ಭೀತಮನದ ದೊರೆ

ವ್ಯಕ್ತಿ ಮುಖ್ಯವಲ್ಲ, ಚಿಂತನೆ ಮುಖ್ಯ, ಸಿದ್ಧಾಂತ ಮುಖ್ಯ ಎಂಬ ಮಾತಿನೊಂದಿಗೆ ಭಗವಾಧ್ವಜವನ್ನು ಅರ್ಚಿಸುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಈಗ ಅಲ್ಲಿ ಮೋದಿಯನ್ನು ಸ್ಥಾಪಿಸಿದೆ. ಡಾಕ್ಟರ್‌ಜೀ, ಗುರೂಜಿ, ದೇವರಸ್, ಸುದರ್ಶನ್ ಇವರ ಬಳಿಕ ಇರುವ ಸರಸಂಘಚಾಲಕರು ಪಾಪ, ರಾಷ್ಟ್ರಪತಿಗಳ ಹಾಗೆ ಮುದ್ರೆಯ ಅಲಂಕಾರದವರಾಗಿದ್ದಾರೆ. ಮೋದಿ ಪ್ರಧಾನಿಯಾಗಿರುವುದರ ಜೊತೆಗೆ ಪಕ್ಷಾಧ್ಯಕ್ಷತೆ, ಹಾಗೆಯೇ ದೇಶದ ಮತ್ತು ರಾಜ್ಯಗಳ ಎಲ್ಲಾ ಖಾತೆಗಳ ಮಂತ್ರಿಗಿರಿ, ಎಲ್ಲ ರಾಜ್ಯಗಳ ರಾಜ್ಯಪಾಲ ಹುದ್ದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕತನ ಹೀಗೆ ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದರಾದರೂ ವಾಸ್ತವದಲ್ಲಿ ಅದು ಸಾಧ್ಯವಿಲ್ಲದ್ದರಿಂದ ಈ ಪೈಕಿ ಅತೀ ಹೆಚ್ಚು ಅಧಿಕಾರವನ್ನು ಬಳಸಬಲ್ಲ ಸ್ಥಾನವನ್ನು ಉಳಿಸಿಕೊಂಡು ಅದರ ಮೂಲಕ ಇತರರನ್ನು ನಿಯಂತ್ರಿಸುತ್ತಿದ್ದಾರೆ.

Update: 2024-04-04 05:44 GMT

ಒಂದು ತಂಡವಾಗಿ ಪ್ರಥಮಸ್ಥಾನವನ್ನು ಗಳಿಸಿದವರು ತಮ್ಮ ಬಹುಮಾನದೊಂದಿಗೆ ತಂಡದ ಭಾವಚಿತ್ರವನ್ನು ಪ್ರದರ್ಶಿಸುತ್ತಾರೆ. ಅದರಲ್ಲಿ ಬಹುಮಾನ ತಂಡದ ನಾಯಕನ ಕೈಯಲ್ಲಿರುತ್ತದೆ ಅಥವಾ ತಂಡವೇ ಯೋಚಿಸಿ ಸೂಚಿಸಿದ ಇನ್ನೊಬ್ಬ ಎಳೆಯನೋ ಬೆಳೆಯನೋ ಆದವನಲ್ಲಿರುತ್ತದೆ. ಅದು ಅವರ ಒಪ್ಪಿತ ಸೂಚ್ಯಂಕ. ಗೆಲುವು ಎಲ್ಲರದ್ದು. ಅನೇಕ ಬಾರಿ ಆಟಕ್ಕೆ ಅಗತ್ಯವಿರುವುದಕ್ಕಿಂತ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಇತರ ಆಟಗಾರರೂ ಇರುತ್ತಾರೆ. ಗೆಲುವಿನಲ್ಲಿ ಅವರ ಪ್ರತ್ಯಕ್ಷ ಪಾತ್ರವಿಲ್ಲದಿದ್ದರೂ ಅವರು ತಂಡದಲ್ಲಿದ್ದಾರೆ ಮತ್ತು ಆಡುವ ಅವಕಾಶದಿಂದಷ್ಟೇ ವಂಚಿತರಾಗಿದ್ದಾರೆಂಬ ಸಂಕೇತಾರ್ಥವಿದೆ. ಅವರೂ ಆಡಿದವರಷ್ಟೇ ಉತ್ಸಾಹದಿಂದ ಉಬ್ಬಿರುತ್ತಾರೆ. ಏಕೆಂದರೆ ಅದೊಂದು ತಂಡ. ಗೆಲುವು ಎಲ್ಲರದ್ದು. ನಾಯಕನು ಇತರರಿಗಿಂತ ಮುಖ್ಯವಾಗುವುದು ತಂಡದವರ ಪೈಕಿ ಆತ ಎಲ್ಲವನ್ನೂ ಸುಧಾರಿಸಿಕೊಂಡು ಸೂಕ್ತಸಮಯ, ಸಂದರ್ಭದಲ್ಲಿ ಸೂಕ್ತ ನಿರ್ಣಯಗಳನ್ನು ರೂಪಿಸಬಲ್ಲವನೆಂದು ಮತ್ತು ಅಗತ್ಯ ಬಿದ್ದಾಗ ತಂಡದ ಅಭಿಪ್ರಾಯವನ್ನು ಕೇಳಿ ಮನ್ನಣೆಕೊಟ್ಟು ಅದರ ರಸವನ್ನು ಪಡೆಯಬಲ್ಲವನೆಂಬ ಕಾರಣಕ್ಕೆ ಆಯ್ಕೆಯಾಗಿದ್ದಾನೆ ಮತ್ತು ಆತ ತಂಡದ ಹಿರಿಯನೇ ಹೊರತು, ತಂಡದಿಂದ ದೊಡ್ಡವನೆಂಬರ್ಥದಲ್ಲಿ ಅಲ್ಲ. ಆತ ತಂಡದ ಮುಖವೇ ಹೊರತು ತಂಡದ ಯಜಮಾನನಲ್ಲ; ಹಿರಿಯಣ್ಣನೂ ಅಲ್ಲ. ನಾಯಕನಾದವನಿಗೆ ಉಳಿದವರಿಗಿರಬಹುದಾದ ಇಗೊ ಇರಬಾರದು; ಆತ ಎತ್ತರದಲ್ಲಿದ್ದರೂ ಚಿಕ್ಕವನಂತೆ ಇರಬೇಕು; ಪಂಜೆ ಮಂಗೇಶರಾಯರ ಉದಯರಾಗ ಕವನದಲ್ಲಿ ‘ಏರಿದವನು ಚಿಕ್ಕವನಿರಬೇಕೆಲೆ’ ಎಂದಂತೆ.

ಯಾವುದೇ ಕ್ರೀಡೆಯಲ್ಲೂ ತಾವು ಗೆಲ್ಲಬೇಕೆಂಬ ಛಲವಿರುತ್ತದೆಯೇ ಹೊರತು ಕ್ರೀಡೆಯ ಮಾದರಿ ವ್ಯಕ್ತಿಗಳಾಗಿರಬೇಕೆಂಬ ಛಲ ಆನಂತರದ್ದು. ವ್ಯಕ್ತಿಯ, ತಂಡದ ಗೆಲುವು ಅವರದ್ದು ಮಾತ್ರವಾಗುವುದು ಕ್ರೀಡೆಯನ್ನು ಗೆಲ್ಲಿಸದಿದ್ದರೆ. ಗೆಲುವು ಗೆಲುವೇ. ಆದರೆ ಮೂಲೆಯಲ್ಲಿ ಕ್ರೀಡೆ ತಿರಸ್ಕೃತವಾಗಿ ಬಿದ್ದಿರುತ್ತದೆ. ಎಲ್ಲರೂ ಚೆನ್ನಾಗಿ ಕ್ರೀಡಾಸ್ಫೂರ್ತಿಯಿಂದ ಆಡಿದರೆ ಕ್ರೀಡೆ ಗೆದ್ದಂತೆ.

ಅಂತರ್‌ರಾಷ್ಟ್ರೀಯ ರಾಜಕೀಯವು ಸಂಬಂಧವೂ ಹೌದು; ಸ್ಪರ್ಧೆಯೂ ಹೌದು; ಕೆಲವೊಮ್ಮೆ ಯುದ್ಧವೂ ಹೌದು. ಆದರೆ ರಾಷ್ಟ್ರೀಯ ರಾಜಕೀಯ ಒಂದು ತಂಡದ ಆಟ. ಅದು ದೇಶದ, ರಾಜ್ಯಗಳ ಸಿದ್ಧಾಂತಗಳ ಆದರ್ಶದಡಿ ನಡೆಯುವ ಆಟ. ಅದು ಗಡಿಯೊಳಗಿನ ಸ್ಪರ್ಧೆ; ಒಳ್ಳೆಯ ತಂಡವನ್ನು ಆಯ್ಕೆ ಮಾಡುವ ಗರಡಿ; ಆದರೆ ಯುದ್ಧವಲ್ಲ ಮತ್ತು ಒಬ್ಬನೇ ಇನ್ನೊಬ್ಬರ ಬೆನ್ನಮೇಲೆ ನಿಂತೋ ಕುಳಿತೋ ಸವಾರಿ ಮಾಡಿ ದೊಣ್ಣೆಬೀಸಿ ಒಡೆಯುವ ಮೊಸರು ಕುಡಿಕೆಯೂ ಅಲ್ಲ.

ಏಕವ್ಯಕ್ತಿ ಪ್ರದರ್ಶನದಲ್ಲಿ ಒಬ್ಬನೇ ನಾಯಕ. ಆತನೇ ಪ್ರದರ್ಶನದ ಮುಖ್ಯ ಪಾತ್ರ. ಇತರ ಪಾತ್ರಗಳಿಲ್ಲ. ಆತನ ವೈಯಕ್ತಿಕ ಸಾಧನೆ ಆತನನ್ನು ಅಲ್ಲಿಯ ವರೆಗೆ ತಲುಪಿಸುತ್ತದೆ. ಆದರೆ ಪ್ರತೀ ಬಾರಿಯೂ ತಾನು ಇದೇ ಸ್ಥಾನದಲ್ಲಿರುತ್ತೇನೆಂಬ ವಿಶ್ವಾಸವಿದ್ದರೂ ಇದರಿಂದ ಕಳಚಿ ಬೀಳಬಹುದೆಂಬ ಭಯ-ಭಯವಲ್ಲದಿದ್ದರೂ ಆತಂಕ-ಮನೆಮಾಡಿರುತ್ತದೆ.

ಪ್ರಜಾಪ್ರಭುತ್ವವಾದಿ ಸಿದ್ಧಾಂತವನ್ನೊಡಮೂಡಿಸಿಕೊಂಡ ಭಾರತವೆಂಬ ದೇಶಕ್ಕೆ ಅಡಿಯಿಂದ ಮುಡಿಯವರೆಗೆ ವಿಸ್ತರಿಸಿದ ಸಂವಿಧಾನದ ಕವಚವಿದೆ. ಅದನ್ನು ಮೀರಿ ಆಳುವವರಾಗಲೀ ಆಳಿಸಿಕೊಳ್ಳುವವರಾಗಲೀ ಶಿರಸ್ತ್ರಾಣ ಧರಿಸುವಂತಿಲ್ಲ. ಈ ಎಚ್ಚರವಿರುವ ಪ್ರಜೆಗಳು ಸಾಮಾಜಿಕ ಬದ್ಧತೆಯನ್ನು, ಮತ್ತು ಮುಖ್ಯವಾಗಿ ಕಾನೂನನ್ನು ಗೌರವಿಸುತ್ತಾರೆ. ಈ ಹೊಣೆಯನ್ನರಿತ ಪ್ರಭುಗಳು ಅಧಿಕಾರವನ್ನು ಒಂದು ಸೇವಾವಕಾಶವೆಂದು ತಿಳಿದು ಕರ್ತವ್ಯ ಬದ್ಧರಾಗಿರುತ್ತಾರೆ; ತನಗೂ, ದೇಶಕ್ಕೂ ಗೌರವ ತರುತ್ತಾರೆ. ಇತರರನ್ನು ಗೌರವಿಸುವವನು ತಾನೂ ಮಾನ್ಯನಾಗುತ್ತಾನೆ ಎಂದು ಹೇಳುವ ಹಾಗೆ.

ಉನ್ನತ ಸ್ಥಾನದಲ್ಲಿ ಒಬ್ಬನೇ ಕುಳಿತರೆ ಏನಾಗುತ್ತದೆಂಬುದಕ್ಕೆ ನರೇಂದ್ರ ಮೋದಿಗಿಂತ ಒಳ್ಳೆಯ ಉದಾಹರಣೆ ಸಿಕ್ಕದು. (ನಾದಿರ್‌ಶಾ ಅಥವಾ ಕೊಡಗಿನ ದೊಡ್ಡರಾಜೇಂದ್ರ ನೆನಪಾಗಬಹುದು!) ಒಂದು ದಶಕದ ದೇಶನಾಯಕತ್ವ, ಅದಕ್ಕೆ ಮೊದಲು ಒಂದು ದಶಕಕ್ಕೂ ಹೆಚ್ಚು ಅವಧಿಯ ರಾಜ್ಯ ನಾಯಕತ್ವವು ಮೋದಿಯನ್ನು ಅವರದೇ ಪಕ್ಷದ ಒಬ್ಬ ನಾಯಕನಾಗಿಸುವುದಕ್ಕಿಂತಲೂ ಪಕ್ಷಕ್ಕಿಂತ ಪ್ರತ್ಯೇಕವಾದ ಮತ್ತು ಪಕ್ಷಕ್ಕೂ ಮಿಗಿಲಾದ ಒಬ್ಬ ಸಾರ್ವಭೌಮನನ್ನು ಸೃಷ್ಟಿಸಿತು. ಸಂಘಪರಿವಾರದ ಚಿಂತನೆಯೊಂದಿಗೆ ಭಾರತೀಯ ಜನತಾ ಪಕ್ಷದ ರಾಜಕೀಯಕ್ಕಿಳಿದ ಮೋದಿ ಈಗ ತಾನೇ ಘೋಷಿಸಿ ಅಧಿಕಾರಕ್ಕೇರಿದ ಚಿಂತನೆಯನ್ನೂ ಲೆಕ್ಕಿಸುವ ಹಾದಿಯಲ್ಲಿಲ್ಲ. ತಾನು, ತಾನು ಮತ್ತು ತಾನು. ಈ ಆತ್ಮನಿರ್ಭರತೆಯು ಅವರದೇ ಪಕ್ಷದ ಇತರ ಎಲ್ಲ ನಾಯಕರನ್ನು ಗೋಣು ಆಡಿಸುವ ಅನುಚರರನ್ನಾಗಿಸಿದೆ. 2024ರ ಚುನಾವಣೆಯಲ್ಲಿ ಭಾಜಪದ ಬಹುತೇಕ ಅಭ್ಯರ್ಥಿಗಳು ಸ್ವಂತ ಅಸ್ತಿತ್ವವಿಲ್ಲದೆ, ಪ್ರೇತಾತ್ಮಗಳಂತೆ ಅಲೆದಾಡುತ್ತಿದ್ದಾರೆಯೇ ವಿನಾ ತಾವೇ ದೇಶಕಟ್ಟುವ ಕೆಲಸದ ಯಾವ ಆದರ್ಶವನ್ನಾಗಲೀ, ಭರವಸೆಗಳನ್ನಾಗಲೀ ಜನರೆದುರು ಮಂಡಿಸುವುದಿಲ್ಲ. ನನ್ನನ್ನು ಗೆಲ್ಲಿಸುವ ಮೂಲಕ ಮೋದಿಯವರನ್ನು ಗೆಲ್ಲಿಸಿ, ‘ಮೋದಿಯವರ ಮುಖ ನೋಡಿ ನನಗೆ ಮತ ಹಾಕಿ’ ಎಂದು ಹೇಳಿ ಮೋದಿಯ ಹೆಸರಿನಲ್ಲಿ ಗೆಲ್ಲುವ ಪ್ರಯತ್ನಮಾಡುತ್ತಿದ್ದಾರೆ.

ವ್ಯಕ್ತಿ ಮುಖ್ಯವಲ್ಲ, ಚಿಂತನೆ ಮುಖ್ಯ, ಸಿದ್ಧಾಂತ ಮುಖ್ಯ ಎಂಬ ಮಾತಿನೊಂದಿಗೆ ಭಗವಾಧ್ವಜವನ್ನು ಅರ್ಚಿಸುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಈಗ ಅಲ್ಲಿ ಮೋದಿಯನ್ನು ಸ್ಥಾಪಿಸಿದೆ. ಡಾಕ್ಟರ್‌ಜೀ, ಗುರೂಜಿ, ದೇವರಸ್, ಸುದರ್ಶನ್ ಇವರ ಬಳಿಕ ಇರುವ ಸರಸಂಘಚಾಲಕರು ಪಾಪ, ರಾಷ್ಟ್ರಪತಿಗಳ ಹಾಗೆ ಮುದ್ರೆಯ ಅಲಂಕಾರದವರಾಗಿದ್ದಾರೆ. ಮೋದಿ ಪ್ರಧಾನಿಯಾಗಿರುವುದರ ಜೊತೆಗೆ ಪಕ್ಷಾಧ್ಯಕ್ಷತೆ, ಹಾಗೆಯೇ ದೇಶದ ಮತ್ತು ರಾಜ್ಯಗಳ ಎಲ್ಲಾ ಖಾತೆಗಳ ಮಂತ್ರಿಗಿರಿ, ಎಲ್ಲ ರಾಜ್ಯಗಳ ರಾಜ್ಯಪಾಲ ಹುದ್ದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕತನ ಹೀಗೆ ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದರಾದರೂ ವಾಸ್ತವದಲ್ಲಿ ಅದು ಸಾಧ್ಯವಿಲ್ಲದ್ದರಿಂದ ಈ ಪೈಕಿ ಅತೀ ಹೆಚ್ಚು ಅಧಿಕಾರವನ್ನು ಬಳಸಬಲ್ಲ ಸ್ಥಾನವನ್ನು ಉಳಿಸಿಕೊಂಡು ಅದರ ಮೂಲಕ ಇತರರನ್ನು ನಿಯಂತ್ರಿಸುತ್ತಿದ್ದಾರೆ.

ನರೇಂದ್ರ ಮೋದಿ ತನ್ನ ನಂತರದ ಒಬ್ಬ ನಾಯಕನನ್ನೂ ಸಿದ್ಧಗೊಳಿಸುತ್ತಿಲ್ಲ. ಹೋಗಲಿ, ತನ್ನ ಜೊತೆಗೇ ದುಡಿಯುವ ಇತರ ನಾಯಕರ ಕುರಿತೂ ಬಹಿರಂಗವಾಗಿ ಯಾವ ಮೆಚ್ಚುಗೆಯ ಮಾತನ್ನೂ ಆಡುತ್ತಿಲ್ಲ. ಅವರಲ್ಲಿ ತನ್ನ ಪ್ರತಿಸ್ಪರ್ಧಿಯಿರಬಹುದೆಂಬ ಆತಂಕದಿಂದಲೇ ವರ್ತಿಸುತ್ತಿದ್ದಾರೆ. ಒಕ್ಕೂಟ ಸರಕಾರದ ಸಚಿವರಾಗಿರುವ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಇವರ್ಯಾರೂ ಮೋದಿಗಿಂತ ಕಡಿಮೆಯೇನಲ್ಲ. ಆದರೆ ಪ್ರಚಾರ ಪ್ರಧಾನಿ ಮೋದಿಗೆ ಮಾತ್ರ. ಇರಲಿ, ಅವರಾದರೂ ತನ್ನ ಮೇಲೆ ಬೀಳುವ ಪ್ರಭೆಯಲ್ಲಿ ಒಂದು ಭಾಗವನ್ನು ಈ ವ್ಯಕ್ತಿಗಳಿಗೆ ವರ್ಗಾಯಿಸುತ್ತಾರೆಯೇ ಎಂದರೆ ಅದೂ ಇಲ್ಲ. ಹಾಗೆ ನೋಡಿದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಭಾಗವತ್ ಅವರಿಗೆ ನೀಡಿದ ಅವಕಾಶವನ್ನೂ ಈ ಹಿರಿಯ ಸಚಿವರುಗಳಿಗೆ ನೀಡಿಲ್ಲ. ಅಯೋಧ್ಯೆಯ ಮಂದಿರದ ಉದ್ಘಾಟನೆಯ ಪ್ರಸಂಗದಲ್ಲಿ ಈ ಧೋರಣೆಯನ್ನು ಕಾಣಬಹುದು. ಬದಲಾಗಿ ವರ್ಚಸ್ಸಿನಲ್ಲಿ ಮೋದಿಯವರ ಸನಿಹಕ್ಕೂ ಬಾರದ ಜೈಶಂಕರ್, ಅನುರಾಗ್‌ಠಾಕೂರ್, ನಿರ್ಮಲಾ ಸೀತಾರಾಮನ್, ಸ್ಮತಿ ಇರಾನಿ, ಶೋಭಾ ಕರಂದ್ಲಾಜೆ ಮುಂತಾದವರಿಗೆ ಇತರರಿಗಿಂತ ಹೆಚ್ಚು ಸ್ಥಳಾವಕಾಶವನ್ನೂ, ಸಂದರ್ಭಾವಕಾಶವನ್ನೂ, ಪ್ರಚಾರಾವಕಾಶವನ್ನೂ ನೀಡುತ್ತಿದ್ದಾರೆ.

ಇವರನ್ನು ಹೊರತುಪಡಿಸಿ ಇತರ ಹಾಲಿ ಹಾಗೂ ಮಾಜಿ ಹಿರಿಯ ನಾಯಕರುಗಳಿಗೆ ಯಾವ ಮನ್ನಣೆಯೂ ಇಲ್ಲ. ಅಡ್ವಾಣಿಯೆಂಬ ಪ್ರಬಲ ಸ್ಪರ್ಧಿಯನ್ನು ಮೂಲೆಗುಂಪು ಮಾಡಿ ಅವರ ಆಕಾಂಕ್ಷೆಯನ್ನು ಬೂದಿ ಮಾಡಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವ ಮೂಲಕ ಅದೇ ಬೂದಿಯನ್ನು ಹಣೆಗಿಟ್ಟುಕೊಂಡ ಪ್ರಸಂಗ ಅಡ್ವಾಣಿಯವರನ್ನು ಹೊರತುಪಡಿಸಿ ಇತರ ಎಲ್ಲರನ್ನೂ ನಾಚಿಸಬೇಕು.

ದೇಶದ ಪ್ರಧಾನಿ ತನ್ನ ಸಂಪುಟದ ಯಾವುದೇ ಇಲಾಖೆಯ ಸಾಧನೆ ಗಳನ್ನೂ (ಸಾಧನೆಗಳಿದ್ದಲ್ಲಿ) ಆ ಖಾತೆಯ ಸಚಿವರಿಗೆ ವರ್ಗಾಯಿಸುವುದು ಸಂಪ್ರದಾಯ. ಆದರೆ ಯಾವ ಸಚಿವರ ಹೆಸರೂ ಜನಮನದಲ್ಲಿ ಉಳಿಯದಂತೆ ಮೋದಿ ಸಾಕಷ್ಟು ಎಚ್ಚರವಹಿಸುತ್ತಾರೆ. ವಿದೇಶಾಂಗ ಸಚಿವರು ಪಾಲ್ಗೊಂಡರೆ ಸಾಕಾಗುವ ಸಭೆ-ಸಮಾರಂಭಗಳಲ್ಲಿ ತಾವೇ ಭಾಗವಹಿಸುತ್ತಾರೆ. ತಾವು ಮುಖಭಂಗ ಅಥವಾ ಮುಜುಗರವನ್ನು ಎದುರಿಸಬೇಕಾದ ಸಂದರ್ಭಗಳಲ್ಲಿ ಸಂಬಂಧಿಸಿದ ಸಚಿವರನ್ನು ಕಳುಹಿಸುತ್ತಾರೆ. ದಹಿಸುತ್ತಿದ್ದ ಮಣಿಪುರಕ್ಕೆ ಭೇಟಿಕೊಡದಿದ್ದರೂ ಅಂಬಾನಿಯ ಮಗನ ವಿವಾಹ ನಿಶ್ಚಿತಾರ್ಥದಲ್ಲಿ ಭಾಗವಹಿಸುವುದನ್ನು ತಪ್ಪಿಸಿಕೊಳ್ಳಲಾರರು. ಹಾಗೆಯೇ ತಾನು ಎದುರಿಸಬೇಕಾದ ಸಮಸ್ಯೆಗಳನ್ನು ಸಾರ್ವಜನಿಕವಾಗಿ ಎದುರಿಸದೆ ವಿಚಲಿತ ರಸ್ತೆಯನ್ನು ಆಯ್ದುಕೊಂಡು ಪಲಾಯನಮಾಡುವುದಂತೂ ಸಾಮಾನ್ಯ. ಯಾವಾಗ ಎಲ್ಲಿ ಏನನ್ನು ಹೇಳಿದರೆ ಜನರನ್ನು ಮರುಳುಮಾಡಬಹುದೆಂಬ ತಂತ್ರವನ್ನು ಕಲಿತ ಈ ಪ್ರಧಾನಿ ತನ್ನ ಒಂದು ದಶಕದ ಸಾಧನೆಯನ್ನು ಹೇಳಿಕೊಳ್ಳುವುದರ ಬದಲು 1974ರಲ್ಲಿ ಭಾರತ-ಶ್ರೀಲಂಕಾ ನಡುವೆ ಕಚ್ಛತೀವು ದ್ವೀಪಕ್ಕೆ ಸಂಬಂಧಪಟ್ಟಂತೆ ಆಗಿರುವ ಒಪ್ಪಂದವನ್ನು ಈಗ ಎತ್ತುತ್ತಾರೆ. ಈ ಹತ್ತುವರ್ಷಗಳ ಕಾಲ ನೀವೇನು ಕತ್ತೆಕಾಯುತ್ತಿದ್ದಿರೇ ಎಂದು ಕೇಳುವ ತಪ್ಪನ್ನು ಮನಸ್ಸಿನಲ್ಲಿ ಮೂಡಿದರೂ ಯಾರೂ ಮಾಡಿಲ್ಲ.

ಒಂದು ಮಹಾಚುನಾವಣೆ ಎದುರಾದಾಗ ತನ್ನ ಕುರಿತು ಸರ್ವೋಚ್ಚ ನ್ಯಾಯಾಲಯವು ಚುನಾವಣಾ ಬಾಂಡುಗಳ ಅಕ್ರಮವನ್ನು ಸಾರಿ ಅವನ್ನು ರದ್ದುಗೊಳಿಸಿದ ಬಳಿಕ ವಿವರಗಳನ್ನು ನೀಡಲು ಎಷ್ಟು ಸಾಧ್ಯವೋ ಅಷ್ಟೂ ಸತಾಯಿಸಿ ಕೊನೆಗೆ ಅಂತಹ ಪ್ರಯತ್ನವು ನಿಷ್ಫಲವಾದಾಗ ವಿವರಗಳನ್ನು ಒಪ್ಪಿಸಿ (ಅವು ಲಭ್ಯವಿಲ್ಲವೆಂಬ ಸುಳ್ಳು ಬಯಲಾಗಿ) ಸೋಲೊಪ್ಪಿಕೊಳ್ಳುವ ಬದಲು ಈ ಬಾಂಡುಗಳಿಂದಾಗಿ ಯಾರು ಯಾರಿಗೆ ಹಣಕೊಟ್ಟರು ಎಂಬುದು ಗೊತ್ತಾಗುತ್ತದೆಯೆಂಬ ಹುಂಬ ವಾದವನ್ನು ಮಾಡುತ್ತ ನೀವು ಏನು ಬೇಕಾದರೂ ತೀರ್ಮಾನಿಸಿ, ‘ನೋಡಿ ಸ್ವಾಮಿ, ನಾವಿರೋದೇ ಹೀಗೆ!’ ಎಂಬ ವಾದಕ್ಕೆ ಶರಣಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ಬಗೆಯ ವ್ಯಂಗ್ಯ, ಟೀಕೆಗಳು ಬಂದರೂ ಅವನ್ನು ಲೆಕ್ಕಿಸದೆ ಮುಂದುವರಿಯುವ ಅಂದರೆ ಕೊನೆಯವರೆಗೂ ಡಾನ್‌ಕ್ವಿಕ್ಸೋಟ್ ನೀತಿಯನ್ನೇ ಆಚರಿಸಿಕೊಂಡು ಬಂದಿದ್ದಾರೆ. ಅವರ ವಾದಗಳನ್ನು, ಪ್ರಚಾರ ವೈಖರಿಗಳನ್ನು ಮತ್ತು ಅವರ ಭಕ್ತಜನರನ್ನು ಯೋಚಿಸುವಾಗ ಎಂಥ ಮರುಳಯ್ಯ ಇದು ಎಂಥ ಮರುಳೂ... ಎಂಬ ಸಾಲುಗಳು ಸುಳಿಯುತ್ತವೆ.

ಯಾವುದೇ ಮಹಾಸಂಗ್ರಾಮದ ಹೊತ್ತಿನಲ್ಲಿ ಉಳಿದೆಲ್ಲ ಕೌಟಿಲ್ಯಗಳನ್ನು ಬದಿಗಿರಿಸಿ ಪ್ರಸಂಗಕ್ಕೆ ಗಾಂಭೀರ್ಯವನ್ನು ತರುವುದು ಒಬ್ಬ ನಾಯಕನ ಬದುಕಿನ ಶೈಲಿಯಾಗಿರಬೇಕು. ಅದು ಹೊರತು ಎದುರಾಳಿಯನ್ನು ಬಲಹೀನಗೊಳಿಸಿ, ನಿಶ್ಶಸ್ತ್ರಗೊಳಿಸಿ, ಸೋಲಿಸುವುದು ಧೈರ್ಯತನವಲ್ಲ; ಯುದ್ಧದ ನೀತಿಯೇ ಅಲ್ಲ. ಭಾರತದ ಪರಂಪರೆಯಲ್ಲಿ ಇಂಥವರು ಪುರಾಣಕಾಲದಿಂದಲೇ ಇದ್ದಾರೆ. ಮಹಾಭಾರತದ ಉದ್ಯೋಗಪರ್ವದಲ್ಲಿ ಕೌರವನು ತನ್ನ ದುಷ್ಟಚತುಷ್ಟಯದ ಮೂಲಕ ಕೃಷ್ಣನನ್ನು ಕಟ್ಟಿಹಾಕಲು ಯತ್ನಿಸಿದ ಪ್ರಸಂಗವಿದೆ. ಮುಂದೆ ದ್ರೋಣಪರ್ವದಲ್ಲಿ ಹೀಗೆಯೇ ಕೆಲವು ದುರುಳರ ಸಂಚಿನಿಂದ ಅಭಿಮನ್ಯುವನ್ನು ಅಸಹಾಯಕನನ್ನಾಗಿಸಿ ಕೊಂದ ಪ್ರಸಂಗವೂ ಇದೆ. ಇವೆಲ್ಲವೂ ಸೂಚಿಸಿದ್ದು ಕೇಡನ್ನೇ ಹೊರತು ತಂತ್ರವನ್ನಲ್ಲ. ಕೇಡು ಯಾವ ವ್ಯಕ್ತಿಗೂ ಭೂಷಣವಲ್ಲ ಮತ್ತು ಅದನ್ನು ಆದರ್ಶದ ಭಾಷಣಗಳ ಮೂಲಕ ಮುಚ್ಚಿಡಲು ಸಾಧ್ಯವಾಗದು. ಚುನಾವಣೆಯು ನ್ಯಾಯಪರವಾಗಿರಬೇಕೆಂಬ ಪ್ರಜಾಪ್ರಭುತ್ವದ ಆದರ್ಶದೆದುರು ಇಬ್ಬರು ಮುಖ್ಯಮಂತ್ರಿಗಳನ್ನು ತಮ್ಮ ನಿಯಂತ್ರಣದಲ್ಲಿರುವ ಇ.ಸಿ., ಸಿ.ಬಿ.ಐ., ಈ.ಡಿ., ಆದಾಯಕರ ಇಲಾಖೆ, ಇನ್ನಿತರ ಸಂಸ್ಥೆಗಳ ಮೂಲಕ ಕಾನೂನೆಂಬ ಚಕ್ರವ್ಯೆಹದಲ್ಲಿ ಬಂಧಿಸಿ ಸೆರೆಮನೆಗೆ ತಳ್ಳಿ ಅಥವಾ ಹಣಕಾಸನ್ನು ಅವರಿಂದ ಜಪ್ತಿಮಾಡಿಸಿ, ತಾನು ಚುನಾವಣೆಯನ್ನು ಗೆಲ್ಲುತ್ತೇನೆಂದು ಯೋಚಿಸುವುದು ಲಜ್ಜಾಹೀನತೆಯ ಕುಸಿತದ ಚರಮಸೀಮೆ. ಚುನಾವಣಾ ಆಯೋಗವು ಈ ಕುರಿತು ಮೌನವ್ರತವನ್ನು ಸಾರಿದೆ. ಪ್ರಧಾನಿಯಾಗುವ ಮೊದಲು ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದರಲ್ಲವೇ? ಆಗ ಅವರು ಸಿಬಿಐಯನ್ನು ‘ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್’ ಎಂದು ಕರೆದಿದ್ದರು ಅಥವಾ ಜರೆದಿದ್ದರು. ಅದೇ ಸ್ಥಾನಕ್ಕೆ ತಾನು ಬಂದಾಗ? ಮತ್ತದೇ ಪಲ್ಲವಿ; ಅನುಪಲ್ಲವಿ. ಈ ಯಾರಿಗೂ ತಾವು ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲ, ಭವಿಷ್ಯಕ್ಕೆ ಅಪಚಾರವೆಸಗುತ್ತಿದ್ದೇವೆಂಬ ಕನಿಷ್ಠ ಪ್ರಜ್ಞೆಯೂ ಇಲ್ಲದಿರುವುದು ಭಾರತ ಮತ್ತು ಅದರ ಶಿಕ್ಷಣ, ಸಾಮಾಜಿಕ ಜವಾಬ್ದಾರಿ ಎತ್ತ ಸಾಗುತ್ತಿದೆಯೆಂಬ ಬಗ್ಗೆ ನಾಮಫಲಕದಂತಿದೆ. ಇವೆಲ್ಲ ದೊರೆಯ ಭೀತಿಯ, ಆತಂಕದ ಲಕ್ಷಣಗಳೇ? ಹುಲಿ ಕೂಡಾ ಭಯಪಟ್ಟರೆ ಮಾತ್ರ ಎದುರಾಳಿಯ ಮೇಲೆರಗುತ್ತದಂತೆ. ಈ ಕಾರಣಕ್ಕೆ ವ್ಯಕ್ತಿ ತನ್ನ ಸಮತೋಲವನ್ನು ಕಾಯ್ದುಕೊಳ್ಳುವಲ್ಲಿ ಕಳೆದುಕೊಳ್ಳುವ ಅಪಾಯವಿದೆ. ಇದು ಸಮಾಜಶಾಸ್ತ್ರಜ್ಞರಿಗೂ ಮನಃಶಾಸ್ತ್ರಜ್ಞರಿಗೂ ಸಂಬಂಧಿಸಿದ ಮತ್ತು ಅಗತ್ಯವಿರುವ ಅಧ್ಯಯನ. ಆದರೆ ಕುಮಾರವ್ಯಾಸ ವಿವರಿಸಿದ ಮಣಿಸಹಿತ ಕಾಂಚನದ ಪೀಠದ ಗೊಣಸು ಮುರಿದದ್ದು ಮತ್ತು ಕವಿದು ಬಿದ್ದದ್ದು ಕವಿಸಮಯ ಮಾತ್ರವಲ್ಲ, ಶಾಶ್ವತ ಎಚ್ಚರಿಕೆಯಾಗಬೇಕು. ಆದರೆ ಕೃಷ್ಣನಿಗಿಂತ ಕೌರವನಿಗೇ ಹೆಚ್ಚು ಭಕ್ತರಾದರೆ? ರಾವಣನ ಸ್ವರ್ಣಲಂಕೆ ಏನಾಯಿತೆಂಬುದು ಗೊತ್ತಿದೆ; ಸ್ವರ್ಣಭಾರತಕ್ಕೆ ಆ ಗತಿ ಬರಬಾರದು.

ದೇಶದ ಹಿತಾಸಕ್ತಿಯೆಂದರೆ ಅದರ ಜನರ, ನೆಲ-ಜಲ-ಗಾಳಿಯ ಹಿತಾಸಕ್ತಿ. ಇದನ್ನು ಯಾರೇ ಮಾಡಲಿ, ಸಂತೋಷ. ಯುಗಪ್ರವರ್ತಕರಾಗು ವುದೆಂದರೆ ಯುಗವರ್ತಕರಾಗುವುದಲ್ಲ. ಹೆಸರು ಬರಬೇಕೆಂದರೆ ಹತ್ತಾರು ಸರಿಯಾದ ಮತ್ತು ತಪ್ಪಾದ ಹಾದಿಗಳಿವೆ. ಆದರೆ ಹೆಸರು ಉಳಿಯಬೇಕೆಂದರೆ ಒಂದೇ ಹಾದಿ. ಸಮನ್ವಯದ ಹಾದಿ. ಪ್ರೀತಿಯ ಹಾದಿ; ಜಾತಿ-ಮತಗಳ ಹಂಗಿಲ್ಲದ ಇಂಗ್ಲಿಷಿನ ‘ರಿಲಿಜನ್’ ಎಂಬ ಪದದ ಅರ್ಥವನ್ನು ಮೀರಿದ ಜೀವನಧರ್ಮದ ಹಾದಿ. ಈ ಹಾದಿಯಲ್ಲಿ ಮತಿಯನ್ನು ಮತ್ತು ವಿವೇಕವನ್ನು ಹೊಂದಿದವರನ್ನು, ಹೊಂದುವವರನ್ನು ಜನರು ಇಷ್ಟಪಟ್ಟರೆ ಅದು ಆಯಾಯ ಯುಗ-ದೇಶದ ಅದೃಷ್ಟ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News