ಅಂಬೇಡ್ಕರ್‌ರನ್ನು ದ್ವೇಷಿಸಿದ್ದ ಸಂಘಪರಿವಾರ ಹಿಂದುತ್ವವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದ ಅಂಬೇಡ್ಕರ್

Update: 2024-04-25 05:14 GMT
Editor : Thouheed | Byline : ಶಿವಸುಂದರ್,

ಭಾಗ-2

ಮನುಸ್ಮತಿ ಸುಟ್ಟ ಅಂಬೇಡ್ಕರ್- ಮನುಸ್ಮತಿಯೇ ಸಂವಿಧಾನವೆಂದ ಆರೆಸ್ಸೆಸ್-ಸಾವರ್ಕರ್

ಮೊದಲನೆಯದಾಗಿ ಅವರ 1932ರ ‘ಕಿರ್ಲೋಸ್ಕರ್’ ಲೇಖನವನ್ನು ಗಮನಿಸೋಣ.

ಆದರೆ, ಇದಕ್ಕೆ 5 ವರ್ಷಗಳಷ್ಟು ಮುಂಚೆಯೇ, 1927ರ ಡಿಸೆಂಬರ್‌ನಲ್ಲಿ ಅಂಬೇಡ್ಕರ್ ಅವರು ಮನುಸ್ಮತಿಯನ್ನು ದಲಿತ-ಮಹಿಳಾ-ಮಾನವತೆಯ ವಿರೋಧಿ ಗ್ರಂಥ ಎಂದು ಸುಟ್ಟುಹಾಕಿದ್ದರು ಎಂಬುದನ್ನು ನೆನಪಿನಲ್ಲಿಡೋಣ. ಹಾಗೆಯೇ ಅಸ್ಪಶ್ಯತೆಯ ಮೂಲ ಹಿಂದೂ ಧರ್ಮದಲ್ಲಿದೆಯೆಂದೂ, ಅದರ ಸಾರ ಮನುಸ್ಮತಿಯಲ್ಲಿದೆಯೆಂದೂ, ಹಾಲಿ ಇರುವ ಬ್ರಾಹ್ಮಣಶಾಹಿ ಸಾಮಾಜಿಕ ವ್ಯವಸ್ಥೆಯು ನಿಂತಿರುವುದೇ ಮನುಸ್ಮತಿಯ ನಿರ್ದೇಶನ ಹಾಗೂ ಪ್ರೇರಣೆಗಳಿಂದ ಎಂದೂ ಸ್ಪಷ್ಟ ಪಡಿಸಿದ್ದರು.

ಇಂತಹ ಮನುಸ್ಮತಿಯ ಬಗ್ಗೆ ಸಾವರ್ಕರ್ ಅವರು ತಮ್ಮ ‘ಕಿರ್ಲೋಸ್ಕರ್’ ಲೇಖನದಲ್ಲಿ ಹೀಗೆ ಬರೆಯುತ್ತಾರೆ:

‘ವೇದಗಳ ನಂತರದಲ್ಲಿ ನಮ್ಮ ಹಿಂದೂ ರಾಷ್ಟ್ರವು ಅತ್ಯಂತ ಪೂಜನೀಯ ಎಂದು ಗೌರವಿಸುವ ಶಾಸ್ತ್ರಗ್ರಂಥವೆಂದರೆ ಮನುಸ್ಮತಿ. ಇದು ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ-ಸಂಪ್ರದಾಯಗಳ, ವಿಚಾರ ಹಾಗೂ ಆಚಾರಗಳ ಆಧಾರಪ್ರಾಯವಾದ ಗ್ರಂಥವಾಗಿದೆ. ಈ ಪುಸ್ತಕವು ನಮ್ಮ ರಾಷ್ಟ್ರವು ಶತಮಾನಗಳಿಂದ ಸಾಧಿಸುತ್ತಿರುವ ಆಧ್ಯಾತ್ಮಿಕ ಹಾಗೂ ದೈವಿಕ ಮುನ್ನಡೆಗಳನ್ನು ಸೂತ್ರೀಕರಿಸಿದೆ. ಇಂದಿಗೂ ಈ ದೇಶದ ಕೋಟ್ಯಂತರ ಜನರ ಜೀವನ ಮತ್ತು ನಡೆಗಳು ಮನುಸ್ಮತಿಯನ್ನೇ ಅನುಸರಿಸುತ್ತದೆ. ಇಂದು ಮನುಸ್ಮತಿಯೇ ಹಿಂದೂ ಕಾನೂನು ಕೂಡಾ ಆಗಿದೆ ಹಾಗೂ ಇದು ಹಿಂದೂ ದೇಶವಾಗಿದೆ’ ಎಂದು ಘೋಷಿಸುತ್ತಾರೆ.

(VD Savarkar, ‘Women in Manusmriti’ in Savarkar Samagar (collection of Savarkar’s writings in Hindi), Prabhat, Delhi, vol. 4, p. 415 ಶಂಸುಲ್ ಇಸ್ಲಾಮ್ ಅವರ ‘ಮಿಥ್ಸ್ ಆ್ಯಂಡ್ ಫ್ಯಾಕ್ಟ್ಸ್’ ಪುಸ್ತಕದಲ್ಲಿ ಉಲ್ಲೇಖ)

ಆದರೆ ಮನುಸ್ಮತಿಯ ಕಾನೂನುಗಳು ಮತ್ತು ಸೂತ್ರಗಳು ಎಷ್ಟು ಮಹಿಳಾ ವಿರೋಧಿ ಮತ್ತು ಅಸ್ಪಶ್ಯ ವಿರೋಧಿ ಇದೆ ಎಂಬುದನ್ನು ಆ ವೇಳೆಗಾಗಲೇ ಫುಲೆ-ಅಂಬೇಡ್ಕರ್ ಹಾಗೂ ಇನ್ನಿತರ ಬಹುಜನ ಚಿಂತಕರು ಬಯಲು ಮಾಡಿದ್ದರು. ಹೀಗಾಗಿ ಈ ನಿಟ್ಟಿನಲ್ಲಿ ಮನುಸ್ಮತಿಯ ಬಗ್ಗೆ ಎದ್ದಿರುವ ಪ್ರಶ್ನೆಯನ್ನು ಸಾವರ್ಕರ್ ಅವರು ಜಾಣತನದಿಂದ ಬಗೆಹರಿಸುತ್ತಲೇ ಮನುಸ್ಮತಿಯ ಪಾರಮ್ಯವನ್ನು ಎತ್ತಿಹಿಡಿಯುತ್ತಾರೆ. ಅವರ ಪ್ರಕಾರ:

‘‘..ಇಂದಿನ ದೃಷ್ಟಿಯಲ್ಲಿ ನೋಡುವುದಾದರೆ ಯಾವೆಲ್ಲ ವಿಷಯಗಳು ಮನುಸ್ಮತಿಯಲ್ಲಿ ಪ್ರತಿಗಾಮಿ ಎಂದು ಕಂಡುಬರುವುದೋ ಅವುಗಳನ್ನು ಕೈಬಿಡಬೇಕು ಎನ್ನುವುದು ಸರಿ. ಆದರೆ ಅಷ್ಟು ಮಾತ್ರಕ್ಕೆ ಮನುಸ್ಮತಿ ಅಪಾಯಕಾರಿಯೋ ಅಥವಾ ಕಾಲಬಾಹಿರವೋ ಆಗಿಬಿಡುವುದಿಲ್ಲ. ಬ್ಯಬಿಲೋನಿಯಾ, ಈಜಿಪ್ಟ್, ಹೀಬ್ರು, ಗ್ರೀಸ್ ಮತ್ತು ರೋಮನ್ ಸಮಾಜಗಳ ಸಾಮಾಜಿಕ ಸೂತ್ರಗಳಿಗೆ ಹೋಲಿಸಿದಲ್ಲಿ ಮನುಸ್ಮತಿ ಅವೆಲ್ಲಕ್ಕಿಂತ ಎತ್ತರದಲ್ಲಿ ನಿಲ್ಲುತ್ತದೆ. ಅದಕ್ಕಾಗಿ ನಾವು ಅದಕ್ಕೆ ಸಕಲ ಗೌರವಗಳನ್ನೂ ಸಲ್ಲಿಸಬೇಕು’’ ಎಂದು ಮನುಸ್ಮತಿಯನ್ನು ಸುಟ್ಟ ಅಂಬೇಡ್ಕರ್ ಅವರಿಗೆ ನೇರವಾಗಿ ಸವಾಲು ಹಾಕುತ್ತಾರೆ.

ಇತರ ನಾಗರಿಕತೆಗಳ ಸಾಮಾಜಿಕ ಸೂತ್ರಗಳಿಗಿಂತ ಮನುಸ್ಮತಿ ಶ್ರೇಷ್ಠವೆಂಬುದು ಸಾವರ್ಕರ್ ಅವರ ವಾದವಾದರೆ, 1950ರಲ್ಲಿ ಮನುಸ್ಮತಿಯನ್ನೂ ಒಳಗೊಂಡಂತೆ ಜಗತ್ತಿನ ಎಲ್ಲಾ ಪುರಾತನ ನಾಗರಿಕತೆಗಳ ಸಾಮಾಜಿಕ ಸೂತ್ರಗಳಿಗಿಂತ ಉನ್ನತವಾದ ಮೌಲ್ಯವನ್ನು ಪ್ರತಿಪಾದಿಸುವ ಅಂಬೇಡ್ಕರ್ ನೇತೃತ್ವದಲ್ಲಿ ತಯಾರಾದ ಭಾರತದ ಸಂವಿಧಾನದ ಬಗ್ಗೆ ಸಾವರ್ಕರ್ ಮತ್ತು ಆರೆಸ್ಸೆಸ್‌ನ ನಿಲುವು ಏನಾಗಿತ್ತು?

1949ರ ನವೆಂಬರ್ 26ರಂದು ಸಂವಿಧಾನ ಬರಹ ಮುಗಿದು ನಾಡಿಗೆ ಅರ್ಪಣೆಯಾದ ಕೇವಲ ನಾಲ್ಕು ದಿನಗಳ ನಂತರ 1949ರ ನವೆಂಬರ್ 30ರಂದು ಆರೆಸ್ಸೆಸ್‌ನ ಮುಖಪತ್ರಿಕೆಯಾದ ‘ಆರ್ಗನೈಸರ್’ನಲ್ಲಿ ಸಂವಿಧಾನವನ್ನು ಹೀಗೆಳೆಯುತ್ತಾ ಹೀಗೆ ಬರೆದುಕೊಳ್ಳುತ್ತಾರೆ:

‘‘ಭಾರತದ ಸಂವಿಧಾನದ ಬಗ್ಗೆ ಅತ್ಯಂತ ಹೀನಾಯವಾದದ್ದು ಏನೆಂದರೆ ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ವಾಸ್ತವವಾಗಿ ನಮ್ಮ ಮನುಸ್ಮತಿ ಅತ್ಯಂತ ಪ್ರಾಚೀನವಾಗಿದ್ದು ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರವನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ’’ ಎಂದು ಟೀಕಿಸುತ್ತಾರೆ..

ಗೋಳ್ವಾಲ್ಕರ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂಬೇಡ್ಕರ್ ಅವರ ಜಾತಿ ವಿನಾಶ ಯೋಜನೆಯ ವಿರುದ್ಧ ಹೀಗೆ ಕಿಡಿ ಕಾರುತ್ತಾರೆ:

‘‘ಈ ಜಾತಿ ವಿನಾಶದ ಪ್ರತಿಪಾದನೆಗಳು ಭಾರತದ ರಾಜಕೀಯವನ್ನು ಕುಲಗೆಡಿಸುತ್ತಿದೆ. ..ಆದ್ದರಿಂದ ಕೆಲವರು ಭಾವಿಸುವಂತೆ ಆರೆಸ್ಸೆಸ್ ಭಾರತವನ್ನು ಕೇವಲ ಇನ್ನೂರು ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತದೆ ಎಂಬುದು ಸುಳ್ಳು. ವಾಸ್ತವವಾಗಿ ನಾವು ಭಾರತವನ್ನು ಇನ್ನಷ್ಟು ಹಿಂದಕ್ಕೆ, ಕನಿಷ್ಠ ಸಾವಿರ ವರ್ಷದ ಹಿಂದಿನ ಉಜ್ವಲ ಯುಗಕ್ಕೆ ಕೊಂಡೊಯ್ಯಲು ಬಯಸುತ್ತೇವೆ’’

(The Organiser, 26 January 1962)

ಅದಕ್ಕೆ ಈ ಸಂಘಪರಿವಾರದ ಈ ಕುಲಪುರೋಹಿತರು ಇನ್ನೂ ಚಿತ್ರವಿಚಿತ್ರವಾದ ಆದರೆ ಅಪಾಯಕಾರಿಯಾದ ವಾದಗಳನ್ನು ಮುಂದಿಡುತ್ತಾರೆ. ಅವರ ಪ್ರಕಾರ:

‘‘ನಮ್ಮ ದೇಶದ ಈಶಾನ್ಯ ಹಾಗೂ ವಾಯುವ್ಯ ಭಾಗಗಳು ಬಹಳ ಸುಲಭವಾಗಿ ಮುಸ್ಲಿಮರ ದಾಳಿಗೆ ತುತ್ತಾಗಲು ಕಾರಣವೇ ಅಲ್ಲಿನ ಸಮಾಜ ವ್ಯವಸ್ಥೆ ಬುದ್ಧನ ಚಿಂತನೆಗಳ ದುಷ್ಪರಿಣಾಮಕ್ಕೆ ಒಳಗಾಗಿ ಜಾತಿ ವ್ಯವಸ್ಥೆಯನ್ನು ಸಡಿಲಗೊಳಿಸಿದ್ದರಿಂದ. ಆದರೆ ಅದಕ್ಕೆ ತದ್ವಿರುದ್ಧವಾಗಿ ಶತಮಾನಗಳ ಕಾಲ ಮುಸ್ಲಿಮರ ನೇರ ಆಧಿಪತ್ಯ ಹಾಗೂ ದಾಳಿಗೆ ಆಹುತಿಯಾಗಿದ್ದರೂ ದಿಲ್ಲಿ ಪ್ರಾಂತಗಳು ಪ್ರಧಾನವಾಗಿ ಹಿಂದೂವಾಗಿಯೇ ಉಳಿದುಕೊಂಡವು. ಅದಕ್ಕೆ ಪ್ರಧಾನ ಕಾರಣ ಅಲ್ಲಿ ಗಟ್ಟಿಯಾಗಿ ಉಳಿದುಕೊಂಡಿದ್ದ ಜಾತಿ ವ್ಯವಸ್ಥೆ ಎನ್ನುವುದನ್ನು ನಾವು ಮರೆಯಬಾರದು.’’

(RSS and Democracy (Delhi: Sampradayikta Virodhi Committee, nd) - ಆನಂದ್ ತೇಲ್ತುಂಬ್ಡೆಯವರು ಸಂಪಾದಿಸಿರುವ ಊIಓಆUಖಿಗಿಂ ಂಓಆ ಆಂಐIಖಿS ಗ್ರಂಥದಲ್ಲಿ ಉಲ್ಲೇಖಿತ)

ದಲಿತರು ಸ್ವಧರ್ಮದಲ್ಲೇ ಸಾಯಬೇಕು

- ದೀನದಯಾಳ್ ಉಪಾಧ್ಯ

ಆರೆಸ್ಸೆಸ್‌ನ ಮತ್ತೊಬ್ಬ ಗುರುವಾದ ಹಾಗೂ ಮೋದಿಯವರು ಬಹುವಾಗಿ ಉಲ್ಲೇಖಿಸುವ ದೀನ್ ದಯಾಳ್ ಉಪಾಧ್ಯ ಅವರಂತೂ ಇದೇ ಅತ್ಯಂತ ಅಪಾಯಕಾರಿ ಚಿಂತನೆಯನ್ನು ಘೋರವಾದ ಮೃದು ಭಾಷೆಯಲ್ಲಿ ಮುಂದಿಡುತ್ತಾರೆ:

‘‘ಈ ಆಧುನಿಕ ಯುಗದಲ್ಲಿ ಪದೇಪದೇ ಸಮಾನತೆಯ ಮಾತುಗಳನ್ನಾಡುತ್ತೇವೆ. ಆದರೆ ಈ ಸಮಾನತೆಯ ಕಲ್ಪನೆಯನ್ನು ಅತ್ಯಂತ ಎಚ್ಚರದಿಂದ ಬಳಸಬೇಕು. ಪ್ರಾಯೋಗಿಕವಾಗಿ ಮತ್ತು ವಾಸ್ತವ ದೃಷ್ಟಿಕೋನದಿಂದ ನೋಡುವುದಾದರೆ ಯಾವ ಇಬ್ಬರು ಮನುಷ್ಯರೂ ಸಮಾನರಲ್ಲ. ಪ್ರತಿಯೊಬ್ಬ ಮನುಷ್ಯರಿಗೂ ಅವರದೇ ಅದ ವಿಶಿಷ್ಟ ಗುಣಲಕ್ಷಣಗಳಿರುತ್ತವೆ ಮತ್ತು ಪ್ರತಿಯೊಬ್ಬರಿಗೂ ಅವರ ಆಸ್ಥೆ ಮತ್ತು ಗುಣಮಟ್ಟ, ಸಾಮರ್ಥ್ಯಗಳಿಗೆ ತಕ್ಕಂತೆ ಕರ್ತವ್ಯಗಳಿರುತ್ತವೆ ಮತ್ತು ಅವೆಲ್ಲಕ್ಕೂ ಸಮಾನ ಘನತೆಯಿರುತ್ತದೆ. ಇದನ್ನೇ ಸ್ವಧರ್ಮ ಎಂದು ಕರೆಯಲಾಗುತ್ತದೆ. ಸ್ವಧರ್ಮವನ್ನು ಅನುಸರಿಸುವುದೆಂದರೆ ದೇವರನ್ನು ಅನುಸರಿಸಿದಂತೆ. ಆದ್ದರಿಂದ ಪ್ರತಿಯೊಬ್ಬರೂ ಯವುದೇ ಸಂಘರ್ಷಕ್ಕೆ ಕಾರಣವಿಲ್ಲದಂತೆ ಸ್ವಧರ್ಮವನ್ನು ಆಚರಿಸುವುದು ಉತ್ತಮ ಸಮಾಜಕ್ಕೆ ಕಾರಣವಾಗುತ್ತದೆ.’’

ಇದನ್ನು ಮುಂದುವರಿಸಿಯೇ ಮೋದಿಯವರು ಚರಂಡಿ ಸ್ವಚ್ಛಮಾಡುವ ಪೌರಕಾರ್ಮಿಕರು ತಮ್ಮ ವೃತ್ತಿಯಲ್ಲಿ ಘನತೆಯನ್ನು ಮತ್ತು ದೇವರನ್ನು ಕಾಣುವ ಕರ್ಮಯೋಗಿಗಳು ಎಂದು ಬೊಗಳೆಯಾಡಿದ್ದು.

(upadhya, P. Bhishikar, Pandit Deendayal Upadhyaya: Ideology and Perception-Concept of the Rashtra, vol. 5)

ಬುದ್ಧನೊಬ್ಬ ದೇಶದ್ರೋಹಿ-ಸಾವರ್ಕರ್

ಹೀಗೆ ಈ ಬ್ರಾಹ್ಮಣಶಾಹಿ ತಿಳುವಳಿಕೆ ಆರೆಸ್ಸೆಸ್ ಮತ್ತು ಸಾವರ್ಕರ್ ಅನುಯಾಯಿಗಳ ಕಣಕಣದಲ್ಲೂ ಹರಿಯುತ್ತದೆ. ಅದಕ್ಕೆ ಸಾವರ್ಕರ್ ಮತ್ತು ಆರೆಸ್ಸೆಸ್‌ನ ಎಲ್ಲಾ ನಾಯಕರಿಗೆ ಸಮಾನತೆಯನ್ನು ಬೋಧಿಸಿದ ಬುದ್ಧನನ್ನು ಕಂಡರೆ ಎಲ್ಲಿಲ್ಲದ ಸಿಟ್ಟು. ಸಾವರ್ಕರ್ ಅವರಂತೂ ತಮ್ಮ ‘Six Glorious Epochs Of Indian History’ ಎಂಬ ತಮ್ಮ ಕೊನೆಯ ಪುಸ್ತಕದಲ್ಲಿ ಬುದ್ಧ ಹಾಗೂ ಬೌದ್ಧ ಧರ್ಮ ಈ ದೇಶದ ಪ್ರಥಮ ದೇಶದ್ರೋಹಿ ಧರ್ಮ ಮತ್ತು ವ್ಯಕ್ತಿ ಎಂದು ಕನಿಷ್ಠ 28 ಸಾರಿ ಹೀಗೆಳೆಯುತ್ತಾರೆ.

ಅಷ್ಟು ಮಾತ್ರವಲ್ಲ. 1956ರಲ್ಲಿ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮರಳಿದಾಗ ಹೇಡಿ ಧರ್ಮಕ್ಕೆ ಸೇರಿದ ಅಂಬೇಡ್ಕರ್ ಎಂದು ಸಾವರ್ಕರ್ ಅಂಬೇಡ್ಕರ್ ಅವರನ್ನು ಹೀಗೆಳೆಯುತ್ತಾರೆ. ಅದಕ್ಕೆ ಪ್ರತಿಯಾಗಿ ಅಂಬೇಡ್ಕರ್ ಸಮಾಲೋಚನೆಯೊಂದಿಗೆ ಪ್ರಕಟವಾಗುತ್ತಿದ್ದ ಪ್ರಬುದ್ಧ ಭಾರತ್ ಪತ್ರಿಕೆಯಲ್ಲಿ ಸಾವರ್ಕರ್ ಅವರ ವೀರ ಎಂಬ ಅಭಿದಾನದ ಔಚಿತ್ಯವನ್ನು ಹಾಗೂ ಅವರ ಶರಣಾಗತಿಯ ಚರಿತ್ರೆಯನ್ನು ನೆನಪಿಸಲಾಗುತ್ತದೆ.

(https://thewire.in/.../rss-ambedkar-camaraderie-fictional...)

ಹಾಗಿದ್ದರೂ ಸಾವರ್ಕರ್ ಅವರನ್ನು ಅತ್ಯಂತ ದೊಡ್ದ ದಲಿತೋದ್ಧಾರಕ ಎಂದು ಸ್ಥಾಪಿಸಲು ಮೋದಿ ಮತ್ತು ಆರೆಸ್ಸೆಸಿಗರು ಹೇಗೆ ಹಿಂದೂ ಐಕ್ಯತೆ ಸಾಧಿಸಲು ಅಸ್ಪಶ್ಯತೆ ನಿವಾರಣೆಗೆ ಪ್ರಯತ್ನಪಟ್ಟರು ಎಂದು ಹಲವಾರು ಉದಾಹರಣೆಗಳನ್ನು ಕೊಡುತ್ತಾರೆ.

ಆದರೆ ಸಾವರ್ಕರ್ ಅವರಾಗಲೀ, ಹೆಡಗೇವಾರ್ ಅವರಾಗಲೀ ಮೇಲ್ಜಾತಿಯವರ ಇಷ್ಟಕ್ಕೆ ವಿರುದ್ಧವಾಗಿ ಯಾವುದೇ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಲಿಖಿತ ಭರವಸೆ ಕೊಟ್ಟಿರುತ್ತಾರೆ.

ಉದಾಹರಣೆಗೆ 1939ರ ಹಿಂದೂ ಮಹಾಸಭಾ ಸಮ್ಮೇಳನದಲ್ಲಿ ತಮ್ಮ ಸಂಘವು ಅಸ್ಪಶ್ಯರಿಗೆ ದೇವಸ್ಥಾನಗಳಿಗೆ ಪ್ರವೇಶ ಕಡ್ಡಾಯ ಮಾಡುವ ಯಾವುದೇ ಮಸೂದೆಯನ್ನು ತಾವು ಶಾಸನ ಸಭೆಗಳಲ್ಲಿ ಮಂಡಿಸುವುದಿಲ್ಲವೆಂದು ಭರವಸೆ ನೀಡಿರುತ್ತಾರೆ. 1941ರಲ್ಲೂ ಮತ್ತೊಮ್ಮೆ ಇದೇ ಭರವಸೆಯನ್ನು ಸಾವರ್ಕರ್ ಕೊಡುತ್ತಾರೆ.

ಆದ್ದರಿಂದಲೇ ಅಲ್ಲವೇ ಅಂಬೇಡ್ಕರ್ ಅವರು 1951ರಲ್ಲಿ ಆರ್‌ಪಿಐ ನ ಚುನಾವಣಾ ಪ್ರಣಾಳಿಕೆಯನ್ನು ರೂಪಿಸುವಾಗ ತಮ್ಮ ಪಕ್ಷ ಯಾವ ಕಾರಣಕ್ಕೂ ಅತ್ಯಂತ ಪ್ರತಿಗಾಮಿ ಪಕ್ಷವಾದ ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ ಜೊತೆಗೆ ಯಾವುದೇ ರೀತಿಯ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದು.!

(ಅಂಬೇಡ್ಕರ್ ಅವರು ಕಮ್ಯುನಿಸ್ಟರೊಂದಿಗೂ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅದೇ ಸಮಯದಲ್ಲಿ ಘೋಷಿಸಿದ್ದರು. ಆದರೆ ಅದು ಮತ್ತೊಂದು ಪ್ರತ್ಯೇಕ ಲೇಖನಕ್ಕೆ ವಸ್ತುವಾಗಬೇಕಾದ ಬ್ರಾಹ್ಮಣಶಾಹಿಯ ದಿಗ್ವಿಜಯದ ಕಾರಣಗಳ ಮತ್ತೊಂದು ಕಥನ)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್,

contributor

Similar News