ಸಂವಿಧಾನ ರಚಿಸಿದ್ದು ಅಂಬೇಡ್ಕರ್ ಅಲ್ಲವೇ?: ಮನುವಾದಿಗಳ ವಿಕೃತ ವಾದಗಳು-ಚಾರಿತ್ರಿಕ ಸತ್ಯಗಳು
ಬಿ.ಎನ್.ರಾವ್ ಅವರು ತಮ್ಮ ಕಾನೂನಾತ್ಮಕ ಪರಿಣತಿಯನ್ನು ಬಳಸಿಕೊಂಡು ಹೊಸ ರಾಷ್ಟ್ರದ ಪ್ರಜಾತಾಂತ್ರಿಕ ಆಡಳಿತಕ್ಕೆ ಬೇಕಾದ ನಿಯಮಗಳನ್ನು ಒಳಗೊಂಡ ಕಚ್ಚಾ ಕರಡನ್ನು ಮುಂದಿಟ್ಟರು. ಅದನ್ನು ಒಂದು ಸಾಮಾಜಿಕ ಪರಿವರ್ತನಾ ಆಶಯವುಳ್ಳ ಸೆಕ್ಯುಲರ್, ಸಮಾಜವಾದಿ, ಪ್ರಜಾತಾಂತ್ರಿಕ ಮತ್ತು ಸಾರ್ವಭೌಮ ಗಣರಾಜ್ಯದ ಆಶಯದ ಸಂವಿಧಾನವನ್ನಾಗಿ ಮಾಡಿದ್ದು ಅಂಬೇಡ್ಕರ್. ಹೀಗಾಗಿಯೇ ಭಾರತದ ಸಾಂವಿಧಾನಿಕ ಇತಿಹಾಸದ ವಿದ್ವಾಂಸರು ಬಿ.ಎನ್.ರಾವ್ ಅವರು ಭಾರತಕ್ಕೆ ಸಂವಿಧಾನದ ಕರಡನ್ನು ಕೊಟ್ಟರೆ ಅಂಬೇಡ್ಕರ್ ಅವರು ಭಾರತಕ್ಕೆ ಸಂವಿಧಾನದ ಆತ್ಮವನ್ನು ಕೊಟ್ಟರು ಎಂದು ವಿವರಿಸುತ್ತಾರೆ.
ಭಾಗ - 1
ಅಂಬೇಡ್ಕರ್ ಅವರು ಭಾರತದ ದಮನಿತರ ಸ್ವಾಭಿಮಾನದ ಸಂಕೇತವಾಗಿಯೂ, ಸಮತಾ ಭಾರತದ ಆಶಯವಾಗಿಯೂ ಎತ್ತರೆತ್ತರಕ್ಕೇರುತ್ತಿದ್ದಂತೆ ಒಳಗೊಳಗೆ ಅಸಹನೆಯಿಂದ ಕುದಿಯುತ್ತಿರುವ ಬ್ರಾಹ್ಮಣವಾದಿಗಳು ಮತ್ತು ಸಂಘಪರಿವಾರಿಗಳು ಭಾರತದ ಸಂವಿಧಾನವನ್ನು ಬರೆದದ್ದು ಅಂಬೇಡ್ಕರ್ ಅಲ್ಲವೇ ಅಲ್ಲ, ಅದರ ಕೀರ್ತಿ ಸೇರಬೇಕಿರುವುದು ಸಂವಿಧಾನ ಮತ್ತು ಕಾನೂನು ಪರಿಣಿತರಾಗಿದ್ದ ಬಿ.ಎನ್. ರಾವ್ ಎಂಬ ವಿದ್ವಾಂಸರಿಗೆ ಎಂಬ ವಾದವನ್ನು ಹೆಚ್ಚೆಚ್ಚು ಹರಿಬಿಡುತ್ತಿದ್ದಾರೆ.
ಇದರಲ್ಲಿ ದಿಟವೆಷ್ಟು? ಸುಳ್ಳೆಷ್ಟು?
ಸಂವಿಧಾನ ಕರಡಿನ ಚರಿತ್ರೆ: ಬಿ.ಎನ್. ರಾವ್ ಪಾತ್ರವೆಷ್ಟು?
ಬಿ.ಎನ್. ರಾವ್ ಅವರು (1887-1953) ಮಂಗಳೂರು ಮೂಲದ ಕೊಂಕಣಿ ಬ್ರಾಹ್ಮಣರು ಮತ್ತು ದೇಶ ವಿದೇಶಗಳಲ್ಲಿ ಕಾನೂನು ಮತ್ತು ಸಂವಿಧಾನಗಳ ವ್ಯಾಸಂಗ ಮಾಡಿದ ಪರಿಣಿತರಾಗಿದ್ದರು. ಬ್ರಿಟಿಷರಿಗೂ ತಮ್ಮ ಕಾನೂನು ಪರಿಣಿತಿಯ ಸೇವೆಯನ್ನು ಕೊಟ್ಟು ನೈಟ್ ಹುಡ್ ಇತ್ಯಾದಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಬ್ರಿಟಿಷ್ ಆಡಳಿತದಲ್ಲಿ ಅಸ್ಸಾಂ ಹಾಗೂ ಕಾಶ್ಮೀರ ಸಂಸ್ಥಾನಗಳ ಪ್ರಧಾನಿಗಳಾಗಿಯೂ, ಕೋಲ್ಕತಾ ಹೈಕೋರ್ಟಿನ ಜಡ್ಜ್ ಆಗಿಯೂ, ಬ್ರಿಟಿಷ್ ಸರಕಾರದ ಆಡಳಿತ ಮತ್ತು ಸಂವಿಧಾನ ಸುಧಾರಣೆ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದರು.
ಅವರು ಎಂದೂ ಬ್ರಿಟಿಷ್ ವಿರೋಧಿ ಸ್ವಾತಂತ್ರ್ಯ ಹೋರಾಟದಲ್ಲಾಗಲೀ ಅಥವಾ ಭಾರತದ ಸಮಾಜದ ದಮನಿತರ ವಿಮೋಚನಾ ಹೋರಾಟದಲ್ಲಾಗಲೀ ಭಾಗವಹಿಸಿರಲಿಲ್ಲ. ಆದರೆ ದೇಶ ವಿದೇಶಗಳ ಸಂವಿಧಾನಗಳ ಬಗ್ಗೆ ಮತ್ತು ಆಧುನಿಕ ಪ್ರಜಾತಾಂತ್ರಿಕ ರಾಷ್ಟ್ರಗಳ ಆಡಳಿತ ನಿಯಮಗಳ ಬಗ್ಗೆ ವಿದ್ವತ್ಪೂರ್ಣ ತಿಳುವಳಿಕೆ ಹೊಂದಿದ್ದರು.
ಹೀಗಾಗಿ 1946ರಲ್ಲಿ ಕಾಂಗ್ರೆಸ್ ನೇತೃತ್ವದ ಸಂವಿಧಾನ ಸಭೆ ಅವರನ್ನು ಭಾರತದ ಸಂವಿಧಾನ ಸಭೆಯ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುತ್ತದೆ ಹಾಗೂ ಸಂವಿಧಾನ ರಚಿಸಲು ಬೇಕಾದ ಕಚ್ಚಾ ಕರಡನ್ನು ರೂಪಿಸಲು ಕೇಳಿಕೊಳ್ಳುತ್ತದೆ. ಆದರೆ ಅವರು ಎಂದೂ ಸಂವಿಧಾನ ಸಭೆಯ ಸದಸ್ಯರಾಗಿರಲಿಲ್ಲ. ಹೀಗಾಗಿ ಅದರ ಚರ್ಚೆಯಲ್ಲಿ ಭಾಗವಹಿಸಿರಲಿಲ್ಲ. ಆದರೂ ಸಲಹೆಗಾರನ ಸ್ಥಾನಮಾನದಲ್ಲಿ ಸಲಹೆಗಳನ್ನು ನೀಡುತ್ತಿದ್ದರು. ಅದರಂತೆ ರಾವ್ ಅವರು 1947ರ ಫೆಬ್ರವರಿಯ ವೇಳೆಗೆ ಒಂದು ಕರಡನ್ನು ರೂಪಿಸಿ ಸಂವಿಧಾನ ಸಭೆಗೆ ಒಪ್ಪಿಸಿದರು. ಅಲ್ಲಿಗೆ ಸಂವಿಧಾನ ಸಭೆಯ ರಚನೆಗೆ ಸಂಬಂಧಪಟ್ಟಂತೆ ಅವರಿಗೆ ವಹಿಸಿದ್ದ ಕೆಲಸವು ಮುಕ್ತಾಯವಾಗಿತ್ತು. ಆ ನಂತರವೂ ಸಂವಿಧಾನ ಸಭೆ ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ಅವರ ಪರಿಣಿತ ಸಲಹೆಯನ್ನು ತೆಗೆದುಕೊಳ್ಳುತ್ತಿದ್ದರೂ 1947ರ ಫೆಬ್ರವರಿಯ ನಂತರದಲ್ಲಿ ಸಂವಿಧಾನ ರಚನೆಯ ಕಾರಣಕರ್ತರು ಅಂಬೇಡ್ಕರ್ ಮತ್ತು ಸಂವಿಧಾನ ಸಭೆಯೇ ಆಗಿತ್ತು.
ಹೀಗಾಗಿ ಸಂವಿಧಾನ ರಚನೆಯಲ್ಲಿ ರಾವ್ ಅವರ ಪಾತ್ರ ಸೀಮಿತವಾಗಿತ್ತು. ಅದನ್ನು ಅಂಬೇಡ್ಕರ್ ಅವರೂ ಗುರುತಿಸಿ ಸ್ಮರಿಸಿಕೊಳ್ಳುತ್ತಾರೆ. 1949ರ ನವೆಂಬರ್ 25ರಂದು ಸಂವಿಧಾನ ಸಭೆಯಲ್ಲಿ ಮಾಡಿದ ಅಂತಿಮ ಭಾಷಣದಲ್ಲಿ ‘‘ಸಂವಿಧಾನ ತಯಾರಿಯ ಸಂಪೂರ್ಣ ಶ್ರೇಯಸ್ಸು ನಮಗೆ ಮಾತ್ರ ಸೇರತಕ್ಕದ್ದಲ್ಲ. ಇದರಲ್ಲಿ ಒಂದಷ್ಟು ಭಾಗ ಸಂವಿಧಾನದ ಕಚ್ಚಾ ಕರಡನ್ನು ತಯಾರಿಸಿದ ಬಿ.ಎನ್. ರಾವ್ ಅವರಿಗೂ ಸೇರಬೇಕು. ಹಾಗೆಯೇ ಕರಡನ್ನು ಅತ್ಯಂತ ಸಮರ್ಥವಾಗಿ ಶಾಸನಾತ್ಮಕ ಭಾಷೆಯಲ್ಲಿ ಅಂತಿಮವಾಗಿ ಸಿದ್ಧಗೊಳಿಸಿದ ಎಸ್.ಎನ್. ಮುಖರ್ಜಿಯವರಿಗೂ ಹಾಗೂ ಇಡೀ ಕರಡು ಸಮಿತಿಗೂ ಮತ್ತು ಉತ್ತಮ ರೀತಿಯಲ್ಲಿ ಸಂವಿಧಾನ ಸಭೆಯಲ್ಲಿ ಅರ್ಥಪೂರ್ಣ ಚರ್ಚೆಗಳು ಆಗುವಂತೆ ಶಿಸ್ತನ್ನು ಕಾಪಾಡಿದ ಕಾಂಗ್ರೆಸ್ ಪಕ್ಷಕ್ಕೂ ನಮ್ಮ ಕೃತಜ್ಞತೆಗಳು ಸೇರಬೇಕು’’ ಎಂದೂ ಹೇಳುತ್ತಾರೆ.
(Dr. Babasaheb Ambedkar: Writings And Speeches Vol. 13, p.1208)
ರಾವ್ ಅವರ ಪ್ರಜಾ‘ತಂತ್ರ’ದ ಕರಡಿಂದ ಪ್ರಜಾತಂತ್ರದ ಸಂವಿಧಾನದ ಕಡೆಗಿನ ಹೆಜ್ಜೆಗಳು
1947ರ ಫೆಬ್ರವರಿಯಿಂದ ಸಂವಿಧಾನ ಸಭೆಯ ವಿವಿಧ ಸಮಿತಿಗಳು ಆ ಕರಡಿನ ಬಗ್ಗೆ ತಮ್ಮ ತಿದ್ದುಪಡಿಗಳನ್ನು ನೀಡಿದವು. ಈ ಮಧ್ಯೆ 1947ರಲ್ಲಿ ಭಾರತದ ವಿಭಜನೆಯಾಗಿ ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ ಆಯ್ಕೆಯಾಗಿದ್ದ ಕ್ಷೇತ್ರವು ಪೂರ್ವ ಪಾಕಿಸ್ತಾನಕ್ಕೆ ವರ್ಗಾವಣೆಗೊಂಡು ಅಂಬೇಡ್ಕರ್ ಅವರ ಸಂವಿಧಾನ ಸಭೆಯ ಸದಸ್ಯತ್ವ ರದ್ದಾಯಿತು. ಆದರೆ ಆ ವೇಳೆಗಾಗಲೇ ಅಂಬೇಡ್ಕರ್ 1919ರ ಸೌತ್ ಬರೋ ಸಮಿತಿ, 1928ರ ಸೈಮನ್ ಕಮಿಷನ್, 1930-32ರ ದುಂಡು ಮೇಜಿನ ಪರಿಷತ್‌ಗಳಲ್ಲಿ ಮಾತ್ರವಲ್ಲದೆ ಹಲವಾರು ಇತರ ಸಾಂವಿಧಾನಿಕ ಸಭೆಯ ಸದಸ್ಯರಾಗಿ ಸಂವಿಧಾನ ಮತ್ತು ಕಾನೂನು ರಚನೆಯಲ್ಲಿ ತಮಗಿರುವ ಜ್ಞಾನದ ಹರಹನ್ನು ಭಾರತೀಯರು ಮತ್ತು ಬ್ರಿಟಿಷರು ಕೂಡ ನಿಬ್ಬೆರಗಾಗುವ ರೀತಿಯಲ್ಲಿ ಮುಂದಿಟ್ಟಿದ್ದರು. ಅಷ್ಟು ಮಾತ್ರವಲ್ಲದೆ ಭಾರತೀಯ ಸಮಾಜದ ರೋಗವನ್ನು ಅರ್ಥ ಮಾಡಿಕೊಳ್ಳುವಲ್ಲಿ ತಮಗಿರುವ ಅತ್ಯಪರೂಪದ ಚಿಕಿತ್ಸಕ ಒಳನೋಟಗಳನ್ನು ನೀಡಿದ್ದರು. ಹೀಗಾಗಿ ಕೊನೆಯ ಬ್ರಿಟಿಷ್ ವೈಸ್‌ರಾಯ್ ಲಾರ್ಡ್ ಮೌಂಟ್ ಬ್ಯಾಟನ್, ಆಗಿನ ಬ್ರಿಟನ್ ಪ್ರಧಾನಿ ಆಟ್ಲಿ ಆದಿಯಾಗಿ ಹಲವು ಬ್ರಿಟಿಷ್ ಆಡಳಿತಗಾರರು ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಮುಂದುವರಿಯುವುದು ಅಗತ್ಯವೆಂದು ಭಾವಿಸಿದ್ದರು.
ಹಾಗೆಯೇ ಹಲವಾರು ಅಂತರಿಕ ಸಂಘರ್ಷಗಳಿಂದ ಬಳಲಿರುವ ಭಾರತ ಹೊಸ ರಾಷ್ಟ್ರವಾಗಿ ಹೊಸ ಹುಟ್ಟನ್ನು ಪಡೆಯಬೇಕೆಂದರೆ ಸಂವಿಧಾನ ರಚನಾ ಪ್ರಕ್ರಿಯೆಯು ರಾಜಕೀಯ ವಿರೋಧಿಗಳನ್ನೂ ಒಳಗೊಳ್ಳಬೇಕೆಂಬ ರಾಜಕೀಯ ದೃಷ್ಟಿಕೋನದಿಂದಲೂ, ಅಂಬೇಡ್ಕರ್ ಅವರು ಸಂವಿಧಾನ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದರೆ ಈ ದೇಶದ ದಮನಿತ ಬಹುಜನ ಹೊಸ ಭಾರತವನ್ನು ಮತ್ತು ಅದರ ಸಂವಿಧಾನವನ್ನು ತಮ್ಮದಾಗಿಸಿಕೊಳ್ಳಬಹುದು ಎಂಬ ರಾಜಕೀಯ ವ್ಯೆಹತಂತ್ರದ ಕಾರಣಕ್ಕಾಗಿಯೂ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಮುಂಬೈ ಪ್ರಾಂತದಿಂದ ಸಂವಿಧಾನ ಸಭೆಗೆ ಆಯ್ಕೆ ಮಾಡಿಕೊಳ್ಳುತ್ತದೆ ಹಾಗೂ ಅಂಬೇಡ್ಕರ್ ಅವರನ್ನು ಸಂವಿಧಾನ ಸಭೆಯ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡುತ್ತದೆ ಎಂದು ಪ್ರಖ್ಯಾತ ವಿದ್ವಾಂಸ ಆನಂದ್ ತೇಲ್‌ತುಂಬ್ಡೆಯವರು ತಮ್ಮ ‘Iconoclat- A Reflective Biography of Dr. Babasaheb Ambedkar’ ಎಂಬ ಕೃತಿಯಲ್ಲಿ ವಿಷದವಾಗಿ ವಿವರಿಸುತ್ತಾರೆ.
ಹೀಗೆ 1947ರ ಆಗಸ್ಟ್‌ನಲ್ಲಿ ಸಂವಿಧಾನ ಸಭೆಯ ಕರಡು ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರ್ ಅವರ ಮುಂದೆ:
‘ರಾವ್ ಅವರ ಕರಡನ್ನು ಇತರ ಸಮಿತಿಗಳ ಸಲಹೆ ಮತ್ತು ತಿದ್ದುಪಡಿಗಳನ್ನು ಆಧರಿಸಿ ಪುನರ್ ರಚಿಸಿ ಹೊಸ ಕರಡನ್ನು ಮುಂದಿಡುವ’ ಕಾರ್ಯಭಾರವಿತ್ತು. 1947ರ ಅಕ್ಟೊಬರ್‌ಗೆ ರಾವ್ ಅವರ ಕರಡನ್ನು ಕೂಲಂಕಷವಾಗಿ ತಿದ್ದುಪಡಿ ಮಾಡಿದ ಅಂಬೇಡ್ಕರ್ ಅವರ ಮೊದಲ ಕರಡು ಸಿದ್ಧವಾಗುತ್ತದೆ. 1947ರ ನವೆಂಬರ್‌ನಿಂದ 1948ರ ಫೆಬ್ರವರಿಯವರೆಗೆ ಆ ಕರಡಿನ ಬಗ್ಗೆ ಸಂವಿಧಾನ ಸಭೆಯ ಉಪಸಮಿತಿಗಳು ಚರ್ಚಿಸಿ 1948ರ ಫೆಬ್ರವರಿಗೆ ಮತ್ತೊಂದು ಕರಡು ತಯಾರಾಗುತ್ತದೆ.
1948 ಫೆಬ್ರವರಿಯಿಂದ ಎಂಟು ತಿಂಗಳ ಕಾಲದ ಕರಡಿನ ಬಗ್ಗೆ ಜನತೆಯ ತಿದ್ದುಪಡಿಗಳನ್ನು ಆಹ್ವಾನಿಸಲಾಗುತ್ತದೆ. ಅವೆಲ್ಲವನ್ನು ಆಧರಿಸಿ 1948ರ ನವಂಬರ್‌ನಲ್ಲಿ ಅಂಬೇಡ್ಕರ್ ನೇತೃತ್ವದ ಕರಡು ಸಮಿತಿ (ಹೆಸರಿಗೆ ಏಳು ಸದಸ್ಯರಿದ್ದರೂ ಅಂಬೇಡ್ಕರ್ ಒಬ್ಬರೇ ಅದರ ಎಲ್ಲಾ ಹೊಣೆಯನ್ನು ನಿಭಾಯಿಸಿದ್ದು) ಅಂತಿಮ ಕರಡನ್ನು ಸಿದ್ಧಪಡಿಸುತ್ತದೆ.
1948ರ ನವೆಂಬರ್‌ನಿಂದ 1949ರ ನವೆಂಬರ್ 25ರವರೆಗೆ ಈ ಅಂತಿಮ ಕರಡನ್ನು ಸಂವಿಧಾನ ಸಭೆ ಒಂದೊಂದಾಗಿ ಚರ್ಚಿಸುತ್ತದೆ ಹಾಗೂ ಅಂತಿಮ ಸಂವಿಧಾನ ರೂಪುಗೊಳ್ಳುತ್ತದೆ.
ಆದ್ದರಿಂದ ರಾವ್ ಅವರ ಮುಂದಿಟ್ಟ ಕರಡು ಅತ್ಯಗತ್ಯವಾಗಿದ್ದ ಒಂದು ತಾಂತ್ರಿಕ ಕಚ್ಚಾ ಕರಡು ಆಗಿತ್ತು. ಆ ಪಾತ್ರವನ್ನು ರಾವ್ ಅವರು ನಿರ್ವಹಿಸಿದ್ದರು. ಆದರೆ ಅದಕ್ಕೆ ಪ್ರಜಾತಾಂತ್ರಿಕ ಆತ್ಮವನ್ನು, ಭಾರತೀಯ ಪ್ರಜಾತಂತ್ರದ ರಕ್ತ ಮಾಂಸವನ್ನು ತುಂಬಿದ್ದು ಅಂಬೇಡ್ಕರ್ ಅವರಾಗಿದ್ದರು.
ಇದು ಬಿ.ಎನ್. ರಾವ್ ಅವರ ತಾಂತ್ರಿಕ ಕರಡಿಗೂ ಹಾಗೂ ಅಂಬೇಡ್ಕರ್ ಅವರ ದೂರ ಹಾಗೂ ಸಮ ದೃಷ್ಟಿಯ ನೇತೃತ್ವದಲ್ಲಿ ತಯಾರಾದ ಅಂತಿಮ ಸಂವಿಧಾನಕ್ಕೂ ಇರುವ ಮೂಲಭೂತ ವ್ಯತ್ಯಾಸಗಳನ್ನು ಗಮನಿಸಿದರೆ ಅದು ಇನ್ನೂ ನಿಚ್ಚಳವಾಗಿ ಸ್ಪಷ್ಟವಾಗುತ್ತದೆ.
ಬಿ.ಎನ್. ರಾವ್ ಕರಡು ಮತ್ತು ಅಂತಿಮ ಸಂವಿಧಾನ: ಕೆಲವು ಪ್ರಮುಖ ವ್ಯತ್ಯಾಸಗಳು:
1. ಮೂಲಭೂತ ಹಕ್ಕುಗಳು
ಬಿ.ಎನ್. ರಾವ್ ಅವರ ಕರಡಿನಲ್ಲಿ ಮೂಲಭೂತ ಹಕ್ಕುಗಳು ನಿರ್ದಿಷ್ಟವಾಗಿಯೂ ಇರಲಿಲ್ಲ ಮತ್ತು ಅದನ್ನು ಜಾರಿಗೊಳಿಸುವ ಬದ್ಧತೆಯನ್ನು ಕಡ್ಡಾಯ ಮಾಡುವ ಕ್ರಮಗಳಿರಲಿಲ್ಲ.
ಅಂಬೇಡ್ಕರ್ ಅವರು ಸಂವಿಧಾನ ಸಭೆಯ ಸದಸ್ಯರಾಗಿ 1946 ಡಿಸೆಂಬರ್‌ನಲ್ಲಿ ಮಾಡಿದ ಮೊದಲ ಭಾಷಣವೇ ಮೂಲಭೂತ ಹಕ್ಕುಗಳ ರಕ್ಷಣೆಗೆ ಬೇಕಾದ ಕ್ರಮಗಳ ಅಗತ್ಯದ ಕುರಿತಾಗಿತ್ತು. ಅವರ ಸತತ ಪರಿಶ್ರಮ, ಬದ್ಧತೆ ಮತ್ತು ಪ್ರತಿಪಾದನೆಗಳಿಂದಾಗಿ ಮೂಲಭೂತ ಹಕ್ಕುಗಳಿಗೆ ಸಂವಿಧಾನಾತ್ಮಕ ಮತ್ತು ನ್ಯಾಯಾಂಗ ರಕ್ಷಣೆ ಒದಗಿಸುವ ಆರ್ಟಿಕಲ್ 32 ಮತ್ತು 226ಗಳನ್ನು ಅಳವಡಿಸಿಕೊಳ್ಳಲಾಯಿತು.
2. ಸಾಮಾಜಿಕ ನ್ಯಾಯ
ಬಿ.ಎನ್.ರಾವ್ ಅವರ ಕರಡಿನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಒತ್ತು ಇರಲಿಲ್ಲ.
ಆದರೆ ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ಸಭೆಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಹೆಚ್ಚಿನ ಮಹತ್ವ ಮತ್ತು ಒತ್ತನ್ನು ನೀಡಿತು ಹಾಗೂ ಅಸ್ಪಶ್ಯತೆ ನಿವಾರಣೆ (ಆರ್ಟಿಕಲ್ 17 ಮತ್ತು 15 ಹಾಗೂ 16ರ ವಿಸ್ತರಣೆ ) ಹಾಗೂ ಇತರ ಸಾಮಾಜಿಕ ಘನತೆಯ ಅಂಶಗಳನ್ನು ಅಳವಡಿಸಿಕೊಂಡಿತು.
3. ಪ್ರಭುತ್ವ ನಿರ್ದೇಶನಾ ತತ್ವಗಳು
ಬಿ.ಎನ್.ರಾವ್ ಅವರ ಕರಡಿನಲ್ಲಿ ಇದಕ್ಕೆ ಮಹತ್ವವನ್ನೇ ಕೊಟ್ಟಿರಲಿಲ್ಲ.
ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ಸಭೆಯು ಸಮಾಜದಲ್ಲಿರುವ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗಳನ್ನು ನಿವಾರಿಸಲು ಸಂವಿಧಾನವು ಪ್ರಭುತ್ವಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ಕೊಡಬೇಕಾದ ಅಗತ್ಯವನ್ನು ಮನಗಂಡಿತು ಮತ್ತು ಅದನ್ನು ಪ್ರತ್ಯೇಕ ಪರಿಚ್ಛೇದ 4 ಆಗಿ ಸೇರಿಸಿತು.
ಆದರೆ ಪ್ರಭುತ್ವ ನಿರ್ದೇಶನಾ ತತ್ವಗಳಲ್ಲಿ ಅಡಕವಾಗಿರುವ ಅಂಶಗಳು ಮೂಲಭೂತ ಹಕ್ಕಾಗಬೇಕೆಂಬುದು ಅಂಬೇಡ್ಕರ್ ಅವರ ನಿಜವಾದ ಆಶಯವಾಗಿತ್ತು. ಅದನ್ನು ಕೇವಲ ಮಾರ್ಗದರ್ಶಿ ಸೂತ್ರ ಮಾಡಿದರೆ ಸರಕಾರ ಅವುಗಳನ್ನು ಜಾರಿಗೆ ತರುವ ಒತ್ತಾಸೆ ಇರುವುದಿಲ್ಲ ಅಥವಾ ಸರಕಾರ ಬದಲಾದಂತೆ ಇದಕ್ಕೆ ಸಂಬಂಧಪಟ್ಟ ಕಾನೂನುಗಳೂ ಬದಲಾಗಿಬಿಡಬಹುದೆಂಬ ಆತಂಕ ಮತ್ತು ಅಭಿಪ್ರಾಯ ಅಂಬೇಡ್ಕರ್ ಅವರದಾಗಿತ್ತು.
ಆದರೆ ಸಂವಿಧಾನ ಸಭೆಯಲ್ಲಿ ಇದ್ದದ್ದು ಕೇವಲ ಅಂಬೇಡ್ಕರ್ ಮಾತ್ರ ಅಲ್ಲವಲ್ಲ. ಹೀಗಾಗಿ ಈ ಮನುಷ್ಯ ಘನತೆಯ ಹಕ್ಕುಗಳು ಮೂಲಭೂತ ಹಕ್ಕುಗಳಾಗಲಿಲ್ಲ.
4. ಪ್ರಜಾತಾಂತ್ರಿಕ ನೈತಿಕತೆ
ಬಿ.ಎನ್.ರಾವ್ ಅವರ ಕರಡು ಸಂವಿಧಾನ ಸರಕಾರ ರಚಿಸಲು ಮತ್ತು ನಡೆಸಲು ಬೇಕಾದ ನಿಯಮಗಳನ್ನು ಒದಗಿಸುವ ತಾಂತ್ರಿಕ ಸಂವಿಧಾನವಷ್ಟೇ ಆಗಿತ್ತು.
ಅಂಬೇಡ್ಕರ್ ನೇತೃತ್ವದ ಸಂವಿಧಾನ ಸಭೆಯಲ್ಲಿದ್ದ ಪ್ರಗತಿಪರರು, ಎಲ್ಲಕ್ಕಿಂತ ಪ್ರಮುಖವಾಗಿ ಮತ್ತು ವಿಶೇಷವಾಗಿ ಅಂಬೇಡ್ಕರ್ ಅವರು ಸಂವಿಧಾನವನ್ನು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಪ್ರತಿಪಾದಿಸುವ ಒಂದು ಜೀವಂತ ನೈತಿಕ ಸಂವಿಧಾನವನ್ನಾಗಿ ಪರಿವರ್ತಿಸಿದರು.
5. ಸಂಸದೀಯ ಪ್ರಜಾತಂತ್ರ
ಬಿ.ಎನ್.ರಾವ್ ಅವರ ಕರಡು ಒಂದು ಸಂಸದೀಯ ಪ್ರಜಾತಂತ್ರದ ಅಸ್ಥಿಪಂಜರವನ್ನು ಮಾತ್ರ ಒದಗಿಸಿತ್ತು.
ಅಂಬೇಡ್ಕರ್ ನೇತೃತ್ವದ ಸಂವಿಧಾನ ಸಭೆ ಕೂಲಂಕಷ ಚರ್ಚೆ ವಾದ-ಪ್ರತಿವಾದ, ತಿದ್ದುಪಡಿಗಳ ಮೂಲಕ ಅದಕ್ಕೆ ರಕ್ತ ಮಾಂಸಗಳನ್ನು ತುಂಬಿ ರಾಷ್ಟ್ರಪತಿ, ಪ್ರಧಾನಿ, ಮಂತ್ರಿಮಂಡಲ, ಒಕ್ಕೂಟ ಮತ್ತು ರಾಜ್ಯಗಳ ಸಂಬಂಧ ಇತ್ಯಾದಿಗಳನ್ನು ಸ್ಪಷ್ಟಪಡಿಸಿತು. ಅಂದು ಇದ್ದ ಸಂದರ್ಭ, ಸಂವಿಧಾನ ಸಭೆಯ ಒಟ್ಟಾರೆ ರಾಜಕೀಯ ಸಾಮಾಜಿಕ ಹಿನ್ನೆಲೆಯ ಮಿತಿಯಲ್ಲಿ ಭಾರತವು ಫೆಡರಲ್ ಸ್ವರೂಪಕ್ಕಿಂತ ಯೂನಿಯನ್ ಸ್ವರೂಪದ ಗಣರಾಜ್ಯವನ್ನಾಗಿ ಅಂಗೀಕರಿಸಲಾಯಿತು.
75 ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಅದರ ಸಾಧಕ ಬಾಧಕಗಳನ್ನು ಈಗ ಮತ್ತೊಮ್ಮೆ ಪರಿಶೀಲಿಸುವ, ಸುಧಾರಿಸುವ, ಇನ್ನೂ ಹೆಚ್ಚು ಪ್ರಜಾತಂತ್ರೀಕರಿಸುವ ಅಗತ್ಯವಂತೂ ಇದ್ದೇ ಇದೆ.
6. ಗಾತ್ರ
ಬಿ.ಎನ್.ರಾವ್ ಅವರ ಕರಡು ಅಂತಿಮ ಸಂವಿಧಾನಕ್ಕೆ ಹೋಲಿಸಿದಲ್ಲಿ ಸಣ್ಣದು ಮತ್ತು ಕೇವಲ ಪ್ರಾಥಮಿಕವಾದ 240 ಆರ್ಟಿಕಲ್‌ಗಳನ್ನು ಮಾತ್ರ ಹೊಂದಿತ್ತು.
ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ಸಭೆ ರೂಪಿಸಿದ ಅಂತಿಮ ಕರಡು 395 ಆರ್ಟಿಕಲ್‌ಗಳಷ್ಟು ಸುದೀರ್ಘ ಲಿಖಿತ ಸಂವಿಧಾನವಾಗಿದೆ.
ಇವು ರಾವ್ ಅವರು ಒದಗಿಸಿದ ಸಂವಿಧಾನದ ಕಚ್ಚಾ ಕರಡಿಗೂ, ಅಂಬೇಡ್ಕರ್ ರಾಷ್ಟ್ರಕ್ಕೆ ನೀಡಿದ ಅಂತಿಮ ಸಂವಿಧಾನಕ್ಕೂ ಇರುವ ಕೆಲವು ಮೂಲಭೂತ ವ್ಯತ್ಯಾಸಗಳು. ರಾವ್ ಅವರು ತಮ್ಮ ಕಾನೂನಾತ್ಮಕ ಪರಿಣತಿಯನ್ನು ಬಳಸಿಕೊಂಡು ಹೊಸ ರಾಷ್ಟ್ರದ ಪ್ರಜಾತಾಂತ್ರಿಕ ಆಡಳಿತಕ್ಕೆ ಬೇಕಾದ ನಿಯಮಗಳನ್ನು ಒಳಗೊಂಡ ಕಚ್ಚಾ ಕರಡನ್ನು ಮುಂದಿಟ್ಟರು.
ಅದನ್ನು ಒಂದು ಸಾಮಾಜಿಕ ಪರಿವರ್ತನಾ ಆಶಯವುಳ್ಳ ಸೆಕ್ಯುಲರ್, ಸಮಾಜವಾದಿ, ಪ್ರಜಾತಾಂತ್ರಿಕ ಮತ್ತು ಸಾರ್ವಭೌಮ ಗಣರಾಜ್ಯದ ಆಶಯದ ಸಂವಿಧಾನವನ್ನಾಗಿ ಮಾಡಿದ್ದು ಅಂಬೇಡ್ಕರ್.
ಹೀಗಾಗಿಯೇ ಭಾರತದ ಸಾಂವಿಧಾನಿಕ ಇತಿಹಾಸದ ವಿದ್ವಾಂಸರು ಬಿ.ಎನ್.ರಾವ್ ಅವರು ಭಾರತಕ್ಕೆ ಸಂವಿಧಾನದ ಕರಡನ್ನು ಕೊಟ್ಟರೆ ಅಂಬೇಡ್ಕರ್ ಅವರು ಭಾರತಕ್ಕೆ ಸಂವಿಧಾನದ ಆತ್ಮವನ್ನು ಕೊಟ್ಟರು ಎಂದು ವಿವರಿಸುತ್ತಾರೆ.
ಭಾರತದ ಸಂವಿಧಾನ ರಚನೆಯ ಪ್ರತಿಷ್ಠಿತ ಇತಿಹಾಸಕಾರ ಗ್ರನ್ವಿಲ್ ಆಸ್ಟಿನ್ ಅವರು ಹೇಳುವಂತೆ ‘‘ರಾವ್ ಅವರು ಪರಿಣತ ಕರಡನ್ನು ಒದಗಿಸಿದರು. ಅಂಬೇಡ್ಕರ್ ಸಂವಿಧಾನಕ್ಕೆ ತಾತ್ವಿಕ ಆಳವನ್ನು ಮತ್ತು ಪ್ರಜಾತಾಂತ್ರಿಕ ಬದ್ಧತೆಯನ್ನೂ ನೀಡಿದರು’’. ಒಂದು ಮಾತಿನಲ್ಲಿ ಹೇಳುವುದಾದರೆ ‘‘ಬಿ.ಎನ್ ರಾವ್ ಅವರು ರಾಷ್ಟ್ರಕ್ಕೆ ಒಂದು ಸಂವಿಧಾನದ ಕಚ್ಚಾ ಕರಡನ್ನು ಕೊಟ್ಟರೆ, ಅಂಬೇಡ್ಕರ್ ಅವರು ಸಂವಿಧಾನಕ್ಕೆ ಒಂದು ರಾಷ್ಟ್ರವನ್ನು ಕೊಟ್ಟರು’’.
(The Indian Constitution: Cornerstone Of A Nation- Granville Austin)
ಸಂವಿಧಾನ ರಚನಾ ಸಭೆಯ ಕೊನೆಯ ಸಭೆ ನಡೆದದ್ದು 1949ರ ನವೆಂಬರ್ 26ರಂದು. ಅಂದು ಹಾಜರಿದ್ದ 285 ಸದಸ್ಯರು ಕರಡಿಗೆ ಸಹಿ ಹಾಕಿ ಸಂವಿಧಾನವನ್ನು ಅಖೈರುಗೊಳಿಸಿದರೆ, 284 ಸದಸ್ಯರು ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರವನ್ನು ಮುಕ್ತಕಂಠದಿಂದ ಹಾಡಿ ಹೊಗಳಿದ್ದರು. ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಸದಸ್ಯರಾಗಿದ್ದ ಟಿ.ಟಿ. ಕೃಷ್ಣಮಾಚಾರಿಯವರಂತೂ ಅಂಬೇಡ್ಕರ್ ಅವರಿಲ್ಲದಿದ್ದರೆ ಸಂವಿಧಾನ ರಚನೆ ಎಷ್ಟು ಕಷ್ಟವಾಗುತ್ತಿತ್ತೆಂಬುದನ್ನು ಮನದುಂಬಿ ವಿವರಿಸಿದರು. ಅವರ ಪ್ರಕಾರ ‘‘ಕರಡು ಸಮಿತಿಯ ಸದಸ್ಯರಾಗಿದ್ದ ಏಳು ಜನ ಸದಸ್ಯರಲ್ಲಿ ಒಬ್ಬರು ಮರಣಹೊಂದಿದರು. ಇಬ್ಬರು ದಿಲ್ಲಿಯಿಂದ ದೂರ ಉಳಿದಿದ್ದು ಯಾವ ಸಭೆಗೂ ಬರಲಿಲ್ಲ. ಒಬ್ಬರು ಅಮೆರಿಕ ಸೇರಿಕೊಂಡರು. ಮತ್ತೊಬ್ಬರಿಗೆ ಅನಾರೋಗ್ಯ ಹಾಗೂ ತಾನು ಸಂಪೂರ್ಣವಾಗಿ ಸರಕಾರದ ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಿಕೊಂಡದ್ದರಿಂದ ಸಂವಿಧಾನವನ್ನು ರಚಿಸುವ ಸಂಪೂರ್ಣ ಹೊಣೆ ಅಂಬೇಡ್ಕರ್ ಅವರ ಮೇಲೆ ಬಿತ್ತು.’’ ಹಾಗೂ ‘‘ಅಂಬೇಡ್ಕರ್ ಅವರ ತಮ್ಮ ತೀವ್ರ ಅನಾರೋಗ್ಯದ ನಡುವೆಯೂ ದಿನಕ್ಕೆ 18 ಗಂಟೆಗಳಷ್ಟು ಕೆಲಸ ಮಾಡಿ ಕರಡು ರಚನೆ ಸಾಧ್ಯಗೊಳಿಸಿದ’’ ವಾಸ್ತವವನ್ನು ಇಡೀ ದೇಶಕ್ಕೆ ತಿಳಿಸಿಕೊಟ್ಟರು. ಈ ವಾಸ್ತವವನ್ನು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ಬಾಬು ರಾಜೇಂದ್ರ ಪ್ರಸಾದ್, ಪ್ರಧಾನಿ ನೆಹರೂ ಹಾಗೂ ಇನ್ನಿತರರೂ ಸಹ ಅಕ್ಷರಶಃ ಒಪ್ಪಿಕೊಂಡು ಇಡೀ ದೇಶ ಅಂಬೇಡ್ಕರ್ ಅವರಿಗೆ ಕೃತಜ್ಞವಾಗಿದೆಯೆಂದು ಭಾವಪರವಶರಾಗಿ ನುಡಿದಿದ್ದರು.
(Dr. Babasaheb Ambedkar: Writings And Speeches Vol. 13, p.72)