ಐಚ್ಛಿಕ ಮತ್ತು ಅನಿವಾರ್ಯ

Update: 2024-03-28 04:08 GMT

ಬದುಕಿನಲ್ಲಿ ಬಹಳಷ್ಟು ಆಯ್ಕೆಗಳಿರುತ್ತವೆ. ಹೀಗಿದ್ದರೇ ಯಶಸ್ಸು ಎಂಬ ಮಾಪನವೂ ಇಲ್ಲ; ಸೂತ್ರವೂ ಇಲ್ಲ. ಆದರೂ ಮನುಷ್ಯ ತನ್ನೊಳಗೇ ಆಯ್ಕೆಯನ್ನು ಬಯಸುತ್ತಾನೆ. ಸಮಾಜದ ವೈವಿಧ್ಯಕ್ಕೆ ಕಾರಣವಾಗಬಲ್ಲ ಏಳು ಬಣ್ಣಗಳು ಮನುಷ್ಯನಿಗೆ ಬೇಕಿಲ್ಲ. ಆತ ಸುಲಭದ-ಹೀಗೆ ಹೇಳುವುದಕ್ಕಿಂತ ಯಶಸ್ಸಿನದೆಂದು ನಂಬಲಾದ- ಹಾದಿಯನ್ನು ಕ್ರಮಿಸಲು ಇಚ್ಛಿಸುತ್ತಾನೆ. ಅದನ್ನು ಅನಿವಾರ್ಯವೆಂದು ತಿಳಿಯುತ್ತಾನೆ.

ಹಿಂದಕ್ಕೆ ಹೋಗೋಣ. ಪಂಪನಿಗೆ ಬನವಾಸಿಯೇ ಜಗತ್ತಾಗಿದ್ದಿರಬಹುದು. ಅವನು ದೇಶಕೋಶಗಳನ್ನು ಸುತ್ತಿದಂತೆ ಕಾಣುವುದಿಲ್ಲ. ಶಂಕರಾಚಾರ್ಯರು ಈಗಿನ ಭಾರತ-ಪಾಕಿಸ್ತಾನಗಳು ಸೇರಿದ ಭೂಭಾಗದಲ್ಲಿ ನಡೆದೇ ಪರಿಕ್ರಮಗಳನ್ನು ಮಾಡಿದರಂತೆ. ಯಾವುದು ದೊಡ್ಡದು? ಅವರವರಿಗೆ ರುಚಿಸಿದ್ದು ಅವರವರು ರಚಿಸಿದ್ದು, ಅವರವರಿಗೆ. ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಏಕೆಂದರೆ ಈ ಯಾರೂ ಉಳಿದಿಲ್ಲ.

ಸಮಕಾಲೀನ ಸಮಾಜದ ಕೆಲವು ಚಿತ್ರಗಳನ್ನು ನೋಡಬಹುದು: ಏನೂ ಓದದವರು ಕೋಟ್ಯಾನುಕೋಟಿ ಸಂಪಾದಿಸುವ ಉದ್ದಿಮೆಯ ಒಡೆಯರಾಗುತ್ತಾರೆ; ರಾಷ್ಟ್ರನಾಯಕರಾಗುತ್ತಾರೆ. ಸೇನೆಗೆ ಆಯ್ಕೆಯಾಗುವ ದೈಹಿಕ ದಾರ್ಢ್ಯತೆಯಿಲ್ಲದವರು ರಕ್ಷಣಾ ಸಚಿವರಾಗಿ ಸೇನೆಗೆ ಸೇರಿದವರಿಂದ ಸಲಾಮು ಸ್ವೀಕರಿಸುತ್ತಾರೆ. ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಕೊನೆಗೆ ಅಂಚೆ ಕಚೇರಿಯಲ್ಲೋ, ಬ್ಯಾಂಕಿನಲ್ಲೋ ಗುಮಾಸ್ತರಾಗಿ ಇಲ್ಲವೇ ಅಧಿಕಾರಿಗಳಾಗಿ ದುಡಿದು ತಮ್ಮ ಐಹಿಕ ಯಾತ್ರೆಗೆ ತೊಡಗುತ್ತಾರೆ. ಅಧ್ಯಯನದ ಹೆಸರಿನಲ್ಲಿ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದು ಬಳಿಕ ಉದ್ಯೋಗದಲ್ಲೋ ಅಥವಾ ಉದ್ಯೋಗಕ್ಕೆ ಮೆಟ್ಟಲಾಗಿಯೋ ಸಂಶೋಧನೆಯನ್ನು ಅಥವಾ ಸಂಶೋಧನೆಯ ಹೆಸರಿನಲ್ಲೋ ಇನ್ನೂ ಮೇಲಣ ಪದವಿಗಳನ್ನು ಪಡೆದು ಸಮಾಜದಿಂದ ದೂರವಾಗಿ ಕೀರ್ತಿಶನಿಯ ಹುಡುಕುವಿಕೆಯಲ್ಲಿ ಬದುಕು ಸವೆಸುತ್ತಾರೆ. ಕೆಲವರು ದೊಡ್ಡ ಪಟ್ಟಣ/ನಗರಗಳನ್ನು ಸೇರಿ ಅಲ್ಲಿ ಕೋಟಿಗೊಬ್ಬರಾಗಿ ಯಾರಿಗೂ ತಿಳಿಯದಷ್ಟು ಅನಾಮಿಕರಾಗಿ ಆದರೂ ತಾವು ಪ್ರಸಿದ್ಧರೆಂದೋ, ಎಲ್ಲರಿಗೂ ಬೇಕಾದವರೆಂದೋ ತಿಳಿದುಕೊಳ್ಳುತ್ತಾರೆ. ಹೀಗೆ ಕೋಟಿಗೊಬ್ಬರಾಗದವರು ಲಕ್ಷಕ್ಕೊಬ್ಬರಾಗಿ ಇಲ್ಲವೇ ಅದಕ್ಕೂ ಕಿರಿದಾದ ಸಾವಿರಕ್ಕೊಬ್ಬರಾಗಿ ನೂರಕ್ಕೊಬ್ಬರಾಗಿ ಏನಿಲ್ಲವೆಂದರೆ ತನ್ನೂರಿನ ಒಂದಷ್ಟು ಜನರ ಮಧ್ಯೆ ಉದ್ಯೋಗವನ್ನೋ ವೃತ್ತಿಯನ್ನೋ ಮಾಡಿ ಅದನ್ನೇ ತನ್ನ ಜಗತ್ತಾಗಿ ಮಾಡಿಕೊಂಡು ಸುಖವಾಗಿರುವವರೂ ಇದ್ದಾರೆ. ಈ ಪುಟ್ಟ ಗುಂಪಿನಲ್ಲಿರುವವರು ಸಮಾಧಾನದ ಬದುಕನ್ನು ಬದುಕುವಷ್ಟು ಜನ-ಪ್ರಿಯರಾಗಿರುತ್ತಾರೆ. ಅದನ್ನು ಅವರೂ ಅವರ ಒಡನಾಡಿಗಳೂ ಇಷ್ಟಪಡುತ್ತಾರೆ. ತಮ್ಮನ್ನುಳಿದು ಇರಬಹುದಾದ ಈ ವಿಶಾಲ ಜಗತ್ತಿನ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ತಲೆಕೆಡಿಸಿಕೊಳ್ಳಬೇಕು ಯಾಕೆ? ಕಾಲ ಮತ್ತು ದೇಶದ ಸಂದರ್ಭದಲ್ಲಿ ಯಾವುದೂ ಶಾಶ್ವತವಲ್ಲ; ಯಾರೂ ಶಾಶ್ವತವಲ್ಲ. ನಿನ್ನೆಯನ್ನು ನೋಡಿದ್ದೇನೆಂದು ಸಾಬೀತುಪಡಿಸುವುದು ಹೇಗೆ? ನಂಬಬೇಕು, ಅಷ್ಟೇ. ನಾಳೆಯನ್ನು ಕಾಣುವೆನೆಂಬ ಭರವಸೆಯೇನು? ನಿರೀಕ್ಷೆ ಅಷ್ಟೇ. ಇಂದು ನನ್ನದು; ನನ್ನ ಇಂದ್ರಿಯಗಳಿಗೆ ದಕ್ಕುವ ಕೆಲವರದ್ದು. ನಮಗಿರಬೇಕಾದ್ದು ಇಷ್ಟೇ. ಅದಕ್ಕೇ ಕುವೆಂಪು ಬರೆದದ್ದು: ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ. ನಿನ್ನೆಗೆ ಇಂದಿಲ್ಲ, ಇಂದಿಗೆ ನಿನ್ನೆಯಿಲ್ಲ, ನಾಳೆಗೆ ನಿನ್ನೆಯಿಲ್ಲ, ಇಂದೂ ಇಲ್ಲ. ಚುಟುಕಾಗಿ ಹೇಳಬೇಕಾದರೆ ಹಿಂದೂ ಇಲ್ಲ, ಮುಂದೂ ಇಲ್ಲ.

ಯಾರಿಗೆ ಯಾವುದು ಅಪೇಕ್ಷಣೀಯವೋ ಅದನ್ನು ಅವರು ಅನಿವಾರ್ಯದ ಸ್ಥಿತಿಗೆ ತಲುಪಿಸುತ್ತಾರೆ. ಶಿಕ್ಷಣದ ಉದಾಹರಣೆಯನ್ನು ಪರಿಗಣಿಸಿದರೆ ಅನೇಕರು ತಾವು ಕಲಿತದ್ದನ್ನು ಸಮಾಜದ ಅತ್ಯಂತ ಅಪೇಕ್ಷಣೀಯ ವಿದ್ಯೆಯೆಂದು ತಿಳಿಯುತ್ತಾರೆ; ತಿಳಿಯುತ್ತಾರೋ ಇಲ್ಲವೋ, ತಿಳಿದವರಂತೆ ನಂಬಿದವರಂತೆ, ವಿಶ್ವಾಸದಂತೆ ಹೇಳುತ್ತಾರೆ. ತಾನೂ ತನ್ನ ಕುಟುಂಬದ ಎಲ್ಲರೂ ಶಿಕ್ಷಕರಾದ ಕುಟುಂಬಿಯೊಬ್ಬರು ಇಷ್ಟು ಅಗತ್ಯವಾದ ಸೇವೆಯನ್ನು ಸಮಾಜಕ್ಕೆ ಕೊಡಬಲ್ಲ ಕ್ಷೇತ್ರಗಳ ಕುಟುಂಬಗಳು ಅಪರೂಪ ಎನ್ನುತ್ತಿದ್ದರು. ಇನ್ನೊಂದು ಕುಟುಂಬದಲ್ಲಿ ಎಲ್ಲರೂ ವೈದ್ಯರುಗಳೇ. ಅವರೂ ತನ್ನ ಕುಟುಂಬ ಜನತೆಗೆ ಬೇಕಾದ ಬಹುಮುಖ್ಯ ಸೇವೆಯನ್ನು ನೀಡುತ್ತಿದೆಯೆಂದು ಹೇಳುತ್ತಿದ್ದರು. ವಕೀಲರು, ಇಂಜಿನಿಯರುಗಳು, ಲೆಕ್ಕಪತ್ರ ಪರಿಶೋಧಕರು, ಎಲ್ಲರೂ ಹೀಗೆಯೇ. ಮನೆಪೂರ್ತಿ ಒಂದೇ ಬಣ್ಣ. ಎಲ್ಲಿಗೆ ಬಂತು ನಮ್ಮ ಗ್ರಾಮರಾಜ್ಯದ ಕಲ್ಪನೆ? ಗಾಂಧೀಜಿ ಪ್ರತೀ ಹಳ್ಳಿಯಲ್ಲೂ ವಿವಿಧ ಉದ್ಯೋಗಗಳನ್ನು, ವೃತ್ತಿಗಳನ್ನು ಮಾಡಬಲ್ಲ ಒಂದೊಂದು ಕುಟುಂಬವಾದರೂ ಇರಬೇಕು ಆಗಷ್ಟೇ ಎಲ್ಲರ ದುಡಿಮೆ ಅರ್ಥಪೂರ್ಣ ಎಂದಿದ್ದರಂತೆ. ಅಗತ್ಯಕ್ಕೆ ಬೇಕಾದ ಕೌಶಲ್ಯವಿಲ್ಲದ ವ್ಯಕ್ತಿಗಳು ಎಷ್ಟಾದರೂ ಸಿಕ್ಕಬಹುದು. ಕೌಶಲ್ಯಪೂರ್ಣ ವ್ಯಕ್ತಿಗಳೆಷ್ಟು ಸಿಕ್ಕಾರು? ಹೆಣಹೊರುವವರು ಸಿಗಬಹುದು. ಸಣ್ಣಪುಟ್ಟ ಇತರ ಸಹಾಯಕ್ಕೆ ಸಿಗಬಹುದು. ಆದರೆ ನಮಗೆ ಸಾಮಾನ್ಯ ವ್ಯವಹಾರದಲ್ಲಿ ಗೊತ್ತಿಲ್ಲದ ವೃತ್ತಿಪರ ಕೆಲಸಗಳಿಗೆ ಜನ ಸಿಗುವುದಿಲ್ಲ. ಅಷ್ಟರ ಮಟ್ಟಿಗೆ ಎಲ್ಲರೂ ಅನಿವಾರ್ಯರೇ.

ಸಮಾಜಕ್ಕೆ ಎಲ್ಲವೂ ಬೇಕು. ಆದರೆ ಯಾವುದು ಐಚ್ಛಿಕ ಯಾವುದು ಅನಿವಾರ್ಯ ಎಂಬ ಬಗ್ಗೆ ಸ್ಪಷ್ಟ ಸಾಮಾನ್ಯ ಕಲ್ಪನೆಯಿರಬೇಕು. ಕಲೆ ಐಚ್ಛಿಕ; ಅನ್ನ-ನೀರು, ಸೂರು, ಬಟ್ಟೆ ಅನಿವಾರ್ಯ. ಆದ್ದರಿಂದಲೇ ಬಹುಪಾಲು ಜನರಿಗೆ ಕಲೆ ಅನಿವಾರ್ಯವಲ್ಲ; ಮನರಂಜನೆಯೂ ಅನೇಕರಿಗೆ ಅನಿವಾರ್ಯವಲ್ಲ; ಸುಲಭವಾಗಿ ವೀಕ್ಷಿಸುವುದಾದರೆ ಇರಲಿ ಎಂಬ ಧೋರಣೆ ಬಹಳ ಜನರದ್ದು. ಬುದ್ಧಿಜೀವಿಗಳು ಇಷ್ಟಪಡುವ, ಚರ್ಚಿಸುವ, ಸಾಹಿತ್ಯ, ಚಿಂತನೆ ಎಷ್ಟು ಜನರಿಗೆ ಬೇಕು? ಕೆಲವೇ ಜನರು ಕುಳಿತು ತಾವೇನೋ ಮಹಾಸಾಧನೆಯನ್ನು ಮಾಡಿದ್ದೇನೆಂದು ಬೀಗುವ ಮೇಧಾವಿಗಳು ಜನರನ್ನು ತಲುಪದಿರಲು ಇದೇ ಕಾರಣವಿರಬಹುದು. ವಿಜ್ಞಾನದ ಸಂಶೋಧನೆಗಳನ್ನು ಗಮನಿಸಿದರೆ ಸಾಧನೆಯ ಫಲಗಳಲ್ಲಿ ಬಹುಪಯೋಗಿ ಸಾಧನಗಳಷ್ಟೇ ಜನರಿಗೆ ಗೊತ್ತಿರುತ್ತದೆ ಮತ್ತು ಬೇಕಿರುತ್ತದೆ. ಮೊಬೈಲ್ನಂತಹ ಸಾಧನವು ಮಾತಿನ ಅಗತ್ಯಗಳನ್ನು ಪೂರೈಸುತ್ತದೆಯಾದ್ದರಿಂದ ಮತ್ತು ಜನಸಾಮಾನ್ಯರ ಚಟುವಟಿಕೆಗಳಿಗೂ ಅದು ಬೇಕೇಬೇಕೆನ್ನುವ ಕ್ರಮಗಳನ್ನು ಸರಕಾರ ಕೈಗೊಂಡಿದೆಯಾದ್ದರಿಂದ ಅದು ಅನಿವಾರ್ಯದ ಹಂತವನ್ನು ತಲುಪಿದೆ. ಆದರೂ ಎಷ್ಟು ಜನರು ‘ಸ್ಮಾರ್ಟ್ಫೋನ್’ಗಳನ್ನು ಮತ್ತು ಎಷ್ಟು ಜನರು ‘ಫೀಚರ್ಫೋನ್’ಗಳನ್ನು ಬಳಸುತ್ತಿದ್ದಾರೆಂಬ ಅಂಕಿ-ಅಂಶಗಳನ್ನು ಗಮನಿಸಿದರೆ ಯಾವುದು ಐಚ್ಛಿಕ, ಯಾವುದು ಅನಿವಾರ್ಯ ಎಂದು ಗೊತ್ತಾಗುತ್ತದೆ. ಮನುಷ್ಯ-ಮನುಷ್ಯರ ನಡುವೆ ಸಂಪರ್ಕವನ್ನು ಸಾಧಿಸುವ ಮಾತು ಎಲ್ಲರಿಗೂ ಅನಿವಾರ್ಯ. ಅನಿವಾರ್ಯ ಮಾತೆಂದರೆ ಭಾಷಣವೆಂಬರ್ಥವಲ್ಲ; ಮಾತು. ಪರಸ್ಪರ ಅರ್ಥವಾಗಿಸುವ ಮಾತು. ಹೀಗೆ ಮಾತನಾಡುವ ಶಕ್ತಿಯಿಲ್ಲದಿರುವುದು ಒಂದು ಕೊರತೆಯಾಗಿರುವುದೇ ಈ ಅನಿವಾರ್ಯತೆಯಿಂದಾಗಿ. ದೃಷ್ಟಿ ಮತ್ತಿತರ ಇಂದ್ರಿಯಗ್ರಾಹ್ಯ ಸಂಗತಿಗಳು ಅಗತ್ಯ ಮತ್ತು ಅನಿವಾರ್ಯವಾಗುವುದು ಹೀಗೆಯೇ.

ಇಷ್ಟೇ ಅಲ್ಲ, ತಾತ್ವಿಕವಾಗಿ ನೋಡಿದರೆ ಮನುಷ್ಯರು ಯಾರೂ ಅನಿವಾರ್ಯರಲ್ಲ. ಅನಿವಾರ್ಯವಾಗಿದ್ದರೆ ಪ್ರಕೃತಿಯ ಯಾವುದೋ ಶಕ್ತಿಯು ಮನುಷ್ಯರನ್ನು ಅಥವಾ ಅವರಲ್ಲಿ ಕೆಲವರನ್ನಾದರೂ ಶಾಶ್ವತ ಅಮರರನ್ನಾಗಿಸುತ್ತಿತ್ತು. ಸೂರ್ಯ-ಚಂದ್ರರು ಅನಿವಾರ್ಯ. (ಚಂದ್ರ ಎಷ್ಟು ಅನಿವಾರ್ಯವೋ ಹೇಳಲಾರೆ.) ಸದ್ಯಕ್ಕೆ ಭೂಮಿ, ನೀರು, ಬೆಂಕಿ, ಗಾಳಿ ಅನಿವಾರ್ಯ. (ಆಕಾಶವನ್ನೂ ನಿರ್ವಾತದ ಬದಲು ಒಂದು ವಸ್ತುವೆಂದೇ ಗುರುತಿಸಿದಂತೆ ಕಾಣಿಸುತ್ತದೆ.) ವೇದಕಾಲಕ್ಕೆ ಪೂರ್ವದಲ್ಲಿ ಇದೇ ಕಾರಣವಾಗಿ ಪಂಚಭೂತಗಳನ್ನು ಮನುಷ್ಯ ಆರಾಧಿಸುತ್ತಿದ್ದ. ಈ ದೇವರುಗಳು ಅನಿವಾರ್ಯವಾಗಿರಲಿಲ್ಲ. ಆದರೆ ಮನುಷ್ಯನ ವ್ಯಾವಹಾರಿಕ ಜಾಣತನದಲ್ಲಿ ನಾವಿಂದು ನೋಡುತ್ತಿರುವ ದೇವರು, ಧರ್ಮ, ಜಾತಿ, ಇವೆಲ್ಲ ಸೃಷ್ಟಿಯಾದವು. ಇವನ್ನು ಸಮಾಜ ತನ್ನ ಗಟ್ಟಿಗತನದಿಂದ ಅನಿವಾರ್ಯವೆನ್ನಿಸುವ ಹಂತಕ್ಕೆ ತಲುಪಿಸಿತು. ಯಾರೋ ಒಬ್ಬರ ಅಗತ್ಯಕ್ಕಾಗಿ ಇಂತಹ ಅನೇಕ ಸಂಗತಿಗಳು ಅನಿವಾರ್ಯವೆಂಬಂತೆ ಪ್ರದರ್ಶಿಸಲ್ಪಟ್ಟಿವೆ. ಇವಕ್ಕೆ ನೆಮ್ಮದಿ, ಶಾಂತಿ ಮುಂತಾದ ನೆಪಗಳು ಯಥೇಚ್ಛವಾಗಿ ಲಭಿಸುತ್ತವೆ! ದೇವರು ಇಲ್ಲದಿದ್ದರೆ ಒಬ್ಬನನ್ನು ಸೃಷ್ಟಿಸಬೇಕು ಎಂದು ಐರೋಪ್ಯ ಚಿಂತಕ ಹೇಳಿದರೆ, ದೇವರೆಂಬವನಿದ್ದರೆ ಆತನನ್ನು ನಾಶಮಾಡುವುದು ಒಳಿತು ಎಂದು ಇನ್ನೊಬ್ಬ ಚಿಂತಕ ಹೇಳಿದ. ಅಗತ್ಯವಿಲ್ಲದ್ದನ್ನು ಅನಿವಾರ್ಯವಾಗಿಸುವತ್ತ ಈ ಎರಡೂ ಚಿಂತನೆಗಳು ಗಮನಾರ್ಹ.

ಮೂಲಭೂತ ಅವಶ್ಯಕತೆಗಳನ್ನು ಹೊರತುಪಡಿಸಿ ಇನ್ಯಾವುದೂ ಅನಿವಾರ್ಯವಲ್ಲ ಎಂಬ ಪ್ರಮೇಯದತ್ತ ನಾವು ಸಾಗಬೇಕು. ಆದರೆ ಮನುಷ್ಯ ಸಮಾಜ ಎಂತಹ ವಿಷಮಗತಿಯನ್ನು ತಲುಪಿದೆಯೆಂದರೆ ಅಂಬಾನಿ ತನ್ನ ಮಗನ ವಿವಾಹಪೂರ್ವ ಸಮಾರಂಭಕ್ಕೆ ಅದೆಷ್ಟೋ ನೂರು ಕೋಟಿ ಹಣ ವೆಚ್ಚ ಮಾಡಿದರೆ ಅದು ಅವರಿಗೆ ಅನಿವಾರ್ಯವೆಂಬಂತೆ ಸಮಾಜ ಎಲ್ಲ ಸ್ತರಗಳಲ್ಲೂ ಘೋಷಿಸುತ್ತದೆ. ಈ ಹಣವನ್ನು ಸಾಮಾಜಿಕ ಹಿತಕ್ಕೆ ಅಂದರೆ ಬಡಬಗ್ಗರ ಹಿತಕ್ಕೆ ಬಳಸುವುದು ಒಳಿತೆಂದು ಯೋಚಿಸಿದರೆ ಅದನ್ನು ಹೇಳುವ ನೈತಿಕ ಹಕ್ಕನ್ನೇ ಸಮಾಜವು ಕಳೆದುಕೊಂಡಿದೆ. ಏಕೆಂದರೆ ಪ್ರತಿಯೊಬ್ಬನೂ ಯಥಾನುಶಕ್ತಿ ‘ಶಕ್ತಿಮೀರಿ’ ವೆಚ್ಚ ಮಾಡಿ ಪ್ರಸಿದ್ಧಿ, ಪ್ರತಿಷ್ಠೆಯನ್ನು ಗಳಿಸಲು ಯತ್ನಿಸುತ್ತಾನೆ. ಒಂದು ಕಾಲದಲ್ಲಿ ಖಾಸಗಿ ವಾಹನವು ಐಚ್ಛಿಕವಾಗಿತ್ತು. ಅಗತ್ಯವಾದಾಗ ಬಳಸುವ ಒಂದು ಸೌಕರ್ಯವಾಗಿತ್ತು. ಇಂದು ಅದನ್ನು ಅನಿವಾರ್ಯವಾಗಿಸಿದ್ದು ಪ್ರತಿಷ್ಠೆ. ಮಂತ್ರಿಮಹೋದಯರು ಸಂಚರಿಸಬೇಕಾದರೆ ಅವರ ಮುಂದೆ-ಹಿಂದೆ ವಾಹನಗಳ ಮೆರವಣಿಗೆ. ಯಾವುದು ಅಗತ್ಯ, ಯಾವುದು ಅನಗತ್ಯ ಎಂಬ ಪರಿವೆ ಅವರಿಗೂ ಇಲ್ಲ; ಅವರನ್ನು ಅನುಸರಿಸುವವರಿಗೂ ಇಲ್ಲ. ಒಬ್ಬ ಹಿರಿಯರು ಬೆಂಗಳೂರಿನ ಉದಾಹರಣೆಯನ್ನು ನೀಡಿ, ವಾರದ ಒಂದು ದಿನ ಎಲ್ಲರೂ ಸಾರ್ವಜನಿಕ ಸಾರಿಗೆಯನ್ನು ಬಳಸಬೇಕೆಂದು ಮತ್ತು ಆ ಮೂಲಕ ವಿಪರೀತವಾಗಿರುವ ಜನಜಂಗುಳಿಯನ್ನು, ವಾಯು, ಧೂಳು, ಜಲಮಾಲಿನ್ಯವನ್ನು ತಡೆಗಟ್ಟಬಹುದೆಂದು ಹೇಳಿದರು. ಆದರೆ ಇದನ್ನು ಪಾಲಿಸುವ, ಬಿಡಿ, ಕೇಳುವ, ವ್ಯವಧಾನ ಯಾರಿಗಿದೆ? ಹುಚ್ಚರ ಸಂತೆಯಂತಿದೆ ಲೋಕ.

ಬದುಕಿಗೆ ಬೇಕಾದ ಕೃಷಿ, ಆಹಾರ, ವಸತಿ ನಿರ್ವಹಣೆಗೆ ಸರಕಾರ ಒಂದಷ್ಟು ಹಣವನ್ನು ಉಚಿತವಾಗಿ ಕೊಡಹೊರಟರೆ ಅದು ಫಲಾನುಭವಿ ಮನುಷ್ಯನನ್ನು ಸೋಮಾರಿಯಾಗಿ ಮಾಡುತ್ತದೆಂದು ಆರೋಪಿಸುತ್ತೇವೆ. ರಾಜಕೀಯವಾಗಿ ಕೊಡಮಾಡುವ ಅನೇಕ ಸಂಗತಿಗಳು ಐಚ್ಛಿಕವೋ ಅನಿವಾರ್ಯವೋ ಎಂಬುದನ್ನು ನಿರ್ಧರಿಸುವುದು ಆ ಸಂದರ್ಭದ, ಕಾಲದ, ದೇಶದ, ಜೀವಿಗಳ ಅಗತ್ಯ. ನೀರು ಎಷ್ಟು ಅಗತ್ಯ, ಎಷ್ಟು ಅನಿವಾರ್ಯ ಎಂಬುದರ ಬಗ್ಗೆ ವೇದಪೂರ್ವಕಾಲದ ಉದಾಹರಣೆಯನ್ನು ನೋಡಿದೆವು. ಆದರೆ ಅದನ್ನು ಮನುಷ್ಯ ಎಷ್ಟು ಸಡಿಲವಾಗಿ, ಧಾರಾಳವಾಗಿ ಮುಗಿಸಲಾರಂಭಿಸಿದನೆಂದರೆ ‘ನೀರಿನಂತೆ ವೆಚ್ಚ ಮಾಡಿದ!’ ಎಂಬ ನುಡಿಗಟ್ಟು ಸಿದ್ಧವಾಯಿತು. ನೀರು ಸಾಗರವನ್ನು ಸೇರಿ ಅಲ್ಲಿಂದ ಆವಿಯಾಗಿ ಮತ್ತೆ ಮಳೆಯ ಮೂಲಕ ಭೂಮಿಗಿಳಿಯುತ್ತದೆಂಬ ಪ್ರಮೇಯವು ಕಾರ್ಯದಲ್ಲಿ ಸುಳ್ಳಾಗಿದೆ. ನೆಲದಲ್ಲಿ ನೀರು ಶೇಖರಣೆಯಾಗದೆ ಎಲ್ಲವೂ ಒಣಗುತ್ತಿದೆ. ಮೂರನೇ ಎರಡರಷ್ಟು ಜಾಗವನ್ನು ನೀರೇ ಆಕ್ರಮಿಸಿಕೊಂಡರೂ ಅದು ಉಪಯೋಗಕ್ಕೆ ಬಾರದಾಗಿದೆ. ಉಪಯೋಗಕ್ಕಿಲ್ಲದಿದ್ದರೆ ಯಾವುದೂ ಅನಿವಾರ್ಯವಲ್ಲ; ಅಗತ್ಯವಲ್ಲ. ಕಾಡುಪ್ರಾಣಿಗಳಿಗೆ ಕಾಡು ಅನಿವಾರ್ಯವಲ್ಲ. ಅದು ಅವುಗಳ ಬದುಕಿನ ಕ್ಷೇತ್ರ. ಆದರೆ ಮನುಷ್ಯನ ನಾಗರಿಕತೆಯ ಅಬ್ಬರದಲ್ಲಿ ಕಾಡು ನಾಡಾಗಿ ಪರಿಣಮಿಸಿದಾಗ ಅವಕ್ಕೂ ಬದುಕು ಕಷ್ಟವಾಗಿ, ಬದುಕಲು ಹೆಣಗುವುದು ಅನಿವಾರ್ಯವಾಗಿ ಅವು ನಾಡಾಡಿಗಳಾಗಲು ಹೊರಟಿವೆ. ಈಗ ಶಕ್ತಿ ಪ್ರದರ್ಶನ ಅನಿವಾರ್ಯ. ಬರವೆಂಬ ಪರಿಸ್ಥಿತಿ ಇಂದು ನಿನ್ನೆಯದಲ್ಲ. ಎಲ್ಲ ಕಾಲದಲ್ಲೂ ಇತ್ತು. ಆದರೆ ಅದನ್ನು ನೋಡಿಯೂ ಮನುಷ್ಯ ಏನೂ ಕಲಿಯಲಾರ. ಮಳೆ ಬಂತು; ನೀರನ್ನು ನೀರಿನಂತೆ ವೆಚ್ಚಮಾಡುತ್ತಾನೆ. ನೀರಿನಂಥ ನೀರೂ ಮಾಯವಾಗುವ ಕಾಲ ಸನಿಹವಾಗುತ್ತಿದೆಯೇನೋ? ಬೆಂಗಳೂರಿನಲ್ಲಿ ನೀರಿನ ಬರ ಬಹಿರಂಗ ಸತ್ಯ. ಆದರೆ ಜನರು ತಮ್ಮ ವಾಹನಗಳನ್ನು, ತಮ್ಮ ಉದ್ಯಾನಗಳನ್ನು ಸುಂದರವಾಗಿಡಲು ಇಲ್ಲದ ನೀರನ್ನು ಬಳಸುತ್ತಾರೆಂದು ಆರೋಪಿಸಿ ಮಹಾನಗರಪಾಲಿಕೆ ತಲಾ 5,000 ರೂಪಾಯಿ ದಂಡ ಹಾಕಿದ್ದನ್ನು ಓದುತ್ತೇವೆ. ದಂಡ ಪ್ರಯೋಗವಿಲ್ಲದಿದ್ದರೆ ಐಚ್ಛಿಕವನ್ನು ಅನಿವಾರ್ಯವೆಂಬಂತೆ ಮನುಷ್ಯ ಬಳಸುತ್ತಾನೆ. ಇಂತಹ ವಿಪರ್ಯಾಸಗಳು ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಕಣ್ಣಿಗೆ ರಾಚುವಂತಿವೆ.

ಮನುಷ್ಯ ತನ್ನ ವೈಯಕ್ತಿಕ ಅಂತ್ಯವನ್ನು ಕಂಡುಕೊಳ್ಳುವುದು ಆತನ ವೈಯಕ್ತಿಕ ವಿಷಯ. ಆದರೆ ತನ್ನೊಂದಿಗೆ ಇಡೀ ಸಮಾಜದ ನಾಶವನ್ನು ಕಾಣಲು ಕಾರಣಗಳನ್ನು, ನೆಪಗಳನ್ನು, ಸಾಧನಗಳನ್ನು ಶೋಧಿಸಿದ್ದು ಕಾಲದ ವೈಚಿತ್ರ್ಯ. ಪಾಂಡವರು ಗೆದ್ದು ಸೋತರು. ಇಂದಿನ ಇಡೀ ಸಮಾಜವು ಹೀಗೆ ವಿಜ್ಞಾನದ ಪಾರಮ್ಯವನ್ನು ಪಡೆದು ಐಚ್ಛಿಕವನ್ನು ಅನಿವಾರ್ಯವೆಂಬಂತೆ ಕಂಡು ಎಲ್ಲವನ್ನೂ, ಎಲ್ಲರನ್ನೂ ಗೆದ್ದ ದೊಡ್ಡಸ್ತಿಕೆಯಲ್ಲಿ ಭವಿಷ್ಯದ ಪೀಳಿಗೆಯ ದುರಂತವನ್ನು ಅನಿವಾರ್ಯವಾಗಿಸುವತ್ತ ದಾಪುಗಾಲಿಟ್ಟಿದೆ. ಎಲ್ಲರೂ ಭೀಷ್ಮರೇ-ಇಚ್ಛಾಮರಣಿಗಳಾಗುವ ದುಸ್ಸಾಹಸದಲ್ಲಿ. ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ; ದಾರಿ ಸಾಗುವುದೆಂತೋ ನೋಡಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News