ಮಿ. ಪ್ರೈಮ್ ಮಿನಿಸ್ಟರ್-ದೇಶದ ಪ್ರಶ್ನೆಗಳಿಗೆ ಈಗಲಾದರೂ ಉತ್ತರಿಸುವಿರಾ?

ಈಗಲಾದರೂ ಮೋದಿ ಸರಕಾರದ ಕಾರ್ಯಕ್ರಮಗಳು, ನೀತಿಗಳು, ಘೋಷಣೆಗಳು ಎಷ್ಟರ ಮಟ್ಟಿಗೆ ಜನಪರವಾಗಿದ್ದವು? ಅವು ಮೋದಿ ಹೇಳುವಂತೆ ‘‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’’ ಆಗಿದೆಯೇ?, ದೇಶದಲ್ಲಿ ಎಲ್ಲವೂ ‘‘ಸಬ್ ಚಂಗಾಸಿ’’ಯಾಗಿದ್ದು ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವೆಡೆಗೆ ದಾಪುಗಾಲಿಡುತ್ತಿದೆಯೇ ಎಂಬ ಪ್ರಶ್ನೆಗಳನ್ನು ಕೇಳಬೇಕಿದೆ. ದೇಶಭಕ್ತಿಯೆಂದರೆ ಮೋದಿಭಕ್ತಿಯಲ್ಲ ಎಂದು ಭಾವಿಸಿರುವ ನೈಜ ದೇಶಭಕ್ತರು, ಈಗಲಾದರೂ: ‘‘ಮಿ. ಪ್ರೈಮ್ ಮಿನಿಸ್ಟರ್- ಈಗಲಾದರೂ ಉತ್ತರಿಸಿ- The Nation Wants To Know’’ ಎಂದು ನಿಲ್ಲಿಸಿ ಕೇಳಬೇಕಿದೆ.

Update: 2024-03-06 05:05 GMT
Editor : Thouheed | Byline : ಶಿವಸುಂದರ್

ಕಳೆದ ಹತ್ತು ವರ್ಷಗಳಲ್ಲಿ ಒಮ್ಮೆಯೂ ಪತ್ರಿಕಾಗೋಷ್ಠಿಯನ್ನು ನಡೆಸದೆ, ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಯಾವ ಪ್ರಶ್ನೆಗಳಿಗೂ ಉತ್ತರಿಸದೆ, ತನ್ನ ಮನ್ ಕಿ ಬಾತ್ ಬಿಟ್ಟರೆ, ಜನ್ ಕಿ ಬಾತ್ ಅನ್ನು ಕೇಳದೆ, ಕೇಳಿದವರನ್ನು ಉಳಿಯಗೊಡದೆ ರಾಜ್ಯಭಾರ ಮಾಡಿದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಇದೀಗ ಮೂರನೇ ಅವಧಿಯಲ್ಲೂ ಗೆದ್ದು ಬರಲು ಸಿದ್ಧವಾಗುತ್ತಿದೆ.

ಕಳೆದ ಹತ್ತುವರ್ಷಗಳ ಮೋದಿ ಅವಧಿಯಲ್ಲಿ ನೋಟು ನಿಷೇಧ, ಜನವಿರೋಧಿ ಜಿಎಸ್‌ಟಿ ಹೇರಿಕೆ, ಕೋವಿಡ್ ಕಾಲದ ಅವಿವೇಕಿ ಮತ್ತು ಕ್ರೂರ ಲಾಕ್‌ಡೌನ್‌ಗಳು ಹಾಗೂ ಕಾರ್ಪೊರೇಟ್ ಉದ್ಯಮಿಗಳ ಪರ ನೀತಿಯಿಂದಾಗಿ ಆರ್ಥಿಕತೆ ಕಂಗೆಟ್ಟಿದ್ದರೂ...

ಮಣಿಪುರ ಇನ್ನಿತ್ಯಾದಿ ಕಡೆಗಳಲ್ಲಿ ಬಿಜೆಪಿ-ಸಂಘಿ ಫ್ಯಾಶಿಸ್ಟ್ ಪ್ರೇರಿತ ಅರಾಜಕತೆ ಹಿಂಸಾಚಾರ ಮುಗಿಲು ಮುಟ್ಟಿದ್ದರೂ..

ಉತ್ತರ ಮತ್ತು ಈಶಾನ್ಯ ಗಡಿಯಲ್ಲಿ 2020ರಲ್ಲಿ ಚೀನಾ ವಶಪಡಿಸಿಕೊಂಡಿರುವ ನಾಲ್ಕು ಲಕ್ಷ ಚದರ ಕಿ.ಮೀ.ನಷ್ಟು ಭಾರತ ಭೂಮಿಯಲ್ಲಿ ಒಂದು ಇಂಚೂ ವಾಪಸ್ ಪಡೆದುಕೊಳ್ಳಲು ಸಾಧ್ಯವಾಗದಿದ್ದರೂ..

ದಲಿತರ ಮೇಲೆ ಮತ್ತು ಹೆಣ್ಣುಮಕ್ಕಳ ಮೇಲೆ ಹಿಂದೆಂದಿಗಿಂತಲೂ ಹೆಚ್ಚು ಮತ್ತು ದಾರುಣ ಅತ್ಯಾಚಾರಗಳು ನಡೆಯುತ್ತಿದ್ದರೂ..

ರೈತರು ಮತ್ತು ನಿರುದ್ಯೋಗಿಗಳು ಈ ಅವಧಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ..

ದೇಶದ ತುತ್ತೂರಿ ಮಾಧ್ಯಮಗಳು ಈ ಬಗ್ಗೆ ಪ್ರಧಾನಿ ಮೋದಿಯವರ ನ್ನು ಗಟ್ಟಿಯಾಗಿ ಒಂದು ಪ್ರಶ್ನೆಯನ್ನು ಕೇಳಲಿಲ್ಲ. ಸರಕಾರವನ್ನು ಪ್ರಶ್ನಿಸುತ್ತಾ ಪ್ರಜಾತಂತ್ರದ ಕಾವಲು ನಾಯಿಗಳಾಗಬೇಕಿದ್ದ ಮಾಧ್ಯಮಗಳು ಬದಲಿಗೆ ಸರಕಾರಿ ಹೇಳಿಕೆಗಳನ್ನೇ ಪರಮ ಸತ್ಯಗಳೆಂದು ಬಿತ್ತರಿಸುತ್ತಾ ಅದಕ್ಕೆ ಮರುಪ್ರಶ್ನೆ ಕೇಳುವವರನ್ನು ದೇಶದ್ರೋಹಿಗಳೆಂದು ಪಟ್ಟಕಟ್ಟುತ್ತಾ...

ಮೋದಿಯವರ ಸಾಕುನಾಯಿಗಳಾಗಿಯೂ, ಸರಕಾರದ ವಿರೋಧಿಗಳ ಬೇಟೆನಾಯಿಗಳಾಗಿಯೂ ದಾಳಿಮಾಡುತ್ತಾ ದೇಶಕ್ಕೆ ದ್ರೋಹಬಗೆಯುತ್ತಾ ಬಂದಿವೆ. ಮೋದಿ ಸರಕಾರದ ಸುಳ್ಳಿನ ಅರಮನೆಯ ಕಾವಲುಗಾರನಂತಾಗಿವೆ.

ಮೊನ್ನೆ ಎರಡನೇ ಅವಧಿಯ ಕೊನೆಯ ಕ್ಯಾಬಿನೆಟ್ ಸಭೆಯಲ್ಲಿ ಪ್ರಧಾನಿ ಮೋದಿ ಮೂರನೇ ಬಾರಿ ಆಯ್ಕೆಯಾಗಿ ಬಂದ ಮೇಲೆ ಮೊದಲ ನೂರು ದಿನಗಳಲ್ಲಿ ತುರ್ತಾಗಿ ಮಾಡಬೇಕಿರುವ ಯೋಜನೆಗಳನ್ನು ಚರ್ಚಿಸಿದ್ದಾರೆ. ಈವರೆಗೆ ಮಾಡಲಾಗದೆ ಉಳಿದುಕೊಂಡಿರುವ ಎಲ್ಲಾ ಕಾರ್ಪೊರೇಟ್-ಹಿಂದುತ್ವ ಯೋಜನೆಗಳನ್ನು ತ್ವರಿತವಾಗಿ ಮಾಡಿ ಮುಗಿಸುವುದಾಗಿ ಇಂಗಿತ ತೋರಿದ್ದಾರೆ. ಹಣಕಾಸು ಮಂತ್ರಿ ಸೀತಾರಾಮನ್ ಅವರು ಮೂರನೇ ಬಾರಿ ಅಧಿಕಾರಕ್ಕೆ ಬಂದ ಕೂಡಲೇ ರೈತರಿಂದ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳಲು, ಕಾರ್ಮಿಕ ಪರವಾದ ಕಾನೂನುಗಳನ್ನು ತೆಗೆದುಹಾಕಲು ಹಾಗೂ ಉದ್ಯಮಿಗಳಿಗೆ ಸರಾಗವಾಗಿ ಬಂಡವಾಳ ಹರಿದು ಬರಲು ಬೇಕಿರುವ ಎಲ್ಲಾ ‘ಸುಧಾರಣಾ’ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಇದರ ಜೊತೆಗೆ ಗೃಹಮಂತ್ರಿ ಅಮಿತ್ ಶಾ, ಸಿಎಎ, ಎನ್‌ಆರ್‌ಸಿಗಳನ್ನು ಅರ್ಥಾತ್ ಎಲ್ಲಾ ಜಾತಿ ಧರ್ಮಗಳ ಬಡವರಿಗೆ ಆರ್ಥಿಕ ನಾಗರಿಕತ್ವವನ್ನು ನಿರಾಕರಿಸುವ ಹಾಗೂ ಮುಸ್ಲಿಮರಿಗೆ ರಾಜಕೀಯ ನಾಗರಿಕತ್ವವನ್ನು ನಿರಾಕರಿಸುವ ಯೋಜನೆಗಳನ್ನು ತ್ವರಿತವಾಗಿ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.

ಇವೆಲ್ಲವನ್ನು ಮಹಾನ್ ಸಾಧನೆ ಎಂದೇ ಈವರೆಗೆ ಮಾಧ್ಯಮಗಳು ಬಿತ್ತರಿಸುತ್ತಾ ಬಂದಿರುವ ಈ ಹೊತ್ತಿನಲ್ಲಿ ಈಗಲಾದರೂ ಮೋದಿ ಸರಕಾರದ ಕಾರ್ಯಕ್ರಮಗಳು, ನೀತಿಗಳು, ಘೋಷಣೆಗಳು ಎಷ್ಟರ ಮಟ್ಟಿಗೆ ಜನಪರವಾಗಿದ್ದವು? ಅವು ಮೋದಿ ಹೇಳುವಂತೆ ‘‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’’ ಆಗಿದೆಯೇ?, ದೇಶದಲ್ಲಿ ಎಲ್ಲವೂ ‘‘ಸಬ್ ಚಂಗಾಸಿ’’ಯಾಗಿದ್ದು ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವೆಡೆಗೆ ದಾಪುಗಾಲಿಡುತ್ತಿದೆಯೇ ಎಂಬ ಪ್ರಶ್ನೆಗಳನ್ನು ಕೇಳಬೇಕಿದೆ.

ದೇಶಭಕ್ತಿಯೆಂದರೆ ಮೋದಿಭಕ್ತಿಯಲ್ಲ ಎಂದು ಭಾವಿಸಿರುವ ನೈಜ ದೇಶಭಕ್ತರು, ಈಗಲಾದರೂ:

‘‘ಮಿ. ಪ್ರೈಮ್ ಮಿನಿಸ್ಟರ್- ಈಗಲಾದರೂ ಉತ್ತರಿಸಿ- The Nation Wants To Know’’ ಎಂದು ನಿಲ್ಲಿಸಿ ಕೇಳಬೇಕಿದೆ.

ಈ ಅಂಕಣದಲ್ಲಿ ಅಂತ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ.

ಇಂತಹ ಸಾವಿರ, ಸಾವಿರ ಪ್ರಶ್ನೆಗಳು ಜನಮಾನಸದಲ್ಲಿ ಕುದಿಯುತ್ತಿವೆ.

ಪ್ರಶ್ನೆ 1: ರೈತರ ಆದಾಯ ದ್ವಿಗುಣವಾಯಿತೇ?

ಮಿ.ಪ್ರೈಮ್ ಮಿನಿಸ್ಟರ್, 2016ರ ಬಜೆಟ್‌ನಲ್ಲಿ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಘೋಷಿಸಿದ್ದೀರಿ. ಅಶೋಕ್ ದಲ್ವಾಯಿ ಸಮಿತಿಯ ಪ್ರಕಾರ 2015ರಲ್ಲಿ ರೈತರ ಸರಾಸರಿ ವಾರ್ಷಿಕ ಆದಾಯ 96,000ರೂ. ಹಣದುಬ್ಬರವನ್ನು ಲೆಕ್ಕಕ್ಕೆ ತೆಗೆದುಕೊಂಡಲ್ಲಿ 2022ರಲ್ಲಿ ರೈತರ ಆದಾಯ 2,72,000ರೂ. ಗಳಾಗಬೇಕಿತ್ತು. ಆದರೆ 2021ರಲ್ಲಿ ಪ್ರಕಟವಾದ ಸರಕಾರದ ಸಿಚುಯೇಶನ್ ಅಸೆಸ್‌ಮೆಂಟ್ ಸರ್ವೇ ಪ್ರಕಾರ ರೈತರ ಸರಾಸರಿ ಆದಾಯ 1,20,000 ರೂ. ದಾಟಿರಲಿಲ್ಲ. ಬದಲಿಗೆ ಇತ್ತೀಚಿನ ಎಚ್‌ಪಿಸಿಇ ವರದಿಗಳ ಪ್ರಕಾರ ಕೃಷಿ ಮತ್ತು ಕೃಷಿಯೇತರ ಕೂಲಿ ದರ ಹೆಚ್ಚುವುದಿರಲಿ ಕುಸಿದಿದೆ.

(https://mospi.gov.in/sites/default/files/publication_reports/Report_587m_0.pdf)

ಮಿ. ಪ್ರೈಮ್ ಮಿನಿಸ್ಟರ್ ರೈತರ ಆದಾಯ ದ್ವಿಗುಣವಾಗುವುದಿರಲಿ. ಕುಸಿದಿರುವುದೇಕೆ?

ಪ್ರಶ್ನೆ 2: ಭಾರತದ ಜಿಡಿಪಿ ಮೋದಿ ಅವಧಿಯಲ್ಲಿ ಅತಿ ತೀವ್ರವಾಗಿ ಹೆಚ್ಚಾಗಿದೆಯೇ?

ನೀವು ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಭಾರತವು ಅತಿ ಹೆಚ್ಚು ಜಿಡಿಪಿ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿತ್ತು. ಎರಡನೇ ಅವಧಿಯಲ್ಲಿ ಭಾರತವು 5ನೇ ಸ್ಥಾನಕ್ಕೆ ಬಂದಿದೆ. ಮೂರನೇ ಅವಧಿಯಲ್ಲಿ ಮೂರನೇ ಸ್ಥಾನಕ್ಕೂ, ಮುಂದಿನ ಇಪ್ಪತ್ತು ವರ್ಷಗಳಲ್ಲಿ ಮೊದಲನೇ ಸ್ಥಾನಕ್ಕೂ ತರುವುದಾಗಿ ಬೊಗಳೆ ಬಿಟ್ಟಿದ್ದೀರಿ.

ವಾಸ್ತವದಲ್ಲಿ 2004ರಲ್ಲಿ 755 ಬಿಲಿಯನ್ ಡಾಲರ್ ಇದ್ದ ಭಾರತದ ಜಿಡಿಪಿ, ಎರಡು ಯುಪಿಎ ಅವಧಿಗಳಲ್ಲಿ 2,039 ಬಿಲಿಯನ್ ಡಾಲರ್ ಅರ್ಥಾತ್ 2.03 ಟ್ರಿಲಿಯನ್ ಡಾಲರ್‌ಗಳಾಯಿತು. ಅಂದರೆ ಶೇ. 300ರಷ್ಟು ಅಭಿವೃದ್ಧಿ. ಆನಂತರದ ಮೋದಿ ಅವಧಿಯಲ್ಲಿ ಅದು 3.7 ಟ್ರಿಲಿಯನ್ ಡಾಲರ್ ಆಗಿದೆ. ಅಂದರೆ ಕೇವಲ ಶೇ. 83ರಷ್ಟು ಮಾತ್ರ ಅಭಿವೃದ್ಧಿ. ಇನ್ನು ಭಾರತದ ಜನಸಂಖ್ಯೆ 140 ಕೋಟಿ ದಾಟಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ಶೇ. 4-5ರಷ್ಟು ಅಭಿವೃದ್ಧಿ ಗತಿಯಿದ್ದರೂ, ಮತ್ತು ಯಾರೇ ಪ್ರಧಾನಿಯಾಗಿದ್ದರೂ ಭಾರತದ ಜಿಡಿಪಿ 5 ಟ್ರಿಲಿಯನ್ ಡಾಲರ್ ತಲುಪಿ ಐದನೇ ಸ್ಥಾನಕ್ಕೆ ತಲುಪುತ್ತದೆ. ಅದರಲ್ಲಿ ನಿಮ್ಮ ಹೆಚ್ಚುಗಾರಿಕೆಯೇನು ಪ್ರಧಾನಿಗಳೇ?

(https://images.indianexpress.com/2023/07/GDP.jpg)

ಆದರೆ ವಾಸ್ತವದಲ್ಲಿ ಒಂದು ದೇಶದ ನಿಜವಾದ ಅಭಿವೃದ್ಧಿ ತೋರುವುದು ಜಿಡಿಪಿಯಲ್ಲ. ತಲಾವಾರು ಜಿಡಿಪಿ ಮತ್ತು ತಲಾವಾರು ಆದಾಯ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕಗಳು. ಆ ಲೆಕ್ಕದಲ್ಲಿ ನೋಡಿದರೆ ಭಾರತವು ಜಿಡಿಪಿಯಲ್ಲಿ ಐದನೇ ಸ್ಥಾನ ತಲುಪಿದರೂ ತಲಾವಾರು ಜಿಡಿಪಿಯಲ್ಲಿ ಜಿ 20 ರಾಷ್ಟ್ರಗಳಲ್ಲೇ ಕೊಟ್ಟ ಕೊನೆಯ ಸ್ಥಾನದಲ್ಲಿದೆ. ತಲಾವಾರು ಆದಾಯದಲ್ಲಿ ಬಾಂಗ್ಲಾ ದೇಶ ಮೋದಿ ಭಾರತವನ್ನು 2020ರಲ್ಲೇ ಹಿಂದಿಕ್ಕಿದೆ.

(https://www.reddit.com/r/unitedstatesofindia/comments/15digpp/list_of_top_25_countries_by_gdp_and_their_per/)

ವಾಸ್ತವದಲ್ಲಿ ಯುಪಿಎಯ ತೀವ್ರ ಜಿಡಿಪಿ ಅಭಿವೃದ್ಧಿ ಅಥವಾ ಮೋದಿ ಅಭಿವೃದ್ಧಿ ಮಾದರಿ ಎರಡೂ ಕೂಡ ಜನರಿಂದ ಕಿತ್ತುಕೊಂಡು ಕಾರ್ಪೊರೇಟ್ ಉದ್ಯಮಿಗಳ ಅಭಿವೃದ್ಧಿಯನ್ನು ಹೆಚ್ಚಿಸುವ ಅಭಿವೃದ್ಧಿ ಮಾದರಿ. ಅಂಕಿಅಂಶಗಳು ತಿಳಿಸುವಂತೆ ಮೋದಿ ಅವಧಿಯಲ್ಲಿ ದೇಶದ ಶೇ. 75ರಷ್ಟು ಸಂಪತ್ತು ಕೇವಲ ಶೇ.1ರಷ್ಟು ಜನರ ವಶವಾಗಿದೆ. ಅಗಾಧ ಅಸಮಾನತೆಯನ್ನು ಹುಟ್ಟುಹಾಕಿದೆ.

ಮಿ. ಫ್ರೈಮ್ ಮಿನಿಸ್ಟರ್ ಜಿಡಿಪಿಯ ಬಗ್ಗೆ ನಿಮ್ಮ ಹೆಗ್ಗಳಿಕೆ ಸುಳ್ಳಲ್ಲವೇ?

ಪ್ರಶ್ನೆ 3: ಸ್ವಿಸ್ ಬ್ಯಾಂಕಿಂದ ಕಪ್ಪು ಹಣ ಎಷ್ಟು ತಂದಿರಿ?

ಪ್ರಧಾನಿಗಳೇ, 2012-13ರಲ್ಲಿ ತಮ್ಮ ಚುನಾವಣಾ ಪ್ರಚಾರದ ಪ್ರಧಾನ ಅಸ್ತ್ರವೇ ಕಾಂಗ್ರೆಸ್ ಭ್ರಷ್ಟಾಚಾರಿ, ಕಾಂಗ್ರೆಸ್ ಮಂತ್ರಿಗಳು ಮತ್ತು ಅವರ ಬೆಂಬಲ ಪಡೆದ ಕಳ್ಳ ಧನಿಕರು ಲಕ್ಷಾಂತರ ಕೋಟಿ ರೂ.ಗಳನ್ನು ಸ್ವಿಸ್ ಬ್ಯಾಂಕಿನಲ್ಲಿ ಬಚ್ಚಿಟ್ಟಿದ್ದಾರೆ ಎಂಬುದಾಗಿತ್ತು. ತಮ್ಮ ಸಮರ್ಥಕ ರಾಮ್‌ದೇವ್ ಅಂತೂ ಸ್ವಿಸ್‌ಬ್ಯಾಂಕಿನಲ್ಲಿ ಭಾರತದ 500 ಲಕ್ಷ ಕೋಟಿ ರೂ. ಕಳ್ಳ ಧನವಿದೆ ಎಂದು ಪ್ರಚಾರ ಮಾಡಿದ್ದರು. ಅದನ್ನೇ ಅನುಸರಿಸಿ ಕರ್ನಾಟಕದ ಪುಡಿಪುಕ್ಕ ಪುಂಗ್ಲಿಗಳು ಮೋದಿಯವರು ಅಷ್ಟೂ ಹಣವನ್ನು ಭಾರತಕ್ಕೆ ತಂದು ಭಾರತದ ರಸ್ತೆಗಳ ಮೇಲೆ ಚಿನ್ನದ ತಗಡನ್ನು ಹೊದಿಸುತ್ತಾರೆ ಎಂದು ಪ್ರಚಾರ ಮಾಡಿದ್ದರು.

2013ರ ನವೆಂಬರ್ 7ರಂದು ಛತ್ತೀಸ್‌ಗಡದ ಕಂಕೇರ್‌ನಲ್ಲಿ ಮಾಡಿದ ಭಾಷಣದಲ್ಲಿ ತಾವೇ ಖುದ್ದಾಗಿ ‘‘ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪುಹಣವೆಲ್ಲವನ್ನು ಭಾರತಕ್ಕೆ ತಂದರೆ ಪ್ರತಿಯೊಬ್ಬ ಭಾರತೀಯರ ಅಕೌಂಟಿಗೂ 15 ಲಕ್ಷ ರೂ.ಗಳನ್ನು ಹಾಕಬಹುದು ಮತ್ತು ನಾವು ಆ ಕಪ್ಪುಹಣವನ್ನು ತಂದೇ ತರುತ್ತೇವೆ’’ ಎಂದು ಘೋಷಿಸಿದ್ದೀರಿ.

(https://www.youtube.com/watch?v=i1Lw53W_AkM)

ಅದೇ ನೆಪವನ್ನು ಮುಂದುಮಾಡಿ 2016ರಲ್ಲಿ ನೋಟು ನಿಷೇಧ ಮಾಡಿದಿರಿ. ಆದರೆ ಅದರಿಂದ ಇದ್ದಬದ್ದ ಕಪ್ಪುಹಣವೆಲ್ಲ ಬಿಳಿಯಾಗಲು ದಾರಿಯಾಯಿತೇ ವಿನಾ ಒಂದು ಪೈಸೆ ಕಪ್ಪುಹಣವೂ ದಕ್ಕಲಿಲ್ಲ.

ಸ್ವಿಸ್ ಬ್ಯಾಂಕ್‌ನಿಂದ 500 ಲಕ್ಷ ಕೋಟಿ ರೂ. ತರುವುದಿರಲಿ 2021ರಲ್ಲಿ ರಾಜ್ಯಸಭೆಗೆ ಕೊಟ್ಟ ಉತ್ತರದಲ್ಲಿ ಸ್ವಿಸ್ ಬ್ಯಾಂಕಿನಲ್ಲಿ ಎಷ್ಟು ಕಪ್ಪುಹಣವಿದೆ ಎನ್ನುವುದು ನಮಗೆ ಗೊತ್ತೇ ಇಲ್ಲ ಎಂದು ಉತ್ತರ ಕೊಟ್ಟಿರಿ. ಹಾಗೂ ಕಳೆದ ಹತ್ತು ವರ್ಷಗಳಲ್ಲಿ ಹೆಚ್ಚೆಂದರೆ ಕೇವಲ 20 ಸಾವಿರ ಕೋಟಿ ರೂ. ಕಪ್ಪು ಹಣ ಪತ್ತೆಯಾಗಿದೆ ಎಂದು ಉತ್ತರಿಸಿದಿರಿ.

(https://sansad.in/getFile/loksabhaquestions/annex/176/AU1126.pdf?source=pqals)

ಅಷ್ಟು ಮಾತ್ರವಲ್ಲ ಅದೇ ರಾಜ್ಯಸಭಾ ಉತ್ತರದಲ್ಲಿ ನೀವು ಜಾಗತಿಕ ತನಿಖಾ ಪತ್ರಿಕೋದ್ಯಮಿಗಳ ಕೂಟಗಳು ಹೊರತಂದ ಪನಾಮ ಪೇಪರ್ಸ್, ಪ್ಯಾರಡೈಸ್ ಪೇಪರ್ಸ್, ಪಾಂಡೋರಾ ಪೇಪರ್ಸ್‌ಗಳಲ್ಲಿ ಭಾರತದಲ್ಲೂ ಅಂದಾಜು ಲಕ್ಷ ಕೋಟಿಯಷ್ಟು ಕಪ್ಪು ಹಣ ಪತ್ತೆಯಾಗಿದೆ ಎಂದು ದಾಖಲಿಸುತ್ತೀರಿ.

ಆದರೆ, ಅದೇ ವರದಿಗಳು ಅದಕ್ಕೆ ಕಾರಣಕರ್ತರ ಪಟ್ಟಿಗಳನ್ನು ಕೊಟ್ಟಿದ್ದನ್ನು ಮರೆಮಾಚುತ್ತೀರಿ. ಉದಾಹರಣೆಗೆ ಜಯಂತ್ ಸಿನ್ಹಾ, ಅಮಿತಾಬ್ ಬಚ್ಚನ್, ಹಾಗೂ ಗೌತಮ್ ಮತ್ತು ವಿನೋದ್ ಅದಾನಿಗಳು.

ಇದರಲ್ಲಿ ಜಯಂತ್ ಸಿನ್ಹಾರನ್ನು ನೀವು ಪನಾಮ ಪೇಪರ್ಸ್‌ನಲ್ಲಿ ಹೆಸರಿದ್ದರೂ ಹಣಕಾಸು ಮಂತ್ರಿಗಳನ್ನಾಗಿ ಮಾಡಿದಿರಿ. ಎರಡನೇ ಬಾರಿಗೂ ಟಿಕೆಟ್ ಕೊಟ್ಟು ಜವಾಬ್ದಾರಿ ಹೊರಿಸಿದಿರಿ. ಅಮಿತಾಬ್ ಬಚ್ಚನ್ ಅವರನ್ನು ‘ಸ್ವಚ್ಛ ಭಾರತ’ದ ರಾಯಭಾರಿಯನ್ನಾಗಿ ಮಾಡಿದಿರಿ! ಇನ್ನು ಅದಾನಿಗಳಿಗಂತೂ ಪ್ರಧಾನಿ ಕಚೇರಿಯನ್ನೇ ಬಿಟ್ಟುಕೊಟ್ಟಿರಿ. ಅದೇ ಸಮಯದಲ್ಲಿ ನಿಮ್ಮ ಪರಮಾಪ್ತ ಸ್ನೇಹಿತರಾದ ನೀರವ್, ಲಲಿತ್ ಮೋದಿಗಳು, ಮೆಹುಲ್ ಚೋಸ್ಕಿ ಹಾಗೂ ಇನ್ನಿತರ 33 ಹಣಕಾಸು ದಗಾಕೋರರು ನೀವು ಚೌಕಿದಾರರಾಗಿದ್ದಾಗಲೇ 2016-18ರಲ್ಲಿ ಸದ್ದಿಲ್ಲದೆ ದೇಶ ತೊರೆದು ವಿದೇಶ ಸೇರಿಕೊಂಡರು.

ಮಿ. ಪ್ರೈಮ್ ಮಿನಿಸ್ಟರ್, ಕಪ್ಪುಹಣದ ಕಳ್ಳರನ್ನು ಆರೋಪಿಗಳನ್ನು ಕ್ಯಾಬಿನೆಟ್‌ನಲ್ಲಿ, ವಿಮಾನದಲ್ಲಿ ಆಜೂಬಾಜಿನಲ್ಲಿ ಕೂರಿಸಿಕೊಂಡಿರುವಾಗ ಕಪ್ಪುಹಣವನ್ನು ಹೇಗೆ ತಡೆಗಟ್ಟುತ್ತೀರಿ. ಕಳ್ಳರಿಗೆ ರಕ್ಷಣೆ ಕೊಟ್ಟು ಕಳ್ಳತನ ತಡೆಯಬಹುದೇ ಚೌಕಿದಾರ ಪ್ರಧಾನಿಗಳೇ?

ಮಿ.ಪ್ರೈಮ್ ಮಿನಿಸ್ಟರ್ ಭ್ರಷ್ಟಾಚಾರಗಳಲ್ಲಿ ದೇಶದ್ರೋಹಿ ಭ್ರಷ್ಟಾಚಾರ, ದೇಶಭಕ್ತ ಭ್ರಷ್ಟಾಚಾರ ಎಂದು ವರ್ಗೀಕರಣವಿರುತ್ತದೆಯೇ? ಭ್ರಷ್ಟಾಚಾರವೇ ದೇಶದ್ರೋಹವಲ್ಲವೇ? ಭ್ರಷ್ಟಾಚಾರಿಗಳನ್ನು ರಕ್ಷಿಸುವುದು ಜನದ್ರೋಹವಲ್ಲವೇ? ದೇಶದ್ರೋಹವಲ್ಲವೇ?

ಇವು ಕೇವಲ ಕೆಲವು ಸ್ಯಾಂಪಲ್ಲುಗಳು ಮಾತ್ರ. ಇನ್ನೂ ಹತ್ತಾರು ಪ್ರಶ್ನೆಗಳಿವೆ ಪ್ರಧಾನಿಗಳೇ:

- ಎರಡು ಕೋಟಿ ಹೊಸ ಉದ್ಯೋಗ ಕೊಡುವುದಿರಲಿ, ನಿರುದ್ಯೋಗ ಶೇ. 8ನ್ನು ದಾಟಿದೆಯೇಕೆ??

- ಭಾರತವು ನಿಮ್ಮ ಅವಧಿಯಲ್ಲಿ ಅಭಿವೃದ್ಧಿ ಹೊಂದಿದ್ದಲ್ಲಿ ಹಸಿದವರ ರಾಷ್ಟ್ರಗಳಲ್ಲಿ ಭಾರತ 111ನೇ ಸ್ಥಾನಕ್ಕೆ ಕುಸಿದಿದೆಯೇಕೆ?

- ಕೋವಿಡ್ ಅನ್ನು ಯಶಸ್ವಿಯಾಗಿ, ಜಗತ್ತಿಗೆ ಮಾದರಿಯಾಗಿ ನಿಭಾಯಿಸಲಾಯಿತು ಎಂದು ಕೊಚ್ಚಿಕೊಳ್ಳುತ್ತಿದ್ದರೂ ಜಗತ್ತಿನಲ್ಲಿ

ಕೋವಿಡ್‌ಗೆ ಸಿಲುಕಿ ಸತ್ತವರಲ್ಲಿ ಭಾರತವೇ ಮೊದಲ ಸ್ಥಾನದಲ್ಲಿರುವುದೇಕೆ?

- ಕೋವಿಡ್ ನಂತರದಲ್ಲಿ ಭಾರತದಲ್ಲಿ 6 ಕೋಟಿ ತಳಮಧ್ಯಮವರ್ಗದವರು ಬಡತನ ರೇಖೆಯ ಕೆಳಗೆ ದೂಡಲ್ಪಟ್ಟಿದ್ದರೂ, ಭಾರತದಲ್ಲಿ ಬಡವರ ಸಂಖ್ಯೆ ಶೇ. 5ಕ್ಕೆ ಇಳಿದಿರುವ ಪವಾಡ ಹೇಗೆ?

-ಪ್ರಧಾನಿಗಳೇ ನಿಮ್ಮ ಅವಧಿಯಲ್ಲಿ ಭಾರತವು ಜಗತ್ತಿನಲ್ಲೇ ಅಗಾಧ ಅಸಮಾನತೆಯುಳ್ಳ ರಾಷ್ಟ್ರವಾಗಿ ಬದಲಾದದ್ದು ಹೇಗೆ?

-ಯುಪಿಎ ಅವಧಿಯಲ್ಲಿ ಉದ್ಯಮಿಗಳಿಗೆ ಅತಿ ಹೆಚ್ಚು ಬೇಜವಾಬ್ದಾರಿ ಸಾಲವನ್ನು ಕೊಟ್ಟಿರುವುದು ನಿಜವಾದರೂ, ಅತಿ ಹೆಚ್ಚು ಸಾಲಮನ್ನಾ ಮಾಡಿದ್ದು, ತಮ್ಮ ಅವಧಿಯಲ್ಲೇ ಅಲ್ಲವೇ?

-ದೇಶದ 80 ಕೋಟಿ ರೈತರಿಗೆ ಆರ್ಥಿಕ ಭದ್ರತೆ ನೀಡಲು ರೂ. 21,000-1 ಲಕ್ಷ ಕೋಟಿ ವೆಚ್ಚ ಮಾಡಿ ಎಂಎಸ್‌ಪಿ ನೀಡಿದರೆ ಬೊಕ್ಕಸ ಖಾಲಿಯಾಗುತ್ತದೆ ಎನ್ನುವ ತಮ್ಮ ಸರಕಾರ 1,400 ಉದ್ಯಮಿಗಳಿಗೆ ಎರಡು ವರ್ಷಗಳಲ್ಲಿ ರೂ. 1.81 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಮನ್ನಾ ಮಾಡಿದ್ದೇಕೆ?

-ಭಾರತ ಜಗತ್ತಿನ ಹೂಡಿಕೆಯ ತಾಣ ಎಂದು ನೀವು ಕೊಚ್ಚಿಕೊಳ್ಳುತ್ತಿರುವ ಹೊತ್ತಿನಲ್ಲೇ ಕಳೆದ ಹತ್ತು ವರ್ಷಗಳಲ್ಲಿ ಅತಿ ಹೆಚ್ಚು ಭಾರತೀಯ ಮತ್ತು ವಿದೇಶಿ ಹೂಡಿಕೆ ಭಾರತ ಬಿಟ್ಟು ಹೋಗುತ್ತಿರುವುದೇಕೆ?

-‘‘ಬೇಟಿ ಬಚಾವೊ-ಬೇಟಿ ಪಢಾವೊ’’ ಘೋಷಣೆ ಪ್ರಾರಂಭಿಸಿದ ನಂತರ ಮಹಿಳೆಯರ ಮೇಲೆ ಅತಿ ಹೆಚ್ಚು ದೌರ್ಜನ್ಯಗಳಾಗಿದೆಯೆಂದು ಎನ್‌ಸಿಆರ್‌ಬಿ ವರದಿಗಳು ಹೇಳುತ್ತಿರುವುದೇಕೆ?

-ಕಳೆದ ಹತ್ತು ವರ್ಷಗಳಲ್ಲಿ ಸ್ವಾಭಿಮಾನಿ ಸುಶಿಕ್ಷಿತ ದಲಿತ ಯುವಜನರ ಆತ್ಮಹತ್ಯೆ ಹೆಚ್ಚಾಗಿರುವುದೇಕೆ?

-ಪುಲ್ವಾಮಾದ ಕುತಂತ್ರ ಮತ್ತು ವೈಫಲ್ಯದ ಕಾರಣ ಇನ್ನೂ ಬಯಲಾಗಿಲ್ಲವೇಕೆ?

-2020ರಲ್ಲಿ ಗಾಲ್ವಾನ್‌ನಲ್ಲಿ, ಭೂತಾನ್ ಗಡಿಯಲ್ಲಿ ಚೀನಾ ಆಕ್ರಮಿಸಿಕೊಂಡಿರುವ ಭಾರತದ ಭೂಮಿಯನ್ನು ಮರಳಿ ಪಡೆದುಕೊಂಡಿಲ್ಲವೇಕೆ?

-ಜಿ-20 ಅಧಿವೇಶನ ಮಾಡಿದರೂ, ಬಡರಾಷ್ಟ್ರಗಳು ಮೋದಿ ಭಾರತದ ನಾಯಕತ್ವವನ್ನು ಒಪ್ಪಿಕೊಳ್ಳುತ್ತಿಲ್ಲವೇಕೆ?

-ಅದಾನಿ ಹಗರಣ,PMC, DHFL, IL&FS, ಇಲೆಕ್ಟ್ರಾಲ್ ಬಾಂಡ್ ಹಗರಣಗಳನ್ನೆಲ್ಲ ಲೆಕ್ಕ ಹಾಕಿದರೆ ಯುಪಿಎ ಅವಧಿಗಿಂತ ಅತಿ ಹೆಚ್ಚು ಭ್ರಷ್ಟಾಚಾರ ತಮ್ಮ ಅವಧಿಯಲ್ಲೇ ಆಗಿರುವುದೇಕೆ???

ಮಿಸ್ಟರ್ ಪ್ರೈಮ್ ಮಿನಿಸ್ಟರ್, ಉತ್ತರಿಸಿ The Nation Wants To Know!

ಸಮಕಾಲೀನದ ’ಮಿಸ್ಟರ್ ಪ್ರೈಮ್ ಮಿನಿಸ್ಟರ್’ ವಿಶೇಷ ಸರಣಿ ಕಾರ್ಯಕ್ರಮ ವಾರ್ತಾಭಾರತಿ ಯೂಟ್ಯೂಬ್ ಚಾನಲ್‌ನಲ್ಲಿ (youtube.com/varthabharatinews) ಮಾರ್ಚ್ 5ರಿಂದ ಪ್ರಸಾರವಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News