ಚರ್ಚೆಯ ಕೇಂದ್ರ ಯಾವುದಿರಬೇಕು ?

ಈಗಿನ ರಾಜಕೀಯದ ಹೊಂದಾಣಿಕೆಗಳು ಯಾವ ಸಿದ್ಧಾಂತದ ತರ್ಕಕ್ಕೂ ಸಿಗವು. ಅವಕ್ಕಿರುವ ಒಂದೇ ಒಂದು ಗುರಿಯೆಂದರೆ ‘ಅಧಿಕಾರ’. ಹೊಂದಾಣಿಕೆಗಳು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಈ ಮೊದಲಿನ ದಶಕಗಳಲ್ಲೂ ಇದ್ದವಾದರೂ ಅವು ಇಂದಿನ ರೀತಿಯಲ್ಲಿ ಹೊಲಸನ್ನು ಮಿಶ್ರಣಮಾಡಿದಂತಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚರ್ಚೆಗಳಲ್ಲಿರುವ ಕೆಲವರಂತೂ ತಮ್ಮ ಮತ್ತು ಇನ್ನೊಬ್ಬರ ಮುಖಕ್ಕೆ ಮಸಿಬಳಿಯಲು ಗುತ್ತಿಗೆ ಪಡೆದಂತಿದೆ. ಲಜ್ಜೆ ಮತ್ತು ನಿರ್ಲಜ್ಜೆ- ಈ ಎರಡು ಪದಗಳಿಗೆ ಈಗ ಯಾವ ವ್ಯತ್ಯಾಸವೂ ಇಲ್ಲದಾಗಿದೆ. ವ್ಯಂಗ್ಯವಾಗಿ ಹೇಳುವುದಾದರೆ: ಒಂದೇ ಒಂದು ಭರವಸೆಯೆಂದರೆ ಪರಿಸ್ಥಿತಿ ಭವಿಷ್ಯದಲ್ಲಿ ಇನ್ನಷ್ಟು ಕೆಡಬಹುದು ಎಂಬುದೇ ಆಗಿದೆ.

Update: 2024-04-18 06:04 GMT

ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ಮನಮೋಹನ್ ಸಿಂಗ್, ನರೇಂದ್ರ ಮೋದಿ ಎಂಬ ಕನಿಷ್ಠ ಒಂದು ದಶಕದ ಕಾಲ ಭಾರತದ ಆಡಳಿತದ ಸೂತ್ರವನ್ನು ಹಿಡಿದ ನಾಲ್ಕು ಪ್ರಧಾನಿಗಳನ್ನು ಭಾರತ ಕಂಡಿದೆ. ಈ ನಾಯಕರು ಸಂಸತ್ತಿನ ಒಳಗೂ ಹೊರಗೂ ನಡೆದುಕೊಂಡ ಮತ್ತು ಇವರ ಕಾಲದಲ್ಲಿ ಪ್ರಜೆಗಳು ವ್ಯವಹರಿಸಿದ ರೀತಿ-ನೀತಿಗಳನ್ನು ಹೋಲಿಸಿದರೆ ಇವು ಭಾರತೀಯ ಪರಂಪರೆಯ ನಾಲ್ಕು ಪೌರಾಣಿಕ ಘಟ್ಟಗಳನ್ನು ಸಂಕೇತಿಸುವಂತಿವೆ. ಭಾರತೀಯ ನಂಬಿಕೆಯಂತೆ ನಾಲ್ಕು ಯುಗಗಳು: ಕೃತ, ತ್ರೇತಾ, ದ್ವಾಪರ ಮತ್ತು ಕಲಿ. ಇವುಗಳಲ್ಲಿ ಮೊದಲ ಘಟ್ಟದಲ್ಲಿ ಧರ್ಮ ನಾಲ್ಕು ಕಾಲುಗಳಲ್ಲಿ ನಿಂತಿದೆಯಾದರೆ, ಎರಡನೆಯದು ಮೂರು ಕಾಲುಗಳಲ್ಲೂ, ಮೂರನೆಯದು ಎರಡು ಕಾಲುಗಳಲ್ಲೂ, ಕೊನೆಯ ಅಂದರೆ ಈಗಿನ ಕಾಲ ಒಂದು ಕಾಲಲ್ಲೂ ನಿಂತಂತಿದೆ. ಇದು ಪ್ರಧಾನಿಗಳ ನಡೆನುಡಿಗೆ ಸಂಬಂಧಿಸಿದ್ದಕ್ಕಿಂತಲೂ ಇವರ ಕಾಲಗಳಲ್ಲಿ ರಾಜಕಾರಣಿಗಳು ಮತ್ತು ಜನರು ತಮ್ಮೊಳಗೆ ಹಾಗೂ ಪರಸ್ಪರ ನಡೆದುಕೊಂಡ ಮತ್ತು ನಡೆದುಕೊಳ್ಳುತ್ತಿರುವ ರೀತಿಯನ್ನು ಪ್ರತಿಫಲಿಸುವಂತಿದೆ.

ಮೊದಲ ಹಂತದಲ್ಲಿ ಜನರು ವಸಾಹತುಶಾಹಿ ಆಡಳಿತದಿಂದ ಭಾರತವು ಪಾರಾಗಿ ನಮ್ಮದೇ ಆದ ನಡುಪಂಥೀಯ ಕಾಂಗ್ರೆಸ್ ಆಡಳಿತವನ್ನು ಪಡೆದರು. ವಿಭಜನೆಯ ಹಿಂಸೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ನಡೆದ ಮತೀಯ ಮತ್ತು ವರ್ಗೀಯ ದಳ್ಳುರಿಯ ಹೊರತಾಗಿಯೂ ಗಾಂಧಿಯ ಕನಸಿನ ರಾಮರಾಜ್ಯವನ್ನು ಸ್ಥಾಪಿಸುವ ಹುಮ್ಮಸ್ಸಿನ ಜನರು ಬಹಳಷ್ಟಿದ್ದರು. ವಸಾಹತುಶಾಹಿಯ ಅಡ್ಡಪ್ರಭಾವಗಳನ್ನು ಹೊರತುಪಡಿಸಿಯೂ ರೈಲು, ಶಾಲೆ, ಆಸ್ಪತ್ರೆ, ರಸ್ತೆಗಳು, ಆಡಳಿತ ಮತ್ತು ಕಾನೂನು, ಕಂದಾಯ, ಅರಣ್ಯ ವ್ಯವಸ್ಥೆಗೆ ಸಂಬಂಧಿಸಿದ ಇಲಾಖೆಗಳು, ಹೀಗೆ ಪರಸ್ಪರರ ನಡುವೆ ಅಗತ್ಯಗಳ ಸಂಪರ್ಕಕೊಂಡಿ ಜೀವಂತವಿತ್ತು. ಹಿಂದೂ ಧರ್ಮಕ್ಕೆ ಸೋಂಕಾಗಿದ್ದ ಅಸ್ಪಶ್ಯತೆ ಮತ್ತು ಎಲ್ಲ ಭಾರತೀಯರಿಗೂ ಅಗತ್ಯ ಬೇಕಾಗಿದ್ದ ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಮುಂತಾದ ವಿಚಾರಗಳಲ್ಲಿ ಪಕ್ಷಭೇದ ಮರೆತು ಪ್ರಾಜ್ಞರೂ ಜನಸಾಮಾನ್ಯರೂ ಒಂದಾಗಿದ್ದರು; ಮತ್ತು ಸಮಾನ ಸಮಸ್ಯೆಯಾಗಿದ್ದ ಮೂಢನಂಬಿಕೆಗಳ ಆಗರಗಳನ್ನು ಮೂಲೆಗೆ ತಳ್ಳುವುದರಲ್ಲಿ ಸಮಾಜ ಸುಧಾರಕರು ತೊಡಗಿಕೊಂಡಿದ್ದರು. ಆಧುನಿಕತೆಯ ಆವಿಷ್ಕಾರಗಳಾದ ಬಹಳಷ್ಟು ತಾಂತ್ರಿಕ ಸಂಸ್ಥೆಗಳು ಹುಟ್ಟಿಕೊಂಡದ್ದು ಈ ಕಾಲದಲ್ಲೇ. ಇದರಿಂದಾಗಿ ನಮ್ಮ ವಿಜ್ಞಾನ ಸಂಸ್ಥೆಗಳು, ಕೈಗಾರಿಕೆಗಳು, ಅಣೆಕಟ್ಟುಗಳು ಯಶಸ್ವಿಯಾಗಿ ಅಸ್ತಿತ್ವಕ್ಕೆ ಬಂದವು. ರಾಜಕೀಯಕ್ಕೆ ಧರ್ಮದ ಸೋಂಕಿರಲಿಲ್ಲ.

1925ರಷ್ಟು ಹಿಂದೆಯೇ ಜನ್ಮತಳೆದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಹೆಡಗೇವಾರ್ ಎಂಬ ಒಬ್ಬ ಮಾಜಿ ಕಾಂಗ್ರೆಸಿಗನ (ಅಖಿಲ ಭಾರತ ಮಟ್ಟದ ಕಾರ್ಯದರ್ಶಿಯ) ಶಿಶುವೆಂದು ಅನೇಕರಿಗೆ ಗೊತ್ತಿರಬಹುದು. ಸ್ವಾತಂತ್ರ್ಯದ ಮೊದಲೇ ಈ ಸಂಸ್ಥೆಯು ಕಾಂಗ್ರೆಸಿಗೆ ಪರ್ಯಾಯವಾಗಿ ಸೃಷ್ಟಿಗೊಂಡ ಅನೇಕ ಬಲಪಂಥೀಯ ಸಂಘಟನೆಗಳಲ್ಲೊಂದು. ಸಮಾಜ ಪರಿವರ್ತನೆಯ ಹರಕೆ ಹೊತ್ತ ಈ ಸಂಸ್ಥೆಯು ಕಾಲಕ್ರಮೇಣ ಬಲಪಂಥೀಯ ಮತ್ತು ಮತೀಯ ರಾಜಕೀಯಕ್ಕೆ ಹಿಂಬಾಗಿಲ ಬೆಂಬಲವನ್ನೂ, ತನ್ನ ಕಾರ್ಯಕರ್ತರನ್ನೂ ನೀಡಲು ಆರಂಭಿಸಿತು. 1939ರಷ್ಟು ಹಿಂದೆಯೇ ಆರೆಸ್ಸೆಸ್ ಬೆಂಬಲಿತ ಮತ್ತು ಸಾವರ್ಕರ್ ಪ್ರಣೀತ ಬಲಪಂಥೀಯ ಮತೀಯ ಪಕ್ಷವಾದ ಹಿಂದೂ ಮಹಾಸಭಾವು ಮುಸ್ಲಿಮ್ ಲೀಗಿನೊಂದಿಗೆ ಸೇರಿ ಸಿಂಧ್, ಪಂಜಾಬ್ ಮತ್ತು ಬಂಗಾಳದಲ್ಲಿ ಸರಕಾರ ರಚಿಸಿದ್ದವು.

ಸ್ವತಂತ್ರ ಭಾರತಕ್ಕೆ ರಾಜಕೀಯ ಪಕ್ಷಗಳಂತೂ ಬೇಕಿದ್ದವು. ಕಾಂಗ್ರೆಸ್ ಸ್ವಾತಂತ್ರ್ಯವೆಂಬ ಸಿದ್ಧಾಂತ ಮತ್ತು ಗುರಿಗಾಗಿ ಇದ್ದ ಪಕ್ಷವಾದ್ದರಿಂದ ಅದನ್ನು ಸ್ವಾತಂತ್ರ್ಯದ ಬಳಿಕ ವಿಸರ್ಜಿಸಬಹುದೆಂಬ ಅಶಯವನ್ನು ಗಾಂಧಿ ಹೊಂದಿದ್ದರು. ಆದರೆ ಕಾಂಗ್ರೆಸ್ ವಸಾಹತುಶಾಹಿಯಡಿ ಅಧಿಕಾರದ ರುಚಿ ಕಂಡಿದ್ದರಿಂದ ಇಂತಹ ಸಂದರ್ಭವನ್ನು ಮತ್ತು ಸಿದ್ಧ ವ್ಯವಸ್ಥೆಯನ್ನು ಬಳಸಿಕೊಂಡಿತು. ಸ್ವತಂತ್ರ ಭಾರತದಲ್ಲಿ ನಿಷೇಧ ಮುಂತಾದ ಕಡಿವಾಣಗಳಿಗೆ ತುತ್ತಾದ ಈ ಸಂಘಟನೆಯು ಬೆಂಬಲಿಸಿ ಹುಟ್ಟಿಕೊಂಡ ರಾಜಕೀಯ ಪಕ್ಷ ಜನಸಂಘವು ಬಹಳ ಮತೀಯ ಮಡಿವಂತಿಕೆಯನ್ನು ಇಟ್ಟುಕೊಂಡದ್ದರಿಂದ ಸ್ವಂತ ಶಕ್ತಿಯಲ್ಲಿ ಸರಕಾರ ರಚಿಸಲು ಅಶಕ್ತವಾಗಿತ್ತು; ಅಚ್ಚರಿಯೆಂದರೆ ಅದು ಎಡಪಕ್ಷಗಳೊಂದಿಗೆ ಸೇರಿ ಪಂಜಾಬಿನಲ್ಲಿ ಸರಕಾರ ರಚಿಸಿತ್ತು. ಇದು ರಾಜಕೀಯ ಪಕ್ವತೆಯೆಂದರೂ ಸರಿ.

ನೆಹರೂರನ್ನು ವಿರೋಧಿಸುತ್ತಿದ್ದ ಅನೇಕ ಪ್ರತಿಪಕ್ಷ ನಾಯಕರೂ ರಾಷ್ಟ್ರಮಟ್ಟದ ನಾಯಕರೇ. ಆದ್ದರಿಂದ ಅವರಲ್ಲಿ ಅನೇಕರು ತಮ್ಮದೇ ಪಕ್ಷರಾಜಕೀಯದ ಗೆಜ್ಜೆಪೂಜೆಗೆ ಪ್ರವೃತ್ತರಾದರು. ರಾಜಕೀಯ ಭಿನ್ನಾಭಿಪ್ರಾಯದಲ್ಲಿ ರಾಷ್ಟ್ರಹಿತವು ಕಡೆಗಾಣಲಿಲ್ಲ. ಅಂಬೇಡ್ಕರ್, ರಾಜಾಜಿ, ಲೋಹಿಯಾ, ಶ್ಯಾಮ್‌ಪ್ರಸಾದ್ ಮುಖರ್ಜಿ, ನೆಹರೂ ಅಳಿಯ ಫಿರೋಝ್ ಗಾಂಧಿ ಮುಂತಾದವರು ಕೆಸರೆರಚುವ ಕಾಯಕಕ್ಕೆ, ವೈಯಕ್ತಿಕ ಟೀಕೆಗೆ ಇಳಿಯಲಿಲ್ಲ. ಬಳಿಕದ ಪಿಲೂ ಮೋದಿ, ಮಿನೂ ಮಸಾನಿ ಮುಂತಾದವರ ವಾಕ್ಚಾತುರ್ಯವು ಸಂಸತ್ತನ್ನು ಅರ್ಥಪೂರ್ಣವಾಗಿ ಖುಷಿಪಡಿಸುತ್ತಿತ್ತು. ಆಗ ಯುವನಾಯಕರಾಗಿದ್ದ ಬಿಸಿರಕ್ತದ ವಾಜಪೇಯಿಯೂ ತನ್ನ ಸಂಸದೀಯ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದರು. ಅಧಿಕಾರಕ್ಕಾಗಿ ಸ್ಪರ್ಧಿಸುವಾಗಲೂ ದೇಶಕ್ಕೆ ಅಹಿತವನ್ನು ತರುವ ವರ್ತನೆ ಅಪರೂಪವಾಗಿತ್ತು. (ಅಪವಾದಗಳು ಇಲ್ಲವೆಂದು ಯಾವಕಾಲದಲ್ಲೂ ಹೇಳುವಂತಿರಲಿಲ್ಲವೆಂಬುದು ನಮ್ಮ ಪುರಾಣೇತಿಹಾಸದಿಂದ ಗೊತ್ತಾಗುತ್ತದೆ!) ಒಂದೆಡೆ ರಾಜಕಾರಣವು ಸಹ್ಯವಾಗಿ ನಡೆಯುತ್ತಿದ್ದರೆ ಇನ್ನೊಂದೆಡೆ ಅಂತರ್ಜಲದಂತಿದ್ದ ಸಂಪ್ರದಾಯವು ಸ್ವಲ್ಪ ಮಟ್ಟಿಗೆ ಮೂಢನಂಬಿಕೆಗಳಿಂದ ಕಳಚಿಕೊಂಡರೂ ಅನೇಕ ಗೊಡ್ಡುಸಂಪ್ರದಾಯಗಳನ್ನು ಇನ್ನೂ ತೊರೆದಿರಲಿಲ್ಲ. ಜಾತಿ, ವರ್ಗ ಒಂದು ಸಮಸ್ಯೆಯಾಗಿಯೇ ಮುಂದುವರಿಯತು. ಮೀಸಲಾತಿಯು ಈ ದುಷ್ಟ ಲಕ್ಷಣಗಳನ್ನು ತೊಡೆಯುವಲ್ಲಿ ಅಲ್ಪಸ್ವಲ್ಪ ಸಾಫಲ್ಯವನ್ನು ಪಡೆದರೂ ಅದನ್ನು ನಿವಾರಿಸಲು ಈ ಘಟ್ಟ ಯಶಸ್ವಿಯಾಗಲಿಲ್ಲ. ಆದರೂ ಸಾಮಾಜಿಕ, ರಾಜಕೀಯ ಸಾಮರಸ್ಯವು ಅದ್ಯಾವುದೋ ಹೊಂದದ ಹೊಂದಾಣಿಕೆಯಲ್ಲಿ ಮೊಳೆತು ಬೆಳೆಯಿತು. ಸ್ವತಂತ್ರಭಾರತದ ಮೊದಲ ಎರಡು ದಶಕಗಳು ನೆಹರೂರನ್ನು ಕೇಂದ್ರೀಕರಿಸಿ ಚರ್ಚಿಸಿದವು. ಅವರೊಂದಿಗೆ ಅವರ ಅಲಿಪ್ತ ನೀತಿ, ಪಂಚಶೀಲ, ಜೊತೆಗೇ ಕಾಶ್ಮೀರ ಸಮಸ್ಯೆ, ಚೀನಾ ಆಕ್ರಮಣ ಇವೂ ಚರ್ಚೆಗೊಂಡವು. ದೇಶದೊಳಗಿನ ಚರ್ಚೆಯೂ ಆರೋಗ್ಯ, ಶಿಕ್ಷಣ, ನಿರುದ್ಯೋಗ, ಬಡತನ, ಬೆಲೆಯೇರಿಕೆ ಈ ಕುರಿತೇ ಇತ್ತು. ಈ ಘಟ್ಟದಲ್ಲಿ ಚರ್ಚೆ ತೀವ್ರ ತೀಕ್ಷ್ಣವಾಗಿದ್ದರೂ ಒಳ್ಳೆಯ ಗುಣಮಟ್ಟವನ್ನು ಹೊಂದಿತ್ತು. ಕಾರಣವೆಂದರೆ ಆಗಿನ ಬಹುತೇಕ ಸಂಸದರು ವಿದ್ಯಾವಂತರು/ಬುದ್ಧಿವಂತರು/ ಪ್ರತಿಭಾವಂತರು ಆಗಿದ್ದರು.

ಇಂದಿರಾ ಪ್ರಾಯಃ ಜಾತಿಸಮಸ್ಯೆಗಿಂತಲೂ ವರ್ಗಸಮಸ್ಯೆಯೇ ದೊಡ್ಡ ಪಿಡುಗೆಂದು ಅರ್ಥಮಾಡಿಕೊಂಡರು. ಬಡತನ ನಿವಾರಣೆಯ ‘ಗರೀಬಿ ಹಟಾವೋ’ ಘೋಷಣೆಯೊಂದಿಗೆ ಅನೇಕ (ಕಾರ್ಯ)ಕ್ರಮಗಳನ್ನು ಕೈಗೊಂಡರು. ಬ್ಯಾಂಕ್ ರಾಷ್ಟ್ರೀಕರಣವು ಈ ದಿಸೆಯಲ್ಲಿ ದೊಡ್ಡ ಹೆಜ್ಜೆಯಾಯಿತು. ಆನಂತರ ಅನೇಕ ಅಭಿವೃದ್ಧಿ ನಡೆದರೂ ಅಧಿಕಾರವು ಕಾಂಗ್ರೆಸ್ ಮತ್ತು ಅದಕ್ಕೂ ಮೇಲಾಗಿ ಇಂದಿರಾರಲ್ಲಿ ಕೇಂದ್ರೀಕೃತಗೊಂಡು ಪಕ್ಷದೊಳಗೂ ಹೊರಗೂ ಅವರು ಪ್ರಬಲರಾದರು. ಇದನ್ನು ದುರುಪಯೋಗಪಡಿಸಿಕೊಂಡ ಅವರ ಅನೇಕ ಸಹಚರರು, ಅನುಚರರು ಭ್ರಷ್ಟಾಚಾರದ ಬಲೆಯನ್ನೇ ನಿರ್ಮಿಸಿದರು. ದೇಶವಿಡೀ ಇದರ ಕಮಟು ವಾಸನೆ ಹಬ್ಬಿದರೂ ಇಂದಿರಾ ಅದನ್ನು ಅಲಕ್ಷಿಸಿದರು. 1974ರ ಹೊತ್ತಿಗೆ ಸಮಾಜದ ಒಂದು ಗುಂಪು ಮುಖ್ಯವಾಗಿ ವಿದ್ಯಾರ್ಥಿಗಳು, ಯುವಕರು ಲೋಕನಾಯಕ ಜಯಪ್ರಕಾಶರ ನಾಯಕತ್ವದಲ್ಲಿ ಒಂದು ಆಂದೋಲನವನ್ನೇ ಕೈಗೊಂಡರು. ಕಾಕತಾಳೀಯವೆಂಬಂತೆ ರಾಯ್‌ಬರೇಲಿಯಿಂದ ಸಂಸತ್ತಿಗೆ ಇಂದಿರಾರ ಆಯ್ಕೆ ಅಸಿಂಧುವೆಂದು ಅಲಹಾಬಾದ್ ಉಚ್ಚನ್ಯಾಯಾಲಯವು ತೀರ್ಮಾನಿಸಿತು. ಪ್ರಾಯಃ ಈ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಕಾನೂನಿನಡಿಯೇ ಪ್ರಶ್ನಿಸಬಹುದಾಗಿದ್ದರೂ ಅಧಿಕಾರವನ್ನು ಏಕಮೇವಾದ್ವಿತೀಯವಾಗಿ ಅನುಭವಿಸಿದ ಇಂದಿರಾ ಈ ಅನಿರೀಕ್ಷಿತ ಬೆಳವಣಿಗೆಗೆ ಮಿತಿಮೀರಿ ಪ್ರತಿಕ್ರಿಯಿಸಿ 1975ರಲ್ಲಿ ತುರ್ತುಪರಿಸ್ಥಿತಿ ಘೋಷಿಸಿದರು. ಇಂದಿರಾ ನಡೆಸಿದ ಅಭಿವೃದ್ಧಿಯ ಎಲ್ಲ ಬಣ್ಣವನ್ನು ತುರ್ತುಸ್ಥಿತಿಯ ಮಸಿ ನುಂಗಿತು. ಪ್ರತಿಪಕ್ಷಗಳು ಈ ಹಂತದಲ್ಲಿ ತಮ್ಮೆಲ್ಲರ ಭಿನ್ನಾಭಿಪ್ರಾಯವನ್ನು ಮರೆತು ಅಲ್ಲ-, ಒಳಗೇ ಇಟ್ಟುಕೊಂಡು, ಚಳವಳಿ ನಡೆಸಿದವು. ದೇಶಾದ್ಯಂತ ಕಾಂಗ್ರೆಸಿನ ವಿರುದ್ಧ ಸಾಮೂಹಿಕ ಮತ್ತು ಸಮಾನ ಅಭಿಪ್ರಾಯ ಒಡಮೂಡಿತು. ಅನಿವಾರ್ಯವಾಗಿ 1977ರಲ್ಲಿ ಈ ಪರಿಸ್ಥಿತಿ ರದ್ದಾಯಿತು; ಚುನಾವಣೆ ನಡೆಯಿತು; ಕಾಂಗ್ರೆಸ್ ಸೋತಿತು.

ಇಂದಿರಾ ಯುಗದಲ್ಲಿ ಸಿಕ್ಕಿಂನ ಸೇರ್ಪಡೆ, ಬಾಂಗ್ಲಾ ವಿಮೋಚನೆ, ಫೋಕ್ರಾನ್, ತುರ್ತುಸ್ಥಿತಿಯ ಕುರಿತು ಆಕೆಯ ಕೊನೆಯ ವರೆಗೆ ಮಾತ್ರವಲ್ಲ ಅದಾದ ಒಂದೆರಡು ದಶಕಗಳ ಕಾಲ ರಾಜಕೀಯವಾಗಿ ಚರ್ಚೆಗೊಂಡವು. ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದರೂ ತುರ್ತುಸ್ಥಿತಿಯ ಹೇರಿಕೆ ಇಂದಿರಾ ಅವರ ವರ್ಚಸ್ಸನ್ನು ಕೆಡಿಸಿತು. ಆಕೆ 1980ರಲ್ಲಿ ಅಧಿಕಾರಕ್ಕೆ ಮರಳಿದರೂ ಹಿಂದಿನ ಛಾಪು ಕಾಣಲಿಲ್ಲ. ಇಷ್ಟಾದರೂ ವಿಶ್ವದಲ್ಲಿ ಭಾರತದ ಹೆಸರು ಕಾಣಿಸಿದ್ದು, ಕೇಳಿಸಿದ್ದು ಆಕೆಯ ಕಾಲದಲ್ಲೇ. ಅಷ್ಟೇ ಅಲ್ಲ, ಆಕೆ ಮತೀಯವಾಗಿರಲಿಲ್ಲ. ವರ್ಗವ್ಯತ್ಯಾಸವನ್ನೇ ಬಂಡವಾಳವಾಗಿಸಿದ್ದರಿಂದ ಅದೇ ಹಾದಿಯಲ್ಲಿ ಆಕೆ ಮುಂದುವರಿದರು. ಆದರೆ ‘ಇಂಡಿಯಾ ಅಂದರೆ ಇಂದಿರಾ’ ಎಂಬ ಮಟ್ಟಕ್ಕೆ ಭಟ್ಟಂಗಿತನ ತಲುಪಿತು.

ಇಂದಿರಾ ಗಾಂಧಿಗೆ ಮೊದಲು ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್‌ಶಾಸ್ತ್ರಿ (1964-66) ನಿಖರ ನಿಲುವಿಗೆ, ಪ್ರಾಮಾಣಿಕ ರಾಜಕಾರಣಕ್ಕೆ, ಸಾಕ್ಷಿಯಾದರು; ಇಂದಿರಾ ಗಾಂಧಿಯ ದೀರ್ಘಾವಧಿ ಆಡಳಿತದ (1966-1977) ನಂತರ ಬಂದ ಮೊರಾರ್ಜಿದೇಸಾಯಿ (1977-80) ನಿರೀಕ್ಷಿತ ಪ್ರಸಿದ್ಧರಾಗಲಿಲ್ಲ. 1980-84ರ ಇಂದಿರಾಡಳಿತವು ಅಕಾಲಿಕವಾಗಿ ಆಕೆಯ ಹತ್ಯೆಯೊಂದಿಗೆ ಮುಗಿಯಿತು. ಆನಂತರ ಪ್ರಧಾನಿಯಾದ ರಾಜೀವ್ ಗಾಂಧಿ (1984-89), ವಿ.ಪಿ.ಸಿಂಗ್ (1989-90), ಚಂದ್ರಶೇಖರ್ (1990-91), ಕಾಂಗ್ರೆಸ್ ಮುಂದಾಳತ್ವದ ಪಿ.ವಿ. ನರಸಿಂಹರಾವ್ (1991-96), ದೇವೇಗೌಡ (1996-97), ಮಿತಿಯೊಳಗಿನ ಸಾಧಕರಾದರೆ, ಅಟಲ್‌ಬಿಹಾರಿ ವಾಜಪೇಯಿ (1996, 1998-99, 1999-2004) ಒಳ್ಳೆಯ ರಾಜಕಾರಣಿಯೆಂದು ಹೆಸರು ಗಳಿಸಿದರೇ ಹೊರತು ಭಾರತವನ್ನು ಪ್ರಕಾಶಿಸಲು ವಿಫಲರಾದರು. ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್, ಗಮನೀಯ ಅಭಿವೃದ್ಧಿ ಮತ್ತು ಆರ್ಥಿಕ ಸುಧಾರಣೆಯನ್ನು ತಂದರಾದರೂ ಅವರ ಸಾಧನೆಗಳು ಒಂದು ಮಟ್ಟಕ್ಕಿಂತ ಮುಂದೆ ವಿಶೇಷವಾಗಿ ಚರ್ಚೆಯಾಗಲಿಲ್ಲ. ಬದಲಾಗಿ ದೇಶದ ರಾಜಕೀಯವು ಮತೀಯಧ್ರುವೀಕರಣದಿಂದ ಬದಲಾಯಿತು; ಅಯೋಧ್ಯಾವಿವಾದ ಚರ್ಚೆಯ ಭಾಗವಾಯಿತು.

ಇಂದಿರೋತ್ತರ ಘಟ್ಟದಲ್ಲಿ ಆಧುನಿಕತೆಗೆ ಭಾರತ ತೆರೆದುಕೊಂಡಿತಾದರೂ ಅಯೋಧ್ಯಾ ವಿವಾದ ಕಾಂಗ್ರೆಸಿನ ಮೃದು ಹಿಂದುತ್ವಕ್ಕೆ ನುಂಗಲಾರದ ತುತ್ತಾಗಿ ಕೊನೆಗೆ ಕಾಂಗ್ರೆಸ್ ಅದಕ್ಕೆ ಎರವಾಯಿತು. ಇದರಿಂದಾಗಿ ಯಾರು ಅಧಿಕಾರ ಪಡೆದರು ಎನ್ನುವುದಕ್ಕಿಂತಲೂ ಕಾಂಗ್ರೆಸ್ ತನ್ನ ಶಕ್ತಿಯನ್ನು ಸಾಕಷ್ಟು ಕಳೆದುಕೊಂಡಿತು ಎಂಬುದೇ ಮುಖ್ಯವಾಯಿತು.

ಮೂರನೆಯ ಘಟ್ಟ 2004-2014. ಮನಮೋಹನ್‌ಸಿಂಗ್ ಪ್ರಧಾನಿಯಾಗಿ ವೈಯಕ್ತಿಕ ಹೆಸರನ್ನು ಪಡೆದು ಅನೇಕ ಸುಧಾರಣೆಗೆ ಮನಮಾಡಿದರಾದರೂ ಪಕ್ಷ ಕಳಂಕಿತವಾಯಿತು. ಅಧಿಕಾರದ ಕಾಲಾವಧಿ ಹೆಚ್ಚಾದರೂ ಅನೇಕ ಬಾಣಸಿಗರ ಅಡುಗೆಯಲ್ಲಿ ರುಚಿಕೆಟ್ಟಿತು. ಒಂದು ದಶಕದ ಮನಮೋಹನ್ ಸಿಂಗ್ ಸರಕಾರ ಅನೇಕ ಗೊಂದಲಗಳ ಹಿನ್ನೆಲೆಯಲ್ಲಿ ಮತ್ತು ಅವರು ಕಾಂಗ್ರೆಸ್‌ನ ಕುಟುಂಬರಾಜಕಾರಣದ ಕೈಗೊಂಬೆಯೆಂಬ ಸಂಶಯದಿಂದಾಗಿ ಪರಿಣಾಮಕಾರಿಯೆನಿಸಲಿಲ್ಲ. ಈ ಹಂತದಲ್ಲಿ ಚರ್ಚೆಗಳು ಶಿಥಿಲಗೊಂಡಿದ್ದವು. ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದ್ದು ಬಿಟ್ಟರೆ ಪ್ರತಿಪಕ್ಷಗಳು ಪ್ರಜೆಗೆ ಪ್ರಯೋಜನವಿಲ್ಲದ, ತಮ್ಮ ಅಧಿಕಾರ ಬೇಟೆಗೆ ಬೇಕಾದ, ಅಗ್ಗದ ರಾಜಕಾರಣವನ್ನೇ ಮಾಡಿದವು.

ಆನಂತರದ ಒಂದು ದಶಕ (2014-2024) ಮೋದಿಕಾಲ. ಇದು ಅಧಿಕಾರ ಕೇಂದ್ರೀಕರಣ, ಮತೀಯತೆ ಮುಂತಾದವನ್ನು ಪ್ರಚೋದಿಸಿ, ಸ್ವಘೋಷಿತ ವಿಶ್ವಶ್ರೇಷ್ಠ ಭಾರತವನ್ನು ಪ್ರಚಾರಮಾಡಿದ ಕಾಲ. ಇಂದಿರಾ ಯುಗದಂತೆ ‘ಇಂಡಿಯಾ ಅಂದರೆ ಮೋದಿ’ ಎಂಬ ರಾಷ್ಟ್ರೀಯ ರಾಗದ ಯುಗ ಇದು. ಇದು ಏನಿದ್ದರೂ ಪ್ರಚಾರಕಾಲವೇ ಹೊರತು ಅಂತರ್‌ರಾಷ್ಟ್ರೀಯವಾಗಿ ಯಾವುದೇ ಸಾಧನೆಯ ಕಾಲವಾಗಿರಲಿಲ್ಲ. ಆಂತರಿಕವಾಗಿ ಮೋದಿ ಮತೀಯ ನಾಯಕ. ಆದರೆ ಜಾಗತಿಕವಾಗಿ ಪ್ರಜಾಪ್ರಭುತ್ವವನ್ನು ಬೋಧಿಸುವ ಚಾಣಾಕ್ಷ. ಅಯೋಧ್ಯೆ, ಕಾಶ್ಮೀರ, ಸಂವಿಧಾನಕ್ಕೆ ಒದಗಿದ ಆತಂಕ, ಮತೀಯ ಧ್ರುವೀಕರಣ ಮತ್ತು ಅದಕ್ಕನುಗುಣವಾದ ಸಿಎಎ, ಎನ್‌ಸಿಆರ್, ಸಂವಿಧಾನದ 370ನೇ ವಿಧಿಯ ರದ್ದತಿ ಮುಂತಾದವು ಬಹಳಷ್ಟು ಚರ್ಚೆಗೊಂಡರೂ ಪರಿಣಾಮ ಶೂನ್ಯ. ಮೋದಿ ತನ್ನ ಪಕ್ಷವನ್ನೂ ಕ್ಯಾರೇ ಅಂದವರಲ್ಲ. ಅವರ ಹೊರತಾಗಿ ಇನ್ಯಾರಿದ್ದಾರೆಂಬ ಸೂತಕ ಅವರ ಪಕ್ಷಕ್ಕಿನ್ನೂ ಬಾಧಿಸಿಲ್ಲ. ಮೋದಿಯವರ ಈ ಸ್ಥಿತಿಯೇ ಇಂದಿನ ರಾಜಕೀಯ ಹವಾಗುಣ. ಮಣಿಪುರ ರಹಿತ ಭಾರತ ಪರ್ಯಟನ ಮಾಡಿದರೂ ಅದಕ್ಕಿಂತ ಹೆಚ್ಚು ವಿಶ್ವಪರ್ಯಟನ ಮಾಡಿದ, ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸದ (ಅಪ)ಕೀರ್ತಿಯನ್ನು ಮೋದಿ ಪಡೆದಿದ್ದಾರಾದರೂ ಪ್ರತಿಪಕ್ಷಗಳು ಎತ್ತುವ ನಿರುದ್ಯೋಗ, ಭ್ರಷ್ಟಾಚಾರ, ಮತೀಯತೆ ಮುಂತಾದ ವಿಚಾರಗಳನ್ನು ತಮ್ಮ ಭಾಷಣದ ಧೂಳಿನ ಮೂಲಕ ಮುಚ್ಚಬಲ್ಲ ಅವರ ಶಕ್ತಿಯನ್ನು ಗೌರವಿಸುವ ಅಪಾರ ಬೆಂಬಲಿಗರಿದ್ದಾರೆ. ಈಗ ಅವರ, ಅವರ ಪಕ್ಷದ ಚರ್ಚೆಯೇನಿದ್ದರೂ ಅವರೊಬ್ಬರ ಬಗ್ಗೆ ಮಾತ್ರ. ಅವರದ್ದು ಒಂದು ರೀತಿಯಲ್ಲಿ ವಿಚಾರರಹಿತ ಕ್ರಾಂತಿ.

ಆದರೆ ದೇಶದ ದುರದೃಷ್ಟವೆಂದರೆ ಈಗ ಚರ್ಚೆಯ ಗುಣಮಟ್ಟ ಕುಸಿದಿರುವುದು. ಈಗ ಸರಕಾರವು ಪ್ರಜೆಗಳ ಅಗತ್ಯವಾದ ಉದ್ಯೋಗ, ಶಿಕ್ಷಣ, ಆರೋಗ್ಯ, ಭ್ರಷ್ಟಾಚಾರ ಮುಂತಾದವುಗಳ ಬಗ್ಗೆ ಚರ್ಚಿಸದೆ, ಅವನ್ನು ಮೂಲೆಗುಂಪುಮಾಡಿ, ಭಾವನಾತ್ಮಕ ಸಂಗತಿಗಳಾದ ಜಾತಿ-ಮತ-ಧರ್ಮವನ್ನು ಪರಸ್ಪರ ಎತ್ತಿಕಟ್ಟುತ್ತಿದೆ. ಯಾರು ಯಾವ ವಿಚಾರವನ್ನು ಹೇಳಿದರೂ ಅದನ್ನು ವೈಯಕ್ತಿಕ ನೆಲೆಗೆ ಇಳಿಸಬಲ್ಲ ರಾಜಕೀಯ ಕುತಂತ್ರಿಗಳು ಢಾಳಾಗಿದ್ದಾರೆ. ಸೈದ್ಧಾಂತಿಕವಾಗಿ ಯಾವುದೇ ಚರ್ಚೆ ನಡೆಯುವುದಿಲ್ಲ; ಯಾರಾದರೊಬ್ಬರು ಆರಂಭಿಸಿದರೂ ಅವರೆಷ್ಟೇ ತಜ್ಞರಿರಲಿ, ಅವರನ್ನು ಏಕವಚನದ ಬಲಪ್ರಯೋಗದ ಮೂಲಕ, ಅವರನ್ನು ಒಂದು ಪಕ್ಷದ ಆಳಾಗಿಸುವ ಮೂಲಕ ಚಾರಿತ್ರ್ಯಹನನ ಮಾಡುವುದೇ ಈಗ ರಾಜಕೀಯವಾಗಿದೆ. ಮನಮನಗಳನ್ನು ಜಾತಿ, ಮತ, ಜನಾಂಗ, ಧರ್ಮ, ಭಾಷೆ- ಈ ಆಧಾರದಲ್ಲಿ ಗಣಕೀಕೃತಗೊಳಿಸಿ ಒಡೆಯಲಾಗಿದೆ; ಅಖಂಡಭಾರತ ನಿರ್ಮಾಣದ ಭರವಸೆಯಿರಲಿ, ಕುಟುಂಬ ಮಿಲನಕ್ಕೆ ಕಾಷ್ಠ ಸಿದ್ಧಗೊಂಡಿದೆ; ಮನೆಮನೆಗಳು ಒನಕೆಯ ನೆಪವೂ ಇಲ್ಲದೆ ಹೋಳಾಗುತ್ತಿವೆ. ಪೂರ್ವಸೂರಿಗಳ ಶವವನ್ನು ಗೋರಿಯಿಂದ ಮುಕ್ತಗೊಳಿಸಿ ಬತ್ತಲೆಗೊಳಿಸುವಲ್ಲಿ ಪ್ರಧಾನಿಯಿಂದ ತೀರಾ (ಅ)ಸಾಮಾನ್ಯನ ವರೆಗೂ ರಾಜಕಾರಣಿಗಳು ಮಾತ್ರವಲ್ಲ, ಪ್ರಜೆಗಳೂ ಹಿಂದುಳಿದಿಲ್ಲ. ಇದರಿಂದಾಗಿ ತಜ್ಞರು ಚರ್ಚೆಗಿಳಿಯಲು ಹಿಂದೆಮುಂದೆ ನೋಡುವಂತಾಗಿದೆ. ಈ ಹಂತಕ್ಕೆ ಚರ್ಚೆಯನ್ನು ಇಳಿಸುವಲ್ಲಿ ಶಾಸಕಾಂಗ, ಕಾರ್ಯಾಂಗಗಳ ಜೊತೆಗೆ ಮಾಧ್ಯಮಗಳ ಪಾತ್ರವಂತೂ ಅಭೂತಪೂರ್ವ. ಚಿಲ್ಲರೆ ನಾಣ್ಯಗಳು ಮಾಡುವ ಸದ್ದು, ಕಾಲುಕೆದರಿ ಎಬ್ಬಿಸುವ ಧೂಳು ವಾತಾವರಣವನ್ನು ಮಲಿನಗೊಳಿಸಿದೆ; ನ್ಯಾಯಾಂಗದ ಪಾತ್ರವನ್ನು ನಿಷ್ಕರ್ಷೆಮಾಡಬೇಕಾಗಿದೆ.

ಈಗಿನ ರಾಜಕೀಯದ ಹೊಂದಾಣಿಕೆಗಳು ಯಾವ ಸಿದ್ಧಾಂತದ ತರ್ಕಕ್ಕೂ ಸಿಗವು. ಅವಕ್ಕಿರುವ ಒಂದೇ ಒಂದು ಗುರಿಯೆಂದರೆ ‘ಅಧಿಕಾರ’. ಹೊಂದಾಣಿಕೆಗಳು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಈ ಮೊದಲಿನ ದಶಕಗಳಲ್ಲೂ ಇದ್ದವಾದರೂ ಅವು ಇಂದಿನ ರೀತಿಯಲ್ಲಿ ಹೊಲಸನ್ನು ಮಿಶ್ರಣಮಾಡಿದಂತಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚರ್ಚೆಗಳಲ್ಲಿರುವ ಕೆಲವರಂತೂ ತಮ್ಮ ಮತ್ತು ಇನ್ನೊಬ್ಬರ ಮುಖಕ್ಕೆ ಮಸಿಬಳಿಯಲು ಗುತ್ತಿಗೆ ಪಡೆದಂತಿದೆ. ಲಜ್ಜೆ ಮತ್ತು ನಿರ್ಲಜ್ಜೆ- ಈ ಎರಡು ಪದಗಳಿಗೆ ಈಗ ಯಾವ ವ್ಯತ್ಯಾಸವೂ ಇಲ್ಲದಾಗಿದೆ. ವ್ಯಂಗ್ಯವಾಗಿ ಹೇಳುವುದಾದರೆ: ಒಂದೇ ಒಂದು ಭರವಸೆಯೆಂದರೆ ಪರಿಸ್ಥಿತಿ ಭವಿಷ್ಯದಲ್ಲಿ ಇನ್ನಷ್ಟು ಕೆಡಬಹುದು ಎಂಬುದೇ ಆಗಿದೆ.

ಅತ್ಯಂತ ಶಕ್ತ ಪ್ರಾಣಿಯೆನಿಸಿದ ಡೈನೋಸರಸ್ ಕೂಡಾ ಒಂದು ಘಟ್ಟದ ಬಳಿಕ ಅಳಿದಿದೆ. ಇನ್ನು ಈ ಭಾವನಾತ್ಮಕ ಸಂಗತಿಗಳು ಉಳಿದಾವೇ? ಇದು ಅರ್ಥವಾಗುವ ವರೆಗೆ ಚರ್ಚೆ ಹೀಗೇ ರಕ್ತಸುರಿಸುತ್ತಿರುತ್ತದೆ. ಚುನಾವಣೆಗಳು ಅದೇ ಆಧಾರದಲ್ಲಿ ನಡೆಯುತ್ತಿರುತ್ತವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News