‘ವಂದೇ ಮಾತರಂ’ ಪೂರ್ಣ ಗಾಯನ: ಮೋದಿ ಸರಕಾರದ ಫ್ಯಾಶಿಸ್ಟ್ ರಾಜಕಾರಣ
ದೇಶದ ಲಾಂಛನಗಳು ಯಾವುದೇ ಮತಧರ್ಮಗಳ ಸಂಕೇತವಾಗದಿದ್ದಾಗ ದೇಶದ ಎಲ್ಲಾ ಜನರೂ ಮತಧರ್ಮಗಳ ಹಂಗಿಲ್ಲದೆ ಸ್ವಪ್ರೇರಣೆಯಿಂದ ಗೌರವಿಸುತ್ತಾರೆ. ಆದರೆ ವಂದೇ ಮಾತರಂನಲ್ಲಿ ಭಾರತ ಮಾತೆಯನ್ನು ಹಿಂದೂ ಬ್ರಾಹ್ಮಣ ದೇವತೆಯನ್ನಾಗಿ ಚಿತ್ರಿಸಿ ಅದಕ್ಕೆ ದೇಶದ ಎಲ್ಲಾ ಮತಧರ್ಮೀಯರು ಎದ್ದು ನಿಂತು ಗೌರವಿಸಬೇಕೆಂದು ಆದೇಶಿಸುವುದು, ಹಿಂದೂಗಳಲ್ಲದ ಸ್ವದೇಶೀಯರ ದೇಶಪ್ರೇಮವನ್ನು ಅವಮಾನಿಸುವ ಆದೇಶ. ಅದರಲ್ಲೂ ವಿಗ್ರಹಾರಾಧನೆ ಸಮ್ಮತವಲ್ಲದ ಮತ್ತು ಮುಸ್ಲಿಮ್ ನರಮೇಧಕ್ಕೆ ಕರೆಕೊಡುವ ಗೀತೆಯನ್ನು ಗೌರವಿಸಿ ಎಂದು ಆದೇಶಿಸುವುದು ಮುಸ್ಲಿಮರನ್ನು ದಿನನಿತ್ಯ ಪರಕೀಯಗೊಳಿಸಿ ದಾಳಿ ಮಾಡುವ ಫ್ಯಾಶಿಸ್ಟ್ ರಣತಂತ್ರವೇ ಹೊರತು ದೇಶಪ್ರೇಮವಲ್ಲ.
ಕಳೆದ ವಾರ ಭಾರತವು ಮೋದಿ ಸರಕಾರದ ಸಾಲುಸಾಲು ದ್ರೋಹಗಳ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿತ್ತು. ಮೋದಿ ಮತ್ತವರ ಮಂತ್ರಿಗಳು ಅಪ್ರಾಪ್ತ ವಯಸ್ಕ ಮಕ್ಕಳ ಕಾಮೋದ್ಯಮಿ ಎಪ್‌ಸ್ಟೀನ್ ಜೊತೆ ಸಂಪರ್ಕವಿಟ್ಟುಕೊಂಡಿದ್ದರ ಬಗ್ಗೆ, ಜನರಲ್ ನರವಣೆ ಪುಸ್ತಕವು ಬಯಲು ಮಾಡಿರುವಂತೆ ಚೀನಾ ದಾಳಿಯ ಸಂದರ್ಭದಲ್ಲಿ ಮೋದಿ ಸರಕಾರ ಭಾರತದ ಭದ್ರತೆಯ ವಿಷಯದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡಿರುವ ಬಗ್ಗೆ ಮತ್ತು ಅಮೆರಿಕದ ಜೊತೆಗಿನ ವಾಣಿಜ್ಯ ಒಪ್ಪಂದದಲ್ಲಿ ಭಾರತವನ್ನು ಮೋದಿ ಸರಕಾರ ಅಮೆರಿಕಕ್ಕೆ ಮಾರಿಕೊಂಡಿರುವ ಬಗ್ಗೆ ದೇಶವು ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಆ ಸಂದರ್ಭದಲ್ಲಿ ದಿಢೀರನೆ ಮೋದಿ ಸರಕಾರ ಇನ್ನುಮುಂದೆ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ಮತ್ತು ಶಾಲೆಗಳಲ್ಲಿ ರಾಷ್ಟ್ರಗೀತೆಯಾದ ಜನಗಣಮನ ಹಾಡುವುದಕ್ಕೆ ಮುನ್ನ ‘ವಂದೇ ಮಾತರಂ’ ಗೀತೆಯ ಆರೂ ಚರಣಗಳನ್ನು ಕಡ್ಡಾಯವಾಗಿ ಹಾಡಬೇಕೆಂದೂ ಮತ್ತು ಅದನ್ನು ಹಾಡುವಾಗ ಎಲ್ಲರೂ ಕಡ್ಡಾಯವಾಗಿ ಎದ್ದು ನಿಂತು ಗೌರವ ಸೂಚಿಸಬೇಕೆಂದೂ ಆದೇಶ ಹೊರಡಿಸಿತು.
ಈ ಕುತಂತ್ರದ ತಕ್ಷಣದ ಉದ್ದೇಶ ಮೋದಿ ಸರಕಾರದ ದ್ರೋಹಗಳ ಬಗೆಗಿನ ಚರ್ಚೆಯನ್ನು ಹಿಂದಕ್ಕೆ ತಳ್ಳುವುದೇ ಆಗಿದೆ, ಆದರೆ ಅದರಷ್ಟೇ ಮುಖ್ಯವಾಗಿ ವಂದೇ ಮಾತರಂ ಗೀತೆಯನ್ನು ತನ್ನ ಕ್ಷುದ್ರ ಹಿಂದುತ್ವವಾದಿ ರಾಜಕಾರಣಕ್ಕೆ ಬಳಸಿಕೊಂಡು ದೇಶವನ್ನು ಮತ್ತಷ್ಟು ಧ್ರುವೀಕರಿಸುವುದೂ ಕೂಡ ಮೋದಿ ಸರಕಾರದ ದೂರಗಾಮಿ ಉದ್ದೇಶವಾಗಿದೆ.
ಏಕೆಂದರೆ ‘ವಂದೇ ಮಾತರಂ’ನ ಮೊದಲೆರಡು ಚರಣಗಳನ್ನು ಮಾತ್ರ ಹಾಡಬಹುದೆಂದೂ, ಉಳಿದ ನಾಲ್ಕು ಚರಣಗಳಲ್ಲಿ ದೇಶದ ಮತಧರ್ಮಾತೀತ ಸೆಕ್ಯುಲರ್ ಅಸ್ಮಿತೆಗೆ ಮತ್ತು ಸೌಹಾರ್ದ ಬದುಕಿಗೆ ಧಕ್ಕೆ ತರುವ ಆಶಯಗಳಿರುವುದರಿಂದ ಹಾಡುವ ಅಗತ್ಯವಿಲ್ಲವೆಂದೂ ದೇಶವು ಪಕ್ಷಾತೀತವಾಗಿ ಒಕ್ಕೊರಲಿಂದ ತೀರ್ಮಾನ ಮಾಡಿ ಒಂಭತ್ತು ದಶಕಗಳೇ ಕಳೆದು ಹೋಗಿವೆ. ಈಗ ಮತ್ತೆ ಅದನ್ನು ಕೆದಕುವ ಅಗತ್ಯವೇನಿತ್ತು?
1937ರಲ್ಲಿ ಬ್ರಿಟಿಷ್ ಆಳ್ವಿಕೆಯಡಿಯಲ್ಲೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಆಡಳಿತದ ಪ್ರಾಂತೀಯ ಸರಕಾರಗಳಡಿಯಲ್ಲಿ ಶಾಲೆಗಳಲ್ಲಿ ವಂದೇ ಮಾತರಂ ಹಾಡಬೇಕೇ ಎಂಬ ಪ್ರಶ್ನೆ ಆಗಲೇ ಚರ್ಚೆಗೆ ಬಂದಿತ್ತು. ಆಗ ನೆಹರೂ ಮತ್ತು ಬಿಜೆಪಿಯವರು ಬಹುವಾಗಿ ಆರಾಧಿಸುವ ಸರ್ದಾರ್ ಪಟೇಲ್, ಸುಭಾಷ್ ಚಂದ್ರ ಬೋಸರಿದ್ದ ಕಾಂಗ್ರೆಸ್‌ನ ಉನ್ನತ ಸಮಿತಿಯು ರವೀಂದ್ರನಾಥ ಟಾಗೋರರ ಜೊತೆಗಿನ ಸಮಾಲೋಚನೆಯೊಂದಿಗೆ ವಂದೇ ಮಾತರಂನ ಮೊದಲೆರಡು ಚರಣಗಳನ್ನು ಮಾತ್ರ ಹಾಡಿದರೆ ಸಾಕೆಂದು ತೀರ್ಮಾನಿಸಿತು. ಉಳಿದ ನಾಲ್ಕು ಚರಣಗಳಲ್ಲಿ ಕೋಮುದ್ವೇಷ ಬಿತ್ತುವ ಅಂಶಗಳಿತ್ತು ಎಂಬ ಬಗ್ಗೆ ಬಿಜೆಪಿ ಮಾನ್ಯ ಮಾಡುವ ಪಟೇಲರಿಗೂ ಅನುಮಾನವಿರಲಿಲ್ಲ. ನೇತಾಜಿ ಬೋಸರಂತೂ ಆಗಲೂ, ಆ ನಂತರ ಭಾರತೀಯ ದೇಶಪ್ರೇಮಿ ಹಿಂದೂ, ಮುಸ್ಲಿಮ್, ಸಿಖ್ ಸೈನಿಕರನ್ನು ಸೇರಿಸಿ ಕಟ್ಟಿದ ಆಝಾದ್ ಹಿಂದ್ ಫೌಜ್‌ನಲ್ಲಿ ಕೂಡ ವಂದೇ ಮಾತರಂ ಚರಣಗಳನ್ನು ಹಾಡುತ್ತಿರಲಿಲ್ಲ.
ಸಂವಿಧಾನ ಸಭೆಯಲ್ಲಿ ಈ ಬಗ್ಗೆ ವಿಶೇಷ ಚರ್ಚೆ ನಡೆಯಲಿಲ್ಲವಾದರೂ, ಅಂತಿಮ ದಿನದಂದೂ ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದ ಬಾಬು ರಾಜೆಂದ್ರ ಪ್ರಸಾದರು ಜನಗಣಮನವು ರಾಷ್ಟ್ರಗೀತೆಯಾಗಿಯೂ, ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರಗಾನವಾಗಿ ಒಪ್ಪಿಕೊಳ್ಳಬೇಕೆಂದು ತೀರ್ಮಾನವನ್ನು ಪ್ರಸ್ತುತಪಡಿಸಿದರು.
ಅದಕ್ಕೆ ಇಡೀ ಸಂವಿಧಾನ ಸಭೆ ಒಕ್ಕೊರಲಿಂದ ಸಮ್ಮತಿ ವ್ಯಕ್ತಪಡಿಸಿತು. ಆ ಅನುಮೋದನೆಯಲ್ಲಿ ಬಿಜೆಪಿ ಮತ್ತು ಮೋದಿಯವರು ಆರಾಧಿಸುವ ಸರ್ದಾರ್ ಪಟೇಲರು ಮಾತ್ರವಲ್ಲದೆ ಬಿಜೆಪಿಯ ಮೊದಲ ಅವತಾರವಾಗಿದ್ದ ಭಾರತೀಯ ಜನಸಂಘದ ಮೊದಲ ಅಧ್ಯಕ್ಷರಾದ ಮತ್ತು ಆಗ ಹಿಂದೂ ಮಹಾ ಸಭಾದ ರಾಷ್ಟ್ರೀಯ ನಾಯಕರೂ ಆಗಿದ್ದ ಶಾಮ ಪ್ರಸಾದ್ ಮುಖರ್ಜಿಯವರ ಅನುಮೋದನೆಯೂ ಸೇರಿಕೊಂಡಿತ್ತು.
ಹೀಗಾಗಿ ಇದು ಮುಗಿದು ಹೋದ ಕಥೆ. ಆದರೂ ಪ. ಬಂಗಾಳದ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ವರ್ಷ ಮತ್ತೆ ಮೋದಿ ಸರಕಾರ ವಂದೇ ಮಾತರಂ ಅನ್ನು ಜನಗಣಮನದ ವಿರುದ್ಧ ಎತ್ತಿ ಕಟ್ಟಲು ಪ್ರಾರಂಭಿಸಿದರು. ಹಾಗೂ ಈ ವರ್ಷ ವಂದೇ ಮಾತರಂ ಬರೆದು 150 ವರ್ಷವಾಗಿರುವುದರಿಂದ ದೇಶಾದ್ಯಂತ ಕಾರ್ಯಕ್ರಮಗಳನ್ನು ಯೋಜಿಸಲು ಪ್ರಾರಂಭಿಸಿತು.
ಅದರ ಮುಂದುವರಿಕೆಯಾಗಿ ಈಗ ವಂದೇ ಮಾತರಂನ ಮೊದಲೆರಡು ಚರಣಗಳನ್ನು ಮಾತ್ರವಲ್ಲದೆ ಉಳಿದ ನಾಲ್ಕು ಚರಣಗಳನ್ನು ಕಡ್ಡಾಯವಾಗಿ ಹಾಡಲೇ ಬೇಕೆಂದು ಕೋಮುವಾದಿ ಕುತಂತ್ರ ನಡೆಸಿದೆ.
ಮೋದಿ ಸರಕಾರದ ಈ ಹಿಂದುತ್ವವಾದಿ ಫ್ಯಾಶಿಸ್ಟ್ ಕುತಂತ್ರವನ್ನು ಅರ್ಥಮಾಡಿಕೊಳ್ಳಬೇಕೆಂದರೆ ವಂದೇ ಮಾತರಂ ಹಾಡಿನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ.
ವಂದೇ ಮಾತರಂ-ಸುಂದರ ದೇಶಸ್ತುತಿಯಿಂದ ಕರಾಳ ದ್ವೇಷ ಭಿತ್ತಿಯೆಡೆಗೆ..
ವಂದೇ ಮಾತರಂ ಗೀತೆಯನ್ನು ಬರೆದದ್ದು ಬಂಗಾಳದ ಖ್ಯಾತ ಸಾಹಿತಿ ಮತ್ತು ಕವಿ ಬಂಕಿಮ ಚಂದ್ರ ಚಟರ್ಜಿಯವರು (1838-1894). 18ನೇ ಶತಮಾನದಲ್ಲಿ ಕೊನೆಯ ಭಾಗದಲ್ಲಿ ಅವರು ಬ್ರಿಟಿಷ್ ಆಡಳಿತದಲ್ಲಿ ಅಧಿಕಾರಿಯೂ ಆಗಿದ್ದರು. ಇವರ ಕಾಲಘಟ್ಟದಲ್ಲೇ ಬ್ರಿಟಿಷರು ಭಾರತದ ಮೊತ್ತ ಮೊದಲ ಜನಗಣತಿಯನ್ನು 1871ರಲ್ಲಿ ಮಾಡಿದರು. ಆ ಜನಗಣತಿಯಂತೆ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಅವಿಭಜಿತ ಬಂಗಾಳ, ಬಿಹಾರ, ಜಾರ್ಖಂಡ್ ಇತ್ಯಾದಿಗಳಿದ್ದ ಬಂಗಾಳ ಪ್ರೆಸಿಡೆನ್ಸಿಯ ಜನಸಂಖ್ಯೆ ಏಳು ಕೋಟಿ.
ವಂದೇ ಮಾತರಂ ಹಾಡಿನ ಮೂರನೇ ಚರಣದಲ್ಲಿ ಬರುವ ಏಳು ಕೋಟಿ ಕಂಠಗಳು ನಿನ್ನ ಸ್ತುತಿಯನ್ನು ಮಾಡುತ್ತವೆ ಎಂಬ ವಾಕ್ಯದಿಂದಾಗಿ ಈ ಹಾಡನ್ನು 1872ರ ಸೆನ್ಸಸ್ ಅಂಕಿಅಂಶಗಳು ಬಂದ ನಂತರದಲ್ಲಿ ಬರೆದದ್ದು ಎಂದು ಇತಿಹಾಸಕಾರರು ಊಹಿಸುತ್ತಾರೆ. ಅರಬಿಂದೋ ಘೋಷ್ ಅವರು ಈ ಗೀತೆಯನ್ನು 1875ರಲ್ಲಿ ಬರೆದದ್ದು ಎಂದು ಬರೆದಿದ್ದಾರೆ. ಅದನ್ನು ಆಧರಿಸಿಯೇ 2025ರಲ್ಲಿ ಅದರ 150ನೇ ವರ್ಷವನ್ನು ಮೋದಿ ಸರಕಾರ ಆಚರಿಸುತ್ತಿದೆ.
ಬಂಕಿಮ ಚಂದ್ರರ ಹತ್ತಿರದ ಸಂಬಂಧಿಗಳು ಮತ್ತು ಇತಿಹಾಸಕಾರರು ಬರೆದಿರುವ ಚರಿತ್ರೆಗಳ ಪ್ರಕಾರ ಈಗ ಹಾಲಿ ಇರುವ 27 ಸಾಲುಗಳ ವಂದೇ ಮಾತರಂ ಗೀತೆಯ ಮೊದಲ 12 ಸಾಲುಗಳನ್ನು ಬರೆದದ್ದು 1875ರಲ್ಲಿ ಎಂದು ಊಹಿಸಲಾಗಿದೆ. ಈ 12 ಸಾಲುಗಳು:
ವಂದೇ ಮಾತರಂ ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಶುಭ್ರ ಜ್ಯೋತ್ಸ್ನಾಂ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ಧ್ರುಮದಳ ಶೋಭಿನೀಂ..
ಸಪ್ತಕೋಟಿ ಕಂಠ ಕಲಕಲ ನಿನಾದ ಕರಾಲೆ
ದ್ವಿಸಪ್ತಕೋಟಿ ಭುಜೌ ಘೃತ ಖರಕರವಾಲೆ
ಕೆ ಬಲೆ ಮಾ ತುಮಿ ಅಬಲೇ
ಎಂದು ಶುದ್ಧ ಸಂಸ್ಕೃತದಲ್ಲಿ ಭಾರತದ ಪ್ರಕೃತಿಯನ್ನು ಕಾವ್ಯಾತ್ಮಕವಾಗಿ ಮತ್ತು ಲಯಬದ್ಧವಾಗಿ ವರ್ಣಿಸುತ್ತವೆ. ಇದರಲ್ಲಿ ಯಾವುದೇ ಧಾರ್ಮಿಕ ಪೂರ್ವಾಗ್ರಹಗಳು ಕಾಣುವುದಿಲ್ಲ.
ಆ ನಂತರದಲ್ಲಿ ಬಂಕಿಮರು 1882ರಲ್ಲಿ ‘ಆನಂದ ಮಠ’ ಎಂಬ ಕಾದಂಬರಿಯನ್ನು ಬರೆಯುತ್ತಾರೆ. ಆ ಕಾದಂಬರಿಯ ಘಟನಾವಳಿ ಮತ್ತು ಪಾತ್ರ ಪೋಷಣೆಯ ಭಾಗವಾಗಿ ಮೇಲಿನ 12 ಸಾಲುಗಳ ಜೊತೆಗೆ ಹೊಸದಾಗಿ ಇನ್ನು 15 ಸಾಲುಗಳನ್ನು ಬರೆದು ಅದರಲ್ಲಿ ಸೇರಿಸುತ್ತಾರೆ.
ಆನಂದ ಮಠ-ಮುಸ್ಲಿಮ್ ದ್ವೇಷದ ಬ್ರಿಟಿಷ್ ಪರ ಕಾದಂಬರಿ
ಆನಂದಮಠ ಕಾದಂಬರಿಯನ್ನು ಬಂಕಿಮರು ಬರೆದದ್ದು 1882ರಲ್ಲಿಯಾದರೂ ಅದರ ವಸ್ತು ಮತ್ತು ಕಾಲಘಟ್ಟ 1770-75ರದ್ದು. ಆಗತಾನೇ ಬಂಗಾಳದ ಸ್ವತಂತ್ರ ನವಾಬ ಸಿರಾಜುದ್ಧೌಲರನ್ನು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿ ಸೋಲಿಸಿ ಇಡೀ ಬಂಗಾಳ ಪ್ರಾಂತದಲ್ಲಿ ತನ್ನ ಗುಲಾಮಿ ನವಾಬರ ಮೂಲಕ ರೈತಾಪಿಯ ರಕ್ತ ಹೀರಲು ಪ್ರಾರಂಭಿಸಿರುತ್ತದೆ.
ಇದರ ವಿರುದ್ಧ ಬಂಗಾಳ ಪ್ರಾಂತದಲ್ಲಿ ಹಿಂದೂ ಸನ್ಯಾಸಿಗಳು ಮತ್ತು ಮುಸ್ಲಿಮ್ ಫಕೀರರು ಒಟ್ಟಾಗಿ ನವಾಬ ಮತ್ತು ಬ್ರಿಟಿಷರ ವಿರುದ್ಧ ಸಶಸ್ತ್ರ ದಂಗೆಯನ್ನು ಮಾಡಿದ್ದು ಇತಿಹಾಸ. ಆದರೆ ಈಸ್ಟ್ ಇಂಡಿಯಾ ಕಂಪೆನಿ ನವಾಬನ ಸಹಾಯದೊಂದಿಗೆ ಸನ್ಯಾಸಿ ಮತ್ತು ಫಕೀರರು ಇಬ್ಬರನ್ನು ಕೊಂದು ಹಾಕುತ್ತದೆ ಮತ್ತು ದಂಗೆಯನ್ನು ಹತ್ತಿಕ್ಕುತ್ತದೆ.
ಬಂಕಿಮರ ಕಾದಂಬರಿಯ ವಸ್ತು ಇದೇ ಆಗಿದ್ದರೂ ಕಾದಂಬರಿಯಲ್ಲಿ ಇದು ಸನ್ಯಾಸಿ ಮತ್ತು ಫಕೀರರ ಜಂಟಿ ಬಂಡಾಯವಾಗದೆ ಕೇವಲ ಹಿಂದೂ ಸನ್ಯಾಸಿಗಳ- ಸಂತಾನರ ಬಂಡಾಯ ಮಾತ್ರವಾಗುತ್ತದೆ ಹಾಗೂ ಶತ್ರು ನವಾಬ ಮತ್ತು ಬ್ರಿಟಿಷರಿಬ್ಬರೂ ಆಗದೆ ಕೇವಲ ನವಾಬ ಮಾತ್ರ ಆಗುತ್ತಾನೆ. ನವಾಬ ಮಾತ್ರವಲ್ಲ ಹಳ್ಳಿಗಳ ಸಾಮಾನ್ಯ ಮುಸ್ಲಿಮರೂ ಶತ್ರುಗಳಾಗುತ್ತಾರೆ. ಹೀಗೆ ಕಾದಂಬರಿ ಚರಿತ್ರೆಯನ್ನು ವಿಕೃತಗೊಳಿಸಿ ಬ್ರಿಟಿಷ್ ಪರವಾಗಿರುವ ಮುಸ್ಲಿಮ್ ವಿರೋಧಿ ಕೋಮು ಕಥನವಾಗಿ ಬಿಡುತ್ತದೆ.
ಬರಗಾಲದಿಂದ ತನ್ನ ಹಿಂದಿನ ಎಲ್ಲಾ ವೈಭವವನ್ನು ಕಳೆದುಕೊಂಡು ಹೆಂಡತಿ ಮತ್ತು ಮಗಳೊಂದಿಗೆ ಬದುಕನ್ನು ಅರಸುತ್ತಾ ಗುಳೆ ಹೊರಡುವ ಬ್ರಾಹ್ಮಣ ಭೂಮಾಲಕ ಮಹೇಂದ್ರ ಇದರ ಕಥಾನಾಯಕ. ಆದರೆ ಮಹೇಂದ್ರ ಇಲ್ಲಿ ಕಳೆದು ಹೋದ ಹಿಂದೂ ಬ್ರಾಹ್ಮಣ ವೈಭವಕ್ಕೆ ಪ್ರತಿನಿಧಿಯಷ್ಟೆ. ಹೀಗಾಗಿ ಮತ್ತೆ ಆ ವೈಭವವನ್ನು ಗಳಿಸಿಕೊಳ್ಳುವುದು ಹೇಗೆ ಎಂಬುದೇ ಆನಂದ ಮಠದ ನಿಜವಾದ ಕಥೆ. ಆದರೆ ಇಲ್ಲಿ ವೈಭವ ಕಿತ್ತುಕೊಂಡವರು ಮುಸ್ಲಿಮ್ ದೊರೆಗಳು.
ಹೀಗಾಗಿ ಈ ದೇಶದ ಪ್ರಧಾನ ಶತ್ರುಗಳು ಮುಸ್ಲಿಮರೆಂಬುದೇ ಕಾದಂಬರಿಯ ಸಂದೇಶ. ಆದ್ದರಿಂದಲೇ ಕಾದಂಬರಿಯು ಬರಗಾಲದ ಬವಣೆ, ರೈತಾಪಿಗಳು ಇರುವೆಗಳಂತೆ ಸಾಯುತ್ತಿರುವ ದೃಶ್ಯಗಳಿಂದ ಪ್ರಾರಂಭವಾದರೂ ಅವೆಲ್ಲವೂ ನಂತರ ಸಂಪೂರ್ಣ ಮರೆಯಾಗಿ ಬಿಡುತ್ತದೆ. ಅದೇ ರೀತಿ ಈ ಬರಗಾಲಕ್ಕೆ ಕಾರಣವಾದ ಬ್ರಿಟಿಷ್ ಆಡಳಿತದ ಪ್ರಸ್ತಾಪವೂ ಕಾದಂಬರಿಯಲ್ಲಿ ಬರುವುದಿಲ್ಲ.
ಕಾದಂಬರಿಯಲ್ಲಿ ಮುಸ್ಲಿಮ್ ದರೋಡೆಕೋರರು ಮತ್ತು ಮುಸ್ಲಿಮ್ ನವಾಬರ ದಾಳಿ ಇವೆರಡರ ವಿರುದ್ಧ ಸಮರ ಸಾರಲು ಹಿಂದೂಗಳು ಸಂಸಾರವನ್ನು ತೊರೆದು ಸನ್ಯಾಸಿಗಳಾಗಿ ಸಶಸ್ತ್ರ ಬಂಡಾಯ ಹೂಡಿರುತ್ತಾರೆ. ಮಹೇಂದ್ರನನ್ನು ಈ ಬಂಡಾಯದಲ್ಲಿ ಸೇರುವಂತೆ ಮಾಡಲು ಆತನನ್ನು ಗುಪ್ತ ಗುಹೆಗೆ ಕರೆದುಕೊಂಡು ದೇವಿ-ಭಾರತ ಮಾತೆಯ ದರ್ಶನ ಮಾಡಿಸಲಾಗುತ್ತದೆ.
ಭಾರತ ಮಾತೆಯಲ್ಲ ಮುಸ್ಲಿಮರ ಬಲಿ ಕೇಳುವ ಕಾಳಿ!
ಆ ದೇವಿಯ ಮುಂದೆ ಮುಸ್ಲಿಮರ ನರಮೇಧ ನಡೆಸಿ ಈ ದೇಶವನ್ನು ವಿಮೋಚನೆಮಾಡುವ ವೀರ ಪ್ರತಿಜ್ಞೆಯ ಭಾಗವಾಗಿಯೇ ವಂದೇ ಮಾತರಂ ಹಾಡನ್ನು ಹಾಡಲಾಗುತ್ತದೆ. ವಂದೇ ಮಾತರಂ ಹಾಡುತ್ತಲೇ ಮಹೇಂದ್ರನಂತಹವರು ಮುಸ್ಲಿಮರ ಮಾರಣ ಹೋಮಕ್ಕೆ ಸಜ್ಜಾಗುತ್ತಾರೆ. ಬರಗಾಲದ ಬವಣೆಯಿಂದ ಹಿಂದೂಗಳಷ್ಟೇ ಮುಸ್ಲಿಮ್ ರೈತರು ಸಹ ತುತ್ತಾಗಿ ಇರುವೆಗಳಂತೆ ಸಾಯುತ್ತಿದ್ದರೂ ಇಡೀ ಮುಸ್ಲಿಮ್ ಸಮುದಾಯವನ್ನೇ ಹಿಂದೂಗಳ ಬವಣೆಗೆ ಕಾರಣವೆಂಬಂತೆ ಚಿತ್ರಿಸಲಾಗಿದೆ.
ಹೀಗೆ ಕಾದಂಬರಿ ಮೊದಲಿನಿಂದಲೂ ಇಡೀ ಮುಸ್ಲೀಮ್ ಸಮುದಾಯವನ್ನೇ ದೇಶದಿಂದ ಬಿಟ್ಟೋಡಿಸುವಂತೆ ಮಾಡುವುದನ್ನು ತನ್ನ ಗುರಿಯನ್ನಾಗಿರಿಗಿಸಿಕೊಳ್ಳುತ್ತದೆ.
ಕಾದಂಬರಿಯ ನಾಯಕನಾದ ಸತ್ಯಾನಂದ ಘೋಷಿಸುವಂತೆ ‘‘ನಮಗೆ ಅಧಿಕಾರ ಬೇಕಿಲ್ಲ. ನಮ್ಮ ಉದ್ದೇಶ ಎಲ್ಲಾ ಮುಸ್ಲಿಮರನ್ನು ಕೊಂದುಹಾಕುವುದು. ಏಕೆಂದರೆ ಅವರು ನಮ್ಮ ದೇವರ ಶತ್ರುಗಳು!’’. ಇದೇ ಆ ಕಾದಂಬರಿಯ ಪ್ರಧಾನ ಧಾತು. ಸನಾತನ ಧರ್ಮದ ಪುನರುತ್ಥಾನವೇ ನಮ್ಮ ಗುರಿಯೆಂದು ಘೋಷಿಸುವ ಆನಂದಮಠದ ಬಂಡಾಯಗಾರರು ತಮ್ಮನ್ನು ತಾವು ಸನಾತನಿಗಳೆಂದೇ ಗುರುತಿಸಿಕೊಳ್ಳುತ್ತಾರೆ.
ಆನಂದ ಮಠ ಕಾದಂಬರಿಯು ಎಷ್ಟೇ ದೇಶಪ್ರೇಮಿ ಎಂಬ ಪ್ರಚಾರ ಪಡೆದುಕೊಂಡಿದ್ದರೂ ಕಾದಂಬರಿಯಲ್ಲಿ ಮಾತ್ರ ಅದರ ಬ್ರಿಟಿಷ್ ವಸಾಹತುಶಾಹಿ ಪಕ್ಷಪಾತ ಮತ್ತು ಮುಸ್ಲಿಮ್ ದ್ವೇಷವನ್ನು ಕಿಂಚಿತ್ತೂ ಮುಚ್ಚುಮರೆ ಮಾಡಿಲ್ಲ. ಅದರ ಕೆಲವು ಆಯ್ದ ಭಾಗಗಳನ್ನು ಓದಿದರೂ ಅದು ಸ್ಪಷ್ಟವಾಗುತ್ತದೆ.
ಬಂಕಿಮಚಂದ್ರರ ಆನಂದ ಮಠ ಕಾದಂಬರಿಯನ್ನು ವೆಂಕಟಾಚಾರ್ಯ ಅವರು 1960ರ ಮೊದಲ ಭಾಗದಲ್ಲೇ ಕನ್ನಡಕ್ಕೆ ಅನುವಾದಿಸಿದ್ದರು. ಅದಲ್ಲದೆ ಈ ಕಾದಂಬರಿಯ ಇನ್ನೂ ಮೂರು ಕನ್ನಡ ಅನುವಾದಗಳಾಗಿವೆ. ಇದನ್ನು ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ 2007ರಲ್ಲಿ ಮರುಮುದ್ರಣ ಮಾಡಿ ಪ್ರಕಟಿಸಿತ್ತು.
ಇಂಥ ಮುಸ್ಲಿಮ್ ದ್ವೇಷದ ಕಾದಂಬರಿಯಲ್ಲಿ ನಾಯಕ ಮಹೇಂದ್ರನಿಗೆ ಮುಸ್ಲಿಮ್ ನರಮೇಧ ನಡೆಸಲು ದೀಕ್ಷೆ ಕೊಡುವ ಭಾಗವಾಗಿ ಈಗಾಗಲೇ ಬರೆದಿದ್ದ ವಂದೇ ಮಾತರಂ ಹಾಡನ್ನು ಬಂಕಿಮಚಂದ್ರರು ಮತ್ತಷ್ಟು ವಿಸ್ತರಿಸಿ ಬರೆಯುತ್ತಾರೆ.
ಆನಂದಮಠ ಕಾದಂಬರಿ ಬರೆಯುವುದಕ್ಕೆ ಮುಂಚೆ ಬರೆದಿದ್ದ ಮೊದಲ 12 ಸಾಲುಗಳಲ್ಲಿ ಭಾರತವು ಹಸನ್ಮುಖಿ ಕರುಣಾಮಯಿ ಧರ್ಮಾತೀತ ಜಗದ್ಧಾತ್ರಿಯಾಗಿ ಚಿತ್ರಿತವಾದರೆ ನಂತರ 15 ಸಾಲುಗಳಲ್ಲಿ ಆ ಮಾತೆಯು ಶತ್ರುವನ್ನು ಚೆಂಡಾಡಲು ಸಮರೋತ್ಸಾಹಿಯಾಗಿ ಕಾದಿರುವ ಕಾಳಿಯಾಗಿ ಮತ್ತು ದುರ್ಗೆಯಾಗಿ ಬದಲಾಗುತ್ತಾಳೆ.
ಮೊದಲ 12 ಸಾಲುಗಳಲ್ಲಿ ಸಂಸ್ಕೃತ ಭಾಷೆಯನ್ನು ಬಿಟ್ಟರೆ ಬೇರೆ ಯಾವುದೇ ಧಾರ್ಮಿಕ ಚಿಹ್ನೆಗಳಿರುವುದಿಲ್ಲ. ಆದರೆ ನಂತರದ 15 ಸಾಲುಗಳಲ್ಲಿ ದುರ್ಗೆ, ಕಾಳಿ ಇನ್ನಿತ್ಯಾದಿ ಬ್ರಾಹ್ಮಣೀಯ ಹಿಂದೂ ದೇವತೆಗಳು ಅವತರಿಸುತ್ತಾರೆ.
(ಆಸಕ್ತರು ಬಂಗಾಳದ ವಿಶ್ವಭಾರತಿ-ಶಾಂತಿನಿಕೇತನದ ಮಾಜಿ ಉಪಕುಲಪತಿ ಹಾಗೂ ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ಟಾಗೋರ್ ಫೆಲೋ ಕೂಡ ಆಗಿದ್ದ ಸಬ್ಯಸಾಚಿ ಭಟ್ಟಾಚಾರ್ಯ ಅವರ ‘ಗಿಚಿಟಿಜe ಒಚಿಣಚಿಡಿಚಿm- ಖಿhe ಃiogಡಿಚಿಠಿhಥಿ oಜಿ ಚಿ soಟಿg’ ಎಂಬ ಪೆಂಗ್ವಿನ್ ಪ್ರಕಾಶನ 2003ರಲ್ಲಿ ಪ್ರಕಟಿಸಿದ ಕೃತಿಯನ್ನು ಗಮನಿಸಬಹುದು)
ಸ್ಪಷ್ಟವಾಗಿ ಕಾಣುವಂತೆ ಮೊದಲ ಎರಡು ಚರಣಗಳಿಗಿಂತ ಸಂಪೂರ್ಣ ಭಿನ್ನವಾಗಿ ಈ ಚರಣಗಳಲ್ಲಿ ಭಾರತ ಮಾತೆಯು ಹಿಂದೂ ಬ್ರಾಹ್ಮಣ ದೇವಿಯಾಗಿ ಮಾರ್ಪಾಡಾಗುತ್ತಾಳೆ.
ತುಮ್ ಹಿ ಧರ್ಮಾ ಆಗುವುದಲ್ಲದೆ ‘‘...ನಿನ್ನಿಂದಲೇ ನಮ್ಮ ಶಕ್ತಿ ಮತ್ತು ಪ್ರತಿ ಮಂದಿರದಲ್ಲೂ ನಿನ್ನನ್ನೇ ನಾವು ನೋಡುತ್ತೇವೆ’’ ಎಂದು ಸ್ತುತಿಸಲಾಗುತ್ತದೆ.
ಧರ್ಮಾತೀತವಾದ ಮಾತೆ ಈ ರೀತಿ ನಿರ್ದಿಷ್ಟ ಧರ್ಮದ ಹಾಗೂ ದೇವಸ್ಥಾನಗಳ ಬಂದಿಯಾಗುತ್ತಾಳೆ.
ಎಲ್ಲಕ್ಕಿಂತ ಮುಖ್ಯವಾಗಿ ಈ ಮಾತೆ ಈಗ ಕರುಣಾಮಯಿಯಾಗಿ ಮಾತ್ರ ಉಳಿಯುವುದಿಲ್ಲ. ಈಗ ಮಾತೆ:
ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣಿಯಾಗುತ್ತಾಳೆ.
ಅಂದರೆ ಹತ್ತು ಯುದ್ಧಾಸ್ತ್ರಗಳನ್ನು ಹೊಂದಿರುವ ರಣಕಾಳಿಯಾಗುತ್ತಾಳೆ. ಶತ್ರು ಸಂಹಾರಕ್ಕೆ ಕಾತುರಳಾದ ಮಾತೆಯಾಗುತ್ತಾಳೆ.
ಹೀಗೆ ಹೊಸದಾಗಿ ಸೇರ್ಪಡೆಯಾದ 15 ಸಾಲುಗಳು ಧರ್ಮ ಸೂಚಕ ಮಾತ್ರವಲ್ಲ, ಕದನ ಸೂಚಕವೂ ಆಗಿ ಮಾರ್ಪಾಡಾಗುತ್ತದೆ. ಆದರೆ ಜಗದ್ಧಾತ್ರಿ ಮಾತೆ, ಕಾದಂಬರಿಕಾರನ ಬದಲಾದ ರಾಜಕಾರಣಕ್ಕೆ ತಕ್ಕಂತೆ ಶತ್ರು ಸಂಹಾರಕ ದುರ್ಗಾ ದಶಪ್ರಹರಣ ಧಾರಿಣಿಯಾಗಿ ಮಾರ್ಪಾಡಾಗುತ್ತಾಳೆ. ಆದರೆ ಇಲ್ಲಿ ಭಾರತಕ್ಕೆ ಶತ್ರು ಮುಸ್ಲಿಮರೇ ಹೊರತು ಭಾರತವನ್ನು ಲೂಟಿ ಮಾಡುತ್ತಿದ್ದ, ಹಿಂದೂ-ಮುಸ್ಲಿಮ್ ಜನಸಾಮಾನ್ಯರ ಶೋಷಣೆ ಮಾಡುತ್ತಿದ್ದ ಬ್ರಿಟಿಷರಲ್ಲ! ಏಕೆಂದರೆ ಬಂಕಿಮಚಂದ್ರರು ಬ್ರಿಟಿಷ್ ಸರಕಾರದಲ್ಲಿ ಅಧಿಕಾರಿಯೂ ಆಗಿದ್ದರು!
ಆನಂದಮಠದ ಮೊದಲ ಆವೃತ್ತಿಗೆ ಬರೆದ ಮುನ್ನುಡಿಯಲ್ಲೇ ಬಂಕಿಮಚಂದ್ರರು ತನ್ನ ಕಾದಂಬರಿಯ ಬಂಡಾಯ ಸಾಮಾಜಿಕ ಬಂಡಾಯವೇ ಹೊರತು ರಾಜಕೀಯ ಬಂಡಾಯವಲ್ಲವೆಂದು-ಅರ್ಥಾತ್ ಬ್ರಿಟಿಷ್ ವಿರೋಧಿ ಕೃತಿಯಲ್ಲವೆಂದು ಸ್ಪಷ್ಟಪಡಿಸಿಬಿಟ್ಟಿದ್ದರು.
1883ರ ಮಾರ್ಚ್ 31ರಂದು ಬ್ರಿಟಿಷ್ ಆಡಳಿತದ ಅಧಿಕೃತ ಗೆಝೆಟ್‌ನಲ್ಲಿ ಈ ಕಾದಂಬರಿಯು ಧಾರ್ಮಿಕ ಭಾವನೆಗಳಿಂದ ಪ್ರೇರಿತಗೊಂಡ, ಮುಸ್ಲಿಮ್ ಆಳ್ವಿಕೆಯ ಕೊನೆಯನ್ನು ಬಯಸುವ ಮತ್ತು ಬ್ರಿಟಿಷರು ಭಾರತದ ಮೇಲೆ ಸಂಪೂರ್ಣ ಸ್ವಾಮ್ಯ ಪಡೆಯಬೇಕೆಂಬ ಆಶಯವುಳ್ಳ ಕಾದಂಬರಿಯೆಂದು ಹೊಗಳಲಾಗಿತ್ತು.
1937ರಲ್ಲಿ ವೈಸ್‌ರಾಯ್ ಕೌನ್ಸಿಲ್‌ನ ಸದಸ್ಯನಾಗಿದ್ದ ಸರ್ ಹೆನ್ರಿ ಕ್ರೈಕ್ ಈ ಕಾದಂಬರಿಯು ಮುಸ್ಲಿಮರ ವಿರುದ್ಧ ಘೊಷಗೀತೆಯೆಂದೇ ಬಣ್ಣಿಸಿದ್ದನು. ಹೀಗಾಗಿಯೇ ಈ ಹಾಡನ್ನಾಗಲೀ, ಕಾದಂಬರಿಯನ್ನಾಗಲೀ ಬ್ರಿಟಿಷ್ ಆಡಳಿತ ಯಾವತ್ತೂ ನಿಷೇಧಿಸಲಿಲ್ಲ!
ಹೀಗಾಗಿಯೇ ಬಲಪಂಥೀಯರು ಆರಾಧಿಸುವ ಪ್ರಖ್ಯಾತ ಇತಿಹಾಸಕಾರ ಆರ್.ಸಿ. ಮಜುಂದಾರ್ ಸಹ ಆನಂದಮಠವನ್ನು ವಿಶ್ಲೇಷಿಸುತ್ತಾ
ಬಂಕಿಮಚಂದ್ರರು ದೇಶಭಕ್ತಿಯನ್ನು ಮತಧರ್ಮವಾಗಿಯೂ, ಮತಧರ್ಮವನ್ನು ದೇಶಭಕ್ತಿಯಾಗಿಯೂ ಮಾಡಿಬಿಟ್ಟರು ಮತ್ತು ರಾಷ್ಟ್ರವನ್ನು ಕಾಳಿ ಮಾತೆಯೆಂದೇ ಸಂಕೇತಿಸಲಾಗಿದೆ ಎಂದು ಹೇಳುತ್ತಾರೆ.
ದೇಶಪ್ರೇಮವಲ್ಲ- ಫ್ಯಾಶಿಸ್ಟ್ ರಣತಂತ್ರ
ದೇಶದ ಲಾಂಛನಗಳು ಯಾವುದೇ ಮತಧರ್ಮಗಳ ಸಂಕೇತವಾಗದಿದ್ದಾಗ ದೇಶದ ಎಲ್ಲಾ ಜನರೂ ಮತಧರ್ಮಗಳ ಹಂಗಿಲ್ಲದೆ ಸ್ವಪ್ರೇರಣೆಯಿಂದ ಗೌರವಿಸುತ್ತಾರೆ. ಆದರೆ ವಂದೇ ಮಾತರಂನಲ್ಲಿ ಭಾರತ ಮಾತೆಯನ್ನು ಹಿಂದೂ ಬ್ರಾಹ್ಮಣ ದೇವತೆಯನ್ನಾಗಿ ಚಿತ್ರಿಸಿ ಅದಕ್ಕೆ ದೇಶದ ಎಲ್ಲಾ ಮತಧರ್ಮೀಯರು ಎದ್ದು ನಿಂತು ಗೌರವಿಸಬೇಕೆಂದು ಆದೇಶಿಸುವುದು, ಹಿಂದೂಗಳಲ್ಲದ ಸ್ವದೇಶೀಯರ ದೇಶಪ್ರೇಮವನ್ನು ಅವಮಾನಿಸುವ ಆದೇಶ. ಅದರಲ್ಲೂ ವಿಗ್ರಹಾರಾಧನೆ ಸಮ್ಮತವಲ್ಲದ ಮತ್ತು ಮುಸ್ಲಿಮ್ ನರಮೇಧಕ್ಕೆ ಕರೆಕೊಡುವ ಗೀತೆಯನ್ನು ಗೌರವಿಸಿ ಎಂದು ಆದೇಶಿಸುವುದು ಮುಸ್ಲಿಮರನ್ನು ದಿನನಿತ್ಯ ಪರಕೀಯಗೊಳಿಸಿ ದಾಳಿ ಮಾಡುವ ಫ್ಯಾಶಿಸ್ಟ್ ರಣತಂತ್ರವೇ ಹೊರತು ದೇಶಪ್ರೇಮವಲ್ಲ.
ಈ ಹಿಂದೆ ಸುಪ್ರೀಂ ಕೋರ್ಟ್ ಕೇರಳದ ಇಮ್ಯುನಿಯಲ್ ಪ್ರಕರಣದಲ್ಲಿ ಧಾರ್ಮಿಕ ವಿಶ್ವಾಸಗಳನ್ನು ಉಲ್ಲಂಘಿಸುವ ರೀತಿಯ ದೇಶಗೌರವದ ಆದೇಶಗಳು ಸಿಂಧುವಲ್ಲ ಎಂದು ಸ್ಪಷ್ಟವಾಗಿ ತೀರ್ಪು ನೀಡಿದೆ. ಹೀಗಾಗಿ ಮೋದಿ ಸರಕಾರದ ಆದೇಶ ಸಿಂಧುವಾಗಲಾರದು ಅಥವಾ ಬದಲಾದ ಸಂದರ್ಭದಲ್ಲಿ ಬೇರೊಂದು ನಿಲುವಿಗೂ ಬರಬಹುದು.
ಇದು ‘ವಂದೇ ಮಾತರಂ’ ಮತ್ತು ‘ಆನಂದಮಠ’ಗಳ ನಿಜ ಕೋಮುಸ್ವರೂಪ ಹಾಗೂ ಮೋದಿ ಸರಕಾರದ ನೈಜ ಉದ್ದೇಶ.
ಈ ಹಿಂದುತ್ವವಾದಿ ಫ್ಯಾಶಿಸ್ಟ್ ಕ್ರಮವನ್ನು ಮತಾತೀತ ಭಾರತೀಯತೆಯಿಂದಲೇ ಸೋಲಿಸಬೇಕು.