×
Ad

ಟ್ರಂಪ್ ಸಾಮ್ರಾಜ್ಯಕ್ಕೆ ಭಾರತವನ್ನು ಮಾರಿಬಿಟ್ಟ ಮೋದಿ ಸರಕಾರ!: ಅಸಲಿ ದೇಶಪ್ರೇಮಿಗಳಲ್ಲೊಂದು ಮನವಿ!

Update: 2026-02-11 12:05 IST

ಭಾರತ ಮತ್ತು ಅಮೆರಿಕದ ಜಂಟಿ ಹೇಳಿಕೆ ಪ್ರಕಾರ ಫೆ. 2ರಂದು ಒಪ್ಪಿತವಾಗಿರುವುದು ಪರಿಪೂರ್ಣ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದ ಅಲ್ಲ. ಅಂಥ ಒಪ್ಪಂದಕ್ಕೆ ಪೂರ್ವಭಾವಿಯಾದ ಮಧ್ಯಂತರ ಒಪ್ಪಂದವೂ ಅಲ್ಲ. ಬದಲಿಗೆ ಮಧ್ಯಂತರ ಒಪ್ಪಂದದ ಒಂದು ಸಮ್ಮತ ಚೌಕಟ್ಟು-Framework ಅಷ್ಟೆ. ಆದರೆ ಅದರಲ್ಲೂ ಇಡೀ ಒಪ್ಪಂದ ಹೇಗೆ ಅಮೆರಿಕದ ಆರ್ಥಿಕ ಹಾಗೂ ಜಾಗತಿಕ ಹಿತಾಸಕ್ತಿಯ ಕಾವಲುಗಾರನಾಗಿ ಮೋದಿಯನ್ನು ಬಳಸಿಕೊಂಡಿದೆ ಎಂಬುದು ಪ್ರತಿವಾಕ್ಯದಲ್ಲೂ ಸ್ಪಷ್ಟವಾಗುತ್ತದೆ.

ಭಾರತದ ಅಸಲಿ ದೇಶಪ್ರೇಮಿಗಳೇ,

ಎರಡನೇ ಬಾರಿ ಟ್ರಂಪ್ ಅಧಿಕಾರಕ್ಕೆ ಬಂದಮೇಲೆ ಜಗತ್ತಿನ ಮೇಲೆ ನಡೆಸುತ್ತಿರುವ ಸಾಮ್ರಾಜ್ಯಶಾಹಿ ದುರಾಕ್ರಮಣಗಳನ್ನು ವೆನಿಝುವೆಲಾ, ಕ್ಯೂಬಾ, ಗ್ರೀನ್ ಲ್ಯಾಂಡ್, ಮೆಕ್ಸಿಕೋಗಳಂತಹ ಸಣ್ಣ ಪುಟ್ಟ ಸ್ವತಂತ್ರ, ಸ್ವಾಭಿಮಾನಿ ರಾಷ್ಟ್ರಗಳು ಪ್ರತಿರೋಧಿಸುತ್ತಿವೆ. ತಮ್ಮ ದೇಶಗಳ ಲಕ್ಷಾಂತರ ಜನರ ತ್ಯಾಗ ಬಲಿದಾನಗಳಿಂದ ಪಡೆದುಕೊಂಡ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿವೆ.

ಆದರೆ ವಿಸ್ತೀರ್ಣದಲ್ಲಿ, ಜಿಡಿಪಿಯಲ್ಲಿ, ಜನಸಂಖ್ಯೆಯಲ್ಲಿ, ವಸಾಹತುಶಾಹಿ ವಿರೋಧಿ ಹೋರಾಟಗಳಲ್ಲಿ, ಸೈನಿಕ ಸಾಮರ್ಥ್ಯದಲ್ಲಿ ಅಂತಹ ಎಲ್ಲಾ ಸಣ್ಣ-ಬಡ ರಾಷ್ಟ್ರಗಳಿಗಿಂತ ಎಷ್ಟೋ ಮುಂದಿರುವ ಭಾರತವು ಮಾತ್ರ ಟ್ರಂಪ್ ಬೆದರಿಕೆಗೆ ಯಾವುದೇ ಪ್ರತಿರೋಧ ತೋರುತ್ತಿಲ್ಲ. ಬದಲಿಗೆ ಬ್ರಿಟಿಷರ ಕಾಲದಲ್ಲಿ ಹಲವು ಗುಲಾಮಿ ರಾಜಸಂಸ್ಥಾನಗಳು ಬ್ರಿಟಿಷರ ಆಳ್ವಿಕೆಯನ್ನು ಒಪ್ಪಿಕೊಂಡು ಮಾರಿಕೊಂಡಂತೆ ಮೋದಿ ಸರಕಾರ ಕೂಡ ಭಾರತವನ್ನು ಅಮೆರಿಕಕ್ಕೆ ಮಾರಿಕೊಂಡಿದೆ.

ಏಕೆಂದರೆ, ಮೋದಿ ಸರಕಾರ ಇತ್ತೀಚೆಗೆ ಟ್ರಂಪ್ ಸರಕಾರದೊಂದಿಗೆ ಮಾಡಿಕೊಂಡಿರುವ ಭಾರತ-ಅಮೆರಿಕ ವಾಣಿಜ್ಯ ಒಪ್ಪಂದದ ವಿವರಗಳು ಈ ಹಿಂದೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ವಿಧಿಸುತ್ತಿದ್ದ ಏಕಪಕ್ಷೀಯ ಷರತ್ತುಗಳಿಗಿಂತ, ಆ ನಂತರ ಬ್ರಿಟಿಷರು ರಾಜಸಂಸ್ಥಾನಗಳ ಮೇಲೆ ವಿಧಿಸುತ್ತಿದ್ದ ಅವಮಾನಕಾರಿ ಸಹಾಯಕ ಸೈನ್ಯ ಪದ್ಧತಿಯ ಷರತ್ತುಗಳಿಗಿಂತ ಅವಮಾನಕರವಾಗಿದೆ.

ಪರಸ್ಪರ ಸಮಾಧಾನಕರ ಒಪ್ಪಂದ ಏರ್ಪಡದ ಕಾರಣ 2025ರ ಫೆಬ್ರವರಿಯಲ್ಲೇ ಪ್ರಾರಂಭವಾದರೂ ಮುಗಿಯದ ಸಮಾಲೋಚನೆಗಳು ದಿಢೀರನೆ ಭಾರತಕ್ಕೆ ಅವಮಾನಕಾರಿಯಾಗಿ ಮುಕ್ತಾಯವಾಗುವ ಹಿಂದೆ ಊಹಾಪೋಹಗಳೆಂದು ತಳ್ಳಿಹಾಕಲಾಗದ ಹಲವಾರು ತಾರ್ಕಿಕ ವಿಶ್ಲೇಷಣೆಗಳಿವೆ. ಎಪ್‌ಸ್ಟೀನ್ ಕಾಮಕಾಂಡದ ಫೈಲುಗಳಲ್ಲಿ ಮೋದಿ ಮತ್ತು ಇತರ ಮಂತ್ರಿಗಳ ಹೆಸರುಗಳಿರುವುದು ಮತ್ತು ಮೋದಿ ಆಪ್ತ ಅದಾನಿಗೆ ಅಮೆರಿಕ ನೋಟಿಸ್ ಕೊಟ್ಟು ಅದಾನಿ ಸಂಕಷ್ಟದಲ್ಲಿರುವುದು ಅದರಲ್ಲಿ ಪ್ರಮುಖವಾದವು. ಅವೆರಡನ್ನು ಬಳಸಿಕೊಂಡು ಟ್ರಂಪ್ ಭಾರತವನ್ನು ಮಣಿಸಲು ಬಳಸಿರಬಹುದೇ?

ಇರಬಹುದು. ಇಲ್ಲದೆಯೂ ಇರಬಹುದು. ಇವೆರಡೂ ಕಾರಣಗಳಿಲ್ಲದಿದ್ದರೆ ಈ ಒಪ್ಪಂದದಲ್ಲಿ ಭಾರತಕ್ಕೆ ಪೂರಕವಾದ ಷರತ್ತುಗಳಿಗೆ ಮೋದಿ ಸರಕಾರ ಪಟ್ಟು ಹಿಡಿಯುತ್ತಿತ್ತು ಎಂಬುದಕ್ಕಾಗಲೀ, ಅದನ್ನು ಟ್ರಂಪ್ ಸರಕಾರ ಒಪ್ಪಿಕೊಂಡುಬಿಡುತ್ತಿತ್ತು ಎಂಬುದಕ್ಕಾಗಲಿ ಯಾವುದೇ ಪುರಾವೆಯಿಲ್ಲ.

ಅದೇನೇ ಇರಲಿ ವ್ಯಕ್ತಿಗಿಂತ ದೇಶ ಮುಖ್ಯವಾಗಿರುವವರಿಗೆ, ಮೋದಿ ಭಕ್ತಿಗಿಂತ ದೇಶಭಕ್ತಿ ಹೆಚ್ಚಿರುವವರಿಗೆ ದೇಶಕ್ಕೆ ಮತ್ತು ದೇಶದ ಜನರಿಗೆ ಮೋದಿ-ಟ್ರಂಪ್ ಡೀಲ್ ಮಾಡಿರುವ ದ್ರೋಹ ಕಣ್ಣಿಗೆ ರಾಚುವಂತೆ ಕಂಡೇ ಕಾಣುತ್ತದೆ. ಕಾಣಲಾಗದವರು ಮೋದಿ ಕುರುಡರು. ಕಂಡರೂ ಒಪ್ಪದವರು ದೇಶದ್ರೋಹಿಗಳು.

ದ್ವಿಪಕ್ಷೀಯವೂ ಅಲ್ಲ, ಒಪ್ಪಂದವೂ ಅಲ್ಲ

ಇದೇ ಫೆಬ್ರವರಿ 2ರಂದು, ಭಾರತದ ಜನತೆಯ ಪ್ರಾತಿನಿಧಿಕ ಸಂಸ್ಥೆಯಾದ ಸಂಸತ್ತಿಗೆ ಯಾವುದೇ ಮಾಹಿತಿಯನ್ನೂ ಕೊಡದಂತೆ (ಒಪ್ಪಂದವಾದ ನಂತರ ಇಷ್ಟು ದಿನ ಕಳೆದರೂ ಕೊಡುತ್ತಿಲ್ಲ!) ಟ್ರಂಪ್ ಮತ್ತು ಮೋದಿಯವರ ವಾಣಿಜ್ಯ ಒಪ್ಪಂದವನ್ನು ಟ್ರಂಪ್ ತನ್ನ ‘ಘಿ’ ಖಾತೆಯಲ್ಲಿ ಜಗತ್ತಿಗೆ ಬಹಿರಂಗಪಡಿಸಿದರು. ಆ ಸಂಜೆಯೇ ಮೋದಿಯವರಿಗೆ ಬಿಜೆಪಿಗರು ತಮ್ಮದೇ ಕಚೇರಿಯಲ್ಲಿ ಯುದ್ಧ ಗೆದ್ದು ಬಂದ ಸೇನಾಧಿಕಾರಿಯನ್ನು ಸನ್ಮಾನಿಸುವಂತೆ ಭವ್ಯವಾಗಿ ಸನ್ಮಾನಿಸಿದರು. ಐತಿಹಾಸಿಕ ವಾಣಿಜ್ಯ ಒಪ್ಪಂದ ಆಗಿಹೋಗಿದೆ. ಇದರಿಂದ ದೇಶದ ಭವಿತವ್ಯ ಬೆಳಗಲಿದೆಯೆಂದು ಮೋದಿ-ಗೋದಿ ಮೀಡಿಯಾಗಳು ಬಹುಪರಾಕ್ ಹಾಕಿದವು.

ಸಂಪೂರ್ಣಗೊಂಡಿರುವ ಈ ಒಪ್ಪಂದದಿಂದ ಭಾರತಕ್ಕೆ ಆಗುವ ಲಾಭಗಳ ಬಗ್ಗೆ ಊಹಾಪೋಹಗಳ ಭಜನೆ ಹೆಚ್ಚಾಗುತ್ತಿದ್ದಂತೆ ಅದಕ್ಕೆ ಬ್ರೇಕ್ ಹಾಕುವಂತೆ ಫೆ. 6ರಂದು ಈ ಬಗ್ಗೆ ಭಾರತ ಮತ್ತು ಅಮೆರಿಕ ಜಂಟಿ ಹೇಳಿಕೆ ಬಿಡುಗಡೆಯಾದವು. ಅದರ ಪೂರ್ಣಪಾಠವನ್ನು ಆಸಕ್ತರು ಇಲ್ಲಿ ಓದಬಹುದು:

https://www.whitehouse.gov/briefings-statements/2026/02/united-states-india-joint-statement/

ಈ ಜಂಟಿ ಹೇಳಿಕೆ ಪ್ರಕಾರ ಫೆ. 2ರಂದು ಒಪ್ಪಿತವಾಗಿರುವುದು ಪರಿಪೂರ್ಣ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದ ಅಲ್ಲ. ಅಂಥ ಒಪ್ಪಂದಕ್ಕೆ ಪೂರ್ವಭಾವಿಯಾದ ಮಧ್ಯಂತರ ಒಪ್ಪಂದವೂ ಅಲ್ಲ. ಬದಲಿಗೆ ಮಧ್ಯಂತರ ಒಪ್ಪಂದದ ಒಂದು ಸಮ್ಮತ ಚೌಕಟ್ಟು-Framework ಅಷ್ಟೆ. ಆದರೆ ಅದರಲ್ಲೂ ಇಡೀ ಒಪ್ಪಂದ ಹೇಗೆ ಅಮೆರಿಕದ ಆರ್ಥಿಕ ಹಾಗೂ ಜಾಗತಿಕ ಹಿತಾಸಕ್ತಿಯ ಕಾವಲುಗಾರನಾಗಿ ಮೋದಿಯನ್ನು ಬಳಸಿಕೊಂಡಿದೆ ಎಂಬುದು ಪ್ರತಿವಾಕ್ಯದಲ್ಲೂ ಸ್ಪಷ್ಟವಾಗುತ್ತದೆ. ಅದನ್ನು ವಿವರವಾಗಿ ನಂತರ ಪರಿಶೀಲಿಸೋಣ.

ಇದಾದ ನಂತರ ಫೆ. 9ರಂದು ಟ್ರಂಪ್ ಸರಕಾರ ಈ ಒಪ್ಪಂದದ ಬಗ್ಗೆ ಈಚಿಛಿಣ Sheeಣ ಅನ್ನು ಬಿಡುಗಡೆ ಮಾಡಿದ್ದು ಅದು ಈ ಒಪ್ಪಂದ ಭಾರತದ ರೈತಾಪಿ ಮತ್ತು ಕಾರ್ಮಿಕರ ಹಿತಾಸಕ್ತಿಯನ್ನು ಹೇಗೆ ಅಮೆರಿಕದ ಉದ್ಯಮಿಗಳಿಗೆ ಮಾರಲ್ಪಟ್ಟಿದೆ ಎಂಬುದನ್ನು ಇನ್ನಷ್ಟು ಸ್ಪಷ್ಟಪಡಿಸಿತು.

(https://www.whitehouse.gov/fact-sheets/2026/02/fact-sheet-the-united-states-and-india-announce-historic-trade-deal/)

ಈ Fact Sheet ಈ ಒಪ್ಪಂದದ ಅಸಲೀ ಹೂರಣವಾಗಿದ್ದು ಮೋದಿ ಸರಕಾರ ಭಾರತವನ್ನು ಹೇಗೆ ಬೇಷರತ್ತಾಗಿ ಮಾರಿಕೊಂಡಿದೆ ಎಂಬುದು ಸಾಬೀತಾಗುತ್ತದೆ.

ಈ ಒಪಂದದ ವಿವರಗಳು ಅದನ್ನು ಸ್ಪಷ್ಟಪಡಿಸುತ್ತದೆ:

1.ಎಲ್ಲವನ್ನೂ ಕಸಿದುಕೊಂಡ ಅಮೆರಿಕ ಎಲ್ಲವನ್ನೂ ಕಳೆದುಕೊಂಡ ಭಾರ

ಯಾವುದೇ ದ್ವಿಪಕ್ಷೀಯ ಒಪ್ಪಂದದಲ್ಲಿ ಎರಡೂ ಪಕ್ಷಗಳು ಕೆಲವನ್ನು ಕೊಟ್ಟು ಕೆಲವನ್ನು ಪಡೆದುಕೊಳ್ಳುತ್ತವೆ. ಈ ಒಪ್ಪಂದದಲ್ಲಿ ಭಾರತ ಮೇಲಿನ ಸುಂಕವನ್ನು ಅಮೆರಿಕ ಶೇ.25ರಿಂದ ಶೇ.18ಕ್ಕೆ ಇಳಿಸಿರುವುದನ್ನು ಮೋದಿ ಮುತ್ಸದ್ದಿತನ ಮತ್ತು ಭಾರತದ ಗೆಲುವು ಎಂದು ಗೋದಿಗಳು ಕೊಂಡಾಡುತ್ತಿವೆ.

ಆದರೆ ಟ್ರಂಪ್ ಬರುವ ಮುನ್ನ ಭಾರತದ ಸರಕುಗಳ ಮೇಲೆ ಅಮೆರಿಕ ಹೇರುತ್ತಿದ್ದ ಸುಂಕ ಸರಾಸರಿ ಶೇ. 3 ಮಾತ್ರ. ಅದನ್ನು ರಶ್ಯದಿಂದ ಭಾರತ ತೈಲ ಖರೀದಿಸುವುದನ್ನು ನಿಲ್ಲಿಸಲು ಬ್ಲ್ಯಾಕ್‌ಮೇಲ್ ಮಾಡಲು ಕಳೆದ ಒಂದು ವರ್ಷದಿಂದ ಶೇ.25 ರಷ್ಟು ಸುಂಕವನ್ನು ಏರಿಸಿತ್ತು. ರಶ್ಯದಿಂದ ತೈಲ ಖರೀದಿ ಮಾಡುವುದಿಲ್ಲವೆಂದು ಮೋದಿ ಸರಕಾರ ಭಾರತದ ಹಿತವನ್ನು ನಿರ್ಲಕ್ಷಿಸಿ ಒಪ್ಪಿಕೊಂಡಿದೆ. ಅದರ ಬದಲಿಗೆ ಪಡೆದುಕೊಂಡಿದ್ದೇನು? ಕನಿಷ್ಠ ಅಮೆರಿಕದ ಸುಂಕ ಶೇ. 3ಕ್ಕೆ ಮರಳ ಬೇಕಲ್ಲವೇ? ಇಲ್ಲ. ಅದು ಶೇ.18ರ ಕೆಳಗಿಳಿದಿಲ್ಲ. ಅಂದರೆ ತಾತ್ಕಾಲಿಕವಾಗಿ ಏರಿಸಿದ್ದ ಶೇ. 25ಕ್ಕೆ ಹೋಲಿಸಿದಲ್ಲಿ ಶೇ. 7 ಎಂದು ಭಾವಿಸಿ ಹಿಗ್ಗಬೇಕೋ? ಅಮೆರಿಕ ಹೇಳಿದ್ದನ್ನೆಲ್ಲಾ ಕೇಳಿದರೂ ಶೇ. 3ಕ್ಕೆ ಮರಳದೆ ವಿಧಿಸಿರುವ ಶೇ. 18ರ ಸುಂಕ ಮೊದಲಿಗಿಂತ ಶೇ. 15ರಷ್ಟು ಏರಿಕೆ ಎಂದು ಭಾವಿಸಬೇಕೋ? ಈ ಗಣಿತವು ನಾವು ಮೋದಿ ಭಕ್ತರೋ? ದೇಶಭಕ್ತರೋ ಎಂಬುದನ್ನು ವಿವರಿಸುವ ಲೆಕ್ಕಾಚಾರವೂ ಆಗಿರುತ್ತದಲ್ಲವೇ?

ಅಷ್ಟು ಮಾತ್ರವಲ್ಲ. ಅಮೆರಿಕದ Fact Sheet ಹೇಳುವಂತೆ ಭಾರತವು ಅಮೆರಿಕದ ಕೃಷಿ ಸರಕುಗಳ ಮೇಲೆ ಶೇ. 37 ಮತ್ತು ಕೆಲವು ಕೈಗಾರಿಕಾ ಸರಕುಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸುತ್ತಿತ್ತು. ಆದರೆ ಹಾಗೆ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸಿ ಭಾರತದ ರೈತರ ಮತ್ತು ಕೈಗಾರಿಕೆಗಳ ಆಸಕ್ತಿಯನ್ನು ಆ ಮೂಲಕ ದೇಶದ ಆಸಕ್ತಿಯನ್ನು ಕಾಪಾಡಲಾಗುತ್ತಿತ್ತು.

ಹಾಗೆ ನೋಡಿದರೆ ಮೋದಿ ಸರಕಾರ ಬರುವವರೆಗೆ ಭಾರತದ ಕೃಷಿ ಕ್ಷೇತ್ರದ ಮಾರುಕಟ್ಟೆಯನ್ನು ವಿದೇಶಿ ಮಾರುಕಟ್ಟೆಗೆ ಬಹುಪಾಲು ತೆರೆದಿರಲಿಲ್ಲ.

ಈಗ ಭಾರತದ ಬಹುಪಾಲು ಕೃಷಿ ಕ್ಶೇತ್ರವನ್ನು ಅಮೆರಿಕಕ್ಕೆ ತೆರೆದಿರಿಸಲಾಗಿದೆ. ಮತ್ತು ಕೃಷಿ ಮತ್ತು ಕೈಗಾರಿಕಾ ಸರಕುಗಳ ಮೇಲಿನ ಸುಂಕವನ್ನು ಶೇ.37-100 ರಿಂದ ಸೊನ್ನೆ ಅಥವಾ ಒಂದಂಕಿಗೆ ಇಳಿಸಲಾಗುತ್ತಿದೆ.

ಹಾಗಿದ್ದಲ್ಲಿ ಇದೊಂದು ದ್ವಿಪಕ್ಷೀಯ ಒಪ್ಪಂದವೇ? ಎರಡೂ ಪಕ್ಷಗಳು ಕೊಟ್ಟು ತೆಗೆದುಕೊಂಡಿವೆಯೇ?

ಭಾರತ ಎಲ್ಲವನ್ನು ಕೊಟ್ಟಿದೆ. ಅಮೆರಿಕ ಎಲ್ಲವನ್ನೂ ಪಡೆದುಕೊಂಡಿದೆ. ಇಂತಹ ಒಪ್ಪಂದವನ್ನು ವಸಾಹತುಶಾಹಿ ವಾಣಿಜ್ಯ ಒಪ್ಪಂದ ಎನ್ನುತ್ತಾರೆ. ಹೀಗೆ ತನ್ನ ದೇಶವನ್ನು ಬಲಿಗೊಟ್ಟವರನ್ನು ದೇಶದ್ರೋಹಿ ಎನ್ನುತ್ತಾರೆ. ಅಲ್ಲವೇ?

2. ಅಮೆರಿಕ ಸಂಪನ್ನ- ಭಾರತದ ಬರ್ಬಾದಿ

ಭಾರತ ಮತ್ತು ಅಮೆರಿಕ ವಾಣಿಜ್ಯವು ಹೆಚ್ಚೂ ಕಡಿಮೆ 130 ಬಿಲಿಯನ್ ಡಾಲರ್‌ಗಳಷ್ಟಿದ್ದು ಇದರಲ್ಲಿ ಭಾರತ ಅಮೆರಿಕಕ್ಕೆ 90-100 ಬಿಲಿಯನ್ ಡಾಲರ್ ಸರಕುಗಳನ್ನು ಮಾರಾಟ ಮಾಡುತ್ತಿದ್ದರೆ, ಅಮೆರಿಕದಿಂದ ಭಾರತ ಖರೀದಿಸುತ್ತಿದ್ದದ್ದು 30-40 ಬಿಲಿಯನ್ ಡಾಲರುಗಳಷ್ಟು ಮಾತ್ರ. ಅಂದರೆ ಈ ವಾಣಿಜ್ಯದಲ್ಲಿ ಅಮೆರಿಕಕ್ಕೆ ಅಂದಾಜು 40 ಬಿಲಿಯನ್ ಡಾಲರ್‌ಗಳಷ್ಟು ವಾಣಿಜ್ಯ ಕೊರತೆ ಉಂಟಾಗುತ್ತಿತ್ತು. ಏಕೆಂದರೆ ಭಾರತವು ತನ್ನ ತೈಲ, ಖನಿಜ, ಇನ್ನಿತರ ಅಗತ್ಯಗಳನ್ನು ಅಮೆರಿಕಕ್ಕಿಂತ ಅಗ್ಗದ ದರದಲ್ಲಿ ಸರಬರಾಜು ಮಾಡುವ ದೇಶಗಳಿಂದ ಖರೀದಿ ಮಾಡುವಷ್ಟು ವ್ಯೆಹಾತ್ಮಕ ಖರೀದಿ ಸ್ವಾತಂತ್ರ್ಯವನ್ನು ಇಲ್ಲಿಯವರೆಗೆ ಕಾಪಾಡಿಕೊಂಡು ಬಂದಿತ್ತು. ಆ ಮೂಲಕವೂ ಭಾರತೀಯರ ಅಲ್ಪಸ್ವಲ್ಪ ಹಿತಾಸಕ್ತಿ ರಕ್ಷಿಸಲ್ಪಡುತ್ತಿತ್ತು.

ಆದರೆ ಹಾಲಿ ಟ್ರಂಪ್-ಮೋದಿ ವಾಣಿಜ್ಯ ಒಪ್ಪಂದದ ಪ್ರಕಾರ ಭಾರತಕ್ಕೆ ಬೇಕಿದ್ದರೂ, ಬೇಡಿದ್ದರೂ, ಅಮೆರಿಕದಿಂದ ಮುಂದಿನ ಐದು ವರ್ಷಗಳಲ್ಲಿ 500 ಬಿಲಿಯನ್ ಡಾಲರ್ ಸರಕುಗಳನ್ನು ಖರೀದಿಸುತ್ತೇವೆ ಎಂಬ ಒಪ್ಪಂದಕ್ಕೆ ಮೋದಿ ಸರಕಾರ ಸಹಿ ಹಾಕಿದೆ. ಅರ್ಥಾತ್ ಇಲ್ಲಿಯವರೆಗೆ ಖರೀದಿಸುತ್ತಿದ್ದ ಮೊತ್ತಕ್ಕಿಂತ ಹತ್ತುಪಟ್ಟು ಹೆಚ್ಚು ಸರಕುಗಳನ್ನು ಅಮೆರಿಕದಿಂದ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಅಂದರೆ ಭಾರತಕ್ಕೆ ಅಗತ್ಯವಾಗಿರುವ ಸರಕುಗಳು ಇತರ ದೇಶಗಳಿಂದ ಸಿಗುತ್ತಿದ್ದರೂ ಅಮೆರಿಕದಿಂದಲೇ ಖರೀದಿಸುತ್ತೇವೆ ಎಂಬ ಗುಲಾಮಿ ಒಪ್ಪಂದ. ಇದಕ್ಕೆ ಪ್ರತಿಯಾಗಿ ಅಮೆರಿಕವೂ ಭಾರತದಿಂದ 500 ಬಿಲಿಯನ್ ಡಾಲರ್ ಖರೀದಿ ಮಾಡುತ್ತದೆಂಬ ಒಂದು ವಾಕ್ಯವಿರಲಿ ಪದವೂ ಈ ‘ದ್ವಿಪಕ್ಷೀಯ’ ಒಪ್ಪಂದದಲ್ಲಿ ಇಲ್ಲ. ಇದು ಗುಲಾಮಿ ಒಪ್ಪಂದವಲ್ಲದೇ ಮತ್ತಿನ್ನೇನು?

3. ಭಾರತದ ರೈತಾಪಿಯ ಮೇಲೆ ಅಮೆರಿಕನ್ನರ ಆಕ್ರಮಣ

ಈ ಒಪ್ಪಂದದ ಮೂಲಕ ಮೋದಿ ಸರಕಾರ ಈಗಾಗಲೇ ಕಂಗೆಟ್ಟಿರುವ ಭಾರತದ ರೈತಾಪಿಯನ್ನು ಅಮೆರಿಕದ ಆಕ್ರಮಣಕ್ಕೆ ಗುರಿಮಾಡಿ ರೈತ ಬದುಕನ್ನು ಮತ್ತಷ್ಟು ಕಂಗಾಲಾಗಿಸಲಿದೆ.

ವಾಣಿಜ್ಯ ಮಂತ್ರಿ ಪಿಯುಷ್ ಗೋಯಲ್ ಮತ್ತು ಮೋದಿ ಭಾರತದ ಕೃಷಿಯನ್ನು ರಕ್ಷಿಸಲಾಗಿದೆ ಎಂದು ಹೇಳುತ್ತಿದ್ದರೂ, ಅಮೆರಿಕದ Fact Sheet, ಅಮೆರಿಕದ ಕೃಷಿ ಕಾರ್ಯದರ್ಶಿ ಹೇಳಿಕೆ ಮತ್ತು ಗೋಯಲ್ ಅವರ ಪತ್ರಿಕಾ ಸಂದರ್ಶನಗಳೇ ಬಚ್ಚಿಟ್ಟ ಸತ್ಯಗಳನ್ನು ಒಂದೊಂದಾಗಿ ಹೊರಹಾಕುತ್ತಿವೆ.

ಜಂಟಿ ಹೇಳಿಕೆಯ ಪ್ರಕಾರ ಭಾರತವು:

‘‘ಪಶು ಆಹಾರವಾಗಿ ಬಳಸುವ ಜೋಳ ಮೂಲದ DDG (Dried Distillers’ Grain), ಉಡಿಚಿiಟಿ), ಬಾದಾಮಿ, ಪಿಸ್ತಾದಂತಹ ಮರಬೀಜಗಳು, ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್, ಸಂಸ್ಕರಿತ ಆಹಾರ ಹಾಗೂ ಇನ್ನಿತರ ಕೃಷಿ ಸರಕುಗಳ ಮೇಲೆ ಈವರೆಗೆ ಹಾಕುತ್ತಿದ್ದ ಸುಂಕವನ್ನು ಶೇ. 37 ರಿಂದ ಸೊನ್ನೆ ಅಥವಾ ಒಂದಂಕಿಗೆ ಇಳಿಸಲಿದೆ. ಅರ್ಥಾತ್ ಈ ಎಲ್ಲಾ ಬಗೆಯ ಭಾರತೀಯ ಕೃಷಿ ಸರಕುಗಳು ಇನ್ನು ಮುಂದೆ ಅಮೆರಿಕದ ಇದೇ ಬಗೆಯ ಕೃಷಿ ಸರಕುಗಳ ಮುಂದೆ ದುಬಾರಿಯಾಗಲಿವೆ. ಈಗಾಗಲೇ ಮಾರುಕಟ್ಟೆಯಿಲ್ಲದೆ ಸೊರಗಿರುವ ರೈತಾಪಿಗೆ ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲವಾಗಲಿದೆ.

ಉದಾಹರಣೆಗೆ:

-DDG ರೂಪದಲ್ಲಿ ಪಶು ಆಹಾರವಾಗಿ ಬಳಕೆಯಾಗುವುದಕ್ಕೆ ಭಾರತದ(ಕರ್ನಾಟಕದ) ರೈತ ಮೆಕ್ಕೆ ಜೋಳವನ್ನು ಮತ್ತು ಮಧ್ಯಪ್ರದೇಶದ ಮತ್ತು ಮಹಾರಾಷ್ಟ್ರದ ರೈತಾಪಿ ಸೋಯಾ ಬೀಜಗಳನ್ನು ಬೆಳೆಯುತ್ತಿದ್ದರು. ರಫ್ತು ಕೂಡ ಮಾಡುತ್ತಿದ್ದರು. ಈಗ ಅಮೆರಿಕದ ಜೋಳ ಮೂಲದ DDG ಮತ್ತು ಸೋಯಾ ಎಣ್ಣೆ ನೇರವಾಗಿ ಶೂನ್ಯ ಸುಂಕ ದರದಲ್ಲಿ ಆಮದಾಗುವುದಾದರೆ ಯಾವ ಪಶು ಆಹಾರ ಉತ್ಪಾದಕ ಭಾರತದ ರೈತರಿಂದ ಜೋಳ ಅಥವಾ ಸೋಯಾ ಬೀಜ ಖರೀದಿಸಿಯಾರು?

-ಇನ್ನು ಈ ಸಾರಿ ಬಜೆಟ್‌ನಲ್ಲಿ ಕೃಷಿ ಆದಾಯ ಹೆಚ್ಚಿಸಲು ರೈತರು ಮೌಲ್ಯವರ್ಧಿತ ಬೆಳೆಗಳನ್ನು ಬೆಳೆಯಬೇಕೆಂದು ಪ್ರಧಾನವಾಗಿ ಹಣ್ಣುಬೆಳೆಗಳಿಗೆ ಪ್ರೋತ್ಸಾಹ ಘೋಷಿಸುವ ನಾಟಕವನ್ನು ಆಡಿದ ಮೋದಿ ಸರಕಾರ ಈ ಒಪ್ಪಂದದಲ್ಲಿ ಅಮೆರಿಕದ ಹಣ್ಣು ಬೆಳೆಗಳಿಗೆ ಶೂನ್ಯ ಸುಂಕ ಘೋಷಿಸಿದೆ.

ಅಮೆರಿಕದ ಸೇಬುಗಳು ಶೂನ್ಯ ಸುಂಕದಲ್ಲಿ ಭಾರತದಲ್ಲಿ ಮಾರಾಟವಾಗುವುದಾದರೆ ಕಾಶ್ಮೀರ ಹಾಗೂ ಹಿಮಾಚಲದ ಸೇಬುಗಳನ್ನು ಕೊಳ್ಳುವವರಾರು? ಹಾಗೆಯೇ ಅಮೆರಿಕದ ಬಾದಾಮಿ ಮತ್ತು ಪಿಸ್ತಾ ಅಗ್ಗದ ದರದಲ್ಲಿ ಸಿಗುವುದಾದರೆ ಕಾಶ್ಮೀರದ ಬಾದಾಮಿ ಕೊಳ್ಳುವವರಾರು? ಆ ರೈತರ ಪರಿಸ್ಥಿತಿಯೇನು?

-ಹಾಗೆಯೇ ಮೌಲ್ಯ ವರ್ಧಿತ ಬೆಳೆಗಳ ಭಾಗವಾಗಿ ವೈನ್ ಉತ್ಪಾದನೆಗೆ ಪ್ರೋತ್ಸಾಹ ಎಂದು ಬಜೆಟ್‌ನಲ್ಲಿ ಹೇಳಲಾಗಿತ್ತಷ್ಟೆ. ಅದರ ಭಾಗವಾಗಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಇನ್ನೂ ಹಲವು ಕಡೆ ವಿಸ್ತೃತವಾಗಿ ದ್ರಾಕ್ಷಿಯನ್ನು ರೈತರು ಬೆಳೆಯುತ್ತಿದ್ದರು. ಈಗ ಅಮೆರಿಕದ ವೈನ್ ಅನ್ನೇ ಶೂನ್ಯ ದರದಲ್ಲಿ ಆಮದು ಮಾಡಿಕೊಳ್ಳುವುದಾದರೆ ದ್ರಾಕ್ಷಿ ಉತ್ಪಾದಕರ ಗತಿಯೇನು?

-ಇದಲ್ಲದೆ Fact Sheetನಲ್ಲಿ ಜಂಟಿ ಹೇಳಿಕೆಯಲ್ಲಿ ಇಲ್ಲದ ಒಂದು ಸರಕಿದೆ. ಅದು ಅಮೆರಿಕದಿಂದ ಶೂನ್ಯ ದರದಲ್ಲಿ ಆಮದು ಮಾಡಿಕೊಳ್ಳುವ ಬೇಳೆಕಾಳುಗಳು. ತೊಗರಿ, ಉದ್ದು, ಹೆಸರು ಇತ್ಯಾದಿ. ಭಾರತದ ವಾಣಿಜ್ಯ ಮತ್ತು ಕೃಷಿ ಮಂತ್ರಿಗಳು ಕೂಡ ಇದನ್ನು ಜನರಿಂದ ಮುಚ್ಚಿಟ್ಟಿದ್ದರು.

ಈ ಕಾರಣಕ್ಕಾಗಿಯೇ ಇದಲ್ಲದೆ ಈ ಜಂಟಿ ಹೇಳಿಕೆಯಲ್ಲಿ ‘ಇನ್ನಿತರ ಕೃಷಿ ಸರಕುಗಳು’ ಎಂಬ ಅವಕಾಶವನ್ನು ಅಮೆರಿಕ ಸೇರಿಸಿದೆ. ಮೋದಿ ಸರಕಾರ ಒಪ್ಪಿಕೊಂಡು ಭಾರತೀಯರಿಗೆ ದ್ರೋಹ ಬಗೆದಿದೆ.

4. ಸುಂಕೇತರ ತಡೆಗೋಡೆಗಳ (Non-Tariff Barriers) ನಿರ್ನಾಮ

ಭಾರತದ ಹಿತಾಸಕ್ತಿಯನ್ನು ಸುಂಕ ಶುಲ್ಕದ ಮೂಲಕ ಮಾತ್ರವಲ್ಲದೆ ಸುಂಕೇತರ ಷರತ್ತುಗಳನ್ನು ಹೇರುವ ಮೂಲಕ ರಕ್ಷಿಸುವ ಅವಕಾಶವಿತ್ತು. ಉದಾಹರಣೆಗೆ ಭಾರತದ ಮಾರುಕಟ್ಟೆಯಲ್ಲಿ ಕುಲಾಂತರಿ ಬೀಜಗಳಿಗೆ ಮತ್ತು ಉತ್ಪತ್ತಿಗಳಿಗೆ ಅವಕಾಶವಿರಲಿಲ್ಲ. ಹಾಗೆಯೇ ಮಾಂಸಾಹಾರದ ಪಶು ಆಹಾರವನ್ನು ಬಳಸಿ ಉತ್ಪಾದಿಸಿದ ಹೈನು ಉತ್ಪಾದನೆಗಳಿಗೆ ಭಾರತದಲ್ಲಿ ಅವಕಾಶವಿರಲಿಲ್ಲ. ಹಾಗೆಯೇ ಡಿಜಿಟಲ್ ಮಾರುಕಟ್ಟೆಯಲ್ಲಿ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳಿಗೆ ಭಾರತದ ಡೇಟಾ ಬಳಸುವ, ಸಂಗ್ರಹಿಸುವ ಅವಕಾಶವಿರಲಿಲ್ಲ. ಅಮೆರಿಕದ ಸರಕುಗಳು ಭಾರತದ ಮಾರುಕಟ್ಟೆ ಪಡೆಯಬೇಕೆಂದರೆ ಇವೆಲ್ಲವನ್ನು ಬಳಸಿಲ್ಲವೆಂದು ಪ್ರಮಾಣ ಪತ್ರ ಒದಗಿಸಬೇಕಿತ್ತು. ಹಾಗೆಯೇ ಕೆಲವು ಸರಕುಗಳ ಗುಣಮಟ್ಟ ನಿರ್ಧಾರಕ್ಕೆ ಭಾರತ ತನ್ನದೇ ಆದ ಮಾನದಂಡ ಮತ್ತು ಪ್ರಮಾಣವನ್ನು ಬಳಸುತ್ತಿತ್ತು. ಈಗ ಈ ಮೋದಿ-ಟ್ರಂಪ್ ಒಪ್ಪಂದದ ಪ್ರಕಾರ ಆ ಎಲ್ಲಾ ಅಡೆತಡೆಗಳನ್ನು ಸಂಪೂರ್ಣವಾಗಿ ತೆಗೆಯಲಾಗಿದೆ ಮತ್ತು ಭಾರತದ ನಿಯಂತ್ರಣ ಸಾರ್ವಭೌಮತೆಯನ್ನು ಅಮೆರಿಕಕ್ಕೆ ಮೋದಿ ಮಾರಿಕೊಂಡಿದ್ದಾರೆ.

5. ರಶ್ಯ ತೈಲ ನಿಲುಗಡೆ ಮಾತ್ರವಲ್ಲ, ಸಂಪೂರ್ಣ ಅಮೆರಿಕ ಗುಲಾಮಿ

ಅಮೆರಿಕ ಬಿಡುಗಡೆ ಮಾಡಿರುವ Fact Sheetನಲ್ಲಿ ಸ್ಪಷ್ಟವಾಗಿರುವಂತೆ ಅಮೆರಿಕ ಸುಂಕವನ್ನು ಶೇ. 18ಕ್ಕಾದರೂ ಇಳಿಸಲು ಒಪ್ಪಿಕೊಳ್ಳಲು ಪ್ರಧಾನ ಕಾರಣವೇ ‘‘… India’s willingness to align with the United States…’’ (ಭಾರತವು ಅಮೆರಿಕದ ಆಸಕ್ತಿಗಳ ಜೊತೆಗೆ ನಿಲ್ಲಲು ಒಪ್ಪಿಕೊಂಡಿರುವುದು). to confront shared national security challenges (ಮತ್ತು ಪರಸ್ಪರ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಅಮೆರಿಕದ ಜೊತೆಯಾಗಿ ಎದುರಿಸಲು) ಒಪ್ಪಿಕೊಂಡಿರುವುದು. ಅಮೆರಿಕದ ವಾಣಿಜ್ಯ, ಅಮೆರಿಕದ ಭದ್ರತೆಗೆ ಯಾರ್ಯಾರು ಶತ್ರುಗಳೋ ಅವರೆಲ್ಲರನ್ನೂ ಭಾರತವು ಶತ್ರುವೆಂದು ಭಾವಿಸುವುದು ಮತ್ತು ಭಾರತದ ಹಿತಾಸಕ್ತಿಯ ಪರವಾಗಿದ್ದರೂ ಅಮೆರಿಕದ ಒಪ್ಪಿಗೆ ಇಲ್ಲದಿದ್ದರೆ ಅವರ ಜೊತೆ ಒಪ್ಪಂದ ಮಾಡಿಕೊಳ್ಳದಿರುವುದು. ಅದಕ್ಕಾಗಿಯೇ ಅಮೆರಿಕ ಇದನ್ನು ಕೇವಲ ವಾಣಿಜ್ಯ ಒಪ್ಪಂದ ಎಂದು ಮಾತ್ರವಲ್ಲದೆ:

‘‘ಭಾರತ-ಅಮೆರಿಕ ಆರ್ಥಿಕ ಭದ್ರತಾ ಪಾಲುದಾರಿಕೆಯನ್ನು ಸಶಕ್ತಗೊಳಿಸುವ ಮತ್ತು ಅದಕ್ಕೆ ಅಡ್ಡಿಪಡಿಸುವ ಮೂರನೇ ರಾಷ್ಟ್ರಗಳ ಮೇಲೆ ಜಂಟಿಯಾಗಿ ಕ್ರಮ ತೆಗೆದುಕೊಳ್ಳುವ ಒಪ್ಪಂದ ಎಂದು ಬಣ್ಣಿಸುತ್ತದೆ’’ (United States and India agree to strengthen economic security alignment to enhance supply chain resilience and innovation through complementary actions to address non-market policies of third parties)

ಈ ಹಿನ್ನೆಲೆಯಲ್ಲೇ ಅಮೆರಿಕದ ತೈಲಕ್ಕಿಂತ ಶೇ. 30ರಷ್ಟು ರಶ್ಯ ತೈಲ ಅಗ್ಗವಾಗಿದ್ದರೂ ಭಾರತ ಅದನ್ನು ಕೊಳ್ಳಬಾರದೆಂದು ತಾಕೀತು ಮಾಡಿದೆ. ಅದನ್ನು ಒಪ್ಪಿಕೊಂಡ ಮೇಲೆ ಒಪ್ಪಂದಕ್ಕೆ ಮುಂದಾಗಿದೆ. ಆದರೆ ಇದರ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಭಾರತದ ವಾಣಿಜ್ಯ ಮಂತ್ರಿ ಮತ್ತು ವಿದೇಶಾಂಗ ಮಂತ್ರಿ ಒಬ್ಬರ ಮೇಲೆ ಒಬ್ಬರು ಜವಾಬ್ದಾರಿ ಎತ್ತಿ ಹಾಕುವ ನಾಟಕವಾಡುತ್ತಿದ್ದರೂ ಅಮೆರಿಕ ನಿನ್ನೆ ಬಿಡುಗಡೆ ಮಾಡಿರುವ ಈಚಿಛಿಣ Sheeಣನಲ್ಲಿ ಇದನ್ನು ಸ್ಪಷ್ಟವಾಗಿ ದಾಖಲಿಸಲಾಗಿದೆ.

ಮಾತ್ರವಲ್ಲದೆ..

‘‘...ಭಾರತ ರಶ್ಯದಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತೈಲ ಖರೀದಿ ಮಾಡದಂತೆ ನಿಗಾ ವಹಿಸಲಾಗುವುದು’’ ಎಂದು ಸ್ಪಷ್ಟಪಡಿಸಿದೆ.

ಇಂತಹ ಅವಮಾನಕರ, ಏಕಪಕ್ಷೀಯ ಹೇರಿಕೆಯನ್ನು ದ್ವಿಪಕ್ಷೀಯ ಒಪ್ಪಂದ ಎಂದು ಕರೆಯುವರು ಕೇವಲ ಅಂಧಭಕ್ತರಲ್ಲ, ದೇಶದ್ರೋಹಿಗಳು.

ಆದ್ದರಿಂದ ದೇಶದ ಬಗ್ಗೆ ಮತ್ತು ಜನರ ಬಗ್ಗೆ ಕಳಕಳಿಯಿರುವ ಎಲ್ಲಾ ನೈಜ ದೇಶಪ್ರೇಮಿಗಳು....

ಈ ದೇಶವಿರೋಧಿ, ರೈತವಿರೊಧಿ ಒಪ್ಪಂದ ಮತ್ತು ಮೋದಿ ಸರಕಾರದ ವಿರುದ್ಧ ಈ ದೇಶದ ರೈತಾಪಿ ಮತ್ತು ಜನಸಮುದಾಯ ಮತ್ತೊಂದು ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಬೇಕಿದೆ... ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಸುಂದರ್

contributor

Similar News