ಸೆಕ್ಯುಲರ್ ಸಂತನೊಬ್ಬನ ಕಥನ

ಚಂಡಿ ಪ್ರಸಾದ್ ಭಟ್ ಅವರ ಆತ್ಮಚರಿತ್ರೆ ಬಹಳ ಮುಖ್ಯವಾದ ಪುಸ್ತಕವಾಗಿದೆ. ಅವರ ಸ್ವಂತ ಅನುಭವಗಳ ನಿರೂಪಣೆಯು ಸಾಮಾಜಿಕ ಮತ್ತು ಪರಿಸರ ಇತಿಹಾಸದ ಜೊತೆಗೆ ಗಾಂಧಿಯವರ ನಂತರದ ಗಾಂಧಿವಾದದ ಇತಿಹಾಸದ ಬಗ್ಗೆ ಶ್ರೀಮಂತ ಒಳನೋಟಗಳನ್ನು ಒದಗಿಸುತ್ತದೆ. ಪುಸ್ತಕವು ಕೆಲವು ಸಾಹಿತ್ಯಿಕ ಮೌಲ್ಯದ ದಾಖಲೆಯಾಗಿದೆ. ವ್ಯಾಪಕ ಓದುಗರನ್ನು ಪಡೆಯಲು ಅರ್ಹವಾಗಿರುವ ಕೃತಿ ಇದೆಂದು ನಾನು ನಂಬುತ್ತೇನೆ.

Update: 2024-03-24 04:47 GMT

ಸಮಾಜ ಸೇವಕ ಮತ್ತು ಚಿಪ್ಕೋ ಚಳವಳಿಯ ಪ್ರವರ್ತಕ ಚಂಡಿ ಪ್ರಸಾದ್ ಭಟ್ ಎಂದರೆ ನನಗೆ ಬಹಳ ಮೆಚ್ಚುಗೆ. ಅವರನ್ನು ಮೊದಲು ಭೇಟಿಯಾದದ್ದು ನಾನು ಇಪ್ಪತ್ತರ ಹರೆಯದಲ್ಲಿದ್ದಾಗ. ನನ್ನ ಜೀವನದ ಮೇಲೆ ಪರಿವರ್ತನಾತ್ಮಕ ಪ್ರಭಾವವನ್ನು ಬೀರಿದ ಭೇಟಿ ಅದು. ಅಂದಿನಿಂದ ನಾನು ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ; ಪ್ರತೀ ಭೇಟಿಯೂ ದೇಶ ಮತ್ತು ಜಗತ್ತು ಎದುರಿಸುತ್ತಿರುವ ನೈತಿಕ, ರಾಜಕೀಯ ಮತ್ತು ಪರಿಸರದ ಸವಾಲುಗಳ ಬಗ್ಗೆ ಮತ್ತು ಅದಕ್ಕಾಗಿ ಏನು ಮಾಡಬಹುದು ಎನ್ನುವುದರ ಬಗ್ಗೆ ತಾಜಾ ಒಳನೋಟಗಳನ್ನು ನೀಡಿದೆ.

ಕೆಲ ವರ್ಷಗಳ ಹಿಂದೆ ಚಂಡಿ ಪ್ರಸಾದ್ ಭಟ್ ತಮ್ಮ ಆತ್ಮಕಥೆಯನ್ನು ಹಿಂದಿಯಲ್ಲಿ ಪ್ರಕಟಿಸಿದ್ದರು. ಅದನ್ನು ಈಗ ಸಮೀರ್ ಬ್ಯಾನರ್ಜಿ ಅವರು ಉeಟಿಣಟe ಖesisಣಚಿಟಿಛಿe ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಭಾರತ ಇನ್ನೂ ಬ್ರಿಟಿಷರ ವಸಾಹತುವಾಗಿದ್ದ ಕಾಲದಲ್ಲಿ, 1934ರಲ್ಲಿ ಜನಿಸಿದವರು ಭಟ್. ಆರಂಭಿಕ ಅಧ್ಯಾಯಗಳಲ್ಲಿ ಅವರ ಬಾಲ್ಯದ ಎದ್ದುಕಾಣುವ ನೆನಪುಗಳಿವೆ. ಜೊತೆಗೆ ಅವರು ತುಂಬಾ ಹಚ್ಚಿಕೊಂಡಿದ್ದ ಅವರ ಹಿರಿಯ ಸಹೋದರಿ, ಅವರ ಶಿಕ್ಷಕರು, ಗ್ರಾಮದ ಹಿರಿಯರು ಮತ್ತು ಕಾರ್ಮಿಕ ವರ್ಗದ ಕೆಳಜಾತಿಗಳ ವ್ಯಕ್ತಿಗಳ ಚಿತ್ರಗಳು ಬರುತ್ತವೆ. ಈ ಪುಟಗಳಲ್ಲಿ ಮಧ್ಯ ಹಿಮಾಲಯದ ವಿವರಗಳು, ಅದರ ಬೆಟ್ಟಗಳು, ಕಾಡುಗಳು, ಹೊಲಗಳು ಮತ್ತು ನದಿಗಳ ಕಣ್ಣಿಗೆ ಕಟ್ಟುವಂಥ ಚಿತ್ರಗಳಿವೆ. ‘‘ಅಲಕನಂದಾದ ನೀರ ಹರಿವೆಂದರೆ ನನಗೆ ಇಷ್ಟವಾಗುತ್ತಿತ್ತು. ನದಿಯ ಲಯಬದ್ಧ ಹರಿವಿನಿಂದ ಸಾಕಷ್ಟು ಭಾವನಾತ್ಮಕವಾಗಿ ಸ್ಫೂರ್ತಿ ಪಡೆದಿದ್ದೆ’’ ಎಂದು ಅವರು ಬರೆಯುತ್ತಾರೆ.

ಬ್ರಾಹ್ಮಣರಾಗಿ ಯುವಕ ಚಂಡಿ ಪ್ರಸಾದ್ ಉನ್ನತ ಸಾಮಾಜಿಕ ಸ್ಥಾನಮಾನವನ್ನು ಅನುಭವಿಸಿದ್ದರು. ಆದಾಗ್ಯೂ, ಅದು ಶ್ರೀಮಂತಿಕೆಯಿಂದ ಬಂದಿದ್ದಾಗಿರಲಿಲ್ಲ. ತಂದೆ ತೀರಿಕೊಂಡಿದ್ದರು. ಕುಟುಂಬ ನಿರ್ಗತಿಕ ಸ್ಥಿತಿಯಲ್ಲಿರದಿದ್ದರೂ ಬಡತನವಿತ್ತು. ನನ್ನ ಬಾಲ್ಯದುದ್ದಕ್ಕೂ ನಾವು ನಿರಂತರವಾಗಿ ಕೆಟ್ಟ ಆರ್ಥಿಕ ಸ್ಥಿತಿಯಲ್ಲಿಯೇ ಬದುಕಿದೆವು. ಯಾವುದೂ ಸಮೃದ್ಧವಾಗಿರಲಿಲ್ಲ, ಸಾಕಷ್ಟು ಹಣವಿರಲಿಲ್ಲ. ನಮಗೆ ಅಗತ್ಯವಿದ್ದ ಪ್ರತಿಯೊಂದರಲ್ಲೂ ಕೊರತೆಯಿತ್ತು ಎಂದು ಅವರು ಬರೆಯುತ್ತಾರೆ. ಹದಿಹರೆಯದ ಅವರು ತಮ್ಮ ಭೂಮಿಯನ್ನು ಉಳುಮೆ ಮಾಡಬೇಕಾಗಿತ್ತು ಮತ್ತು ಒಲೆ ಉರಿಯುವಂತೆ ನೋಡಿಕೊಳ್ಳಲು ದನಗಳನ್ನು ಮೇಯಿಸಬೇಕಿತ್ತು.

ಚಂಡಿ ಪ್ರಸಾದ್ ತಾವು ಸಾಧಾರಣ ವಿದ್ಯಾರ್ಥಿಯಾಗಿದ್ದುದರ ಬಗ್ಗೆ, ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕಷ್ಟಪಡುತ್ತಿದ್ದ ಬಗ್ಗೆ ಮತ್ತು ಯಶಸ್ವಿಯಾಗಿ ಮೆಟ್ರಿಕ್ಯುಲೇಟ್ ಮುಗಿಸುವ ಮೊದಲು ಶಾಲೆಯಿಂದ ಶಾಲೆಗೆ ಬದಲಾಗಿದ್ದುದರ ಬಗ್ಗೆ ಪ್ರಾಮಾಣಿಕವಾಗಿ ಮತ್ತು ಬಲು ಸ್ಫುಟವಾಗಿ ವಿವರಿಸುತ್ತಾರೆ. ವಿಶ್ವವಿದ್ಯಾನಿಲಯದ ಶಿಕ್ಷಣ ಸಾಧ್ಯವೇ ಇರಲಿಲ್ಲ. ಅದೃಷ್ಟಕ್ಕೆ ಸ್ಥಳೀಯ ಬಸ್ ಕಂಪೆನಿಯಲ್ಲಿ ಬುಕ್ಕಿಂಗ್ ಕ್ಲರ್ಕ್ ಆಗಿ ಸಾಧಾರಣ ಮಾಸಿಕ ಸಂಬಳದ ಕೆಲಸ ಸಿಕ್ಕಿತ್ತು. ಬಸ್ಸುಗಳು ಯಾತ್ರಾರ್ಥಿಗಳನ್ನು ಹಿಮಾಲಯದ ಪವಿತ್ರ ಕ್ಷೇತ್ರಗಳಿಗೆ ಕರೆದೊಯ್ಯುತ್ತಿದ್ದವು. ಅವರ ಕೆಲಸದ ಕಾರಣದಿಂದಾಗಿ ದೇಶದ ವಿವಿಧ ಭಾಗಗಳ ಭಾರತೀಯರನ್ನು ಭೇಟಿಯಾಗುವುದು ಸಾಧ್ಯವಾಗಿ, ಅವರ ಸಾಂಸ್ಕೃತಿಕ ಮತ್ತು ಭೌಗೋಳಿಕ ತಿಳಿವನ್ನು ವಿಸ್ತರಿಸಿತು. ಇಪ್ಪತ್ತೆರಡು ವರ್ಷದವರಾಗಿದ್ದಾಗ ಭಟ್ ಮೊದಲ ಮೋಟಾರು ಕಾರುಗಳನ್ನು ನೋಡಿದರು. ಅವು ಶ್ರೀಮಂತ ಬಿರ್ಲಾ ದೇಗುಲಕ್ಕೆ ಸಂಬಂಧಪಟ್ಟವರನ್ನು ಬದರಿನಾಥಕ್ಕೆ ಸಾಗಿಸುತ್ತಿದ್ದವು. ‘‘ನಿಜವಾದ ಬಿರ್ಲಾರನ್ನು ನಾನು ನೋಡಲೇ ಇಲ್ಲ. ಆದರೆ ಅವರ ಚಾಲಕರ ಉತ್ತಮ ಮಟ್ಟದ ಉಡುಪುಗಳಿಂದಾಗಿ ಅವರ ಉನ್ನತ ಸ್ಥಾನಮಾನದ ಬಗ್ಗೆ ನನಗೆ ಸಾಕಷ್ಟು ಕಲ್ಪನೆ ದೊರಕಿತ್ತು’’ ಎಂದು ಅವರು ಹೇಳುತ್ತಾರೆ.

1956ರಲ್ಲಿ ಭಟ್ ಅವರು ನೆಲೆಸಿದ್ದ ಗರ್ವಾಲ್ ಪ್ರದೇಶಕ್ಕೆ ಗಾಂಧಿವಾದಿ ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ ನಾರಾಯಣ ಭೇಟಿ ನೀಡಿದ್ದರು. ಅವರ ಮಾತನ್ನು ಕೇಳಲು ಭಟ್ ಹೋಗಿದ್ದರು. ಅರವತ್ತು ವರ್ಷಗಳ ನಂತರ ಅವರು ನೆನಪಿಸಿಕೊಂಡಂತೆ, ಜೆಪಿ ಅವರ ಮಾತುಗಳು ಅವರ ಆತ್ಮಸಾಕ್ಷಿಯನ್ನು ಮುಟ್ಟಿದ್ದವು. ನಂತರ ಭಟ್ ಸ್ಥಳೀಯ ಸರ್ವೋದಯ ಕಾರ್ಯಕರ್ತ ಮಾನ್ ಸಿಂಗ್ ರಾವತ್ ಅವರನ್ನು ಭೇಟಿಯಾದರು. ಅವರೊಂದಿಗೆ ಬೆಟ್ಟಗಳುದ್ದಕ್ಕೂ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಜೆಪಿ ಮಾತುಗಳು ಮತ್ತು ಮಾನ್ ಸಿಂಗ್ ಅವರ ಆದರ್ಶ ಭಟ್ ಗರ್ವಾಲ್ ಮೋಟಾರು ಮಾಲಕರ ಒಕ್ಕೂಟದ ಉದ್ಯೋಗವನ್ನು ಬಿಟ್ಟು ಸಾಮಾಜಿಕ ಕಾರ್ಯಗಳಿಗೆ ತನ್ನನ್ನು ಪೂರ್ತಿಯಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಿತು.

1960ರ ದಶಕದಲ್ಲಿ, ಭಟ್ ಅವರು ಕಾರ್ಮಿಕ ಸಹಕಾರ ಸಂಘಗಳು ಮತ್ತು ಮಹಿಳಾ ಮಂಗಲ್ ದಳಗಳನ್ನು (ಮಹಿಳಾ ಕಲ್ಯಾಣ ಸಂಘಗಳು) ರೂಪಿಸುವಲ್ಲಿ ಕೆಲಸ ಮಾಡಿದರು. ಅವರು ಜಾತಿ ತಾರತಮ್ಯವನ್ನು ಎದುರಿಸಲು ಸೌಮ್ಯವಾಗಿಯೇ ಪ್ರಯತ್ನಿಸಿದರು. ಪ್ರವಾಹಗಳು, ಬಸ್ ಅಪಘಾತಗಳು ಇತ್ಯಾದಿಗಳ ಸಂತ್ರಸ್ತರನ್ನು ರಕ್ಷಿಸಿದರು. 1960ರ ದಶಕದ ಕೊನೆಯ ವೇಳೆಗೆ ಅವರು ಗರ್ವಾಲ್‌ನಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಗಣನೀಯ ಸ್ಥಾನಮಾನವನ್ನು ಗಳಿಸಿದ್ದರು.

ಏತನ್ಮಧ್ಯೆ, ಭಟ್ ಅವರು ಬೆಟ್ಟಗಳಲ್ಲಿ ವಾಣಿಜ್ಯ ಅರಣ್ಯದ ನಾಶವನ್ನು ಬಲು ಹತ್ತಿರದಿಂದ ಅಧ್ಯಯನ ಮಾಡಲು ಪ್ರಾರಂಭಿಸಿದ್ದರು. ನೈಸರ್ಗಿಕ ಕಾಡುಗಳನ್ನು ಕಡಿಯುವ ಮೂಲಕ ಪ್ರಕೃತಿಯ ಮತ್ತು ಮಾನವರ ಶೋಷಣೆಯಾಗುತ್ತಿರುವ ಬಗ್ಗೆ ಅವರು ತುಸು ಭಾವುಕತೆಯಿಂದಲೇ ಬರೆಯುತ್ತಾರೆ. ಕಾರ್ಮಿಕರಿಗೆ ಅತ್ಯಲ್ಪ ಮೊತ್ತದ ಕೂಲಿ ಸಿಗುವಾಗ ದೊಡ್ಡ ಲಾಭ ಕಾರ್ಖಾನೆಗಳಿಗೆ ಮರವನ್ನು ಮಾರುವ ಗುತ್ತಿಗೆದಾರನಿಗೆ ಹೋಗುತ್ತದೆ ಎಂಬುದನ್ನು ಅವರು ಗಮನಿಸುತ್ತಾರೆ. ವಿನಾಶವನ್ನು ನೋಡುತ್ತಾ, ಈ ಶೋಷಣೆಯ ಗೀಳನ್ನು ನಿಲ್ಲಿಸುವುದು ಸಾಧ್ಯವೇ ಎಂದು ಭಟ್ಟರು ತಮ್ಮನ್ನು ತಾವು ಕೇಳಿಕೊಳ್ಳುತ್ತಾರೆ. ಗುಡ್ಡಗಾಡು ಜನರು ತಮ್ಮ ಸ್ವಂತ ಜೀವನ ಮತ್ತು ಉಳಿವಿಗೆ ತುಂಬಾ ನಿರ್ಣಾಯಕವಾಗಿರುವ ಈ ಕಾಡುಗಳ ಮೇಲೆ ಮತ್ತೆ ನಿಯಂತ್ರಣ ಪಡೆಯುವುದು ಸಾಧ್ಯವಾದರೆ ಮಾತ್ರವೇ ಅದು ಸಾಧ್ಯ ಎಂದು ಅವರು ಯೋಚಿಸುತ್ತಾರೆ.

1973ರಲ್ಲಿ ವಾಣಿಜ್ಯ ಅರಣ್ಯದ ವಿರುದ್ಧ ಗ್ರಾಮಸ್ಥರು ನಡೆಸಿದ ಮೊದಲ ಪ್ರತಿಭಟನೆಗಳನ್ನು ಸಂಘಟಿಸುವಲ್ಲಿ ಮತ್ತು ಮುನ್ನಡೆಸುವಲ್ಲಿ ಭಟ್ ಪ್ರಮುಖ ಪಾತ್ರ ವಹಿಸಿದ್ದರು. ಅದನ್ನು ‘ಚಿಪ್ಕೋ ಚಳವಳಿ’ ಎಂದು ಕರೆಯಲಾಗುತ್ತದೆ. ಚಿಪ್ಕೋ ಬಗ್ಗೆ ಹತ್ತಾರು ಪುಸ್ತಕಗಳು ಮತ್ತು ವಿದ್ವತ್ಪೂರ್ಣ ಲೇಖನಗಳು ಪ್ರಕಟವಾಗಿವೆ. ನನ್ನ ಡಾಕ್ಟರೇಟ್ ಪ್ರಬಂಧ ಆ ಚಳವಳಿ ಮತ್ತದರ ಐತಿಹಾಸಿಕ ಮೂಲಗಳಿಗೆ ಸಂಬಂಧಿಸಿದ್ದಾಗಿದೆ. ಭಟ್ ಅವರ ಆತ್ಮಚರಿತ್ರೆಯು ವಿಭಿನ್ನ ಮತ್ತು ವಿಶಿಷ್ಟವಾಗಿದೆ ಎಂಬುದನ್ನು ಸಮೀರ್ ಬ್ಯಾನರ್ಜಿ ಅವರು ತಮ್ಮ ‘ಅನುವಾದಕರ ಟಿಪ್ಪಣಿ’ಯಲ್ಲಿ ವಿವರಿಸಿದ್ದಾರೆ. ಶೈಕ್ಷಣಿಕ ನಿರೂಪಣೆಯ ಸ್ವರೂಪ ತಳಮಟ್ಟದ ಕ್ರಿಯಾಶೀಲತೆಯಲ್ಲಿ ಅಡಗಿರುವ ತೊಂದರೆಗಳು, ಭರವಸೆಗಳು ಮತ್ತು ಭಾವನೆಗಳನ್ನು ಬಹಿರಂಗಪಡಿಸಲು ಅಪರೂಪವಾಗಿ ಅನುಕೂಲಕರವಾಗಿದೆ. ಹೋರಾಟಗಾರನ ಜೀವನದಲ್ಲಿ ಭಾವನೆಯ ಪ್ರಪಂಚ ಹೆಚ್ಚಾಗಿ ಪದಗಳು, ವಾಕ್ಯಗಳು, ಭಾಷೆಗಳು ಮತ್ತು ಇಸಂಗಳ ಬ್ರಹ್ಮಾಂಡದೊಳಗೆ ಕಳೆದುಹೋಗಿದೆ. ಅದು ಮಣ್ಣಿನ ಮತ್ತು ಹೆಚ್ಚು ನೇರವಾದ ವಾಸ್ತವಗಳಿಗೆ ಹೊರತಾಗಿರುವ ವಿವರಣಾತ್ಮಕ ಮತ್ತು ವಿಶ್ಲೇಷಣಾತ್ಮಕ ಚೌಕಟ್ಟುಗಳನ್ನು ಪಡೆದಿದೆ ಎಂದು ಬ್ಯಾನರ್ಜಿ ಗುರುತಿಸಿದ್ದಾರೆ.

ಬ್ಯಾನರ್ಜಿಯವರ ಮಾತುಗಳಲ್ಲಿನ ಸತ್ಯವನ್ನು ಇತರ ವಿಷಯಗಳ ಜೊತೆಗೇ, ಚಿಪ್ಕೋ ಚಳವಳಿಯಲ್ಲಿ ಲಕ್ನೊದಲ್ಲಿನ ಹಿರಿಯ ಅಧಿಕಾರಿಯೊಬ್ಬರ ಜೊತೆಗಿನ ಭಟ್ ಅವರ ಮುಖಾಮುಖಿಯ ಮೂಲಕ ವಿವರಿಸಲಾಗಿದೆ. ಅವರು ಅರಣ್ಯಗಳ ನಿಯಂತ್ರಣವನ್ನು ಸರಕಾರಕ್ಕಿಂತ ಹೆಚ್ಚಾಗಿ ಸಮುದಾಯಗಳು ತೆಗೆದುಕೊಳ್ಳಬೇಕೆಂಬುದನ್ನು ಗಮನಕ್ಕೆ ತರುವುದಕ್ಕಾಗಿ ಆ ಅಧಿಕಾರಿಯ ಬಳಿ ಹೋಗಿದ್ದರು. ಅಧಿಕಾರಶಾಹಿ ಜೊತೆಗಿನ ಆ ಮುಖಾಮುಖಿಯನ್ನು ಅವರು ಹೇಗೆ ವಿವರಿಸಿದ್ದಾರೆಂಬುದು ಇಲ್ಲಿದೆ: ‘‘ನಾನು ಅವರಿಗೆ ವಂದನೆ ಹೇಳಿದೆ. ಆದರೆ ಅವರು ಪ್ರತಿಕ್ರಿಯಿಸಲಿಲ್ಲ. ಹಲವಾರು ಬಾರಿ ನಮಸ್ಕಾರ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಾರದ ನಂತರ ನಾನು ಅವರ ಎದುರಿನ ಕುರ್ಚಿಯಲ್ಲಿ ಹಿಂಜರಿಯುತ್ತಾ ಕುಳಿತೆ. ಸ್ವಲ್ಪ ಸಮಯದ ನಂತರ ಅವರು ದಪ್ಪ ಮಣ್ಣಿನ ಬಣ್ಣದ ಸಿಗರೇಟನ್ನು ಹೊತ್ತಿಸಿದರು. ಅದು ದೊಡ್ಡ ಜನರು ಹೆಚ್ಚು ಇಷ್ಟಪಡುವ ಸಿಗರೇಟೆಂದು ನಂತರ ಯಾರೋ ನನಗೆ ಹೇಳಿದರು. ಹೊಗೆ ಬಿಡುತ್ತಾ ನನ್ನತ್ತ ತಿರುಗಿ, ಇದೆಲ್ಲ ಏನು ಮಾಡುತ್ತಿದ್ದೀರಿ? ಎಂದು ಕೇಳಿದರು. ಕಣ್ಣು ಕೋರೈಸುತ್ತಾ ಉಬ್ಬಿಕೊಳ್ಳುತ್ತಾ ನನ್ನತ್ತ ಹೊಗೆ ಬಿಡುತ್ತಲೇ ಇದ್ದರು. ನಾನು ಅವರಿಗೆ ನಮ್ಮ ದೃಷ್ಟಿಕೋನವನ್ನು ತಿಳಿಸಲು ಪ್ರಯತ್ನಿಸಿದೆ. ಆದರೆ ಅವರಿಗೆ ಆಸಕ್ತಿ ಇರಲಿಲ್ಲ. ಅವರ ದೃಷ್ಟಿಕೋನ ಅಧಿಕಾರಶಾಹಿಗಳ ಸಾಮಾನ್ಯ ರೀತಿಗೆ ಅನುಗುಣವಾಗಿದ್ದಂತೆ ಇತ್ತು. ಗುಡ್ಡಗಾಡು ರೈತರ ಬಗ್ಗೆ ತಿರಸ್ಕಾರವಿತ್ತು. ಅವರ ಸಣ್ಣ ಸಮೂಹಗಳು ದೊಡ್ಡ ಸ್ವರೂಪದ ರಾಜಕೀಯದ ಮುಂದೆ ದುರ್ಬಲವಾಗಿದ್ದವು.’’

ಈ ಚಿತ್ರವನ್ನು ಭಟ್ ಅವರು ನೀಡುವ, ಅಷ್ಟೇ ಎದ್ದುಕಾಣುವ ಆದರೆ ಹೆಚ್ಚು ಸಹಾನುಭೂತಿಯುಳ್ಳ ಇನ್ನೊಂದು ವಿವರದೊಂದಿಗೆ ಇಟ್ಟು ನೋಡಬೇಕು. ಇದು ನಾನು ಬರೆದಂತೆ ಸರಿಯಾಗಿ ಐವತ್ತು ವರ್ಷಗಳ ಹಿಂದೆ ಮಾರ್ಚ್ 1974ರಲ್ಲಿ ರೆನಿ ಗ್ರಾಮದಲ್ಲಿ ನಡೆದ ಚಿಪ್ಕೋ ಪ್ರತಿಭಟನೆಯ ನಾಯಕಿ ಗೌರಾ ದೇವಿಗೆ ಸಂಬಂಧಿಸಿದ್ದು. ಆಕೆ ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ಮೊದಲೇ ವಿಧವೆ. ತನ್ನ ಸಣ್ಣ ಜಮೀನನ್ನು ಉಳುಮೆ ಮಾಡುತ್ತಾ ಅನಿಶ್ಚಿತ ಜೀವನ ನಡೆಸುತ್ತಿದ್ದರು. ಅದೇನೇ ಇದ್ದರೂ, 1965ರಲ್ಲಿ ತನ್ನ ಹಳ್ಳಿಯಲ್ಲಿ ಮಹಿಳಾ ಮಂಗಲ್ ದಳವನ್ನು ಪ್ರಾರಂಭಿಸಲು ನಿಂತರು. ಒಂಭತ್ತು ವರ್ಷಗಳ ನಂತರ ಹಿಮಾಲಯದ ಇತಿಹಾಸದಲ್ಲಿ ಎಲ್ಲಾ ಚಿಪ್ಕೋ ಪ್ರತಿಭಟನೆಗಳಲ್ಲೇ ಬಹುಶಃ ಅತ್ಯಂತ ಮಾದರಿಯಾದ ಹೋರಾಟಕ್ಕೆ ಕಾರಣರಾಗಿದ್ದರು.

1991ರಲ್ಲಿ ಗೌರಾ ದೇವಿ ನಿಧನರಾದರು. ಅಸಮಾನತೆ ಮತ್ತು ದಬ್ಬಾಳಿಕೆಯ ವಿರುದ್ಧದ ಹೋರಾಟದಲ್ಲಿ ನಮಗೆ ಮಾರ್ಗದರ್ಶನ ನೀಡಲು ತಮ್ಮ ಸೌಮ್ಯವಾದ ಪ್ರತಿರೋಧದ ಉಜ್ವಲ ಮತ್ತು ಸ್ಫೂರ್ತಿದಾಯಕ ಶಕ್ತಿಯನ್ನು ಬಿಟ್ಟುಹೋಗಿದ್ದರು. ದಬ್ಬಾಳಿಕೆಯ ವಿರುದ್ಧ ಹೋರಾಡಲು ಅವರಿಗಿದ್ದ ಪ್ರೇರಣೆ, ಆಕೆ ಹಾಗೂ ತಲೆಮಾರುಗಳಿಂದ ಬಡತನ ಮತ್ತು ವೈಯಕ್ತಿಕ ದುರಂತವನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದ ಆಕೆಯ ಸಹವರ್ತಿ ಮಹಿಳೆಯರು ದಾಟಿ ಬಂದಿದ್ದ ಅವರ ಜೀವನದ ಅಗ್ನಿಪರೀಕ್ಷೆಗಳಾಗಿದ್ದವು ಎಂದು ಭಟ್ ಬರೆಯುತ್ತಾರೆ. ಆಕೆಯ ದೃಢವಾದ ಸ್ಥೈರ್ಯ ಆಳವಾದ ಸಹಾನುಭೂತಿಯೊಂದಿಗೆ ಬೆಸೆದಿರುವುದಾಗಿದೆ. ಆದ್ದರಿಂದ ಆಕೆಯನ್ನು ಸ್ಮರಿಸುತ್ತಿರುವ ಅವರು ಗಮನಿಸಿದಂತೆ, ಆಕೆಯನ್ನು ಚಳವಳಿಗಿಳಿಸಿದ ಆಕೆಯೊಳಗಿನ ಸಹಾನುಭೂತಿಯನ್ನು ಮರೆಯಲು ಸಾಧ್ಯವಿಲ್ಲ. ಆಕೆ ಮತ್ತು ಆಕೆಯ ಜೊತೆಗಾರ್ತಿಯರು ರೆನಿ ಬಳಿ ಮರಗಳನ್ನು ಕಡಿಯುವುದನ್ನು ತಡೆದ ನಂತರ, ಕಾಡುಗಳ್ಳರ ದಡ್ಡ ವರ್ತನೆಯ ಹೊರತಾಗಿಯೂ ಅವರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳದಂತೆ ಅವರ ಬಗ್ಗೆ ಅಧಿಕಾರಿಗಳ ಬಳಿ ಕೆಟ್ಟದಾಗಿ ಏನನ್ನೂ ನಾನು ಹೇಳದಿರುವಂತೆ ಆಕೆ ಹೇಳಿದ್ದರು ಎಂದು ಭಟ್ ನೆನೆದಿದ್ದಾರೆ.

ಪುಸ್ತಕದಲ್ಲಿ ಮತ್ತೊಂದೆಡೆ, ಭಟ್ ಅವರು ಚಳವಳಿಗೆ ಈ ವ್ಯಾಖ್ಯಾನವನ್ನು ನೀಡುತ್ತಾರೆ: ‘ಚಿಪ್ಕೋ ಆಂದೋಲನ’ವು ತಮ್ಮ ಕಾಡುಗಳ ಬಗ್ಗೆ ಗುಡ್ಡಗಾಡಿನ ಹಳ್ಳಿಗರಲ್ಲಿ ಸುಪ್ತ ಸಹಾನುಭೂತಿಯನ್ನು ಜಾಗೃತಗೊಳಿಸುವ ಒಂದು ಮಾರ್ಗವಾಗಿದೆ ಮತ್ತು ಆಂತರಿಕ ಭಾವನೆಯನ್ನು ಒಂದು ರೀತಿಯಲ್ಲಿ ಸಾಮಾಜಿಕ ಬದ್ಧತೆಯಾಗಿ ಪರಿವರ್ತಿಸುತ್ತದೆ. ಈ ಬದ್ಧತೆ ಕೇವಲ ಅರಣ್ಯ ನಾಶದ ವಿರುದ್ಧ ಪ್ರತಿಭಟಿಸುವುದಲ್ಲದೆ, ಅರಣ್ಯ ಮರುಸ್ಥಾಪನೆಯಲ್ಲಿ ಮುಂದಾಳತ್ವ ವಹಿಸುವಲ್ಲಿಯೂ ವ್ಯಕ್ತವಾಗಿದೆ. ಭಟ್ ಅವರ ನಾಯಕತ್ವದಲ್ಲಿ ಚಿಪ್ಕೋ ಕಾರ್ಯಕರ್ತರು ಗರ್ವಾಲ್‌ನಲ್ಲಿನ ಅನೇಕ ಬಂಜರು ಬೆಟ್ಟಗಳನ್ನು ಪುನರುಜ್ಜೀವನಗೊಳಿಸಲು ಗ್ರಾಮಸ್ಥರೊಂದಿಗೆ ಕೆಲಸ ಮಾಡಿದರು. ಸ್ಥಳೀಯ ಪರಿಸರ ವಿಜ್ಞಾನದ ಮೇಲೆ ಪ್ರಯೋಜನಕಾರಿ ಪರಿಣಾಮಗಳನ್ನು ಬೀರಿದರು.

 ಭಟ್ ಅವರು ಮುಖ್ಯವಾಗಿ ತಳಮಟ್ಟದ ಸಂಘಟಕರಾಗಿದ್ದರೂ, ವಿಶೇಷವಾಗಿ ಸುಸ್ಥಿರ ಆರ್ಥಿಕ ರೂಢಿಗಳಿಗೆ ಸಂಬಂಧಿಸಿದಂತೆ ಒಳನೋಟವುಳ್ಳ ಚಿಂತಕರಾಗಿ ದ್ದಾರೆ. 1976ರಲ್ಲಿಯೇ ಅವರು ಜೋಶಿಮಠ ಪಟ್ಟಣದಲ್ಲಿ ಅಜಾಗರೂಕ ರಸ್ತೆಗಳು ಮತ್ತು ಕಟ್ಟಡಗಳ ನಿರ್ಮಾಣವು ಭೂಕುಸಿತಕ್ಕೆ ಕಾರಣವಾಗಲಿರುವ ಬಗ್ಗೆ ಎಚ್ಚರಿಸಿದ್ದರು. 1980ರ ದಶಕದಲ್ಲಿ ಅವರು ಹಿಮಾಲಯಕ್ಕೆ ಏಕೆ ದೊಡ್ಡ ಅಣೆಕಟ್ಟುಗಳು ಸೂಕ್ತವಲ್ಲ ಎಂಬುದನ್ನು ವಿವರಿಸುವ ಹಲವಾರು ಮಹತ್ವದ ಪ್ರಬಂಧಗಳನ್ನು ಬರೆದಿದ್ದರು. ಈಗಾಗಲೇ ದುರ್ಬಲವಾಗಿರುವ ಪರ್ವತಗಳು ಕ್ರಮೇಣ ಹೆಚ್ಚು ದುರ್ಬಲವಾಗಲಿವೆ ಎಂದು ಅವರು ಬರೆದಿದ್ದರು. ಇದು ಮಾನವೀಯತೆಯು ಈಗ ಅವರು ವಾಸಿಸುವ ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳಿಂದ ದೂರವಾಗಿರುವುದರ ಪರಿಣಾಮವಾಗಿದೆ. ವಾಣಿಜ್ಯ ಹಿತಾಸಕ್ತಿಗಳು ಎಲ್ಲವನ್ನೂ ಸ್ವಾಧೀನಪಡಿಸಿಕೊಂಡಿವೆ. ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಮತ್ತು ಹೊಂದಾಣಿಕೆಯ ಪ್ರಕ್ರಿಯೆಗಳು ಜನರನ್ನು ವಾಣಿಜ್ಯದೊಡನೆ ಕೈಜೋಡಿಸಲು ಉತ್ತೇಜಿಸಿವೆ ಎಂದಿದ್ದರು.

ಚಂಡಿ ಪ್ರಸಾದ್ ಭಟ್ ಅವರ ಆತ್ಮಚರಿತ್ರೆ ಬಹಳ ಮುಖ್ಯವಾದ ಪುಸ್ತಕವಾಗಿದೆ. ಅವರ ಸ್ವಂತ ಅನುಭವಗಳ ನಿರೂಪಣೆಯು ಸಾಮಾಜಿಕ ಮತ್ತು ಪರಿಸರ ಇತಿಹಾಸದ ಜೊತೆಗೆ ಗಾಂಧಿಯವರ ನಂತರದ ಗಾಂಧಿವಾದದ ಇತಿಹಾಸದ ಬಗ್ಗೆ ಶ್ರೀಮಂತ ಒಳನೋಟಗಳನ್ನು ಒದಗಿಸುತ್ತದೆ. ಪುಸ್ತಕವು ಕೆಲವು ಸಾಹಿತ್ಯಿಕ ಮೌಲ್ಯದ ದಾಖಲೆಯಾಗಿದೆ. ವ್ಯಾಪಕ ಓದುಗರನ್ನು ಪಡೆಯಲು ಅರ್ಹವಾಗಿರುವ ಕೃತಿ ಇದೆಂದು ನಾನು ನಂಬುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಮಚಂದ್ರ ಗುಹಾ

contributor

Similar News