ಅಂಜಿಡದೆಂತಯ್ಯ

ನಿಂದೆಯೆಂಬುದು ಮನುಷ್ಯರ ಸಹಜ ಗುಣ. ಅದನ್ನು ಮೀರಿದರೆ ಎಲ್ಲರೂ ದೇವರಾಗಬಹುದು. ಮಾತು ಬರುವ ವರೆಗೆ ನಿಂದೆ ಇರದು. ಮಗು ನಗುತ್ತದೆ, ಅಳುತ್ತದೆ ಆದರೆ ಕೋಪ ಬಂದರೂ ನಿಂದಿಸದು. ಅಷ್ಟೇ ಅಲ್ಲ, ಮುಗ್ಧತೆಯು ಜೀವಿಯನ್ನು ಆವರಿಸಿರುವ ವರೆಗೆ ನಿಂದೆಯಿರದು. ದೇಹ, ಮನಸ್ಸು, ಬುದ್ಧಿ ಬೆಳೆದಂತೆಲ್ಲ ಮನುಷ್ಯನೆಂಬ ಜೀವಿಯನ್ನು ಆವರಿಸಿದ ಮುಗ್ಧತೆಯು ಕರಗುತ್ತದೆ. ರೇಷ್ಮೆದೊಗಲಿನ ಸಮಾಜ ಬೆತ್ತಲೆಯಾಗಿ ಕಾಣತೊಡಗುತ್ತದೆ. ವಿಷಾದ ಮಡುಗಟ್ಟದಿದ್ದರೂ ಮೋಡಗಟ್ಟುತ್ತದೆ. ಆಗ ನಿಂದೆ ಆರಂಭವಾಗುತ್ತದೆ. ಆರಂಭದಲ್ಲಿ ಸಂಶಯದಿಂದ, ಆನಂತರ ಮತ್ಸರದಿಂದ, ಕೊನೆಗೆ ಚಟದಿಂದ, ನಿಂದೆ ಬೆಳೆಯುತ್ತಲೇ ಇರುತ್ತದೆ.

Update: 2024-01-25 05:17 GMT

Photo: freepik

ವಚನಕಾರ್ತಿ ಅಕ್ಕಮಹಾದೇವಿ ಅಂಜುವುದಕ್ಕೆ ಬೇರೆಬೇರೆ ನಿದರ್ಶನಗಳನ್ನು ನೀಡುತ್ತಾಳೆ. ‘ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೊರೆಗಳಿಗಂಜಿದಡೆಂತಯ್ಯ ಸಂತೆಯಲೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ? (ಚೆನ್ನ ಮಲ್ಲಿಕಾರ್ಜುನದೇವ ಕೇಳಯ್ಯ, ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.)’

ಮೊದಲ ಎರಡು ಸಾಲುಗಳಲ್ಲಿ ಅಂಜಿಕೆಯ ಪ್ರಶ್ನೆ ಬಂದರೆ ಮೂರನೆಯ ಸಾಲಿನಲ್ಲಿ ನಾಚಿಕೆಯ ಪ್ರಶ್ನೆ ಬಂದಿದೆ. ಈ ಪದವೂ ಅಂಜಿಕೆಯೇ ಆಗಿದ್ದರೆ ತಪ್ಪೇನೂ ಆಗುತ್ತಿರಲಿಲ್ಲ. ಇರಲಿ; ವಚನಕಾರ್ತಿಯ ಮರ್ಜಿ ಅವಳಿಗೆ. ಅಂಜಿಕೆ ಮತ್ತು ನಾಚಿಕೆ ಇವುಗಳನ್ನು ಅಳುಕೆಂಬ ಅರ್ಥದಲ್ಲಿ ಅವಳು ಬಳಸಿರಬೇಕು! (ಇದನ್ನು ಸಮರ್ಥಿಸುವಂತೆ ‘ಅಂಜದೇ... ಅಳುಕದೇ...’ ಎಂಬ ಪದಗಳ ಒಂದು ಸಿನೆಮಾ ಹಾಡೂ ಇದೆ!)

ಮೊದಲ ನಿದರ್ಶನವನ್ನು ಯೋಚಿಸಿ: ಹೌದಲ್ಲ, ಬೆಟ್ಟದಾ ಮೇಲೊಂದು ಮನೆಯ ಮಾಡಿ.. ಆ ಕಾಲದಲ್ಲಿ ಮೃಗಗಳ ಸಂಖ್ಯೆ ಹೆಚ್ಚಿರಬೇಕು; ಅದಕ್ಕೇ ವಚನಕಾರ್ತಿ ಅದನ್ನು ಉದಾಹರಿಸಿದ್ದಾಳೆ. ಇಂದು ಬೆಟ್ಟದ ಮೇಲೆ ಮನೆ ಮಾಡಿದರೆ ಭೂಕುಸಿತಕ್ಕೆ ಅಂಜಬೇಕು.

ಹಾಗೆಯೇ ಎರಡನೇ ನಿದರ್ಶನ: ಸಮುದ್ರದ ತಡಿಯಲ್ಲೊಂದು ಮನೆಯ ಮಾಡಿದರೆ? ಆಗ ನೊರೆತೆರೆಯ ಸದ್ದು ಅಂಜಿಕೆಯನ್ನು ಹುಟ್ಟಿಸುತ್ತಿತ್ತು. ಈಗ ನೊರೆತೆರೆ ನೆರೆತೊರೆಯೆಂದರೂ ಇಂದು ತಪ್ಪಾಗಲಿಕ್ಕಿಲ್ಲ. ಏಕೆಂದರೆ ಬೆಟ್ಟಗುಡ್ಡಗಳಡಿ ಅದೆಷ್ಟು ನಿರ್ಜೀವಗಳಿವೆಯೋ ಗೊತ್ತಿಲ್ಲ; ಸುನಾಮಿ ಬಂದಾಗ ಎಲ್ಲರನ್ನೂ ಎಲ್ಲವನ್ನೂ ಕೊಚ್ಚಿಕೊಂಡು ಹೋದ ನಿದರ್ಶನಗಳಿವೆ. ಆದರೂ ಇಂದು ಸಮುದ್ರದ ತಡಿಯಲ್ಲಿ ಬಗಬಗೆಯ ವಿನ್ಯಾಸದ ಶ್ರೀಮಂತ ವಸತಿಗೃಹಗಳು, ಮೋಜಿನ ತಾಣಗಳು ಸೃಷ್ಟಿಯಾಗಿವೆ. ಮನುಷ್ಯ ವರ್ತಮಾನದಲ್ಲೇ ಬದುಕುತ್ತಿದ್ದಾನೆ, ಎಂದರ್ಥ.

ಮೂರನೆಯ ನಿದರ್ಶನ ಸಂತೆಯದ್ದು- ಶಬ್ದಗುಣ. ಅದನ್ನು ಸಹಿಸಲೇಬೇಕು. ಇಂದು ಎಲ್ಲ ಪೇಟೆಪಟ್ಟಣಗಳೂ ಸದ್ದಿನ ಪಟ್ಟಣಗಳೇ. ಆಗ ಮಾರುಕಟ್ಟೆ, ಮಾಲ್‌ಗಳಿರಲಿಲ್ಲ. ಈಗ ನಾಚುವುದಕ್ಕೇನಿದೆ, ಅಂಜುವುದಕ್ಕೇನಿದೆ? ಪ್ರಾಯಃ ಆ ಕಾಲದಲ್ಲಿ ಸಂತೆ ಒಂದು ಸುರಕ್ಷಿತ ತಾಣವಾಗಿತ್ತು. ಇಂದಿನಂತಿರಲಿಲ್ಲ. ಒಂದು ಗ್ರಾಮೀಣ ಸಮುದಾಯದ ಕೊಡುಕೊಳ್ಳುವಿಕೆಗೆ ಸಂತೆ ಒಂದು ಸಾಕ್ಷಿಯಾಗಿತ್ತು. ಮೂಕ ಸಾಕ್ಷಿಯಲ್ಲ; ಬದಲಾಗಿ ಶಬ್ದಸಾಕ್ಷಿ. ವಾಚಾಳಿ ಸಾಕ್ಷಿ. ಎಲ್ಲರೂ ಕೊಳ್ಳುವವರೇ ಮತ್ತು ಎಲ್ಲರೂ ಮಾರುವವರೇ. ಕೊನೆಗೆ ಅಕ್ಕ ಈ ಮೂರೂ ನಿದರ್ಶನಗಳ ತಾತ್ವಿಕ ಮತ್ತು ಅಮೂರ್ತ ಸ್ವರೂಪವನ್ನು ಚಿಂತಿಸಿದ್ದಾಳೆ: ಹುಟ್ಟು ನಮ್ಮ ನಿಯುಂತ್ರಣದಲ್ಲಿಲ್ಲ. ಸಾವು ನಮ್ಮ ಹೊಣೆಯೂ ಅಲ್ಲ. ಆದರೆ ಆನಂತರದ್ದು? ಸಾವಿನ ವರೆಗಿನ ಬದುಕು ನಮ್ಮದೇ ಹೊಣೆ. ಸಾವಿಗೂ ಕೆಲವೊಮ್ಮೆ ನಾವೇ ಹೊಣೆ. ಸಾವಿನ ಆನಂತರದ್ದು ಬದುಕಿದವರಿಗೆ ಗೊತ್ತಿರುವುದಿಲ್ಲ. ಅದು ಊಹೆ. ಕಲ್ಪನಾ ವಿಲಾಸ. ಬಹುಪಾಲು ಅರ್ಥವಿಲ್ಲದ್ದು, ಕೆಲವು ಬಾರಿ ಸ್ವಾರ್ಥಪರವಾದದ್ದು. (ಇಲ್ಲಿ ಭಾಷೆಯ ಬಳಕೆಯ ದೃಷ್ಟಿಯಿಂದ ಒಂದಂಶವನ್ನು ಗ್ರಹಿಸಬೇಕು. ಸ್ವಾರ್ಥಪರವೆಂಬ ಪದ ಕೆಲವೊಮ್ಮೆ ಚಿಂತನೆಗಳಿಗೆ ಅನ್ಯಾಯವೆಸಗುತ್ತದೆಯೆಂದು ನನಗನ್ನಿಸಿದ್ದಿದೆ: ಏಕೆಂದರೆ ಸ್ವಾರ್ಥವಿರೋಧಿಯೆಂಬ ಪದವಿಲ್ಲ. ನಿಸ್ವಾರ್ಥ, ಪರಮಾರ್ಥವೆಂಬುದಷ್ಟೇ ಇರುವುದು.)

ವಿಶೇಷವೆಂದರೆ ಎಲ್ಲ ಕಾಲದಲ್ಲೂ ಸ್ತುತಿ-ನಿಂದೆಗಳಿದ್ದವೆಂಬ ಅರಿವು ನಮ್ಮಲ್ಲಿ ಮೂಡಿಸಲು ಅಕ್ಕ ಶಕ್ತಳಾಗಿದ್ದಾಳೆ. ಇಂದು ನಮ್ಮ ಸಮಾಜದಲ್ಲಿ ಅದರಲ್ಲೂ ನೆರೆಹೊರೆಯವರಲ್ಲಿ ಪರಸ್ಪರ ಸ್ತುತಿಗಿಂತ ಹೆಚ್ಚು ನಿಂದೆಯೇ ಇರುತ್ತದೆ. ಅತೀ ಹೆಚ್ಚು ವಿವಾದಗಳು ನೆರೆಹೊರೆಯವರ ನಡುವೆಯೇ. ಸಮುದ್ರದ ನೊರೆತೆರೆಗಳೋ, ಪ್ರವಹಿಸುವ ನೀರಿನ ನೆರೆತೊರೆಗಳೋ ಇನ್ಯಾವುದೋ ಅಂಜಿಕೆಯನ್ನು ತಂದರೆ, ಇದು ನಾವೇ ಸೃಷ್ಟಿಸಿದ ಅಂಜಿಕೆ; ಅದಕ್ಕೇ ನಾಚಿಕೆ. ಈ ನೆರೆ ಹೊರೆಯಾಗದೆ ಕರೆಯಾಗುವುದು ಯಾವಾಗ ಎಂದು ನನಗನ್ನಿಸಿದ್ದಿದೆ.

ರಾಜರುಗಳು ನೆಲವನಾಳುವ ಕಾಲದಲ್ಲಿ ಸ್ತುತಿಪಾಠಕರಿದ್ದರೆಂದು ಕೇಳಿದ್ದೇವೆ. ಅವರ ಕೆಲಸ ನಿತ್ಯ ರಾಜನ ಸಾರ್ವಭೌಮತ್ವವನ್ನು ಒಪ್ಪಿಕೊಂಡು ಅದಕ್ಕನುಗುಣವಾಗಿ ಭೋಪರಾಕ್ ಎನ್ನುವುದು. ಇದು ಜನಪದ ಲಾವಣಿಯಿಂದ ಮೊದಲ್ಗೊಂಡು ರಾಜಭಾಷೆಯೆಂದಿದ್ದ ಮತ್ತು ಜನಸಾಮಾನ್ಯರು ಬಳಸದ ಪಂಡಿತರ ಸುಪರ್ದಿಯಲ್ಲಿದ್ದ ಭಾಷೆಯ ವರೆಗೆ ನಡೆಯುತ್ತಿತ್ತು. ಇದನ್ನು ನಿತ್ಯ ಕೇಳುವುದು ಹೇಗೆಂಬ ಬಗ್ಗೆ ನನಗೆ ಪ್ರಶ್ನೆಗಳೆದ್ದಿವೆ; ಉತ್ತರ ಇನ್ನೂ ಸಿಕ್ಕಿಲ್ಲ. ಸಿಹಿ ಎಷ್ಟು ಪ್ರೀತಿಯಾದರೂ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಅದನ್ನೇ ಉಣ್ಣಲು ಕೊಟ್ಟರೆ ರುಚಿಸೀತೆ? ಕೊನೆಗೆ ಅದನ್ನು ಎದುರಿಟ್ಟರೆ ಮಾತ್ರವಲ್ಲ, ಅದರ ಪರಿಮಳದ ವಿಚಾರ ಬಿಡಿ, ಚಿತ್ರವನ್ನು ಕಂಡರೆ ಸಾಕು, ವಾಕರಿಕೆ ಬರುವುದು ಖಚಿತ. ರಾಜನ ಕಿರೀಟವೋ ಮುಂಡಾಸೋ, ಪೇಟವೋ, ಟೋಪಿಯೋ ಅಂತೂ ಕಿವಿ ಮುಚ್ಚಿದರೆ ಆತ ಉಳಿದಾನು.

ಹೀಗೆ ಸ್ತುತಿಮಾಡುವವರಿಗೆ ವಂದಿ-ಮಾಗಧರೆಂದು ಹೇಳುತ್ತಿದ್ದರೆಂದು ಕೇಳಿದ್ದೇನೆ. ಇದಕ್ಕಾಗಿ ಅವರಿಗೆ ಸಂಬಳ ಸಿಗುತ್ತಿತ್ತು. ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ. ಒಂದು ಅನುಕೂಲವೆಂದರೆ ಹೀಗೆ ಸ್ತುತಿ ಮಾಡುವವರಿಗೆ ಕೆಟ್ಟದ್ದನ್ನು ಕೇಳಲು, ಜೀರ್ಣಿಸಿಕೊಳ್ಳಲು ಸಾಧ್ಯವಾಗದು. ನಿಂದೆಯನ್ನು ಅವರು ಮಾಡರು- ಕೊನೇ ಪಕ್ಷ ತಮ್ಮ ಉದ್ಯೋಗದಲ್ಲಿ. ‘ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಮಾತನಾಡಬೇಡ’ ಎಂಬ ಗಾಂಧೀಜಿಯ ಮೂರು ಮಂಗಗಳು ಇಂತಹ ಸ್ತುತಿಪಾಠಕರ ಅವತಾರಗಳೇನೋ ಅಥವಾ ರೂಪಕಗಳೇನೋ ಅನ್ನಿಸದಿರದು. ಆದರೂ ಸ್ತುತಿಪಾಠಕರು ಉದ್ಯೋಗದ ಹೊರತು ನಿಂದನಾ ಗುಣವನ್ನು ಹೊಂದಿದ್ದರೆ ಅದನ್ನು ಮನುಷ್ಯಸಹಜವೆಂದು ತಿಳಿಯಬೇಕೇ ಹೊರತು ದುರ್ಗುಣವೆಂದು ಬಗೆಯಬಾರದು.

ಸ್ತುತಿಯೆಂಬುದು ಇನ್ನೊಬ್ಬರ ಬಗ್ಗೆಯೇ ಇರಬೇಕಾಗಿಲ್ಲ, ಬಹುಪಾಲು ಅದು ಆತ್ಮಸ್ತುತಿಯಾಗಿ ಅಲ್ಲಿಂದ ತನ್ನ ಪತ್ನಿ, ಮಕ್ಕಳು, ಆನಂತರ ಅಳಿಯ (ಸೊಸೆ ಅಪರೂಪ!) ಮತ್ತಿತರ ನಿಕಟ ಬಂಧುಗಳ ಕಡೆಗೆ ಚಾಚಿ ಅಪರೂಪಕ್ಕೆ ಇನ್ನೊಬ್ಬರ ಕಡೆಗೆ ವಾಲುತ್ತದೆ. ನಮ್ಮ ಲೇಖಕರ ಬಗ್ಗೆಯೇ ಯೋಚಿಸಿ, ಅವರು ಯಾವುದೇ ಮೆಚ್ಚುಗೆಯನ್ನು ವ್ಯಕ್ತಪಡಿಸಿದರೂ ಅದು ಕೊನೆಗೆ ಬಂದು ನಿಲ್ಲುವುದು ಆತನ ಪದತಲದಲ್ಲೇ. ಆತ ಮೆಚ್ಚಿಕೊಳ್ಳುವುದು ಆತನನ್ನು ಮೆಚ್ಚಿಕೊಳ್ಳುವವರನ್ನೇ. ಪರಸ್ಪರ ಸ್ತುತಿಪಾಠಕತ್ವದಲ್ಲಿ ಸಾಹಿತಿಗಳನ್ನು ಮೀರಿದ ಜೀವಿಗಳು ಅಪರೂಪ. ಬಹಳಷ್ಟು ಮಂದಿ ತನ್ನ ಪತ್ನಿ ಹೇಗೆ ಬುದ್ಧಿವಂತೆ, ಮಕ್ಕಳು ಹೇಗೆ ಇನ್ನೊಬ್ಬರಿಗಿಂತ ಕಡಿಮೆ ಅಂಕ ಕಡಿಮೆ ದರ್ಜೆಯ ಸ್ಥಾನ ಪಡೆದಾಗಲೂ, ಇತರರಿಗಿಂತ ಬುದ್ಧಿವಂತರು ಎಂಬುದನ್ನು ಸ್ಥಾಪಿಸುತ್ತಾರೆ. ತನ್ನ ಪತ್ನಿ ಜಗದೇಕ ಸುಂದರಿಯೆಂದು ಹೇಳಿದವರು ಅಪರೂಪ. ದಾಸರು ‘ಪರಸತಿ ಪರಧನಕಾಗಿ ಚಿಂತಿಸುವರು’ ಎಂದು ಹೇಳಿದ್ದು ನೆನಪಿದ್ದರೆ ಅದರ ಗೂಢಾರ್ಥವನ್ನು ನೆನಪಿಸಿಕೊಳ್ಳಬಹುದು; ಓದದೇ ಇದ್ದರೆ, ಕೇಳದೇ ಇದ್ದರೆ ಅದರ ಕಡೆಗೊಮ್ಮೆ ಕಣ್ಣನ್ನೋ ಕಿವಿಯನ್ನೋ ಹಾಯಿಸಬಹುದು. ಮಕ್ಕಳು ದ್ವಿತೀಯ ಸ್ಥಾನ ಪಡೆದಾಗ ಆತ ಮೊದಲನೇ ಸ್ಥಾನ ಪಡೆದವನಿಗಿಂತ ಹೇಗೆ ಉತ್ತಮ ಅಥವಾ ಬದುಕಿನ ಗೆಲುವಿನೆದುರು ಇವೆಲ್ಲ ಅಮುಖ್ಯ ಎಂದೆಲ್ಲ ಸಂದರ್ಭಾನುಸಾರವಾಗಿ ಪ್ರಮೇಯಗಳನ್ನು ಸೃಷ್ಟಿಸಿದವರಿದ್ದಾರೆ. ಮೊದಲ ಸ್ಥಾನ ಪಡೆದ ಜಗದೇಕವೀರರಿಗೆ ಈ ಸಮಸ್ಯೆಯಿರುವುದಿಲ್ಲ.

ಅನೇಕರು ಮಾತನಾಡುವ ಪರಿಯನ್ನು ಗಮನಿಸಿ: ತೆಂಗಿನ ಮರ ಮತ್ತು ದನದ ಬಗ್ಗೆ ಬರೆದ ಪ್ರಬಂಧ ಇದಕ್ಕೆ ಜ್ವಲಂತ ಉದಾಹರಣೆ. ನಿಮ್ಮಲ್ಲಿ ಅನೇಕರಿಗೆ ಇದು ತಿಳಿದಿರಬಹುದು: ವಿದ್ಯಾರ್ಥಿಗಳಿಗೆ ಪ್ರಬಂಧ ಬರೆಯಲು ಎರಡು ವಿಷಯಗಳ ಬಗ್ಗೆ ಮುನ್ನೆಚ್ಚರಿಕೆ ಅಥವಾ ಮುನ್ಸೂಚನೆ ನೀಡಲಾಗಿತ್ತಂತೆ. ಒಂದು-ತೆಂಗಿನ ಮರ; ಇನ್ನೊಂದು ದನ. ಒಬ್ಬ ವಿದ್ಯಾರ್ಥಿ ತೆಂಗಿನಮರದ ಬಗ್ಗೆ ಆಳವಾದ ಅಧ್ಯಯನ ಮಾಡಿದ. ಆದರೆ ಆತನ ದುರದೃಷ್ಟಕ್ಕೆ ಆತನಿಗೆ ದನದ ವಿಷಯ ಬರೆಯಲು ಹೇಳಿದರು. ಏನು ಮಾಡಲಿ? ಆತ ತಾನು ಕಲಿತ ವಿಚಾರ ತೆಂಗಿನಮರವಾದ್ದರಿಂದ ಅದರ ಬಗ್ಗೆ ಅಷ್ಟೂ ವಿಷಯ ಬರೆದ. ಕೊನೆಗೆ ‘ಮೇಯುವಾಗ ದನ ಓಡಬಾರದೆಂದು ಅದರ ಕೊರಳಿಗೆ ಕಟ್ಟಿದ ಹಗ್ಗದ ಮೂಲಕ ತೆಂಗಿನ ಮರಕ್ಕೆ ಕಟ್ಟುತ್ತಾರೆ’ ಎಂದು ಮುಗಿಸಿದ. ಆ ಇನ್ನೊಬ್ಬ ವಿದ್ಯಾರ್ಥಿ ದನದ ಬಗ್ಗೆ ಕಲಿತಿದ್ದನಲ್ಲ, ಆತನಿಗೆ ತೆಂಗಿನ ಮರದ ಬಗ್ಗೆ ಬರೆಯಲು ಹೇಳಿದರು. ಆತನೂ ಅಷ್ಟೇ: ದನದ ಬಗ್ಗೆ ವಿವರವಾಗಿ ಬರೆದು ಕೊನೆಗೆ ‘ಮೇಯುವಾಗ ದನ ಓಡಬಾರದೆಂದು ಅದನ್ನು ಅದರ ಕೊರಳಿಗೆ ಕಟ್ಟಿದ ಹಗ್ಗದ ಮೂಲಕ ತೆಂಗಿನ ಮರಕ್ಕೆ ಕಟ್ಟುತ್ತಾರೆ’ ಎಂದು ಮುಗಿಸಿದ. ಈ ಭರತ ವಾಕ್ಯಗಳೆಲ್ಲವನ್ನೂ ನಿಷ್ಫಲಗೊಳಿಸುವ ಅಥವಾ ತನಗೆ ನೀಡಿದ ವಿಚಾರಕ್ಕೆ ಫಲನೀಡುವ ವಾಕ್ಯ ಹಂಸವಾಕ್ಯದ್ದು. ಇಂತ ಸ್ತುತಿಯನ್ನು ಅಧ್ಯಯನ ಪೀಠದ ಪಾಠವಾಗಿ ಅಳವಡಿಸಿದರೆ ನಮ್ಮ ಬಹುಪಾಲು ಒಣ ಸಾಹಿತಿಗಳು ಅಲ್ಲಿ ಉಪನ್ಯಾಸಕ ಹುದ್ದೆಗೆ ಅರ್ಜಿ ಗುಜರಾಯಿಸಬಹುದು.

ನಿಂದೆಯೆಂಬುದು ಮನುಷ್ಯರ ಸಹಜ ಗುಣ. ಅದನ್ನು ಮೀರಿದರೆ ಎಲ್ಲರೂ ದೇವರಾಗಬಹುದು. ಮಾತು ಬರುವ ವರೆಗೆ ನಿಂದೆ ಇರದು. ಮಗು ನಗುತ್ತದೆ, ಅಳುತ್ತದೆ ಆದರೆ ಕೋಪ ಬಂದರೂ ನಿಂದಿಸದು. ಅಷ್ಟೇ ಅಲ್ಲ, ಮುಗ್ಧತೆಯು ಜೀವಿಯನ್ನು ಆವರಿಸಿರುವ ವರೆಗೆ ನಿಂದೆಯಿರದು. ದೇಹ, ಮನಸ್ಸು, ಬುದ್ಧಿ ಬೆಳೆದಂತೆಲ್ಲ ಮನುಷ್ಯನೆಂಬ ಜೀವಿಯನ್ನು ಆವರಿಸಿದ ಮುಗ್ಧತೆಯು ಕರಗುತ್ತದೆ. ರೇಷ್ಮೆದೊಗಲಿನ ಸಮಾಜ ಬೆತ್ತಲೆಯಾಗಿ ಕಾಣತೊಡಗುತ್ತದೆ. ವಿಷಾದ ಮಡುಗಟ್ಟದಿದ್ದರೂ ಮೋಡಗಟ್ಟುತ್ತದೆ. ಆಗ ನಿಂದೆ ಆರಂಭವಾಗುತ್ತದೆ. ಆರಂಭದಲ್ಲಿ ಸಂಶಯದಿಂದ, ಆನಂತರ ಮತ್ಸರದಿಂದ, ಕೊನೆಗೆ ಚಟದಿಂದ, ನಿಂದೆ ಬೆಳೆಯುತ್ತಲೇ ಇರುತ್ತದೆ. ಒಂದು ವಿಚಾರವನ್ನು ಇಲ್ಲೇ ಬಗೆಹರಿಸಿಕೊಳ್ಳಬೇಕು: ನಿಂದೆಯೆಂದರೆ ಪರನಿಂದೆ. ‘ಪರ’ ಎಂಬುದು ನೆರಳಿನಂತೆ ನಿಂದೆಯನ್ನು ಹಿಂಬಾಲಿಸುತ್ತದೆ. ನಿಂದೆಯೆಂಬ ವಿಷಯದ ಬಗ್ಗೆ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನಪೀಠವನ್ನು ಸ್ಥಾಪಿಸುವುದಾದರೆ ಅದಕ್ಕೆ ರಾಜಕಾರಣಿಗಳನ್ನೇ ಮಾರ್ಗದರ್ಶಕರಾಗಿ ಇಲ್ಲವೇ ಉಪನ್ಯಾಸಕರಾಗಿ, ನೇಮಿಸಬಹುದು. ಈ ವಿವರಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಹೇಗೆ ವ್ಯಂಗ್ಯಚಿತ್ರವು ಸಾವಿರ ವಾಕ್ಯಗಳ ಪ್ರಬಂಧಕ್ಕಿಂತಲೂ ಹೆಚ್ಚನ್ನು ಹೇಳುತ್ತದೆಯೋ ಹಾಗೆ ಅನೇಕ ಬಾರಿ ಮೌನವು ಮಾತಿಗಿಂತ ಹೆಚ್ಚನ್ನು ಹೇಳಬಹುದು.

ಇವೆರಡನ್ನೂ ಮೀರಿ ಅಳುವ ಒಂದು ಸ್ಥಿತಿಯಿದೆ. ಅಂತಹವರೇ ಸಮಾಜದ ಆಳುಗಳು ಮತ್ತು ಆಳುವವರು. ಅಳುವುದಕ್ಕೇ ಒಂದು ವರ್ಗವಿದೆ. ತಾವು ಕೊರಗಿ ಇನ್ನೊಬ್ಬರನ್ನು ಕರಗಿಸುವವರು ಸಾಕಷ್ಟಿದ್ದಾರೆ. ನೀವು ಗ್ರಹಚಾರವಶಾತ್ ಅಂತಹವರನ್ನು ಮಾತನಾಡಿಸಿದರೆ ಸಾಕು, ಅವರು ಕಣ್ಣೀರಕೋಡಿಯನ್ನೇ ಹರಿಸುತ್ತಾರೆ. ಇದು ಆಕಸ್ಮಿಕವಾಗಿದ್ದರೆ ಹೇಗೋ ನಿರ್ವಹಿಸಬಹುದು. ಇಲ್ಲವಾದರೆ ನಿಮಗೆ ನೀವು ಅವರನ್ನು ಯಾಕಾದರೂ ಮಾತನಾಡಿಸಿದೆನಪ್ಪ ಎಂದು ಅನ್ನಿಸುವುದರ ಜೊತೆಗೆ ಅವರನ್ನು ಭೇಟಿ ಮಾಡಲು ಯೋಜಿಸಿದ ಕಾರಣವೇ ಮರೆತುಹೋಗುತ್ತದೆ. ಹಿಗ್ಗು ಎಂದರೆ ಅದು ಇತರರೊಂದಿಗೆ ಹಂಚಿಕೊಂಡರೆ ಇನ್ನಷ್ಟು ಹಿಗ್ಗುತ್ತದಂತೆ. ದುಃಖ, ನೋವು, ಇತರರಲ್ಲಿ ಹಂಚಿಕೊಂಡರೆ ಅದು ಕುಗ್ಗುತ್ತದಂತೆ. ಈ ಕುಗ್ಗು ಕೊರಗು ಎಂದು ಪರಿವರ್ತನೆ, ಇಂದಿನ ಭಾಷೆಯಲ್ಲಿ ಪರಾವರ್ತನೆಯಾಗಿದ್ದರೆ ಅದೊಂದು ತರಹ. ಆದರೆ ಕೊರಗುವುದನ್ನೇ ಉದ್ಯೋಗವಾಗಿಸಿದರೆ? ಉತ್ತರ ಭಾರತದ ಕೆಲವೆಡೆ ಹೀಗೆ ಅಳುವವರೇ ಇದ್ದಾರಂತೆ. ಅವರು ಒಂದು ನಿಗದಿತ ಹಣದ ಪಾವತಿಯ ಶರ್ತದ ಮೇಲೆ ಸಾವು-ನೋವಿನ ಮನೆಗಳಿಗೆ ಹೋಗಿ ಅಲ್ಲಿ ನಿಗದಿತ ಅವಧಿಯ ವರೆಗೆ ಅತ್ತು ಮರಳುತ್ತಾರಂತೆ. ನಮ್ಮ ಕನ್ನಡ ನೆಲದಲ್ಲಿ ಈ ವೃತ್ತಿಯಿಲ್ಲದಿದ್ದರೂ ಪ್ರವೃತ್ತಿಯಂತೂ ಇದ್ದೇ ಇದೆ. ನನ್ನ ಸ್ನೇಹಿತರೊಬ್ಬರು ದೊಡ್ಡ ಕಾಫಿ-ಏಲಕ್ಕಿ-ಕರಿಮೆಣಸು ಬೆಳೆಗಾರರು. ಅವರು ಕೊರಗುರಾಜರು. ಒಮ್ಮೆ ತುಂಬಾ ವ್ಯಥೆಯಿಂದಿದ್ದರು. ಸಹಜವಾಗಿಯೇ ಪ್ರಶ್ನಿಸಿದೆ: ‘ಏನಾಯಿತು?’ ಅವರು ಅಷ್ಟೇ ಸಹಜವಾಗಿ ಆದರೆ ಶೋಕಧ್ವನಿಯಲ್ಲಿ ‘ಏನು ಹೇಳಲಿ? ಈ ಬಾರಿ ವಿಪರೀತ ಬೆಳೆ ಬಂದಿದೆ, ಬೆಲೆಯೂ ಬಹಳ ಚೆನ್ನಾಗಿದೆ. ಆದರೇನು ಮಾಡಲಿ, ಹಾಳಾದ್ದು ಸರಕಾರ ಇದಕ್ಕೆ ತೆರಿಗೆ ಹಾಕ್ತಾರಲ್ಲ! ಎಂದೂ ನೀಡದಷ್ಟು ತೆರಿಗೆ ಪಾವತಿಸಬೇಕಾಗುತ್ತದೇನೋ ಎಂಬ ಅಂಜಿಕೆ (ಅವರು ಬೇರೇನೋ ಪದ ಬಳಸಿದ್ದರು)’ ಎಂದರು. ತಕ್ಷಣ ‘ಅಂಜಿಕಿನ್ಯಾತಕಯ್ಯಾ!’ ನೆನಪಾಯಿತು. ನಾನು ಒಂದು ಕ್ಷಣ ಮೂಕನಾಗಿ ಆನಂತರ ಸಾವರಿಸಿಕೊಂಡು ‘ನೀವೇನೂ ಯೋಚನೆ ಮಾಡಬೇಡಿ, ಆ ಎಲ್ಲ ಬೆಳೆಯನ್ನು ನನಗೆ ವಹಿಸಿ. ನಾನು ನಿಮ್ಮ ಕಷ್ಟವನ್ನು ನನ್ನ ಹೆಗಲ ಮೇಲೆ ಹೊತ್ತು ನಿಭಾಯಿಸುತ್ತೇನೆ’ ಎಂದೆ. ಅವರಿಗೆ ಅರ್ಥವಾಯಿತೆಂದು ಕಾಣಿಸುತ್ತದೆ: ನನ್ನನ್ನೇ ಒಂದು ಕ್ಷಣ ದಿಟ್ಟಿಸಿ ನೋಡಿ ‘ನೀವು ತಮಾಷೆ ಮಾಡುತ್ತೀರಿ, ಬಿಡಿ, ನಾನು ಹೇಗೋ ಪರಿಹರಿಸಿಕೊಳ್ಳುತ್ತೇನೆ’ ಎಂದರು. ಜನರು ಹೀಗೆ ಕೊರಗುವವರಿಂದ ದೂರವಿರುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಅವರು ಸಹಜ ವಿರಾಗಿಗಳಾಗಬಹುದು. ಕೊರಗುವಿಕೆಗಿಂತ ತಪವು ಇಲ್ಲ. ಕಾಡಿಗೋ ಹಿಮಾಲಯಕ್ಕೋ ಹೋಗದೆಯೇ ಕಿವುಡನಾಗದೆಯೇ ಶಬ್ದದೂರರಾಗಬಹುದು.

ವಚನಕಾರರ, ದಾಸರ ಕಾಲದಲ್ಲಿ ಅಳುವಿರಲಿಲ್ಲವೇನೋ? ಅದಕ್ಕೇ ಅವರ್ಯಾರೂ ಅಳುವಿನ ಉಪದೇಶವನ್ನು ಮಾಡಲಿಲ್ಲ. ದಾಸರು ಸ್ತುತಿ-ನಿಂದೆಗಳನ್ನು ಸಮತೂಕಕ್ಕೆ ಹಾಕಿ ‘ನಿಂದಾಸ್ತುತಿ’ಗಳನ್ನು ಬರೆದರು.

ಒಟ್ಟಿನಲ್ಲಿ ಇದು ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗಬಹುದು. ಆದರೂ ಎಲ್ಲೋ ಒಂದೆಡೆ ಬದುಕಿಗೂ ಇರುವಂತೆ ವಿರಾಮ ಹಾಕಬೇಕು. ಬದುಕಿನಲ್ಲಿ ಅಂಜಬಾರದು; ನಾಚಬಾರದು; ಅಳಬಾರದು. ಹುಟ್ಟಿದ ಬಳಿಕ ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

ಅಕ್ಕನಿಗೆ ಶರಣು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News