ಜಾತಿ ಮತ್ತು ಮಾನಸಿಕ ಆರೋಗ್ಯ

Update: 2024-01-14 07:22 GMT

ಮನುಷ್ಯ ಸಮಾಜದಲ್ಲಿನ ಯಾವುದೇ ಬಗೆಯ ವರ್ಗೀಕರಣ ವ್ಯಕ್ತಿಗಳ ಮನಸ್ಥಿತಿಯ ಮೇಲೆ ನೇರ ಮತ್ತು ಗಂಭೀರ ಪರಿಣಾಮ ಬೀರುತ್ತದೆ. ವ್ಯಕ್ತಿಯ ಮನೋಭಾವವನ್ನು ರೂಪಿಸುವ ಅಂತಹ ವರ್ಗೀಕರಣಗಳು ಆ ನಿರ್ದಿಷ್ಟ ವ್ಯಕ್ತಿಯ ನೋಡುವ ಕ್ರಮ, ಗ್ರಹಿಸುವ ಕ್ರಮ, ಪ್ರತಿಕ್ರಿಯಿಸುವ ಕ್ರಮ, ನಿರ್ಣಯಗಳನ್ನು ತೆಗೆದುಕೊಳ್ಳುವ ಕ್ರಮ ಮತ್ತು ಒಟ್ಟಾರೆ ಜೀವನ ಕ್ರಮದ ವಿಷಯದಲ್ಲಿ ಮಹತ್ತರ ಪಾತ್ರಗಳನ್ನು ವಹಿಸುವುದಲ್ಲದೆ ವ್ಯಕ್ತಿಯ ಅಂತರಂಗದ ಶಿಸ್ತಿನ ವಿಷಯದಲ್ಲಿ ಕೂಡಾ ತನ್ನ ಪ್ರಭಾವವನ್ನು ಬೀರುತ್ತದೆ.

ಆದ್ದರಿಂದಲೇ ಸಮಾಜದಲ್ಲಿ ಇರುವಂತಹ ಜಾತಿ, ಜನಾಂಗ, ವರ್ಗ, ಸಂಸ್ಕೃತಿಯೇ ಮೊದಲಾದ ವರ್ಗೀಕರಣಗಳು ವ್ಯಕ್ತಿಯ ಮಾನಸಿಕ ಸಮಸ್ಯೆ, ಮಿತಿ, ಪತನ ಮತ್ತು ಸಾಮರ್ಥ್ಯಗಳಿಗೂ ಕೂಡಾ ಕಾರಣವಾಗಬಲ್ಲವು.

ಚಿಕಿತ್ಸೆ ಅಥವಾ ಸಮಾಲೋಚನೆಯ ದೃಷ್ಟಿಯಿಂದಾದರೂ ಯಾವುದೇ ವ್ಯಕ್ತಿಯ ಮಾನಸಿಕ ಸಮಸ್ಯೆಗಳನ್ನು ಗಮನಿಸುವಾಗ ವ್ಯಕ್ತಿಯ ಮನಸ್ಸಿನ ಮೇಲೆ ಪರಿಣಾಮ ಬೀರಿರುವ ವಿಚಾರಗಳನ್ನು ಮತ್ತು ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಹಾಗೆಯೇ ಅವುಗಳು ಹುಟ್ಟಿಬಂದ ಮೂಲದ ಬಗ್ಗೆ ಕೂಡಾ ಅಧ್ಯಯನ ನಡೆಸಬೇಕಾಗುತ್ತದೆ. ಪ್ರಚೋದನೆ ಇಲ್ಲದೆ ಪರಿಣಾಮ ಇರುವುದಿಲ್ಲ.

ಖಿನ್ನತೆ, ಆತಂಕ, ಕುಸಿತ, ಗೀಳು; ಯಾವುದೇ ಆಗಲಿ ವ್ಯಕ್ತಿಗತವಾದ ತಾರತಮ್ಯಗಳಿಂದ ಆಗುವಂತೆಯೇ ಸಾಮಾಜಿಕ ತಾರತಮ್ಯಗಳಿಂದಲೂ ಆಗುತ್ತವೆ ಎಂಬುದು ನೇರ ಮತ್ತು ಸ್ಪಷ್ಟ.

ಬೇರೆ ದೇಶಗಳಲ್ಲಿಯೂ ಕಾಣಬಹುದಾದಂತಹ ವರ್ಗ, ಅಧಿಕಾರದ ತಾರತಮ್ಯದಂತೆಯೇ ನಮ್ಮ ದೇಶದ ಸಮಾಜದಲ್ಲಿಯೂ ಕೂಡಾ ವರ್ಗ, ಅಧಿಕಾರ, ಕಾಯಕ ಶ್ರೇಷ್ಠತೆಯೇ ಮೊದಲಾದ ತಾರತಮ್ಯಗಳಂತೆ ಜಾತಿಯ, ಸೈದ್ಧಾಂತಿಕ ಮತ್ತು ಧರ್ಮದ ತಾರತಮ್ಯಗಳೂ ಬಲವಾಗಿವೆ.

ಜಾತಿಯದಾಗಲಿ, ಆಚರಣೆ ಅಥವಾ ರೀತಿಯದಾಗಲಿ ಸಮಸ್ಯೆಯ ಮೂಲ ಒಂದೇ ಶ್ರೇಷ್ಠತೆಯ ಗೀಳು ಮತ್ತು ಮೂಲದ ಅಹಂ(ಕುಲಮದ). ಈ ಶ್ರೇಷ್ಠತೆಯ ವ್ಯಸನದ ಮತ್ತು ಕುಲಮದದ ಮನಸ್ಥಿತಿಗಳು ಸಮುದಾಯದಿಂದ ಸಮುದಾಯಕ್ಕೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಅನುಪಾತದಲ್ಲಿ ವ್ಯತ್ಯಾಸವಿವೆಯೇ ಹೊರತು ಇಲ್ಲದೇ ಇರುವಂತಹ ಉದಾಹರಣೆಗಳು ತೀರಾ ಕಡಿಮೆ.

ಸವರ್ಣೀಯರಲ್ಲಿ ಸಮಾಲೋಚನೆ ಮಾಡುವಾಗ ಅವರ ವೈಯಕ್ತಿಕ ಸಂಬಂಧ, ಕೌಟುಂಬಿಕ ಕಾರಣ ಪ್ರಮುಖವಾದರೆ, ಶೋಷಿತ ಜಾತಿ ಮತ್ತು ಧಾರ್ಮಿಕ ಹಿನ್ನೆಲೆಯ ಕುಟುಂಬದವರಿಗೆ ಅವುಗಳ ಜೊತೆಗೆ ಸಾಮಾಜಿಕ ತಾರತಮ್ಯದ ಕಾರಣಗಳೂ ಕೂಡಾ ಸಮಸ್ಯೆಯನ್ನು ಗಾಢಗೊಳಿಸುತ್ತವೆ.

ಒಟ್ಟಾರೆ ಸಮಾಲೋಚಕರು ವ್ಯಕ್ತಿಗತವಾಗಿ ಮತ್ತು ವೃತ್ತಿಪರವಾಗಿ ಅದೆಷ್ಟೇ ಜಾತ್ಯತೀತರಾಗಿದ್ದರೂ ಜಾತಿ ಸಂವೇದನೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಮಾಲೋಚನೆಯನ್ನು ಮಾಡುವ ಅಗತ್ಯತೆ ಇರುತ್ತದೆ.

ಜಾತಿವಾದವನ್ನು ಗಮನಿಸುವುದಾದರೆ, ವ್ಯಕ್ತಿಯೊಬ್ಬನು ತನ್ನನ್ನು ತನ್ನ ಕುಲದಲ್ಲಿ ಅಥವಾ ಜಾತಿಯಲ್ಲಿ ಅಥವಾ ಧರ್ಮದಲ್ಲಿ ಗುರುತಿಸಿಕೊಂಡಿರುತ್ತಾನೆ. ತಾನು ಅದರಲ್ಲಿ ಹುಟ್ಟಿರುವುದರಿಂದಲೋ ಅಥವಾ ತಾತ್ವಿಕವಾಗಿ ಅಪ್ಪಿಕೊಂಡಿರುವುದರಿಂದಲೋ ತನ್ನ ವ್ಯಕ್ತಿಗತವಾದ ಗುರುತನ್ನು ಅದರೊಂದಿಗೇ ಸಮೀಕರಿಸಿಕೊಳ್ಳುವುದಕ್ಕಿಂತ ಮಿಗಿಲಾಗಿ ಒಂದೆನಿಸುವಷ್ಟರ ಮಟ್ಟಿಗೆ ತಾದ್ಯಾತ್ಮತೆಯನ್ನು ಹೊಂದಿರುತ್ತಾನೆ. ತನ್ನ ಕುಲ ಅಥವಾ ಧರ್ಮ ಅಥವಾ ಜಾತಿಯ ಮೇಲ್ಮೈ ವೈಯಕ್ತಿಕವಾಗಿ ಆತ್ಮರತಿಯನ್ನು (ನಾರ್ಸಿಸಿಸಂ) ಉಂಟು ಮಾಡುತ್ತದೆ. ಹಾಗೆಯೇ ಅದರ ವಿಮರ್ಶೆಯನ್ನು ವ್ಯಕ್ತಿಗತವಾಗಿ ಪರಿಗಣಿಸಿ ಕನಲುತ್ತಾನೆ. ವ್ಯಕ್ತಿಗತವಾದ ಅಪಮಾನವೆಂದೇ ಬಗೆಯುತ್ತಾನೆ. ಅವನ ಮನಸ್ಸಿನಲ್ಲಿ ಉದ್ವಿಗ್ನತೆ ಮತ್ತು ತಳಮಳ ಉಂಟಾಗುತ್ತದೆ. ಭಾವೋದ್ವೇಗಕ್ಕೆ ಒಳಗಾಗಿ ವೈಚಾರಿಕವಾಗಿ ವಿಶ್ಲೇಷಣೆಗಳನ್ನು ಮಾಡಲಾಗದೇ ತನಗೆ ತಿಳಿದ ರೀತಿಯಲ್ಲಿ ಆಕ್ರಮಣಗಳನ್ನು ಮಾಡಲು ತೊಡಗುತ್ತಾನೆ. ಅವನಲ್ಲಿ ಕ್ರಮವರಿತ ಅರಿವಾಗಲಿ, ಅಧ್ಯಯನವಾಗಲಿ, ಅನುಭವಗಳನ್ನು ಆಧರಿಸಿರುವ ಪ್ರಸಂಗಗಳಾಗಲಿ ಇರುವ ಅಗತ್ಯವಿರುವುದಿಲ್ಲ. ಆ ವ್ಯಕ್ತಿಯ ಆತಂಕ ಮತ್ತು ನೋವಿಗೆ ಕಾರಣ ವ್ಯಕ್ತಿಗತವಾಗಿ ಹೊಂದಿರುವ ತನ್ನ ಗುರುತಿನ (ಐಡೆಂಟಿಟಿ) ಘಾಸಿಯಾಗಿರುತ್ತದೆ. ವಿಮರ್ಶೆಗೆ ಮತ್ತು ವಿಶ್ಲೇಷಣೆಗೆ ಆಸ್ಪದವೇ ಅಲ್ಲಿರುವುದಿಲ್ಲ. ವ್ಯಕ್ತಿಗತವಾದ ಒಲವು, ನಿಲುವು ಮತ್ತು ನೋವುಗಳಷ್ಟೇ ಆ ವ್ಯಕ್ತಿಗೆ ಪ್ರಧಾನವಾಗಿರುತ್ತದೆ. ಆದರೆ ಅದೆಲ್ಲವನ್ನೂ ಸಮುದಾಯಕ್ಕೆ ಆರೋಪಿಸುತ್ತಾನೆ. ಇದೇ ಕೋಮುವಾದವೂ ಕೂಡಾ.

ಮೊದಲೇ ನಮ್ಮ ದೇಶದಲ್ಲಿ ಆಪ್ತ ಸಮಾಲೋಚನೆ ಮತ್ತು ಮಾನಸಿಕ ಆರೋಗ್ಯ ತಪಾಸಣೆಯ ಬಗ್ಗೆ ಗಂಭೀರವಾಗಿ ಯೋಚಿಸುವುದಿಲ್ಲ. ಆಪ್ತ ಸಮಾಲೋಚಕರ ಬಳಿಗೆ ಹೋಗುವುದರ ಬದಲು ಜ್ಯೋತಿಷಿ ಅಥವಾ ಸ್ವಾಮೀಜಿಗಳ ಬಳಿ ಹೋಗುತ್ತಾರೆ. ಮೆದುಳು ಮತ್ತು ನರವಿಜ್ಞಾನ ಸಂಸ್ಥೆಗಳಿಗೆ ಹೋಗುವ ಬದಲು ದೇವಸ್ಥಾನ, ದರ್ಗಾ ಮತ್ತು ಕ್ರೈಸ್ತರ ರೋಗ ನಿವಾರಣಾ ಪ್ರಾರ್ಥನಾ ಕೂಟಗಳಿಗೆ ಹೋಗುತ್ತಾರೆ. ಮನೋಚಿಕಿತ್ಸೆಗೆ ತಮ್ಮನ್ನು ಒಪ್ಪಿಸಿಕೊಳ್ಳುವುದಕ್ಕೆ ಪರ್ಯಾಯವನ್ನೇ ಹುಡುಕುತ್ತಾರೆಯೇ ಹೊರತು ತಮ್ಮನ್ನು ಮನೋರೋಗಿಗಳೆಂದು ಸಮಾಜಕ್ಕೆ ತೋರಲು ಇಷ್ಟಪಡುವುದಿಲ್ಲ. ಅದಕ್ಕೆ ಸಾಮಾಜಿಕ ಕಳಂಕಗಳೂ (ಸ್ಟಿಗ್ಮಾ) ಮುಖ್ಯ ಕಾರಣವಾಗಿರುತ್ತದೆ.

ಈಗಿನ ಪ್ರಜಾಪ್ರಭುತ್ವದ ಮತ್ತು ಸಾಂವಿಧಾನಿಕ ಆಳ್ವಿಕೆಯಲ್ಲಿ ಜಾತಿಯ ಕಾರಣದಿಂದ ಮಾನಸಿಕ ಒತ್ತಡಗಳಿಗೆ ಮತ್ತು ಖಿನ್ನತೆಗಳಿಗೆ ಒಳಗಾಗುವಂತಹ ವಾತಾವರಣಗಳಿವೆ.

ಉದಾಹರಿಸುವುದಾದರೆ, ಮೀಸಲಾತಿ ಪಡೆದಿರುವಂತಹ ತಮ್ಮ ಸಹಪಾಠಿಗಳನ್ನು ಅಥವಾ ಸಹೋದ್ಯೋಗಿಗಳನ್ನು ಇತರ ಜಾತಿಯವರು ನಡೆಸಿಕೊಳ್ಳುವ ರೀತಿ ಅಥವಾ ಅವರ ಕಲಿಕೆಯ ಮತ್ತು ಕೆಲಸದ ಗುಣಮಟ್ಟವನ್ನು ಅನುಮಾನಿಸುವ ಮತ್ತು ಅಪಮಾನಿಸುವ ರೀತಿ ಅಥವಾ ನೇರವಾಗಿ ಟೀಕಿಸದಿದ್ದರೂ ಅಸಹನೆ ಮತ್ತು ಅಸೂಯೆಗಳಿಂದ ತಮ್ಮ ಗುಂಪಿನೊಳಗೆ ಸೇರಿಸಿಕೊಳ್ಳದಿರುವುದು ಅಥವಾ ಒಬ್ಬಂಟಿಯನ್ನಾಗಿಸುವುದೇ ಮೊದಲಾದ ಚಟುವಟಿಕೆಗಳು ದಲಿತ ವಿದ್ಯಾರ್ಥಿ ಅಥವಾ ಕಾರ್ಮಿಕನ ಮಾನಸಿಕ ಸಮಸ್ಯೆಗೆ ಕಾರಣವಾಗುವಂತಹ ಪ್ರಭಾವಗಳನ್ನು ಬೀರುತ್ತವೆ.

ಜಾತ್ಯತೀತತೆಯನ್ನು ಒಪ್ಪುವ ಮತ್ತು ಅಪ್ಪುವ ವಿಷಯದಲ್ಲಿ ಕೂಡಾ ಜಾತಿಗ್ರಸ್ತ ಜನರ ಧೋರಣೆ ಭಿನ್ನವಾಗಿರುತ್ತದೆ. ಒಂದು ವೇಳೆ ಸವರ್ಣೀಯನು ಜಾತ್ಯತೀತನಾಗಿ ಆಲೋಚಿಸಿದರೆ, ಗುರುತಿಸಿಕೊಂಡರೆ ಮತ್ತು ಅದರಂತೆ ನಡೆದುಕೊಂಡರೆ ತನ್ನ ಜಾತಿಯ ಶ್ರೇಷ್ಠತೆಯನ್ನು ಧಿಕ್ಕರಿಸಿ ಕೆಳಗಿಳಿದು ಬಂದ ಔದಾರ್ಯವನ್ನು ಗುರುತಿಸುವುದರ ಮೂಲಕ ಆತನ ಜಾತ್ಯತೀತ ಮನಸ್ಥಿತಿಗೆ ಒಂದು ಮೌಲ್ಯವನ್ನು ಆರೋಪಿಸುತ್ತಾರೆ. ಅದೇ ರೀತಿ ದಲಿತನೋ ಅಥವಾ ಇನ್ನಾರೇ ಶೋಷಿತ ವರ್ಗದ ಸಮುದಾಯದವರೋ ತಮ್ಮನ್ನು ಜಾತ್ಯತೀತರಾಗಿ ಗುರುತಿಸಿಕೊಂಡು, ಅದನ್ನು ಆಚರಣೆಯಲ್ಲಿ ಮತ್ತು ಧೋರಣೆಯಲ್ಲಿ ಪ್ರಕಟಿಸಿಕೊಂಡರೆ ಜಾತಿಗ್ರಸ್ತ ಸಮಾಜವು ಅದನ್ನು ಮನ್ನಿಸುವುದಿಲ್ಲ. ಅದನ್ನು ವಿಶೇಷವೆಂದು ಪರಿಗಣಿಸದೇ, ಸ್ಥಾನದ ವಿಷಯದಲ್ಲೇ ಕೀಳಾಗಿರುವ ಕಾರಣದಿಂದ ಆ ಜಾತಿಯನ್ನು ತ್ಯಜಿಸುವುದರಲ್ಲಿ ಯಾವುದೇ ಮೌಲ್ಯವನ್ನು ಅವನಲ್ಲಿ ಕಾಣುವುದಿಲ್ಲ. ಈ ಜಾತಿಗ್ರಸ್ತ ಸಮಾಜದ ದೃಷ್ಟಿಯಲ್ಲಿ ಉತ್ತಮ ಜಾತ್ಯಸ್ತನು ತನ್ನ ಜಾತಿಯನ್ನು ತೊರೆಯುವ ಅವಕಾಶವಿದೆ. ಕೀಳು ಜಾತಿಯವನಿಗೆ ಜಾತಿಯನ್ನು ತೊರೆಯುವ ಅವಕಾಶವೇ ಇಲ್ಲ. ಇಂತಹ ಸಾಮಾಜಿಕ ಮನಸ್ಥಿತಿಯ ವ್ಯವಸ್ಥೆಯಲ್ಲಿ ಸಾಮುದಾಯಿಕವಾಗಿ ಗುರುತಿಸಲ್ಪಟ್ಟ ವ್ಯಕ್ತಿಗೆ ತೀವ್ರವಾದಂತಹ ಆಘಾತಗಳು ಮತ್ತು ಖಿನ್ನತೆಗಳು ಉಂಟಾಗುತ್ತವೆ. ಶೋಷಿತ ಸಮುದಾಯದವರು ಸಂಕಲಿತವಾಗಿ ಕೀಳರಿಮೆಗೆ ಒಳಗಾಗುವುದು ತೀರಾ ಸಾಮಾನ್ಯವಾಗಿರುತ್ತದೆ. ಒಟ್ಟಾರೆ ಜಾತಿ ಎಂಬ ವ್ಯವಸ್ಥೆಯು ಕೂಡಾ ಮಾನಸಿಕ ಅಸ್ವಸ್ಥತೆಗೆ ಒಂದು ಮುಖ್ಯ ಕಾರಣವೇ ಆಗಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ಮಧುರ ವಿಷ
ಮನೋಭವನ
ಕಿವಿಗೊಡೋಣ
ಜಡತೆಯ ರೋಗ