ಪರೀಕ್ಷೆಯ ಆತಂಕ
ಪರೀಕ್ಷೆ ಸಮಯ ಬಂದಾಗ ಮಕ್ಕಳ ಕೈಯಲ್ಲಿ ಪುಸ್ತಕವೇನೋ ಇರುತ್ತದೆ. ಆದರೆ ಅವರ ಮನಸ್ಸಿನಲ್ಲಿ ಇರುವುದು ಪೋಷಕರ ಮತ್ತು ಶಿಕ್ಷಕರ ನಿರೀಕ್ಷೆ, ಅವರ ಭಯ ಮತ್ತು ಒತ್ತಡ. ಪೋಷಕರು ಮತ್ತು ಶಿಕ್ಷಕರಿಬ್ಬರೂ ಒಂದು ವಿಷಯದ ಬಗ್ಗೆ ಗಮನಿಸಬೇಕು. ವಾಸ್ತವವಾಗಿ ಪರೀಕ್ಷೆ ಎಂಬುದು ಮಕ್ಕಳ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಆದರೆ ಪೋಷಕರ ಮತ್ತು ಶಿಕ್ಷಕರ ಧೋರಣೆ ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ. ಅದರಲ್ಲಿಯೂ ಪೋಷಕರು ಮೊದಲು ಗಮನಿಸಬೇಕಾದುದು ಅವರ ಮಕ್ಕಳ ಮನಸ್ಸು.
ಪರೀಕ್ಷೆಯ ಸಮಯದಲ್ಲಿ ಮಕ್ಕಳ ಮೆದುಳು ಓದುವುದಕ್ಕಿಂತ ಹೆಚ್ಚು ಫೇಲ್ ಆದರೆ?, ಅಪ್ಪ-ಅಮ್ಮ ಏನು ಹೇಳುತ್ತಾರೆ? ಅನ್ನೋದರಲ್ಲಿ ತೊಡಗಿರುತ್ತದೆ. ಪೋಷಕರು ತಮ್ಮಲ್ಲಿ ತಾವು ಕೇಳಿಕೊಳ್ಳಬೇಕಾದ ಪ್ರಶ್ನೆಯೇನೆಂದರೆ, ‘‘ನಾನು ನನ್ನ ಮಗುವಿನ ಮನಸ್ಸಿಗೆ ಶಾಂತಿ ಕೊಡ್ತಿದ್ದೀನಾ? ಅಥವಾ ನನ್ನ ಆತಂಕವನ್ನು ಅವನ ಮೇಲೆ ಹಾಕ್ತಿದ್ದೀನಾ?’’
ಪರೀಕ್ಷೆಗೆ ಸಿದ್ಧವಾಗುತ್ತಿರುವಂತಹ ವಿದ್ಯಾರ್ಥಿಗಳಿಗೆ ಆಗ ಬೇಕಾಗಿರುವುದು ಭಾವನಾತ್ಮಕ ಬೆಂಬಲ, ಅದು ಪೋಷಕರ ಮಾತಿನಲ್ಲಿ ಮತ್ತು ಮೌನದಲ್ಲಿಯೂ ಕೂಡಾ. ಪೋಷಕರ ಒಂದು ಮಾತು ಮಗುವಿನ ಆತ್ಮವಿಶ್ವಾಸವನ್ನು ಕಟ್ಟಬಹುದು ಅಥವಾ ಸಂಪೂರ್ಣ ಕುಸಿಯಿಸಬಹುದು. ‘‘ಇಷ್ಟೇನಾ ಓದಿರೋದು?’’ ಅಥವಾ ‘‘ಇಷ್ಟೇ ಇಷ್ಟು ಓದಿದ್ದೀಯಾ? ಇವತ್ತು ಕೂಡ ಫೋನ್ ಹಿಡಿದಿದ್ದೀಯಾ?’’ ಎನ್ನುವ ಬದಲಿಗೆ, ‘‘ನಿನ್ನ ಶ್ರಮ ನನಗೆ ಕಾಣ್ತಿದೆ. ನೀನು ಪ್ರಯತ್ನ ಮಾಡ್ತಿದ್ದೀಯಲ್ಲ, ಅದೇ ಸಾಕು’’ ಎನ್ನುವ ಮಾತುಗಳು ಅವರಲ್ಲಿ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತದೆ. ಕೆಲವೊಮ್ಮೆ ಉಪದೇಶಕ್ಕಿಂತ ಒಂದು ಮೌನದ ಅಪ್ಪುಗೆ ಹೆಚ್ಚು ಮಾನಸಿಕ ಮತ್ತು ಭಾವನಾತ್ಮಕ ಅಗತ್ಯವಾಗಿರುತ್ತದೆ.
ಮಕ್ಕಳು ಪರೀಕ್ಷೆಗೆ ತಯಾರಾಗುವ ಸಮಯದಲ್ಲಿ ಒತ್ತಡ ಮತ್ತು ಆತಂಕ ಹೆಚ್ಚಾದರೆ ಅವರ ನಕಾರಾತ್ಮಕ ಭಾವನೆಗಳನ್ನು ಸರಿಪಡಿಸುವ ಹೊಣೆ ಪೋಷಕರದೇ ಆಗಿರುತ್ತದೆ. ಆಗ ಮಕ್ಕಳು ಅಳಬಹುದು, ಕೋಪ ತೋರಿಸಬಹುದು, ಮಾತಾಡದೇ ಇರಬಹುದು. ಅದು ಹಠವಾಗಿರುವುದಿಲ್ಲ. ಬದಲಿಗೆ ಅದು ಒತ್ತಡದ ಲಕ್ಷಣವಾಗಿರುತ್ತದೆ. ಅಂತಹ ಸಮಯದಲ್ಲಿ ಪೋಷಕರು ಮಕ್ಕಳಲ್ಲಿ ಸಾವಧಾನವಾಗಿ ಕೇಳಬೇಕು. ‘‘ನಿನಗೆ ಓದೋದು ಕಷ್ಟವಾಗ್ತಿದೆಯಾ ಅಥವಾ ಮನಸ್ಸು ಭಾರವಾಗಿದೆಯಾ?’’ ಈ ಪ್ರಶ್ನೆ ಮಗುವಿಗೆ ನಾನು ಒಂಟಿ ಅಲ್ಲ ಎನ್ನುವ ಭರವಸೆ ಕೊಡುತ್ತದೆ.
ನಿಜ ಹೇಳಬೇಕೆಂದರೆ ಪೋಷಕರು ತಮ್ಮ ಭಾಷೆಯ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು. ಏಕೆಂದರೆ, ಮಕ್ಕಳು ನಮ್ಮ ಮಾತನ್ನಲ್ಲ, ನಮ್ಮ ಧ್ವನಿಯನ್ನು ಹೆಚ್ಚು ನೆನಪಿಟ್ಟುಕೊಳ್ಳುತ್ತಾರೆ. ನಮ್ಮದು ಶಾಂತ ಧ್ವನಿಯಾಗಿದ್ದರೆ ಅದು ಮಕ್ಕಳಿಗೆ ಸುರಕ್ಷಿತ ಮನಸ್ಸನ್ನು ಹೊಂದಲು ನೆರವಾಗುತ್ತದೆ. ಅದೇ ನಮ್ಮದು ಕಟು ಧ್ವನಿ ಆದರೆ ನಮ್ಮಿಂದ ಮುಚ್ಚಿಕೊಳ್ಳುವ ಮನಸ್ಸು ಅವರದಾಗುತ್ತದೆ.
ಪರೀಕ್ಷೆ ಸಮಯದಲ್ಲಿ ಮನೆಯೇ ಪರೀಕ್ಷಾ ಕೇಂದ್ರದಂತೆ ಆಗಬಾರದು. ಮನೆ ಎಂಬುದು ಅವರ ವಿಶ್ರಾಂತಿಯ ಮತ್ತು ಭರವಸೆಯ ಆಧಾರದ ಸ್ಥಳ ಆಗಬೇಕು. ನಮ್ಮ ಮಗುವಿನ ಜೀವನದಲ್ಲಿ ಈ ಪರೀಕ್ಷೆ ಒಂದು ಪುಟ ಮಾತ್ರ. ಆದರೆ ಈ ಸಮಯದಲ್ಲಿ ನಾವು ತೋರಿಸುವ ಪ್ರೀತಿ, ಸಹನೆ ಮತ್ತು ನಂಬಿಕೆ ಮಗುವಿನ ಜೀವನಪೂರ್ತಿ ಉಳಿಯುವ ಅಧ್ಯಾಯವಾಗುತ್ತದೆ.
ಮಗುವಿಗೆ ಬೇಕಾಗಿರುವುದು ಶಾಲೆ ಕೊಡುವ ಅಂಕವಲ್ಲ. ತನ್ನ ಜೀವಕ್ಕೆ ಮತ್ತು ಜೀವನಕ್ಕೆ ಪೋಷಕರು ಕೊಡುವ ಮೌಲ್ಯ. ಪೋಷಕರ ಧೋರಣೆ ಮಗುವಿಗೆ ಚೈತನ್ಯವನ್ನು ನೀಡುವುದು. ಪರೀಕ್ಷೆಗೆ ನೀನು ಹೋಗುತ್ತೀಯ. ಆದರೆ ಪರೀಕ್ಷೆ ನಿನ್ನನ್ನು ಅಳೆಯಲು ಬಂದಿಲ್ಲ ಎನ್ನುವಂತಿರಬೇಕು. ಮೊದಲು ಮಗುವಿನ ಮನಸ್ಸನ್ನು ಸಿದ್ಧಪಡಿಸುವುದು ಮುಖ್ಯ. ಮಗುವು ಎಲ್ಲವನ್ನೂ ನೆನಪಿಟ್ಟುಕೊಳ್ಳಬೇಕು ಅಂತಿಲ್ಲ. ಅದು ಓದಿದ್ದಷ್ಟು ಶಾಂತವಾಗಿ ಬರೆಯಬೇಕು - ಅಷ್ಟೇ.
ಮಗುವಿನ ಮನಸ್ಸಿಗೆ ಹಿತವಾದ ವಾತಾವರಣವನ್ನು ಸೃಷ್ಟಿಸಿದರೆ, ಆ ಮೂಲಕ ಮಗುವು ಭಾವನಾತ್ಮಕವಾಗಿ ಒತ್ತಡಕ್ಕೆ ಒಳಗಾಗದಿದ್ದರೆ ಅಂತಹ ವಿಶ್ರಾಂತಿ ಸ್ಥಿತಿಯಲ್ಲಿ ಹೆಚ್ಚು ಗ್ರಹಿಸಲು ಸಾಧ್ಯವಾಗುತ್ತದೆ. ಫಲಿತಾಂಶದ ಬಗ್ಗೆ ಭಯ ಇಲ್ಲದಿರಲು ಕೂಡಾ ಸಾಧ್ಯವಾಗುತ್ತದೆ.
ಎಷ್ಟೋ ಜನ ಪೋಷಕರು ‘‘ಈ ಪರೀಕ್ಷೆ ನಿನ್ನ ಟರ್ನಿಂಗ್ ಪಾಯಿಂಟ್’’ ಎಂದು ಹೆದರಿಸುತ್ತಾರೆ. ಒಂದು ವರ್ಷ ವ್ಯರ್ಥವಾದರೆ ಎಂದು ಹೆದರುತ್ತಾರೆ. ಮಗುವಿನ ಜೀವ ಮತ್ತು ಜೀವನಕ್ಕಿಂತ ಯಾವ ಒಂದು ವರ್ಷವೂ ಅಥವಾ ಟರ್ನಿಂಗ್ ಪಾಯಿಂಟ್ ಏನೂ ಮುಖ್ಯವಲ್ಲ.
ಮತ್ತೊಂದು ವಿದ್ಯಾರ್ಥಿಯೊಂದಿಗೆ ಹೋಲಿಕೆ ಮತ್ತು ಸ್ಪರ್ಧೆ ಖಂಡಿತ ಉತ್ತಮ ಮನಸ್ಥಿತಿಯನ್ನು ಹೊಂದಲು ಬಿಡುವುದಿಲ್ಲ. ವೆಚ್ಚ ಮಾಡಿರುವ ಹಣ ವ್ಯರ್ಥವಾಗಬಾರದು, ತಮ್ಮ ಪ್ರತಿಷ್ಠೆ ಮತ್ತು ಗೌರವಕ್ಕೆ ಧಕ್ಕೆ ಬರಬಾರದು ಎಂಬೆಲ್ಲಾ ಆಲೋಚನೆಗಳು ಮಕ್ಕಳ ಸಕಾರಾತ್ಮಕ ಮನಸ್ಸಿಗೆ ಸಮಸ್ಯೆಯಾಗಿಯೇ ಕಾಡುತ್ತದೆ.
ಪರೀಕ್ಷೆಯ ಫಲಿತಾಂಶವೇನೇ ಆದರೂ ನಮಗೆ ನೀನು ಮತ್ತು ನಿನ್ನ ಸುರಕ್ಷತೆಯೇ ಮುಖ್ಯ ಎಂಬ ಪೋಷಕರ ಧೋರಣೆ ಮಗುವಿನ ಮಾನಸಿಕ ಶಕ್ತಿಯಾಗುತ್ತದೆ.