ಆಧುನಿಕ ಬದುಕಿನ ಭರಾಟೆಯಲ್ಲಿ ಯಾವುದು ಆದರ್ಶವಾಗಬೇಕಿತ್ತೋ ಅದು ನನೆಗುದಿಗೆ ಬಿದ್ದಿದೆ. ಜನರ ಅಸಭ್ಯ ಸ್ಪರ್ಧೆಯಲ್ಲಿ ಸೋತವರಿಗೆ ಯಾವ ಭವಿಷ್ಯವೂ ಇಲ್ಲ. ಆಳುವವರಿಗೆ, ಅಧಿಕಾರಿಗಳಿಗೆ, ಕೇಡಿನ ಜನರಿಗೆ, ಸಮಾಜವೆಂಬುದು ಒಂದು ನಾಟಕದ ವೇದಿಕೆಯಷ್ಟೇ ಆಗಿದೆ. ಪರಿಹಾರವೆಂದು ನಾವು ನೀಡುವ, ಪಡೆಯುವ ಮೊತ್ತವು ಪರಿಹಾರವಲ್ಲ; ಅದು ಅಪರಿಹಾರ್ಯಕ್ಕೆ ಶಾಸನಾತ್ಮಕ ಪ್ರಾಯಶ್ಚಿತ್ತ ಅಷ್ಟೇ. ಅದು ಸಂಕಟವನ್ನು ಅಳಿಸುವುದಿಲ್ಲ; ದುಃಖದ ಮಡುವನ್ನು ಸುಖದ ಮಡುವಾಗಿ ಮಾಡುವುದಿಲ್ಲ. ಭವಿಷ್ಯವನ್ನು ಹಸನು ಮಾಡುವುದೂ ಇಲ್ಲ.

ಕೊಡಗಿನ ಹೋಂಸ್ಟೇ ಒಂದರಲ್ಲಿ ನೌಕರನೊಬ್ಬನಿಂದ ವಿದೇಶಿ ಪ್ರವಾಸಿಗಳೊಬ್ಬಳ ಅತ್ಯಾಚಾರ ಆರೋಪದ ಸಂಬಂಧ ಪೊಲೀಸರಿಂದ 15 ದಿನಗಳ ಅಕ್ರಮ ಬಂಧನಕ್ಕೆ ಗುರಿಯಾದ ಅದರ ಮಾಲಕರು ತನಗೆ ಜಾಮೀನು ನೀಡಬೇಕೆಂದು ಮತ್ತು ತನ್ನ ಮೇಲಿನ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಸಲ್ಲಿಸಿದ ಅರ್ಜಿಯ ಪ್ರಕರಣವು ಈಚೆಗೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಮೆಟ್ಟಲೇರಿದಾಗ ನ್ಯಾಯಾಲಯವು ಆತನಿಗೆ ಜಾಮೀನು ನೀಡಿ ಆತನ ಬಂಧನವನ್ನು ಖಂಡಿಸಿ ಆತನಿಗೆ 5 ಲಕ್ಷ ರೂಪಾಯಿಗಳ ಪರಿಹಾರವನ್ನು ರಾಜ್ಯ ಸರಕಾರ ನೀಡಬೇಕೆಂದು ಆದೇಶಿಸಿತು. ಈ ಆದೇಶವನ್ನು ಸರಕಾರವು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತು. ಸರ್ವೋಚ್ಚ ನ್ಯಾಯಾಲಯವು ಸರಕಾರದ ಈ ಮೇಲ್ಮನವಿಯನ್ನು ತಿರಸ್ಕರಿಸಿ ಉಚ್ಚ ನ್ಯಾಯಾಲಯದ ಆದೇಶವನ್ನು ಪುರಸ್ಕರಿಸಿತು. ಈಗ ರಾಜ್ಯ ಸರಕಾರವು ಆ ವ್ಯಕ್ತಿಗೆ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಲೇಬೇಕಾಗಿದೆ. (ಪ್ರಕರಣವು ರದ್ದಾಗಿಲ್ಲ; ಆ ವಿಚಾರ ಬೇರೆ!)

ಇಲ್ಲಿ ಎರಡು ಪ್ರಶ್ನೆಗಳು ತಲೆದೋರಿವೆ: ಒಂದು, ಪ್ರಜೆಗಾದ ಅನಗತ್ಯ ಅನ್ಯಾಯಕ್ಕೆ, ತನ್ನ ಅಧಿಕಾರಿಯೊಬ್ಬ ಮಾಡಿದ ತಪ್ಪಿಗೆ ಮರುಗಬೇಕಾದದ್ದು ರಾಜ್ಯ ಸರಕಾರದ ಕರ್ತವ್ಯ. ಅದು ಕಲ್ಯಾಣ ರಾಜ್ಯದ ಧ್ಯೇಯೋದ್ದೇಶಗಳಲ್ಲಿ ಒಂದು. ಆದರೆ ಅದು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ನಿರ್ಧಾರವನ್ನು ಕೈಗೊಂಡಿತು. ರಾಜಕಾರಣದಲ್ಲಿ ಮತ್ತು ರಾಜ್ಯ ಆಯ-ವ್ಯಯದಲ್ಲಿ ಈ ಮೊತ್ತ ಏನೂ ಅಲ್ಲ. ಅದು ನ್ಯಾಯ ನಿರ್ಣಯದ ಹಾದಿಯಲ್ಲಿ ಸರಕಾರದ ಅಧಿಕಾರಿಗಳ ಸ್ವೇಚ್ಛೆ ಮತ್ತು ನಿರಂಕುಶ ನಡೆಗೆ ಅಲ್ಪ ಪ್ರಮಾಣದ ಕಡಿವಾಣ ಹಾಕುವ ಕ್ರಮ. ಈ ಮೇಲ್ಮನವಿಗೆ ಅದು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದೆಯೆಂದು ನಿಸ್ಸಂಶಯವಾಗಿ ಊಹಿಸಬಹುದು. ಹಾಗಾದರೆ ಈ ನಿರ್ಧಾರ ಯಾರದ್ದು? ಪ್ರಜೆಯೊಬ್ಬ ತಾನು ಸೋತ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸುವುದು ಆತನ ವೈಯಕ್ತಿಕ ನಿರ್ಧಾರ. ಸರಕಾರದ ಹಂತದಲ್ಲಿ ಇದು ಹೊಣೆಯರಿತು ನಡೆಸಬೇಕಾದ ಕ್ರಮ. ಕಲ್ಯಾಣರಾಜ್ಯದ ವ್ಯಾಪ್ತಿಯನ್ನು ಮೀರುವ ಅಥವಾ ಅದರ ಉದ್ದೇಶವನ್ನು ಉಲ್ಲಂಘಿಸುವ ನಿರ್ಧಾರವನ್ನು ಕೈಗೊಂಡ ವ್ಯಕ್ತಿಗೆ/ಸರಕಾರಕ್ಕೆ, ತಾನು ಹಾಗೆ ಮಾಡುವ ಮೂಲಕ ಅಹಂಕಾರಿ ಅಧಿಕಾರಿಯೊಬ್ಬನನ್ನು ರಕ್ಷಿಸುತ್ತಿದ್ದೇನೆಂಬ ಅರಿವು ಇರಬೇಕು. ಅದಿಲ್ಲದಿರುವುದು ಒಟ್ಟು ಆಡಳಿತದ ದೋಷವನ್ನು ತೋರಿಸುತ್ತದೆ.

ಎರಡನೆಯದೆಂದರೆ, ಈ ಹೋಂಸ್ಟೇಯ ಯಜಮಾನನಾದ ತಪ್ಪಿಗೆ ಒಬ್ಬ ಬಲಿಪಶುವಿನ ಬದುಕಿನಲ್ಲಿ 15 ದಿನಗಳ ಬಂಧನಕ್ಕೆ 5 ಲಕ್ಷ ರೂಪಾಯಿಗಳ ಮೊತ್ತ ನಿಜಕ್ಕೂ ಪರಿಹಾರವೇ? ಕ್ಷಣವೊಂದು ಯುಗವಾಗುವ ಬಂಧನದಿಂದ ಉಂಟಾದ ಭೀತಿ, ಮಾನಸಿಕ ತಲ್ಲಣ, ವ್ಯಾವಹಾರಿಕ ನಷ್ಟ, ಮಾನಹಾನಿ ಇವುಗಳಿಗೆ ಹೀಗೆ ಬೆಲೆಕಟ್ಟುವುದು ಸರಿಯೇ? ಅಥವಾ ಸಾಕೇ? ಮುಂತಾದ ಪ್ರಶ್ನೆಗಳು ಉದ್ಭವಿಸುತ್ತವೆ. ಹಣದ ಪರಿಹಾರವು ಇವ್ಯಾವುವನ್ನೂ ತುಂಬಿಕೊಡುವುದಿಲ್ಲ. ಆಗಿ ಹೋದ ಅಪರಿಹಾರ್ಯ ಘಟನೆಯನ್ನು ಪರಿಹರಿಸುವುದಿಲ್ಲ. ಇದೊಂದು ರೀತಿಯಲ್ಲಿ ಮುುಖಕ್ಕೆ ಉಗುಳಿ ಆನಂತರ ಅದನ್ನು ಒರೆಸಿಕೊಳ್ಳುವುದಕ್ಕೆ ಕರ್ಚಿಫ್ ನೀಡಿದಂತೆ. ಇಡೀ ವಿಚಾರವೇ ಒಂದು ಪ್ರಹಸನದಂತೆ ಸಮಾಜ, ಕಾಲ, ಇವುಗಳೆದುರು ದಾಟಿಹೋಗುತ್ತವೆ.

ಆದರೂ ಕಲ್ಲುಮುಳ್ಳುಗಳಿಂದ ಕೂಡಿದರೂ ಇದಕ್ಕಿಂತ ಉತ್ತಮ ಹಾದಿ ಬೇರೆ ಇಲ್ಲ. ಪ್ರಜಾಪ್ರಭುತ್ವವೇ ಹಾಗೆ: ಆಳುವವರ ಮತ್ತು ಅವರನ್ನು ಸಮರ್ಥಿಸುವ, ರಕ್ಷಿಸುವ ಅಧಿಕಾರಿಗಳ ಜೀವನಜಾಲ. ತಾರ್ಕಿಕವಾಗಿ ಯೋಚಿಸುವುದಾದರೆ ಈ ದಂಡವನ್ನು ಅಕ್ರಮ ಬಂಧನಕ್ಕೆ ಕಾರಣವಾದ ಅಧಿಕಾರಿಯಿಂದ ವಸೂಲು ಮಾಡಬೇಕು ಮತ್ತು ಆತನನ್ನೂ 15 ದಿನಗಳ ಕಾಲ ಬಂಧನದಲ್ಲಿಡಬೇಕು. ಅದು ಇನ್ನೊಂದು ತಪ್ಪಾಗುವುದಾದರೂ ಬಂಧನಕ್ಕೊಳಗಾದವನಿಗೆ ಸಮಾಧಾನ ತಂದೀತು. ಮಧ್ಯಪೂರ್ವ ದೇಶಗಳಲ್ಲಿ ರಕ್ತಧನ (blood-money) ಎಂಬುದಿದೆಯಲ್ಲ, ಹಾಗೆ! ಬಂಧನಕ್ಕೊಳಗಾದವನಿಗೆ ಅದರಿಂದ ಏನು ಲಾಭ? ಸ್ವಲ್ಪ ನೆಮ್ಮದಿ; ಆ ಅಧಿಕಾರಿ ಭವಿಷ್ಯದಲ್ಲಿ ಹೀಗೆ ಮಾಡಲಾರನೆಂಬ ಕ್ಷಣಿಕ ಭರವಸೆ. ಏಕೆಂದರೆ ಸರಕಾರದ ಸೇವೆಯಲ್ಲಿರುವವರಿಗೆ ಇದೆಲ್ಲ ಏನೂ ಅಲ್ಲ.

ಈ ಭರವಸೆ ವಾಸ್ತವವೇ? ಯಾವುದೇ ಕಾನೂನು ಬಂದರೂ ಸಮಾಜದೆಲ್ಲೆಡೆ ಭ್ರಷ್ಟಾಚಾರ, ಹಿಂಸೆ, ಅನೈತಿಕತೆ, ಅವ್ಯವಸ್ಥೆ, ಅಶಿಸ್ತು ಕಂಡುಬರುತ್ತಿದೆ. ಇವುಗಳಲ್ಲಿ ಮೊದಲನೆಯದು ಭ್ರಷ್ಟಾಚಾರವೆಂಬ ಒಂದು ಪಿಡುಗು. ದೇಶವನ್ನು ಕೊಳ್ಳೆ ಹೊಡೆಯುವ ತಂತ್ರ. ಹಿಂಸೆ ನಿತ್ಯದ ದಾರುಣತೆ. ಅನೈತಿಕತೆ ಒಂದು ತಲೆಮಾರನ್ನೇ ಸುಡುವಂತಹದ್ದು. ಕೊನೆಯವೆರಡು ಸಾಮಾಜಿಕ ಕ್ಷೋಭೆಯನ್ನು ಹುಟ್ಟುಹಾಕಬಹುದಾದರೂ ನೇರ ಪರಿಣಾಮವನ್ನು ತೋರಿಸಲಾರದು. ಇವೆಲ್ಲ ಜನಸಮೂಹದ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಆದರೆ ಇವುಗಳನ್ನು ಹೋಗಲಾಡಿಸುವುದು ಸಾಧ್ಯವಿಲ್ಲ ಅನ್ನುವುದಕ್ಕಿಂತಲೂ ಅಗತ್ಯವಿಲ್ಲವೆಂಬ ಸಿದ್ಧಾಂತಕ್ಕೆ ಸಮಾಜ ಮತ್ತು ಆಡಳಿತ ಬಂದಂತಿದೆ. ಆದ್ದರಿಂದ ಇವು ಎಗ್ಗಿಲ್ಲದೆ ಸಾಗುತ್ತಿವೆ.

ಬಹಳಷ್ಟು ಇಂತಹ ನೇರ ಮತ್ತು ಪರೋಕ್ಷ ಹಿಂಸಾ ಪ್ರಕರಣಗಳು ಪೊಲೀಸ್ ಮೂಲಕ ನ್ಯಾಯಾಲಯದ ಮೆಟ್ಟಲೇರುತ್ತವೆ. ಕ್ರೂರ, ಭಯಾನಕ ಅಪರಾಧಗಳು ಸಂಭವಿಸಿದಾಗ ಪೊಲೀಸರು ಎನ್‌ಕೌಂಟರ್ ಶಸ್ತ್ರಕ್ಕೆ ಶರಣುಹೋದದ್ದೂ ಉಂಟು. ಆಗೆಲ್ಲ ಸಮಾಜದ ಒಂದು ವರ್ಗವು ಇದನ್ನು ಮೆಚ್ಚಿಕೊಂಡರೆ, ಇನ್ನೊಂದು ವರ್ಗವು ಮಾನವಹಕ್ಕುಗಳ ನೆಪವನ್ನೋ ಕಾರಣವನ್ನೋ ಒಡ್ಡಿ ಇದು ಸರಿಯಲ್ಲವೆನ್ನುತ್ತದೆ.

ಆದರೆ ಸಮಾಜವು ಆಡಳಿತವೆಂಬ ಒಂದು ವ್ಯವಸ್ಥೆಯನ್ನು ನಿರ್ಮಿಸಿ ಅದನ್ನು ನಂಬಿಕೊಂಡಿದೆ. ಆಡಳಿತವು ವೈಯಕ್ತಿಕ ನಡತೆಗಳನ್ನು ಶಾಸನವಾಗಿಸಲು ಸಾಧ್ಯವಿಲ್ಲ. ಅದಕ್ಕಾಗಿ ಕೆಲವು ಕಟ್ಟುಪಾಡುಗಳನ್ನು ವಿಧಿಸಿದೆ. ಆದ್ದರಿಂದ ಆಡಳಿತದ ಭಾಗವಾಗಿ ಆಡಳಿತದ ಮಾತ್ರವಲ್ಲ ಒಟ್ಟಾರೆ ಸಾಮಾಜಿಕ ಅನ್ಯಾಯ, ಅಕ್ರಮಗಳಿಗೆ ಕಡಿವಾಣ ಹಾಕುವುದು ನ್ಯಾಯಾಲಯಗಳಿಗೆ ಮಾತ್ರ ಸಾಧ್ಯ.

ಕಾನೂನು ಮತ್ತು ನ್ಯಾಯಾಲಯಗಳು ಸೇಡಿನ ಕ್ರಮಗಳನ್ನು ಕೈಗೊಳ್ಳುವುದು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅಕ್ರಮಕ್ಕೆ ಅಕ್ರಮವೇ ಮದ್ದು ಎಂದಾದೀತು. ಕಣ್ಣಿಗೊಂದು ಕಣ್ಣು ಎಂದಾದರೆ ಇಡೀ ಜಗತ್ತೇ ಒಕ್ಕಣ್ಣರ ಸಾಮ್ರಾಜ್ಯವಾದೀತೆಂಬ ಗಾಂಧಿನುಡಿ ನೆನಪಾಗಬೇಕು.

ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎಂಬ ಮಾತು ಉದಾತ್ತವಾದೀತೇ ಹೊರತು ವಾಸ್ತವವಾಗಲಾರದು. ಏಕೆಂದರೆ ಸಮಾಜದಲ್ಲಿರುವ ಬಹಳಷ್ಟು ಜನರು ಕೇಡಿನ ಸಂತಾನಗಳೇ. ಅಕ್ರಮವೇ ದೇವರೆಂದು ನಂಬಿದವರು. ತಂದೆತಾಯಿಯರನ್ನು ಕೊಂದು ಬಳಿಕ ಅವಕಾಶ ಸಿಕ್ಕಿದರೆ ನ್ಯಾಯಾಲಯದಲ್ಲಿ ತಾನು ಅನಾಥ, ತಬ್ಬಲಿ ಎಂದೆಲ್ಲ ಕಾರಣ ಹೇಳಿ ಶಿಕ್ಷೆಯಿಂದ ವಿನಾಯಿತಿ ಕೇಳುವ ಜನರೇ ಹೆಚ್ಚು. ಆದ್ದರಿಂದ ಕಾನೂನು ಶಿಕ್ಷೆಯನ್ನು ಘೋಷಿಸಿದೆ.

ಆರಂಭದಲ್ಲಿ ಪ್ರಸ್ತಾವಿಸಿದ ಪ್ರಕರಣದಲ್ಲಿ ನ್ಯಾಯಾಲಯಗಳು ಹೋಂಸ್ಟೇ ಮಾಲಕರ ವಿರುದ್ಧದ ಪ್ರಕರಣವನ್ನು ಅವರ ಪಾಲಿಗಾದರೂ ರದ್ದು ಮಾಡಿಲ್ಲವೆಂಬುದು ಗಮನಿಸಬೇಕಾದ ಅಂಶ. ಅಂದರೆ ಆತ ತನ್ನ ನಿರ್ದೋಷತನವನ್ನು ಸಾಬೀತುಪಡಿಸಲು ಬಹಳ ಸಮಯ ಕಾಯಬೇಕು, ದುಡಿಯಬೇಕು.

ನಮ್ಮ ಜೈಲುಗಳಲ್ಲಿರುವವರಲ್ಲಿ ಅರ್ಧಾಂಶ ವಿಚಾರಣಾಧೀನ ಕೈದಿಗಳು. ಸಾವಿರ ಜನ ದೋಷಿಗಳು ಬಿಡುಗಡೆಯಾದರೂ ಚಿಂತೆಯಿಲ್ಲ, ಒಬ್ಬ ನಿರಪರಾಧಿಯೂ ಜೈಲಿನಲ್ಲಿ ನರಳಬಾರದು ಎಂಬುದು ನ್ಯಾಯನಿರ್ದೇಶನದ ಮುಖ್ಯ ತತ್ವ. ಆದರೆ ನಮ್ಮ ವ್ಯವಸ್ಥೆಯಲ್ಲಿ ನಿರಪರಾಧಿಯಾಗುವ ಹೊತ್ತಿಗೆ ಆತನ ಅರ್ಧ ಆಯುಷ್ಯ ಅಥವಾ ದೋಷಿಯಾದರೆ ಅನುಭವಿಸಬೇಕಾದ ಶಿಕ್ಷೆ ಸವೆದಿರುತ್ತದೆ. ಈ ಕಾರಣದಿಂದ ಆತ ಬಿಡುಗಡೆಯಾಗಿ ಬಂದರೂ ಸಮಾಜವು ಆತನನ್ನು ಸಂಶಯದಿಂದಲೇ ನೋಡಿ ಅವಮಾನಿಸುತ್ತದೆ. ಎಷ್ಟೇ ಭ್ರಷ್ಟನಾದ ವ್ಯಕ್ತಿಯಾದರೂ ಬಂಧಿಸಲ್ಪಡದಿದ್ದಲ್ಲಿ ಆತ ನಿರಪರಾಧಿಯೆಂದು ಸಮಾಜವು ಸಾಮಾನ್ಯವಾಗಿ ತಿಳಿಯುತ್ತದೆ. ಬಂಧನವೇ ದೋಷದ ಪ್ರಮುಖ ಸೂಚನೆ. ಹಸಿವು ತೀರಿಸಿಕೊಳ್ಳುವುದಕ್ಕಾಗಿ ಒಂದು ತುಂಡು ಬ್ರೆಡ್ ತಿಂದು ಸೆರೆಮನೆ ಸೇರಿದವನು ಅಕ್ಷಮ್ಯ; ಆದರೆ ಕೋಟಿಗಟ್ಟಲೆ ಹಣವನ್ನು ನುಂಗಿ ರಾಜಕಾರಣದ ಪ್ರಭಾವದಿಂದಾಗಿ ವೇದಿಕೆಯಲ್ಲಿರುವವನು ಕ್ಷಮ್ಯ. ಸಾರ್ವಜನಿಕವಾಗಿ ಮೆರೆಯುವವರು ಈ ಸುಖವನ್ನು ಅನುಭವಿಸುತ್ತಾರೆ.

ಪರಿಹಾರದ ಉದಾಹರಣೆಗಳು ನೂರಾರು ಇವೆ. ಈಚೆಗೆ ಸಾಮಾಜಿಕ ಕಾರ್ಯಕರ್ತೆಯೊಬ್ಬಳನ್ನು ಭದ್ರತೆಯ ನೆಪದಲ್ಲಿ ಬಂಧಿಸಿದ ಸರಕಾರಿ ಅಧಿಕಾರಿಯೊಬ್ಬರ ಕ್ರಮವನ್ನು ಅಲ್ಲಹಾಬಾದ್ ಉಚ್ಚ ನ್ಯಾಯಾಲಯವು ಛೀಮಾರಿ ಹಾಕಿ 5 ಲಕ್ಷ ರೂಪಾಯಿಗಳ ದಂಡ ವಿಧಿಸಿತು. ಆ ಕಾರ್ಯಕರ್ತೆಯ ಬಿಡುಗಡೆಗೆ ಆದೇಶಿಸಿತು. ಇದನ್ನು ಆಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ಸರ್ವೋಚ್ಚ ನ್ಯಾಯಾಲಯವು ವಿಳಂಬವಿಲ್ಲದೆಯೇ ಸದರಿ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಇದು ಸಾರ್ವಜನಿಕ ಚರ್ಚೆಗೆ ಒಳಗಾದ ತಕ್ಷಣ ಛೀಮಾರಿ ಮತ್ತು ದಂಡಕ್ಕಷ್ಟೇ ತನ್ನ ತಡೆಯಾಜ್ಞೆ ಎಂಬ ಮುಜುಗರದ ಸ್ಪಷ್ಟೀಕರಣವನ್ನು ನೀಡುವ ಪರಿಸ್ಥಿತಿಗೆ ಒಳಗಾಯಿತು. ಕಾಕತಾಳೀಯವೆಂಬಂತೆ ಆ ಅಧಿಕಾರಿ ಒಕ್ಕೂಟ ಸರಕಾರದ ಪರ ಬ್ಯಾಟ್ ಮಾಡುತ್ತಿರುವ ಸದ್ಯ ಭಾರೀ ಹಗರಣದ ಆರೋಪವನ್ನು ಹೊತ್ತಿರುವ ಮುಖ್ಯ ಚುನಾವಣಾ ಆಯುಕ್ತರ ಮಗಳು. ಆಕೆಯ (ಅ)ಕ್ರಮ ಮತ್ತು ಆಕೆ ಮುಖ್ಯ ಚುನಾವಣಾ ಆಯುಕ್ತರ ಮಗಳಾಗಿರುವುದು ಈಗ ಕಾಕತಾಳೀಯವಾಗಿ ಉಳಿದಿಲ್ಲ. ಇವೆಲ್ಲವೂ ಒಂದುಮಹಾ ಸಂಚಿನ ಭಾಗದಂತೆ ತೋರುತ್ತಿದೆ. ಆಕೆ ತೆರಬೇಕಾದ ದಂಡ ಒಂದು ಸಾಮಾಜಿಕ ಲೋಪದ ಭರ್ತಿಯ ಸಂಕೇತವೇ ಹೊರತು ಅನ್ಯಾಯವನ್ನು ನ್ಯಾಯವಾಗಿಸುವುದಿಲ್ಲ.

ಇಂತಹ ದಂಡ ಮತ್ತು ಅದರ ಶಮನ ಇವು ನಿತ್ಯ ನಡೆಯುತ್ತವಾದರೂ ಅವು ಸರಕಾರದ ಮತ್ತು ಅದರ ಅಧಿಕಾರಿಗಳ ಅಕ್ರಮಗಳನ್ನು ಸರಿಪಡಿಸಲು ಅಸಾಧ್ಯವಾಗಿದೆ. ದಿನಪತ್ರಿಕೆಗಳ ಸುದ್ದಿಯಂತೆ ದಿನಕ್ಕಲ್ಲದಿದ್ದರೂ ತಾತ್ಕಾಲಿಕವೆಂಬಂತೆ ಕಾಣುತ್ತಾರೆ. ಜನರೂ ಅಷ್ಟೇ; ನೆನಪನ್ನು ವಾಟ್ಸ್‌ಆ್ಯಪ್‌ನ ಅಳಿಯುವ ಸಂದೇಶ (disappearing message) ಗಳಂತೆ ತಮ್ಮ ಪ್ರಜ್ಞೆಯಿಂದ ಅಳಿಸಿಕೊಳ್ಳುತ್ತಾರೆ. ಒಂದು ವೇಳೆ ಉಳಿದರೂ ಆ ಅಧಿಕಾರಿಯ ಬದುಕಿನಲ್ಲಿ ಸ್ವಲ್ಪ ಕಾಲ, ಅಷ್ಟೇ.

ಪರಿಹಾರಗಳೆಂಬಂತೆ ನೀಡುವ ತೀರ್ಪುಗಳು ನಿಜಕ್ಕೂ ಪರಿಹಾರಗಳೇ? ವರ್ಷಾನುಗಟ್ಟಲೆ ಅಪರಾಧದ, ಅಪವಾದದ ಕಪ್ಪು ಕಲೆಯನ್ನು, ಕಳೆದುಕೊಂಡು ಬಂದಾಗ ಆತನಿಗೆ ಬದುಕಿನ ಅಮೂಲ್ಯ ಕ್ಷಣಗಳು, ಸಂಬಂಧಗಳು, ಉದ್ಯೋಗಗಳು, ಆದಾಯಗಳು, ಕಳೆದುಹೋಗುತ್ತವೆ. ಆತನ ಮನೆಯವರಿಗೆ ನಿತ್ಯ ಸಮಾಜದೆದುರು ತಲೆಯೆತ್ತಿ ನಡೆಯುವ ಅನುಕೂಲಗಳಿಲ್ಲ. ಜನರು ಅನಗತ್ಯ ಕುತೂಹಲಿಗಳಾಗಿರುವುದರಿಂದ, ತಮ್ಮ ಬಗ್ಗೆ ಚಿಂತಿಸುವುದಕ್ಕಿಂತ ಇತರರ ಬಗ್ಗೆಯೇ ಚಿಂತಿಸುವ ‘ನಿಸ್ವಾರ್ಥಿ’ಗಳಾಗಿರುವುದರಿಂದ, ಈ ಅಪರಾಧಿಗಳ, ಆಪಾದಿತರ, ಮಕ್ಕಳಂತೂ ವಿಷಣ್ಣವದನರಾಗುವ ಸಾಧ್ಯತೆಗಳೇ ಹೆಚ್ಚು. ಇವನ್ನು ಯಾವ ಸಮಾಜವೂ ಸರಕಾರವೂ ಒದಗಿಸಲು ಸಾಧ್ಯವಾಗುವ ವ್ಯವಸ್ಥೆಯೇ ನಮ್ಮಲ್ಲಿಲ್ಲ. ಬಂಧಿಸಲ್ಪಟ್ಟ ವ್ಯಕ್ತಿಗೆ ಸೆರೆಮನೆವಾಸದ ಸಂಬವೂ ಅವಮಾನದ ಸಂಕೇತವೇ.

ಎಲ್ಲ ಪರಿಹಾರದ ವ್ಯವಸ್ಥೆ ಇಂತಹ ಅಪವಾದಗಳನ್ನು ತರಬೇಕಾಗಿಲ್ಲ. ಉದಾಹರಣೆಗೆ ಮೋಟರ್ ವಾಹನ ಅಪಘಾತಗಲ್ಲಿ ಬಲಿಯಾದ ವ್ಯಕ್ತಿಯ ಅವಲಂಬಿತರಿಗೆ, ಗಾಯಗೊಂಡವರಿಗೆ, ಹಾಗೆಯೇ ಉದ್ದಿಮೆಗಳಲ್ಲಿ ಉದ್ಯೋಗಿಗಳಿಗೆ, ಕಾರ್ಮಿಕರಿಗೆ ಪರಿಹಾರ ನೀಡುವ ವ್ಯವಸ್ಥೆಯಿದೆ. ಕಾಡು ಮೃಗಗಳ ದಾಳಿಗೆ ತುತ್ತಾದವರಿಗೆ ಅರಣ್ಯ ಇಲಖೆ ನೀಡುವ ಪರಿಹಾರದಕತೆಯೂ ಇದೇ. ಆದರೆ ಇವು ಯಾರನ್ನಾದರೂ ಅಪಘಾತಪೂರ್ವ ಸ್ಥಿತಿಗೆ ತರಲು ಸಾಧ್ಯವೇ? ನಮ್ಮ ಕಾನೂನು ಪುಸ್ತಕಗಳಲ್ಲಿ, ನ್ಯಾಯಾಲಯಗಳ ತೀರ್ಪುಗಳಲ್ಲಿ, ಎಲ್ಲವೂ ಗಣಿತ ಪುಸ್ತಕದ ಅಣಕಗಳು. ಕೂಡಿಸು, ಕಳೆ, ಗುಣಿಸು, ಭಾಗಿಸುಗಳಲ್ಲಿ ಮನುಷ್ಯನ ಕಷ್ಟಗಳು ಅಡಗುತ್ತವೆ. ಇದನ್ನು ಪಡೆಯಬೇಕಾದರೆ ಆ ಜನರು ಪಡಬೇಕಾದ ಮುಜುಗರವು ಭಯಾನಕ. ಅತ್ಯಾಚಾರ ಪ್ರಕರಣಗಳಲ್ಲಿ ಬಲಿಯಾದವಳಿಗೆ ಸರಕಾರ, ನ್ಯಾಯಾಲಯಗಳು ನೀಡುವ ಪರಿಹಾರಗಳೂ ಹೀಗೆಯೇ. ಆಕೆಯ ಮಾನ ಮುಚ್ಚುವುದಿಲ್ಲ.

ವಾಸ್ತವದಲ್ಲಿ ಇವೆಲ್ಲವೂ ಅಲ್ಲದ, ಇಂತಹ ತಪ್ಪುಗಳು ಕಡಿಮೆಯಾಗುವ ಸುಖೀ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಹೆಗಲು ನೀಡಬೇಕು. ಆಧುನಿಕ ಬದುಕಿನ ಭರಾಟೆಯಲ್ಲಿ ಯಾವುದು ಆದರ್ಶವಾಗಬೇಕಿತ್ತೋ ಅದು ನನೆಗುದಿಗೆ ಬಿದ್ದಿದೆ. ಜನರ ಅಸಭ್ಯ ಸ್ಪರ್ಧೆಯಲ್ಲಿ ಸೋತವರಿಗೆ ಯಾವ ಭವಿಷ್ಯವೂ ಇಲ್ಲ. ಆಳುವವರಿಗೆ, ಅಧಿಕಾರಿಗಳಿಗೆ, ಕೇಡಿನ ಜನರಿಗೆ, ಸಮಾಜವೆಂಬುದು ಒಂದು ನಾಟಕದ ವೇದಿಕೆಯಷ್ಟೇ ಆಗಿದೆ. ಪರಿಹಾರವೆಂದು ನಾವು ನೀಡುವ, ಪಡೆಯುವ ಮೊತ್ತವು ಪರಿಹಾರವಲ್ಲ; ಅದು ಅಪರಿಹಾರ್ಯಕ್ಕೆ ಶಾಸನಾತ್ಮಕ ಪ್ರಾಯಶ್ಚಿತ್ತ ಅಷ್ಟೇ. ಅದು ಸಂಕಟವನ್ನು ಅಳಿಸುವುದಿಲ್ಲ; ದುಃಖದ ಮಡುವನ್ನು ಸುಖದ ಮಡುವಾಗಿ ಮಾಡುವುದಿಲ್ಲ. ಭವಿಷ್ಯವನ್ನು ಹಸನು ಮಾಡುವುದೂ ಇಲ್ಲ.

(ಅಂಕಣಕಾರರು ಸಾಹಿತಿ, ಹಿರಿಯ ವಕೀಲರು)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor