ದೇಶದಲ್ಲಿ ಅಕ್ರಮ ವಿದೇಶೀಯರು ಅದರಲ್ಲೂ ಬಾಂಗ್ಲಾ ದೇಶದಿಂದ ಅಕ್ರಮವಾಗಿ ನುಗ್ಗುತ್ತಿರುವ ಲಕ್ಷಾಂತರ ನುಸುಳುಕೋರರನ್ನು ಗುರುತಿಸಿ, ಬಂಧಿಸಿ, ಗಡಿಪಾರು ಮಾಡಲು ಎಸ್ಐಆರ್ ಅತ್ಯಗತ್ಯ ಎಂಬುದಲ್ಲವೇ? ಹಾಗಿದ್ದ ಮೇಲೆ ಈಗಾಗಲೇ ಎಸ್ಐಆರ್ ಮುಗಿದಿರುವ 13 ರಾಜ್ಯಗಳಲ್ಲಿ ಎಷ್ಟು ಜನ ಅಕ್ರಮ ವಲಸಿಗರನ್ನು ಎಸ್ಐಆರ್ ಮೂಲಕ ಪತ್ತೆ ಹಚ್ಚಲಾಗಿದೆ?

ವಾಸ್ತವವಾಗಿ ಎಸ್ಐಆರ್ ವಿರುದ್ಧ ದೇಶಾದ್ಯಂತ ಜನಾಂದೋಲನ ಭುಗಿಲೆದ್ದಿರುವ ಈ ಹೊತ್ತಿನಲ್ಲಿ ಎಸ್ಐಆರ್ನಿಂದ ಲಕ್ಷಾಂತರ ನುಸುಳುಕೋರರು ಪತ್ತೆಯಾಗಿದ್ದರೆ ಬಿಜೆಪಿ ಮತ್ತು ಸಂಘಪರಿವಾರ ಅದರ ಪಟ್ಟಿಯನ್ನು ವೀರಾವೇಶದಿಂದ ದೇಶದ ಮುಂದಿಟ್ಟು ವಿರೋಧಿಗಳನ್ನು ಪಾಕಿಸ್ತಾನಕ್ಕೆ ಅಟ್ಟಲು ಮುಂದಾಗಬೇಕಿತ್ತಲ್ಲವೇ?

ಯಾಕೆ ಸಂಘಿಗಳಾಗಲೀ, ಸರಕಾರವಾಗಲೀ ಅದರ ಬಗ್ಗೆ ಚಕಾರವೆತ್ತುತ್ತಿಲ್ಲ.

ಇಡೀ ದೇಶವನ್ನು ಕೋಲಾಹಲಕ್ಕೆ ತಳ್ಳಿರುವ ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಸ್ಐಆರ್ ನಡೆಸಲು ಮೋದಿ ಸರಕಾರ ಕೊಟ್ಟ ಪ್ರಧಾನ ಕಾರಣವೇನು?

ದೇಶದಲ್ಲಿ ಅಕ್ರಮ ವಿದೇಶೀಯರು ಅದರಲ್ಲೂ ಬಾಂಗ್ಲಾ ದೇಶದಿಂದ ಅಕ್ರಮವಾಗಿ ನುಗ್ಗುತ್ತಿರುವ ಲಕ್ಷಾಂತರ ನುಸುಳುಕೋರರನ್ನು ಗುರುತಿಸಿ, ಬಂಧಿಸಿ, ಗಡಿಪಾರು ಮಾಡಲು ಎಸ್ಐಆರ್ ಅತ್ಯಗತ್ಯ ಎಂಬುದಲ್ಲವೇ? ಹಾಗಿದ್ದ ಮೇಲೆ ಈಗಾಗಲೇ ಎಸ್ಐಆರ್ ಮುಗಿದಿರುವ 13 ರಾಜ್ಯಗಳಲ್ಲಿ ಎಷ್ಟು ಜನ ಅಕ್ರಮ ವಲಸಿಗರನ್ನು ಎಸ್ಐಆರ್ ಮೂಲಕ ಪತ್ತೆ ಹಚ್ಚಲಾಗಿದೆ?

ವಾಸ್ತವವಾಗಿ ಎಸ್ಐಆರ್ ವಿರುದ್ಧ ದೇಶಾದ್ಯಂತ ಜನಾಂದೋಲನ ಭುಗಿಲೆದ್ದಿರುವ ಈ ಹೊತ್ತಿನಲ್ಲಿ ಎಸ್ಐಆರ್ನಿಂದ ಲಕ್ಷಾಂತರ ನುಸುಳುಕೋರರು ಪತ್ತೆಯಾಗಿದ್ದರೆ ಬಿಜೆಪಿ ಮತ್ತು ಸಂಘಪರಿವಾರ ಅದರ ಪಟ್ಟಿಯನ್ನು ವೀರಾವೇಶದಿಂದ ದೇಶದ ಮುಂದಿಟ್ಟು ವಿರೋಧಿಗಳನ್ನು ಪಾಕಿಸ್ತಾನಕ್ಕೆ ಅಟ್ಟಲು ಮುಂದಾಗಬೇಕಿತ್ತಲ್ಲವೇ?

ಯಾಕೆ ಸಂಘಿಗಳಾಗಲೀ, ಸರಕಾರವಾಗಲೀ ಅದರ ಬಗ್ಗೆ ಚಕಾರವೆತ್ತುತ್ತಿಲ್ಲ.

ಈ ಬಗ್ಗೆ ದಿಲ್ಲಿಯ Commonwealth Human Rights Initiative ನಿರ್ದೇಶಕ ವೆಂಕಟೇಶ್ ನಾಯಕ್ ಅವರು ನಡೆಸಿದ ವಿಫಲ ಆರ್ಟಿಐ ಯಾತ್ರೆಯು ಹೇಗೆ ‘ವಿದೇಶಿ ನುಸುಳುಕೋರರು’ ಎಂಬುದು ಮೋದಿ ಸರಕಾರ ಮುಂದಿಟ್ಟ ಹುಸಿ ಮತ್ತು ದುಷ್ಟ ನೆಪವಾಗಿತ್ತೆಂಬುದನ್ನು ಸಾಬೀತುಪಡಿಸುತ್ತದೆ.

ಆ ವಿವರಗಳಿಗೆ ಹೋಗುವ ಮುನ್ನ ಎಸ್ಐಆರ್ ನಡೆಸಲು ವಿದೇಶಿ ನುಸುಳುಕೋರರ ಪತ್ತೆಯನ್ನು ಹೇಗೆ ಭಾರತದ ಚುನಾವಣಾ ಆಯೋಗ ಒಂದು ಪ್ರಮುಖ ಕಾರಣವಾಗಿ ಮುಂದಿಟ್ಟಿತ್ತೆಂಬುದನ್ನು ಗಮನಿಸೋಣ.

ಅಕ್ರಮ ವಿದೇಶಿಯರೆಂಬ ಕುತಂತ್ರಿ ಅಜೆಂಡಾ

2019ರ ಎನ್ಆರ್ಸಿ ಕಾಲದಿಂದಲೂ ಭಾರತದ ಆರ್ಥಿಕತೆ ಮತ್ತು ಸಾಮಾಜಿಕ ಸಮತೋಲನವನ್ನು ಹದಗೆಡಿಸುವ ಷಡ್ಯಂತ್ರದ ಭಾಗವಾಗಿ ಬಾಂಗ್ಲಾದೇಶದಿಂದ ಕೋಟ್ಯಂತರ ಅಕ್ರಮ ವಲಸಿಗರು ಭಾರತಕ್ಕೆ ನುಸುಳಿ ಬರುತ್ತಿದ್ದಾರೆಂದು, ವಿರೋಧ ಪಕ್ಷಗಳು ಅದಕ್ಕೆ ಅವಕಾಶ ಮಾಡಿಕೊಟ್ಟು ದೇಶದ್ರೋಹ ಎಸಗುತ್ತಿವೆಯೆಂದು ಪ್ರಚಾರ ಮಾಡುತ್ತಾ ಬರಲಾಗಿದೆ. ಅದು 2021ರ ಪ. ಬಂಗಾಳ ಚುನಾವಣೆಯ ಸಮಯದಲ್ಲಿ ಮತ್ತು 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಾರಕಕ್ಕೇರಿತ್ತು. ಆದರೆ ಆಗಲೂ ಬಿಜೆಪಿಯು ಪ್ರಣಾಳಿಕೆಯಲ್ಲಿ ಎಸ್ಐಆರ್ ಮಾಡಿ ಅವರನ್ನು ಹೊರಗಟ್ಟುತ್ತೇವೆಂಬ ಸೂಚನೆಯನ್ನೇನೂ ನೀಡಿರಲಿಲ್ಲ.

ಆದರೆ 2023ರ ಚುನಾವಣಾ ಆಯುಕ್ತರ ನೇಮಕಾತಿ ತಿದ್ದುಪಡಿಯ ಭಾಗವಾಗಿ ಆಯೋಗವು ಸಂಪೂರ್ಣ ಮೋದಿ ಸರಕಾರದ ಗುಲಾಮನಾದ ಮೇಲೆ 2025ರ ಫೆಬ್ರವರಿಯಲ್ಲಿ ಜ್ಞಾನೇಶ್ ಕುಮಾರ್ ದಿಢೀರನೇ ಮುಖ್ಯ ಚುನಾವಣಾ ಆಯುಕ್ತನಾಗಿ ನೇಮಕವಾದ ಮೇಲೆ ಬಿಜೆಪಿಯ ಈ ಹಳೆ ಅಜೆಂಡಾಗೆ ಹೊಸ ಚಾಲನೆ ಸಿಕ್ಕಿತು. ಜ್ಞಾನೇಶ್ ಕುಮಾರ್ ಹೋದಲ್ಲಿ ಬಂದಲ್ಲೆಲ್ಲಾ ಅಕ್ರಮ ನುಸುಳುಕೋರರ ಬಗ್ಗೆ ಬಿಜೆಪಿಗಿಂತಲೂ ಭೀಕರವಾಗಿ ಮಾತನಾಡಲು ಪ್ರಾರಂಭಿಸಿದರು.

ಕೊನೆಗೆ ದಿಢೀರನೆ 2025ರ ಜೂನ್ 25ರಂದು ಬಿಹಾರದಲ್ಲಿ ಎಸ್ಐಆರ್ ಘೋಷಿಸಲು ಕೊಟ್ಟ ಕಾರಣಗಳಲ್ಲಿ ಹೆಚ್ಚುತ್ತಿರುವ ನಗರೀಕರಣ, ವಲಸೆ, ಮತಪಟ್ಟಿ ಶುದ್ಧೀಕರಣದ ಅಗತ್ಯದ ಜೊತೆಗೆ ಕೊಟ್ಟ ಅತಿ ಮುಖ್ಯ ಕಾರಣ ಅಕ್ರಮ ವಲಸೆಯ ನಿಗ್ರಹ.

ಎಸ್ಐಆರ್-ಅಕ್ರಮ ವಲಸಿಗರ ನಿಗ್ರಹಕ್ಕಾಗಿ ಎಂಬ ಬುರುಡೆ!

ಅದಕ್ಕಾಗಿ ಹೊರಡಿಸಿದ ಆಯೋಗದ ಅಧಿಸೂಚನೆಯಲ್ಲಿ ಹೀಗೆ ಹೇಳಲಾಗಿತ್ತು:

Whereas, one of the fundamental pre-conditions set out in Article 326 of the constitution is that a person is required to be an Indian citizen, for his/her name to be registered in the electoral roll. Consequently, the commission has a constitutional obligation to ensure that only persons who are citizens;

(https://ceowestbengal.wb.gov.in/Downloads/SIR2026/Instruction of ECI on SIR of Electoral Roll w.r.t. 01.01.2026.pdf)

ಅಂದರೆ, ಸಂವಿಧಾನದ ಆರ್ಟಿಕಲ್ 326 ಭಾರತದ ಮತದಾರರಾಗುವವರು ಭಾರತದ ನಾಗರಿಕರಾಗಿರಬೇಕೆಂಬುದನ್ನು ಖಾತರಿ ಪಡಿಸಿಕೊಳ್ಳಬೇಕೆಂಬುದನ್ನು ವಿಧಿಸಿರುವ ಕರ್ತವ್ಯವನ್ನು ಪೂರೈಸಲು ಎಸ್ಐಆರ್ ನಡೆಸುತ್ತಿರುವುದಾಗಿ ಆಯೋಗವು ಘೋಷಿಸಿಕೊಂಡಿದೆ.

ಆದರೆ ಸಂವಿಧಾನ ರಚನೆಯಾಗಿ 1951ರ ಚುನಾವಣೆಗೆ ಮತಪಟ್ಟಿ ತಯಾರು ಮಾಡಿದಾಗಿನಿಂದಲೂ ಅಥವಾ ಕಳೆದ 78 ವರ್ಷಗಳಲ್ಲಿ 18 ಲೋಕಸಭಾ ಮತ್ತು ನೂರಾರು ಶಾಸನಾಸಭಾ ಚುನಾವಣೆಗಳನ್ನು ನಡೆಸಲು ಆಯೋಗವು ಕಾಲಕಾಲಕ್ಕೆ ಮತಪಟ್ಟಿಗಳನ್ನು ಸಿದ್ಧಪಡಿಸಿದಾಗಲೆಲ್ಲಾ ಕಡ್ಡಾಯವಾಗಿ ಮತದಾರ ಭಾರತದ ನಾಗರಿಕನೆಂದು ಖಾತರಿ ಪಡಿಸಿಕೊಂಡೇ ಮತಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲಾಗಿತ್ತು ಮತ್ತು ಅದಕ್ಕೆ ಬೇಕಾದ ನಿಯಮಗಳನ್ನು ಆಂದಿನಿಂದಲೂ ಅನುಸರಿಸುತ್ತಾ ಬರಲಾಗಿದೆ. ಆದರೆ ಈ ಹಿಂದೆ ಯಾವಾಗಲೂ ಎಸ್ಐಆರ್ ಪ್ರಕ್ರಿಯೆ ಅನುಸರಿಸಿರಲಿಲ್ಲ.

ಅದೇ ರೀತಿ ಹಾಲಿ ಎಸ್ಐಆರ್ನ ಸಾಂವಿಧಾನಿಕತೆಯ ವಿಚಾರಣೆ ನಡೆಯುವಾಗ 2025ರ ಜನವರಿ 22ರಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ನಲ್ಲಿ ಎಸ್ಐಆರ್ ಮಾಡುತ್ತಿರುವ ಉದ್ದೇಶವನ್ನು ಅನುಮಾನಕ್ಕೆಡೆಯಿಲ್ಲದಂತೆ ಹೀಗೆ ಸ್ಪಷ್ಟಪಡಿಸಿದೆ:

ಅದರ ಪ್ರಕಾರ ಭಾರತದ ನಾಗರಿಕತ್ವ ಕಾಯ್ದೆಗೆ 2003ರಲ್ಲಿ ತಿದ್ದುಪಡಿ ಆಯಿತು. ಆದರೆ ಅದು:

"This amendment came after the previous SIR. The amendment had never been applied in the intervening years, until now. Revision of electoral rolls had been done earlier on the basis of self-declaration of citizenship. This [SIR 2025] we found was an opportune time to take note of this statutory amendment of 2003 and examine citizenship for the purpose of preparing the electoral roll'

ಅಂದರೆ:

‘ಕಳೆದ ಬಾರಿ ಎಸ್ಐಆರ್ ನಡೆದದ್ದು ಭಾರತದ ನಾಗರಿಕತ್ವ ಕಾಯ್ದೆಗೆ 2003ರಲ್ಲಿ ತಿದ್ದುಪಡಿ ಮಾಡುವ ಮುನ್ನ. ಆ ತಿದ್ದುಪಡಿಗಳನ್ನು ಮಾಡಿದ ಮೇಲೆ ಈ ದೇಶದಲ್ಲಿ ಎಸ್ಐಆರ್ ಆಗಿಯೇ ಇಲ್ಲ.

ಆದ್ದರಿಂದ ಈ ಬಾರಿ ಎಸ್ಐಆರ್ ಮಾಡುವಾಗ ಮತಪಟ್ಟಿಯನ್ನು ತಯಾರು ಮಾಡುವ ಮುನ್ನ ನಾಗರಿಕತ್ವ ಕಾಯ್ದೆಗೆ ಆಗಿರುವ ತಿದ್ದುಪಡಿಯನ್ನು ಗಮನದಲ್ಲಿಟ್ಟುಕೊಂಡು ನಾಗರಿಕತ್ವವನ್ನು ಪರಿಶೀಲಿಸಲು ಸರಿಯಾದ ಸಂದರ್ಭವೆಂದು ನಾವು ತೀರ್ಮಾನಿಸಿದೆವು’.

ಆಸಕ್ತರು ಸಂಪೂರ್ಣ ವರದಿಯನ್ನು ಈ ವಿಳಾಸದಲ್ಲಿ ಓದಬಹುದು:

(https://www.thehindu.com/news/national/why-illegal-immigration-was-not-cited-as-reason-for-sir-supreme-court-asks-ec/article70538919.ece)

ಹೀಗೆ ಅಕ್ರಮ ನುಸುಳುಕೋರರನ್ನು ಪತ್ತೆ ಹಚ್ಚುವ ನೆಪದಲ್ಲಿ ದೇಶದ ಎಲ್ಲಾ ನಾಗರಿಕರ ನಾಗರಿಕತ್ವ ಪರಿಶೀಲನೆಯನ್ನು ಮಾಡುತ್ತಾ ಆಯೋಗವು ಇಡೀ ದೇಶವನ್ನು ಕೋಲಾಹಲಕ್ಕೆ ತಳ್ಳಿದೆ.

ಸುಪ್ರೀಂನ ಅನ್ಯಾಯದ ತೀರ್ಪಿನ ಷರತ್ತುಗಳನ್ನು ಪಾಲಿಸದ ಸರಕಾರ

ಕಳೆದ ಮೇ 27ರಂದು ಈ ದುರುದ್ದೇಶದ ಎಸ್ಐಆರ್ ಅನ್ನು ಸಾಂವಿಧಾನಿಕ ಎಂದು ಬೇಜವಾಬ್ದಾರಿಯಿಂದ ಘೋಷಿಸಿಬಿಟ್ಟ ಸುಪ್ರೀಂ ಕೋರ್ಟ್ ಅದರಲ್ಲಿ ಕೂದಲು ಸೀಳುವ ತರ್ಕ ಮುಂದಿಟ್ಟಿತ್ತು. ಒಬ್ಬ ವ್ಯಕ್ತಿ ನಾಗರಿಕನೋ ಅಲ್ಲವೋ ಎಂದು ನ್ಯಾಯ ತೀರ್ಮಾನ ಮಾಡುವ ಅಧಿಕಾರ ಆಯೋಗಕ್ಕೆ ಇಲ್ಲವಾದರೂ ಆ ವ್ಯಕ್ತಿ ಮತದಾರನಾಗಲು ಬೇಕಾದ ನಾಗರಿಕ ಅರ್ಹತೆ ಹೊಂದಿರುವರೇ ಎಂಬ ಆಡಳಿತಾತ್ಮಕ ನಿರ್ಣಯ ತೆಗೆದುಕೊಳ್ಳಲು ಅಧಿಕಾರ ಆಯೋಗಕ್ಕಿದೆ ಎಂದು ತೀರ್ಪಿತ್ತಿದೆ. ಆದರೆ ನಾಗರಿಕನಾಗಿ ಸಿಗುವ ಮೂಲಭೂತ ಅಧಿಕಾರವೇ ಮತದಾರಿಕೆ. ನಾಗರಿಕರೋ ಅಲ್ಲವೋ ಎಂದು ಅಂತಿಮ ತೀರ್ಮಾನಕ್ಕೆ ಮುನ್ನವೇ ಮತದಾರಿಕೆಯ ನಿರಾಕರಣೆಯಾಗುವುದು ಮೊದಲು ಶಿಕ್ಷೆ ವಿಧಿಸಿ ಆಮೇಲೆ ವಿಚಾರಣೆ ಮಾಡಿದಂತಾಗುವುದಿಲ್ಲವೇ ಎಂಬ ವಿಷಯವನ್ನೇ ಈ ಸರಕಾರಿ ನ್ಯಾಯ ಪರಿಶೀಲಿಸಲಿಲ್ಲ.

ಅದು ಒತ್ತಟ್ಟಿಗಿರಲಿ. ಅಂತಹ ಬೇಜವಾಬ್ದಾರಿ ತೀರ್ಮಾನದ ನಡುವೆಯೂ ಸುಪ್ರೀಂ ಕೋರ್ಟ್ ತನ್ನ ಮೇ 27ರ ತೀರ್ಪಿನಲ್ಲಿ:

‘‘ಎಸ್ಐಆರ್ ಸಂದರ್ಭದಲ್ಲಿ ಅನುಮಾನಿತ ವಿದೇಶಿಯರು ಎಂದು ಕಂಡುಬಂದವರ ಪ್ರತ್ಯೇಕ ಪಟ್ಟಿಯನ್ನು ಆಯೋಗವು ಸಿದ್ಧಪಡಿಸಬೇಕು ಮತ್ತು ಎಸ್ಐಆರ್ ಮುಗಿದ ನಾಲ್ಕು ವಾರದೊಳಗೆ ಆ ಪಟ್ಟಿಯನ್ನು ಆಯೋಗವು ಗೃಹ ಇಲಾಖೆಯಲ್ಲಿ ಸಕ್ಷಮ ಪ್ರಾಧಿಕಾರಕ್ಕೆ (Competeant Authority)ಗೆ ಕಳಿಸಬೇಕು. ಆ ಸಕ್ಷಮ ಪ್ರಾಧಿಕಾರವು ಮುಂದಿನ ಲೋಕಸಭಾ, ಶಾಸನಸಭಾ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಅವರ ನಾಗರಿಕತ್ವದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು’’ (ತೀರ್ಪಿನ ಪ್ಯಾರ 174-179)

ಹೀಗಾಗಿ ಈ ತೀರ್ಪಿನ ಅನುಸಾರ:

1)ಚುನಾವಣಾ ಆಯೋಗವು ಎಸ್ಐಆರ್ ಮುಗಿದ ರಾಜ್ಯಗಳಲ್ಲಿನ ಅನುಮಾನಿತರ ಪಟ್ಟಿಯನ್ನು ಎಸ್ಐಆರ್ ಮುಗಿದ ನಾಲ್ಕು ವಾರಗಳೊಳಗೆ ಗೃಹ ಇಲಾಖೆಯ ‘ಸಕ್ಷಮ ಪ್ರಾಧಿಕಾರಕ್ಕೆ’ ಕಳಿಸಬೇಕು.

2) ಗೃಹ ಇಲಾಖೆಯು ಎಸ್ಐಆರ್ ನಲ್ಲಿ ಅನುಮಾನಿತರಾದವರ ನಾಗರಿಕತ್ವ ಪರಿಶೀಲನೆಗೆ ಒಂದು ಸಕ್ಷಮ ಪ್ರಾಧಿಕಾರವನ್ನು ಏರ್ಪಾಟು ಮಾಡಬೇಕು.

ಬಿಹಾರದ ಎಸ್ಐಆರ್ ಮುಗಿದು ಒಂದು ವರ್ಷವಾಗಿದೆ. ಎರಡನೇ ಹಂತದ 12 ರಾಜ್ಯಗಳಲ್ಲಿ ಎಸ್ಐಆರ್ ಮುಗಿದು ಆರು ತಿಂಗಳುಗಳು ಆಗಿವೆ. ಈ ತೀರ್ಪು ಬಂದದ್ದು ಮೇ 27ಕ್ಕೆ. ಈಗ ನಾಲ್ಕು ವಾರಗಳಿರಲಿ ನಾಲ್ಕು ತಿಂಗಳುಗಳೇ ಕಳೆದಿವೆ.

ಹಾಗಿದ್ದಲ್ಲಿ ಎಸ್ಐಆರ್ ಮುಗಿದ 13 ರಾಜ್ಯಗಳ ಅನುಮಾನಿತ ವಿದೇಶೀಯರ ಪಟ್ಟಿಯನ್ನು ಆಯೋಗವು ಗೃಹ ಇಲಾಖೆಯ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿರಬೇಕಲ್ಲವೇ?

ಅಕ್ರಮ ವಿದೇಶಿಗರೆಷ್ಟು? ಆರ್ಟಿಐ ಅರ್ಜಿಗೂ ಉತ್ತರ ಕೊಡದ ಕುತಂತ್ರವೇನು?

ಇದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು Commonwealth Human Rights Initiative ನಿರ್ದೇಶಕ ವೆಂಕಟೇಶ್ ನಾಯಕ್ ಅವರು ಗೃಹ ಇಲಾಖೆ ಮತ್ತು ಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ಆರ್ಟಿಐ ಕಾಯ್ದೆಯಡಿ ಕೋರಿ ಕಳೆದ ಆಗಸ್ಟ್ ತಿಂಗಳಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಅವರು ಚುನಾವಣಾ ಆಯೋಗಕ್ಕೆ ಕೇಳಿದ ಪ್ರಶ್ನೆ ಇಷ್ಟೇ:

1) ಬಿಹಾರದ ಎಸ್ಐಆರ್ ಆದ ನಂತರ ಗುರುತಿಸಲಾದ ಅನುಮಾನಿತ ವಿದೇಶಿಯರೆಷ್ಟು?

2) ಎರಡನೇ ಹಂತದ 12 ರಾಜ್ಯಗಳಲ್ಲಿ ಗುರುತಿಸಲಾದ ಅನುಮಾನಿತ ವಿದೇಶಿಯರೆಷ್ಟು? ಲಿಂಗವಾರು ಸಂಖ್ಯೆಯೆಷ್ಟು?

3) ಇದರ ಬಗ್ಗೆ ಗೃಹ ಇಲಾಖೆಯ ಜೊತೆ ನಡೆದ ಪತ್ರ ವ್ಯವಹಾರಗಳ ಓದಬಲ್ಲ ಪ್ರತಿ..

ಅದೇ ರೀತಿ ಗೃಹ ಇಲಾಖೆಗೆ ಕೇಳಿದ ಪ್ರಶ್ನೆಗಳು:

1) ಆಯೋಗವು ನೀಡಿದ ಅನುಮಾನಿತರ ಪಟ್ಟಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು 1955ರ ನಾಗರಿಕತ್ವ ಕಾಯ್ದೆಯಡಿ ಇಲಾಖೆಯಲ್ಲಿ ರಚಿಸಲಾದ ಸಕ್ಷಮ ಪ್ರಾಧಿಕಾರದ ಸದಸ್ಯರ ಹುದ್ದೆ ಮತ್ತು ಹೆಸರುಗಳು.

2) ಆಯೋಗವು ಸಲ್ಲಿಸಲಾದ ರಾಜ್ಯವಾರು ಅನುಮಾನಿತರ ಲಿಂಗವಾರು ಪಟ್ಟಿ.

3) ಈ ಬಗ್ಗೆ ಆಯೋಗದ ಜೊತೆ ನಡೆಸಲಾದ ಪತ್ರ ವ್ಯವಹಾರಗಳ ಓದಬಲ್ಲ ಪ್ರತಿ.

ಒಂದು ಉತ್ತರದಾಯಿತ್ವ ಇರುವ ಸರಕಾರ ಈ ನಿರುಪದ್ರವಿ ಪ್ರಶ್ನೆಗಳಿಗೆ ಕೂಡಲೇ ಉತ್ತರಿಸಬೇಕಿತ್ತ್ತು. ಅದರಲ್ಲೂ ವಿದೇಶೀಯರನ್ನು ಪತ್ತೆ ಹಚ್ಚ ಬೇಕೆಂಬ ಘನ ಉದ್ದೇಶದಿಂದಲೇ ಎಸ್ಐಆರ್ ನಡೆಸಿದ್ದರೂ ಅತ್ಯುತ್ಸಾಹದಿಂದ ಈ ಪ್ರಶ್ನೆಗಳಿಗೆ ಉತ್ತರಿಸಿ ತನ್ನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಬೇಕಿತ್ತಲ್ಲವೇ?

ಆದರೆ ನಡೆದದ್ದೇ ಬೇರೆ. ಸಾಮಾನ್ಯವಾಗಿ ಆರ್ಟಿಐ ಕಾಯ್ದೆಯಡಿ ಅರ್ಜಿ ಹಾಕಿದ ಒಂದೇ ತಿಂಗಳಲ್ಲಿ ಉತ್ತರ ಕೊಡಬೇಕು. ಆದರೆ 50 ದಿನಗಳಾದರೂ ಈ ಅರ್ಜಿಗೆ ಉತ್ತರ ಬರಲಿಲ್ಲ.

ಕೊನೆಗೆ ಚುನಾವಣಾ ಆಯೋಗದ ಕಚೇರಿಯು ಆಗಸ್ಟ್ನಲ್ಲಿ ಹಾಕಿದ ಅರ್ಜಿಗೆ ಸೆಪ್ಟಂಬರ್ 22ರಂದು ಉತ್ತರಿಸಿದೆ. ಅದರಲ್ಲಿ ಅರ್ಜಿದಾರರು ಕೇಳಿದ ಯಾವ ಮಾಹಿತಿಯೂ ತಮ್ಮಲ್ಲಿ ಲಭ್ಯವಿಲ್ಲವೆಂದು ಉತ್ತರಿಸಿರುವುದು ಮಾತ್ರವಲ್ಲದೆ ರಾಜ್ಯವಾರು ಮಾಹಿತಿಗೆ ನೀವು ಆಯಾ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳನ್ನು ಕೇಳಬಹುದು ಎಂದು ಪುಕ್ಕಟೆ ಸಲಹೆ ನೀಡಿದೆ.

ವಾಸ್ತವದಲ್ಲಿ ಕೇಂದ್ರದ ಗೃಹ ಇಲಾಖೆಯ ಸಕ್ಷಮ ಪ್ರಾಧಿಕಾರಕ್ಕೆ ಸಂಗ್ರಹ ಮಾಹಿತಿಯನ್ನು ಕಳಿಸುವ ಹೊಣೆ ಕೇಂದ್ರ ಚುನಾವಣಾ ಆಯೋಗದ್ದು! ಆದರೂ ಆಯೋಗವು ತನ್ನ ಬಳಿ ಮಾಹಿತಿ ಇಲ್ಲ ಎಂದು ನಿರಾಕರಿಸಿದ್ದು ಮಾತ್ರವಲ್ಲದೆ ಈ ಅರ್ಜಿಯನ್ನು ಆಯಾ ರಾಜ್ಯಗಳ ಅಧಿಕಾರಿಗಳಿಗೆ ಕಳಿಸಲು ನಿರಾಕರಿಸಿದೆ.

ಇನ್ನು ಗೃಹ ಇಲಾಖೆಯು ತನ್ನ ಬಳಿ ಬಂದ ಅರ್ಜಿಯನ್ನು ಮರುದಿನವೇ ಕೇಂದ್ರ ಕಾನೂನು ಇಲಾಖೆಯ ಶಾಸನ ವಿಭಾಗಕ್ಕೆ ಕಳಿಸಿದೆ. ಶಾಸನ ವಿಭಾಗವು ಎರಡು ದಿನಗಳ ನಂತರ ಅದನ್ನು ವಾಪಸ್ ಚುನಾವಣಾ ಆಯೋಗಕ್ಕೆ ಕಳಿಸಿದೆ. ಚುನಾವಣಾ ಆಯೋಗವು 40 ದಿನಗಳ ನಂತರ ಸಕ್ಷಮ ಪ್ರಾಧಿಕಾರದ ಬಗೆಗಿನ ಪ್ರಶ್ನೆಯನ್ನು ಮರಳಿ ಗೃಹ ಇಲಾಖೆಗೆ ಮತ್ತು 12 ರಾಜ್ಯಗಳ ಬಗೆಗಿನ ಪ್ರಶ್ನೆಯನ್ನು ಬಿಹಾರದ ಮುಖ್ಯ ಚುನಾವಣಾಧಿಕಾರಿಗೆ ಸಾಗ ಹಾಕಿ ಸುಮ್ಮನಾಗಿದೆ.

ಈ ಬಗ್ಗೆ ವೆಂಕಟೇಶ್ ನಾಯಕರೇ ಬರೆದ ವಿವರಣಾತ್ಮಕ ಲೇಖನವನ್ನು The Wire ಪತ್ರಿಕೆ ಪ್ರಕಟಿಸಿದೆ. ಆಸಕ್ತರು ಆ ಲೇಖನವನ್ನು ಮತ್ತು ದಾಖಲೆಗಳನ್ನು ಈ ವಿಳಾಸದಲ್ಲಿ ಪರಿಶೀಲಿಸಬಹುದು : https://thewire.in/rights/rti-reveals-in-sir-purging-of-ineligibles-from-the-voter-lists-might-be-a-bogey

ಎಸ್ಐಆರ್ನಿಂದ ಒಬ್ಬ ಅಕ್ರಮ ವಲಸಿಗನೂ ಪತ್ತೆಯಾಗಿಲ್ಲ!

ಇದರಿಂದ ಅರ್ಥವಾಗುವುದು ಏನು?

1)ಎಸ್ಐಆರ್ನಲ್ಲಿ ಪತ್ತೆ ಹಚ್ಚಲಾದ ವಿದೇಶಿ ಅನುಮಾನಿತರ ಪಟ್ಟಿಯೇ ಆಯೋಗದ ಬಳಿಯೂ ಇಲ್ಲ. ಗೃಹ ಇಲಾಖೆಯ ಬಳಿಯೂ ಇಲ್ಲ.

2)ಕೇಂದ್ರ ಗೃಹ ಇಲಾಖೆಯಲ್ಲಿ ನಾಗರಿಕತ್ವ ಕಾಯ್ದೆ 1955ರ ಅನ್ವಯ ಅನುಮಾನಿತರ ನಾಗರಿಕತ್ವ ನಿರ್ಧರಿಸಲು ಒಂದು ಸಕ್ಷಮ ಪ್ರಾಧಿಕಾರವನ್ನೇ ರಚಿಸಲಾಗಿಲ್ಲ.

ಸರಕಾರ ಈ ಪ್ರತಿಸ್ಪಂದನೆಯ ತಾತ್ಪರ್ಯವೇನು?

ಅನುಮಾನಿತ ನುಸುಳುಕೋರರನ್ನು ಪತ್ತೆ ಹಚ್ಚಲೆಂದು ದ್ವೇಷ ಮತ್ತು ದುರುದ್ದೇಶದಿಂದ ರೂಪಿಸಲಾದ ಎಸ್ಐಆರ್ ಪ್ರಕ್ರಿಯೆಯ ಮೂಲಕ ಒಬ್ಬ ವಿದೇಶೀಯರನ್ನು ಪತ್ತೆ ಹಚ್ಚಲಾಗಲಿಲ್ಲ.

ಹಾಗಿದ್ದರೆ ಎಸ್ಐಆರ್ ನಡೆಸಿದ್ದೇಕೆ?

ಈ ಅನಗತ್ಯ ಎಸ್ಐಆರ್ ಸೃಷ್ಟಿಸಿದ ಅನಾಹುತ, ಅರಾಜಕತೆ, ಪ್ರಾಣಹಾನಿಗಳಿಗೆ ಕಾರಣರಾದವರಿಗೆ ಶಿಕ್ಷೆ ಏನು?

ಆದ್ದರಿಂದ ಈ ಕೂಡಲೇ :

-ಎಸ್ಐಆರ್ ರದ್ದಾಗಬೇಕು.

-ಹಾಲಿ ಚುನಾವಣಾ ಆಯೋಗ ರದ್ದಾಗಬೇಕು.

-ಇದಕ್ಕೆ ಕಾರಣರಾದ ಪ್ರಧಾನಿ ಮೋದಿ-ಗೃಹಮಂತ್ರಿ ಶಾ ಹಾಗೂ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಮೇಲೆ ದೇಶದ್ರೋಹದ ಮೊಕದ್ದಮೆ ದಾಖಲಾಗಬೇಕು.

-ಎಸ್ಐಆರ್ ಆಧರಿಸಿ ನಡೆದ ಎಲ್ಲಾ ಚುನಾವಣೆಗಳು ರದ್ದಾಗಬೇಕು. ಸ್ವತಂತ್ರ ಉಸ್ತುವಾರಿಯಲ್ಲಿ ಸ್ವತಂತ್ರ ಚುನಾವಣಾ ಆಯೋಗ ರಚಿತವಾಗಬೇಕು.

-ಅಲ್ಲಿಯ ತನಕ ಎಲ್ಲಾ ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಬೇಕು.

-ಅನೈತಿಕವಾಗಿ ಆಯ್ಕೆಯಾದ ಸರಕಾರದ ಕಾನೂನುಗಳನ್ನು ಪಾಲಿಸುವುದಿಲ್ಲವೆಂದು ದೇಶದ ಜನತೆ ಬೃಹತ್ ನಾಗರಿಕ ಅಸಹಕಾರ ಚಳವಳಿ ಪ್ರಾರಂಭಿಸಬೇಕು.

(ಅಂಕಣಕಾರರು ಹಿರಿಯ ಚಿಂತಕರು)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಶಿವಸುಂದರ್

contributor