ಚುನಾವಣೆಯೆಂಬ ಮತ

ಭಾರತದ ಲೋಕಸಭೆಗಾಗಿ ನಡೆಯುವ ಒಂದು ಮಹಾಚುನಾವಣೆಯ ನೂರಕ್ಕೂ ಹೆಚ್ಚು ಕ್ಷೇತ್ರಗಳ ಮೊದಲ ಹಂತ ಮುಗಿದಿದೆ. ಎರಡನೆಯ ಹಂತದ ಚುನಾವಣೆ ಎಪ್ರಿಲ್ 26ರಂದು ನಡೆಯಲಿದೆ. ಮುಂದೆ ಮೇ 7, ಹೀಗೆ ವಿವಿಧ ಹಂತಗಳಲ್ಲಿ ನಡೆದು ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಅಭ್ಯರ್ಥಿಗಳೂ ಮತದಾರರೂ ನೀರಿನಿಂದ ಹೊರಬರುವ ದುರ್ಯೋಧನರನ್ನು ಕಾದು ಕುಳಿತಿದ್ದಾರೆ.

Update: 2024-04-25 04:23 GMT

Photo: PTI

ಭಾರತದ ಲೋಕಸಭೆಗಾಗಿ ನಡೆಯುವ ಒಂದು ಮಹಾಚುನಾವಣೆಯ ನೂರಕ್ಕೂ ಹೆಚ್ಚು ಕ್ಷೇತ್ರಗಳ ಮೊದಲ ಹಂತ ಮುಗಿದಿದೆ. ಎರಡನೆಯ ಹಂತದ ಚುನಾವಣೆ ಎಪ್ರಿಲ್ 26ರಂದು ನಡೆಯಲಿದೆ. ಮುಂದೆ ಮೇ 7, ಹೀಗೆ ವಿವಿಧ ಹಂತಗಳಲ್ಲಿ ನಡೆದು ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಅಭ್ಯರ್ಥಿಗಳೂ ಮತದಾರರೂ ನೀರಿನಿಂದ ಹೊರಬರುವ ದುರ್ಯೋಧನರನ್ನು ಕಾದು ಕುಳಿತಿದ್ದಾರೆ.

ದುರ್ಯೋಧನರೆಂದು ಏಕೆ ಹೇಳಿದೆನೆಂದರೆ ನಮ್ಮ ಅಪೇಕ್ಷೆಯ ಆದರ್ಶ ಪ್ರತಿನಿಧಿಗಳು ಆಯ್ಕೆಯಾಗಿ ಬರಲು ಸಾಧ್ಯವಿಲ್ಲ. ಬದುಕಿಡೀ ಕೇಡನ್ನೇ ಮಾಡಿ ‘ನಾರಾಯಣಾ’ ಎಂಬ ಅಯೋಚಿತ ಪದದ ಉಚ್ಚಾರದೊಂದಿಗೆ ಭಗವಂತನ ಸಾನ್ನಿಧ್ಯವನ್ನು ಪಡೆದ ಅಜಾಮಿಳನ ಹಾಗೆ ಪಕ್ಷದ ಹೆಸರಿನಲ್ಲೋ, ಜಾತಿ-ಮತ-ಧರ್ಮ-ಕೋಮಿನ (ವಿಭಜನೆಯ) ಹೆಸರಿನಲ್ಲೋ ಅಥವಾ ಮೂಲಕವೋ ಅಂತೂ ಗೆದ್ದವರು ಜನಪ್ರತಿನಿಧಿಗಳಾಗುತ್ತಾರೆ. ಇವರನ್ನು ಮುಂದಿನ ಚುನಾವಣೆಯವರೆಗೆ ಸಹಿಸಬೇಕಾದ್ದು ಪ್ರಜೆಗಳ ಕರ್ತವ್ಯ. (ಕರ್ಮಕ್ಕೆ ಕರ್ತವ್ಯ ಎಂಬ ಹಣೆಪಟ್ಟಿ ಇಟ್ಟದ್ದು ಈ ಪ್ರಜಾಪ್ರಭುತ್ವ!)

ತಡವಾಗಿಯಾದರೂ ಭಾರತದ ಮಾಜಿ ಉಪರಾ ಷ್ಟ್ರಪತಿ ಶ್ರೀ ವೆಂಕಯ್ಯನಾಯ್ಡು ಪಕ್ಷಾಂತರದ ಕುರಿತು ಪ್ರಸ್ತಾವಿಸಿದ್ದಾರೆ. ಬೆಳಗ್ಗೆ ಒಂದು ಪಕ್ಷ, ಅಪರಾಹ್ನ ಇನ್ನೊಂದು ಪಕ್ಷ ಮತ್ತು ಪಕ್ಷಾಂತರಿಗಳು ಮೊದಲು ಮಾಡುವ ಕೆಲಸವೆಂದರೆ ತಾವು ಸೇರಿದ ಪಕ್ಷದ ನಾಯಕನನ್ನು ಹೊಗಳುವುದು, ಆನಂತರ ತಾವು ತೊರೆದ ಪಕ್ಷದ ನಾಯಕನನ್ನು ಹಳಿಯುವುದು. ಈ ಪಕ್ಷಾಂತರಿಗಳು ತಕ್ಷಣ ತಾವು ಸೇರಿದ ಪಕ್ಷದ ಅಭ್ಯರ್ಥಿಯಾಗಿ ಟಿಕೆಟ್ ಪಡೆಯುವುದಂತೂ ದೇಶದ ದೌರ್ಭಾಗ್ಯ. ಈ ಬಗ್ಗೆ ನಮ್ಮಲ್ಲಿ ಯಾವುದೇ ಸರಿಯಾದ ಕಾನೂನಿಲ್ಲ. ಕಾನೂನು ಮಾಡುವವರು ಈ ಮಂದಿಯೇ ಆಗಿರುವ ಕಾರಣ ತಪ್ಪಿಸಿಕೊಳ್ಳಲಾರದ ಕಠಿನ ಕಾನೂನು ಎಂದಾದರೂ ಬಂದೀತೆಂಬ ಆಸೆ ಬೇಡ. ಏಕೆಂದರೆ ಲೋಕಸಭೆಯೆಂಬ ಸುಧರ್ಮಸಭೆಗೆ ಹೋಗುವವರು ದೇಶದ ಬಗ್ಗೆ, ನಿರುದ್ಯೋಗದ ಬಗ್ಗೆ, ಬಡತನದ ಬಗ್ಗೆ, ಅನಾರೋಗ್ಯದ ಬಗ್ಗೆ ಪ್ರಸ್ತಾವಿಸುತ್ತಾರೆಂಬ ಕನಸೂ ಬೇಡ. ಭಾರತದ ಈ ಮಹಾಚುನಾವಣೆಯು ಪ್ರಜೆಗಳಿಗೆ ಅಗತ್ಯವಿರುವ ಯಾವ ಸಮಸ್ಯೆಗಳ ಬಗ್ಗೆಯೂ ತನ್ನ ದೃಷ್ಟಿಯನ್ನು ಹಾಯಿಸುತ್ತದೆಂಬ ನಂಬಿಕೆಯೂ ಬೇಡ.

ಈ ಬಾರಿಯ ಚುನಾವಣೆಯು ದೇಶಕ್ಕೆ, ಪ್ರಜೆಗಳಿಗೆ ಎಷ್ಟು ಮುಖ್ಯವೋ ಅದಕ್ಕಿಂತಲೂ ಮುಖ್ಯ ಮೋದಿಯೆಂಬ ಸರ್ವಾಧಿಕಾರಕ್ಕೆ ಮತ್ತು ಅದನ್ನು ವಿರೋಧಿಸುವ ಪ್ರಜೆಗಳಿಗೆ ಬಹುಮುಖ್ಯ ಈಗ ನಡೆಯುತ್ತಿರುವ ಚುನಾವಣೆಯು ಪ್ರತಿಪಕ್ಷಗಳಿಗೂ ಆಡಳಿತದಲ್ಲಿರುವ ಭಾರತೀಯ ಜನತಾಪಕ್ಷಕ್ಕೂ ಎಂದು ತಿಳಿಯುವುದು ತಪ್ಪು. ಭಾರತೀಯ ಜನತಾಪಕ್ಷವೆಂಬುದು ಕಾಗದಪತ್ರ, ಕಾಯ್ದೆಗಳ ದಾಖಲೆಗಳಲ್ಲಿ ಉಳಿದ ಪಕ್ಷ. ಸಂಘಪರಿವಾರವೂ ಹೆಚ್ಚುಕಡಿಮೆ (ಪ್ರಕಾಶಕರ ನೇಪಥ್ಯದಿಂದ ಅವೆನ್ಯೂ ರಸ್ತೆಯ ಸೆಕೆಂಡ್‌ಹ್ಯಾಂಡ್ ಬುಕ್ ಸ್ಟಾಲ್‌ಗೆ ಸೇರಿದ ಪುಸ್ತಕಗಳಂತೆ) ಕಸದ ಬುಟ್ಟಿಗೆ ಸೇರಿದೆ. ಈಗ ಏನಿದ್ದರೂ ಮೋದಿ ವರ್ಸಸ್ ಪ್ರತಿಪಕ್ಷಗಳು/ಜನತೆ.

ಪ್ರತಿಪಕ್ಷಗಳು ಹೊನ್ನಿನ ಮಳೆಯನ್ನು ಸುರಿಸುತ್ತವೆಂದು ನಂಬುವುದೂ ತಪ್ಪು. ಅಲ್ಲೂ ಸಾಕಷ್ಟು ಬಿರುಕುಗಳಿವೆ. ಬಿಕ್ಕಟ್ಟಿನ ಒಗ್ಗಟ್ಟು, ಏಕತೆಯಲ್ಲಿ ಭಿನ್ನತೆ, ಪರಸ್ಪರ ಅಪನಂಬಿಕೆ ಇವುಗಳೇ ಅವುಗಳ ಜೀವಾಳ. ಆದರೆ ಜನರು ನೀರಿನ ಆಳದ ಹರವಿನಂತೆ ಯಾವುದು ಸರಿ, ಯಾವುದು ತಪ್ಪು ಎಂಬ ನಿರ್ಣಯವನ್ನು ಮಾಡುವವರು. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರಕಾರ ನೀಡಿದ ಯಾವ ಭರವಸೆಯೂ ಈಡೇರಲಿಲ್ಲ ಮತ್ತು ಅವರು ನೀಡಿದ ಭರವಸೆಗಳು ಈಡೇರುವುದಕ್ಕಾಗಿ ಮಾಡಿದವಾಗಿರಲಿಲ್ಲ. (ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಮತ್ತು ಖ್ಯಾತ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ 2014ರಿಂದ 2023ರವರೆಗಿನ ಮೋದಿ ಭಾಷಣಗಳನ್ನು, ಯೋಜನೆಗಳ ಸಮೀಕ್ಷಿಸಿ ಹೇಗೆ ಹೆಸರಿಗಾದರೂ ಇರಬೇಕಾಗಿದ್ದ ಸಾಮಾಜಿಕತೆಯ ನಟನೆಯಿಂದ ಬತ್ತಲೆ ವೈಯಕ್ತಿಕತೆಗೆ ಮೋದಿ ವಿಕಾಸಗೊಂಡರು ಎಂಬುದನ್ನು ತಮ್ಮ ‘ಕ್ರೂಕ್‌ಡ್ ಟಿಂಬರ್ ಆಫ್ ನ್ಯೂ ಇಂಡಿಯಾ’ (‘ನವಭಾರತದ ಡೊಂಕುದಿಮ್ಮಿ’) ಎಂಬ ಕೃತಿಯಲ್ಲಿ ವಿವರಿಸಿದ್ದಾರೆ. ಚುನಾವಣೆ ಸಮೀಪಿಸಿದಾಗೆಲ್ಲ ಗುಮ್ಮನನ್ನು ತೋರಿಸಿ ಮಗುವನ್ನು ಮಲಗಿಸಿದಂತೆ ಪಾಕಿಸ್ತಾನವೋ, ಭಯೋತ್ಪಾದನೆಯೋ, ಭದ್ರತೆಗೆ ಅಪಾಯವೋ, ಅದಲ್ಲದಿದ್ದರೆ ‘ಹಣದ್ವಿಗುಣತಂತ್ರ’ದಂತೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ, ಕಾಳಧನವನ್ನು ಹೊರಗೆ ತರುವ, ಭ್ರಷ್ಟಾಚಾರವನ್ನು ನಿಗ್ರಹಿಸುವ, ಕೋಟಿಕೋಟಿ ಉದ್ಯೋಗವನ್ನು ನೀಡುವ, ದೇಶಭಕ್ತಿಯನ್ನು ಉದ್ದೀಪಿಸುವ ಯೋಜನೆಗಳ ಭರವಸೆಯ, ಆತ್ಮನಿರ್ಭರತೆಯೆಂಬ ತತ್ಕಾಲೀನ ವರ್ಣರಂಜಿತ ಶಾಮಿಯಾನಗಳಿಂದ, ಅಂತೂ ಏನಾದರೊಂದು ಮಾಯಾಜಾಲದ ಮೂಲಕ ಮತಗಳಿಕೆಯನ್ನು ಸಾಧಿಸುವುದು ಮೋದಿಗೆ ಕರತಲಾಮಲಕವಾದದ್ದನ್ನು ದೇಶ ಕಂಡಿದೆ. ಇದಕ್ಕೆ ಪ್ರತಿಪಕ್ಷಗಳಲ್ಲಿ ಸರಿಯಾದ ಸಂಘಟಿತ ಯೋಜನೆ-ಯೋಚನೆಯಿಲ್ಲದ್ದು ಮೋದಿಯ ಆತ್ಮವಿಶ್ವಾಸಕ್ಕೆ ಇಂಬು ನೀಡಿದೆ.

ಇತ್ತೀಚೆಗೆ ಮೋದಿಯವರ ಆತ್ಮವಿಶ್ವಾಸ ಕುಗ್ಗಿದೆ. ಅವರ ನಡೆಯ ಕೆಲವು ಸಂಗತಿಗಳನ್ನು ಗಮನಿಸಬಹುದು: ಪಾಕಿಸ್ತಾನವು ಭಯೋತ್ಪಾದನೆಯನ್ನು ಮಾಡುತ್ತ ಬಂದು ಈಗ ಅನ್ನಕ್ಕಾಗಿ ಒದ್ದಾಡುತ್ತಿದೆಯೆಂದು ಟೀಕಿಸುವ ಮೋದಿಯವರು ಅನಾಗರಿಕ ಮತ್ತು ಮಹಿಳೆಯರನ್ನು ನಿಕೃಷ್ಟವಾಗಿ ಗಣಿಸುವ ಅಪ್ಘಾನಿಸ್ತಾನವನ್ನು ಆಳುವ ತಾಲಿಬಾನನ್ನು ರಕ್ಷಿಸಲು ಪಣತೊಟ್ಟವರಂತೆ ಪ್ರತೀ ಬಜೆಟಿನಲ್ಲಿ ನೂರಿನ್ನೂರು ಕೋಟಿ ರೂಪಾಯಿಗಳ ಅನುದಾನವನ್ನು ಮಾಡುತ್ತಿದ್ದಾರೆ. ಗುಜರಾತಿನಲ್ಲಿ ರಕ್ತದ ಕೋಡಿ ಹರಿಸಿದ ಮತ್ತು ಈ ಕುರಿತು ಸರ್ವೋಚ್ಚ ನ್ಯಾಯಾಯಾಲಯದಿಂದ ಉಗ್ರ ಟೀಕೆಯನ್ನು ಎದುರಿಸಿಯೂ ತಾಂತ್ರಿಕ ಕಾರಣಗಳಿಂದ ಶಿಕ್ಷೆಯ ಕುಣಿಕೆಯಿಂದ ಪಾರಾಗಿ ತಾನೇನೂ ಮಾಡಿಲ್ಲವೆಂಬಂತೆ ಪ್ರತಿಪಕ್ಷಗಳನ್ನು ಅದರಲ್ಲೂ ಕಾಂಗ್ರೆಸನ್ನು ಟೀಕಿಸುವ ಮೋದಿ ಕಾರಿನಡಿಗೆ ನಾಯಿ ಬಿದ್ದರೆ ಅದೇನೂ ದೊಡ್ಡದಲ್ಲ ಎಂಬ ಅಮಾನವೀಯ ಸೇಡಿನ ಧರ್ಮವನ್ನು ಅನುಸರಿಸಿಕೊಂಡೇ ಎರಡು ಚುನಾವಣೆಗಳಲ್ಲಿ ಜನರಿಂದ ಸ್ವೀಕೃತರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ ಮುಕ್ತ

ಭಾರತದ ಸೃಷ್ಟಿಯಲ್ಲಿ ಅವರು ವಿಫಲರಾಗಿದ್ದಾರೆ. ತಮ್ಮ ಪಕ್ಷದ ಹಿರಿಯರನ್ನು ಗೌರವಿಸುವ ಸಾರ್ವಜನಿಕ ಪೋಷಾಕಿನೊಂದಿಗೆ ಅವರನ್ನು ಆಳಕ್ಕೆ ತಳ್ಳಿ ಮತ್ತೆ ಮೇಲೇರದಂತೆ ಜಾಗ್ರತೆವಹಿಸಿದ್ದಾರೆ. ಲಾಲ್‌ಕೃಷ್ಣ ಅಡ್ವಾಣಿ, ಮುರಳೀಮನೋಹರ ಜೋಶಿಯವರಂತಹ ವಾನಪ್ರಸ್ಥರನ್ನು ಮಾತ್ರವಲ್ಲ, ವೆಂಕಯ್ಯನಾಯ್ಡುವಿನಂತಹ ಸಕ್ರಿಯ ರಾಜಕಾರಣಿಯನ್ನೂ ನಿಶ್ಚಲವಾಗಿಸಿದ್ದಾರೆ. ವಿಶ್ವಗುರುವೆಂಬ ಸ್ವಘೋಷಿತ ಪ್ರಚಾರದ ನಡುವೆಯೂ ಇಕ್ಕಟ್ಟಿನ ಸಂದರ್ಭಗಳಲ್ಲಿ ಲಘುತನವನ್ನು ತೋರಿ ಉಕ್ರೇನ್-ರಶ್ಯ, ಇಸ್ರೇಲ್-ಪೆಲೆಸ್ತೀನ್ ಮುಂತಾದ ಸಂದರ್ಭಗಳಲ್ಲಿ ನಿರ್ಣಾಯಕ ಅಭಿಮತವನ್ನು ವ್ಯಕ್ತಪಡಿಸಬೇಕಾದ ವಿಶ್ವಸಂಸ್ಥೆಯ ಮತದಾನದಿಂದ ತಲೆತಪ್ಪಿಸಿಕೊಂಡಿದ್ದಾರೆ. ಇಂತಹ ಅನುದಿನದ ವಾರ್ತೆಗಳನ್ನು ಅವರ ಅಭಿಮಾನಿಗಳು ಗಮನಿಸುವುದಿಲ್ಲವೆಂದಲ್ಲ. ಆದರೆ ಅವನ್ನು ನಂಬಿದರೆ ತಾವು ಮೋದಿಯನ್ನು ಬೆಂಬಲಿಸಲು ಸಾಧ್ಯವಿಲ್ಲವೆಂಬ ಕಹಿಸತ್ಯ ಭಕ್ತಾದಿಗಳಿಗೆ ಗೊತ್ತು. ಕೀಟ್ಸನ ‘ವಿಲ್‌ಫುಲ್ ಸಸ್ಪೆನ್ಷನ್ ಆಫ್ ಡಿಸ್‌ಬಿಲೀಫ್’ ರಾಜಕೀಯದಲ್ಲಿ ಈ ಪರಿಯ ಕಹಿವಾಸ್ತವಕ್ಕೆ ಕಾರಣವಾಗಬಹುದೆಂದು ಯಾರೂ ಯೋಚಿಸಿರಲಿಕ್ಕಿಲ್ಲ. ಎಲ್ಲರನ್ನೂ ಎಲ್ಲ ಕಾಲದಲ್ಲೂ ಮೋಸಮಾಡಲು ಸಾಧ್ಯವಿಲ್ಲವೆಂಬ ಲಿಂಕನ್ ನುಡಿಯನ್ನು ಒಂದು ದಶಕಕ್ಕೂ ಮಿಕ್ಕಿ ಗುಜರಾತಿನಲ್ಲಿ, ಹತ್ತು ವರ್ಷಗಳ ಕಾಲ ದೇಶದಲ್ಲಿ ಸುಳ್ಳಾಗಿಸಿದ ಕೀರ್ತಿ ಮೋದಿಯದ್ದು.

ಯಾವಾಗ ತಾವು ಎದೆತಟ್ಟಿಕೊಳ್ಳುತ್ತಿದ್ದ ಜಮ್ಮು-ಕಾಶ್ಮೀರ, ಅಯೋಧ್ಯೆ, ಮುಂತಾದ ಭಾವನಾತ್ಮಕ ವಿಚಾರಗಳು ಮುಗಿದವೋ ಅದಕ್ಕಿಂತ ನೂರುಪಟ್ಟು ಭಾವಗ್ರಹಣದ ಮತ್ತು ಭಾವಾತಿರೇಕದ, ಮತೀಯತೆ, ಮತಾಂಧತೆಯನ್ನು ಪ್ರೇರೇಪಿಸಲು ಈಗ ಮೋದಿ ಹಿಂಜರಿಯುವುದಿಲ್ಲ. ಈ ಬಾರಿಯ (2024) ಚುನಾವಣೆಯಲ್ಲಿ ಮೋದಿಯ ಭಾಷಣಗಳನ್ನು ಗಮನಿಸಿ: ದೇಶದ ಒಂದು ಭಾಗದ ಜನರಿಗೆ ಇನ್ನೊಂದು ಭಾಗದಲ್ಲಿ ಏನು ನಡೆಯಿತು, ತಾನು ಏನು ಹೇಳಿದೆ ಎಂಬುದರ ಪರಿವೆಯೇ ಇಲ್ಲವೆಂಬಂತೆ ಮೋದಿ ಮಾತನಾಡುತ್ತಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಭಾಗವತರೂ ಇದೇ ಗರಡಿಯಲ್ಲಿ ಪಳಗಿದವರು. ಅವರದ್ದು ಭಾಗವತಿಕೆಯಲ್ಲಿ ಮುಗಿದರೆ ಮೋದಿ ಏಕವ್ಯಕ್ತಿ ಪ್ರದರ್ಶನದಲ್ಲಿ ವೇದಿಕೆಯ ತುಂಬಾ ಓಡಾಡುತ್ತಾರೆ; ಅಡ್ಡಾಡುತ್ತಾರೆ. ಇತರ ವೇಷಧಾರಿಗಳಿಗೆ ವೇಷವೇ ಇಲ್ಲ, ಇನ್ನು ಪಾತ್ರವೆಲ್ಲಿ, ಅಭಿನಯವೆಲ್ಲಿ? ವಿದೇಶಗಳಲ್ಲಿ ಭಾರತವನ್ನು ಪ್ರಜಾಪ್ರಭುತ್ವದ ತಾಯಿಯೆಂದು ಆತ್ಮಶ್ಲಾಘನೆಯನ್ನು ಮಾಡುತ್ತಲೇ ಇಲ್ಲಿ ಪ್ರತಿಪಕ್ಷಗಳ ವಿರುದ್ಧ ತಮ್ಮ ಬತ್ತಳಿಕೆಯಲ್ಲಿರುವ ಈ.ಡಿ., ಸಿಬಿಐ, ಐಟಿ, ಎನ್‌ಐಎ ಮುಂತಾದ ಕೇಂದ್ರೀಯ ಇಲಾಖೆಗಳನ್ನು ಛೂಬಿಟ್ಟು ಅವರನ್ನು ಅಸಹಾಯಕ ಅಥವಾ ನಿಶ್ಶಕ್ತಗೊಳಿಸುತ್ತಾರೆ. ವಿದೇಶಾಂಗ ಸಚಿವ ಜೈಶಂಕರ್ ತಾನೊಬ್ಬ ವಿದೇಶಾಂಗ ಸೇವೆಯ ಅಧಿಕಾರಿಯಾಗಿದ್ದೆ ಎಂಬುದನ್ನೂ ಮರೆತು ಪಕ್ಕವಾದ್ಯ ಪ್ರಾವೀಣ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಅನೇಕ ಪ್ರತಿಪಕ್ಷ ನಾಯಕರು ಜೈಲು ಸೇರಿದರೆ ಇತರರು ಬೇಷರತ್ತಾಗಿ ಕಮಲನಯನನ ಪಾದಸೇರಿಕೊಂಡಿದ್ದಾರೆ. (ಈ ಬಗ್ಗೆ ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಟೀಕಿಸಿದ್ದಾರೆ!) ನಿಜವಾದ ಯುದ್ಧದಲ್ಲಿ ಸಮಬಲವಿರಬೇಕಾದಂತೆ ಅವಕಾಶದ ಭದ್ರತೆ ನೀಡಬೇಕಾದ ಚುನಾವಣಾ ಆಯೋಗವು ಮೋದಿಯವರ ಕಿಸೆಯಲ್ಲೇ ಅವಿತು ಕುಳಿತಿದೆ. ಈಗಷ್ಟೇ ಮೋದಿಯವರು ಕೊನೆಯ ಅಸ್ತ್ರವೆಂಬಂತೆ ಮತ್ತು ತಾನು ದೇಶದ ಪ್ರಧಾನಿಯೆಂಬುದನ್ನೂ ಲೆಕ್ಕಿಸದೆ ಟೀಕೆಯ ಕೊಳಚೆಗಿಳಿದು ಅಲ್ಪಸಂಖ್ಯಾತ ಮುಸ್ಲಿಮರನ್ನು ಗುರಿಯಿಟ್ಟು ವ್ಯಕ್ತವಾಗಿಯೇ ಟೀಕಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಸ್ವಇಚ್ಛೆಯಿಂದ ಕ್ರಮಕೈಗೊಳ್ಳುವುದರ ಬದಲಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಗುಲಾಮಗಿರಿಯ ತ್ರಿಮೂರ್ತಿಗಳ ಸಾಕಾರರೂಪವಾಗಿದೆ. (ತಡವಾಗಿ ಕ್ಷೀಣಧ್ವನಿಯಲ್ಲಿ ತಾವು ಪರಿಶೀಲಿಸುವುದಾಗಿ ಹೇಳಿದ್ದಾರೆ! ಈ ಪರಿಶೀಲನೆ ಚುನಾವಣೆಯ ಫಲಿತಾಂಶದ ಮೇಲೆ ಅವಲಂಬಿತವಾಗಬಹುದು!) ಇದರಿಂದಾಗಿ ಚುನಾವಣೆಯೆಂಬುದು ಒಂದು ‘ಸಾಯೋ ಆಟ’ದ ಪ್ರಹಸನವಾಗುತ್ತಿದೆ.

ವಿರಾಟಪರ್ವವು ನಮ್ಮೆದುರು ನಡೆಯುವಂತಿದೆ. ಉತ್ತರಕುಮಾರನು ತನ್ನ ಒಡ್ಡೋಲಗದಲ್ಲಿ ಎಷ್ಟೇ ಹೇಳಿಕೊಂಡರೂ ಎದುರಾಳಿಗಳನ್ನು ಕಂಡಾಗ ಭಯಪಟ್ಟ ಕಥೆ ಗೊತ್ತು. ಹಾಗೆಯೇ ಇಷ್ಟೆಲ್ಲ ಅಬ್ಬರದ ನಡುವೆಯೂ ಮೋದಿ ಬೆವರುತ್ತಾರೆ. ಕಳೆದ ಬಾರಿ ಕರ್ನಾಟಕದ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಹಲವು ಬಾರಿ ಬಂದರೂ ಮೋದಿಯ ‘ಪವಾಡ’ ನಡೆಯಲಿಲ್ಲ. (ಪಶ್ಚಿಮ ಬಂಗಾಳದಲ್ಲೂ, ದಿಲ್ಲಿಯಲ್ಲೂ ಹೀಗೆಯೇ ಆಗಿತ್ತು!) ಜನ ಯಾಕೋ ತಮಗೆ ‘ಮೋಸ’ ಮಾಡುತ್ತಿದ್ದಾರೆಂಬ ಸಂಶಯ ಅವರಿಗೆ ಬಂದಂತಿದೆ. ಆದ್ದರಿಂದ ತಮ್ಮ ಎಲ್ಲ ‘ನಿಧಿ’ಯನ್ನೂ ತಪೋಶಕ್ತಿಯನ್ನೂ ಅವರು ವೆಚ್ಚ ಮಾಡುತ್ತಿದ್ದಾರೆ. ಚಂಡಿಗಡವು ಸೂರತಿನಲ್ಲಿ ಈಗ ಪುನರಾವರ್ತನೆಯಾಗಿದೆ. ಮೋದಿ ಹೇಳುತ್ತಿರುವ ಟ್ರೈಲರ್ ಇದು. ಮುಂದೆ ಇತರ ಕ್ಷೇತ್ರಗಳು ಹೇಗೋ?

ಪ್ರತಿಪಕ್ಷಗಳಿಗೆ ಜನತಾಜನಾರ್ದನನೇ ದಿಕ್ಕು. ಈ ಬಾರಿಯ ಈ ಚುನಾವಣೆಯು ದೇಶದ ಮಾರಕ ಶಕ್ತಿಗಳನ್ನು ಮಾತ್ರವಲ್ಲ, ಪ್ರತಿಪಕ್ಷಗಳನ್ನೂ ಅವರ ಕುರಿತ ಜನಾಭಿಪ್ರಾಯಗಳನ್ನೂ ಕೊನೆಗೆ ದೇಶದ ಅದೃಷ್ಟವನ್ನೂ ಬಯಲುಮಾಡಲಿದೆ. ಜನರಿಗೆ ಇಲೆಕ್ಟೋರಲ್ ಬಾಂಡಿನಂತಹ ಭಾರೀ ಅಕ್ರಮವು ಅರ್ಥವಾಗಿದೆಯೇ ಎಂಬುದು ಮಾತ್ರವಲ್ಲ, ಸಂವಿಧಾನದ ಕುರಿತಂತೆ ಗೌರವವಿದೆಯೇ ಎಂಬುದರ ಸತ್ವಪರೀಕ್ಷೆಗೆ ಈಗ ಸಂಧಿಕಾಲ. ವಿದ್ಯೆ, ಬುದ್ಧಿ, ವಿವೇಕಗಳ ತ್ರಿವೇಣೀ ಸಂಗಮದಲ್ಲಿ ಯಾವುದೊಂದು ಕಳೆದುಹೋದರೂ ದೇಶಕ್ಕೆ ನಷ್ಟ. ಈಗ ಯಾರು ಒಳ್ಳೆಯವರು ಎಂಬ ಪ್ರಶ್ನೆಗಿಂತಲೂ ಈಗಿರುವ ವಿಷಮಯ ವಾತಾವರಣದಿಂದ ತಪ್ಪಿಸಿಕೊಳ್ಳುವುದೇ ದೇಶದ ಅಗತ್ಯ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News