ಹನುಮದ್ವಿಕಾಸವೂ ವಿಲಾಸವೂ

ಈಗ ಜನರು ಬಹಳ ಎಚ್ಚರಿಕೆ ಮತ್ತು ಜಾಗ್ರತೆಯಿಂದ ಇರಬೇಕಾಗಿದೆ. ದ್ಯೂತವನ್ನು ವಿರೋಧಿಸಿಯೂ ಧರ್ಮರಾಜನು ದ್ಯೂತವನ್ನಾಡಿ ಕೌರವರ ಸಂಚಿಗೆ ಬಲಿಯಾದ. ಹಾಗೆಯೇ ಇಲ್ಲಿ ಆಗಬಾರದು. ತೀರ ಮೆತ್ತಗಾದರೂ ಕಷ್ಟ. ಹೆಚ್ಚು ಕಠೋರವಾದರೂ ಕಷ್ಟ. ಜಾಗ್ರತೆಯಿಂದ ಹೆಜ್ಜೆಯಿಡದಿದ್ದರೆ ಕುವೆಂಪು ಕರ್ನಾಟಕವು ಕೋಮು ಕರ್ನಾಟಕವಾದೀತು.

Update: 2024-02-01 05:09 GMT

ನನ್ನ ಪಾಲಿಗೆ ಕಳೆದ ವಾರದಲ್ಲಿ ಕೆಲವು ಸಂತೋಷದ ವಿಚಾರಗಳಿದ್ದವು: ನಾನು ಬಹಳ ಮೆಚ್ಚಿಕೊಳ್ಳುವ ವೆಸ್ಟ್ ಇಂಡೀಸ್ ತಂಡವು ಬಲಿಷ್ಠ ಆಸ್ಟ್ರೇಲಿಯವನ್ನು ಬಹಳ ವರ್ಷಗಳ ಬಳಿಕ ಟೆಸ್ಟ್ ಪಂದ್ಯವೊಂದರಲ್ಲಿ ಸೋಲಿಸಿತು. ಸೋಲಿಸಿದ್ದಕ್ಕಿಂತಲೂ ಮಹತ್ವದ್ದು ಆಗಷ್ಟೇ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾದ ಹೊಸ ಯುವ ಆಟಗಾರನೊಬ್ಬ (ಶಮರ್ ಜೋಸೆಫ್) ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 68 ರನ್ನುಗಳಿಗೆ 7 ವಿಕೆಟ್ ಪಡೆದು ತನ್ನ ತಂಡವನ್ನು 8 ರನ್ನುಗಳಿಂದ ಗೆಲ್ಲಿಸಿದ್ದು; (ಈ ರನ್ನು ಎಂಬ ಪದಕ್ಕೆ ಓಟ ಎಂಬ ಕನ್ನಡ ಪದ ಹೊಂದುವುದಿಲ್ಲ. ಅದೇನೋ ಪಲಾಯನವಾದದಂತೆ ಅಥವಾ ಪಲಾಯನಾನುವಾದದಂತೆ ಅನ್ನಿಸುತ್ತದೆ. ಸರಿಯಾದ ಮತ್ತು ಅದೇ ಅರ್ಥವನ್ನು ಗರ್ಭಿಸುವ ಪದ ಸಿಗುವವರೆಗೂ ನಮಗೆ ರನ್ನೇ ಅನಿವಾರ್ಯ!) ಈ ಪಂದ್ಯದಲ್ಲಿ ಈತನ ಅಂಕಿ-ಅಂಶಗಳು- ಮೊದಲ ಇನಿಂಗ್ಸ್- 56/1, 68/7. ಆಸ್ಟ್ರೇಲಿಯ ತಂಡವು ಪಂದ್ಯ ಸೋತಾಗಲೂ ವಿಂಡೀಸನ್ನು ಮತ್ತು ಈ ಆಟಗಾರನನ್ನು ಮನಸ್ವೀ ಕೊಂಡಾಡಿದ್ದು. ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡಿನ ಹೊಸ ಯುವ ಆಟಗಾರನೊಬ್ಬ (ಹಾರ್ಟ್ಲಿ) ಭಾರತದ ವಿರುದ್ಧ ಇದೇ ರೀತಿ (ಇದಕ್ಕಿಂತಲೂ ಹೆಚ್ಚಿನ) ಅಂದರೆ 62 ರನ್ನುಗಳಿಗೆ 7 ವಿಕೆಟ್ ಕಬಳಿಸಿ ಇಂಗ್ಲೆಂಡಿಗೆ ಮರೀಚಿಕೆಯಾಗಿದ್ದ ಗೆಲುವನ್ನು ಗಳಿಸಿಕೊಟ್ಟದ್ದು. ಈತನ ಅಂಕಿ-ಅಂಶಗಳೂ ಅಚ್ಚರಿಯವು: ಮೊದಲ ಇನಿಂಗ್ಸ್: 23 ರನ್, 131/2, 34, 62/7!

ಇಂತಹ ಪ್ರತಿಭೆಗಳಿಗೆ ರಾಜಕೀಯ ಅಡ್ಡಿಯಾಗದಿದ್ದರೆ ಮತ್ತು ಅವಕಾಶ ಸಿಕ್ಕಿದರೆ ಕ್ರೀಡೆ ಫಲವತ್ತಾಗುತ್ತದೆ. ಆಟಗಾರರಿಗೆ ಅದೃಷ್ಟವಿದ್ದರೆ ಅವಕಾಶ ಸಿಗುತ್ತದೆ. ಅವಕಾಶ ಸಿಕ್ಕಿದರೆ ಪ್ರತಿಭೆ ಮೊಳೆಯುತ್ತದೆ; ಬೆಳೆಯುತ್ತದೆ. ಭಾರತದಲ್ಲೂ ಇಂತಹ ಅನಿರೀಕ್ಷಿತ ಪರಿಣಾಮಗಳನ್ನು ಪಡೆಯಬಲ್ಲ, ಎಂತಹ ವ್ಯತಿರಿಕ್ತ ಪರಿಸ್ಥಿತಿಯನ್ನೂ ಏರುಪೇರುಮಾಡಬಲ್ಲ ಎಳೆಯ ಮೇರು ಪ್ರತಿಭೆಗಳು ಇವೆ. ಮೊನ್ನೆ ಆಸ್ಟ್ರೇಲಿಯದ ಗಬ್ಬಾದಲ್ಲಿ ವಿಂಡೀಸಿನ ದಿನ. ಡೇವಿಡ್ ಗೋಲಿಯಾತನನ್ನು ಮಣಿಸಿದ ದಿನ. ‘ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ!’

ಇದೇ ವಾರದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಯಿತು. ಸರಯೂ ನದಿಯಲ್ಲಿ ಪ್ರಾಣ ಕಳೆದುಕೊಂಡ (ದೊಡ್ಡವರ ಸಾವಿಗೆ ‘ನಿರ್ಯಾಣ’ವೆಂದು ಹೆಸರು!) ಶ್ರೀರಾಮನನ್ನು ಅದರ ದಡದಲ್ಲೇ ಮಂದಿರ ನಿರ್ಮಿಸಿ ಪುನರುಜ್ಜೀವನಗೊಳಿಸಲಾಯಿತು. ಇರಲಿ; ಇದು ಅವರವರ ನಂಬಿಕೆ; ಶ್ರದ್ಧೆ. ಅದನ್ನು ಗೌರವಿಸೋಣ. ಇದಕ್ಕೆ ‘ಪ್ರಾಣಪ್ರತಿಷ್ಠೆ’ ಎಂಬ ಹೆಸರಿಟ್ಟರು. ಇದೊಂದು ‘ಆತ್ಮನಿರ್ಭರತೆ’ಯ ಜೋಡಿ ಪದದಂತಿದೆ. ರಾಜಕೀಯಕ್ಕೆ ಧರ್ಮವನ್ನು ಅತ್ಯಂತ ಲಜ್ಜಾಹೀನವಾಗಿ ಬಳಸಲಾಯಿತಾದರೂ ‘ರಾಷ್ಟ್ರೀಯ’, ‘ಭಾರತೀಯ’ ವಿವಾದವೊಂದು ಮುಗಿಯಿತಲ್ಲ ಎಂಬ ಸಂತೋಷ. ಈ ಸಂತೋಷ ಎಷ್ಟು ಕಾಲವೋ ಗೊತ್ತಿಲ್ಲ. ಏಕೆಂದರೆ ಈಗಾಗಲೇ ಮಥುರಾ, ಕಾಶಿಯ ಕುರಿತು ವಿವಾದಗಳನ್ನು ಎಬ್ಬಿಸಲಾಗಿದೆ. ವಿವಾದವಿಲ್ಲದಿದ್ದರೆ ರಾಜಕೀಯ ಮಾಡುವುದಾದರೂ ಹೇಗೆ? ಅಧಿಕಾರ ಪಡೆಯುವುದಾದರೂ ಹೇಗೆ? ರಾಷ್ಟ್ರ, ರಾಷ್ಟ್ರದ ಜನರು, ಈ ಜನರ ಹಿತ ಯಾರಿಗೆ ಬೇಕು? ಬೇಕಾಗುವುದು ವೀಳ್ಯದೆಲೆ, ಅಡಿಕೆ, ಸುಣ್ಣವಲ್ಲ; ಅವನ್ನು ಜಗಿದ ಬಳಿಕ ಉಗಿಯುವ ವರ್ಣರಸ.

ಅಯೋಧ್ಯೆಯ ರಾಮನ ಕುರಿತು ಯಾರಿಗೂ ದ್ವೇಷವಿಲ್ಲ. ಕೆಲವರಿಗೆ ಭಕ್ತಿ; ಕೆಲವರಿಗೆ ಶ್ರದ್ಧೆ; ಇನ್ನು ಕೆಲವರಿಗೆ ಏನೂ ಅಲ್ಲದ ಒಂದು ವಿಚಾರ. ಆದರೆ ಈ ಮಂದಿರದ ಕುರಿತು ರಾಮಭಕ್ತ ಹನುಮನಿಗೆ ಮತ್ಸರವೋ, ಅಥವಾ ಬಾಲರಾಮನ ಪ್ರತಿಷ್ಠೆಯಿಂದ ತನ್ನ ಇಲ್ಲವೇ ತಾನು ಆರಾಧಿಸಿದ ಸೀತಾಮಾತೆಯ ಪ್ರತಿಷ್ಠೆಗೆ ಕುಂದಾಯಿತೆಂಬ ಅವಮಾನವೋ ಗೊತ್ತಿಲ್ಲ. ಈ ಬಗ್ಗೆ ಘಂಟಸಾಲ ಹಾಡಿದಂತಹ ‘ರಾಮನ ಅವತಾರ, ರಘುಕುಲ ಸೋಮನ ಅವತಾರ..’ ಎಂಬ ಹಾಡೋ, ಹನುಮನಿಗೆ ಹೊಂದಬಲ್ಲ ಲಾವಣಿಯೋ ಕೊನೆಗೆ ಕೋಷ್ಠಕವೋ ಬಂದಿಲ್ಲ. ಅಬ್ಬಬ್ಬ ಅಂದರೆ ಎಚ್.ಎಸ್. ವೆಂಕಟೇಶ ಮೂರ್ತಿಯವರ ಶ್ರೀರಾಮಾಷ್ಟಕ ಪ್ರಕಟವಾಗಿದೆ.

ಕನ್ನಡ ಕರಾವಳಿ ಅದರಲ್ಲೂ ಬುದ್ಧಿವಂತರ ಜಿಲ್ಲೆಯೆಂದು ‘ಹೆಸರಾಂತ’ ದಕ್ಷಿಣ ಕನ್ನಡವು ರಾಷ್ಟ್ರೀಯತೆಯ, ಭಾರತೀಯತೆಯ, ಹಿಂದುತ್ವದ ಹೆಸರಿನಲ್ಲಿ ಕೋಮುವಾದದ ಪ್ರಯೋಗಶಾಲೆ. ಕೋಮುವಾದವಿಲ್ಲವೆಂದರೆ ದಕ್ಷಿಣ ಕನ್ನಡವೇ ಇಲ್ಲವೆಂಬಷ್ಟು ಮಟ್ಟಿಗೆ ಈ ಸಾಧನೆ ಮುಂದುವರಿದಿದೆ. ಇಲ್ಲಿ ಕೋಮುವಾದವೆಂಬ ಉಪ್ಪಿನ ಋಣ ವಿಪರೀತ. ಆಧುನಿಕ ಜಗತ್ತಿನಲ್ಲಿ ಸಮುದ್ರ ಎದುರಿಗಿದ್ದೂ ಧೀಮಂತ ವ್ಯಕ್ತಿಗಳನ್ನು ಪಡೆದೂ ಸಂಕುಚಿತ ಭಾವನೆಗಳನ್ನೇ ರೂಢಿಮಾಡಿಕೊಂಡ ಜಿಲ್ಲೆಯಿದು. ಇಲ್ಲಿ ಬುದ್ಧಿವಂತಿಕೆಯದೇ ಸಮಸ್ಯೆ.

ಆದರೆ ಈ ಕುರಿತು ಹಳೇ ಮೈಸೂರಿನ ಇತರ ಭಾಗಗಳು ಅದರಲ್ಲೂ ಮಂಡ್ಯದಂತಹ ಜಿಲ್ಲೆಗಳು ಸೊಪ್ಪುಹಾಕಿರಲಿಲ್ಲ. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ರೈತಾಪಿ ಜನರು ಎಲ್ಲರೊಳಗೊಂದಾಗಿ ಬದುಕುವವರೇ. ಕಾವೇರಿ ನೀರೋ, ಭೂಸ್ವಾಧೀನವೋ ಕೃಷಿಗೆ ಸಂಬಂಧಿಸಿದ ಇತರ ಸಮಸ್ಯೆಗಳೋ ಅವರಿಗೆ ಹೋರಾಟಕ್ಕೆ ಕಾರಣವಾಗುತ್ತವೆಯೇ ಹೊರತು ಜಾತಿ-ಮತ-ಧರ್ಮಗಳಲ್ಲ. ಈ ದೃಷ್ಟಿಯಿಂದ ಮಂಡ್ಯ ನಿಜಕ್ಕೂ ಸಿಹಿಯ ಊರು-ಸಿಹಿಯೂರು.

ಕೆರಗೋಡು ಸಕ್ಕರೆ ಜಿಲ್ಲೆ ಮಂಡ್ಯದ ಪುಟ್ಟ ಊರೊಂದು ರಾಷ್ಟ್ರೀಯ ಮಹತ್ವವನ್ನು ಪಡೆದಿದೆ. ಯಾವುದೇ ಸಾಧನೆಯಿಂದಾಗಿ ಅಲ್ಲ. ಬದಲು ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ದ್ವೇಷದ ಬಿಸಿಯನ್ನು ಹಬ್ಬಿಸಿದ್ದರಿಂದ ಮತ್ತು ಮುಗ್ಧರನ್ನು, ಅಮಾಯಕರನ್ನು ಕೋಮು ದಳ್ಳುರಿಗೆ ತಳ್ಳಿದ್ದರಿಂದ. ಊರಿನ ಹೆಸರು ಹೇಗೂ ಇರಲಿ. ಅದು ತಪ್ಪು ಕಾರಣಗಳಿಗಾಗಿ ಇನ್ನಷ್ಟು ಹೆಸರು ಪಡೆಯುವುದು ಅಗತ್ಯವಿಲ್ಲ. ಆದರೆ ಅದೀಗ ಭಾರತದ ಪುಟ್ಟ ಪ್ರತಿಕೃತಿಯಾಗಹೊರಟಿದೆ. ಮುಂದಿನ ದಿನಗಳು ವಿಷಾದಪೂರ್ಣ ಕುತೂಹಲಕಾರಿಯಾಗಲಿವೆೆ.

ಸರಕಾರಿ ಭೂಮಿಯೊಂದರಲ್ಲಿ ಧ್ವಜಸ್ತಂಭವನ್ನು ಸ್ಥಾಪಿಸಲು ಗ್ರಾಮದ ಟ್ರಸ್ಟ್ ಒಂದು ಗ್ರಾಮ ಪಂಚಾಯತ್‌ನಿಂದ ಅನುಮತಿ ಪಡೆದಿದೆ. ರಾಷ್ಟ್ರಧ್ವಜ ಇಲ್ಲವೇ ನಾಡಧ್ವಜವನ್ನು ಏರಿಸಲು, ಹಾರಿಸಲು, ಒಂದು ಧ್ವಜಸ್ತಂಭಕ್ಕೆ ಈ ಅನುಮತಿ. ಈ ಜಾಗ ಗ್ರಾಮದ ಕೇಂದ್ರ. ಸರಿ. ಪ್ರಜಾಪ್ರಭುತ್ವದಲ್ಲಿ ಜನರ ಚಿಕ್ಕಪುಟ್ಟ ಆಸೆಗಳಿಗೆ, ಇತರರಿಗೆ ಅದರಲ್ಲೂ ಸರಕಾರಕ್ಕೆ ತೊಂದರೆಯಾಗದಂತೆ ಅಂತಹ ವ್ಯವಸ್ಥೆಯಾಗುವುದಿದ್ದರೆ ಸ್ವಾಗತ.

ಮೊನ್ನೆ ಅಯೋಧ್ಯೆಯಲ್ಲಿ ರಾಮಮಂದಿರದ ಸಮಾರಂಭವಿದ್ದಾಗ ಕರ್ನಾಟಕದಲ್ಲಿ ಏನೂ ಆಗಲಿಲ್ಲ. ಹಿಜಾಬ್, ಹಲಾಲ್‌ಗಳಿಂದ ಜನರು ಹೊರಬಂದಿದ್ದಾರೆ. ಆದರೆ ಕೋಮುಸಂಘಟನೆಗಳಿಗೆ ಹೊಸದೇನಾದರೂ ಬೇಕಲ್ಲ! ಕೈಯಲ್ಲಿ ಕರೆನ್ಸಿ ನೋಟುಗಳಿಲ್ಲದಿದ್ದರೆ ಹೊಸದಾಗಿ ಮುದ್ರಿಸಿದರೆ ಆಯಿತಲ್ಲ ಎಂದೊಬ್ಬರು ಹೇಳಿದ್ದರು. ಹಾಗೆಯೇ ಕೈಯಲ್ಲಿ ಯಾವುದೇ ವಿವಾದವಿಲ್ಲದಿದ್ದಾಗ ಹೊಸದೊಂದನ್ನು ಸೃಷ್ಟಿಸಿದರಾಯಿತು.

ಧ್ವಜವಿವಾದಕ್ಕೆ ಕೆಲವು ದಿನಗಳ ಮೊದಲು ಮಂಡ್ಯ ಜಿಲ್ಲೆಯಲ್ಲಿ ಕೋಮುವಾದದ ಭಾಷಣವೊಂದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ವೈದ್ಯರೊಬ್ಬರು ಮಾಡಿ ಕೋಮು ದಳ್ಳುರಿಯ ಕಿಚ್ಚನ್ನು ಆರಂಭಿಸಿದರು. ಈ ಕುರಿತು ಸಾರ್ವಜನಿಕ ವೇದಿಕೆಗಳಲ್ಲಿ ಸಾಕಷ್ಟು ಚರ್ಚೆಯಾಯಿತು. ಪ್ರಕರಣಗಳೂ ದಾಖಲಾಗಿ ಅವರು ಜಾಮೀನಿನ ಮೇಲೆ ಬಿಡುಗಡೆಯಾದದ್ದೂ ಆಯಿತು. ಅಲ್ಲಿಗೆ ಕರಾವಳಿಯ ಕೋಮು ಉಪ್ಪನ್ನು ಮಂಡ್ಯದ ಸಕ್ಕರೆಗೆ ಬೆರೆಸಲಾಯಿತು.

ಉತ್ತರ ಭಾರತದ ಹಿಂದುತ್ವಕ್ಕೆ ಮಥುರಾ-ಕಾಶಿಗಳಿವೆ. ದಕ್ಷಿಣ ಭಾರತಕ್ಕೆ? ಸದ್ಯ ಕೇರಳ, ತಮಿಳುನಾಡುಗಳಲ್ಲಿರುವ ದೇವಮಂದಿರಗಳು ವಿವಾದಕ್ಕೆ ಅವಕಾಶಪಡೆಯುತ್ತಿಲ್ಲ. ಏನಿದ್ದರೂ ಉದ್ದನಾಮ-ಅಡ್ಡನಾಮ, ದ್ವೈತ-ಅದ್ವೈತ-ವಿಶಿಷ್ಟಾದ್ವೈತಗಳೇ ಹೊರತು, ತೆಂಕಲೈ-ಬಡಗಲೈಯೇ ವಿನಾ ಹಿಂದೂ-ಮುಸ್ಲಿಮ್, ಹಿಂದೂ-ಕ್ರಿಶ್ಚಿಯನ್ ಅಲ್ಲ. ಶಬರಿಮಲೆಯೂ ಕೋಮುದಳ್ಳುರಿಯ ಯಶಸ್ಸನ್ನು ಪಡೆಯಲಿಲ್ಲ. ಇನ್ನುಳಿದದ್ದು ಕರ್ನಾಟಕ. ಹಿಂದುತ್ವವಾದಗಳಿಗೆ ದಕ್ಷಿಣಭಾರತದ ಹೆಬ್ಬಾಗಿಲು. ಈ ಪೈಕಿ ಹಳೇಮೈಸೂರಿನ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಮಂಡ್ಯವಂತೂ ಒಡೆಯದ ತೆಂಗಿನಕಾಯಿಯಂತಿದೆ. ಆದರೂ ಎಲ್ಲೋ ಒಂದು ಕಡೆ ಒಡೆಯಬೇಕಾದರೆ ಅದಕ್ಕೆ ಕೋಮುಕಾರಣವೇ ಆಗಬೇಕು.

ಈ ಧ್ವಜಸ್ತಂಭಕ್ಕೆ ಹನುಮನನ್ನು ಕಟ್ಟಿಹಾಕಲಾಯಿತು. ಹನುಮನು ತನ್ನ ಶಾಪಗ್ರಸ್ತ ಸೆರೆಗೆ ತಾನೇ ಪಹರೆ ಅಲ್ಲವೇ? ಅವನು ಚಿರಂಜೀವಿ. ಅವನಿಗಿನ್ನೆಲ್ಲಿಯ ‘ಪ್ರಾಣಪ್ರತಿಷ್ಠೆ’? ಹಾಗಾದರೆ ಹೊಸದೇನಾದರೂ ಬೇಕು!

ಇದು ಕೆಲವರನ್ನು ಕೆರಳಿಸಿತು. ಪರಿಣಾಮವಾಗಿ ಮತ್ತು ಅನಿವಾರ್ಯವಾಗಿ ಸರಕಾರ ಸರಿಯಾದ ಹೆಜ್ಜೆಯನ್ನೇ ಹಾಕಿತು. ಧ್ವಜವನ್ನು ಇಳಿಸಲಾಯಿತು. ಈಗ ಎಲ್ಲ ಕೋಮುವಾದಿಗಳೂ ಮೈಗೆ ಎಣ್ಣೆಲೇಪಿಸಿಕೊಂಡವರಂತೆ ಉರಿಬೀಳುತ್ತಿದ್ದಾರೆ. ಎಲ್ಲೆಡೆ ಚಳವಳಿಗಳು ಮತ್ತು ‘ಸಮಗ್ರ’ ಹೋರಾಟದ ಬೆದರಿಕೆ. ಹನುಮನ ನೆಪದಲ್ಲಿ ಇಲ್ಲಿರುವ ಸರಕಾರದ ವಿರುದ್ಧ ರಾಜಕೀಯ ಆರಂಭವಾಗಿದೆ. ಪ್ರತಿಷ್ಠಿತ ಕೋಮು ನಾಯಕರು ಇದನ್ನು ತಮ್ಮ ‘ಪ್ರಾಣಪ್ರತಿಷ್ಠೆ’ಯಂತೆ ಪಣವಾಗಿಟ್ಟಿದ್ದಾರೆ. ಸರಕಾರಕ್ಕೆ ಸವಾಲೆಸೆದಿದ್ದಾರೆ. ಜಾತ್ಯತೀತತೆಯ ಗೆಲ್ಲಿನಿಂದ ಕೋಮುವಾದದ ಗೆಲ್ಲಿಗೆ ಹಾರಿದವರು ಹನುಮನುದಿಸಿದ ನಾಡು ನಮ್ಮದು ಎಂಬುದಕ್ಕೆ ಬೇರೆ ಪುರಾವೆ ಬೇಡವೆಂಬಂತೆ ವರ್ತಿಸುತ್ತಿದ್ದಾರೆ.

ಸರಕಾರವು ಅನಗತ್ಯವಾಗಿ ಮತ್ತು ಅನಪೇಕ್ಷಿತವಾಗಿ ರಕ್ಷಣಾತ್ಮಕ ಹೇಳಿಕೆಯನ್ನು ನೀಡುತ್ತಿದೆ. ಬೇಕಾದರೆ ಬೇರೆಡೆ ಹನುಮನ ಮೂರ್ತಿಗಾಗಿಯೋ, ಧ್ವಜಕ್ಕಾಗಿಯೋ ಅವಕಾಶ ಮಾಡಿಕೊಡೋಣವೆಂದು ಸಚಿವರೊಬ್ಬರು ಆಶ್ವಾಸನೆ ನೀಡಿದ್ದಾರೆ. ಈ ದೌರ್ಬಲ್ಯವನ್ನು ತಮಗಿರುವ ಅವಕಾಶವೆಂದು ಬಗೆದು ಕೋಮುವಾದಿಗಳು ಸಚಿವರ ಆಶ್ವಾಸನೆಯನ್ನು ತಿರಸ್ಕರಿಸಿ ತಮಗೆ ಅಲ್ಲೇ ಹನುಮನ ಧ್ವಜಸ್ತಂಭ ಬೇಕೆಂದು ಮೊಂಡುವಾದವನ್ನು ಹೂಡಿದ್ದಾರೆ. ಕೋಮುಹುಂಬತನವನ್ನು ದುಷ್ಟತನವನ್ನೂ ವಿರೋಧಿಸುವವರು ಈ ವರೆಗೆ ರಾಮದ್ರೋಹಿಗಳಾಗಿದ್ದರು; ಈಗ ಹನುಮದ್ರೋಹಿಗಳಾಗಿದ್ದಾರೆ.

ಈ ದೇಶದಲ್ಲಿ ಈ ಪುಟ್ಟ ಊರಿನಲ್ಲಿ ಉದ್ಭವವಾದ ಈ ವಿವಾದ ರಾಜ್ಯಾದ್ಯಂತ ಹಬ್ಬದಂತೆ ಮಾಡಲು ಸಾಕಷ್ಟು ಕೆಲಸವಿದೆ. ಮುಂದೆ ಬರುವ ಮಹಾಚುನಾವಣೆಯಲ್ಲಿ ‘28 ಕ್ಷೇತ್ರ ಗೆಲ್ಲಲು ಬಿಜೆಪಿ ತಯಾರಿ’ ಎಂಬ ಶೀರ್ಷಿಕೆಯ ಸುದ್ದಿಯನ್ನು ಕನ್ನಡದ ದಿನಪತ್ರಿಕೆಗಳು ಪ್ರಕಟಿಸಿವೆ. ಇದೇ ಆ ತಯಾರಿಯೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಈಗ ಜನರು ಬಹಳ ಎಚ್ಚರಿಕೆ ಮತ್ತು ಜಾಗ್ರತೆಯಿಂದ ಇರಬೇಕಾಗಿದೆ. ದ್ಯೂತವನ್ನು ವಿರೋಧಿಸಿಯೂ ಧರ್ಮರಾಜನು ದ್ಯೂತವನ್ನಾಡಿ ಕೌರವರ ಸಂಚಿಗೆ ಬಲಿಯಾದ. ಹಾಗೆಯೇ ಇಲ್ಲಿ ಆಗಬಾರದು. ತೀರ ಮೆತ್ತಗಾದರೂ ಕಷ್ಟ. ಹೆಚ್ಚು ಕಠೋರವಾದರೂ ಕಷ್ಟ. ಜಾಗ್ರತೆಯಿಂದ ಹೆಜ್ಜೆಯಿಡದಿದ್ದರೆ ಕುವೆಂಪು ಕರ್ನಾಟಕವು ಕೋಮು ಕರ್ನಾಟಕವಾದೀತು.

ಕೋಮುವಾದಿಗಳಿಗೆ ತಮ್ಮ ಗುರಿಯೇನೆಂದು ಗೊತ್ತಿಲ್ಲ. ಅಶಾಂತಿಯನ್ನೆಬ್ಬಿಸಿದರೆ ಮತಗಳ ಧ್ರುವೀಕರಣವಾಗುತ್ತದೆ ಮತ್ತು ಆಗ ಅಧಿಕಾರ ಹಿಡಿಯುವುದು ಸುಲಭ ಎಂಬ ತರ್ಕವನ್ನು ಕುಚೋದ್ಯವೆಂದು ತಿಳಿದರೆ ಸಾಲದು. ಅದು ಕುತರ್ಕವೆಂದು ಮನದಟ್ಟುಮಾಡಬೇಕು. ಕೆಟ್ಟ ಕಾಲದಲ್ಲಿ ‘ಇವನ ಹಸಿವಿವನನೇ ತಿನ್ನುತಿದೆ..’ ಅಥವಾ ‘ನಿಲುಕಿ ನಿಲುಕದೊಲು ಶಾಪ ಕಟ್ಟಿದೆ ಇವನ..’ ಎಂಬ ಕವಿವಾಣಿಯನ್ನು ಜನರಿಗೊಪ್ಪಿಸಬೇಕು. ಹೆಜ್ಜೆ-ಗೆಜ್ಜೆ-ತೂಕ ತಪ್ಪಿದರೆ, ಪರಿಣಾಮ ಭಯಾನಕವಾದೀತು. ಲಂಕಾದಹನಕ್ಕೆ ಪ್ರತಿಯಾಗಿ ಹನುಮನ ಹೆಸರಿನಲ್ಲಿ, ಕರ್ನಾಟಕ- ಅದಾದ ಮೇಲೆ ಭಾರತದಹನಕ್ಕೂ ತಯಾರಿರುವ ಕೋಮು ದ್ವೇಷದ ಬೆಂಕಿಯನ್ನು ಆರಿಸುವ ಕೆಲಸ ಇಲ್ಲಿಂದಲೇ ತೊಡಗಬೇಕು. ಈಗಲೇ ಮಾಡದಿದ್ದರೆ ಆ ಮೇಲೆ ಪರಿತಪಿಸಿ ಫಲವಿಲ್ಲ. ಉಪ್ಪುನೀರಿನ ಸಮುದ್ರದಲ್ಲಿ ಬೇಕಷ್ಟು ನೀರಿದೆ. ಅದನ್ನು ಕಬ್ಬಿನ ನೀರಿಗೆ ಸೇರಿಸಿದರೆ ಉಪ್ಪುರುಚಿಯಾಗದು; ಸಿಹಿಯಂತೂ ನಾಶ.

ಹನುಮದ್ವಿಲಾಸಕ್ಕೆ ಇಲ್ಲ ಎಲ್ಲೆ!

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News