ನೈತಿಕವಾಗಿ ಅನುಮಾನಾಸ್ಪದವಾಗಿರುವ ಈ ರಾಜಕೀಯ ನಡೆ ಕಾಂಗ್ರೆಸ್‌ಗೆ ಬೇಕಿತ್ತೇ?

ಹಿಂದುತ್ವದ ವಿಧಾನಗಳನ್ನು ಅನುಕರಿಸುವ ಕರ್ನಾಟಕ ಕಾಂಗ್ರೆಸ್‌ನ ಈ ಪ್ರಯತ್ನಗಳು ನೈತಿಕವಾಗಿ ಅನುಮಾನಾಸ್ಪದವಾಗಿವೆ. ಅದರಿಂದ ರಾಜಕೀಯವಾಗಿ ಲಾಭದಾಯಕವಾಗುವ ಸಾಧ್ಯತೆಯೂ ಇಲ್ಲ. ಛತ್ತೀಸ್‌ಗಡ ಮತ್ತು ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಭೂಪೇಶ್ ಬಘೇಲ್ ಮತ್ತು ಕಮಲ್‌ನಾಥ್ ಅವರು ತಮ್ಮ ಹಿಂದೂ ನಂಬಿಕೆಗಳನ್ನು, ತಾವು ರಾಮ ಮತ್ತು ಹನುಮಂತನ ಆರಾಧಕರೆಂಬುದನ್ನು ಪದೇ ಪದೇ ಬಿಂಬಿಸಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ಆ ವಿಧಾನಸಭಾ ಚುನಾವಣೆಯ ಫಲಿತಾಂಶಗಳೇ ತೋರಿಸಿರುವಂತೆ, ಅದು ಬಿಜೆಪಿಯನ್ನು ಸೋಲಿಸಬಲ್ಲ ಆಟವಾಗುವುದಂತೂ ಸಾಧ್ಯವಿಲ್ಲ.

Update: 2024-02-10 05:27 GMT

ಕರ್ನಾಟಕದಲ್ಲಿ ಕಳೆದ ವಿಧಾನಸಭೆ ಚುನಾವಣೆ ನಡೆದದ್ದು 2023ರ ಮೇನಲ್ಲಿ. ಚುನಾವಣೆಗೆ ಹಲವಾರು ತಿಂಗಳುಗಳ ಮೊದಲು, ಸ್ಥಳೀಯ ಪತ್ರಿಕೆಗಳಲ್ಲಿ ನಾಲ್ಕು ವಿಷಯಗಳು ಪ್ರಧಾನವಾಗಿರುತ್ತಿದ್ದವು. ಮೊದಲನೆಯದು, ಕಾಲೇಜು ಓದುವ ಮುಸ್ಲಿಮ್ ಹುಡುಗಿಯರು ಧರಿಸುತ್ತಿದ್ದ ಶಿರವಸ್ತ್ರ. ಎರಡನೆಯದು, ಮುಸ್ಲಿಮರಲ್ಲಿ ರೂಢಿಯಲ್ಲಿರುವ ಹಲಾಲ್ ವಿಧಾನ. ಮೂರನೆಯದು, ವಯಸ್ಕ ಮುಸ್ಲಿಮ್ ಪುರುಷ ಮತ್ತು ವಯಸ್ಕ ಹಿಂದೂ ಹುಡುಗಿ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಲು ಬಯಸುವ ಘಟನೆ. ನಾಲ್ಕನೆಯದು, ಒಂದು ಕಾಲದಲ್ಲಿ ಈಗಿನ ಕರ್ನಾಟಕ ರಾಜ್ಯದ ಭಾಗವನ್ನು ಆಳಿದ್ದ ಮತ್ತು ಇನ್ನೂರು ವರ್ಷಗಳ ಹಿಂದೆ ಬ್ರಿಟಿಷ್ ಸಾಮ್ರಾಜ್ಯಶಾಹಿಗಳೊಂದಿಗೆ ಹೋರಾಡುತ್ತಿರುವಾಗ ಕೊಲ್ಲಲ್ಪಟ್ಟ ದೊರೆಯ ಕುರಿತ ಚರಿತ್ರೆ.

ಹಿಜಾಬ್, ಹಲಾಲ್, ‘ಲವ್ ಜಿಹಾದ್’ ಮತ್ತು ಟಿಪ್ಪು ಸುಲ್ತಾನ್ -ಇವು ಕರ್ನಾಟಕದಲ್ಲಿ ಮತದಾರರನ್ನು ಸೆಳೆಯಲು ಬಳಕೆಯಾಗುತ್ತಿದ್ದ ವಿಷಯಗಳಾಗಿದ್ದವು. 6 ಕೋಟಿ ಜನರಿರುವ, ನಾನು ನೆಲೆಸಿರುವ ಈ ರಾಜ್ಯದಲ್ಲಿ ನಿಜವಾಗಿಯೂ ಹೆಚ್ಚು ಪ್ರಾಮುಖ್ಯತೆ ನೀಡಬೇಕಿರುವ ವಿಷಯಗಳೆಂದು ಯಾರೇ ಆದರೂ ಭಾವಿಸಬಹುದಾದ ಉದ್ಯೋಗ, ಬೆಲೆ ಏರಿಕೆ, ಶಾಲೆಗಳು ಮತ್ತು ಆಸ್ಪತ್ರೆಗಳ ಸ್ಥಿತಿ, ಹವಾಮಾನ, ನೀರಿನ ವ್ಯವಸ್ಥೆ, ರಸ್ತೆಗಳ ಸ್ಥಿತಿ ಅಥವಾ ಅಂತಹ ಇತರ ಸಮಸ್ಯೆಗಳು ಲೆಕ್ಕಕ್ಕೇ ಇರಲಿಲ್ಲ.

ಇದಕ್ಕೆ ಕಾರಣ ಪೂರ್ತಿಯಾಗಿ ರಾಜಕೀಯವಾಗಿತ್ತು. ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಜನಪ್ರಿಯತೆ ಕಳೆದುಕೊಂಡಿತ್ತು ಮತ್ತು ಅದರ ಮುಖ್ಯಮಂತ್ರಿ ಕೂಡ ಪ್ರಭಾವಿಯಾಗಿರಲಿಲ್ಲ. ಆಡಳಿತ ವಿರೋಧಿ ಅಲೆಯೆದ್ದಿದ್ದ ಹೊತ್ತಿನಲ್ಲಿ ಪಕ್ಷದ ದಿಲ್ಲಿ ವರಿಷ್ಠರು ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಸಂಪೂರ್ಣವಾಗಿ ಹಿಂದೂ ಮತ್ತು ಮುಸ್ಲಿಮ್ ವಿಷಯವನ್ನಾಗಿ ಮಾಡಲು ನಿರ್ಧರಿಸಿದ್ದರು. ಹಿಜಾಬ್, ಹಲಾಲ್ ಮತ್ತು ಅಂತರ್ ಧರ್ಮೀಯ ವಿವಾಹಗಳ ವಿಷಯ ಎತ್ತುವ ಮೂಲಕ, ಬಿಜೆಪಿ ಮುಸ್ಲಿಮರನ್ನು ದೂರವಿಡಲು ಮತ್ತು ವಿಶ್ವಾಸಾರ್ಹರಲ್ಲ ಎಂದು ಬಿಂಬಿಸಲು ಪ್ರಯತ್ನಿಸಿತ್ತು. ಆ ಮೂಲಕ ತಮ್ಮ ಹಿಂದೆ ಬಹುಸಂಖ್ಯಾತ ಹಿಂದೂಗಳ ಬಲ ಒಟ್ಟಾಗುತ್ತಿದೆ ಎಂದು ಭಾವಿಸಿತ್ತು. ಈ ದುರುದ್ದೇಶಪೂರಿತ ಅಜೆಂಡಾದ ಭಾಗವಾಗಿ ಬಿಜೆಪಿಯ ವಾಟ್ಸ್‌ಆ್ಯಪ್ ಫ್ಯಾಕ್ಟರಿ ಕೆಲವು ಭಯಂಕರ ಸುಳ್ಳುಗಳನ್ನು ಹುಟ್ಟುಹಾಕಿತ್ತು. ಅದರಲ್ಲಿ ಅತ್ಯಂತ ಸುದ್ದಿಯಾದದ್ದೆಂದರೆ, ಟಿಪ್ಪುವನ್ನು ಕೊಂದದ್ದು ಈಸ್ಟ್ ಇಂಡಿಯಾ ಕಂಪೆನಿಯ ಸೈನಿಕರಲ್ಲ, ಬದಲಾಗಿ ಇಬ್ಬರು ಒಕ್ಕಲಿಗ ಯೋಧರು ಎಂಬ ಕಟ್ಟುಕಥೆಯಾಗಿತ್ತು.

ಈ ತಂತ್ರಗಳು ವಿಫಲವಾದವು. ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಬಹುಮತವನ್ನು ಗಳಿಸಿತು. ಅದರ ಗೆಲುವಿಗೆ ಕಾರಣವಾದ ಎರಡು ಅಂಶಗಳಿದ್ದವು: ಮೊದಲನೆಯದು, ಹಿಂದಿ ಭಾಷಿಕ ರಾಜ್ಯಗಳಿಗಿಂತ ಭಿನ್ನವಾಗಿ ಕಾಂಗ್ರೆಸ್ ಕರ್ನಾಟಕದಾದ್ಯಂತ ಇನ್ನೂ ತನ್ನ ದೃಢವಾದ ನೆಲೆಯನ್ನು ಹೊಂದಿರುವುದು; ಎರಡನೆಯದಾಗಿ, ರಾಜ್ಯ ಘಟಕದ ಪ್ರಮುಖ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಅವರು ಹೆಚ್ಚು ಕಡಿಮೆ ಒಟ್ಟಾಗಿ ಕೆಲಸ ಮಾಡಿದ್ದುದು (ರಾಜಸ್ಥಾನ ಮತ್ತು ಛತ್ತೀಸ್‌ಗಢದಂತಹ ಉತ್ತರದ ರಾಜ್ಯಗಳಲ್ಲಿ ಇಬ್ಬರು ಪ್ರಮುಖ ಕಾಂಗ್ರೆಸಿಗರ ನಡುವೆಯೇ ಪರಸ್ಪರ ತೀವ್ರ ಪೈಪೋಟಿ ಇತ್ತು.).

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಮತ್ತು ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿರುವ ಕಾಂಗ್ರೆಸ್ ಸರಕಾರ, ಕಳೆದ ನವೆಂಬರ್‌ನಲ್ಲಿ ಆರು ತಿಂಗಳ ಅಧಿಕಾರವನ್ನು ಪೂರ್ಣಗೊಳಿಸಿತು. ಈ ಸಮಯದಲ್ಲಿ ಪತ್ರಿಕೆಯ ಮುಖ್ಯಾಂಶಗಳು ಹಿಜಾಬ್, ಹಲಾಲ್, ಟಿಪ್ಪು ಸುಲ್ತಾನ್ ಮುಂತಾದವುಗಳಿಂದ ದೂರ ಸರಿದಿದ್ದವು. ಆ ಜಾಗದಲ್ಲಿ, ಮುಂಗಾರು ಕೊರತೆಯಿಂದ ಕೃಷಿಯ ಮೇಲಾಗುತ್ತಿರುವ ಪರಿಣಾಮ, ಬೆಂಗಳೂರಿನ ರಸ್ತೆಗಳು ಮತ್ತು ಸಾರ್ವಜನಿಕ ಸಾರಿಗೆಯ ದಯನೀಯ ಸ್ಥಿತಿ, ಸಚಿವರ ಆದೇಶಗಳಂತೆ ನಡೆದ ಅಧಿಕಾರಿಗಳ ವರ್ಗಾವಣೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪ ಇತ್ಯಾದಿಗಳು ಕಾಣಿಸಿದ್ದವು. ಪಂಥೀಯ ವಿಷಯಗಳು ತಗ್ಗಿ ವಸ್ತುನಿಷ್ಠ ವಿಷಯಗಳು ಮುಂದೆ ಬಂದಿದ್ದವು. ನಾನು ಈ ಬದಲಾವಣೆಯನ್ನು ಸಮಾಧಾನದ ಭಾವನೆಯಿಂದ ಗಮನಿಸಿದೆ. ಚುನಾವಣೆಗೆ ಮುನ್ನ ಕರ್ನಾಟಕದ ಮಾಧ್ಯಮಗಳು ಆಗ ಅಧಿಕಾರದಲ್ಲಿದ್ದ ಪಕ್ಷದಿಂದ ಬಂದ ಸೂಕ್ಷ್ಮ ಮತ್ತು ಪರೋಕ್ಷ ಒತ್ತಡದಿಂದ ಹಿಂದೂ-ಮುಸ್ಲಿಮ್ ವಿಷಯವನ್ನೇ ಮುಂದೆ ಮಾಡಿದ್ದುದು ಸ್ಪಷ್ಟವಿತ್ತು. ಈಗ ಅವು ಹಾಗೆ ಮಾಡಬೇಕಾಗಿರಲಿಲ್ಲ. 2023ರ ಕೊನೆಯ ವಾರಗಳಲ್ಲಿ, ಪತ್ರಿಕೆಗಳ ವರದಿಗಾರಿಕೆಯಲ್ಲಿ ಕಾಣಿಸುತ್ತಿದ್ದ ಬದಲಾವಣೆಯ ಕುರಿತು ಸ್ನೇಹಿತರ ಬಳಿ ಹೇಳಿದ್ದೆ. ಅವರೂ ನನ್ನ ವಿಶ್ಲೇಷಣೆಯನ್ನು (ಮತ್ತು ನನ್ನ ಭಾವನೆಗಳನ್ನು) ಒಪ್ಪಿದ್ದರು.

ಆದರೆ ನನ್ನ ಆ ಸಮಾಧಾನದ ಭಾವನೆ ಹೆಚ್ಚು ಕಾಲ ಉಳಿಯಲಿಲ್ಲ. ಧರ್ಮದ ಪ್ರಶ್ನೆಗಳು ಈಗ ಮತ್ತೊಮ್ಮೆ ಮುಖ್ಯಾಂಶಗಳಲ್ಲಿ ಜಾಗ ಪಡೆದಿವೆ. ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿನ 28 ಸ್ಥಾನಗಳು ಬಹಳ ಮುಖ್ಯವಾದ ಕಾರಣ, ಬಿಜೆಪಿ ರಾಜ್ಯ ಘಟಕ ಹಿಂದೂ ಮತಗಳ ಕ್ರೋಡೀಕರಣಕ್ಕೆ ಹೊಸದಾಗಿ ಗಮನ ಹರಿಸಲು ಮುಂದಾಗಿದೆ. ಹಾಗೆ ಮಾಡಲು ಅದಕ್ಕೆ ಧೈರ್ಯ ಬಂದಿರುವುದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ನಂತರ. ಅದರ ಮೂಲಕ ಬಹುಸಂಖ್ಯಾತ ಪ್ರತಿಪಾದನೆಯ ಅಲೆಯ ಮೇಲೆ ಹೋಗಲು ಅದೀಗ ಬಯಸಿದೆ.

ಈ ಯೋಜನೆಯ ಬೆನ್ನಲ್ಲೇ ಕರ್ನಾಟಕ ಬಿಜೆಪಿ ಮಂಡ್ಯ ಜಿಲ್ಲೆಯ ಹಳ್ಳಿಯೊಂದರಲ್ಲಿ ಧ್ವಜದ ವಿಚಾರವಾಗಿ ವಿವಾದವನ್ನು ಎಬ್ಬಿಸಿತು. ಹಳೇ ಹನುಮಾನ್ ದೇಗುಲ ಇರುವ ಜಾಗಕ್ಕೆ ಸಮೀಪದಲ್ಲೇ ಆ ಜಾಗ ಇರುವುದರಿಂದ ಅಲ್ಲಿನ ಧ್ವಜಸ್ತಂಭದ ಮೇಲೆ ಕೇಸರಿ ಧ್ವಜ ಹಾರಿಸಬೇಕು ಎಂದು ಹಿಂದುತ್ವವಾದಿಗಳು ಒತ್ತಾಯಿಸಿದರು. ಸರಕಾರಿ ಭೂಮಿಯಲ್ಲಿ ಧ್ವಜಸ್ತಂಭ ಇರುವುದರಿಂದ ಅದರ ಮೇಲೆ ರಾಷ್ಟ್ರಧ್ವಜ ಇಲ್ಲವೇ ಕನ್ನಡ ಧ್ವಜ ಮಾತ್ರ ಹಾರಲು ಸಾಧ್ಯ ಎಂಬುದು ರಾಜ್ಯ ಸರಕಾರದ ವಾದವಾಗಿತ್ತು.

ಕ್ಷುಲ್ಲಕ, ಸ್ಥಳೀಯ ಸಮಸ್ಯೆಯನ್ನು ಬಿಜೆಪಿ ದೊಡ್ಡ ವಿವಾದದಂತೆ ಬೆಳೆಸಿತು. ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆ ಗ್ರಾಮಕ್ಕೆ ಧಾವಿಸಿ, ಕಾಂಗ್ರೆಸ್ ಸರಕಾರ ಸಾರ್ವಜನಿಕ ಸ್ಥಳದಲ್ಲಿ ಕೇಸರಿ ಧ್ವಜ ಹಾರಿಸಲು ಅನುಮತಿ ನೀಡದಿರುವುದು ಹಿಂದೂ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಪ್ರತಿಪಾದಿಸಿದರು. ದೊಡ್ಡ ರ್ಯಾಲಿಯನ್ನು ನಡೆಸಲಾಯಿತು. ಅಶೋಕ್ ಜೊತೆ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಇದ್ದರು. ವೈಯಕ್ತಿಕ ಲಾಭದ ಉದ್ದೇಶದ ಅವರ ರೀತಿ ನಿತೀಶ್ ಕುಮಾರ್ ನಡೆಯನ್ನು ಹೋಲುವಂತಿತ್ತು. ಅವರ ಅವಕಾಶವಾದಿತನ ಎಷ್ಟು ಸ್ಪಷ್ಟವಾಗಿ ಕಂಡಿತ್ತೆಂದರೆ, ಅವರ ಪಕ್ಷದಲ್ಲಿನ ಎಸ್ ಎಂಬುದು ಜಾತ್ಯತೀತತೆಯನ್ನು ಹೇಳುವುದಾದರೂ, ಕುಮಾರಸ್ವಾಮಿ ಕೇಸರಿ ಶಾಲು ಧರಿಸಿದ್ದರು.

ಮಂಡ್ಯದ ಧ್ವಜ ವಿವಾದ ಜನವರಿ ಕೊನೆಯ ವಾರದುದ್ದಕ್ಕೂ ಕರ್ನಾಟಕದ ಸುದ್ದಿಯ ಮುಖ್ಯಾಂಶಗಳಲ್ಲಿ ಪ್ರಾಮುಖ್ಯತೆ ಪಡೆಯಿತು. ಕೋಮು ಸೂಕ್ಷ್ಮ ಕರಾವಳಿ ಪ್ರದೇಶ ಸೇರಿದಂತೆ ರಾಜ್ಯದ ಇತರ ಸಾರ್ವಜನಿಕ ಸ್ಥಳಗಳಲ್ಲಿಯೂ ಕೇಸರಿ ಧ್ವಜಗಳನ್ನು ಹಾರಿಸಲು ಯೋಜಿಸಲಾಗಿತ್ತು. ಈ ನಡುವೆ, ಧ್ರುವೀಕರಣದ ಅಜೆಂಡಾವನ್ನು ಇತರ ವಿಧಾನಗಳಿಂದಲೂ ಕಾರ್ಯಗತಗೊಳಿಸುವುದು ನಡೆದಿತ್ತು. ಫೆಬ್ರವರಿ 2ರಂದು ಡೆಕ್ಕನ್ ಹೆರಾಲ್ಡ್ ಬಿಜೆಪಿಯ ಹಿರಿಯ ನಾಯಕ ಸಿ.ಟಿ.ರವಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಭಾಷಣದ ವರದಿಯನ್ನು ಪ್ರಕಟಿಸಿತು. ಅದರಲ್ಲಿ, ಬೀದರ್ ಜಿಲ್ಲೆಯ ಮುಸ್ಲಿಮ್ ಸಂತನ ಒಂದು ದರ್ಗಾ ಮೂಲತಃ 12ನೇ ಶತಮಾನದ ಹಿಂದೂ ಸುಧಾರಕ ಬಸವಣ್ಣ ನಿರ್ಮಿಸಿದ ಮಂಟಪ ಎಂದು ರವಿ ವಾದಿಸಿದ್ದರು. ‘ಹಿಂದಿನ ವೈಭವ ಮರುಕಳಿಸಬೇಕಾಗಿದೆ’ ಎಂದ ರವಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅದನ್ನು ಮಾಡಲಿದೆ ಎಂದು ಭರವಸೆ ನೀಡಿದ್ದರು.

ಆನಂತರ ಅವರು ಮುಂಬರುವ ಸಾರ್ವತ್ರಿಕ ಚುನಾವಣೆಯ ಬಗ್ಗೆ ಹೇಳಿದ್ದರು. ಡೆಕ್ಕನ್ ಹೆರಾಲ್ಡ್ ವರದಿಯಲ್ಲಿನ ಅವರ ಕೆಲವು ಹೇಳಿಕೆಗಳು ಇಲ್ಲಿವೆ: ‘ಈ ಚುನಾವಣೆಯು ಕಾಶಿ ವಿಶ್ವನಾಥ ಮತ್ತು ಔರಂಗಜೇಬ್, ಸೋಮನಾಥ ಮತ್ತು ಘಜ್ನಿ, ಹನುಮಾನ್ ಮತ್ತು ಟಿಪ್ಪು ನಡುವಿನ ಚುನಾವಣೆಯಾಗಿದೆ. ಕಾಶಿ ಮತ್ತು ಮಥುರಾದಲ್ಲಿ ಭವ್ಯವಾದ ದೇವಾಲಯಗಳನ್ನು ನಿರ್ಮಿಸಲು ಮೋದಿ ಅಧಿಕಾರಕ್ಕೆ ಮರಳಬೇಕು.’ ಇಪ್ಪತ್ತೊಂದನೇ ಶತಮಾನದ ಚುನಾವಣೆ ಮಧ್ಯಕಾಲೀನ ದ್ವೇಷ ಮತ್ತು ಹಗೆತನದ ಆಧಾರದ ಮೇಲಿನ ಹೋರಾಟವಾಗಿತ್ತು.

ಕರ್ನಾಟಕದ ಬಿಜೆಪಿ ನಾಯಕರ ಇಂತಹ ಹೇಳಿಕೆಗಳು ಸಂಪೂರ್ಣವಾಗಿ ಅವರು ಸಾಮಾನ್ಯವಾಗಿ ಅನುಸರಿಸುವ ಮಾದರಿಗಳೇ ಆಗಿವೆ. ಆದರೂ, ಹೆಚ್ಚು ಗಮನಿಸಬೇಕಾದದ್ದು ಮತ್ತು ಹೆಚ್ಚು ನಿರಾಶಾದಾಯಕ ಸಂಗತಿಯೆಂದರೆ, ರಾಜಕೀಯ ಮತ್ತು ರಾಜ್ಯ ವ್ಯವಹಾರಗಳು ಬಹುಸಂಖ್ಯಾತ ಪರಿಭಾಷೆಯಲ್ಲಿರಬೇಕು ಎಂದು ಭಾವಿಸುವ ಹಿಂದೂಗಳನ್ನು ಓಲೈಸಲು ರಾಜ್ಯದ ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿರುವುದು. ಕರ್ನಾಟಕ ಸಂಪುಟದಲ್ಲಿ ಹಿರಿಯ ಸಚಿವರಾಗಿರುವ, ಮುಜರಾಯಿ ಇಲಾಖೆಯ ಹೊಣೆಯನ್ನೂ ಹೊತ್ತಿರುವ ರಾಮಲಿಂಗಾರೆಡ್ಡಿ ಅವರ ನಡೆಯನ್ನು ನೋಡಬೇಕು. ದೂರದ ಅಯೋಧ್ಯೆಯಲ್ಲಿ ಬಿಜೆಪಿ ಪ್ರಾಯೋಜಿತ ಸಮಾರಂಭದ ದಿನವಾಗಿದ್ದ ಜನವರಿ 22ರಂದು ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಪೂಜೆಗಳನ್ನು ಮಾಡಲು ರೆಡ್ಡಿ ಆದೇಶಿಸಿದ್ದರು. ಈ ಕುರಿತು, ಕೇರಳ ಪ್ರವಾಸದಲ್ಲಿದ್ದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕೇಳಿದಾಗ ಅವರು ಹೇಳಿದ್ದು: ‘‘ನೋಡಿ, ಅಂತಿಮವಾಗಿ ನಾವೆಲ್ಲರೂ ಹಿಂದೂಗಳು’’. ಈ ಅಜೆಂಡಾದ ಮುಂದುವರಿಕೆಯೆಂಬಂತೆ, ಅಯೋಧ್ಯೆ ಸಮಾರಂಭದ ಎರಡು ವಾರಗಳ ನಂತರ ರಾಮಲಿಂಗಾರೆಡ್ಡಿ ಅವರು ರಾಜ್ಯಾದ್ಯಂತ ನೂರು ರಾಮಮಂದಿರಗಳ ಜೀರ್ಣೋದ್ಧಾರಕ್ಕೆ ಹಣ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳುತ್ತಿರುವುದಾಗಿ ಪತ್ರಿಕೆಗಳಿಗೆ ತಿಳಿಸಿದರು.

ನನಗೆ ತಿಳಿದಿರುವಂತೆ, ಮುಖ್ಯಮಂತ್ರಿಗಳು ಸಚಿವರ ಮನವಿಗೆ ತಮ್ಮ ಪ್ರತಿಕ್ರಿಯೆಯನ್ನು ಬಹಿರಂಗಗೊಳಿಸಿಲ್ಲ. ಈ ಹಿಂದೆ ಸಿದ್ದರಾಮಯ್ಯ ರಾಜಕೀಯ ಮತ್ತು ಸಮಾಜದಲ್ಲಿನ ಬಹುಸಂಖ್ಯಾತ ಧೋರಣೆಗಳ ವಿರುದ್ಧ ತೀವ್ರವಾಗಿ ಮಾತನಾಡಿದ್ದವರು. ಆದರೂ, ಅವರ ಇತ್ತೀಚಿನ ಹೇಳಿಕೆಗಳು ಅನಿಶ್ಚಿತತೆಯ ಭಾವನೆಯನ್ನು ತೋರಿಸುತ್ತವೆ. ಅಯೋಧ್ಯೆಯಲ್ಲಿನ ಘಟನೆಗಳಿಗೆ ಪ್ರತಿಕ್ರಿಯೆಯಾಗಿ ಅವರು ತಮ್ಮದೇ ಆದ ಹಿಂದೂ ಭಕ್ತಿಯನ್ನು ಪ್ರದರ್ಶಿಸಿದ್ದರು, ಅವರ ಹಳ್ಳಿಯ ರಾಮಮಂದಿರದಲ್ಲಿ ಪ್ರಾರ್ಥನೆ ಮಾಡಿದ್ದರು ಮತ್ತು ‘‘ಜೈ ಶ್ರೀ ರಾಮ್’’ ಎಂದು ಹೇಳಿದ್ದರು. ಈಗ ಇದು ಆಕ್ರಮಣಕಾರಿ ಹಿಂದುತ್ವವು ಜನರನ್ನು ಒಗ್ಗೂಡಿಸಲು ಬಳಸುವ ಘೋಷಣೆಯಾಗಿದೆ. ಇದನ್ನು 1980ರ ದಶಕದ ಮೊದಲು ಉತ್ತರ ಭಾರತದಲ್ಲಿ ವಿರಳವಾಗಿ ಬಳಸಲಾಗುತ್ತಿತ್ತು. ಅಲ್ಲಿ ವಂದನೆ ಹೇಳುವ ಸಾಂಪ್ರದಾಯಿಕ ರೀತಿಯಾಗಿ ರಾಮನ ಸ್ತುತಿಯಿರುವ ರಾಮ್ ರಾಮ್ ಅಥವಾ ಜೈ ಸಿಯಾ ರಾಮ್ ಹೇಳಲಾಗುತ್ತದೆ. ಆ ಘೋಷಣೆಯನ್ನು ಕೂಗುವಲ್ಲಿನ ಸಿದ್ದರಾಮಯ್ಯನವರ ಉದ್ದೇಶ ದೃಢವಾದ ನಂಬಿಕೆಯ ಸಂಕೇತವಾಗಿರಬಹುದು ಮತ್ತು ಮುಂಬರುವ ಲೋಕಸಭೆ ಚುನಾವಣೆಯಿಂದ ಬಹುಶಃ ಪ್ರೇರಿತವಾಗಿರಬಹುದು. 28ರಲ್ಲಿ ಒಂದು ಸ್ಥಾನವನ್ನು ಮಾತ್ರ ಗೆದ್ದಿದ್ದ ತನ್ನ 2019ರ ಸ್ಥಿತಿಯನ್ನು ಕಾಂಗ್ರೆಸ್ ಈ ಚುನಾವಣೆಯಲ್ಲಿ ಗಣನೀಯವಾಗಿ ಸುಧಾರಿಸಲು ಬಯಸುತ್ತಿದೆ.

ಹಿಂದುತ್ವದ ವಿಧಾನಗಳನ್ನು ಅನುಕರಿಸುವ ಕರ್ನಾಟಕ ಕಾಂಗ್ರೆಸ್‌ನ ಈ ಪ್ರಯತ್ನಗಳು ನೈತಿಕವಾಗಿ ಅನುಮಾನಾಸ್ಪದವಾಗಿವೆ. ಅದರಿಂದ ರಾಜಕೀಯವಾಗಿ ಲಾಭದಾಯಕವಾಗುವ ಸಾಧ್ಯತೆಯೂ ಇಲ್ಲ. ಛತ್ತೀಸ್‌ಗಡ ಮತ್ತು ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಭೂಪೇಶ್ ಬಘೇಲ್ ಮತ್ತು ಕಮಲ್‌ನಾಥ್ ಅವರು ತಮ್ಮ ಹಿಂದೂ ನಂಬಿಕೆಗಳನ್ನು, ತಾವು ರಾಮ ಮತ್ತು ಹನುಮಂತನ ಆರಾಧಕರೆಂಬುದನ್ನು ಪದೇ ಪದೇ ಬಿಂಬಿಸಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ಆ ವಿಧಾನಸಭಾ ಚುನಾವಣೆಯ ಫಲಿತಾಂಶಗಳೇ ತೋರಿಸಿರುವಂತೆ, ಅದು ಬಿಜೆಪಿಯನ್ನು ಸೋಲಿಸಬಲ್ಲ ಆಟವಾಗುವುದಂತೂ ಸಾಧ್ಯವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಮಚಂದ್ರ ಗುಹಾ

contributor

Similar News