ಬೆತ್ತಲಾದ ಆಯೋಗ-ಬಯಲಾದ ಬಿಜೆಪಿಯ ದೇಶದ್ರೋಹ!
ಎಸ್ಐಆರ್ ಮತ್ತು ಎಸ್ಐಆರ್ ಆಧರಿಸಿದ ಚುನಾವಣೆಗಳು ಕೂಡಲೇ ರದ್ದಾಗಲಿ
ಸೆಪ್ಟಂಬರ್ 26ರ ಚುನಾವಣಾ ಆಯೋಗದ ತೀರ್ಮಾನವು ತನ್ನ ಏಕಪಕ್ಷೀಯ ಹಾಗೂ ಮೋದಿ ಆದೇಶಕ್ಕೆ ಬಗ್ಗಿ ತೆಗೆದುಕೊಂಡಿರುವ ತೀರ್ಮಾನಗಳು ಬಯಲಾದ ನಂತರದಲ್ಲಿ ಆಯೋಗದ ಪ್ರತಿಷ್ಠೆಗೆ ಆಗಿರುವ ಹಾನಿಯನ್ನು ಕಡಿಮೆ ಮಾಡಿಕೊಳ್ಳುವ ಏಕೈಕ ಉದ್ದೇಶವನ್ನು ಹೊಂದಿದೆಯೇ ವಿನಾ ಜ್ಞಾನೇಶ್ ಕುಮಾರ್ ಅಪರಾಧಕ್ಕೆ ಕ್ರಮ ತೆಗೆದುಕೊಳ್ಳುವ ಅಥವಾ ಅವರ ಎಸ್ಐಆರ್ ಸೃಷ್ಟಿ ಮಾಡಿರುವ ಅನಾಹುತಗಳನ್ನು ಕಡಿಮೆ ಮಾಡುವ ಯಾವುದೇ ಉದ್ದೇಶ ಅಥವಾ ಕ್ರಮಗಳನ್ನು ಹೊಂದಿಲ್ಲ. ಅಷ್ಟು ಮಾತ್ರವಲ್ಲ, ಉಳಿದಿಬ್ಬರು ಆಯುಕ್ತರು ಮತ್ತು ಅದನ್ನು ಆಧರಿಸಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಎತ್ತಿದ ಹಲವಾರು ಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನೂ ಕೊಟ್ಟಿಲ್ಲ.
ಎಸ್ಐಆರ್ ಪ್ರಕ್ರಿಯೆಯು ದೇಶದ ದಲಿತ ದಮನಿತ ಜನರ ಬದುಕಿನಲ್ಲಿ ಕೋಲಾಹಲ ಉಂಟು ಮಾಡಿದ್ದರೂ ತಲೆಕೆಡಿಸಿಕೊಳ್ಳದ ಮುಖ್ಯ ಚುನಾವಣಾ ಅಯುಕ್ತ ಜ್ಞಾನೇಶ್ ಕುಮಾರ್ ಗುಪ್ತಾ ಮತ್ತು ಮೋದಿ ಸರಕಾರ ಆಯೋಗದ ತೀರ್ಮಾನಗಳು ಕಾನೂನು ಬಾಹಿರವಾಗಿತ್ತು ಎಂಬ ಉಳಿದಿಬ್ಬರು ಆಯುಕ್ತರ ಭಿನ್ನಾಭಿಪ್ರಾಯಗಳನ್ನು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ವರದಿ ಮಾಡುತ್ತಿದ್ದಂತೆ ಸೆಪ್ಟಂಬರ್ 26ರಂದು ದಿಢೀರನೆ ಸಭೆ ಸೇರಿ ಎರಡೇ ಗಂಟೆಗಳಲ್ಲಿ ಹಲವಾರು ತೀರ್ಮಾನಗಳನ್ನು ಕೈಗೊಂಡಿವೆ ಹಾಗೂ ಮರುಕ್ಷಣದಲ್ಲಿ ಆ ತೀರ್ಮಾನಗಳನ್ನು ಸಾರ್ವಜನಿಕಗೊಳಿಸಿದೆ.
ಕಳೆದ 10 ತಿಂಗಳಲ್ಲಿ ಇದೇ ಎರಡು ಗಂಟೆ ಸಮಯ ಏಕೆ ದೊರಕಿಸಿಕೊಳ್ಳಲಾಗಲಿಲ್ಲ?
ವಾಸ್ತವವೇನೆಂದರೆ, ಈ ಸಭೆಯಲ್ಲಿ ಆಯೋಗವು ‘ಸರ್ವಸಮ್ಮತಿಯಿಂದ’ ತೆಗೆದುಕೊಂಡ ಪ್ರತಿಯೊಂದು ನಿರ್ಧಾರಗಳು ಎಸ್ಐಆರ್ ಪ್ರಾರಂಭಿಸಿದ ನಂತರ ಅದು ಮಾಡಿದ ಅಪರಾಧಗಳ ತಪ್ಪೊಪ್ಪಿಗೆಯಂತಿವೆ.
ಈಗ ಆಯೋಗವು ಲಾಜಿಕಲ್ ಡಿಸ್ಕ್ರಿಪಿಯೆನ್ಸಿಗೆ ಗುರಿಯಾದವರನ್ನು ಕಚೇರಿಗೆ ಕರೆಸಿ ಕ್ಯೂನಲ್ಲಿ ನಿಲ್ಲಿಸದೆ ಮನೆಗೆ ಹೋಗಿ ದಾಖಲೆ ಪಡೆದುಕೊಳ್ಳುವ ತೀರ್ಮಾನ ತೆಗೆದುಕೊಂಡಿದೆ. ಹಾಗೆಯೇ ಇನ್ನುಮುಂದೆ ಎಲ್ಲಾ ಸಭೆಗಳಿಗೆ ಪೂರ್ವಭಾವಿ ಅಜೆಂಡಾ ನಿಗದಿ ಪಡಿಸುವ ಮತ್ತು ಸಭೆಯ ನಂತರ ನಡಾವಳಿಗಳನ್ನು ಹಂಚುವ ಮತ್ತು ಇನ್ನು ಮುಂದೆ ಆಯೋಗದ ಐಟಿ ಮಾಡ್ಯುಲ್ಗಳಲ್ಲಿ ಮಾಡುವ ಯಾವುದೇ ಬದಲಾವಣೆಗೆ ಆಯೋಗದ ಸಮ್ಮತಿ ಕಡ್ಡಾಯ ಮಾಡುವ ಹಾಗೂ ಆಯೋಗದ ನಿರ್ಧಾರಗಳನ್ನು ಎಲ್ಲಾ ಅಧಿಕಾರಿಗಳು ಚಾಚೂ ತಪ್ಪದಂತೆ ಜಾರಿ ಮಾಡಬೇಕೆಂಬ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.
ಈ ತೀರ್ಮಾನಗಳು ಸ್ವಾಗತಾರ್ಹವಾದರೂ ಇವೆಲ್ಲವೂ ಸಾರ್ವಜನಿಕರಿಗೆ ಉತ್ತರದಾಯಿತ್ವ ಹೊಂದಿರುವ ಯಾವುದೇ ಸಂಸ್ಥೆಯ ನಡಾವಳಿಗಳಲ್ಲಿ ಇರಬೇಕಾದ ಕನಿಷ್ಠ ನಿಯಮಗಳಲ್ಲವೇ? ಇನ್ನು ಮುಂದೆ ಇಂತಹ ಮೂಲಭೂತ ಶಿಸ್ತನ್ನು ಪಾಲಿಸುವುದಾಗಿ ಘೋಷಿಸುವ ಮೂಲಕ ಆಯೋಗವು ಈವರೆಗೆ ಆ ಪದ್ಧತಿಯನ್ನು ಮುಖ್ಯ ಚುನಾವಣಾ ಆಯುಕ್ತರು ಪಾಲಿಸುತ್ತಿರಲಿಲ್ಲ ಎಂಬುದನ್ನು ಒಪ್ಪಿಕೊಂಡಿಲ್ಲವೇ?
ಸಿಇಸಿ ಜ್ಞಾನೇಶ್ ಕುಮಾರ್ರ ಏಕಪಕ್ಷೀಯ ತೀರ್ಮಾನಗಳು ಅಪರಾಧವಲ್ಲವೇ?
ಚುನಾವಣಾ ಆಯೋಗದ ಕಾರ್ಯ ನಿರ್ವಹಣೆಯ ಬಗ್ಗೆ ಸಂಸತ್ತಿನಲ್ಲಿ ಮಾಡಿರುವ 1995ರ ಕಾಯ್ದೆ ಮತ್ತು ಅದಕ್ಕೆ 2023ರಲ್ಲಿ ಮಾಡಿರುವ ತಿದ್ದುಪಡಿಗಳ ಪ್ರಕಾರ ಮೂವರು ಸದಸ್ಯರ ಚುನಾವಣಾ ಆಯೋಗವು ಎಲ್ಲಾ ತೀರ್ಮಾನಗಳನ್ನು ಸಾಧ್ಯವಾದಷ್ಟು ಸರ್ವ ಸಮ್ಮತಿಯಿಂದ ಇಲ್ಲವಾದಲ್ಲಿ ಬಹುಮತದಿಂದ ತೆಗೆದುಕೊಳ್ಳಬೇಕು. ಆಯೋಗದ ಸೆಪ್ಟಂಬರ್ 26ರ ತೀರ್ಮಾನಗಳೇ ಸ್ಪಷ್ಟಪಡಿಸುವಂತೆ ಉಳಿದಿಬ್ಬರು ಆಯುಕ್ತರಿಗೆ ಅಜೆಂಡಾಗಳನ್ನು ಕೊಡುತ್ತಿರಲಿಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸುತ್ತಿದೆ. ಇದು ಕಾನೂನು ಉಲ್ಲಂಘನೆಯಲ್ಲವೇ? ಇದಕ್ಕೆ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ಗೆ ಶಿಕ್ಷೆ ಇಲ್ಲವೇ? ಹಾಗೂ ಕಾನೂನಿನಂತೆ ಬಹುಮತ ಮತ್ತು ಸರ್ವಸಮ್ಮತ ಇಲ್ಲದೆ ತೆಗೆದುಕೊಂಡ ತೀರ್ಮಾನ ಕಾನೂನು ಬದ್ಧವಾಗುವುದೇ?
ಹೀಗಾಗಿ ಸೆಪ್ಟಂಬರ್ 26ರ ಆಯೋಗದ ತೀರ್ಮಾನವು ತನ್ನ ಏಕಪಕ್ಷೀಯ ಹಾಗೂ ಮೋದಿ ಆದೇಶಕ್ಕೆ ಬಗ್ಗಿ ತೆಗೆದುಕೊಂಡಿರುವ ತೀರ್ಮಾನಗಳು ಬಯಲಾದ ನಂತರದಲ್ಲಿ ಆಯೋಗದ ಪ್ರತಿಷ್ಠೆಗೆ ಆಗಿರುವ ಹಾನಿಯನ್ನು ಕಡಿಮೆ ಮಾಡಿಕೊಳ್ಳುವ ಏಕೈಕ ಉದ್ದೇಶವನ್ನು ಹೊಂದಿದೆಯೇ ವಿನಾ ಜ್ಞಾನೇಶ್ ಕುಮಾರ್ ಅಪರಾಧಕ್ಕೆ ಕ್ರಮ ತೆಗೆದುಕೊಳ್ಳುವ ಅಥವಾ ಅವರ ಎಸ್ಐಆರ್ ಸೃಷ್ಟಿ ಮಾಡಿರುವ ಅನಾಹುತಗಳನ್ನು ಕಡಿಮೆ ಮಾಡುವ ಯಾವುದೇ ಉದ್ದೇಶ ಅಥವಾ ಕ್ರಮಗಳನ್ನು ಹೊಂದಿಲ್ಲ. ಅಷ್ಟು ಮಾತ್ರವಲ್ಲ, ಉಳಿದಿಬ್ಬರು ಆಯುಕ್ತರು ಮತ್ತು ಅದನ್ನು ಆಧರಿಸಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಎತ್ತಿದ ಹಲವಾರು ಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನೂ ಕೊಟ್ಟಿಲ್ಲ.
ಆಯೋಗದ ‘ಸರ್ವ ಸಮ್ಮತ ಮೌನವು’ ಉತ್ತರಿಸದ ಪ್ರಶ್ನೆಗಳು
ಉದಾಹರಣೆಗೆ ಕಾಯ್ದೆಯ ಪ್ರಕಾರ ಒಬ್ಬ ವ್ಯಕ್ತಿಯನ್ನು ಮತಪಟ್ಟಿಗೆ ಸೇರಿಸುವ ಅಥವಾ ತೆಗೆದುಹಾಕುವ ಅಂತಿಮ ತೀರ್ಮಾನವನ್ನು ಮಾಡಬೇಕಿರುವ ಅಧಿಕಾರ ಇರುವುದು ಸ್ಥಳೀಯ ಇಆರ್ಒಗೆ. ಆದರೆ ಉಳಿದಿಬ್ಬರು ಆಯುಕ್ತರು ಬಯಲು ಮಾಡಿರುವಂತೆ ಈ ಇಆರ್ಒಗಳು ತೆಗೆದುಕೊಂಡ ನಿರ್ಧಾರಗಳನ್ನು ಕೇಂದ್ರೀಯವಾಗಿ ನಿಯಂತ್ರಿಸಲ್ಪಡುತ್ತಿದ್ದ ECINET ದಾಖಲಿಸುತ್ತಲೇ ಇರುತ್ತಿಲ್ಲ. ಹಾಗೆಯೇ ಪ. ಬಂಗಾಳದಲ್ಲೂ ಸ್ಥಳೀಯ ಇಆರ್ಒಗಳ ಗಮನಕ್ಕೆ ಬರದಂತೆ 1.4 ಕೋಟಿ ಲಾಜಿಕಲ್ ಡಿಸ್ಕ್ರಿಪೆನ್ಸಿ ನೋಟಿಸ್ಗಳನ್ನು ಕೇಂದ್ರೀಯವಾಗಿ ಜಾರಿ ಮಾಡಿತು. ಹಾಗೆಯೇ ಗೋವಾದಲ್ಲಿ ಇಆರ್ಒ ಸೇರಿಸಬೇಕೆಂದು ಆದೇಶಿಸಿದ 97 ಮತದಾರರನ್ನು ಏಳೆಂಟು ಬಾರಿ ಗಮನಕ್ಕೆ ತಂದರೂ ಕೇಂದ್ರ ಆಯೋಗ ಸೇರಿಸಲೇ ಇಲ್ಲ. ಇದು ಕಾನೂನು ಬಾಹಿರ. ಇಂಥ ಕೃತ್ಯದಿಂದ ಈಗಾಗಲೇ ಕೋಟ್ಯಂತರ ಮತದಾರರ ಹಕ್ಕು ಕೊಲೆಯಾಗಿದೆ.
ಆದರೆ ಆಯೋಗದ ಸೆಪ್ಟಂಬರ್ 26ರ ಸರ್ವ ಸಮ್ಮತ ಹೇಳಿಕೆಯು ಅದರ ಹೊಣೆಯನ್ನು ಹೊತ್ತುಕೊಂಡಿಲ್ಲ. ಗೋವಾದಲ್ಲಿ ಬಿಟ್ಟಿದ್ದ 97 ಮತದಾರರ ಮನೆಗೆ ಬಿಎಲ್ಒಗಳು ಹೋಗಿ ಫಾರಂ ತುಂಬಿಸುತ್ತಾರೆ ಎಂದು ಹೇಳಿದೆ. ಆದರೆ ಪ.ಬಂಗಾಳದ ವಂಚಿತರಿಗೆ ಮಾತ್ರ ಯಾವ ಪರಿಹಾರವನ್ನೂ ಸೂಚಿಸಿಲ್ಲ.
ಎರಡನೆಯದಾಗಿ ಪ. ಬಂಗಾಳದಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಹೆಸರಲ್ಲಿ ಹೊರಗಿಟ್ಟವರಲ್ಲಿ ಕೆಳಹಂತದ ನ್ಯಾಯಪಂಚಾಯತಿಗಳು ದಾಖಲೆ ಪರಿಷ್ಕರಿಸಿ ತೆಗೆದುಕೊಂಡ 38 ಲಕ್ಷ ತೀರ್ಮಾನಗಳ ಬಗ್ಗೆ ಟ್ರಿಬ್ಯುನಲ್ಗಳಲ್ಲಿ ದಾವೆ ಹೂಡಲಾಗಿದೆ. ಅದರಲ್ಲಿ 22 ಲಕ್ಷ ದಾವೆಗಳು ಮತಪಟ್ಟಿಯಿಂದ ಹೊರ ದಬ್ಬಲ್ಪಟ್ಟ ಸಂತ್ರಸ್ತ ಮತದಾರರು ಹಾಕಿಕೊಂಡ ದಾವೆಗಳು. ಆದರೆ, ಉಳಿದ 16 ಲಕ್ಷ ದಾವೆಗಳು ಯಾವುವು ಗೊತ್ತೆ? ಕೆಳಹಂತದ ವಿಚಾರಣೆಯಲ್ಲಿ ಅನುಮೋದಿಸಲ್ಪಟ್ಟು ಮತಪಟ್ಟಿಯಲ್ಲಿ ಸೇರಿಕೊಂಡ ಮತದಾರರ ವಿರುದ್ಧ ಸ್ವಯಂ ಚುನಾವಣಾ ಆಯೋಗವೇ ಹಾಕಿರುವ ದಾವೆಗಳು!
ಅಷ್ಟು ಮಾತ್ರವಲ್ಲ. ಆಯೋಗ ಹಾಕಿರುವ ದಾವೆಯಲ್ಲಿ ಶೇ. 90ರಷ್ಟು ದಾವೆಗಳು ಮುಸ್ಲಿಮರ ವಿರುದ್ಧವೇ ಆಗಿರುವುದು ಹೇಗೆ?
ಎಲ್ಲಕ್ಕಿಂತ ಮುಖ್ಯವಾಗಿ ಈ ರೀತಿ ಆಯೋಗವೇ ಟ್ರಿಬ್ಯುನಲ್ನಲ್ಲಿ ದಾವೆ ಹೂಡಿರುವ ಬಗ್ಗೆ ಬಂಗಾಳದ ಸಿಇಒಗಾಗಲಿ, ಕೇಂದ್ರ ಆಯೋಗದ ಉಳಿದಿಬ್ಬರು ಆಯುಕ್ತರಿಗೂ ತಿಳಿದೇ ಇರಲಿಲ್ಲ ಎಂಬುದನ್ನು ಇಂಡಿಯನ್ ಎಕ್ಸ್ಪ್ರೆಸ್ ವರದಿ ಬಯಲು ಮಾಡಿದೆ.
ಆದರೆ ಸೆಪ್ಟಂಬರ್ 26ರ ಆಯೋಗದ ಹೇಳಿಕೆ ಈ ಬಗ್ಗೆ ಯಾವುದೇ ಸ್ಪಷ್ಟೀಕರಣ ಕೊಟ್ಟಿಲ್ಲ! ಅಥವಾ ಅದನ್ನು ಮರು ಪರಿಶೀಲನೆಗೂ ಒಡ್ಡಿಲ್ಲ. ಹಾಗಿದ್ದ ಮೇಲೆ ಈ ಆಯೋಗದ ಸರ್ವ ಸಮ್ಮತ ತೀರ್ಮಾನಗಳಿಂದ ಜನರಿಗೇನು ಲಾಭ?
ಅಸಲು ಮೂವರು ಆಯುಕ್ತರ ಸರ್ವಸಮ್ಮತಿಯ ತೀರ್ಮಾನಗಳು ಎಸ್ಐಆರ್ ದಾಳಿಯಿಂದ ಜನರನ್ನು ಉಳಿಸುವಂತಿದೆಯೇ? ಅಥವಾ ವೈರುಧ್ಯದಿಂದ ಕೂಡಿದೆಯೇ?
ಎರಡು ಮುಖ್ಯ ತೀರ್ಮಾನಗಳನ್ನು ಗಮನಿಸೋಣ:
ಎಸ್ಐಆರ್ ಮುಗಿದುಹೋಗಿರುವ ರಾಜ್ಯಗಳಿಗೇನು ಪರಿಹಾರ?
ಲಾಜಿಕಲ್ ಡಿಸ್ಕ್ರಿಪಿಯೆನ್ಸಿ ನೋಟಿಸ್ಗಳ ಬಗ್ಗೆ ಆಯೋಗ ವಿಐಪಿಗಳಿಗೆ ಮತ್ತು ಸಾಮಾನ್ಯ ಜನರಿಗೆ ತೋರುತ್ತಿದ್ದ ತಾರತಮ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಲಾಜಿಕಲ್ ಡಿಸ್ಕ್ರಿಪಿಯೆನ್ಸಿ ವಿಷಯದಲ್ಲಿ ಬಿಎಲ್ಒಗಳು ನೋಟಿಸ್ಪಡೆದ ಮತದಾರರ ಮನೆಮನೆಗೆ ಹೋಗಿ ಅಗತ್ಯವಿರುವ ದಾಖಲೆಗಳನ್ನು ಪಡೆದುಕೊಳ್ಳಬೇಕೆಂದು ತೀರ್ಮಾನ ತೆಗೆದುಕೊಂಡಿದೆ.
ಇದು ಸ್ವಾಗತಾರ್ಹ ತೀರ್ಮಾನವಾದರೂ...
ಅ) ಸಮಸ್ಯೆ ಇದ್ದದ್ದು ಮತದಾರರ ಮನೆಯಿಂದ ಕಚೇರಿಗಳಿಗೆ ಇದ್ದ ದೂರ ಮತ್ತು ಅದಕ್ಕೆ ವ್ಯಯ ಮಾಡಬೇಕಿದ್ದ ಸಮಯದಲ್ಲಿ. ಮಾತ್ರವಲ್ಲ, ಎಸ್ಐಆರ್ ಕಡ್ಡಾಯ ಪಡಿಸುವ ದಾಖಲೆಗಳು ಈ ದೇಶದ ಕೋಟ್ಯಂತರ ದಮನಿತ-ದಲಿತ ಸಮುದಾಯಗಳ ಬಳಿ ಇಲ್ಲದಿರುವುದು. ಅದರ ಬಗ್ಗೆ ಯಾವುದೇ ಪರಿಹಾರವನ್ನು ಈ ‘ಆಯೋಗದ ಸರ್ವಸಮ್ಮತಿಯ ತೀರ್ಮಾನಗಳು’ ಒದಗಿಸಿಲ್ಲ.
ಆ) ಈವರೆಗೆ ಈ ಬಗೆಯ ಅವಕಾಶವಿಲ್ಲದೆ ಸಮಯ ಬಾಹಿರವಾದ ಕಾರಣದಿಂದ ಮತದಾರಿಕೆ ಕಳೆದುಕೊಂಡಿರುವ ಪ. ಬಂಗಾಳ ಹಾಗೂ ಇನ್ನಿತರ ರಾಜ್ಯಗಳ ಮತದಾರರಿಗೆ ಈ ತೀರ್ಮಾನ ತಾರತಮ್ಯ ಮಾಡಿದಂತಾಗುವುದಿಲ್ಲವೇ?
ತಾರತಮ್ಯ ನಿವಾರಣೆಯಾಗಬೇಕೆಂದರೆ ಆ ರಾಜ್ಯಗಳ ಎಲ್ಲಾ ಅಂತಿಮ ಪಟ್ಟಿಯನ್ನು ತಡೆ ಹಿಡಿದು ಮತದಾರಿಕೆ ಪಡೆದುಕೊಳ್ಳಲು ಈ ಅವಕಾಶವನ್ನು ಕೊಡಬೇಕಲ್ಲವೇ? ಹಾಗೂ ಈ ತಾರತಮ್ಯದ ಎಸ್ಐಆರ್ ಆಧಾರದಲ್ಲಿ ನಡೆದ ಚುನಾವಣೆಯನ್ನು ರದ್ದುಗೊಳಿಸಬೇಕಲ್ಲವೇ?
ಇ) ಅದೇ ರೀತಿ ಬಡಜನರು, ನಿರಾಶ್ರಿತರು, ಕಾರ್ಮಿಕರು ವಾಸ ಮಾಡುವ ಸ್ಥಳಗಳಲ್ಲಿ ವಿಶೇಷ ಸಹಾಯ ಅಭಿಯಾನ ಮಾಡಬೇಕೆಂದು ಆ ಹೇಳಿಕೆಯಲ್ಲಿ ಹೇಳಿಕೊಳ್ಳಲಾಗಿದೆ. ಆದರೆ ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸದೆ ಹಾಲಿ ಕರ್ನಾಟಕ ಹಾಗೂ ಇನ್ನಿತರ ಹದಿಮೂರು ರಾಜ್ಯಗಳಲ್ಲಿ ಈ ತೀರ್ಮಾನದ ಲಾಭ ಸಿಗುವುದೇ?
ಫಾರಂ 6ರ ಕುತಂತ್ರ!
ಆಯೋಗದ ಇನ್ನಿಬ್ಬರು ಆಯುಕ್ತರು ಎತ್ತಿದ್ದ ಅತಿ ಮುಖ್ಯ ಪ್ರಶ್ನೆ ಫಾರಂ 6 ಕ್ಕೆ ಸಂಬಂಧಪಟ್ಟಿದ್ದು.
ಫಾರಂ 6 ಹೊಸ ಮತದಾರರು ನೋಂದಾವಣೆ ಮಾಡಿಸಿಕೊಳ್ಳಲು ಬಳಸುವ ಫಾರಂ. ಪ್ರಜಾ ಪ್ರತಿನಿಧಿ ಕಾಯ್ದೆಯ 22, 23ನೇ ಕಲಂನ ಪ್ರಕಾರ ಇದಕ್ಕೆ ಸ್ವಯಂ ನಾಗರಿಕತ್ವ ಘೋಷಣೆ, ವಯಸ್ಸು ಹಾಗೂ ಸಾಮಾನ್ಯ ವಾಸಸ್ಥಳ ಖಾತರಿ ಮಾಡುವ ದಾಖಲೆಗಳನ್ನು ಕೊಟ್ಟರೆ ಸಾಕು.
ಆದರೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಮತಪಟ್ಟಿಯಿಂದ ಹೊರದಬ್ಬಲ್ಪಟ್ಟ ಮತದಾರರು ಮಾತ್ರವಲ್ಲ ಹೊಸ ಮತದಾರರು ಕೂಡ ಮತಪಟ್ಟಿಯಲ್ಲಿ ಸೇರಿಕೊಳ್ಳಲು ಫಾರಂ 6ರ ಜೊತೆಗೆ ಒಂದು ಘೋಷಣಾ ಪತ್ರ ಹಾಗೂ ಎಸ್ಐಆರ್ ನಿಗದಿ ಪಡಿಸಿದ 11 ದಾಖಲೆಗಳಲ್ಲಿ ಒಂದನ್ನು ಕಡ್ಡಾಯವಾಗಿ ಕೊಡಲೇ ಬೇಕು. ಹೊಸ ಮತದಾರರು ಕೂಡ ತಮ್ಮ ತಂದೆ ತಾಯಿಗಳು ಹಳೆ ಎಸ್ಐಆರ್ನ ಮತಪಟ್ಟಿಯಲ್ಲಿ ಇದ್ದರು ಎಂದು ಸಾಬೀತು ಪಡಿಸಬೇಕು. ಹಾಗೆ ಸಾಬೀತು ಪಡಿಸುವ ದಾಖಲೆಗಳನ್ನು ಕೊಡದ ಅರ್ಜಿಗಳನ್ನು ECINET ಪುರಸ್ಕರಿಸುತ್ತಲೇ ಇರಲಿಲ್ಲ.
ಇದು ಕಾನೂನು ಬಾಹಿರ. ಏಕೆಂದರೆ ವಾಸ್ತವದಲ್ಲಿ ಚುನಾವಣಾ ಆಯೋಗವು ಸ್ವಾಯತ್ತ ಸಂಸ್ಥೆಯಾಗಿದ್ದರೂ ಅದು ಸಂವಿಧಾನದ ಆರ್ಟಿಕಲ್ 327ರ ಪ್ರಕಾರ ಸಂಸತ್ತಿನಲ್ಲಿ ಮಾಡಿದ ಕಾಯ್ದೆಯ ಚೌಕಟ್ಟಿನ ಅಡಿಯಲ್ಲಿ ತನ್ನ ನಿಯಮಗಳನ್ನು ರೂಪಿಸಿಕೊಳ್ಳಬೇಕು. ಪ್ರಜಾಪ್ರತಿನಿಧಿ ಕಾಯ್ದೆ 1950 ಮತ್ತು ಅದನ್ನು ಆಧರಿಸಿ ರೂಪಿಸಲಾದ ಮತದಾರ ನೋಂದಣಿ ನಿಯಮ- 1960ಗಳ ಪ್ರಕಾರ ಫಾರಂ 6 ತುಂಬಲು ಈ ನಿಬಂಧನೆಗಳಿರಲಿಲ್ಲ. ಎಸ್ಐಆರ್ ಪ್ರೇರಿತ ನಿಬಂಧನೆಗಳನ್ನು ಹಾಕಲು ಕಾನೂನು ತಿದ್ದುಪಡಿಯಾಗಿರಲಿಲ್ಲ. ಹೀಗಾಗಿ ಇದು ಕಾನೂನು ಬಾಹಿರ.
ಆದರೆ ಸೆಪ್ಟಂಬರ್ 26ರಂದು ಆಯೋಗವು ಸರ್ವಸಮ್ಮತಿಯಿಂದ ಇದಕ್ಕೆ ಕೊಟ್ಟಿರುವ ಸಬೂಬು ಏನೆಂದರೆ ಈ ಎಸ್ಐಆರ್ ಪ್ರಕ್ರಿಯೆಯಲ್ಲಿ ಫಾರಂ 6ರ ಜೊತೆ ಘೋಷಣಾ ಪತ್ರ ಮತ್ತು ಇತರ ದಾಖಲೆಗಳನ್ನು ಕಡ್ಡಾಯ ಮಾಡಿರುವುದನ್ನು ಸುಪ್ರೀಂ ಕೋರ್ಟ್ ತಮ್ಮ 2026ರ ಮೇ 27ರ ತೀರ್ಪಿನಲ್ಲಿ ಎತ್ತಿ ಹಿಡಿದಿದೆ. ಆದ್ದರಿಂದ ಅದು ಕಾನೂನು ಬಾಹಿರ ಅಲ್ಲ.
ಸುಪ್ರೀಂ ಕೋರ್ಟ್ ಫಾರಂ 6ರ ಮಾರ್ಪಾಡನ್ನು ಸಮ್ಮತಿಸಿತ್ತೇ?
ಇದು ಅರ್ಧ ಸುಳ್ಳು. ಅರ್ಧ ಸತ್ಯ. ಸಮ್ಮತಿಸಿದೆ ಎಂದು ಏಕೆ ಹೇಳಲಾಗದು ಎಂದರೆ:
ಅ) ಚುನಾವಣಾ ಆಯೋಗವು ಫಾರಂ 6ಕ್ಕೆ ಮೇಲ್ಕಂಡ ಎಸ್ಐಆರ್ ತಿದ್ದುಪಡಿ ಮಾಡಿರುವುದು 2026ರ ಜುಲೈನಲ್ಲಿ. ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿರುವುದು ಮೇ ತಿಂಗಳಲ್ಲಿ. ಹೀಗಾಗಿ ಸುಪ್ರೀಂ ಕೋರ್ಟ್ ಈ ತಿದ್ದುಪಡಿಗಳಿಗೆ ಅನುಮತಿ ಕೊಟ್ಟಿದೆ ಎಂದು ವ್ಯಾಖ್ಯಾನ ಮಾಡುವುದು ತಪ್ಪು.
ಆ) ಆದರೆ ಅದೇ ಆದೇಶದ ಪ್ಯಾರಾ 152-153ರಲ್ಲಿ ಸುಪ್ರೀಂ ಕೋರ್ಟ್ ಫಾರಂ 6ಕ್ಕೆ ಮಾಡುವ ಯಾವುದೇ ತಿದ್ದುಪಡಿಗಳು ಯಾವ ಉದ್ದೇಶವನ್ನು ಈಡೇರಿಸಿಕೊಳ್ಳಲು ಎಸ್ಐಆರ್ ಮಾಡಲಾಗುತ್ತಿದೆಯೋ ಆ ಉದ್ದೇಶಕ್ಕೆ ತಾರ್ಕಿಕ ಸಂಬಂಧ ಹೊಂದಿರಬೇಕು ಎಂದು ಸ್ಪಷ್ಟಪಡಿಸಿದೆ. ಅರ್ಥಾತ್ ಮತಪಟ್ಟಿಯ ನಿಖರತೆ ಮತ್ತು ಸಮಗ್ರತೆಯನ್ನು ಖಾತರಿ ಪಡಿಸಿಕೊಳ್ಳಲು ಪೂರಕವಾಗಿದ್ದರೆ ಮಾತ್ರ ಅಂತಹ ತಿದ್ದುಪಡಿಗಳು ಸಿಂಧುವಾಗಿರುತ್ತವೆ ಎಂದು ಅದರ ಅರ್ಥ. ಆದರೆ ಆಯೋಗವು ಆ ಬಗೆಯ ಯಾವುದೇ ತಾರ್ಕಿಕ ಸಮರ್ಥನೆಯನ್ನು ಈವರೆಗೆ ಒದಗಿಸಿಲ್ಲ. ಹೀಗಾಗಿ ಫಾರಂ 6ರ ತಿದ್ದುಪಡಿಗೆ ಸಂಬಂಧಪಟ್ಟಂತೆ ಸುಪ್ರೀಂ ಮಾನ್ಯತೆಯ ಸಬೂಬು ಪೂರ್ತಿ ಸರಿಯಲ್ಲ.
ಹಾಗೆಂದು ಈ ತಿದ್ದುಪಡಿಗಳನ್ನು ಮಾಡಲು ಆಯೋಗಕ್ಕೆ ಅಧಿಕಾರ ಇಲ್ಲ ಎಂತಲೂ ಸುಪ್ರೀಂ ಹೇಳಿಲ್ಲ! ಅದು ತನ್ನ ತೀರ್ಪಿನ ಪ್ಯಾರಾ 152-161ನೇ ಪ್ಯಾರಾ ತನಕ ಆಯೋಗವು ಬಿಹಾರದಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಮಾಡಿದ್ದ ಎಲ್ಲಾ ತಿದ್ದುಪಡಿ ಮತ್ತು ಕ್ರಮಗಳನ್ನು ನಿಗದಿ ಪಡಿಸಿದ್ದ ದಾಖಲೆಗಳನ್ನು ಅದಕ್ಕೆ ಆಯೋಗ ಕೊಟ್ಟ ಎಲ್ಲಾ ತರ್ಕಗಳನ್ನು ಮಾನ್ಯ ಮಾಡಿಬಿಟ್ಟಿದೆ. ಹಾಗೂ ತನಗೆ ಬೇಕಾದ ರೀತಿ ಎಸ್ಐಆರ್ ರೂಪಿಸುವ ಅಧಿಕಾರವನ್ನು ಎತ್ತಿ ಹಿಡಿದಿದೆ. ಹಾಗೂ ಬಿಹಾರದಲ್ಲಿ ತೆಗೆದುಕೊಂಡ ಎಲ್ಲಾ ಕ್ರಮಗಳನ್ನು ಸಂಪೂರ್ಣವಾಗಿ ಎತ್ತಿಹಿಡಿದು ಬಿಟ್ಟಿದೆ.
ಆದರೆ ಹೊಸ ಸಂದರ್ಭವೇನೆಂದರೆ ಫಾರಂ 6ಗೆ ಮಾಡಿದ ತಿದ್ದುಪಡಿಯ ತೀರ್ಮಾನವನ್ನು ಆಯೋಗವು ಏಕಪಕ್ಷೀಯವಾಗಿ ತೆಗೆದುಕೊಂಡು ಕಾನೂನು ಮುರಿದಿದೆ ಎಂಬುದಷ್ಟೇ.
ಆಯೋಗದ ಹೊಸ ಆದೇಶ ಎಸ್ಐಆರ್ ಅನ್ನು ಅನಗತ್ಯಗೊಳಿಸಿಬಿಟ್ಟಿದೆಯೇ?
ಆದರೆ ಚುನಾವಣಾ ಆಯೋಗದ ಸೆಪ್ಟಂಬರ್ 26ರ ಹೊಸ ಸರ್ವ ಸಮ್ಮತ ಆದೇಶದಲ್ಲಿ ಎಸ್ಐಆರ್ ಅನ್ನೇ ಪರೋಕ್ಷವಾಗಿ ಅತಾರ್ಕಿಕ ಹಾಗೂ ಅಸಂಬದ್ಧಗೊಳಿಸಿರುವ ಅಂಶಗಳಿವೆ. ಆದರೆ ವಿರೋಧ ಪಕ್ಷಗಳಾಗಲೀ ಅಥವಾ ಪತ್ರಿಕೆಗಳಾಗಲೀ ಅವನ್ನು ಹೆಚ್ಚು ಗಮನಿಸಿದಂತಿಲ್ಲ.
ಫಾರಂ 6ರ ಬಗ್ಗೆ ಸೆಪ್ಟಂಬರ್ 26ರ ಆದೇಶದಲ್ಲಿ ಈ ವಿಷಯಗಳಿವೆ:
1) ಫಾರಂ 6ರ ಜೊತೆಗೆ ಎಸ್ಐಆರ್ ಕಡ್ಡಾಯ ಮಾಡುವ ದಾಖಲೆ ಮತ್ತು ಮ್ಯಾಪಿಂಗ್ ಅಗತ್ಯವಿರುವುದು ಎಸ್ಐಆರ್ ಅವಧಿಗೆ ಮಾತ್ರ!
2) non-SIR ಅವಧಿಯಲ್ಲಿ ಅಂದರೆ ಈ ಅಕ್ಟೋಬರ್ ನಂತರ 1960ರ ನಿಯಮಗಳಂತೆ ತಮ್ಮ ಬಳಿ ಇರುವ ದಾಖಲೆಗಳನ್ನು ತೋರಿಸಿದರೆ ಸಾಕು ..
3) ಹಾಗೆಯೇ ಎಸ್ಐಆರ್ ಮುಗಿದಿರುವ 20 ರಾಜ್ಯಗಳಲ್ಲೂ ಎಸ್ಐಆರ್ ಅಂತಿಮ ಪಟ್ಟಿಯಲ್ಲಿ ಹೆಸರು ಕಳೆದುಕೊಂಡವರು ಮತ್ತು ಹೊಸ ಮತದಾರರಿಬ್ಬರೂ process of continuous updation ಪ್ರಕ್ರಿಯೆಯಲ್ಲಿ ಮತ್ತೆ ಮತಪಟ್ಟಿ ಸೇರಿಕೊಳ್ಳಬಹುದು!
Process of Continuous Updation ಎಂದರೇನು?
ಮತಪಟ್ಟಿಗಳ ಬಗೆಗಿನ ಚುನಾವಣಾ ಆಯೋಗದ ಮ್ಯಾನುವಲ್ 2023 ರ ಪ್ರಕಾರ Process of Continuous Updation ಎಂದರೆ ಪ್ರಜಾಪ್ರತಿನಿಧಿ ಕಾಯ್ದೆ 21, 22 ಹಾಗೂ ಮತಪಟ್ಟಿ ನಿಯಮಗಳು 1960 ರ ನಿಯಮ 26ರ ಪ್ರಕಾರ ಫಾರಂ 6,7,8ನ್ನು ಬಳಸಿ ಸೇರ್ಪಡೆ, ತಿದ್ದುಪಡಿ ಮತ್ತು ವರ್ಗಾವಣೆ ಮಾಡಿಕೊಳ್ಳುವುದು.
ಅದಕ್ಕೆ ಬೇಕಿರುವ ದಾಖಲೆಗಳೇನು?
ಅವು ಎಸ್ಐಆರ್ ದಾಖಲೆಗಳಲ್ಲ. ನಾಗರಿಕತ್ವದ ಸ್ವಯಂ ಘೋಷಣೆ, ನಿವಾಸ ಮತ್ತು ವಯಸ್ಸನ್ನು ಸಾಬೀತು ಪಡಿಸುವ ಜನರ ಬಳಿ ಇರುವ ಆಧಾರ್, ಬಾಡಿಗೆ ಕರಾರು, ರೇಶನ್ ಕಾರ್ಡ್ ಇತ್ಯಾದಿ ದಾಖಲೆಗಳೂ ಸಾಕು ಮತ್ತು ಈ ಸೇರ್ಪಡೆಗಳು non-SIR periodಜನಲ್ಲೂ ಮಾಡಿಕೊಳ್ಳಬಹುದು. ಈಗಾಗಲೇ ಗಮನಿಸಿರುವಂತೆ non-SIRperiodನಲ್ಲಿ ಎಸ್ಐಆರ್ ದಾಖಲೆಗಳನ್ನು ಕೊಡುವ ಅಗತ್ಯವಿಲ್ಲ. ಅಂದರೆ ಎಸ್ಐಆರ್ನಿಂದ ಹೊರದೂಡಲ್ಪಟ್ಟವರು ಎಸ್ಐಆರ್ ಮುಗಿದ ನಂತರ ಮಾಮೂಲಿ ಪ್ರಕ್ರಿಯೆಯಲ್ಲಿ ಮತಪಟ್ಟಿಗೆ ಮರಳಬಹುದು! ಹಾಗಿದ್ದಲ್ಲಿ ಎಸ್ಐಆರ್ ಮಾಡಬೇಕೇ? ಇಡೀ ಎಸ್ಐಆರ್ ಪ್ರಕ್ರಿಯೆಯೇ ಅರ್ಥಹೀನ ಎಂದು ಆಯೋಗದ ಸರ್ವ ಸಮ್ಮತಿಯ ಆದೇಶವೇ ಹೇಳುತ್ತಿಲ್ಲವೇ?
ಅಂದರೆ ಎಸ್ಐಆರ್ ಅನ್ನು ನಿರ್ದಿಷ್ಟ ರಾಜ್ಯಗಳಲ್ಲಿ, ನಿರ್ದಿಷ್ಟ ಸಮುದಾಯವನ್ನು ಹೊರಗಿಡಲೆಂದೇ ಪೂರ್ವಾಪರ ಆಲೋಚನೆಯಿಲ್ಲದೆ ತೆಗೆದುಕೊಂಡ ನಿರ್ಧಾರವೇ? ಇದರಿಂದ ಈಗಾಗಲೇ ಹೊರದೂಡಲ್ಪಟ್ಟಿರುವ 14 ಕೋಟಿ ಮತದಾರರ ಭವಿಷ್ಯವೇನು?
ಹತ್ತು ಜನಾಗ್ರಹಗಳು
ಆದ್ದರಿಂದ.. ಆಯೋಗದ ಹೊಸ ಆದೇಶದ ಹಿನ್ನೆಲೆಯಲ್ಲೂ ಈ ಹತ್ತು ಜನಾಗ್ರಹಗಳ ಸುತ್ತ ಬಲವಾದ ಚಳವಳಿ ಕಟ್ಟಿ ಮೋದಿ ಪಟಾಲಂನಿಂದ ಭಾರತ ಗಣರಾಜ್ಯವನ್ನು ಉಳಿಸಲೇ ಬೇಕಿದೆ.
1) ಕೂಡಲೇ ಎಸ್ಐಆರ್ ರದ್ದಾಗಬೇಕು.
2)ಮೋದಿ ಸರಕಾರದ ಏಜೆಂಟ್ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು.
3) ಸುಪ್ರೀಂ ಕೋರ್ಟ್ ಸಂವಿಧಾನದ 142ನೇ ವಿಧಿಯನ್ನು ಬಳಸಿ ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ದೇಶದ್ರೋಹದ ಮೊಕದ್ದಮೆ ಹೂಡಬೇಕು.
4) ಜ್ಞಾನೇಶ್ ಕುಮಾರ್ ಅವಧಿಯಲ್ಲಿ ಚುನಾವಣಾ ಆಯೋಗ ತೆಗೆದುಕೊಂಡ ಎಲ್ಲಾ ತೀರ್ಮಾನಗಳು ಮತ್ತು ಪ್ರಕ್ರಿಯೆಗಳು ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು.
5) ಜ್ಞಾನೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಎಲ್ಲ ಚುನಾವಣೆಗಳು ರದ್ದಾಗಬೇಕು.
6)ಚುನಾವಣಾ ಆಯುಕ್ತರನ್ನು ಕೇಂದ್ರ ಸರಕಾರವೇ ನೇಮಕ ಮಾಡುವ ಮತ್ತು ಆಯುಕ್ತರಿಗೆ ಜೀವನಪರ್ಯಂತ ಕಾನೂನು ಕ್ರಮದಿಂದ ರಕ್ಷಣೆ ಒದಗಿಸುವ 2023ರ ತಿದ್ದುಪಡಿ ಕಾಯ್ದೆ ರದ್ದಾಗಬೇಕು
7)ಚುನಾವಣಾ ಆಯೋಗ ಮತ್ತು ಚುನಾವಣಾ ಪ್ರಕ್ರಿಯೆಗಳು ಪ್ರಜಾತಾಂತ್ರಿಕಗೊಳ್ಳಬೇಕು.
8) ಇಷ್ಟೆಲ್ಲಾ ಜನದ್ರೋಹ ಮಾಡುತ್ತಿರುವ ಆಯೋಗವನ್ನು ಮತ್ತು ಮೋದಿ ಸರಕಾರವನ್ನು ಸಮರ್ಥಿಸಿಕೊಳ್ಳುತ್ತಿರುವ ಸಂಘಪರಿವಾರ ಮತ್ತು ಬಿಜೆಪಿಯನ್ನು ಭಾರತ ಬಹಿಷ್ಕರಿಸಬೇಕು.
9) ಅಧಿಕಾರವಾದಿ ಮತ್ತು ಅವಕಾಶವಾದಿ ವಿರೋಧ ಪಕ್ಷಗಳು ಎಸ್ಐಆರ್ ಆಧಾರಿತ ಚುನಾವಣೆಗಳನ್ನು ಒಕ್ಕೊರಲಿಂದ ಬಹಿಷ್ಕರಿಸುವ ಮೂಲಕ ಮೋದಿ-ಆರೆಸ್ಸೆಸ್ ಸರಕಾರದ ವಿರುದ್ಧ ಸಂಪೂರ್ಣ ಅಸಹಕಾರ ಚಳವಳಿ ಪ್ರಾರಂಭಿಸಬೇಕು.
10) ಮೇಲಿನ ಆಗ್ರಹಗಳು ಈಡೇರಬೇಕೆಂದರೆ ದೇಶದಲ್ಲಿ ವಂಚಿತ ಜನರ ಬೃಹತ್ ಜನಾಂದೋಲನವನ್ನು ಕಟ್ಟಬೇಕು.
(ಅಂಕಣಕಾರರು ಹಿರಿಯ ಚಿಂತಕರು)