮೇಲೆ ಗೂಬೆ ಕೂರಿಸುವ ಮನುವಾದ

ಒಂದು ಜವಾಬ್ದಾರಿಯುತವಾದ ವಿರೋಧ ಪಕ್ಷವಾಗಿ ಆಳುವ ಕಾಂಗ್ರೆಸನ್ನು ಸಕಾರಣವಾಗಿ ತರಾಟೆಗೆ ತೆಗೆದುಕೊಳ್ಳಲು ಸಾಕಷ್ಟು ಕಾರಣಗಳಿವೆ. ಆದರೆ ಅದರಲ್ಲಿ ಐದು ಗ್ಯಾರಂಟಿಗಳು ಸೇರುವುದಿಲ್ಲ.

ಗ್ಯಾರಂಟಿಗಳು ಜನೋಪಯೋಗಿ ಕಲ್ಯಾಣ ಕಾರ್ಯಕ್ರಮಗಳಾಗಿದ್ದು ದಣಿದಿದ್ದ ಕರ್ನಾಟಕದ ಜನರಿಗೆ ಸ್ವಲ್ಪ ಉಸಿರು ನೀಡಿದೆ. ಆದರೆ ಅದಕ್ಕೆ ಸಂಪನ್ಮೂಲ ಒದಗಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸರಕಾರ ಅನುಸರಿಸುತ್ತಿರುವ ಮಾರ್ಗ ಇತ್ಯಾದಿಗಳು ಪ್ರಶ್ನಾರ್ಹ ಮತ್ತು ಖಂಡನಾರ್ಹ.

ಆದರೆ ಬೊಮ್ಮಾಯಿಯವರು ತಮ್ಮ ಲೇಖನದ ಪ್ರಧಾನ ವಾದವನ್ನು ಪರೋಕ್ಷವಾಗಿ ಬಡವರ ಕಲ್ಯಾಣ ಯೋಜನೆಯಾದ ಗ್ಯಾರಂಟಿಯನ್ನು ಖಂಡಿಸಲೆಂದೇ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ ಸರಕಾರದ ಪ್ರಧಾನ ವೈಫಲ್ಯವೇ ಗ್ಯಾರಂಟಿ ಎಂಬಂತೆ ಅವರ ವಾದವಿದೆ. ಇದು ಕೂಡ ಬಿಜೆಪಿ ಮತ್ತು ಬೊಮ್ಮಾಯಿಯವರ ಅಂತರ್ಗತ ಜನದ್ರೋಹಿ ಮನುವಾದಿ ಧೋರಣೆಗಳ ಪ್ರತೀಕವಾಗಿದೆ.

ಹೀಗಾಗಿ ಅಲ್ಲಿ ಬೊಮ್ಮಾಯಿಯ ವಾದ ಭಂಡತನದಿಂದಲೂ ಕೂಡಿದೆ. ಕರ್ನಾಟಕ ದ್ರೋಹಿಯೇ ಆಗಿದೆ.

ಕೃಷ್ಣಬೈರೇಗೌಡರ ನಾಜೂಕು ವಾದಗಳು ಮತ್ತು ಅರ್ಧ ಸತ್ಯಗಳು

1. ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಮುಚ್ಚಿಕ್ಕೊಳ್ಳಲು ಉತ್ಪ್ರೇಕ್ಷೆಗಳು:

ಕಾಂಗ್ರೆಸ್‌ನ ಬೈರೆೇಗೌಡರ ವಾದಗಳಲ್ಲಿ ಇರುವ ಅರ್ಧ ಸತ್ಯವು ಉಳಿದ ಅರ್ಧ ಸುಳ್ಳನ್ನು ಸಮರ್ಥಿಸಿಕೊಳ್ಳಲೆಂದೇ ಮಂಡಿಸಲಾಗಿದೆ.

ಉದಾಹರಣೆಗೆ ಬೈರೆೇಗೌಡರು ಜಿಎಸ್‌ಟಿ ಪರಿಹಾರ ಯೋಜನೆ ಹಿಂದೆಗೆದುಕೊಂಡ ಮೇಲೆ ಕರ್ನಾಟಕದ ಬಜೆಟ್‌ನಲ್ಲಿ ಶೇ. 25ರಷ್ಟು ಕೊರತೆಯಾಗಿದೆ ಎಂದು ಬರೆಯುತ್ತಾರೆ. ಆದರೆ ಇದು ಉತ್ಪ್ರೇಕ್ಷೆ.

ಜಿಎಸ್‌ಟಿ ಪರಿಹಾರವು ಒಂದು ರಾಜ್ಯದ ಸರಾಸರಿ ತೆರಿಗೆ ಸಂಗ್ರಹದ ಏರಿಕೆಯಲ್ಲಿ ಬೀಳುವ ಕೊರತೆಯನ್ನು ಮಾತ್ರ ತುಂಬುತ್ತದೆ. ಜಿಎಸ್‌ಟಿ ಮಂಡಳಿಯು ರಾಜ್ಯಗಳ ಸರಾಸರೀ ವಾರ್ಷಿಕ ತೆರಿಗೆ ಏರಿಕೆ ದರವನ್ನು ಶೇ. 14 ಎಂದು ನಿಗದಿ ಮಾಡಿದೆ.

ಅಂದರೆ ಈ ವರ್ಷ ಒಂದು ರಾಜ್ಯದ ತೆರಿಗೆ ಸಂಗ್ರಹಣೆ ರೂ. 1,00,000 ಕೋಟಿಯಾಗಿದ್ದರೆ, ಮುಂದಿನ ವರ್ಷ ಅದು 1,14,000 ಕೋಟಿ ರೂ. ಆಗುತ್ತದೆಂದು ಮಂಡಳಿಯ ಅಂದಾಜು. ಕರ್ನಾಟಕ ರಾಜ್ಯದ ತೆರಿಗೆ ಸಂಗ್ರಹಣೆ ಅದರ ಬದಲಿಗೆ ರೂ. 1,12,000 ಕೋಟಿ ಮಾತ್ರ ಆದರೆ, ಅಂದಾಜಿಗಿಂತ ಕಡಿಮೆಯಾದ 2,000 ಕೋಟಿ ರೂ. ಪರಿಹಾರವನ್ನು ಮಾತ್ರ ಮಂಡಳಿ ಕೊಡಬೇಕು. ರೂ. 14,000 ಕೋಟಿಯನ್ನಲ್ಲ. ಮೋದಿ ಸರಕಾರ ಅದನ್ನು ಕೊಡದೆ ಸತಾಯಿಸುತ್ತಿದೆ ಎಂಬುದು ನಿಜ. ಆದರ ವಿರುದ್ಧ ಹೋರಾಡಬೇಕೆನ್ನುವುದೂ ನಿಜ.

ಹಾಗೆಯೇ ಕಳೆದ ವರ್ಷ ಕರ್ನಾಟಕ ಸರಕಾರದ ಬಜೆಟ್ ರೂ. 4,09,000 ಕೋಟಿ. ಅದರಲ್ಲಿ ಜಿಎಸ್‌ಟಿ ಅನುದಾನ ಕೊರತೆ, ಹಣಕಾಸು ಆಯೋಗದ ತಾರತಮ್ಯದಿಂದ ಆದ ವಾರ್ಷಿಕ ಕೊರತೆ ಇನ್ನಿತ್ಯಾದಿಗಳೆಲ್ಲಾ ಸೇರಿ ಕರ್ನಾಟಕಕ್ಕೇ ರೂ. 25,000 ಕೋಟಿ ಅನ್ಯಾಯವಾಗಿರುವುದು ವಾಸ್ತವ. ಈ ಅನ್ಯಾಯದ ವಿರುದ್ಧವೂ ಹೋರಾಡಬೇಕೆನ್ನುವುದು ನಿಜ.

ಆದರೆ ಕೇಂದ್ರ ಮಾಡಿರುವ ಅನ್ಯಾಯದ ಮೊತ್ತ ಕರ್ನಾಟಕದ ಬಜೆಟ್‌ನ ಶೇ. 6.1ರಷ್ಟು ಮಾತ್ರ. ಉಳಿದ ಶೇ. 94ರಷ್ಟು ಬಜೆಟ್‌ನ ಆದ್ಯತೆ, ವೈಫಲ್ಯ, ಅನುಷ್ಠಾನ ಕೊರತೆ, ನೀತಿಗಳಲ್ಲಿನ ಜನವಿರೋಧಿತನ ಇವೆಲ್ಲಕ್ಕೂ ಕಾಂಗ್ರೆಸ್ ಸರಕಾರ ತನ್ನೊಳಗೆ ನೋಡಿಕೊಳ್ಳಬೇಕು.

ಬೈರೆೇಗೌಡರು ತಮ್ಮ ಲೇಖನದಲ್ಲಿ ಕೊರತೆಯಾದ ಮೊತ್ತವನ್ನು ಹಿಗ್ಗಿಸಿ ತೋರಿಸುವ ಮೂಲಕ ತಮ್ಮ ಸರಕಾರದ ಎಲ್ಲಾ ವೈಫಲ್ಯಗಳಿಗೂ ಕೇಂದ್ರ ಮಾಡುತ್ತಿರುವ ತಾರತಮ್ಯದಿಂದ ಉಂಟಾಗಿರುವ ಕೊರತೆಯೇ ಕಾರಣ ಎಂಬ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ.

2. ಗ್ಯಾರಂಟಿಗಳೇ ಸಾಧನೆ ಮತ್ತು ಗ್ಯಾರಂಟಿಗಳೇ ವೈಫಲ್ಯ

ಗ್ಯಾರಂಟಿಗಳು ಸ್ವಾಗತಾರ್ಹ ಕಲ್ಯಾಣ ಕಾರ್ಯಕ್ರಮ. ಆದರೆ ಅದಕ್ಕೆ ಕಾಂಗ್ರೆಸ್ ಸರಕಾರ ಹಣಕಾಸು ನಿಭಾಯಿಸುತ್ತಿರುವ ರೀತಿ ಕಲ್ಯಾಣದ ಉದ್ದೇಶವನ್ನೇ ವಿಫಲಗೊಳಿಸುತ್ತಿದೆ.

ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಾಗ ತನ್ನ ಐದು ಗ್ಯಾರಂಟಿಗಳಿಗೆ ಬೇಕಾದ ಸಂಪನ್ಮೂಲವನ್ನು ಆಡಳಿತದಲ್ಲಿ ದಕ್ಷತೆ, ಭ್ರಷ್ಟಾಚಾರ ನಿಗ್ರಹ ಮತ್ತು ಅಭಿವೃದ್ಧಿಗಳ ಮೂಲಕ ಒದಗಿಸಿಕೊಳ್ಳುವುದಾಗಿ ಘೋಷಿಸಿತ್ತು. ಆದರೆ ಈ ಮೂರರಲ್ಲೂ ಸಿದ್ದು ಸರಕಾರ ಘೋರವಾಗಿ ವಿಫಲವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕಲ್ಯಾಣ ಸರಕಾರ ಉಳ್ಳವರ ಮೇಲೆ ತೆರಿಗೆ ಹೆಚ್ಚಿಸಿ ಇಲ್ಲದವರಿಗೆ ನೀಡಬೇಕು. ಆದರೆ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಮಾದರಿಯೂ ಬಿಜೆಪಿ ಅಭಿವೃದ್ಧಿ ಮಾದರಿಯಂತೆ ಕಾರ್ಪೊರೇಟ್‌ಗಳಿಗೆ ರಿಯಾಯಿತಿ-ವಿನಾಯಿತಿ-ಸಬ್ಸಿಡಿ ನೀತಿ ಕೊಟ್ಟು ಓಲೈಸುವ ಮಾದರಿಯೇ ಆಗಿದೆ. ಹೀಗಾಗಿ ಅಭಿವೃದ್ಧಿಯಾದಷ್ಟೂ ತೆರಿಗೆ ಹೆಚ್ಚಳವಾಗುವುದಿರಲಿ ಕಡಿಮೆಯಾಗುತ್ತಾ ಹೋಗುತ್ತಿದೆ. ಹೀಗಾಗಿ ಗ್ಯಾರಂಟಿಗಳಿಗೆ ಬೇಕಾದ ಹಣಕಾಸನ್ನು ಇತರ ಕಲ್ಯಾಣ ಕಾರ್ಯಕ್ರಗಳಿಗೆ ನಿಧಿ ಕೊರತೆ, SಅSP-ಖಿSP ನಿಧಿಯ ದುರ್ಬಳಕೆ ಇತ್ಯಾದಿಗಳ ಮೂಲಕ ರೂಢಿಸಿಕೊಳ್ಳುತ್ತಾ ಅನ್ಯಾಯ ಮಾಡುತ್ತಿದೆ. ಇದರ ಬಗ್ಗೆ ಬೈರೆೇಗೌಡರ ಲೇಖನ ಮೌನ!

ಗ್ಯಾರಂಟಿಗಳು ಈಗಾಗಲೇ ಇರುವ ಕಲ್ಯಾಣ ಯೋಜನೆಗಳ ಜೊತೆಗೆ ಸಿಗುವ ಮತ್ತೊಂದು ಸೌಲಭ್ಯವಾಗಬೇಕಿತ್ತು. ಈಗ ಅವುಗಳ ಬದಲಿಗೆ ಸಿಗುವ ಯೋಜನೆಯಾಗುತ್ತಿದೆ.

ಈ ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿಯ ಮನುವಾದಿ ವಿರೋಧವನ್ನು ವಿರೋಧಿಸಬೇಕು. ಹಾಗೆಯೇ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕಾಂಗ್ರೆಸ್‌ನ ಅವಕಾಶವಾದಿ ಜನವಿರೋಧಿ ನೀತಿಯನ್ನು ಕೂಡ ವಿರೋಧಿಸಲೇ ಬೇಕಲ್ಲವೇ?

3. ಜಿಎಸ್‌ಟಿ ವಂಚನೆಯ ಮೂಲ: ಈ ಅನ್ಯಾಯದ ಮೂಲ ಕಾಂಗ್ರೆಸ್ ಕೂಡ ಒಪ್ಪಿಕೊಂಡು ಜಿಎಸ್‌ಟಿ ಜಾರಿಯಾದ ರೀತಿಯಲ್ಲೇ ಇದೆ. ಬೈರೆೇಗೌಡರು ಮತ್ತು ಕಾಂಗ್ರೆಸ್ ಹೇಳದೆ ಹೋಗುತ್ತಿರುವ ಮಾತೆಂದರೆ ಅತ್ಯಂತ ಪ್ರತಿಗಾಮಿ ತೆರಿಗೆ ಪದ್ಧತಿಯಾದ ಈ ಜಿಎಸ್‌ಟಿ ತೆರಿಗೆ ವ್ಯವಸ್ಥೆಯ ತಾಯಿ ಸ್ವಯಂ ಕಾಂಗ್ರೆಸೇ.

ಆದರೆ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತೆರಿಗೆಯ ಭಾರವನ್ನು ಶ್ರೀಮಂತರಿಗಿಂತ ಜಾಸ್ತಿ ಬಡವರ ಮೇಲೆ ವರ್ಗಾಯಿಸುವ ಜಿಎಸ್‌ಟಿ ವ್ಯವಸ್ಥೆಗೆ ಸಂವಿಧಾನ ತಿದ್ದುಪಡಿ ಮಾಡಬೇಕಿತ್ತು.

ಇದಕ್ಕೆ ಇತರ ಪಕ್ಷಗಳ ಮನ ಒಲಿಸಲು ಆಗಿನ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಐದು ವರ್ಷಗಳ ಕಾಲ ಖೋತಾ ಪರಿಹಾರ ಯೋಜನೆ ಮುಂದಿಟ್ಟರು. ಅದಕ್ಕಾಗಿ ಮತ್ತೆ ಜನರ ಮೇಲೆ ವಿಶೇಷ ಸೆಸ್ ಹೇರುವ ಪ್ರಸ್ತಾವವೂ ಅದರಲ್ಲಿ ಅಡಕವಾಗಿತ್ತು!. ಈ ಅನ್ಯಾಯವನ್ನು ಕಾಂಗ್ರೆಸ್ ಒಪ್ಪಿಕೊಂಡ ಮೇಲೆ ಜಿಎಸ್‌ಟಿ ಜಾರಿಯಾಗಿದ್ದು.

ಹಾಗೆಯೇ ಜಿಎಸ್‌ಟಿ ನಿರ್ವಹಿಸಲು ಎಲ್ಲಾ ರಾಜ್ಯಗಳ ಪ್ರಾತಿನಿಧ್ಯವಿರುವ ಆದರೆ ಕೇಂದ್ರ ಸರಕಾರಕ್ಕೆ ಸದಾ ಬಹುಮತವಿರುವಂತಹ ಫೆಡರಲ್ ವಿರೋಧಿ ಜಿಎಸ್‌ಟಿ ನಿರ್ವಹಣಾ ಮಂಡಳಿಯೂ ಆಗಿನ ಪ್ರಮುಖ ಪಕ್ಷದ ಕಾಂಗ್ರೆಸ್ ಒಪ್ಪಿಗೆ ಕೊಟ್ಟ ಮೇಲೆ ಅದು ಜಾರಿಯಾದದ್ದು.

ಕಾರ್ಪೊರೇಟ್‌ಗಳ ತೆರಿಗೆ ಭಾರ ಇಳಿಸಿ, ಜನಸಾಮಾನ್ಯರ ತೆರಿಗೆ ಭಾರ ಹೆಚ್ಚಿಸುವ ಈ ನವ ಉದಾರವಾದಿ ಜಿಎಸ್‌ಟಿ ತೆರಿಗೆ ನೀತಿ ಪರ ಎಂದು ಸಾಬೀತುಪಡಿಸಿಕೊಳ್ಳಲು ಎಲ್ಲಾ ವಿರೋಧ ಪಕ್ಷಗಳೂ ಪೈಪೋಟಿಯಲ್ಲಿ ಈ ಜನದ್ರೋಹಿ ಸಂವಿಧಾನ ತಿದ್ದುಪಡಿಗೆ ಒಪ್ಪಿಗೆ ನೀಡಿದ್ದವು. ಈ ಜನದ್ರೋಹಕ್ಕೆ ನೇತೃತ್ವ ವಹಿಸಿದ್ದು ಬಿಜೆಪಿ.

ಕಾಂಗ್ರೆಸ್ ಈ ಅನ್ಯಾಯವನ್ನು ಒಪ್ಪಿಕೊಂಡಿದ್ದು ಏಕೆ? ಒಪ್ಪಿಕೊಂಡ ನಂತರ ಈಗ ಐದು ವರ್ಷಗಳ ನಂತರ ಪರಿಹಾರ ರದ್ದು ಮಾಡುತ್ತಿದ್ದಾರೆ ಎಂದು ದೂರುತ್ತಿರುವುದು ಬೇಜವಾಬ್ದಾರಿಯಾಗುವುದಿಲ್ಲವೇ?

4.ಸೆಸ್ ಸುಲಿಗೆ- ಕಾಂಗ್ರೆಸ್ ಹೇಳದ್ದು:

ಮೋದಿ ಸರಕಾರ ಕೇಂದ್ರದ ತೆರಿಗೆಯಲ್ಲಿ ಶೇ. 28ರಷ್ಟು ಭಾಗವನ್ನು ಸೆಸ್ ಮತ್ತು ಸರ್‌ಚಾರ್ಜ್ ರೂಪದಲ್ಲಿ ಸುಲಿಯುತ್ತಿರುವುದರಿಂದ ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳ ಪಾಲು ಕಡಿಮೆಯಾಗುತ್ತಿದೆ ಎಂಬ ಬೈರೆೇಗೌಡರ ಮತ್ತು ಕಾಂಗ್ರೆಸ್‌ನ ವಾದ ಅಕ್ಷರಶಃ ಸತ್ಯ.

ಆದರೆ ಈ ಸತ್ಯಕ್ಕೆ ಮತ್ತೊಂದು ಮುಖವೂ ಇದೆ.

1970ರ ದಶಕದಲ್ಲಿ ಸೆಸ್ ಮತ್ತು ಸರ್‌ಚಾರ್ಜ್ ವ್ಯವಸ್ಥೆ ಪ್ರಾರಂಭವಾಗುವ ಮುನ್ನ ಕೇಂದ್ರದ ಆದಾಯ ತೆರಿಗೆಯನ್ನು ರಾಜ್ಯಗಳ ಜೊತೆಗೆ ಹಂಚಿಕೊಳ್ಳಬೇಕಾದ ಸಂಪನ್ಮೂಲಗಳಲ್ಲಿ ಸೇರಿಸುತ್ತಿರಲಿಲ್ಲ.

2000ದಲ್ಲಿ ಬಿಜೆಪಿಯ ವಾಜಪೇಯಿ ನೇತೃತ್ವದ ಸರಕಾರ ತಂದ ಸಂವಿಧಾನ ತಿದ್ದುಪಡಿಯಲ್ಲಿ ಆದಾಯ ತೆರಿಗೆಯನ್ನು-Divisible pool- ರಾಜ್ಯಗಳ ಜೊತೆ ಹಂಚಿಕೊಳ್ಳುವ ಸಂಪನ್ಮೂಲಗಳಲ್ಲಿ ಸೇರಿಸಿ, ಸೆಸ್ ಮತ್ತು ಸರ್‌ಚಾರ್ಜ್ ಹೊರಗಿಟ್ಟಿತು. ಈ ತಿದ್ದುಪಡಿಯನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳೂ ಅನುಮೋದಿಸಿದವು.

ದೇಶದ ಒಟ್ಟಾರೆ ವೆಚ್ಚದ ಹೊಣೆಗಾರಿಕೆಯಲ್ಲಿ ರಾಜ್ಯಗಳ ಪಾಲು ಶೇ. 67 ರಷ್ಟಿದ್ದರೆ ತೆರಿಗೆ ಆದಾಯದ ಪಾಲು ಮಾತ್ರ ಶೇ. 33.

ಹೀಗಿರುವಾಗ ರಾಜ್ಯಗಳ ಕಾಲು ಕತ್ತರಿಸುವಂತಹ ಬಿಜೆಪಿ ಮಾಡಿದ ತಿದ್ದುಪಡಿಗೆ ಕಾಂಗ್ರೆಸ್ ಒಪ್ಪಿಗೆ ಕೊಟ್ಟಿದ್ದೇಕೆ?

ಅಷ್ಟು ಮಾತ್ರವಲ್ಲ. ಕೇಂದ್ರದಲ್ಲಿ 2004-214ರ ತನಕ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಈ ಫೆಡರಲ್ ವಿರೋಧಿ ಸಂವಿಧಾನ ತಿದ್ದುಪಡಿಗೆ ಬದಲಾವಣೆಗಳನ್ನು ತರಲಿಲ್ಲ. ಬದಲಿಗೆ ತಾನೂ ಕೂಡ ಶೇ. 10-15ರಷ್ಟು ತೆರಿಗೆ ಸಂಪನ್ಮೂಲಗಳನ್ನು ಸೆಸ್ ಅಡಿ ಸಂಗ್ರಹಿಸುತ್ತಾ ಅಷ್ಟ್ರರಮಟ್ಟಿಗೆ ರಾಜ್ಯಗಳ ಪಾಲನ್ನು ಖೋತಾ ಮಾಡಿತ್ತು. ಅದನ್ನೇ ಬಿಜೆಪಿ ಅತಿರೇಕಕ್ಕೆ ತೆಗೆದುಕೊಂಡು ಹೋಗಿ ಶೇ. 28ರಷ್ಟು ಸೆಸ್ ಸಂಗ್ರಹಿಸುತ್ತಿದೆ.

ಆದ್ದರಿಂದ ಕರ್ನಾಟಕದ ಹಾಗೂ ಇತರ ರಾಜ್ಯಗಳಿಗೂ ಮೋದಿ ಕಾಲದಲ್ಲಿ ಅಪರಿಮಿತ ಅನ್ಯಾಯ ಹಾಗೂ ವಂಚನೆ ನಡೆಯುತ್ತಿರುವುದು ನಿಜವಾದರೂ, ಕಾಂಗ್ರೆಸ್‌ಗೂ ಇತರ ವಿರೋಧ ಪಕ್ಷಗಳಿಗೂ ಕರ್ನಾಟಕದ ಜನರು ಕ್ಲೀನ್ ಚಿಟ್ ಕೊಡಲಾಗದು.

ಹೀಗಾಗಿ ಮೋದಿ ಸರಕಾರ ನಡೆಸುತ್ತಿರುವ ಕರ್ನಾಟಕ ದರೋಡೆ ನಿಲ್ಲಬೇಕೆಂದರೆ ಕರ್ನಾಟಕದ ಜನತೆ ಮೋದಿ ಸರಕಾರದ ತಾರತಮ್ಯಗಳ ವಿರುದ್ಧ ಹೋರಾಡುತ್ತಲೇ ಕಾಂಗ್ರೆಸ್‌ನ ನೀತಿಗಳನ್ನೂ ಖಂಡಿಸಬೇಕು.

ಜನರ ಮೇಲಿನ ತೆರಿಗೆ ಶೋಷಣೆ ಮತ್ತು ರಾಜ್ಯಗಳಿಗಾಗುವ ಅನ್ಯಾಯ ಗಳನ್ನೂ ನಿಲ್ಲಿಸಲು ಈ ಕೆಳಗಿನ ಜನಾಗ್ರಹಗಳನ್ನು ಸ್ವತಂತ್ರವಾಗಿ ಮುಂದಿಡಬೇಕು:

1. ಶೇ. 67ರಷ್ಟು ವೆಚ್ಚಗಳ ಜವಾಬ್ದಾರಿ ಹೊಂದಿರುವ ರಾಜ್ಯಗಳಿಗೆ ಶೇ. 67ರಷ್ಟು ತೆರಿಗೆ ಪಾಲು ಸಿಗಬೇಕು. 2. ಸೆಸ್ ಹಾಕುವ ಅಧಿಕಾರ ರಾಜ್ಯ ಸರಕಾರಗಳಿಗೂ ನೀಡುವಂತೆ ಕಾನೂನು ತಿದ್ದುಪಡಿ ಮಾಡಬೇಕು. 3. ಕೇವಲ ಐಷಾರಾಮಿ ಹಾಗೂ ವಿಲಾಸಿ ಸರಕು ಮತ್ತು ಸೇವೆಗಳ ಮೇಲೆ ಮಾತ್ರ ಸೆಸ್ ಹಾಕುವಂತೆ ಕಾನೂನು ತಿದ್ದುಪಡಿ ತರಬೇಕು. 4. ಪೆಟ್ರೋಲ್ ಮತ್ತು ಡೀಸೆಲ್ ನಂಥ ಹಣದುಬ್ಬರ ಕಾರಕ ಸರಕುಗಳ ಮೇಲೆ ಸೆಸ್ ಮತ್ತು ಸರ್‌ಚಾರ್ಜ್ ನಿಲ್ಲಿಸಬೇಕು. 5. ರಾಜ್ಯಗಳಿಗೂ ಕೂಡ ಕಾರ್ಪೊರೇಟ್ ತೆರಿಗೆ ವಿಧಿಸುವ ಅಧಿಕಾರ ಒದಗಬೇಕು. 6. ಕೇಂದ್ರದ ಡಿವಿಸಬಲ್ ಪೂಲ್‌ನ ರಾಜ್ಯವಾರು ತೆರಿಗೆ ಹಂಚಿಕೆಯ ಸೂತ್ರವನ್ನು ಕೇಂದ್ರದ ಕ್ಯಾಬಿನೆಟ್ ತೀರ್ಮಾನ ಮಾಡದೆ ರಾಜ್ಯ ಸರಕಾರಗಳ ಸಮಾಲೋಚನೆಯೊಂದಿಗೆ ನಿಗದಿಯಾಗಬೇಕು. 7. ಜಿಎಸ್‌ಟಿ ವ್ಯವಸ್ಥೆ ಮಾರ್ಪಾಡಾಗಬೇಕು. 8.ದೇಶದ ಒಟ್ಟಾರೆ ತೆರಿಗೆ ಆದಾಯದಲ್ಲಿ ಜಿಎಸ್‌ಟಿ ಪಾಲು ಕಡಿಮೆಯಾಗುತ್ತಾ ಅತಿ ಶ್ರೀಮಂತ, ಶ್ರೀಮಂತ, ಮೇಲ್ಮಧ್ಯಮ ವರ್ಗಗಳ ಮೇಲೆ ವಿಧಿಸುವ ತೆರಿಗೆ ಆದಾಯಗಳು ಹೆಚ್ಚಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಸುಂದರ್

contributor

Similar News