ವ್ಯಕ್ತಿಪೂಜೆ ಮತ್ತು ಸಮೂಹ ಸನ್ನಿ
ವ್ಯಕ್ತಿಪೂಜೆ ಮತ್ತು ಸಮೂಹ ಸನ್ನಿ ಈ ಎರಡೂ ಭಾರತದ ಸಾಮಾಜಿಕ-ಮಾನಸಿಕ ಆರೋಗ್ಯಕ್ಕೆ ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿರುವ ಮುಖ್ಯ ಅಂಶಗಳು. ಇವೆರಡನ್ನು ಮನೋವಿಜ್ಞಾನ, ವರ್ತನೆ ವಿಜ್ಞಾನ, ಸಮಾಜಶಾಸ್ತ್ರ, ರಾಜಕೀಯ ಮತ್ತು ದೇಶದ ಅಭಿವೃದ್ಧಿ-ಈ ಎಲ್ಲ ದೃಷ್ಟಿಕೋನಗಳಿಂದ ಸರಳವಾಗಿ ಆದರೆ ಆಳವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.
ಭಾರತದಲ್ಲಿ ಇಂದು ಎರಡು ಪ್ರಬಲ ಸಾಮಾಜಿಕ ಮತ್ತು ಸಂಕಲಿತ ಮನಸ್ಥಿತಿಗಳಾದ ಈ ಸಮಸ್ಯೆಗಳನ್ನು ರೋಗಗಳು ಎಂದೇ ಕರೆಯಬಹುದು. ಏಕೆಂದರೆ ಇವೆರಡೂ ಸಾಮಾನ್ಯ ಜನರ ಮನಸ್ಸನ್ನು ಈ ಹಿಂದೆ ನಿಧಾನವಾಗಿ ಆದರೆ ಈಗ ಬಹಳ ವೇಗವಾಗಿ ಮತ್ತು ಗಂಭೀರವಾಗಿ ಹಾಳುಮಾಡುತ್ತಿವೆ. ಸುಮ್ಮನೆ ಹಿಂದಕ್ಕೊಮ್ಮೆ ತಿರುಗಿ ನೋಡುತ್ತಾ, ಈಗಿನ ವಿದ್ಯಮಾನಗಳನ್ನು ಗಮನಿಸಿದರೆ, ಈ ವ್ಯಕ್ತಿಪೂಜೆ (Hero Worship) ಮತ್ತು ಮತ್ತೊಂದು, ಸಮೂಹ ಸನ್ನಿ, ಗುಂಪು ಮನಸ್ಥಿತಿ ಅಥವಾ ಗುಂಪು ಹಿಂಸಾತ್ಮಕ ವರ್ತನೆ (Mob Mentality) ಈ ಎರಡೂ ಸೇರಿ ಜನರನ್ನು ಚಿಂತನೆ ಮಾಡದವರನ್ನಾಗಿ, ವಾಸ್ತವ ಅಂಶಗಳನ್ನು ಪರಿಶೀಲನೆ ಮಾಡದವರನ್ನಾಗಿ, ಮತ್ತು ಭವಿಷ್ಯದ ಬಗ್ಗೆ ದೃಷ್ಟಿಯನ್ನು ಕಳೆದುಕೊಳ್ಳುವವರನ್ನಾಗಿ ಮಾಡುತ್ತಿವೆ.
ಈ ವಿಷಯವಾಗಿ ಮನೋವೈಜ್ಞಾನಿಕ ನೆಲೆಯಿಂದ ನೋಡುವುದಾದರೆ, ಮಾನವನ ಮೆದುಳು ಭದ್ರತೆಯನ್ನು ಹುಡುಕುತ್ತದೆ. ಒಬ್ಬ ‘ಹೀರೋ’ ಅಥವಾ ‘ನಾಯಕ’ ನಮ್ಮ ಪರವಾಗಿ ಯೋಚಿಸುತ್ತಾನೆ, ನಿರ್ಧಾರ ತೆಗೆದುಕೊಳ್ಳುತ್ತಾನೆ ಎನ್ನುವ ಭ್ರಮೆ ಜನರಿಗೆ ಆರಾಮ ಕೊಡುತ್ತದೆ. ಇದನ್ನು ‘Authority Bias’ ಎನ್ನುತ್ತಾರೆ. ಜೊತೆಗೆ Emotional Dependency ಉಂಟಾಗುತ್ತದೆ. ಅದರಿಂದಾಗಿ ತಮ್ಮ ಹೀರೋನನ್ನು ಪ್ರಶ್ನಿಸುವುದು ಎಂದರೆ ತನ್ನದೇ ಗುರುತನ್ನು ತಾನೇ ಪ್ರಶ್ನಿಸಿದಂತೆ ಆರಾಧಕರಿಗೆ ಅನ್ನಿಸುತ್ತದೆ. ಆದ್ದರಿಂದ ತರ್ಕಕ್ಕಿಂತ ಭಾವನೆ ಗೆಲ್ಲುತ್ತದೆ.
ಇದನ್ನು ವರ್ತನೆ ವಿಜ್ಞಾನ (Behavioural Science) ಪ್ರಕಾರ ನೋಡುವುದಾದರೆ, ಗುಂಪಿನಲ್ಲಿ ಇದ್ದಾಗ ವ್ಯಕ್ತಿಯ ವೈಯಕ್ತಿಕ ಜವಾಬ್ದಾರಿ ಕರಗುತ್ತದೆ. ಇದನ್ನು Deindividuation ಎಂದು ಕರೆಯುತ್ತಾರೆ.
ಒಬ್ಬನೇ ಇದ್ದರೆ ತಪ್ಪು ಅನ್ನಿಸುವುದು. ಗುಂಪಿನಲ್ಲಿ ಇದ್ದರೆ ‘‘ಎಲ್ಲರೂ ಮಾಡ್ತಿದ್ರು’’ ಎನ್ನುವ ನೆಪ. ಇದರಿಂದ ಆಗುವುದೇನು? ಸುಳ್ಳು ಸುದ್ದಿಯನ್ನು ನಂಬುವುದು, ಹಿಂಸಾತ್ಮಕ ಪ್ರತಿಕ್ರಿಯೆ ನೀಡುವುದು, ತಕ್ಷಣದ ಕೋಪ ಅಥವಾ ಹಠಾತ್ತನೆ ತಮ್ಮ ಪ್ರತಿಕ್ರಿಯೆನ್ನು ತೋರುವುದು, ದೀರ್ಘಕಾಲದ ಚಿಂತನೆಯಂತೂ ನಾಶವೇ ಆಗಿಬಿಡುತ್ತದೆ.
ಭಾರತದಲ್ಲಿ ಜಾತಿ, ಧರ್ಮ, ಭಾಷೆ, ಸಿನೆಮಾ, ರಾಜಕೀಯವೇ ಮೊದಲಾದ ಕಾರಣದಿಂದ ಹುಟ್ಟಿಕೊಳ್ಳುವ ವ್ಯಕ್ತಿಪೂಜೆ ಕೊನೆಗೊಳ್ಳುವುದು ಸಮೂಹ ಸನ್ನಿ ಮತ್ತು ಅದರ ಪರಿಣಾಮಗಳಿಂದ. ನಿಜ ಹೇಳಬೇಕೆಂದರೆ, ಇವೆಲ್ಲವೂ ಗುಂಪು ಗುರುತಿನ (Group Identity) ಆಧಾರದಲ್ಲೇ ಇರುತ್ತದೆ. ನಾನು ಈ ಜಾತಿ, ಅವರು ಆ ಧರ್ಮ, ಇದು ನಮ್ಮ ಭಾಷೆ, ಇವನು ನಮ್ಮ ನೆಚ್ಚಿನ ಹೀರೋ; ಹೀಗೆ ‘ನಾವು’ ಮತ್ತು ‘ಅವರು’ ಎಂಬ ವಿಭಜನೆಯಾಗುತ್ತದೆ. ಪ್ರಶ್ನೆ ಕೇಳುವವನು ಅವರ ಶತ್ರುವಾಗುತ್ತಾನೆ. ವಿಭಿನ್ನ ಅಭಿಪ್ರಾಯವನ್ನೇ ದ್ರೋಹ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಸಂವಾದದ ಸಂಸ್ಕೃತಿ (Culture of Dialogue) ನಾಶವಾಗುತ್ತದೆ.
ಇನ್ನು ಹೀರೋ ಆರಾಧನೆ ರಾಜಕೀಯದಲ್ಲಿ ಅತ್ಯಂತ ಅಪಾಯಕಾರಿ. ಸಿಕ್ಕಾಪಟ್ಟೆ ಬಿಲ್ಡಪ್ಪುಗಳಿಂದಲೇ, ಏನೇನೂ ಅರ್ಹತೆಗಳಿರದಿದ್ದರೂ ನಾಯಕ ದೇವರಾಗುತ್ತಾನೆ, ವ್ಯವಸ್ಥೆ ಅಪ್ರಸ್ತುತವಾಗುತ್ತದೆ, ಆ ರಾಜಕೀಯ ದೇವರು ಮಾಡುವ ನೀತಿಗಳು ಪ್ರಶ್ನೆಗೆ ಒಳಗಾಗುವುದಿಲ್ಲ. ಇದರಿಂದ ಸಾಮಾಜಿಕ ಸಂಸ್ಥೆಗಳು ದುರ್ಬಲವಾಗುತ್ತವೆ, ಸಂವಿಧಾನಕ್ಕಿಂತ ವ್ಯಕ್ತಿ ದೊಡ್ಡವನು ಆಗುತ್ತಾನೆ, ಜನರು ನಾಗರಿಕರಾಗುವುದಿಲ್ಲ, ಅನುಯಾಯಿಗಳಾಗುತ್ತಾರೆ, ಅಲ್ಲಿಗೆ ಪ್ರಜಾಪ್ರಭುತ್ವದಲ್ಲಿ ಇದು ಮರಣಮೃದಂಗವಾಗುತ್ತದೆ.
ಯಾವುದೇ ಪ್ರಗತಿಶೀಲ ದೇಶಗಳಿಗೆ ಬೇಕಾಗಿರುವುದು ವಿಮರ್ಶಾತ್ಮಕ ಚಿಂತನೆ, ವೈಜ್ಞಾನಿಕ ಮನೋಭಾವ, ವಾಸ್ತವಾಧಾರಿತ ನಿರ್ಧಾರ, ದೀರ್ಘಾವಧಿ ದೃಷ್ಟಿ. ಆದರೆ ವ್ಯಕ್ತಿಪೂಜೆ ಮತ್ತು ಸಮೂಹಸನ್ನಿ ಅಥವಾ ಗುಂಪು ಮನಸ್ಥಿತಿ ಇರುವ ಸಮಾಜದಲ್ಲಿ ಆಗುವುದೇನೆಂದರೆ, ಭಾವನೆ ಆಧಾರಿತ ನೀತಿಗಳು ವಿಜೃಂಭಿಸುತ್ತವೆ. ಜನರ ಭಾವುಕ ಅಂಶಗಳನ್ನು ಕೆರಳಿಸುವ, ಪ್ರೇರೇಪಿಸುವ ಕೆಲಸಗಳಾಗುತ್ತವೆ. ಅದರಿಂದ ತಾತ್ಕಾಲಿಕ ಗೆಲುವು ಖಂಡಿತ ಸಿಗುತ್ತದೆ. ಏಕೆಂದರೆ ವಿವೇಚನೆ ಮತ್ತು ವಿವೇಕಕ್ಕಿಂತ ತ್ವರಿತವಾಗಿ ಕೆಲಸ ಮಾಡುವುದು ಭಾವೋದ್ರೇಕಗಳೇ. ಆದರಿಂದ ಇದರಿಂದ ದೇಶದ ಪ್ರಗತಿಯ ವಿಷಯದಲ್ಲಿ ದೀರ್ಘಾವಧಿ ನಷ್ಟವಾಗಿ ಭವಿಷ್ಯದ ಪೀಳಿಗೆಗೆ ಸಹಿಸಲಾರದಷ್ಟು ಭಾರ ಬೀಳುವುದು.
ಭಾರತದಲ್ಲಿ ಕಾಣುವ ಕೆಲವು ಉದಾಹರಣೆಗಳನ್ನು ಗಮನಿಸಿ. ಸಿನೆಮಾ ನಟನ ಮಾತೇ ಸತ್ಯ ಎನ್ನುವ ಮನಸ್ಥಿತಿ, ವಾಟ್ಸ್ಆ್ಯಪ್ ಫಾರ್ವರ್ಡ್ಗಳನ್ನು ಪರಿಶೀಲನೆ ಇಲ್ಲದೆ ನಂಬುವುದು, ಪ್ರಶ್ನೆ ಕೇಳುವವರ ಮೇಲೆ ದೇಶದ್ರೋಹದ ಆರೋಪ, ಗುಂಪಿನಲ್ಲಿ ಹಿಂಸೆ, ಅತ್ಯಾಚಾರಗಳನ್ನು ಮಾಡಿದರೂ ಪಶ್ಚಾತ್ತಾಪ ಇಲ್ಲದಿರುವುದು; ಇವೆಲ್ಲವೂ ಚಿಂತನೆ ಸಾಯುತ್ತಿರುವ ಸೂಚನೆಗಳು.
ಸರಿ, ಇದಕ್ಕೆ ಪರಿಹಾರ ಏನು? ಸಿನೆಮಾ, ರಾಜಕೀಯ; ಯಾವುದೇ ಹೀರೋಗಳನ್ನು ಮೆಚ್ಚಬಹುದು. ಅವರ ಕಾರ್ಯಾಧಾರಿತವಾಗಿ ಟೀಕೆ ಮತ್ತು ಪ್ರಶಂಸೆಗಳನ್ನೂ ಮಾಡಬೇಕು. ಖಂಡಿತವಾಗಿ ಪೂಜಿಸಬಾರದು. ಗುಂಪಿನ ಭಾಗವಾಗಬಹುದು, ನಮ್ಮದು ಸಾಂಘಿಕ ಜೀವನ. ಅಗತ್ಯಗಳು ಬಂದಾಗ ಸಾಮೂಹಿಕವಾಗಿ ಒಗ್ಗಟ್ಟಾಗಬೇಕು. ಆದರೆ ಅದೇ ಗುಂಪಿನ ಗುಲಾಮರಾಗಬಾರದು. ಪ್ರಶ್ನೆ ಕೇಳುವುದು ದೇಶದ್ರೋಹವಲ್ಲ, ವಾಸ್ತವವಾಗಿ ಅದು ದೇಶಪ್ರೇಮ. ನಮ್ಮ ಈಗಿನ ಮತ್ತು ಮುಂದಿನ ಮಕ್ಕಳಿಗೆ ಭಕ್ತಿ ಅಲ್ಲ, ಚಿಂತನೆ ಕಲಿಸಬೇಕು.