ಸಿಎಎ: ಮುಸ್ಲಿಮರ ಎದೆಗಿರಿಯುವ, ಹಿಂದೂಗಳ ಬೆನ್ನಿಗಿರಿಯುವ ತ್ರಿಶೂಲದ ಅಲಗು

Update: 2024-03-14 04:52 GMT
Editor : Thouheed | Byline : ಶಿವಸುಂದರ್,

ಭಾಗ- 2

ಬಿಜೆಪಿ ಅಧಿಕಾರಾವಧಿಗಳಲ್ಲಿ ವಿರೂಪಗೊಳ್ಳುತ್ತಾ ಹೋದ ಭಾರತದ ಪೌರತ್ವ ಕಾಯ್ದೆ

1998-2004

ಈ ಅವಧಿಯಲ್ಲಿ ಬಿಜೆಪಿ ಸರಕಾರ ಭಾರತದ ಪೌರತ್ವ ಕಾಯ್ದೆಗೆ ಹಲವು ಮೂಲಭೂತ ಬದಲಾವಣೆಗಳನ್ನು ತಂದಿತು. ಅದರಲ್ಲಿ ಪ್ರಮುಖವಾದವು:

1. ಆವರೆಗೆ ಭಾರತದಲ್ಲಿ ಎಲ್ಲಿ ಮತ್ತು ಯಾವಾಗ ಹುಟ್ಟಿದವರು ಪೌರತ್ವ ಪಡೆಯಬಹುದು ಎಂದಿದ್ದ ಅವಕಾಶವನ್ನು ಬದಲಿಸಲಾಯಿತು. 2004ರ ತಿದ್ದುಪಡಿಯಲ್ಲಿ 1987-2004ರ ನಡುವೆ ಹುಟ್ಟಿದವರು ಭಾರತದ ಪೌರತ್ವವನ್ನು ಪಡೆಯಬೇಕೆಂದರೆ ತಂದೆ ತಾಯಿಗಳಲ್ಲಿ ಒಬ್ಬರು ಭಾರತೀಯರಾಗಿರಲೇ ಬೇಕೆಂಬ ಷರತ್ತು ಸೇರಿಸಲಾಯಿತು. ಹಾಗೆಯೇ 2004ರ ನಂತರ ಹುಟ್ಟಿದವರ ತಂದೆ ತಾಯಿಗಳಿಬ್ಬರು ಭಾರತೀಯರಾಗಿರಬೇಕೆಂಬ ಅಥವಾ ಒಬ್ಬರು ಭಾರತೀಯರಾಗಿದ್ದು ಮತ್ತೊಬ್ಬರು ಅಕ್ರಮ ವಲಸಿಗರಾಗಿರಬಾರದೆಂಬ ಷರತ್ತನ್ನು ಸೇರಿಸಲಾಯಿತು.

2. 2004ರವರೆಗೆ ಅಕ್ರಮ ವಲಸಿಗರೆಂಬ ಪರಿಕಲ್ಪನೆಯೇ ಭಾರತದ ಪೌರತ್ವ ಕಾಯ್ದೆಯಲ್ಲಿರಲಿಲ್ಲ. ಅದನ್ನು ವಾಜಪೇಯಿಯವರ ಕಾಲದಲ್ಲೇ 2004ರ ತಿದ್ದುಪಡಿಯಲ್ಲಿ ಸೇರಿಸಲಾಯಿತು. ಯಾರು ಸರಿಯಾದ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿರುತ್ತಾರೋ ಮತ್ತು ಯಾರು ವೀಸಾ ಅವಧಿಯ ನಂತರವೂ ಭಾರತದಲ್ಲಿ ಉಳಿದುಕೊಂಡಿರುತ್ತಾರೋ ಅವರೆಲ್ಲರನ್ನು ಅಕ್ರಮ ವಲಸಿಗರೆಂದು ಘೋಷಿಸಲಾಯಿತು ಹಾಗೂ ಆ ರೀತಿ ಘೋಷಿಸಲ್ಪಟ್ಟವರಿಗೆ ಯಾವುದೇ ಸಕ್ರಮ ಮಾರ್ಗಗಳಿಂದಲೂ (Registration and Naturalisation) ಪೌರತ್ವವನ್ನು ಕೊಡದಂತೆ ಮಾಡಲಾಯಿತು.

ಆದರೆ ಅದೇ ಸಮಯದಲ್ಲಿ ಪೌರತ್ವ ನಿಯಮಾವಳಿಯಲ್ಲಿ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ವಲಸೆ ಬಂದಿರುವ ಅಲ್ಪಸಂಖ್ಯಾತರನ್ನು (ಅರ್ಥಾತ್ ಹಿಂದೂ ಹಾಗೂ ಸಿಖ್ಖರನ್ನು) ಅಕ್ರಮ ವಲಸಿಗರೆಂದು ಕರೆಯದೆ ನಿರಾಶ್ರಿತರೆಂದು ಗುರುತಿಸಲಾಯಿತು ಹಾಗೂ ಅವರಿಗೆ ಆಶ್ರಯ ಮತ್ತು ಪೌರತ್ವವನ್ನು ಕೊಡುವ ನಿಟ್ಟಿನಲ್ಲಿ ಗುಜರಾತ್ ಮತ್ತು ರಾಜಸ್ಥಾನದ ಹಲವು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಯಿತು.

3. ಹಾಗೂ ಭಾರತದ ಪೌರತ್ವದ ಕಾಯ್ದೆಯಲ್ಲಿ 14-ಎ ತಿದ್ದುಪಡಿಯನ್ನು ಸೇರಿಸಲಾಯಿತು. ಅದು ಭಾರತ ಸರಕಾರಕ್ಕೆ ಭಾರತದ ಎಲ್ಲಾ ನಾಗರಿಕರನ್ನು ಕಡ್ಡಾಯವಾಗಿ ನೋಂದಾಯಿಸಿಕೊಂಡು ಪ್ರತಿಯೊಬ್ಬ ನಾಗರಿಕರಿಗೂ ರಾಷ್ಟ್ರೀಯ ಗುರುತಿನ ಪತ್ರವನ್ನು (NIC)ಕೊಡುವ ಅವಕಾಶವನ್ನು ಒದಗಿಸಿತು ಹಾಗೂ ಅದಕ್ಕೆ ಬೇಕಾದ ಸೂಕ್ತ ಪ್ರಕ್ರಿಯೆಗಳನ್ನು ರೂಪಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಿತು.

ಹೀಗೆ ಗುರುತು ಪತ್ರವಿಲ್ಲದವರು ನಾಗರಿಕರಲ್ಲವೆಂಬ ನಿಯಮವನ್ನು ಹಾಗೂ ಈ ದೇಶದ ನಾಗರಿಕರು ಯಾರು ಎಂದು ನಿರ್ಧರಿಸಲು ಬೇಕಾದ ಅಧಿಕಾರವನ್ನು ವಾಜಪೇಯಿ ಸರಕಾರ ಪಡೆದುಕೊಂಡುಬಿಟ್ಟಿತು.

ಹೀಗೆ ವಾಜಪೇಯಿ ಸರಕಾರದ ಪೌರತ್ವ ಪರಿಕಲ್ಪನೆಯ ಹಿಂದುವೀಕರಣ ಯೋಜನೆ ಭಾಗವಾಗಿಯೇ 2003ರಲ್ಲಿ Citizenship (Registration Of Citizens and Issue Of National Identity Cards)Rules 2003 (ಪೌರತ್ವ ನೋಂದಣಿ ನಿಯಮಾವಳಿಗಳನ್ನು) ಜಾರಿ ಮಾಡಲಾಯಿತು.

ಇಂದು ಇಡೀ ಭಾರತವನ್ನು ಆತಂಕಕ್ಕೆ ದೂಡಿರುವ ಎನ್‌ಪಿಆರ್ ಯೋಜನೆ ಮತ್ತು ಎನ್‌ಆರ್‌ಸಿಗಳ ಹುಟ್ಟಿಗೆ ಕಾರಣವಾಗಿರುವುದು ಇದೇ Citizenship (Registration Of Citizens and Issue Of National Identity Cards) Rules 2003ದ ನಿಯಮಾವಳಿಗಳೇ ಆಗಿವೆ.

ಆದರೆ ಇದನ್ನು ಭಾರತದ ಪೌರತ್ವ ಕಾಯ್ದೆಯ 18ನೇ ನಿಯಮದಡಿ ಜಾರಿ ಮಾಡಲಾಗಿದೆಯೇ ವಿನಾ ರಾಷ್ಟ್ರೀಯ ನಾಗರಿಕತ್ವ ನೋಂದಣಿಗೆ ಅವಕಾಶ ಮಾಡಿಕೊಡುವ 14-ಎ ಅಡಿಯಲ್ಲಲ್ಲ!

ಅಷ್ಟು ಮಾತ್ರವಲ್ಲ. ಪೌರತ್ವ ನಿಯಮಾವಳಿಯ 18ನೇ ನಿಯಮದ 4ನೇ ಉಪನಿಯಮದಡಿ ಈ ನಿಯಮಾವಳಿಗಳನ್ನು ಸರಕಾರ ಮಾಡಬಹುದಾದರೂ ಅದನ್ನು ಸಾಧ್ಯವಾದಷ್ಟು ಕೂಡಲೇ ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆದುಕೊಳ್ಳಬೇಕು.

ಆದರೆ ಈವರೆಗೆ ಪೌರತ್ವ ನಿಯಮಾವಳಿ 2003ನ್ನು ಸಂಸತ್ತಿನಲ್ಲಿ ಮಂಡಿಸಿಯೂ ಇಲ್ಲ. ಅನುಮೋದನೆಯನ್ನೂ ಪಡೆದುಕೊಂಡಿಲ್ಲ.

ಈ ಪೌರತ್ವ ನಿಯಮಾವಳಿ 2003ರ ಉಪನಿಯಮ 4(1)ರ ಪ್ರಕಾರ-ಕೇಂದ್ರ ಸರಕಾರವು ಒಂದು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಪಟ್ಟಿಯನ್ನು ತಯಾರಿಸುವ ಸಲುವಾಗಿ ದೇಶದಲ್ಲಿ ವಾಸಿಸುತ್ತಿರುವ ಎಲ್ಲಾ ವ್ಯಕ್ತಿಗಳ ಮತ್ತು ಕುಟುಂಬಗಳ ಪೌರತ್ವ ವಿವರಗಳನ್ನೂ ಒಳಗೊಂಡಂತೆ ಅಗತ್ಯವಿರುವ ಎಲ್ಲಾ ವಿವರಗಳನ್ನು ದೇಶಾದ್ಯಂತ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬಹುದು (ಎನ್‌ಪಿಆರ್).

ಉಪನಿಯಮ 4(3)ರ ಪ್ರಕಾರ-ಸ್ಥಳೀಯ ಮಟ್ಟದ ರಾಷ್ಟ್ರೀಯ ನಾಗರಿಕರ ಪಟ್ಟಿಯನ್ನು ತಯಾರಿಸುವ ಸಲುವಾಗಿ ಎನ್‌ಪಿಆರ್‌ನಲ್ಲಿ ಸಂಗ್ರಹಿಸಲಾದ ವ್ಯಕ್ತಿಗಳ ಮತ್ತು ಕುಟುಂಬಗಳ ವಿವರಗಳನ್ನು ಸ್ಥಳೀಯ ನಾಗರಿಕ ನೋಂದಣಿ ರಿಜಿಸ್ಟ್ರಾರ್ (ಅಂದರೆ ಸ್ಥಳೀಯ ತಹಶೀಲ್ದಾರರು) VERIFY AND SCRUTINIZE ಅಂದರೆ ಪರೀಕ್ಷಿಸಿ ಪರಿಶೀಲಿಸುತ್ತಾರೆ.

ಉಪನಿಯಮ 4(4)ರ ಪ್ರಕಾರ-ಈ ಪರಿಶೀಲನಾ ಹಂತದಲ್ಲಿ ಯಾವುದಾದರೂ ವ್ಯಕ್ತಿಯ ಪೌರತ್ವ ಸಂಬಂಧಿ ವಿವರಗಳು ಸಂಶಯಾಸ್ಪದ ವಾಗಿ ಕಂಡುಬಂದಲ್ಲಿ ಮತ್ತಷ್ಟು ಪರಿಶೀಲನೆ ಮಾಡಲು ಎನ್‌ಪಿಆರ್ ಪಟ್ಟಿಯಲ್ಲಿರುವ ಆ ವ್ಯಕ್ತಿಯ ಹೆಸರಿನ ಮುಂದೆ ಸ್ಥಳೀಯ ರಿಜಿಸ್ಟ್ರಾರ್ ಅವರು ಸೂಕ್ತ ಟಿಪ್ಪಣಿಗಳನ್ನು ದಾಖಲಿಸುತ್ತಾರೆ ಮತ್ತು ಪರಿಶೀಲನೆ ಪೂರ್ಣಗೊಂಡ ನಂತರ ಅನುಮಾನಾಸ್ಪದವಾದ ಪೌರತ್ವವೆಂದು ಕಂಡುಬಂದಲ್ಲಿ ಸೂಕ್ತವಾದ ನಮೂನೆಯಲ್ಲಿ ಆ ವ್ಯಕ್ತಿಗಳಿಗೆ ಅಥವಾ ಕುಟುಂಬಗಳಿಗೆ ತಿಳಿಸುತ್ತಾರೆ.

ಉಪನಿಯಮ 7(2)ರ ಪ್ರಕಾರ- ತನ್ನ ಕುಟುಂಬಕ್ಕೆ ಸಂಬಂಧಪಟ್ಟ ಎನ್‌ಪಿಆರ್ ಪ್ರಶ್ನಾವಳಿಗಳಿಗೆ ಸರಿಯಾದ ಉತ್ತರ ಕೊಡುವುದು ಕುಟುಂಬದ ಮುಖ್ಯಸ್ಥನ ಜವಾಬ್ದಾರಿಯಾಗಿದೆ.

2004-2014

ಈ ಅವಧಿಯಲ್ಲಿ ಅಧಿಕಾರದಲ್ಲಿ ಇದ್ದದ್ದು ಯುಪಿಎ ಸರಕಾರ. ಆದರೆ ಈ ಅವಧಿಯಲ್ಲಿ ಯುಪಿಎ ಸರಕಾರ ವಾಜಪೇಯಿ ಸರಕಾರ ಜಾರಿಗೆ ತಂದ ಕಾಯ್ದೆ ಅಥವಾ ತಿದ್ದುಪಡಿಗಳನ್ನು ರದ್ದು ಮಾಡುವುದಿರಲಿ ಅದರ ಕ್ರೂರ ಉಪನಿಯಮಗಳನ್ನು ಸಹ ಬದಲಿಸಲಿಲ್ಲ. ಬದಲಿಗೆ 2010ರಲ್ಲಿ ಅದೇ ನಿಯಮಾವಳಿಗಳನ್ನು ಆಧರಿಸಿ ಎನ್‌ಪಿಆರ್ ಮಾಡಿತು. ಆದರೆ ಇಂದಿನ ಬಿಜೆಪಿಯಂತೆ ಎನ್‌ಪಿಆರ್ ಮಾಹಿತಿಗಳನ್ನು ಪರಿಶೀಲಿಸಿ ನಾಗರಿಕರನ್ನು ವಿಂಗಡಿಸಿ ಗುರುತುಪತ್ರ ಕೊಡುವುದರ ಬದಲಿಗೆ ಎನ್‌ಪಿಆರ್‌ನಲ್ಲಿ ನೋಂದಾಯಿಸಿಕೊಂಡ ಎಲ್ಲರಿಗೂ ಆಧಾರ್ ಗುರುತು ಪತ್ರವನ್ನು ನೀಡಿತು. ಆಗ ವಿರೋಧ ಪಕ್ಷವಾಗಿದ್ದ ಬಿಜೆಪಿ ಇದನ್ನು ಖಂಡತುಂಡವಾಗಿ ವಿರೋಧಿಸಿತ್ತು.

ಅಲ್ಲದೆ, ಬಾಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನಗಳಿಂದ ಭಾರತಕ್ಕೆ ಬಂದಿರುವ ಅಲ್ಲಿನ ಅಲ್ಪಸಂಖ್ಯಾತರಿಗೆ ಅರ್ಥಾತ್ ಆ ದೇಶಗಳ ಹಿಂದೂ, ಸಿಖ್ ಇನ್ನಿತರರಿಗೆ ವಿಶೇಷ ಆದ್ಯತೆ ಹಾಗೂ ರಿಯಾಯಿತಿಗಳನ್ನು ಕೊಡುವ ವಿಶೇಷ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ಯುಪಿಎ ಸರಕಾರವೇ ಆಗಿತ್ತು.

2014-2019

2014ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಮೋದಿ ಯುಪಿಎ ಸರಕಾರದ ಮೇಲಿನ ಕ್ರಮಗಳನ್ನೇ ಆಧಾರವಾಗಿರಿಸಿಕೊಂಡು 1920ರ ಪಾಸ್‌ಪೋರ್ಟ್ ಕಾಯ್ದೆಯ ನಿಯಮ 2ರ ಉಪ ನಿಯಮ (3-ಸಿ) ಮತ್ತು 1946ರ ವಿದೇಶಿಯರ ಕಾಯ್ದೆಗೆ ತಿದ್ದುಪಡಿ ತಂದಿತು.

ಅದರ ಪ್ರಕಾರ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ 2014 ಡಿಸೆಂಬರ್ 31ಕ್ಕೆ ಮುಂಚೆ ಭಾರತಕ್ಕೆ ಬಂದಿರುವ ಹಿಂದೂ, ಸಿಖ್, ಜೈನ, ಬೌದ್ಧ, ಕ್ರೈಸ್ತ ಹಾಗೂ ಪಾರ್ಸಿ ವಲಸಿಗರ ವೀಸಾ ಅವಧಿ ಮುಗಿದಿದ್ದರೂ ಅಥವಾ ಸರಿಯಾದ ದಾಖಲೆ ಪತ್ರಗಳಿಲ್ಲದಿದ್ದರೂ ಅವರನ್ನು ಅಕ್ರಮ ವಲಸಿಗರೆಂದು ಪರಿಗಣಿಸದೆ ಅವರಿಗೆ ದೀರ್ಘಾವಧಿ ವೀಸಾ ಕೊಡಲು ಅವಕಾಶವಿತ್ತಿತು. ಅಂದರೆ 2019ರಲ್ಲಿ ತರಲಾದ ಸಿಎಎ ಕಾಯ್ದೆಗೆ ಬೇಕಾದ ಮುನ್ನುಡಿಯನ್ನು 2015ರಲ್ಲೇ ಬರೆಯಿತು.

2016ರಲ್ಲಿ ಮೋದಿ ಸರಕಾರ ಆಧಾರ್ ಕಾಯ್ದೆಗೂ ತಿದ್ದುಪಡಿ ತಂದಿತು ಹಾಗೂ ಆಧಾರ್ ಎನ್ನುವುದು ನಮ್ಮ ಗುರುತಿನ ಪುರಾವೆಯೇ ಹೊರತು ಪೌರತ್ವದ ಪುರಾವೆಯಲ್ಲ ಎಂದು ಘೋಷಿಸಿತು.

2019ರ ಜುಲೈನಲ್ಲಿ ಎನ್‌ಪಿಆರ್ ಪ್ರಕ್ರಿಯೆಯನ್ನು ಘೋಷಿಸಿ ಪ್ರತಿಯೊಬ್ಬ ಭಾರತೀಯನ ಪೌರತ್ವವನ್ನು ಪರಿಶೀಲನೆಗೆ ಒಡ್ಡುವ ಆರು ಹೊಸ ಪ್ರಶ್ನೆಗಳನ್ನು ಸೇರಿಸಿತು. ಡಿಸೆಂಬರ್‌ನಲ್ಲಿ ಸಿಎಎ ಜಾರಿ ಮಾಡಿತು.

2024ರಲ್ಲಿ ನಿಯಮಾವಳಿ ಜಾರಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್,

contributor

Similar News