ಭೂಮಿಯ ಆರೈಕೆ

ಸಮಸ್ಯೆಯ ಬೇರುಗಳು ಆಲೋಚಿಸುವ ಬಗೆಯಲ್ಲಿವೆ ಎಂದು ಪ್ರೊ.ನಾಸರ್ ವಾದಿಸಿದ್ದರು. ಆಧುನಿಕ ಮನುಷ್ಯನಲ್ಲಿ ತಾನು ನಿಸರ್ಗದ ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿದ್ದೇನೆ ಹಾಗೂ ತನಗೆ ಸರಿ ಕಂಡಂತೆ, ತನ್ನ ಆಯ್ಕೆಯಂತೆ ಪ್ರಕೃತಿಯನ್ನು ಬಳಸಲು, ದುರಾಚಾರ ಗೈಯಲು, ಅಧೀನಗೊಳಿಸಿಕೊಳ್ಳಲು ಮತ್ತು ಪ್ರಾಬಲ್ಯ ಸಾಧಿಸಲು ಸಂಪೂರ್ಣ ಸ್ವಾತಂತ್ರ್ಯ ತನಗಿದೆ ಎಂಬ ಅಹಂಕಾರವಿದೆ. ಇದು ನಿಖರವಾಗಿ ಈ ಪ್ರಕೃತಿಯ ಮೇಲಿನ ಪ್ರಾಬಲ್ಯ ಎಂದು ನಾಸರ್ ಬರೆದಿದ್ದಾರೆ.

Update: 2023-11-18 05:46 GMT

Photo: facebook.com

ಭಾರತದಲ್ಲಿನ ಪರಿಸರ ಸಮಸ್ಯೆಗಳು ಕೇವಲ ಜಾಗತಿಕ ತಾಪಮಾನ ಏರಿಕೆಯೊಂದರದ್ದೇ ಪರಿಣಾಮವಲ್ಲದಿದ್ದರೂ, ಈಗಿನ ಹವಾಮಾನ ಬಿಕ್ಕಟ್ಟು ಪ್ರಕೃತಿಯ ಮೇಲಿನ ಮನುಷ್ಯನ ಅನಾಚಾರವನ್ನು ಬಲವಂತವಾಗಿ ನಮ್ಮ ಗಮನಕ್ಕೆ ತಂದಿದೆ. ಉತ್ತರ ಭಾರತದ ನಗರಗಳಲ್ಲಿ ದಿಗ್ಭ್ರಮೆಗೊಳಿಸುವಷ್ಟು ಹೆಚ್ಚಿನ ಪ್ರಮಾಣದ ವಾಯುಮಾಲಿನ್ಯ, ಹೊಣೆಗೇಡಿತನದಿಂದ ಯೋಜಿಸಲಾದ ರಸ್ತೆಗಳು ಮತ್ತು ಅಣೆಕಟ್ಟುಗಳಿಂದ ಹಿಮಾಲಯದ ನಿರಂತರ ವಿನಾಶ, ಅಂತರ್ಜಲದ ಸವಕಳಿ, ಮಣ್ಣಿನ ರಾಸಾಯನಿಕ ಮಾಲಿನ್ಯ, ಜೈವಿಕ ವೈವಿಧ್ಯತೆಯ ನಷ್ಟ ಇವೆಲ್ಲವೂ ಹವಾಮಾನ ಬದಲಾವಣೆಗೆ ಹೊರತಾಗಿಯೇ ಸಂಭವಿಸುತ್ತಿವೆ. ಪರಿಸರದ ದುರುಪಯೋಗದ ಈ ವೈವಿಧ್ಯಮಯ ರೂಪಗಳು ಅಲ್ಪಾವಧಿಯಲ್ಲಿ ಮನುಷ್ಯನ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಭಾರತ ಮತ್ತು ವಿಶ್ವವು ಆಯ್ಕೆ ಮಾಡಿದ ಆರ್ಥಿಕ ಮಾದರಿಯ ದೀರ್ಘಾವಧಿಯ ಕಾರ್ಯಸಾಧ್ಯತೆಯ ಬಗ್ಗೆ ಅವು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತವೆ.

ಪರಿಸರದ ಸವಾಲನ್ನು ಎದುರಿಸುವುದು ಹೇಗೆ ಎಂಬ ಪುಸ್ತಕಗಳು ಈಗ ಹೇರಳವಾಗಿ ಪ್ರಕಟವಾಗುತ್ತಿವೆ. ಆದಾಗ್ಯೂ, ಈ ಅಂಕಣವು ಐವತ್ತು ವರ್ಷಗಳ ಹಿಂದೆ ಪ್ರಕಟವಾದ ಕೃತಿಯನ್ನು ಗಮನಿಸುತ್ತದೆ. ಈ ಪುಸ್ತಕದಲ್ಲಿನ ವಿಚಾರಗಳು ಅದರ ಕಾಲಕ್ಕೆ ಪ್ರಸ್ತುತವಾಗಿದ್ದರೂ ಮತ್ತು ನಮ್ಮ ಕಾಲಕ್ಕೆ ಇನ್ನೂ ಹೆಚ್ಚು ಪ್ರಸ್ತುತವಾಗಿದ್ದರೂ, ಅದು ಹೊಂದಿರಬೇಕಾಗಿದ್ದಷ್ಟು ಪ್ರಸಿದ್ಧಿಯನ್ನು ಪಡೆದಿಲ್ಲ.

‘Man and Nature: The Spiritual Crisis of Modern Man’ ಎಂಬ ಹೆಸರಿನ ಈ ಪುಸ್ತಕವನ್ನು ಬರೆದವರು ಆ ಸಮಯದಲ್ಲಿ ಟೆಹರಾನ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಸಯ್ಯದ್ ಹುಸೇನ್ ನಾಸರ್. ಈಗ ತೊಂಬತ್ತರ ಹರೆಯದ ನಾಸರ್ ಅವರು ಅಸಾಧಾರಣವಾದ ಆಸಕ್ತಿದಾಯಕ ಮತ್ತು ಅತ್ಯಂತ ಕ್ರಿಯಾಶೀಲ ಬದುಕನ್ನು ನಡೆಸಿದವರು. ಇರಾನ್‌ನಲ್ಲಿ ವಿದ್ವಾಂಸರು ಮತ್ತು ಬರಹಗಾರರ ಕುಟುಂಬದಲ್ಲಿ ಜನಿಸಿದ ಅವರು 1958ರಲ್ಲಿ ತಮ್ಮ ತಾಯ್ನಾಡಿಗೆ ಹಿಂದಿರುಗುವ ಮೊದಲು ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಹಾರ್ವರ್ಡ್‌ನಲ್ಲಿ ಶಿಕ್ಷಣ ಪಡೆದರು. ಪಶ್ಚಿಮದ ದೇಶಗಳಲ್ಲಿನ ಪ್ರತಿಷ್ಠಿತ ಮತ್ತು ಉತ್ತಮ ಸಂಬಳದ ಉದ್ಯೋಗಗಳನ್ನು ನಿರಾಕರಿಸಿದ ನಾಸರ್, ಟೆಹರಾನ್‌ನಲ್ಲಿ ಶಿಕ್ಷಕರಾಗಿ ಹಲವು ತಲೆಮಾರುಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಪರ್ಷಿಯನ್ ಮತ್ತು ಇಂಗ್ಲಿಷ್‌ನಲ್ಲಿ ಪುಸ್ತಕಗಳು ಮತ್ತು ಲೇಖನಗಳನ್ನು ಪ್ರಕಟಿಸಿದರು. ಆಗಾಗ ಫ್ರೆಂಚ್ ಮತ್ತು ಅರೇಬಿಕ್ ಭಾಷೆಗಳಲ್ಲಿಯೂ ಬರೆದರು. 1979ರ ಇರಾನಿನ ಕ್ರಾಂತಿಯ ಪರಿಣಾಮವಾಗಿ ಅವರು ತಾಯ್ನಾಡನ್ನು ತೊರೆಯಬೇಕಾಯಿತಾದರೂ, ಅಮೆರಿಕದ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಾಪನ, ಬೌದ್ಧಿಕ ಇತಿಹಾಸ ಮತ್ತು ನಿರ್ದಿಷ್ಟವಾಗಿ ತೌಲನಿಕ ಧರ್ಮದ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬರೆಯುವುದನ್ನು ಮುಂದುವರಿಸಿದರು.

Man and Nature ಕೃತಿಯ ಆರಂಭದಲ್ಲಿ ಪ್ರೊ.ನಾಸರ್ ಹೇಳುವುದು ಹೀಗೆ: ‘‘ಪಶ್ಚಿಮದಲ್ಲಿ ಪರಿಸರದ ದುರುಪಯೋಗದ ಅರಿವು ಬೆಳೆಯುತ್ತಿದೆ. ಸಾಮಾನ್ಯವಾಗಿ ಈ ಸ್ಪಷ್ಟ ಸಮಸ್ಯೆಗಳನ್ನು ಗ್ರಹಿಸುವ ಅದೇ ಜನರು ಮತ್ತಷ್ಟು ಅಭಿವೃದ್ಧಿ ಅಥವಾ ಭೂಮಿಯ ಅಸ್ತಿತ್ವದೊಂದಿಗೇ ಇರುವ ಸನ್ನಿವೇಶದ ಪರಿಣಾಮಗಳಾದ ಮನುಷ್ಯನ ಸಂಕಟಗಳ ವಿರುದ್ಧದ ಹೋರಾಟದ ಅವಶ್ಯಕತೆಯ ಬಗ್ಗೆ ಮಾತನಾಡುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರಕೃತಿಯ ಮತ್ತಷ್ಟು ವಿಜಯ ಮತ್ತು ಪ್ರಾಬಲ್ಯದ ಮೂಲಕ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಮತೋಲನದ ನಶಿಸುವಿಕೆಯಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಅವರು ಬಯಸುತ್ತಾರೆ. ಕೆಲವರು ವಾಸ್ತವವನ್ನು ಮುಖಾಮುಖಿಯಾಗಿ ನೋಡಲು ಸಿದ್ಧರಿದ್ದಾರೆ ಹಾಗೂ ಪ್ರಕೃತಿ ಮತ್ತು ಇಡೀ ನೈಸರ್ಗಿಕ ಪರಿಸರದ ಬಗೆಗಿನ ಮನೋಭಾವವು ಆಕ್ರಮಣಶೀಲತೆ ಮತ್ತು ಯುದ್ಧದ ಮೇಲೆ ಆಧಾರಿತವಾಗಿರುವವರೆಗೆ ಮಾನವ ಸಮಾಜದಲ್ಲಿ ಶಾಂತಿ ಸಾಧ್ಯವಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ.’’

Man and Nature ಕೃತಿ 1966ರ ಬೇಸಿಗೆಯಲ್ಲಿ ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ನೀಡಿದ ಉಪನ್ಯಾಸಗಳನ್ನು ಆಧರಿಸಿದೆ. ಪುಸ್ತಕವು ಪಾಶ್ಚಿಮಾತ್ಯ ಮತ್ತು ನಿರ್ದಿಷ್ಟವಾಗಿ ಅಮೆರಿಕದ ಓದುಗರನ್ನು ಗಮನದಲ್ಲಿಟ್ಟುಕೊಂಡಿದೆ. ಆದರೂ, ಅಭಿವೃದ್ಧಿ ನೀತಿಗಳ ವಿಷಯದಲ್ಲಿ ಪಾಶ್ಚಾತ್ಯ ಮೂಲ ಮಾದರಿಗಳನ್ನು ಭಾರತ ಮತ್ತು ಚೀನಾದಂತಹ ದೇಶಗಳು ಅತ್ಯುತ್ಸಾಹದಿಂದ ಅಳವಡಿಸಿಕೊಂಡಿರುವುದರಿಂದ, ಅವರ ಎಚ್ಚರಿಕೆಗಳನ್ನು ನಾವು ಕೂಡ ಗಮನಿಸಬಹುದಾಗಿದೆ.

ಸಮಸ್ಯೆಯ ಬೇರುಗಳು ಆಲೋಚಿಸುವ ಬಗೆಯಲ್ಲಿವೆ ಎಂದು ಪ್ರೊ.ನಾಸರ್ ವಾದಿಸಿದ್ದರು. ಆಧುನಿಕ ಮನುಷ್ಯನಲ್ಲಿ ತಾನು ನಿಸರ್ಗದ ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿದ್ದೇನೆ ಹಾಗೂ ತನಗೆ ಸರಿ ಕಂಡಂತೆ, ತನ್ನ ಆಯ್ಕೆಯಂತೆ ಪ್ರಕೃತಿಯನ್ನು ಬಳಸಲು, ದುರಾಚಾರ ಗೈಯಲು, ಅಧೀನಗೊಳಿಸಿಕೊಳ್ಳಲು ಮತ್ತು ಪ್ರಾಬಲ್ಯ ಸಾಧಿಸಲು ಸಂಪೂರ್ಣ ಸ್ವಾತಂತ್ರ್ಯ ತನಗಿದೆ ಎಂಬ ಅಹಂಕಾರವಿದೆ. ಇದು ನಿಖರವಾಗಿ ಈ ಪ್ರಕೃತಿಯ ಮೇಲಿನ ಪ್ರಾಬಲ್ಯ ಎಂದು ನಾಸರ್ ಬರೆದಿದ್ದಾರೆ. ‘‘ಇದು ಅತಿಯಾದ ಜನಸಂಖ್ಯೆಯ ಸಮಸ್ಯೆ, ಉಸಿರಾಟಕ್ಕೆ ಎಡೆಯಿಲ್ಲದಂತಾಗುವಿಕೆ, ನಗರ ಜೀವನದ ಬಾಹುಳ್ಯ ಮತ್ತು ದಟ್ಟಣೆ, ಎಲ್ಲಾ ರೀತಿಯ ನೈಸರ್ಗಿಕ ಸಂಪನ್ಮೂಲಗಳ ಬಳಲಿಕೆ, ನೈಸರ್ಗಿಕ ಸೌಂದರ್ಯದ ನಾಶ, ಯಂತ್ರ ಮತ್ತು ಅದರ ಉತ್ಪನ್ನಗಳ ಮೂಲಕ ವಾಸಿಸುವ ಪರಿಸರದ ಹಾಳುಗೆಡಹುವಿಕೆ, ಮಾನಸಿಕ ಕಾಯಿಲೆಗಳ ಅಸಹಜ ಏರಿಕೆ ಮತ್ತು ಸಂಪೂರ್ಣವಾಗಿ ದುಸ್ತರವಾಗಿ ಕಂಡುಬರುವ ಕೆಲವು ಸಮಸ್ಯೆಗಳು ಸೇರಿದಂತೆ ಸಾವಿರಾರು ಇತರ ತೊಂದರೆಗಳಿಗೆ ಕಾರಣವಾಗಿದೆ.’’

ಪ್ರಕೃತಿಯ ಮೇಲಿನ ಆಧುನಿಕ ಮನುಷ್ಯನ ಪ್ರಾಬಲ್ಯದ ಪ್ರಜ್ಞೆ ಮತ್ತು ಪ್ರಕೃತಿಯ ಭೌತಿಕ ಪರಿಕಲ್ಪನೆಯು ಆಸೆ ಮತ್ತು ದುರಾಸೆಯ ಪ್ರಜ್ಞೆಯೊಂದಿಗೆ ಸಂಯೋಜಿತವಾಗಿದೆ. ಇದು ಪರಿಸರದ ಮೇಲೆ ಸದಾ ಹೆಚ್ಚಿನ ಅವಲಂಬನೆಗೆ ಕಾರಣವಾಗುತ್ತದೆ. ಭೌತಿಕತೆಯೊಳಗಿನ ಮಿತಿಯಿಲ್ಲದ ಮತ್ತು ಅಪರಿಮಿತ ಸಾಧ್ಯತೆಗಳ ಕುರಿತ ನಂಬಿಕೆ ಸಾಮಾನ್ಯವಾಗಿ ಅಮೆರಿಕದಲ್ಲಿ ರೂಪುಗೊಂಡ ಪರಿಕಲ್ಪನೆಯಾಗಿದೆ. ರೂಪಗಳ ಪ್ರಪಂಚವು ಸೀಮಿತವಾಗಿಲ್ಲ ಮತ್ತು ಈ ರೂಪಗಳ ಮಿತಿಗಳಿಂದಲೇ ಅದು ಬಂಧಿತವಾಗಿದೆ ಎಂದು ಪ್ರೊ.ನಾಸರ್ ವಿಷಾದಿಸಿದ್ದಾರೆ.

ಮನುಷ್ಯನ ಅನಿಯಮಿತ ಶಕ್ತಿ ಮತ್ತು ಅವನ ಸಾಧ್ಯತೆಗಳ ಕುರಿತ ಈ ತಪ್ಪು ತಿಳುವಳಿಕೆ ಅರ್ಥಶಾಸ್ತ್ರವನ್ನು ಸ್ವತಂತ್ರ ಶಿಸ್ತಾಗಿ ಅಭಿವೃದ್ಧಿಪಡಿಸುವುದರಿಂದ ಉತ್ತೇಜಿತವಾಗಿದೆ ಎಂಬುದು ಪ್ರೊ.ನಾಸರ್ ವಾದ. ‘‘ಮನುಷ್ಯನನ್ನು ಭೌತಿಕ ಅಗತ್ಯಗಳನ್ನು ಹೊಂದಿರುವ ಜೀವಿ ಎಂದು ಮಾತ್ರ ಅದು ಪರಿಗಣಿಸುತ್ತದೆ. ಆಧುನಿಕ ವಿಜ್ಞಾನ ಮತ್ತು ಆಧುನಿಕ ಅರ್ಥಶಾಸ್ತ್ರವು ಮನುಷ್ಯನನ್ನು ನೈತಿಕ ಅಥವಾ ಆಧ್ಯಾತ್ಮಿಕ ಸಂಯಮದ ಯಾವುದೇ ಕಲ್ಪನೆಯಿಂದ ಬೇರ್ಪಡಿಸಿದೆ. ಪ್ರಕೃತಿಯನ್ನು ಸಾಧ್ಯವಾದ ಮಟ್ಟಿಗೆ ಬಳಸಿಕೊಳ್ಳಲು ಮತ್ತು ಆನಂದಿಸಲು, ಅದರ ಕಡೆಗೆ ಯಾವುದೇ ಬಾಧ್ಯತೆ ಮತ್ತು ಜವಾಬ್ದಾರಿಯಿಲ್ಲದೆ ಪ್ರಯೋಜನ ಪಡೆಯಲು ಅದು ಪ್ರೋತ್ಸಾಹಿಸುತ್ತದೆ.’’ ಈಗ ಉಳಿವಿನ ಪ್ರಶ್ನೆ ಬಂದಿರುವಾಗ, ಪ್ರಕೃತಿಯೊಂದಿಗೆ ಮತ್ತು ಅದರ ಭಾಗವಾಗಿ ಹೇಗೆ ಬದುಕಬೇಕು ಎಂಬುದನ್ನು, ಪ್ರಕೃತಿಯ ಪವಿತ್ರತೆಯ ಅರ್ಥವನ್ನು ಪುನಃಸ್ಥಾಪಿಸಲು (ಹಾಗೆಂದು ಪ್ರೊ.ನಾಸರ್ ನಂಬಿದ್ದರು) ನಂಬಿಕೆ ಮತ್ತು ಆಚರಣೆಯ ಆಧುನಿಕವಲ್ಲದ ವ್ಯವಸ್ಥೆಗಳನ್ನು ನಿರೂಪಿಸಲು ಮನುಷ್ಯರು ಹೊಸದಾಗಿ ಕಲಿಯಬೇಕಾಗಿದೆ.

Man and Natureನ ಮೊದಲ ಆವೃತ್ತಿಯನ್ನು 1968ರಲ್ಲಿ, ಸಯ್ಯದ್ ಹುಸೇನ್ ನಾಸರ್ ಇನ್ನೂ ಟೆಹರಾನ್‌ನಲ್ಲಿ ವಾಸಿಸುತ್ತಿದ್ದಾಗ ಪ್ರಕಟಿಸಲಾಯಿತು. ಒಂದು ದಶಕದ ನಂತರ ಅವರು ಇಸ್ಲಾಮಿಕ್ ಮೂಲಭೂತವಾದಿಗಳಿಂದ ಗಡಿಪಾರಿಗೆ ಒಳಗಾದರು. ಅವರು ಅಮೆರಿಕದಲ್ಲಿ ತಮ್ಮ ಜೀವನವನ್ನು ಮರಳಿ ಕಟ್ಟಿಕೊಂಡರು. ಅಲ್ಲಿ ಅವರು Man and Nature ಅಂತಹ ವಿಚಾರಗಳನ್ನು ಕುರಿತು ಬರೆಯುವ ಮೊದಲು ಇತರ ವಿಷಯಗಳ ಕುರಿತು ಪುಸ್ತಕಗಳನ್ನು ಪ್ರಕಟಿಸಿದರು. 1996ರಲ್ಲಿ ಪ್ರೊ.ನಾಸರ್ ಅವರು ‘Religion and the Order of Nature’ ಎಂಬ ಪುಸ್ತಕವನ್ನು ಹೊರತಂದರು. ಇದು ಆಧುನಿಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜಾತ್ಯತೀತ ಮಾನವತಾವಾದದ ಉದಯ ಮತ್ತು ಐಹಿಕ ಮನುಷ್ಯನ ನಿರಂಕುಶತ್ವ ಮನುಷ್ಯ ಮತ್ತು ನೈಸರ್ಗಿಕ ಇತಿಹಾಸ ಎರಡರ ಮೇಲೂ ಲೆಕ್ಕಿಸಲಾಗದಷ್ಟು ಪರಿಣಾಮಗಳನ್ನು ಬೀರಿರುವುದಾಗಿ ವಾದಿಸುತ್ತದೆ. ಸಂಪತ್ತನ್ನು ಗಳಿಸಲು ಅಥವಾ ಇತರ ನಾಗರಿಕತೆಗಳನ್ನು ವಶಪಡಿಸಿಕೊಳ್ಳಲು ಅಥವಾ ಎರಡನ್ನೂ ಸಾಧಿಸಲು ಪ್ರಕೃತಿಯನ್ನು ನಿಗ್ರಹಿಸುವ ಉದ್ದೇಶದಿಂದ ಪ್ರಕೃತಿ ಮತ್ತು ಅದರ ಶಕ್ತಿಗಳ ಪ್ರಾಬಲ್ಯದ ಮೇಲೆ ಇನ್ನು ಮುಂದೆ ಯಾವುದೇ ಧಾರ್ಮಿಕ ನಿರ್ಬಂಧವಿರುವುದಿಲ್ಲ ಎನ್ನುತ್ತದೆ. ಅವರು ಗಮನಿಸಿದಂತೆ, ‘‘ಮಾನವ ಸಮಾಜವು ಪ್ರಕೃತಿಯ ಪವಿತ್ರತೆಯ ಸಾರ್ವತ್ರಿಕ ದೃಷ್ಟಿಕೋನದಿಂದ ದೂರ ಸರಿದಿದೆ. ಅದು ಮನುಷ್ಯನನ್ನು ಪ್ರಕೃತಿಯಿಂದ ವಿಮುಖನನ್ನಾಗಿ ನೋಡುತ್ತದೆ ಮತ್ತು ಪ್ರಕೃತಿಯೇ ಸ್ವತಃ ಇನ್ನು ಮುಂದೆ ಜೀವನದ ಮೂಲವಲ್ಲ. ಬದಲಿಗೆ ನಿರ್ಜೀವ ಸಮೂಹವಾಗಿದೆ. ಸಂಪೂರ್ಣವಾಗಿ ಐಹಿಕ ಮನುಷ್ಯನ ಪ್ರಾಬಲ್ಯಕ್ಕೆ ಸಿಲುಕುತ್ತದೆ ಮತ್ತು ಬದಲಾಗುತ್ತದೆ.’’

‘Religion and the Order of Nature’ ಪರಿಸರ ಬಿಕ್ಕಟ್ಟನ್ನು ಪರಿಹರಿಸಲು ವಿವಿಧ ಧಾರ್ಮಿಕ ಸಂಪ್ರದಾಯಗಳು ಏನು ಕೊಡುಗೆ ನೀಡಬಹುದು ಎಂಬುದರ ಮೌಲ್ಯಮಾಪನವನ್ನು ಮಂಡಿಸುತ್ತದೆ. ಪ್ರಕೃತಿಯ ಪವಿತ್ರತೆಯ ಹಂಚಿಕೆಯ ದೃಷ್ಟಿಕೋನದ ಆಧಾರದ ಮೇಲೆ ಭೂಮಿಯ ಮೇಲೆ ಉಂಟಾದ ಗಾಯಗಳನ್ನು ಗುಣಪಡಿಸಲು ಪ್ರಪಂಚದಾದ್ಯಂತದ ಧರ್ಮಗಳು ಪರಸ್ಪರ ಸಮೃದ್ಧಗೊಳಿಸುವ ಮತ್ತು ಸಹಕರಿಸುವ ಪರಿಸ್ಥಿತಿ ಎಂದು ನಾಸರ್ ಆಶಾದಾಯಕವಾಗಿ ಬರೆದಿದ್ದಾರೆ.

ಈ ವಿಧಾನವು ಇಂದಿನ ತಾಂತ್ರಿಕ ಆಶಾವಾದಿಗಳಿಗೆ ವಿರುದ್ಧವಾಗಿದೆ. ಅವರು ಪರಿಸರ ಬಿಕ್ಕಟ್ಟನ್ನು ಸೌರ, ಹೈಡ್ರೋಜನ್ ಮತ್ತು ಗಾಳಿಯಂತಹ ಹೊಸ ಇಂಧನ ಮೂಲಗಳಿಂದ ಪರಿಹರಿಸಬಹುದು, ಪೆಟ್ರೋಲ್‌ನಿಂದ ತುಂಬಿದ ಕಾರುಗಳಿಂದ ವಿದ್ಯುತ್ ಬ್ಯಾಟರಿಗಳೊಂದಿಗೆ ಚಲಿಸಬಲ್ಲ ಕಾರುಗಳಿಗೆ ಬದಲಿಸುವ ಮೂಲಕ ಬಗೆಹರಿಸಬಹುದು, ಕಾರ್ಬನ್ ಕ್ಯಾಪ್ಚರ್ ಮತ್ತು ಜಿಯೋ ಇಂಜಿನಿಯರಿಂಗ್ ಮೂಲಕ ನಿವಾರಿಸಬಹುದು ಎಂದು ನಂಬುತ್ತಾರೆ. ‘ಕ್ಲೈಮೇಟ್ ಕ್ಯಾಪಿಟಲಿಸಂ’ ಎಂಬ ಶೀರ್ಷಿಕೆಯಡಿಯಲ್ಲಿ ಈಗಷ್ಟೇ ಪ್ರಕಟವಾಗಿರುವ ಮತ್ತು ವಿಶ್ವದ ಕೆಲವು ಉನ್ನತ ಟೆಕ್ ಬಿಲಿಯನೇರ್‌ಗಳಿಂದ ಅನುಮೋದಿತವಾಗಿರುವ ಒಂದು ಪುಸ್ತಕ, ಮಾನವರು ಪ್ರಪಂಚದ ಪ್ರಬಲ ಆರ್ಥಿಕ ವ್ಯವಸ್ಥೆಯಲ್ಲಿ (ಅಂದರೆ, ಬಂಡವಾಳಶಾಹಿ) ಹವಾಮಾನ ಬದಲಾವಣೆಯನ್ನು ನಿಭಾಯಿಸಬಹುದು ಮತ್ತು ಅದನ್ನು ಖಚಿತಪಡಿಸಿಕೊಳ್ಳಬಹುದು ಎಂದು ವಿಶ್ವಾಸದಿಂದ ಘೋಷಿಸುವ ಮೂಲಕ ಅಂತಹ ಆವಿಷ್ಕಾರಗಳನ್ನು ಬೆಂಬಲಿಸುತ್ತದೆ ಮತ್ತು ಪ್ರಗತಿಯ ಚಕ್ರಗಳು ನಿಲ್ಲುವುದಿಲ್ಲ ಎಂದು ನಿರೂಪಿಸುತ್ತದೆ.

ಮತ್ತೊಂದೆಡೆ ಪ್ರೊ.ನಾಸರ್ ಪರಿಸರ ಬಿಕ್ಕಟ್ಟಿನ ಮೂಲವಾಗಿ, ಕೆಟ್ಟ ಅಥವಾ ಕೆಟ್ಟದಾಗಿ ಅನ್ವಯಿಸುವ ತಂತ್ರಜ್ಞಾನಕ್ಕಿಂತ ಕೆಟ್ಟ ಆಲೋಚನೆಗಳನ್ನು ಗಮನಿಸುತ್ತಾರೆ. ‘‘ಪ್ರಸಕ್ತ ಸಂಕಟವು ಪ್ರಾಥಮಿಕವಾಗಿ ಪ್ರಕೃತಿಯ ಜ್ಞಾನದ ನಷ್ಟ ಮತ್ತು ಆಂತರಿಕ ಆಧ್ಯಾತ್ಮಿಕ ಬಿಕ್ಕಟ್ಟಿನ ಪರಿಣಾಮವಾಗಿದೆ ಮತ್ತು ಕೇವಲ ಕೆಟ್ಟ ಇಂಜಿನಿಯರಿಂಗ್‌ನ ಫಲಿತಾಂಶವಲ್ಲ.’’

ನಾನು ಎರಡೂ ವಿಧಾನಗಳ ಬಗ್ಗೆ ಸಹಾನುಭೂತಿ ಹೊಂದಿದ್ದೇನೆ. ಆದರೆ ಎರಡನ್ನೂ ಭಾಗಶಃ ಪರಿಗಣಿಸುತ್ತೇನೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ಆವಿಷ್ಕಾರಗಳನ್ನು ಮತ್ತು ಪ್ರಕೃತಿಯ ಕಡೆಗೆ ಹೆಚ್ಚು ಕಾಳಜಿಯುಳ್ಳ ವಿಧಾನಗಳನ್ನು ಸ್ವಾಗತಿಸಬೇಕು. ಆದರೆ ಖಂಡಿತವಾಗಿಯೂ ಜೀವನಶೈಲಿ ಸಹ ಮುಖ್ಯವಾಗಿದೆ. ಬಿಲಿಯನೇರ್‌ಗಳು ತಮ್ಮ ಖಾಸಗಿ ವಿಮಾನಗಳು, ಖಾಸಗಿ ವಿಹಾರ ನೌಕೆಗಳು, ಬಹು ಖಂಡಗಳಲ್ಲಿ ವ್ಯಾಪಿಸಿರುವ ಅವರ ಭವ್ಯವಾದ ಮನೆಗಳನ್ನು ಬಿಟ್ಟುಕೊಡದೆ ಹವಾಮಾನ ಬದಲಾವಣೆಯನ್ನು ನೋಡಲು ಬಯಸುತ್ತಾರೆ. ಅದೇ ಸಮಯದಲ್ಲಿ, ಸಮಕಾಲೀನ ಜಗತ್ತಿನಲ್ಲಿ ಧರ್ಮವು ಸೌಹಾರ್ದಕ್ಕಿಂತ ಹೆಚ್ಚಾಗಿ ಅಪಶ್ರುತಿಯ ಮೂಲವಾಗಿದೆ. ನಿರ್ದಿಷ್ಟ ವ್ಯಕ್ತಿಗಳು ತಮ್ಮ ನಂಬಿಕೆಯು ಅವರಿಗೆ ಏನು ಕಲಿಸುತ್ತದೆ ಎಂಬ ಕಾರಣದಿಂದ ಭೂಮಿಯ ಮೇಲೆ ಹೆಚ್ಚು ಮೃದುವಾಗಿ ನಡೆಯಬಹುದಾದರೂ, ಇತರರು ತಮ್ಮ ನಂಬಿಕೆಯನ್ನು ಹಿಂಸೆ ಮತ್ತು ಯುದ್ಧವನ್ನು ಉತ್ತೇಜಿಸುವ ರೀತಿಯಲ್ಲಿ ವ್ಯಾಖ್ಯಾನಿಸಲು ಒಲವು ತೋರುತ್ತಾರೆ. ಬುದ್ಧ, ಅಸ್ಸಿಸಿಯ ಫ್ರಾನ್ಸಿಸ್ ಮತ್ತು ಮಹಾತ್ಮಾ ಗಾಂಧಿಯವರು ತಮ್ಮ ನಂಬಿಕೆಯನ್ನು ಯಶಸ್ವಿಯಾಗಿ ಅರ್ಥೈಸಿದ ಕೆಲವೇ ಕೆಲವು ಧಾರ್ಮಿಕ ವ್ಯಕ್ತಿಗಳು. ಅವರು ಪರಿಸರದ ಜವಾಬ್ದಾರಿಯುತ ನೀತಿಯನ್ನು ಉತ್ತೇಜಿಸಲು ಏಕಕಾಲದಲ್ಲಿ ಪರಸ್ಪರ ಮತ್ತು ಅಂತರ ಕೋಮು ಸಹಿಷ್ಣುತೆಗಾಗಿ ಕೆಲಸ ಮಾಡಲು ತಮ್ಮ ನಂಬಿಕೆಯನ್ನು ಯಶಸ್ವಿಯಾಗಿ ಅರ್ಥೈಸಿಕೊಂಡವರು.

ತಾಂತ್ರಿಕ ಜಾಣ್ಮೆಯು ಮನುಷ್ಯರಾದ ನಮಗೆ ಹೆಚ್ಚು ಐಷಾರಾಮಿ ಜೀವನಶೈಲಿಯ ಭರವಸೆ ನೀಡುತ್ತದೆ ಎಂಬ ತಪ್ಪು ನಂಬಿಕೆಯಿಂದ ಪ್ರೊ.ನಾಸರ್ ದೂರ ನಿಲ್ಲುತ್ತಾರೆ. ಆಧ್ಯಾತ್ಮಿಕ ಬದಲಾವಣೆಗಾಗಿ ಅವರ ಕರೆ ಸಲ್ಲುವಂಥದ್ದಾಗಿದೆ. ಪ್ರಾಯಶಃ ಒಬ್ಬರು (ಸಾಂಪ್ರದಾಯಿಕ ಅರ್ಥದಲ್ಲಿ) ಧಾರ್ಮಿಕರಾಗಿರದೆಯೂ, ಪ್ರಕೃತಿಯನ್ನು ಗೌರವಿಸುವ ನೀತಿಯನ್ನು ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಳಕೆಯಲ್ಲಿ ಸಂಯಮವನ್ನು ಬೆಳೆಸಿಕೊಳ್ಳಬಹುದು. ಅಂತಿಮವಾಗಿ, ಪರಿಸರದ ಬಿಕ್ಕಟ್ಟನ್ನು ನಿಭಾಯಿಸಲು ಹೆಚ್ಚು ವಿಕೇಂದ್ರೀಕೃತ, ಹೆಚ್ಚು ಪಾರದರ್ಶಕ, ಹೆಚ್ಚು ಸರಿಯಾದ ಪ್ರಜಾಪ್ರಭುತ್ವದ ಪ್ರಾತಿನಿಧ್ಯ ಮತ್ತು ಆಡಳಿತದ ಕಡೆಗೆ ಮುಖಮಾಡುವ ಆಳವಾದ ಸಾಂಸ್ಥಿಕ ಬದಲಾವಣೆಗಳ ಅಗತ್ಯವಿರಬಹುದು. ಹೇಗೆ ಚುನಾವಣೆಗೆ ಹಣವನ್ನು ಒದಗಿಸಬೇಕು, ಹೇಗೆ ಚುನಾವಣೆಗಳನ್ನು ಎದುರಿಸಬೇಕು ಮತ್ತು ಗೆಲ್ಲಿಸಬೇಕು, ಆಡಳಿತ ಪಕ್ಷವು ಯಾವ ನೀತಿಗಳು ಮತ್ತು ಕಾನೂನುಗಳನ್ನು ಪ್ರಚಾರ ಮಾಡಬೇಕು, ಮಾಧ್ಯಮಗಳು ಏನು ಹೇಳಬೇಕು ಮತ್ತು ಯಾವುದನ್ನು ವರದಿ ಮಾಡಬಾರದು ಎಂದು ಕಲ್ಲಿದ್ದಲು ಮತ್ತು ಪೆಟ್ರೋಕೆಮಿಕಲ್ ಕುಳಗಳೇ ನಿರ್ಧರಿಸುವ ರಾಜಕೀಯ ವ್ಯವಸ್ಥೆಯು ಪರಿಸರದ ಹೊಣೆಗಾರಿಕೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಮಚಂದ್ರ ಗುಹಾ

contributor

Similar News