×
Ad

ಜಂಬೂ ಸವಾರಿಗೆ ಸಜ್ಜುಗೊಳ್ಳುತ್ತಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ

Update: 2025-09-08 12:27 IST

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಜಂಬೂ ಸವಾರಿಗೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗಳು ಸಜ್ಜಾಗುತ್ತಿವೆ.

ಜಂಬೂ ಸವಾರಿಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಗಳಿಗೆ ಅರಮನೆ ಆವರಣದಲ್ಲಿ ವಿಶೇಷ ಆತಿಥ್ಯದೊಂದಿಗೆ ವಿವಿಧ ಬಗೆಯ ಆಹಾರಗಳನ್ನು ನೀಡಿ ಬಹಳ ಅಚ್ಚುಕಟ್ಟಾಗಿ ಜಿಲ್ಲಾಡಳಿತದ ವತಿಯಿಂದ ನೋಡಿಕೊಳ್ಳಲಾಗುತ್ತಿದೆ.

ಆಗಸ್ಟ್ 4 ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಮೊದಲ ತಂಡದ ಗಜಪಡೆಗಳಿಗೆ ಪೂಜೆ ಸಲ್ಲಿಸಿದ ನಂತರ ಮೈಸೂರಿಗೆ ಅಗಮಿಸಿದವು. ಆಗಸ್ಟ್ 10ರಂದು ಅರಮನೆ ಆವರಣಕ್ಕೆ ಮೊದಲ ತಂಡದಲ್ಲಿ ಅಭಿಮನ್ಯು ಸಾರಥ್ಯದಲ್ಲಿ ಧನಂಜಯ, ಭೀಮ, ಕಂಜನ್, ಏಕಲವ್ಯ, ಪ್ರಶಾಂತ, ಮಹೇಂದ್ರ, ಕಾವೇರಿ, ಬಳ್ಳೆಲಕ್ಷ್ಮೀ ಆನೆಗಳು ಆಗಮಿಸಿದವು. ಎರಡನೇ ತಂಡದಲ್ಲಿ ಸುಗ್ರೀವ, ಶ್ರೀಕಂಠ, ಗೋಪಿ, ರೂಪ ಮತ್ತು ಹೇಮಾವತಿ ಆನೆಗಳು ಆಗಮಿಸಿದವು. ಒಟ್ಟು 14 ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸಲು ತಯಾರಾಗುತ್ತಿವೆ.

ವೀರನಹೊಸಹಳ್ಳಿ, ಬಳ್ಳೆ, ಮಡಿಕೇರಿ, ಹಾಸನದ ಕಾಡುಗಳಿಂದ ಈ ಆನೆಗಳನ್ನು ಕರೆತರಲಾಗಿದ್ದು, ನಾಡಿನಲ್ಲಿ ಜನರೊಂದಿಗೆ ಹೊಂದಿಕೊಳ್ಳಲು ಆನೆಗಳಿಗೆ ತಾಲೀಮು ನಡೆಸಲಾಯಿತು.

ಮೊದಲ ತಂಡದ ಆನೆಗಳು ಆಗಸ್ಟ್ 10 ರಂದು ಆರಮನೆ ಪ್ರವೇಶಿಸಿದವು. ಈ ಆನೆಗಳಿಗೆ ಆ.11ರಿಂದಲೇ ಅರಮನೆ ಒಳಗೆ ತಾಲೀಮು ಆರಂಭಿಸಲಾಯಿತು. ನಂತರ ಅರಮನೆಯಿಂದ ಬನ್ನಿಮಂಟಪದವರೆಗೂ ತಾಲೀಮು ಆರಂಭಿಸಲಾಯಿತು.

ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಅರಣ್ಯ ಇಲಾಖೆ ನೇತೃತ್ವದಲ್ಲಿ ಜಿಲ್ಲಾಡಳಿತ ತಾಲೀಮು ಆರಂಭಿಸಿತು. ನಂತರ ಎರಡನೇ ತಂಡ ಆಗಮಿಸಿದ ಮೇಲೆ ಅವುಗಳಿಗೂ ತಾಲೀಮು ನಡೆಸಿ ನಗರಕ್ಕೆ ಹೊಂದಿಕೊಳ್ಳುವಂತೆ ಮತ್ತು ಜನರ ಮಧ್ಯೆ ಅವುಗಳು ಸಾಂಗವಾಗಿ ಸಾಗುವಂತೆ ತರಬೇತಿ ನೀಡಲಾಯಿತು.

ಬಾರ ಹೊರಿಸುವ ತಾಲೀಮು ಆರಂಭ: ಜಂಬೂ ಸವಾರಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ತಾಯಿ ವಿರಾಜಮಾನರಾಗಿ ಕುಳಿತುಕೊಳ್ಳುವ 750 ಕೆ.ಜಿ.ತೂಕದ ಚಿನ್ನದ ಅಂಬಾರಿಯನ್ನು 5 ಕಿ.ಮೀ.ವರೆಗೂ ಹೊತ್ತು ಸಾಗುವ ಅಭಿಮನ್ಯು ನೇತೃತ್ವದ ಗಜಪಡೆಗೆ ಆ.3ರಿಂದ ಭಾರ ಹೊರುವ ತಾಲೀಮು ಆರಂಭಿಸಲಾಯಿತು. ಗಾದಿ, ನಾಮ್ದ, ಕಬ್ಬಿಣದ ತೊಟ್ಟಿಲು ಸೇರಿ 200 ಕೆ.ಜಿ. ಹಾಗೂ 300 ಕೆ.ಜಿ. ಮರಳು ಮೂಟೆ ಸೇರಿ ಒಟ್ಟು 500 ಕೆ.ಜಿ. ತೂಕ ಹೊರಿಸಿ 9 ಕಿ.ಮೀ. ತಾಲೀಮು ನಡೆಸಲಾಗುತ್ತಿದೆ. ಅಭಿಮನ್ಯು ಭಾರ ಹೊತ್ತು ಸಾಗಿದರೆ ಅಕ್ಕ ಪಕ್ಕದಲ್ಲಿ ಹೇಮಾವತಿ ಮತ್ತು ಕಾವೇರಿ ಅನೆಗಳು ಕುಮ್ಕಿ ಆನೆಗಳಾಗಿ ಸಾಥ್ ನೀಡುತ್ತಿವೆ. ಅಭಿಮನ್ಯು ಜೊತೆಗೆ ಇನ್ನೆರಡು ಆನೆಗಳಿಗೂ ಬಾರ ಹೊರಿಸುವ ತಾಲೀಮು ನಡೆಸಲಾಗುತ್ತಿದೆ. ಮಹೇಂದ್ರ ಮತ್ತು ಸುಗ್ರೀವಾ ಆನೆಗಳಿಗೂ ಭಾರ ಹಾಕಿ ಬನ್ನಿ ಮಂಟಪದ ವರೆಗೂ ಕರೆದುಕೊಂಡು ಹೋಗಲಾಗುತ್ತಿದೆ.

ಅಕ್ಟೋಬರ್ 2 ರಂದು ಜಂಬೂ ಸವಾರಿ ಮೆರವಣಿಗೆ ನಡೆಯಲಿದ್ದು, ಅಲ್ಲಿಯವರಗೂ ಆನೆಗಳಿಗೆ ವಿವಿಧ ರೀತಿಯ ತರಬೇತಿ ನೀಡುವ ಮೂಲಕ ಜಂಬೂ ಸವಾರಿ ಮೆರವಣಿಗೆ ಸಾಂಗವಾಗಿ ಸಾಗಲು ತಯಾರಿ ನಡೆಸಲಾಗುತ್ತಿದೆ.

ಗಜಪಡೆಗಳಿಗೆ ಪೌಷ್ಟಿಕ ಆಹಾರ

ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗಳ ತೂಕವನ್ನು ಹೆಚ್ಚಿಸಲು ಮತ್ತು ತೂಕವನ್ನು ಸಮವಾಗಿ ಕಾಯ್ದುಕೊಳ್ಳಲು ಗಜಪಡೆಗಳಿಗೆ ಉತ್ತಮ ಪೌಷ್ಟಿಕ ಆಹಾರಗಳನ್ನು ನೀಡಲಾಗುತ್ತಿದೆ.

ದಿನಕ್ಕೆ ಎರಡು ಬಾರಿ ಬೇಯಿಸಿದ ಕಾಳುಗಳು, ಬೆಲ್ಲ, ಕಬ್ಬು, ಭತ್ತ,ಬಾಳೆಹಣ್ಣು ಸೇರಿದಂತೆ ಹಲವು ಬಗೆಯ ವಿವಿಧ ಖಾದ್ಯಗಳನ್ನು ನೀಡಲಾಗುತ್ತಿದೆೆ. ಆನೆಗಳು ಆರೋಗ್ಯದಿಂದ ಮತ್ತು ಆಕರ್ಷಣೀಯವಾಗಿರಲು ದಿನಕ್ಕೆ ಎರಡು ಬಾರಿ ನೀರಿಲ್ಲಿ ಮಜ್ಜನ ಮಾಡಿ ಸ್ನಾನ ಮಾಡಿಸಲಾಗುತ್ತಿದೆ.

ಕುಶಾಲ ತೋಪು ತಯಾರಿ

ಜಂಬೂ ಸವಾರಿ ಮೆರವಣಿಗೆಗೂ ಮುನ್ನ ಗಜಪಡೆಗಳು ರಾಜ ಸೆಲ್ಯೂಟ್ ಹೊಡೆಯುತ್ತವೆ. ಈ ವೇಳೆ ಫಿರಂಗಿ ಮೂಲಕ 21 ಸುತ್ತು ಕುಶಾಲ ತೋಪುಗಳನ್ನು ಸಿಡಿಸಲಾಗುತ್ತದೆ. ಹಾಗಾಗಿ ಆನೆಗಳು ಬಾಂಬ್ ಸದ್ದಿಗೆ ಬೆದರಂತೆ ಕುಶಾಲ ತೋಪು ತಯಾರಿಯನ್ನು ಸಹ ಗಜಪಡೆಗಳಿಗೆ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನೇರಳೆ ಸತೀಶ್ ಕುಮಾರ್

contributor

Similar News